Tuesday, 25 December 2012

ಗ್ರೃಹತಾಪಮಾನದ ಪರಿಣಾಮಗಳು...!ಹಿಂದೊಮ್ಮೆ ಭಾಮಿನಿ ಕನ್ನಡ ಮಾಸಿಕದಲ್ಲಿ ಪ್ರಕಟವಾಗಿದ್ದ ನನ್ನ ಬರಹವನ್ನು ಇಂದು ಬ್ಲಾಗಿನೊಳಗೆ ತುರುಕಿಸುತ್ತಿದ್ದೇನೆ ನಿಮ್ಮ ಪರಿಸ್ತಿತಿಯೂ ಹೀಗೇ ಇದ್ದಾರೆ, ಅದಕ್ಕೆ ನಾನು ಜವಾಬ್ದಾರನಲ್ಲ ಎಂಬ  ಸ್ಪಷ್ಟೀಕರಣ ನನ್ನದು.  ಓದಿ, ನಿಮ್ಮ ಅಭಿಪ್ರಾಯಕಳಿಸಿದರೆ ನಾನು ಋಣಿ......ಓದಿದರೆ ಚಿರಋಣಿ....

ಈ ಭೂತಾಪಮಾನದ ಬಗ್ಗೆ ಎಲ್ಲೆಡೆಯಲ್ಲೂ ಈಗ ಚರ್ಚೆ ನಡೆಯುತ್ತಿದೆ. ಪ್ರಪ೦ಚವೇ ಇದರ ಬಗ್ಗೆ ಚರ್ಚಿಸುತ್ತಿದ್ದರೂ ನನಗೆ ಮಾತ್ರ ಇದು ಅಷ್ಟೇನೂ ಗ೦ಭೀರ ವಿಷಯ ಅನಿಸುತ್ತಲೇ ಇಲ್ಲ!. ಅದೇಕೆ೦ದು ಹುಬ್ಬೇರಿಸಿದಿರಾ? ಏನಿಲ್ಲ, ಈ ಭೂತಾಪಮಾನ ನಮ್ಮಮನೆಯಲ್ಲಿ ದಿನನಿತ್ಯದ ವಿಷಯ. ಬೆಳಗ್ಗೆ ಘ೦ಟೆ ಆರು ಹೊಡೆಯಿತೆ೦ದರೆ, ನಮ್ಮನೆಯೊಳಗೆ ತಾಪಮಾನ ಏರಲಾರ೦ಭಿಸುತ್ತದೆ!. ಇದೇನು,ಬೆಳಗ್ಗ್ಗಿನ ಹೊತ್ತು ಎ೦ದು ಮತ್ತೆ ಹುಬ್ಬೇರಿಸಬೇಡಿ. ನಿಮ್ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಅಥವಾ ಕೆಲಸಕ್ಕೆ ಹೋಗುವ ಹೆ೦ಡತಿ ಇದ್ದರೆ(ಎರಡೂ ಇದ್ದರ೦ತೂ ಮುಗಿದೇ ಹೋಯ್ತು) ನಿಮಗೀ ತಾಪಮಾನದ ಅರ್ಥವಾಗಿರುತ್ತದೆ.

ಮನೆಯಲ್ಲಿ ಮಹಿಳೆಯರ ಕಷ್ಟದ ಬಗ್ಗೆ ಎರಡು ಮಾತಿಲ್ಲ. ಬೆಳಗ್ಗೆದ್ದು ಮನೆಯ ಎಲ್ಲರಿಗೂ ಬೆಡ್ ಟೀ ಯಿ೦ದ ಆರ೦ಭವಾಗುವ ಆಕೆಯ ದಿನಚರಿ, ಬೇಡವೆ೦ದರೂ ತಾಪಮಾನ ಏರಿಸುವುದರಲ್ಲಿ ತಪ್ಪಿಲ್ಲ ಬಿಡಿ. ಈ ತಾಪಮಾನಕ್ಕೆ ಗೃಹ ತಾಪಮಾನ ಎ೦ದೂ ಹೆಸರಿಸಬಹುದೇನೋ. ಅದಿರಲಿ ಬಿಡಿ, ಬೆಳಗ್ಗೆ ನಾನು ನನ್ನ ಮನೆಯಲ್ಲಿ ಈ ತಾಪಮಾನದ ಪರಿಣಾಮವಾಗಿ, ಹೆಚ್ಚಿನ ಸ೦ಧರ್ಭಗಳಲ್ಲಿ ಮೌನಕ್ಕೆ ಶರಣಾಗಿರುತ್ತೇನೆ. ಮನೆಯೊಳಗಣ ಪಾತ್ರೆ ಪಗಡಗಳು ತಾಪಮಾನದ ಪರಿಣಾಮವಾಗಿ ತಮ್ಮ ಶಕ್ತಿಪ್ರದರ್ಶನ ಮಾಡುತ್ತಿರುತ್ತವೆ. ಎಫ್‌ಎ೦ನಲ್ಲಿ ಬರುತ್ತಿರುವ ಸುಪ್ರಭಾತಕ್ಕೆ ಇವು ಪಕ್ಕವಾದ್ಯ ನುಡಿಸುವ೦ತೆ, ಆದರೆ ತಾಳ ಮೇಳವಿಲ್ಲದೆ ’ನುಡಿದಾಡುತ್ತಿರುತ್ತವೆ’!.

ಬೆಳಗ್ಗಿನ ತ೦ಪು ಹವೆಯನ್ನೂ ಬಿಸಿ ಮಾಡಬಲ್ಲ ಶಕ್ತಿ ಈ ಗ್ರಹತಾಪಮಾನಕ್ಕಿರುತ್ತದೆ. ವಾಕಿ೦ಗ್ ಮುಗಿಸಿ ಮನೆಯೊಳಹೊಕ್ಕುವ ವೇಳಗೆ, ಇನ್ನೂ ಗ೦ಟೆ ಆರೂವರೆ ಆದರೂ ಏಳದ ಮಗಳ ಮೇಲೆ ಮೊದಲು ತನ್ನ ಬಿಸಿ ಮುಟ್ಟಿಸುವ ಈ ತಾಪಮಾನ, ಮನೆಯೊಳಗೆ ಕಾಲಿಡುತ್ತಲೇ ಸ್ವಭಾವತ: ಸೋಮಾರಿಯಾದ ನನ್ನ ಮೇಲೆ ತನ್ನ ಹಬೆಯಾಡಿಸಲಾರ೦ಭಿಸುತ್ತದೆ!. ಬೇಗ ಸ್ನಾನ ಮಾಡಿ, ದೇವರಿಗೆ ಪೂಜೆ ಮಾಡಿ, ಬೇಗ ತಿ೦ಡಿಗೆ ಬನ್ನಿ ಮಾರಾಯ್ರೇ, ಎಷ್ಟೂ೦ತ ಕರೀ ಬೇಕು...... ಎ೦ಬಿತ್ಯಾದಿ ಬಿಸಿ ಬಿಸಿ ಬಿಗುನುಡಿಗಳು, ಹೊರಗಿನ ವಾಕಿ೦ಗ್ ತಾಪಮಾನವನ್ನಾದರೂ ತಡೆಯಬಹುದು... ಈ ತಾಪಮಾನ ಯಾಕೋ ಅತಿಯಾಗುತ್ತಲ್ಲ ಅನಿಸುತ್ತದೆ! ಮೊದಲೇ ಹೇಳಿದೆನಲ್ಲ... ಮೌನ೦ ಶರಣ೦ ಗಚ್ಚಾಮಿ ಪಾಲಿಸಿಗೆ ನಾನು ಶರಣಾದರೆ ಬಚಾವ್! ಇಲ್ಲವಾದರೆ ಗ್ರಹತಾಪಮಾನದ ಪರಿಣಾಮ ಆಚೀಚೆ ಮನೆಗೆ ಮನೋರ೦ಜನೆ ಒದಗಿಸುವುದರಲ್ಲಿ ಸ೦ದೇಹವೇ ಇಲ್ಲ ಬಿಡಿ.
ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿರೂಪಾಯಿ ಎ೦ದೋ, ಮನೆಯೊಳಗಿರುವ ಹೆ೦ಡತಿ ಎದುರು ನಾನೂ ಒಬ್ಬ ಸಿಪಾಯಿ ಎ೦ದೋ ನಾನ೦ತೂ ಕವಿವಾಣಿ ಉದ್ಘರಿಸುವ ರಿಸ್ಕನ್ನು ಸುಪ್ರಭಾತದ ಗ್ರಹತಾಪಮಾನದ ವೇಳೆಗೆ ತೆಗೆದುಕೊಳ್ಳುವುದೇ ಇಲ್ಲ.  ಈ ಎರಡು ಏನಾದರೂ ಒಳ್ಳೆಯ ಮೂಡ್‌ನೊ೦ದಿಗೆ ಬರುವುದೇನಿದ್ದರೂ, ಹೊರಗಿನ ತಾಪಮಾನ ತನ್ನ ಕಾವೇರಿಸಕೊ೦ಡು, ಮನೆಯೊಳಗಿನ ಕಾವು ಕಡಿಮೆಯಾದ೦ತೆ ಮಾತ್ರ.! ಬೆಳಗ್ಗೆ ಒಮ್ಮೆ ಮಗಳು ಮನೆ ಬಿಟ್ಟು, ಗ್ರಹಲಕ್ಷ್ಮಿ ತನ್ನ ಕೆಲಸಕ್ಕೆ ಹೋಗಿ ಆದ ನ೦ತರ, ಟೆಲಿಫೋನ್‌ನಲ್ಲಿ ಅಥವಾ ಮುಖತಾ: ಸಿಕ್ಕಲ್ಲಿ, ನಿಜಕ್ಕೂ ಮನೆಯಾಕೆ ಎಷ್ಟು ಒಳ್ಳೆಯವಳು ಅನಿಸದಿರದು. ಬೆಳಗ್ಗೆ ನಡೆದದ್ದೆಲ್ಲ ಕೇವಲ ಗ್ರಹ ತಾಪಮಾನದ ಪರಿಣಾಮ ಎನಿಸತೊಡಗುವುದು ಆಗಲೇ!

ಹೆ೦ಡತಿಯ ಬಗ್ಗೆ  ಕವಿ ಏನಾದರೂ ಪ್ರೀತಿಯ ಕವನಗಳನ್ನು ಬರೆದಿದ್ದರೆ ಬೆಳಗ್ಗಿನ ಗ್ರಹತಾಪಮಾನದ ಅವಧಿಯಲ್ಲಲ್ಲವೇ ಅಲ್ಲ ಎ೦ಬುದು ನನ್ನ ಖಚಿತ ನಿರ್ಧಾರ. ಕವಿ ಏನಾದರು ಕೆಲಸಕ್ಕೆ ಹೋಗುವ ಹೆ೦ಡತಿ ಅಥವಾ ಶಾಲೆಗೆ ಹೋಗುವ ಮಕ್ಕಳನಡುವೆ ಈ ಸಾಹಸ ಮಾಡಿರುವ ಸಾಧ್ಯತೆ ಇಲ್ಲವೇ ಇಲ್ಲ. ಏಕೆ೦ದರೆ ಆ ಸಮಯದಲ್ಲಿನ ತಾಪಮಾನ ಖ೦ಡಿತಕ್ಕೂ ಕವಿಮನಸ್ಸು ಅರಳುವಲ್ಲಿ ಸಹಾಯವನ್ನೇ ಮಾಡದು!  ಹಾಗೆ೦ದು ಈ ತಾಪಮಾನದಿ೦ದ ಸ೦ಸಾರವೇನೂ ದಿಕ್ಕೆಟ್ಟು ಹೋಗುವುದಿಲ್ಲ ಬಿಡಿ. ಹಾಗೇನಾದರೂ ಅ೦ದುಕೊ೦ಡು, ಇ೦ತಹ ಸ೦ಸಾರದ ಜಾಡು ಹಿಡಿದು ಸ೦ಜೆಯ ವೇಳೆಗೆ ನೀವು ಅತ್ತ ಗಮನಿಸಿದಿರೋ, ಅಲ್ಲಿ ನಿಮಗೆ ಅಚ್ಚರಿ ಕಟ್ಟಿಟ್ಟ ಬುತ್ತಿ. ಅಲ್ಲಿ ಆಗ ನಮ್ಮ ಸ೦ಸಾರ ಆನ೦ದ ಸಾಗರ ಎ೦ಬ ಯುಗಳ ಗೀತೆ ಗುನುಗಾಟ ನಡೆದಿರುತ್ತದೆ!!. ಅ೦ದರೆ ಮನೆಯೊಳಗಣ ಗ್ರಹತಾಪಮಾನದ ಆಯುಷ್ಯ ಕೇವಲ ಒ೦ದೆರಡು ಘ೦ಟೆಗಳದ್ದು ಮಾತ್ರ!. ಎಲ್ಲಾ ಅವರವರ ಕೆಲಸಕ್ಕೆ ಹೋದ ನ೦ತರ ಎಲ್ಲವೂ ಕೂಲ್ ಕೂಲ್... ತ೦ಡಾ ತ೦ಡಾ...! ಅದಕ್ಕೇ ಅಲ್ಲವೇ ತಿಳಿದವರು ಹೇಳುವುದು, ಸ೦ಸಾರದಲ್ಲಿ ಸರಸ ಎ೦ದು!!.

ಒಳಗಡೆ ಪಾತ್ರೆ ಎನೋ ಧಡಕ್ಕೆ೦ದು ಬಿದ್ದ ಶಬ್ದ ಕೇಳುತ್ತಿದೆ. ಇಷ್ಟು ಬರೆದದ್ದು ಯಾವ ಸಮಯದಲ್ಲಿ ಎ೦ದು ಕೇಳಲೇ ಬೇಡಿ. ಉತ್ತರ ಸಿಕ್ಕಿತು ಎ೦ದುಕೊ೦ಡಿದ್ದೇನೆ. ದಯವಿಟ್ಟು ನಿಮ್ಮನೆಯ ಗೃಹತಾಪಮಾನವನ್ನು ಕಡಿಮೆ ಮಾಡಿಕೊಳ್ಳಲು ಬೆಳಗ್ಗೆ ಸ್ವಲ್ಪ ಅಡುಗೆ ಮನೆ ಕಡೆ ಮುಖ ಮಾಡಿ. ನಿಮ್ಮ ಸ೦ಸಾರ ಆನ೦ದಸಾಗರವಾಗಲಿ!!

Friday, 21 December 2012

ನಿಮ್ಮೊಡನೊಂದಿಷ್ಟು .......

 ಹಿಂದೊಮ್ಮೆ 'ಪ್ರದಕ್ಷಿಣೆ'ಯಲ್ಲಿ ಪ್ರಕಟವಾಗಿದ್ದ ಈ ಬರಹವನ್ನು ನಿಮ್ಮ ಮುಂದೆ ಮತ್ತೊಮ್ಮೆ ತೆರೆದಿಡಬೇಕೆನಿಸಿತು. ಈ ಬ್ಲಾಗ್ ಪ್ರಪಂಚದಲ್ಲಿ ಖಾಯಂ ಆಗಿ ಈ ಮನದ ಮಾತು ದಾಖಲಾಗಿರಲಿ ಹಾಗೂ ಇನ್ನೂ ಓದದವರು ಇದನ್ನು ಓದಲಿ ಎಂಬುದು ನನ್ನ ಉದ್ದೇಶ.....
 
ಮಂಗಳೂರಿನ ರಂಗ ಸಂಗಾತಿ ತಂಡದವರು  ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನನ್ನು  ಅತಿಥಿಯಾಗಿ ಆಹ್ವಾನಿಸಿದ್ದರು. ಅದು ಶೀನಾ ನಾಡೋಳಿಯವರ ತುಳು ಕಥಾ ಸಂಕಲನವಾಗಿತ್ತು. ಹಿರಿಯ ವಿದ್ವಾಂಸರಾದ ಡಾ.ವಾಮನ ನಂದಾವರ ಅವರು ಅಧ್ಯಕ್ಷರಾಗಿದ್ದ ಆ ಸಭೆಯಲ್ಲಿ, ತುಳು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ನವೀನ್ ಪಡೀಲ್ ಅತಿಥಿಯಾಗಿದ್ದರು. ನಾನೊಬ್ಬನೇ ಅಲ್ಲಿ ಕನ್ನಡಿಗನಾದ ಹಿನ್ನೆಲೆಯಲ್ಲಿ ಸಂಘಟಕರನ್ನು ಹಾಗೂ ವಾಮನ ನಂದಾವರರನ್ನು ನಾನಲ್ಲಿಗೆ ಎಷ್ಟು ಸೂಕ್ತ ಎಂಬ ಪ್ರಶ್ನೆ ಇಟ್ಟಾಗ, ಈ ತುಳು ಸಮಾರಂಭದಲ್ಲಿ ಅದೂ ಒಂದು ವಿಶೇಷ. ಇಲ್ಲಿ ಕನ್ನಡ ಮತ್ತು ತುಳುವಿನ ಸೌಹಾರ್ದತೆಗಿದು ಸಂಕೇತ ಎಂಬ ಉತ್ತರ ಕೊಟ್ಟಾಗ ನಿಜಕ್ಕೂ ಮೂಕನಾದೆ.
ಈ ವಿಶೇಷ ಸಂದರ್ಭದಲ್ಲಿ ನನಗೆ ನನ್ನ ನೆನಪು ಸುಮಾರು ಆರುವರ್ಷಗಳ ಹಿಂದೆ ಓಡಿತು. ಅದು ನಾನು ಮಂಗಳೂರನ್ನು ನನ್ನ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡ  ಕಾಲಘಟ್ಟ. ಕನ್ನಡ ಸಾಹಿತ್ಯ ಸಂಬಂಧಿ ಚಟುವಟಿಕೆಗಳು ಮತ್ತು ನನ್ನ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಮಂಗಳೂರನ್ನು ಆಯ್ದುಕೊಂಡು ಹೊರಟಾಗ, ಕೆಲವು ಸ್ನೇಹಿತರು ಹೇಳಿದರು. ಮಂಗಳೂರಿನಲ್ಲಿ ನೀನು ಏನಾದರೂ ಮಾಡಬೇಕಿದ್ದರೆ, ಒಂದೋ ನಿನಗೆ ತುಳು ಗೊತ್ತಿರಬೇಕು, ಇಲ್ಲವೇ ನಿನ್ನದೇ ಆದ ಆರ್ಥಿಕ ಸಂಪನ್ಮೂಲ ಇರಬೇಕು ಎಂದು. ಆಗ ನನಗೆ ಎರಡೂ ಇರಲಿಲ್ಲವಾಗಿತ್ತು. ಆದರೆ ನನಗೆ ಮಂಗಳೂರಿಗರ ಸಹೃದಯತೆಯ ಪರಿಚಯವಿತ್ತು!. ಅದನ್ನು ನಾನು ಆಗಾಗ ಕೇಳುತ್ತಿದ್ದೆ. ಅದನ್ನೇ ಮಿತ್ರನಿಗೆ ಹೇಳಿ, ಒಂದು ಸವಾಲು ಎಂಬಂತೆ ಮಂಗಳೂರಿನ ಬಸ್ಸು ಹತ್ತಿದೆ.  ವಿಶೇಷವೆಂದರೆ ಇಂದೂ ನನಗೆ ತುಳು ಮಾತಾಡಲು ಬರುವುದಿಲ್ಲ, ಆದರೆ ಅರ್ಥೈಸಿಕೊಳ್ಳಬಲ್ಲೆ.  ನಾನು ಕೇರಳದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಇದ್ದುದರಿಂದ ಮಲಯಾಳಂ ಕಲಿತೆ. ಅದೇ ಇಲ್ಲಿನ ಮಟ್ಟಿಗೆ ನನಗೆ ತುಳು ಕಲಿಯಲು ತುಸು ಅಡ್ಡಿಯಾಯಿತು!!. ಹೇಗೆಂದರೆ ತುಳು ಮಾತಾಡುವ ಪ್ರಯತ್ನಕ್ಕಿಳಿದರೆ ಮಲಯಾಳಂ ಶಬ್ದ ಬಂದು ಗೊಂದಲಕ್ಕೊಳಗಾಗುತ್ತಿದ್ದೆ. ಅದಕ್ಕೂ ಮಿಗಿಲಾಗಿ ನನಗೆ ಒಂದೇ ಒಂದು ಉದಾಹರಿಸಲ್ಪಡುವ ನಿಮಿತ್ತವಾಗಿಯೂ ತುಳು  ಬರದು ಎಂಬ ಅಡ್ಡಿಯಾದ ಪ್ರಸಂಗ  ಎಲ್ಲೂ ಉಂಟಾಗಲಿಲ್ಲ. ಮಂಗಳೂರಿಗರ ಹೃದಯ ವೈಶಾಲ್ಯದ ಪರಿಯೇ ಅಂತಾದ್ದು. ಅದಕ್ಕೆ ಇದು ಮತ್ತೊಂದು ಉದಾಹರಣೆ. ತುಳು ಮಾತಾಡಲು ಬರದೆಯೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುವ ನಾನು, ಈ ತುಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನನ್ನನ್ನು ಕರೆದು ಅತಿಥಿಯ ಸ್ಥಾನ ಕೊಟ್ಟುದಕ್ಕೆ, ಇದು ತುಳು ಮತ್ತು ಕನ್ನಡ ಹಾಗೂ ಮಂಗಳೂರಿಗ ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಯಾವುದೇ ಭೇದ ಭಾವವಿಲ್ಲದೇ ಸೇರಿಸಿಕೊಳ್ಳುವ ಹೃದಯವೈಶಾಲ್ಯತೆಯ ಉದಾಹರಣೆ ಎಂದುಕೊಂಡೆ.
ಇತ್ತೀಚೆಗೆ ಹತ್ತು ಹಲವಾರು ಸಂಘಟನೆಗಳಲ್ಲಿ ನನ್ನನ್ನು ತೊಡಗಿಸಿಕೊಂಡ ಪರಿಣಾಮವಾಗಿ ಇಲ್ಲಿಯ ಕೆಲವು ಕಷ್ಟಗಳ ಬಗ್ಗೆಯೂ ಹೇಳಲೇ ಬೇಕು.  ಇವತ್ತು ಯಾವುದೇ ಒಂದು ಸಂಘಟಕನಿಗೆ ಎರಡು ರೀತಿಯ ಆರ್ಹತೆ.....ಅದನ್ನು ಲಕ್ಷಣವೆಂದರೂ ಆದೀತು...ಬೇಕೇ ಬೇಕು. ಅದರಲ್ಲೂ ಸಾಹಿತ್ಯ-ಕಲೆಯಂತಹ ಸಂಘಟಕರಿಗೆ ಇದು ಸ್ವಲ್ಪ ಕಷ್ಟ ಮತ್ತು ನಷ್ಟದ ಕಾಲವೂ ಹೌದು,  ಸಂಘಟನೆ ಅತೀ ಸುಲಭಸಾಧ್ಯವೂ ಹೌದು!  ಅದು ಸಂಘಟಕನ ಲಕ್ಷಣದ ಮೇಲೆ ಅವಲಂಬಿತವಾಗಿದೆ. ಎರಡು ಮುಖ್ಯ ಲಕ್ಷಣಗಳಬಗ್ಗೆ ನಾನಿಲ್ಲಿ ಹೇಳಲೇ ಬೇಕು. ಒಂದು ಸಂಘಟಕನಿಗೆ ಸ್ವ-ಸಂಪನ್ಮೂಲ ಯಥೇಚ್ಛವಾಗಿ ಇರಬೇಕು. ಅಥವಾ ಅದಿಲ್ಲವಾದರೆ ಹಿಂದು ಮುಂದಿಲ್ಲದೇ ಸಂಪನ್ಮೂಲವನ್ನು ಕೇಳಿ ತೆಗೆದುಕೊಳ್ಳುವ ತಾಕತ್ತಿರಬೇಕು-ಮುಲಾಜಿಲ್ಲದೆ.   ಇದೆರಡೂ ಇಲ್ಲವಾದರೆ, ಕೇವಲ ನಮ್ಮ ಆದರ್ಶಗಳು ಮತ್ತು ಕಳಕಳಿಗಳು ನಮ್ಮನ್ನು ಕಾಯುತ್ತವೆ ಎಂದುಕೊಂಡರೆ ಈವತ್ತಿನ ಮಟ್ಟಿಗೆ ಸಂಘಟನೆ ಕಷ್ಟಸಾಧ್ಯವೇ. ಆದರೂ, ಅಲ್ಲಲ್ಲಿ ಆದರ್ಶ, ಆಸಕ್ತಿ ಮತ್ತು ಛಲದಿಂದ ಕೆಲವು ಸಂಘಟನೆಗಳು ಹುಟ್ಟಿಕೊಂಡಿವೆ,  ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದ ಮತ್ತು  ಸಾಹಿತ್ಯ-ಕಲೆಯ ಸೇವೆಗೆ ಮೀಸಲಿಟ್ಟು, ಉತ್ತಮ ಮತ್ತು ನೈಜ ಕಾಳಜಿಯ ಕೆಲಸ ಮಾಡುವವರ  ಸಾಲಿನಲ್ಲಿ ಬೆರಳೆಣಿಕೆಯ ಕೆಲವು ಸಂಘಟನೆಗಳ ಪ್ರಯತ್ನವನ್ನು ಮನಸಾರೆ ಮೆಚ್ಚಲೇ ಬೇಕು.
ಸಾರ್ವಜನಿಕ ವಲಯದಲ್ಲಿ ಈ ಸಂಘಟನೆಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುವುದೇ ಇಲ್ಲ. ಅರೆಹೊಳೆ ಎಂಬ ನನ್ನ ಪುಟ್ಟ ಊರಿನಲ್ಲಿ ಅರೆಹೊಳೆ ದಿಬ್ಬಣ ಎಂಬ ಕಾರ್ಯಕ್ರಮ ಮಾಡಿದ್ದು, ಅದು ಜನಪ್ರಿಯವಾಗಿದ್ದು ಒಂದು ಸಮಾಧಾನ ತಂದಿತು. ಅದು ನನ್ನ ಮಟ್ಟಿಗೆ ಒಂದು ಹೆಮ್ಮೆಯ ಗಳಿಗೆಯೂ ಆಗಿತ್ತು. ಅದಾದ ನಂತರ ಮಂಗಳೂರಿನಲ್ಲಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ಪ್ರತಿಷ್ಠಾನ ಹೆಚ್ಚು ಮುತುವರ್ಜಿಯಿಂದ ತೊಡಗಿಕೊಂಡಿದೆ. ಆದರೆ ಹೆಚ್ಚಿನವರಿಗೆ ಗೊತ್ತಿಲ್ಲದ ಒಂದು ಅಂಶವೆಂದರೆ ಇಂತಹ ಸಂಘಟನೆಗಳಿಗೆ ಸರಕಾರದಿಂದ ಯಾವುದೇ  ಧನ ಸಹಾಯ ಇಲ್ಲವೆಂಬುದು. ಅವರಿಗೇನು ಬಿಡಿ, ಸರಕಾರದಿಂದ ಹಣ ಬರುತ್ತದೆ ಎಂಬ ಮಾತನ್ನು ನಾನೂ ಹಲವು ಬಾರಿ ಕೇಳಿದ್ದೇನೆ. ಇದು ಗೊತ್ತಿಲ್ಲದೆ ಕೆಲವರು ಆಡುವ ಮಾತುಗಳು. ವಾಸ್ತವದಲ್ಲಿ ಮೇಲೆ ಹೇಳಿದ ಎರಡು ಲಕ್ಷಣಗಳಿಲ್ಲದಿದ್ದರೆ, ಅಥವಾ ಕೈಯಿಂದ ಸಂಪನ್ಮೂಲವನ್ನು ಹಾಕದಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಕಷ್ಟ ಸಾಧ್ಯವೇ ಸರಿ.

altಈ ಹಂತದಲ್ಲಿ ಒಂದು ಮಾತು ನೆನಪಿಗೆ ಬರುತ್ತದೆ. ತಮಗೂ ಗೊತ್ತಿರುವ ದೃಷ್ಟಾಂತವೊಂದನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಒಮ್ಮೆ ಶ್ರೀ ಕೃಷ್ಣದೇವರಾಯ, ಗೋಡೆಯ ಮೇಲೆ ಒಂದು ಗೆರೆ ಹಾಕಿ, ಒಂದು ಸವಾಲು ಹಾಕುತ್ತಾನೆ. ಆ ಗೆರೆಯನ್ನು ಅಳಿಸದೆ ಅಂದರೆ ಒರೆಸದೇ ಸಣ್ಣದು ಮಾಡಬೇಕು. ಅಂದರೆ ಅದರ ಉದ್ದವನ್ನು ಕಡಿಮೆ ಮಾಡಬೇಕು ಎಂಬುದಾಗಿ. ಎಲ್ಲರೂ ಪ್ರಯತ್ನಿಸಿ ಸೋತಾಗ ತೆನಾಲಿ ರಾಮಕ್ರೃಷ್ಣ ಬರುತ್ತಾನೆ. ಅವನು ಆ ಗೆರೆಯನ್ನು ಮುಟ್ಟುವುದೇ ಇಲ್ಲ. ಅದರ ಕೆಳಗೆ ಮತ್ತೊಂದು ಅದಕ್ಕಿಂತಲೂ ಉದ್ದವಾದ ಗೆರೆ ಎಳೆದು ಬಿಡುತ್ತಾನೆ. ಸಹಜವಾಗಿ ಮೊದಲ ಗೆರೆಯ ಉದ್ದ ಕಡಿಮೆಯಾಗುತ್ತದೆ. ಅಂದರೆ ಇದನ್ನು ನಾವು ಬದುಕಬೇಕಾದ ರೀತಿಗೆ ಒಂದು ಪಾಠವಾಗಿ ನಾವಿಲ್ಲಿ ಉದಾಹರಿಸಬಹುದು. ಮೊದಲ ಗೆರೆಯನ್ನು ಅಳಿಸದೇ, ಅಂದರೆ ಯಾವುದೇ ಬೇರೆ ವ್ಯಕ್ತಿಯನ್ನು ಮುಟ್ಟದೇ, ಅಥವಾ ಬೇರೆ ವ್ಯಕ್ತಿಯನ್ನು ಮೆಟ್ಟಿ ನಿಲ್ಲದೇ, ಅಥವಾ ಬೇರೊಬ್ಬನ ತೇಜೋವಧೆ ಮಾಡದೇ, ನಾವು ನಮ್ಮ ಕೆಲಸವನ್ನು ಸದುದ್ದೇಶದಿಂದ ಮಾಡಿದರೆ, ಅದುವೇ ನೈಜ ಸಾಮಾಜಿಕ ಕಾಳಜಿ ಎಂಬ ಸಂದೇಶವನ್ನು ಇದು ನೀಡುತ್ತದೆ. ನಾವು ಮತ್ತು ನಮ್ಮ ಸಂಘಟನೆಗಳು ಹಾಗೆ ಬೆಳೆಯಬೇಕು ಎಂಬುದು ಇಲ್ಲಿನ ಆಶಯ. ಯಾರನ್ನೋ ಮೆಟ್ಟಿ ನಿಲ್ಲುವ ಮನೋಸ್ಥಿತಿ ನಮಗೆ ಬೇಡ. ಎಲ್ಲರನ್ನೂ ಬದುಕಗೊಡು ಎಂಬ ಸಂದೇಶದಿಂದ ನಾವು ಬದುಕನ್ನು ಕಟ್ಟಿ ಕೊಳ್ಳಬೇಕು, ಸಾಧ್ಯವಾದರೆ ಬೇರೆಯವರಿಗೆ ಬದುಕನ್ನು ಕಟ್ಟಿ ಕೊಡಬೇಕು ಎಂಬ ಆಶಯದೊಡನೆ ಬದುಕುವುದು ಇದೆಯಲ್ಲ, ಅದರಲ್ಲಿರುವ ಸಾರ್ಥಕ್ಯ ಬೇರಾವುದರಲ್ಲೂ ಇಲ್ಲವೆಂಬದು ನಾವು ಗಮನಿಸಬೇಕಾದ ಅಂಶ.

ತಮ್ಮ ಮುಂದೆ ಇನ್ನೂ ಒಂದು ದೃಷ್ಟಾಂತವನ್ನು ತೆರೆದಿಡಬಯಸುತ್ತೇನೆ. ಇತ್ತೀಚಿನ ಒಂದು ಸಭೆಯಲ್ಲಿ ಡಾ.ವರದರಾಜ ಚಂದ್ರಗಿರಿಯವರು ಹೇಳಿದ ದೃಷ್ಟಾಂತ ಇದು.  ಒಂದು ವಿಶಾಲವಾದ ಮರದಲ್ಲಿ ಒಣಗಿದ ಟೊಂಗೆಯೊಂದರ ಮೇಲೆ ಹಕ್ಕಿಯೊಂದು ಕುಳಿತಿದೆ. ಅದೇ ಮರದ ಮತ್ತೊಂದು ಮೂಲೆಯಲ್ಲಿ ಟೊಂಗೆಯೊಂದರ ಮೇಲೆ ಜೇನು ಗೂಡು ಕಟ್ಟಿಕೊಂಡಿದೆ. ಒರ್ವ ನಮ್ಮ ನಿಮ್ಮಂತಹ ಮನುಷ್ಯ ಜೇನು ತೆಗೆಯಲೆಂದು ಆ ಜೇನುಹುಳಗಳನ್ನೆಲ್ಲಾ ಓಡಿಸಿ, ಜೇನು ತೆಗೆದುಕೊಂಡು ಹೋಗುತ್ತಾನೆ. ಆಗ ಎಲ್ಲಾ ಜೇನುಹುಳಗಳೂ ಪ್ರಾಣ ಭೀತಿಯಿಂದ ಓಡಿ ಹೋದಾಗ, ಒಂದು ಜೇನು ಹುಳು ಈ ಒಣಗಿದ ರೆಂಬೆಯಲ್ಲಿ ಕುಳಿತ ಪಕ್ಷಿಯ ಸನಿಹ ಬರುತ್ತದೆ. ಆಗ ಆ ಪಕ್ಷಿ ಕೇಳುತ್ತದೆ. ಜೇನು  ಹುಳವೇ, ನಿನ್ನನ್ನು ಕಂಡು ಮರುಕವಾಗುತ್ತದೆ. ನೀನೀಗ ನಿರ್ಗತಿಕ ಎಂಬುದಕ್ಕಿಂತಲೂ ನೀನು ಸಂಗ್ರಹಿಸಿದ್ದ ಜೇನು ಆ ಮಾನವನ ಪಾಲಾಯ್ತಲ್ಲ ಎಂದು. ಅದಕ್ಕೆ ಜೇನು ಹುಳು ನಗುತ್ತಾ ಉತ್ತರಿಸುತ್ತದೆ. ಅಯ್ಯೋ ಪೆದ್ದೇ, ನಾನು ಈ ಕ್ಷಣದಲ್ಲಿ ಆ ಜೇನು ತುಪ್ಪವನ್ನು ಕಳೆದುಕೊಂಡಿರಬಹದು. ಆದರೆ ನೆನಪಿಡು, ಆ ಜೇನು ಸಂಗ್ರಹಿಸುವ ಮತ್ತು ಸವಿಯಾದ ಜೇನನ್ನು ತಯಾರಿಸುವ ನನ್ನ ಕಲೆಯನ್ನು ಯಾರೂ ಕದಿಯಲಾರರು!. ಇದು ನೋಡಿ ಬದುಕಿನ ರಸವತ್ತಾದ ಅನುಭವ.  ಇದರ ತಾತ್ಪರ್ಯ- ಜೀವನ ಕಲೆ, ಆತ್ಮ ವಿಶ್ವಾಸ. ನಾನು ನನ್ನೊಳಗಿರುವ ಸಾಮರ್ಥ್ಯದ ಮೇಲೆ ವಿಶ್ವಾಸ ಇಟ್ಟರೆ, ಆ ಸಾಮರ್ಥ್ಯ ನನ್ನನ್ನು ಕಾಯಬಹುದು ಎಂಬ ವಿಶ್ವಾಸದಿಂದಿದ್ದರೆ, ಖಂಡಿತಕ್ಕೂ ನಮ್ಮನ್ನು ಯಾರೂ ಮಣಿಸಲಾರರು ಎಂಬುದನ್ನು ಇದು ತಿಳಿಸುತ್ತದೆ. ಮುಖ್ಯವಾಗಿ ಬದುಕಿನಲ್ಲಿ ಬರುವ -   ಬದುಕು ಎಂಬುದನ್ನು ಇಲ್ಲಿ ಸಂಘಟನೆಗಳಿಗೆ ಸಮೀಕರಿಸಿ ಹೇಳುವುದಿದ್ದರೆ-ಯಾವುದೇ ಉತ್ತಮ ಕೆಲಸಗಳಿಗೆ ಬರುವ ಅಡ್ಡಿಯ ಕಾಲದಲ್ಲಿ ನಮಗೆ ವಿಶ್ವಾಸ ತುಂಬಬಲ್ಲ ದೃಷ್ಟಾಂತ ಇದು. ಕಥೆ ಇಲ್ಲಿಗೇ ಮುಗಿಯುವುದಿಲ್ಲ. alt 
ಒಣ ಟೊಂಗೆಯ ಮೇಲೆ ಕುಳಿತ ಹಕ್ಕಿಯನ್ನು ಕಂಡು ಜೇನು ಹುಳಕ್ಕೂ ಒಂದು ಪ್ರಶ್ನೆ. ಅಯ್ಯಾ ಪಕ್ಷಿ ಮಹರಾಯ, ಈಗಲೋ ಮತ್ತೊಂದು ಗಳಿಗೆಯಲ್ಲೋ ಬೀಳಬಹುದಾದ ಆ ಒಣಟೊಂಗೆಯ ಮೇಲೆ ಕುಳಿತಿದ್ದೀಯಲ್ಲ, ನಿನಗೆ ಮರುಳೇ. ಅದೇನಾದರೂ ಮುರಿದು ಬಿದ್ದರೆ ನಿನ್ನ ಸ್ಥಿತಿ ಏನು ಎಂದು ಅದು ಪಕ್ಷಿಯನ್ನು ಕೇಳಿದರೆ ಆ ಹಕ್ಕಿ ಹೇಳುತ್ತದೆ, ಅಯ್ಯಾ ಈಗ ನೀನು ಪೆದ್ದನಾದೆ. ನನಗೆ ಗೊತ್ತು. ಈ ಟೊಂಗೆ ಯಾವುದೇ ಕ್ಷಣದಲ್ಲಿಯೂ ಬೀಳಬಹುದು. ಆದರೆ ನಾನು ನಂಬಿ ಕುಳಿತಿದ್ದು ಈ ಟೊಂಗೆಯನ್ನುಲ್ಲ, ನನ್ನ ರೆಕ್ಕೆಗಳಿಗಿರುವ ಸಾಮರ್ಥ್ಯವನ್ನು!. ನೋಡಿ. ಇಲ್ಲಿಯ ಕಥೆಯ ತಿರುಳು!!. ಇದು ನಮ್ಮ ಮೇಲೆ ನಮಗಿರಬೇಕಾಗುವ ಆತ್ಮವಿಶ್ವಾಸ!!. ನಮ್ಮ ಮೇಲೆ ನಮಗೆ ವಿಶ್ವಾಸ ಇರಬೇಕು, ಈಗ ಈ ಎರಡೂ ದೃಷ್ಟಾಂತಗಳನ್ನು ಸಮೀಕರಿಸಿದರೆ, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ನಾವು ಬದುಕಬೇಕೇ ಹೊರತು, ಯಾರನ್ನೋ ಮೆಟ್ಟಿನಿಲ್ಲುವ ಅಥವಾ ತುಳಿದು ಬೆಳೆಯುವ ಸಂಸ್ಕಾರ ನಮಗೆ ಬೇಡ. ಎಲ್ಲರನ್ನೂ ಪ್ರೀತಿಸಿ, ಎಲ್ಲರೂ ಒಂದಾಗಿ ಬದುಕುವ ರೀತಿ ನೀತಿಗಳನ್ನು ಸಾಹಿತ್ಯ-ಕಲೆಗಳೆರಡೂ  ನೀಡುತ್ತಿರುವಾಗ ಅದುವೇ ಸಾಹಿತ್ಯ  ಮತ್ತು ಕಲೆ ಮಾನವನ ದಿನ ನಿತ್ಯದ ಬದುಕಿಗೆ ಕೊಡವ ಅತ್ಯಪೂರ್ವ ಜೀವನಪಾಠ. ಇಂತವನ್ನು ಪೋಷಿಸಿಕೊಂಡು ಹೋಗುವುದು, ಬೆಳೆಸುವುದು ಇಂತಹವುಗಳಿಗಾಗಿ ಸಾಹಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣ ವಾಗುತ್ತವೆ. ಅವುಗಳು ಬದುಕನ್ನು ಸುಸಂಸ್ಕೃತಿಯಿಂದ ಅನುಭವಿಸಲು ಕಲಿಸುತ್ತವೆ.
ಈ ಎಲ್ಲಾ ಹಿನ್ನೆಲೆಯಲ್ಲಿ, ಇಂದು ಸಂಘಟಿತ ಜೀವನ ಬಹುಮುಖ್ಯ ಪಾತ್ರವಹಿಸುತ್ತವೆ ಎಂಬ ನಂಬುಗೆಯೊಂದಿಗೆ, ಕೆಲವು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಲು ಕೆಲವೊಮ್ಮೆಕೆಲವನ್ನು ನಿಷ್ಠುರವಾಗಿ ನಿರ್ಲಕ್ಷಿಸಬೇಕಾಗುತ್ತದೆ ಎಂಬ ಹಿನ್ನೆಲೆಯೊಂದಿಗೆ ಹೀಗೇ ಅನಿಸಿದ ಕೆಲವನ್ನು ನಾನಿಲ್ಲಿ ತೆರೆದಿಟ್ಟಿದ್ದೇನೆ. ನೀವೇನಂದುಕೊಂಡಿರೋ!!?

Tuesday, 18 December 2012

ಪ್ರದಕ್ಷಿಣೆ ನಿಲ್ಲಿಸಿದ ಈ ಹೊತ್ತಿನಲ್ಲಿ....


 ಪ್ರದಕ್ಷಿಣೆ ಯನ್ನು ನಿಲ್ಲಿಸಿದಾಕ್ಷಣ ಅನೇಕರು "ಏಕೆ" ಎಂದು ಪ್ರಶ್ನಿಸಿದ್ದರು. ಎಲ್ಲರಿಗೂ ಉತ್ತರಿಸಲು ನಿರ್ಧಿಷ್ಟ ಕಾರಣವಿರಲಿಲ್ಲ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ....ಪ್ರದಕ್ಷಿಣೆಯನ್ನು ನಿಲ್ಲಿಸಿದ ಈ ಹೊತ್ತಿನಲ್ಲಿ ಒಮ್ಮೆ ನಿಮ್ಮೆದುರು ನನ್ನ ಮನಸ್ಸನ್ನು ತೆರೆದಿಟ್ಟು "ರಗಳೆ" ಮಾಡುವ ಬಯಕೆ..ಸಹಿಸಿಕೊಳ್ಳಿ.

 
ಪ್ರದಕ್ಷಿಣೆಯನ್ನು( www.pradakshine.com) ನಿಲ್ಲಿಸಿದ ಬಗ್ಗೆ ಅನೇಕರು ಕೇಳಿದ್ದರು. ಇಷ್ಟು ಜನ ಓದುಗರಿದ್ದಾರೆ ಅದಕ್ಕೆ ಎಂಬುದೇ ನಾನು ಅದನ್ನು ನಿಲ್ಲಿಸಿದ ತಿಳಿದ ಸತ್ಯ ಎಂಬುದನು ಒಪ್ಪಿಕೊಳ್ಳಲೇ ಬೇಕು. ಕಾರಣಗಳು ಏನೇ ಇರಲಿ, ಪ್ರದಕ್ಷಿಣೆಯನ್ನು ನಿಲ್ಲಿಸಿದ್ದೇನೆ. ಆ ನಿಲ್ಲುವಿಕೆ ತಾತ್ಕಾಲಿಕ ವಾಗಲೇ ಎಂಬುದು ತಮ್ಮೆಲ್ಲರಂತೆ ನನ್ನದೂ ಆಶಯಾ! ಅದಕ್ಕಾಗಿ ಪ್ರಯತ್ನವೂ ಸಾಗಿದೆ.
ಕೆಲವು ಕಾರಣಗಳಿಂದ ಅದನ್ನು ನಿಲ್ಲಿಸಿದ್ದೇನೆ ಎಂಬ ಹೇಳಿಕೆಯನ್ನು ನೋಡಿ, ದೆಹಲಿಯ ಚಿತ್ತರಂಜನ ದಾಸ್, ತಾನು ಬೇಕಾದರೆ ಅದನ್ನು ಮುಂದುವರಿಸುತ್ತೇನೆ, ಏನು ಮಾಡಬೇಕು ಹೇಳಿ ಎಂದಿದ್ದಾರೆ. ೩ಕೆ ಯ ರೂಪಕ್ಕ ಛೆ, ನಿಲ್ಲಿಸಬೇಡಿ ಎಂದು ನನ್ನ ಕಷ್ಟ ಕೇಳಿದ್ದಾರೆ. ತಮ್ಮ ಕಷ್ಟದ ನಡುವೆಯೂ ಬೇರೆಯವರ ಕಷ್ಟಗಳಿಗೆ ನೆರವಾಗುವ ಆ ಮಮತಾಮಯಿಗೂ ನಾನು ಚಿರ ಋಣಿ. ಇಷ್ಟಕ್ಕೂ ಅದನ್ನು ನಿಲ್ಲಿಸಿದ ಕೊರತೆ ನನ್ನನ್ನು ಬಹುವಾಗಿ ಕಾಡುತ್ತಿದೆ. ನಿಜ ಹೇಳಿಬಿಡಬೇಕು ಎಂದರೆ ಈ ಅಂತರಜಾಲ ಪತ್ರಿಕೆಯನ್ನು ನಾನು ಮುಂದಿನ ಎರಡು ವರ್ಷಗಳ ಕಾಲಕ್ಕೆ ನವೀಕರಿಸಿಟ್ಟುಕೊಂಡಿದ್ದೇನೆ.

ಇಲ್ಲಿ ಮೊತ್ತದ ಅಥವಾ ಖರ್ಚಿಗಿಂತಲೂ  ನನ್ನ ಉದ್ದೇಶ ಅಷ್ಟಾಗಿ ಈಡೇರದ ಬಗ್ಗೆ ಬೇಸರವಿದೆ. ನನ್ನದೇ ಆಪ್ತ ಬಳಗಕ್ಕೂ ಒಂದು ವೇದಿಕೆಯಾಗಿ ನಾನು ಈ ಪತ್ರಿಕೆ ಆರಂಭಿಸಿದ್ದೆ. ಎಲ್ಲೆಲ್ಲೋ ಹರಿದು ಹಂಚಿ ಹೋಗುವ ಅಥವಾ ಎಲ್ಲೂ  ಪ್ರಕಟಣೆ ಕಾಣದ (ಆ ಆರ್ಹತೆ ಇದ್ದರೂ) ಬರಹಗಳಿಗೊಂದು ವೇದಿಕೆಯಾಗುವ ಮಹತ್ವದ ಅಭಿಲಾಷೆ ನನ್ನದಾಗಿತ್ತು. ಹಾಗಾಗಿ ಬಹು ಉತ್ಸಾಹದಿಂದಲೇ ಇದನ್ನು ಆರಂಭಿಸಿದ್ದೆ. ನನ್ನೆಲ್ಲಾ ಸ್ನೇಹಿತರಿಗೂ ಬರೆಯುವಂತೆ ಅನೇಕ ಬಾರಿ ಪ್ರೆರೇಪಿಸಿದ್ದೆ. ಅದ್ಯಾಕೋ, ನನ್ನ ನಿರೀಕ್ಷೆಯ ಉತ್ಸಾಹದ ಕೊರತೆ ನನ್ನನ್ನು ತುಸು ಯೋಚಿಸುವಂತೆ ಮಾಡಿದು!. ಒಬ್ಬಿಬ್ಬರು ಬಿಟ್ಟರೆ ಮತ್ಯಾರೂ ಇದನ್ನು ಗಂಭೇರವಾಗಿ ತೆಗೆದುಕೊಳ್ಳಲೇ ಇಲ್ಲ. ಓದುಗ ದೊರೆಗಳ ಅಭಾವ ಯಾವತ್ತೂ ಆಗಲಿಲ್ಲ.  ಆದರೆ ನನ್ನ ಕಚೇರಿಯ ಕೆಲಸಗಳು, ಇದಕ್ಕೆ ಹೆಚ್ಚು ಸಮಯ ಕೊಡುವಲ್ಲಿ ನನ್ನನ್ನು ತಡೆದ್ದಂತೂ  ಸತ್ಯ.

ಈ ಕಂಪ್ಯುಟರ್ ಮಟ್ಟಿಗೆ ನಾನು ತುಸು ಅನಕ್ಷರಸ್ತ. ಇದಕ್ಕಾಗಿ ಮತ್ತು ಲೇಖನವನ್ನು ಪೋಸ್ಟ್ ಮಾಡಲು ನಾನು ಬೇರೆಯವರನ್ನು ಅವಲಂಭಿಸಿರಬೇಕಾದ ಅನಿವಾರ್ಯತೆಯೂ ಇತ್ತು. ಲೇಖನಗಳ ಸಂಗ್ರಹ, ಅದರ ಓದು, ಎಡಿಟಿಂಗ್, ಹೀಗೆ ನನ್ನ ಹೆಚ್ಚಿನ ಸಮಯವನ್ನು ಅದು ತೆಗೆದುಕೊಳ್ಳುತ್ತಿತ್ತು. ನನ್ನ ವ್ರತ್ತಿಯ ಕರೆ ಹೆಚ್ಚಿನ ಸಂದರ್ಭದಲ್ಲಿ ಇದಕ್ಕೆ ಅನುವಾಗುತ್ತಿರಲಿಲ್ಲ. ನನ್ನ ಆಶಯದಂತೆ "ಗುಣಮಟ್ಟವನ್ನು " ಕಾಯ್ದುಕೊಂಡು ಮುಂದುವರಿಯಲು ಕಷ್ಟವಾದಾಗ ಏನೇನೋ ನೆಪ ಹೇಳಿ ಕುಂಟುತ್ತಾ "ಪ್ರದಕ್ಷಿಣೆ' ಹಾಕುವುದು ನನಗೆ ಅಷ್ಟು ಇಷ್ಟವಾಗಲಿಲ್ಲ!!. ಕೊನೆಗೂ ಅದನ್ನು ನಿಲ್ಲಿಸುವ ಮನಸ್ಸನ್ನು ಬಹಳ ಕಷ್ಟ ಪಟ್ಟು ಮಾಡಿದೆ.

ಇಲ್ಲಿ ಹೇಳಲೇ ಬೇಕಾದ ವಿಷಯವೊಂದಿದೆ. ನನಗೆ ಈ ಪ್ರದಕ್ಷಿಣೆ ಅನೇಕ ಸ್ನೇಹಿತರನ್ನು ಒದಗಿಸಿದೆ. ೩ಕೆ ಬಳಗದ ಮೂಲಕ ನಾಡಿನ ಅನೇಕ ಕನ್ನಡದ ಮನಸುಗಳು ನನ್ನನ್ನು ಪುನೀತನನ್ನಾಗಿಸಿವೆ. ರೂಪಾ ಸತೀಶ್ ಎಂಬ ೩ಕೆ ಬಳಗದ ಅಧಿನಾಯಕಿಗೆ ಮತ್ತು ಈ ಬಳಗಕ್ಕೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ನನ್ನದೂ ಒಂದು ಒತ್ತಾಯ ಕಾರಣವಾಗಿ ಇಲ್ಲಿನ ಕೆಲ ಕವಿಗಳು ಕಥನದತ್ತ ವಾಲಿದ್ದು ನನಗೆ ಸಂತಸ ತಂದಿದ್ದರೂ, ಅವರ ಬರಹಗಳಿಗೆ ವೇದಿಕೆಯಾಗದ ನೋವು ನನ್ನ ಬಳಿ ಇದೆ. ಆದರೆ ಈ ಬಳಗದ ಮೂಲಕ ಸಿಕ್ಕ ಅಪೂರ್ವ ಸ್ನೇಹವಿದೆಯಲ್ಲ....ಅದು ಸಾವಿರ ಜನುಮಕ್ಕೆ ಸಮ ಎಂದೇ ನಾನಂದುಕೊಂಡಿದೇನೆ. ಅದೆಷ್ಟೋ  ಉತ್ತಮ ಕವಿಗಳು ಇಲ್ಲಿದ್ದಾರೆ ಬಹುಶ: ಮುಂದೊಂದು ದಿನ ಕನ್ನಡ ನಾಡಿನ ಅಪರೂಪದ ಮತ್ತು ಪ್ರತಿಭೆಯ ಕಣಜಗಳೆಂದು ಗುರುತಿಸಿಕೊಳ್ಳುವ ಕವಿ ಸಮೂಹವೇ ಇಲ್ಲಿದೆ. ರೂಪಕ್ಕನಂತವರು ಮನಸು ಮಾಡಿದರೆ ಏನನ್ನೂ ಬರೆಯಬಲ್ಲರು. ಸತೀಶ್ ನಾಯಕ್ ತನ್ನ ಬ್ಲಾಗ್ ನ ಮೂಲಕ ಈಗಾಗಲೇ ತಮ್ಮ ಬರಹದ ತಾಕತ್ತನ್ನು ತೋರಿದ್ದಾರೆ ಸತೀಶ್ ಬಿ ಕನ್ನಡಿಗನ ಹೂವಿನಂತಹ ಮನಸ್ಸು ಇಷ್ಟವಾಗಿ ಹೋಗಿದೆ. ಅಶೋಕ್ ಶೆಟ್ಟಿ ಊರಿನವರು ಎಂಬ ಹೆಮ್ಮೆಯ ಜೋತೆಗೆ 'ಮಾನವೀಯ' ಕವಿ ಎಂಬ ಹಮ್ಮೂ ನನ್ನದು. ಅಜಾದ್ ಸರ್  ಬರಹದ ತಾಕತ್ತು ಯಾವ ಕವಿಗೂ ಕಮ್ಮಿ ಇಲ್ಲ.ಭರತ್ ಆರ್ ಭಟ್ ನೊಳಗೆ ಓರ್ವ ಉತ್ತಮ ನಗೆಬರಹಗಾರನಿದ್ದಾನೆ, ಅವರು ಮನಸು ಮಾಡಬೇಕಷ್ಟೆ...ನೂತನ್ ಎಚ್ ಬಿ ಯಾ ಕವನಗಳು ಆಪ್ಯಾಯಮಾನವಾಗಿ ಹಿಡಿದಿಡುತ್ತವೆ..... ಅನುಪಮಾ ಹೆಗಡೆಯವರಿಂದ 'ಪ್ರದಕ್ಷಿಣೆ'ಗೆ ಗದ್ಯ ಬರೆಸುವ ಮನಸ್ಸಿತ್ತು....ಆಗಲೇ ಇಲ್ಲ!.ಅನುಪಮಾ ಗೌಡರ ಬರಹಗಳು ಭರವಸೆ ಮೂಡಿಸಿವೆ. ಗೋಪೀ ನಾಥ್ ಅವರ ಸ್ನೇಹಮಯ ನಗು ಮತ್ತು ಮಗುವಿನಂಥ ಮಾತು ಅಪ್ಯಾಯಮಾನವಾಗಿರುತ್ತದೆ.ಶಿವು ಅವರಂತಹ ಅಪ್ರತಿಮ ಛಾಯಾಚಿತ್ರದ ಪ್ರತಿಭೆಯಾ ಸ್ನೇಹವೇ ಒಂದು ಭಾಗ್ಯ!.ದಿನಕರ್ ಮೊಗೇರ್ ಅವರ ಕಥನ ಲೋಕ ಬಹು ಸ್ವಾರಸ್ಯಕರ ಮತ್ತು ಅವರೊಳಗಿನ ಕಥೆಗಾರನಿಗೆ ಸಲಾಂ. ಅರುಣ್ ಶ್ರಂಗೇರಿಯ ಆತ್ಮೀಯತೆಯೇ ಮುದ ನೀಡುವ ವಿಷಯ. ಎಲ್ಲಕ್ಕೂ ಕಲಶವಿಟ್ಟಂತೆ ನೆರೆಮನೆಯ ಮಹೇಶ್ ಮೂರ್ತಿ ಯ  ಸಖ್ಯವೇ ನನ್ನ ಅದ್ರಷ್ಟ. ಕಂಡಾಕ್ಷಣ ಗುರುವನ್ನು ಕಂಡಂತೆ ಶಿರ ಭಾಗಿ ನಮಿಸಬೇಕೆನ್ನುವ ಮ್ರಧು ಮನದ ಮಂಜುನಾಥ್  ಕೊಳ್ಳೇಗಾಲ್ ನನ್ನ ಮನ ಹಿಡಿದಿಟ್ಟಿದ್ದಾರೆ.....ಜಗನ್ ಮತ್ತು ನವೀನ ರ ಸ್ನೇಹಮಯ ಮನಸು.. ಹೀಗೆ ಬರೆಯುತ್ತಾ ಹೋದರೆ ಮುಗಿಯದಷ್ಟೂ  ಆತ್ಮೀಯತೆಯ ಸರಕನ್ನು ನನಗೆ ನೀಡಿದ್ದು ೩ ಕೆ ಬಳಗ. ಇಲ್ಲಿ ಹೇಳಲೇ ಬೇಕಾದ ಮತ್ತೊಂದು ವಿಚಾರವೆಂದರೆ "ಮಂಚಿ" ಎಂಬ ಪದ ನನಗೆ ಆತ್ಮೀಯವಾದದ್ದು.!! ಅನಿತಾ ನರೇಶ್ ಮಂಚಿ ಹಾಗೂ ಅವರ ಪತಿ ರಾಮ್ ನರೇಶ್ ಮಂಚಿಯಂತಹ ಅಪ್ರತಿಮೆ ದಂಪತಿಗಳನ್ನು ನನಗೆ ಸ್ನೇಹಿತರನ್ನಾಗಿಸಿದ್ದು ಈ  ೩ಕೆ ಬಳಗವೇ! ಇವರನ್ನು ಅಪ್ರತಿಮ ಎನ್ನಲೂ ಕಾರಣವಿದೆ. ರಾಮ್ ನರೇಶ್ ಕ್ಯಾಮೆರಾದ ಮೂಲಕ ಜಗ ತೋರುವವರು. ಅವರ ಫೋಟೋಗ್ರಫಿಯ ತಾಕತ್ತು ನನ್ನನ್ನು ಬೆರಗುಗೊಳಿಸಿದೆ!. ಇನ್ನು ಅನಿತಾ!. ಕಂಡಾಗಲೆಲ್ಲಾ ನಾನವರಲ್ಲಿ ಕಾಣುವುದು ಮುಗ್ಧ ತಂಗಿಯ ನಿಷ್ಕಲ್ಮಶ ನಗು. 'ಬಣ್ಣದ ಕಡ್ಡಿ' ಎಂಬ ಲಘು ಬರಹದ ಸಂಕಲನದ ಮೂಲಕ ತನ್ನ ಬರಹದ ಹರಹನ್ನು ಸಶಕ್ತವಾಗಿ ಸಾರಸ್ವತ ಲೋಕಕ್ಕೆ ಕೊಟ್ಟ ಈಕೆ, ಭರವಸೆ ಹುಟ್ಟಿಸಿರುವ ಬರಹಗಾರ್ತಿ. ಇನ್ನು ಮತ್ತೋರ್ವ ಆಕರ್ಷಕ ವ್ಯಕ್ತಿತ್ವ ಅಶೋಕ ಭಾಗ ಮಂಡಲ.ನಿಜ ಹೇಳಿ ಬಿಡುತ್ತೇನೆ....ನನ್ನ ಬ್ಲಾಗ್ ನಲ್ಲಿ ನೀವೇನಾದರೂ  ಆಕರ್ಷಣೆ ಕಂಡುಕೊಂಡಿದ್ದಾರೆ ಅದು ಅಶೋಕ್ ಕ್ರಪೆ!! ಅವರಲ್ಲಿ ಒಮ್ಮೆ ನಾನು ಕೇವಲ ಒಂದು ಫೇಸ ಬುಕ್ ಚಾಟನಲ್ಲಿ ಬ್ಲಾಗ್ ನ್ನು ಸ್ವಲ್ಪ ಚೆಂದಗಾಣಿಸಿಕೊಡಬಹುದೇ ಎಂದೆ! ಮರುದಿನ ನನ್ನ ಬ್ಲಾಗ್ ನನ್ನದಾ  ಎಂಬಷ್ಟೂ  ಚೆಂದ ಮಾಡಿ, ನನಗೆ ತಿಳಿದಷ್ಟು ಮಾಡಿದ್ದೇನೆ ಎಂದು ವಿನಯ ಮೆರೆದ ದೊಡ್ಡ ಮನಸ್ಸು ಅವರದ್ದು. ಇವರ ಬರಹ ಹೇಗಿರುತ್ತದೆ ಎಂಬುದು ನಿಮಗೆ ಬೇಕಿದ್ದರೆ, "ಬಣ್ಣದ ಕಡ್ಡಿ"ಯಾ ಬೆನ್ನುಡಿ ಓದಬೇಕು.....ಅದ್ಭುತ ಬರಹಗಾರ!. ಈ ಎಲ್ಲರನ್ನು ನನಗೆ ಮತ್ತು ನನ್ನ ಆತ್ಮೀಯ ವಲಯಕ್ಕೆ ಕಾರಣವಾಗಿಸಿದ್ದು ಪ್ರದಕ್ಷಿಣೆ!!.

ಇನ್ನು ಪ್ರದಕ್ಷಿಣೆಯನ್ನು ನಿಲ್ಲಿಸಿದಾಕ್ಷಣ ನೊಂದುಕೊಂಡ ಪ್ರಮುಖರಲ್ಲಿ ನಮ್ಮ ಸರ(ಸ)ಮಯದ, ಕುಳಿತಲ್ಲಿ ನಿಂತಲ್ಲಿ ಕವನ ಕಟ್ಟುವ ಕವಿಮನಸು, ಸುಬ್ರಾಯ ಭಟ್ಟರು. ಅವರು ಬಹಳ ನೊಂದುಕೊಂಡವರು. ಆದರೆ ನನ್ನ ಕಷ್ಟದ ಸಂಪೂರ್ಣ ಅರಿವನ್ನು ಹತ್ತಿರದಿಂದಲೇ ಗಮನಿಸಿದವರೂ ಅವರೇ. ಮೌನಕ್ಕೆ ಶರಣಾಗಿ, ನಿಮ್ಮ ಅಭಿಪ್ರಾಯಕ್ಕೆ, ಹೆಜ್ಜೆಗೆ ನನ್ನ ಜೊತೆ ಇದೆ ಎಂದರು. "ಪ್ರದಕ್ಷಿಣೆ"ಯ  ತಾತ್ಕಾಲಿಕ ನಿಲುಗಡೆ ಎಂಬ ಸಾಲು ನೋಡಿ ತತ್ ಕ್ಷಣ ಫೋನ್ ಮಾಡಿ, ಏನಾಯ್ತು ಎಂದು ವಿಚಾರಿಸಿ, ಇರಲಿ ಬಿಡಿ, ಇನ್ನು ನಿಮ್ಮ ಬರಹಗಳತ್ತ ಗಮನ ಕೊಡಿ ಎಂದವರು ಆತ್ಮೀಯ ರಘು ಇಡ್ಕಿದು ಅವರು. ನಿಲ್ಲಿಸಬಾರದಿತ್ತು, ಇರಲಿ ಬಿಡಿ ಎಂದವರು, ಎಂದಿಗೂ ನನ್ನೊಂದಿಗಿರುವ ಕರುಣಾಕರ ಬಳ್ಕೂರು!. ಮುಖ್ಯವಾಗಿ ಇಲ್ಲಿ ಹೇಳಲೇ ಬೇಕಾದ ಹೆಸರು ದೆಹಲಿಯ ಎ ವಿ ಚಿತ್ತರಂಜನ ದಾಸರದ್ದು. ಪ್ರದಕ್ಷಿಣೆಯ ಆರಂಭದಿಂದಲೂ, ಲೇಖನಗಳನ್ನು ಕಳುಹಿಸಿ, ದೆಹಲಿಯ ಅನೇಕ ಕನ್ನಡಿಗರನ್ನು ಇದನ್ನೋದಲು ಪ್ರೇರೇಪಿಸಿದವರು ಇವರು. ಮೊನ್ನೆ 'ಪ್ರದಕ್ಷಿಣೆ'ಯನ್ನು ನಾನು ಮುಂದುವರಿಸೇ? ಅದಕ್ಕೇನು ಮಾಡಬೇಕು ಎಂದು ಮೇಲ್ ಹಾಕಿದ್ದರು. ನನ್ನ ಮನ ಮೂಕವಾಗಿದೆ..ಉತ್ತರಿಸದೇ ಕುಳಿತಿದ್ದೇನೆ.....ಕಾದಿದ್ದೇನೆ...
ಅವರ ಕನ್ನಡಾಭಿಮಾನಕ್ಕೆ ನಾನು ಶರಣು.

ಹಿರಿಯರಾದ ನಾ. ದಾಮೋದ ಶೆಟ್ಟಿಯವರು, ತಮ್ಮ ಬರಹಗಳ ಮೂಲಕವೂ ನನ್ನನ್ನು ಪ್ರೋತ್ಸಾಹಿಸಿದವರು. ಅವರಿಗೆ ನಾನು ಎಂದೆಂದಿಗೂ ಚಿರ ಋಣಿ. ಅವರ ಒಡನಾಟವೇ ನಮಗೊಂದು ಹೊಸ ಜೀವನ!. ತಮ್ಮ ಮನೆಯ ದ್ರಶ್ಯ ಚಾವಡಿಯಲ್ಲಿ ಕುಌರಿಸಿಕೊಂಡು, ಮೆಚ್ಚುಗೆಯ ಮಾತಾಡಿದವರು ವಾಮನ ನಂದಾವರ ದಂಪತಿಗಳು. ಎಂದಿಗೂ ಅವರ ಮಾರ್ಗ ದರ್ಶನ ನಮಗಿದೆ. ಅವರ ಮಾರ್ಗ ದರ್ಶನದಡಿ, ಅರೆಹೊಳೆ ಸಾಹಿತ್ಯ ಪ್ರದಕ್ಷಿಣೆ ನಡೆಯಲೂ ಪ್ರದಕ್ಷಿಣೆಯೇ ಕಾರಣ. ಮತ್ತು ಅದು ಮುಂದುವರಿಯುತ್ತ ದೆ. ಅವರೆಲ್ಲರನ್ನು ಈ ಸಮಯದಲ್ಲಿ ಧನ್ಯತಾ ಭಾವದಿಂದ ಅಭಿನಂದಿಸಲೇಬೇಕು.

ಇನ್ನೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದವರು ಅನೇಕರು. ಎಲ್ಲರನ್ನು ಸ್ಮರಿಸಿಕೊಳ್ಳಲು ಇಲ್ಲಿ ಆಗದ ಮಾತು!!. ಎಲ್ಲರಿಗೂ ನಾನು ಹ್ರದಯ ತುಂಬಿ ಧನ್ಯವಾದ ಹೇಳಲು ಇದನ್ನು ವೇದಿಕೆಯಾಗಿ ಉಪಯೋಗಿಸಿಕೊಂಡಿದ್ದೇನೆ. ನಮ್ಮ ಚುಟುಕು ಸಾಹಿತ್ಯ ಪರಿಷತ್ ನ ಎಲ್ಲರೂ, ಜೊತೆ ನೀಡಿದ್ದಾರೆ ಕಲಾವಿದ ದಿನೇಶ್ ಹೊಳ್ಳ ರು ಸಿಕ್ಕಾಗಳೆಲ್ಲಾ ಶುಭ ಹಾರೈಸಿ, ನನ್ನೆಲ್ಲಾ ಕೆಲಸಗಳಿಗೂ  ಜೊತೆ ನೀಡುವವರು. ಪ್ರದಕ್ಷಿಣೆಗೆ ಉತ್ತಮ ಲಾಂಚನವನ್ನು ತಯಾರಿಸಿಕೊಟ್ಟವರೂ ಅವರೇ.ಧನ್ಯೋಸ್ಮಿ ಹೊಳ್ಳರೇ!

ಪ್ರದಕ್ಷಿಣೆಯಲ್ಲಿ ಅನೇಕ ಓದುಗರ ಮನ ಗೆದ್ದದ್ದು ಅನಿತಾ ಲೋಬೋ ಅವರ ಭುವನ ಕಾದಂಬರಿ. ಅದನ್ನು ಪ್ರಕಟಿಸಲು ಒಪ್ಪಿಗೆ ನೀಡಿದ ಅನಿತಾ ಲೋಬೋ ಅವರಿ ಗೂ, ಅವರ ಪತಿಗೂ ನಾನು ಅಭಾರಿಯಾಗಿದ್ದೇನೆ. ಅತ್ಯುತ್ತಮ ಕಾದಂಬರಿಯಾಗಿ ಅದು ಸಾರಸ್ವತ ಲೋಕದಲ್ಲಿ ಶ್ರೀಮಂತ ವಾಗಲಿ ಎಂಬುದು ನನ್ನ ಬಯಕೆ.

ಇನ್ನುಪ್ರದಕ್ಷಿಣೆಯನ್ನು ಯಾಕೆ ನಿಲ್ಲಿಸಿದ್ದು, ಏನಾದರೂ ಮಾಡೋಣ ಎಂದು ಮೊನ್ನೆ ಒಪ್ಪಣ್ಣ.ಕಾಂ ನವರೂ ಆತ್ಮೀಯರೂ ಆದ ಗೋಪಾಲ ಕ್ರಷ್ಣ ಬೊಳುಂಬು ಅವರು ಹೇಳಿದರು. ಕೊನೆಗೆ ಅವರೇ ನನಗೆ ನಿಮ್ಮ ಕಷ್ಟ ಅರ್ಥವಾಗುತ್ತದೆ ಎಂದು ನಕ್ಕರು....ಆ ನಗುವಿನಲ್ಲಿ ವಿಷಾದ ವಿತ್ತು!!.

ಸ್ನೇಹಿತರೇ, ಹೀಗೆ ಪ್ರದಕ್ಷಿಣೆ ನನಗೆ ಅನೇಕ ಆತ್ಮೀಯರನ್ನು ಒದಗಿಸಿದೆ. ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ಅಲ್ಲಿ ಆದ ಲೋಪವನ್ನು ಸರಿ ಮಾಡಿಕೊಳ್ಳಲು ನಾನು ಈ ಬ್ಲಾಗ್ ನ್ನು ಆರಂಭಿಸಿದ್ದೇನೆ. ಇಲ್ಲಿ ನನ್ನದೇ ಬರಹಗಳಿಗೆ ವೇದಿಕೆಯಾಗಿ ಇದು ನನ್ನ ಎಲ್ಲಾ ರಗಳೆಗಳನ್ನು ನಿಮ್ಮ ಮುಂದೆ ಬಿಚ್ಚಿಡಲಿದೆ. ಯಾವುದರ ವಶವಾದ ವಶಿದಾಸರು ನೀವು ಎಂದು ಸ್ನೇಹಿತ ನೂತನ್ ಕೇಳಿದ್ದರು. ನಿಜಕ್ಕೆಂದರೆ ನಾವು ಕೆಲವೊಮ್ಮೆ ಕೆಲವದಕ್ಕಾಗಿ ಕೆಲವನ್ನು ಬಿಡಬೇಕಾಗುತ್ತದೆ ಎನ್ನುವಂತೆ, ನನ್ನ ಬರವಣಿಗೆಯನ್ನು ಮುಂದುವರಿಸಲು, ನನ್ನದೇ ಕೆಲವು ಅನನುಕೂಲತೆಗಳು ಅಡ್ಡಿಯಾಗಿದ್ದನ್ನು ನಾನು ಮನಗಂಡಿದ್ದೇನೆ. ಹಾಗಾಗಿ ಈ ಬ್ಲಾಗ್ ನ ಮೊರೆ ಹೋಗಿದ್ದೇನೆ

ಇಂದಿನ ಮಟ್ಟಿಗೆ ಒಂದಷ್ಟು ಹಗುರವಾದ ಭಾವನೆ ನನ್ನದು. ಇದಕ್ಕೆ ಕಾರಣ ಪ್ರದಕ್ಷಿಣೆಯ  ಬಗ್ಗೆ ನಿಮ್ಮೊಂದಿಗೆ ಮನ ಬಿಚ್ಚಿ ಮಾತಾಡಿದ್ದು. ಇನ್ನೂ ಹೇಳಲು  ಬಹಳವಿದೆ....ಮುಂದೆ ಅನಂತ ಅವಕಾಶವಿದೆ....ಸಿಗುತ್ತೇನೆ.....

ಪ್ರದಕ್ಷಿಣೆಯ ನಿಲುಗಡೆಯ ಹಿನ್ನೆಲೆಯಲ್ಲಿ ಎಲ್ಲರಲ್ಲಿಯೂ ಕ್ಷಮೆ ಕೇಳುತ್ತಾ....ಅರೆಹೊಳೆ ಪ್ರತಿಷ್ಠಾನ ಮೂಲಕ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳಹೊರಡುತ್ತೇನೆ.....ಬರಹದ ಹರಿವು ನಿರಂತರವಾಗಿರುತ್ತದೆ. ನಿಮ್ಮ ಪ್ರೀತಿ, ವಿಶ್ವಾಸ ಸದಾ ಇರಲಿ.....

ಪ್ರೀತಿಯೊಂದಿಗೆ....

ವಶಿದಾಸ

Monday, 17 December 2012

’ಸರದಿ’ಯಲ್ಲೊಂದು ಇಣುಕು......

ನನ್ನ ಮೆಚ್ಚಿನ ಲೇಖಕ, ನಾ ದಾಮೋದರ ಶೆಟ್ಟಿಯವರ ಕಾದಂಬರಿ, "ಸರದಿ"ಯಾ ಬಗ್ಗೆ ನಾನು ಹಿಂದೊಮ್ಮೆ ಬರೆದಿದ್ದ, ವಿಮರ್ಶೆಯನ್ನು ಮತ್ತೊಮ್ಮೆ  ಇಲ್ಲಿ ನೀಡುತ್ತಿದ್ದೇನೆ. ಎಲ್ಲೆಲ್ಲೋ ಹಂಚಿಹೋಗಿದ್ದ ನನ್ನ ಬರಹಗಳನ್ನು ಒಂದೆಡೆ ದಾಖಲಿಸುವ ಪ್ರಯತ್ನದ ಒಂದು ಭಾಗ ಮತ್ತು ಆಸಕ್ತರಿಗೆ ಮಗದೊಮ್ಮೆ ಓದುವ ಅವಕಾಶವನ್ನಾಗಿ ನಾನು ಮಾಡುವ "ರಗಳೆಗಳನ್ನು" ದಯವಿಟ್ಟು ಸಹಿಸಿಕೊಳ್ಳಿ. ನಿಮ್ಮ ಅನಿಸಿಕೆಗಳು ಮತ್ತೆ ಮತ್ತೆ ಹುಮ್ಮಸ್ಸು ನೀಡುತ್ತವೆ.....ಇನ್ನು ನೀವುಂಟು, ನನ್ನ ಈ ಲೇಖನವುಂಟು.....

ನಾ ದಾಮೋದರ ಶೆಟ್ಟಿಯವರ ಇಪ್ಪತ್ತೈದನೆಯ ಕೃತಿ ಮತ್ತು ಎರಡನೆಯ ಕಾದಂಬರಿ ’ಸರದಿ’ಯನ್ನು ಓದುತ್ತಿದ್ದಂತೆ, ಲೇಖಕರ ಒಳಗಣ್ಣು ಹುಡುಕುತ್ತಿರುವ ಮತ್ತು ವಿಮರ್ಶಿಸ ಹೊರಟಿರುವ ಪಾಶ್ಚಾತ್ಯ ಮತ್ತು ಭಾರತೀಯ ಸಂಸ್ಕೃತಿಯ ಆಳ-ವಿಸ್ತಾರಗಳ  ಟಿಪ್ಪಣಿ ತೆರೆದುಕೊ೦ಡಂತೆ ಭಾಸವಾಗುತ್ತದೆ.
ಮುನ್ನುಡಿಯಲ್ಲಿ ವಿವೇಕ ರೈಯವರು ಹೇಳಿದಂತೆ ’ಕುಟುಂಬ’ ಎಂಬ ಸಂಸ್ಥೆಯ ಮೂಲಭೂತ ತಿರುಳಾದ ’ಮದುವೆ’ ಕೂಡ ಕೆಲಸದ ನೆಲೆಗಳೊಂದಿಗೆ ಸಂಬಂಧ ಹೊಂದಿದ್ದು ಜಾತಿ, ಧರ್ಮ, ಭಾಷೆಗಳನ್ನು ಮೀರಿ ಚಲಿಸುತ್ತದೆ. ಕಥೆಗೆ ನಾಯಕನಿಗಿಂತ, ಅವನ ಹಠಮಾರಿ ಪ್ರವೃತ್ತಿಗಿಂತ, ಕಥೆಗಾರನ ತಾಯಿ, ನಾಯಕ-ನಾಯಕಿ ಇಬ್ಬರ ಪಾತ್ರಗಳಲ್ಲೂ ದ್ವಿಪಾತ್ರಿಯಾದಂತೆ ಭಾಸವಾಗುತ್ತದೆ!. ತನ್ನ ಹಠಮಾರಿತನದ ಪೃವೃತ್ತಿಯಿಂದಾಗಿ, ರಘು ಎಂಬ ಪಾತ್ರ, ಬದುಕಿನ ಆರಂಭಿಕ ವಿದ್ಯಾಭ್ಯಾಸದಿಂದ ಕುಟುಂಬ ವ್ಯವಸ್ಥೆಯ ತನಕದ ಮದುವೆಯ ತನಕವೂ, ಗೆದ್ದ ಭ್ರಮೆಯಲ್ಲಿ ಸೋತದ್ದು ಅವನರಿವಿಗೆ ಬಾರದೇ, ಕೊನೆಗೂ ಮುಂದೊಂದು ದಿನ ಅವನೂ ದೊಡ್ಡಮ್ಮ, ತಾಯಿ ನಳಿನಿಯ ಜೊತೆ, ಬದುಕಿನ ಅನಿವಾರ್ಯ ಹಂತದ ’ಸರದಿ’ಯಲ್ಲಿ ನಿಲ್ಲಬೇಕಾದವನೇ ಮತ್ತು ಆಗ ಯಾವ ಹಠಮಾರಿತನವವೂ ಕೆಲಸ ಮಾಡಲಾರದೆಂಬುದನ್ನು ಲೇಖಕರು ಮಾರ್ಮಿಕವಾಗಿ ತಿಳಿ ಹೇಳುತ್ತಾರೆ.


ಕಾದಂಬರಿಯ ನಳಿನಿಯ ಪಾತ್ರ ಒಂದೆಡೆ ಭಾರತೀಯತೆಯನ್ನು ಪೃತಿಬಿಂಬಿಸುವಂತೆ ಕಂಡುಬಂದರೂ, ನನ್ನ ದೃಷ್ಟಿಯಲ್ಲಿ ಆಕೆ ಭಾರತೀಯ ತಾಯಿಯ ದುಗುಡದ ಸಂಕೇತವಾಗಿ ಪ್ರತಿನಿಧಿಸಲ್ಪಡುತ್ತಾಳೆ. ತನ್ನ ಮಗನ ಹಠಮಾರಿ ಧೋರಣೆಯಿಂದ ಆರಂಭವಾಗುವ ಆಕೆಯ ಕಳವಳ, ಪರೀಕ್ಷೆಯಲ್ಲಿ ಕೇವಲ ಪೃಥಮ ದರ್ಜೆಯಲ್ಲಿ ಪಾಸಾದ ಮಗನನ್ನು ಏನೋ ಮಾಡಹೊರಡುವ ಆರಂಭಿಕ ಯತ್ನಕ್ಕೆ ಬಿದ್ದ ಮೊದಲ ಏಟಾಗಿ ಆಕೆ ಮಾನಸಿಕ ಜರ್ಝರತೆಗೆ ಸಿಲುಕಿಕೊಳ್ಳುತ್ತಾಳೆ. ಅದೇ ಆಕೆಯ ನಿರೀಕ್ಷೆಯ ಬುಡಕ್ಕೆ ಬಿದ್ದ ಮೊದಲ ಏಟು. ಮಗ ಮುಂದೆ ಹೇಗೋ, ತಂದೆ ಗೊತ್ತು ಮಾಡಿದ ಕೆಲಸವನ್ನು ತಿರಸ್ಕರಿಸುವ ಪರಿ ಇಂದಿನ ಯುವ ಜನಾಂಗವನ್ನೇ ತನ್ನ ಕಾಲಮೇಲೆ ತಾನೇ ನಿಲ್ಲಬೇಕೆಂಬ ಹಠಮಾರಿತನಕ್ಕಿಂತಲೂ, ರಘುವಿನೊಳಗೆ ಎಲ್ಲೋ ಹುದುಗಿದ್ದ ಪಾಶ್ಚಾತ್ಯ ರಿವಾಜನ್ನು ಸಂಕೇತಿಸುತ್ತದೆ ಮತ್ತು ಅಂತಹ ಒಳಾರ್ಥವನ್ನು ಲೇಖಕರು ಕಾದಂಬರಿಯ ಆರಂಭದಿಂದಲೇ ಸೂಚಿಸುತ್ತಾ ಹೋಗುತ್ತಾರೆ. ಕಥೆ ಮುಂದುವರಿಯುತ್ತದೆ. ಮರ್ಲಿನ್ ಎಂಬ ಜರ್ಮನಿಯ ಒಂದು ಮಗುವಿನ ತಾಯಿಯನ್ನು  ಜರ್ಮನಿಯಲ್ಲಿರುವ ತನ್ನ ಬಾಸ್ ಗುಪ್ತಾ ತನ್ನ ಕುತ್ತಿಗೆಗೆ ’ವ್ಯವಸ್ಥಿತ’ವಾಗಿ ತಗುಲಿಸುವ ಒಳಾರ್ಥ ಅರಿವಾಗದೇ, ಅದು ತನ್ನ ಮೇಲೆ ಬಾಸ್ ಇಟ್ಟ ವಿಶ್ವಾಸವೆಂದೇ ಭಾವಿಸುವ ರಘು, ಮುಂದೆ ಸಾಂದರ್ಭಿಕವಾಗಿ ಬಾಸ್‌ನ್ನು ತನ್ನ ಸ್ನೇಹಿತ ರಾಜಾರಾಮ್ ನಗ್ನಗೊಳಿಸುತ್ತಾ ಹೋಗುವಾಗ, ಅದನ್ನು ಅರಗಿಸಿಕೊಳ್ಳಲು ’ಇಷ್ಟ’ಪಡುವುದಿಲ್ಲ. ಈ ಹಂತದಲ್ಲಿ ಭಾರತೀಯ ರಕ್ತ, ಪ್ರೀತಿ-ಪ್ರೇಮ-ಪೃಣಯವನ್ನು ಎಷ್ಟು ಗೌರವಿಸುತ್ತದೆ, ನಂಬಿಕೆಯನ್ನು ಎಂದೂ ಕಳೆದುಕೊಳ್ಳಬಾರದೆಂಬ ಭಾರತೀಯತೆ ಎಂತ ಹಠಮಾರಿಯಲ್ಲು ಇರಬಹುದು ಎಂಬುದನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಇಡೀ ಕಾದಂಬರಿಯಲ್ಲಿ ಜರ್ಮನಿ ಮತ್ತು ಭಾರತದ ಸಂಸ್ಕಾರ, ಸಂಸ್ಕೃತಿಗಳು ತಾಕಲಾಡುತ್ತಿರುತ್ತವೆ. ಮರ್ಲಿನ್‌ಳ ಸಿಗರೇಟು ಚಟ, ಮುಂದೆ ರಘುವಿಗೆ ಕುಡಿತವನ್ನು ಯಾವುದೇ ತಡೆಯಿಲ್ಲದೇ ಕಲಿಸುವ ಪರಿ, ರಘು ಮದುವೆಯ ಕಾರಣದಿಂದ ಜಾನ್ ರಘು ವಾದರೂ ಹಿಂದೂ ಸಂಪ್ರದಾಯದ ಮದುವೆಯನ್ನು ಕಾಟಾಚಾರದ ಶಾಸ್ತ್ರದಂತೆ ಮಾಡಿ, ’ಮೀನಾಕ್ಸಿ’ ಎ೦ದು ತನ್ನ ಹೆಸರನ್ನು ಉಚ್ಚರಿಸಿಕೊಂಡ ಮರ್ಲಿನ್ ಮರುಕ್ಷಣದಲ್ಲಿಯೇ ಸೀರೆ, ತಾಳಿ ಕಿತ್ತೆಸೆದದ್ದನ್ನು ರಘು ಸಹಿಸಿಕೊಂಡ ಪರಿ, ಭಾರತೀಯರು, ಮುಖ್ಯವಾಗಿ ಕನ್ನಡಿಗರು ಎಲ್ಲದಕ್ಕೂ ಉದಾರರು ಎಂಬ ಮಾತಿಗೆ ಪುಷ್ಠಿ ಕೊಡುತ್ತದೆ. ಹಿಟ್ಲರ್‌ನ ಬಗ್ಗೆ ಏನೂ ಮಾತಾಡದ ಜರ್ಮನೀಯರ ಪರಿಯಿಂದ ಭೂತದ ದುರ್ಘಟನೆಗೆ ವರ್ತಮಾನದ ಲೇಪ ಹಚ್ಚಿ ಅದೇ ಜಾಡಿನಲ್ಲಿ ಅನವಶ್ಯಕ ಚರ್ಚೆ ಮಾಡದವರು ತಾವೆಂಬ ಭ್ರಮೆ ಸೃಷ್ಟಿಸುವಲ್ಲಿ ಅಲ್ಲಿಯ ಪ್ರಜೆಗಳು ನಿಷ್ಣಾತರು ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಲೇಖಕರು ಹೇಳಹೊರಟ ವಿಷಯ ಮತ್ತು ವಿಚಾರ, ಅವರವರ ಭಾವದಲ್ಲಿ ಚಿಂತನೆಗೆ ಹಚ್ಚುತ್ತದೆ ಎಂಬಲ್ಲಿಗೆ ಕಾದ೦ಬರಿಕಾರನ ಚಾಣಾಕ್ಷತೆ ಕಥೆಗೆ ಯಾವುದೇ ವಿಪರೀತ ತಿರುವು ನೀಡದೆ, ವಸ್ತುವನ್ನು ವಿಶ್ಲೇಷಿಸುವಲ್ಲಿ ಯಶಸ್ವಿಯಾಗುತ್ತದೆ. ಕೊನೆಗೂ ತನ್ನ ಇಚ್ಚೆಗೆ ವಿರುದ್ದವಾಗಿ, ತನ್ನ ಹಠಮಾರಿ ಧೋರಣೆಗಿಂತ ಭಿನ್ನವಾಗಿ, ದೈಹಿಕ ವಾಂಛೆ ಮತ್ತು ’ಮತ್ತು’ ಬರಿಸುವ ಮರ್ಲಿನ್‌ಳಿಗೆ ದಾಸನಾಗುವ ಪರಿಯನ್ನು ಮಾರ್ಮಿಕವಾಗಿ ಚಿತ್ರಿಸುವಾಗ ನಾದಾ ಅವರ ಲೇಖನಿಯ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಆದರೆ ಇಲ್ಲೆಲ್ಲೋ ಬೈರಪ್ಪನವರ ಕಾದಂಬರಿಯಲ್ಲಿ ಬರುವ ಗಂಡು- ಹೆಣ್ಣಿನ ಸಹಜ ದೈಹಿಕ ವಾಂಛೆಯ ನಿರೂಪಣೆಯನ್ನು ನಾದಾ ಅನುಸರಿಸದ್ದಾರೇನೋ ಅನಿಸುತ್ತದೆ. ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳು ಹೇಗೆ ತಾಕಲಾಡುತ್ತವೆ, ರಘು- ಮರ್ಲಿನ್-ನಳಿನಿ-ಜಾನಕಮ್ಮ-ಸಿದ್ದಾರ್ಥ ಮತ್ತವನ ಗುಜಾರಾಥಿ ವಧುವಿನ ಮೂಲಕ, ಭಾರತೀಯತೆಯಲ್ಲಿನ ಪ್ರಾದೇಶಿಕತೆ ಮತ್ತು ಭಾರತೀಯತೆಗೆ ಜೊತೆಗೆ ಪಾಶ್ಚಾತ್ಯ ಶೈಲಿ ಹೇಗೆ ಸಂಘರ್ಷಮಯವಾಗುತ್ತವೆ, ಭಾರತೀಯ ಮನೋಸ್ಥಿತಿ ಪ್ರಾದೇಶಿಕ ಚಿಂತನೆಗಳನ್ನು(ಅಥವಾ ಸಂಪ್ರದಾಯಗಳನ್ನು) ಅರಗಿಸಿಕೊಂಡಷ್ಟು ಸರಳವಾಗಿ ವಿದೇಶಿ ಚಿಂತನೆಗಳನ್ನು ಸ್ವೀಕರಿಸಲು ಹಿಂದೇಟು ಹಾಕುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ ಮತ್ತು ಅದೂ ನಳಿನಿ, ಜಾನಕಮ್ಮ ಸ್ವೀಕರಿಸಿದ ರೀತಿಯೊಂದಿಗೆ ವೇದ್ಯವಾಗುತ್ತದೆ. ಗುಜರಾಥಿ ಹುಡುಗಿಯನ್ನು ಮದುವೆಯಾಗಿ ಸಿದ್ದಾರ್ಥ ಅಮೆರಿಕಾಕ್ಕೆ ಹಾರುವುದನ್ನು ತಡೆಯದ ಇವರ ಮಾನಸಿಕತೆ, ರಘುವನ್ನು ತಡೆಯುವ ನಿಜವಾದ ಉದ್ದೇಶ ಪಾಶ್ಚಾತ್ಯ ಹುಡುಗಿಯ ಜೊತೆಗೆ ಅವನು ಅಲ್ಲಿಯೇ ಬದುಕನ್ನು ಹಂಚಿಕೊಳ್ಳುವುದನ್ನು ವಿರೋಧಿಸುವುದಷ್ಟೇ ಆಗಿರುತ್ತದೆ ಎಂಬ ಸಂದೇಶವನ್ನೂ ಕೊಡುತ್ತದೆ. ಅಂದರೆ ರಘು ಬಹುಶ: ನಳಿನಿ ಹುಡುಕಿದ ನಾಲ್ಕು ಹುಡುಗಿಯರಲ್ಲಿ ಒಬ್ಬಳನ್ನು ವರಿಸಿ, ವೃತ್ತಿನಿಮಿತ್ತವಾಗಿ ವಿದೇಶಕ್ಕೆ, ಬೇಕಿದ್ದರೆ ಜರ್ಮನಿಗೇ ಹೋಗಿದ್ದರೂ  ಭಾರತೀಯ ತಾಯಿ ವಿರೋಧಿಸುತ್ತಿರಲಿಲ್ಲವಾಗಿತ್ತೇನೋ ಎಂದು ಅನಿಸುವಲ್ಲಿಗೆ, ಇಲ್ಲಿ ಭಾರತೀಯ ಸಂಬಂಧಗಳು ಜಾಗತೀಕರಣಕ್ಕೆ ತೆರೆದುಕೊಳ್ಳುವಲ್ಲಿನ ವೈರುಧ್ಯದ ತಾಕಲಾಟಕ್ಕೆ ನಿದರ್ಶನವಾಗುತ್ತದೆ.

’ಸರದಿ’ಯಲ್ಲಿ ಬರುವ ಬಹುತೇಕ ಪಾತ್ರಗಳು ತಮ್ಮದೇ ಒಳನೋಟಗಳಿಂದ ಗಮನ ಸೆಳೆಯುತ್ತವೆ. ರಘುವಿನ ಸ್ನೇಹಿತರಾದ ರಾಜಾರಮ್ ಮತ್ತು ಸಿದ್ದಾರ್ಥರ ರಘುವನ್ನು ಮರಳಿ ’ರಘು’ವನ್ನಾಗಿ ಮಾಡುವ ವಿಫಲ ಪ್ರಯತ್ನ, ಜಾನಕಮ್ಮ-ಕ್ರಷ್ಣರ ನೆರೆಮನೆಗೆ ಒದಗಿ ಬರುವ ಸ್ನೇಹಶೀಲ ವ್ಯಕ್ತಿತ್ವದಲ್ಲೂ ಕಂಡುಕೊಳ್ಳುವ ಒಳಬೇಗುದಿ, ರಘುವನ್ನು ಮದುವೆಯಾಗಲು ಒಪ್ಪಿದ ಹುಡುಗಿ ಅವನಿಗೇ ಫೋನಾಯಿಸಿ ಇನ್ನೂ ಯಾವುದೇ ಆಶ್ವಾಸನೆ ಸಿಗದಿದ್ದಾಗಲೂ ಅವನು ನಿರಾಕರಿಸಿದಾಗ ದಂಗಾಗುವ ಭಾರತೀಯ ವಧುವಿನ ನೈಜಪರಿ, ನೇರವಾಗಿ ಎದುರಿಗೆ ಬರದೇ ಕಥೆಯಲ್ಲೂ, ಮರ್ಲಿನ್‌ಳಲ್ಲೂ ಕಲ್ಪನೆಯ (!) ವ್ಯಕ್ತಿಯಾಗಿಯೇ ಮರೆಯಾಗುವ ಭೋಪಾಲದ ಮುಖರ್ಜಿ, ತನ್ನ ಮಗುವನ್ನು ಕರುಣಿಸಿ ಅದಕ್ಕೊಂದು ಅಪ್ಪನನ್ನು ಕೊಟ್ಟು ಕೈತೊಳೆದುಕೊಳ್ಳುವ ಆಟವಾಡುವ ಗುಪ್ತಾ......ಎಲ್ಲರೂ ಸಮಾಜದ ಸುತ್ತಲಿನ ವ್ಯಕ್ತಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿನಿಧಿಸುತ್ತಾ ’ಒಹ್, ಹೌದಲ್ಲ’ ಎಂಬ ಭಾವನೆ ಹುಟ್ಟಿಸುತ್ತಾರೆ.
ಕೊನೆಯಲ್ಲಿ ಕೆಲವು ಪ್ರಶ್ನೆಗಳನ್ನು ಕಾದಂಬರಿ ಹುಟ್ಟುಹಾಕುತ್ತದೆ ಮತ್ತು ಅವು ನಿರುತ್ತರಿಗಳಾಗುತ್ತವೆ.  ಹ್ಯಾರಿಸ್ ಎಂಬ ಮರ್ಲಿನ್‌ಳ ಮಗುವಿಗೆ ತಂದೆಯ ಅವಶ್ಯಕತೆಗಾಗಿ ರಘುವನ್ನು ಮರ್ಲಿನ್ ಬಯಸುತ್ತಾಳೆ ಎಂದರೆ ಅದು ಮತ್ತೆ ಆಕೆಯೊಳಗೆ ಹುಟ್ಟಿದ ಮಗುವಿಗೆ ತಂದೆ ಒಬ್ಬ, ಎಂತವನಾದರೂ ಇರಲೇಬೇಕು ಎಂಬ ಭಾರತೀಯ ಭಾವನೆ  ಬಂದಂತೆ ’ಅಭಾಸ’ವೆನಿಸುತ್ತದೆ. ಅದಾಗಿಯೂ ಮದುವೆಯ ನಂತರ ಹ್ಯಾರಿಸ್, ರಘು-ಮರ್ಲಿನ್ ಜೊತೆಗಿರುವುದಿಲ್ಲ, ಬದಲಾಗಿ ಅಜ್ಜ-ಅಜ್ಜಿಯ ಜೊತೆಗಿರುತ್ತಾನೆ. ಭಾರತೀಯತೆಗೆ ವಿರುಧ್ಧವಾಗಿ ಮುಕ್ತ ಲೈಂಗಿಕತೆ ಜರ್ಮನಿಯ ಬೀದಿಬೀದಿಯಲ್ಲೂ ಕಂಡುಬರುವಾಗ,ನಳಿನಿಗೂ ಮತ್ತು ಒಂದು ಹಂತದಲ್ಲಿ ರಘುವಿಗೂ ಇರಿಸು ಮುರಿಸುಂಟಾದಾಗ, ಮರ್ಲಿನ್‌ಗೆ ರಘುವಿನ ಅನಿವಾರ್ಯತೆಯನ್ನು ಸೃಷ್ಟಿಸಲು ಇದ್ದ ಕಾರಣಗಳು, ಅಂದರೆ ರಘುವನ್ನೇ ಆಯ್ದುಕೊಳ್ಳಲು ಇರುವ ಅನಿವಾರ್ಯತೆ,  ಸಮಂಜಸವಾಗಿ ಪುಷ್ಠೀಕರಣವಾಗಿಲ್ಲನಿಸುತ್ತದೆ. ಜರ್ಮನಿಯ ಒಳಹೊರಗನ್ನು ಮನಮುಟ್ಟುವಂತೆ ಚಿತ್ರಿಸಿದ್ದರೂ, ಅದು ಕಥೆಗೆ ಎಷ್ಟರ ಮಟ್ಟಿಗೆ ಪೂರಕ ಎಂಬ ಪ್ರಶ್ನೆ ಹುಟ್ಟಿಸುತ್ತದೆ. 
ಮಂಗಳೂರು-ಬೆಂಗಳೂರು ಮುಗಿಸಿ ನೆರವಾಗಿ ಜರ್ಮನಿಗೆ ಹಾರುವ ಕಥಾನಕ, ಜಗತ್ತು ಇಂದು ಎಷ್ಟು ಸಂಕೀರ್ಣಗೊಂಡಿದೆ ಎಂಬುದನ್ನು ಸೂಚಿಸುತ್ತಾ, ಮಾನಸಿಕವಾಗಿ ಕುಗ್ಗಿಹೋದ ನಳಿನಿ, ಕೈಗೆ ಸಿಗಲಾರದ ಪ್ರೀತಿಯನ್ನು ಎಷ್ಟುಕಾಲ ಅಂತ ಹಿಡಿದಿಟ್ಟುಕೊಳ್ಳಬಹುದು ಎಂದುಕೊಳ್ಳುವಾಗ  ಮನ ಕರಗುವಂತೆ ಮಾಡುತ್ತದೆ. ನಳಿನಿಯ ಕಾರಣದಿಂದಲೇ ದೊಡ್ಡಮ್ಮ ಅಭಯಾಶ್ರಮಕ್ಕೆ ಹೋದರು ಎಂಬಂತೆ ಮೊದಲು ಚಿತ್ರಿತವಾಗಿದ್ದರೂ, ಕೊನೆಗೆ ನಳಿನಿಯೂ ಅದೇ ಹಾದಿ ಹಿಡಿದಾಗಿನ ದೃಶ್ಯ ಕರುಳುಹಿಂಡುತ್ತದೆ! ಆಕೆಯ ಅಭಯಾಶ್ರಮದತ್ತ ಸಾಗುವ ಹೆಜ್ಜೆ, ಒಂದು ಕ್ಷಣ ನಾವೆಲ್ಲರೂ ಆ ’ಸರದಿ’ ಯಲ್ಲಿ ನಿಂತ ಭಾವನೆ ತರಿಸುತ್ತದೆ. ತಾಯಿಯ ಮನಸ್ಸಿನ ಅಕಳಂಕತೆಯನ್ನೂ ಅನಾವರಣಗೊಳಿಸುವ ನಾದಾ ಅವರ ಶೈಲಿ ಮೆಚ್ಚುವಂತೆ ಮಾಡುತ್ತದೆ. ನಳಿನಿ ಅಂದುಕೊಳ್ಳುತ್ತಾಳೆ-ನೆನಪಿಡಿ-ಮಗನ ವ್ಯಾಮೋಹದಿಂದಾಗಿ ಗಂಡನ ಆರೋಗ್ಯವನ್ನೂ ಕಡೆಗಣಿಸಿ ಗಂಡನ ನಿಧನಾನಂತರ ಊರಿಡೀ ಬೈಸಿಕೊಂಡ ತಾಯಿ, ದೊಡ್ಡಮ್ಮನನ್ನು ಅಭಯಾಶ್ರಮಕ್ಕೆ ಹೋಗಲು ಮಗನ ವ್ಯಾಮೋಹವೇ ಕಾರಣವಾದರೂ  ಮುಂದೆ ಮಗನಿಗಾಗಿ ಅವಳೇ ಅಂದುಕೊಳ್ಳುವಂತೆ ಯಾವುದೋ ತಂದೆಯ ಮಗುವಿನ ಕುಂಡೆ ತೊಳೆದ ತಾಯಿ ಮತ್ತೂ ತಾನೇ ಸೋತು ಮಗನ ಹಿಂದೆ ಹೋಗಿ ಜರ್ಮನಿ ಸೇರಿ ಅಲ್ಲಿ ಮಾನಸಿಕವಾಗಿ ಪೂರ್ತಿ ಕುಗ್ಗಿ ಹೋಗಿ, ಅನಾರೋಗ್ಯದೊಂದಿಗೆ ಮರಳಿ ಭಾರತಕ್ಕೆ ಬಂದ ತಾಯಿ-ಕೊನೆಗೆ ಅಂದುಕೊಳ್ಳುತ್ತಾಳೆ: ಇದರಲ್ಲಿ ರಘುವಿನದೇ ಪೂರ್ತಿ ತಪ್ಪೆಂದು ಒಪ್ಪಿಕೊಳ್ಳಲಾಗುತ್ತಿಲ್ಲ;ಎರಡೂ ಕೈ ಸೆರಿದರೆ ತಾನೇ ಚಪ್ಪಾಳೆ ಎಂದು!! ಇದು ಭಾರತೀಯ ತಾಯಿ, ಕ್ಷಮೆಯಲ್ಲಿ ಭೂಮಿಗೆ ಸಮಾನಳು ಎಂಬುದನ್ನು ಘಂಟಾಘೋಷವಾಗಿ ಸಾರುವ ಪರಿ. ದಿನ ನಿತ್ಯ ನಾವು ನೋಡುತ್ತಿರುವ ಈ ತಾಯಿಯ ಗುಣ, ನಾದಾ ಅವರ ಲೇಖನಿಯಿಂದ ಹೊರಹೊಮ್ಮಿದಾಗ ಆಗುವ ಅನುಭೂತಿ , ಕಣ್ಣಿಂದುದುರುವ ಎರಡು ಹನಿಗಳನ್ನು ತಡೆಯಲಾಗದು ಎಂದಾದಾಗ, ಲೇಖಕನ ಶ್ರಮದ ಸಾರ್ಥಕ್ಯ ಗೆಲ್ಲುತ್ತದೆ. 
ಕಾದ೦ಬರಿಯ ಬಗ್ಗೆ ಈಗಾಗಲೇ ಮಾತುಕತೆಗಳು ಆರಂಭವಾಗಿದ್ದು, ಜಾಗತೀಕರಣದ ಸವಾಲನ್ನು ಇಲ್ಲಿಗೆ ಎಳೆದು ತರಲಾಗುತ್ತಿದೆ. ಆದರೆ ಭಾರತೀಯತೆಯ ದ್ರಷ್ಡಿಕೋನದಿಂದ ನೋಡಿದರೆ, ಇಲ್ಲಿ ಜಾಗತೀಕರಣಕ್ಕಿಂತಲೂ ಭಾರತೀಯತೆಯ ಪ್ರತಿಪಾದನೆಗೆ ದೇಶ-ವಿದೇಶದ ಅಂತ:ದ್ರಷ್ಟಿಯಿಂದ ನೋಡಿದಾಗ ಆಗುವ ಭಿನ್ನ ಅನುಭವಗಳನ್ನು ಮನಮುಟ್ಟಿಸುತ್ತದೆ. ಅಲ್ಲಿಗೆ ಲೇಖಕರ ಅಭಿಪ್ರಾಯ ಹೇಗೇ ಇರಲಿ...ಓದುಗನಿಗೆ ಒಂದು ಉತ್ತಮ ಓದನ್ನು ಕೊಡುವಲ್ಲಿ ಕಾದಂಬರಿ ಯಶಸ್ವಿಯಾಗುತ್ತದೆ.
ಕೊನೆಯವರೆಗೂ ಉಳಿದುಕೊಳ್ಳುವ ಒಂದೇ ಪ್ರಶ್ನೆ- ಲೇಖಕರು ಸಂಭಾಷಣೆಗಳನ್ನು ಕಾದಂಬರಿಯ ನೆಲೆಯಲ್ಲಿ ಬರೆಯುವ ಬದಲಾಗಿ ನಾಟಕದಂತೆ ಬರೆದದ್ದು! ನಾಟಕ ಹಿನ್ನೆಲೆಯಿಂದ ಬಂದವರು ಅವರೆಂಬ ಸಮಜಾಯಿಷಿ ಇಲ್ಲಿ ಸಮಂಜಸವಲ್ಲ ಅನಿಸುತ್ತದೆ. ಏಕೆಂದರೆ ಇದು ಕಾದಂಬರಿ ಎಂಬ ಚೌಕಟ್ಟಿನಲ್ಲಿಯೇ ಬಂದ ಕೃತಿಯಾದಾಗ ಆ ಚೌಕಟ್ಟಿಗೆ ಒದಗಿಸಬಹುದಾದ ನ್ಯಾಯವೆಂದರೆ ಅಲ್ಲಿಯ ಎಲ್ಲವೂ ಈ ಚೌಕಟ್ಟಿನಲ್ಲಿಯೇ ಇರಬೆಕೆಂಬುದು.
ಒಟ್ಟಾರೆಯಾಗಿ ನಾದಾ ಅವರ ಬಹುಮುಖ ವ್ಯಕ್ತಿತ್ವದಿಂದ ಮೂಡಿದ ಉತ್ತಮ ಕಾದಂಬರಿ ಇದು ಎಂಬುದರಲ್ಲಿ ಎರಡು ಮಾತಿಲ್ಲ ಮತ್ತು ನಾವು ಅವರ ಮುಂದಿನ ಕೃತಿಗಾಗಿ ಕಾಯುವವರ ’ಸರದಿ’ಯಲ್ಲಿ ಉತ್ಸಾಹದಿಂದ ನಿಂತಿದ್ದೇವೆ.


Thursday, 13 December 2012

ಕೆ೦ಪುಗೂಟದ ಕಾರುಗಳೇ, ನೀವೇನಾಟವ ಆಡುವಿರಿ..?????

ಹಿಂದೊಮ್ಮೆ 'ವಿಜಯಕರ್ನಾಟಕ'ದ ಸಾಪ್ತಾಹಿಕ ವಿಭಾಗದಲ್ಲಿ ಪ್ರಕಟವಾಗಿದ್ದ ಬರಹವೊಂದನ್ನು ಇಲ್ಲಿ ದಾಖಲಿಸಿ, ತಮಗೆಲ್ಲರಿಗೂ (ಮರು) ಓದು ನೀಡುವ ಬಯಕೆ. ನಿಮಗೆ ಹಿಡಿಸೀತು ಎಂದುಕೊಂಡಿದ್ದೇನೆ.....
 
ಸ್ವತ೦ತ್ರ ಭಾರತದ ಬಹು ಚೋದ್ಯದ ವಿಚಾರಗಳಲ್ಲಿ ಕೆ೦ಪುಗೂಟದ (ಕೆ೦ಗೂಟದ?) ಕಾರುಗಳೂ ಸೇರಿಕೊ೦ಡಿರುವುದು ಕಹಿ ಸತ್ಯ. ನಗರ ಪ್ರದೇಶಗಳಲ್ಲಿ ಇವುಗಳ ಮಿತಿಮೀರಿದ ಹಾವಳಿ ಸ್ರಷ್ಟಿಸುವ ಅಧ್ವಾನಗಳು ಒ೦ದೆರಡಲ್ಲ. ನಾವೇ ಪ್ರತಿಷ್ಠಾಪಿಸುವ ಸರ್ಕಾರದ ನೇತಾರರು, ಈ ಕೆ೦ಗೂಟದ ಕಾರಿಗಾಗಿ ನಡೆಸುವ ಲಾಬಿಯಿ೦ದ ತೊಡಗಿ, ಮು೦ದೆ ಅದು ರಸ್ತೆಯಲ್ಲಿ ಸ೦ಚರಿಸುವಾಗ ಜನ ಸಾಮಾನ್ಯನಿಗೆ ದೇವೇ೦ದ್ರನ ಐರಾವತ ಬ೦ದ ಅನುಭವ. ಇದು ರಸ್ತೆಯಲ್ಲಿ ಕ೦ಡುಬ೦ದಿತೆ೦ದರೆ ಕನಿಷ್ಟ ಹತ್ತು ಹದಿನೈದು ನಿಮಿಷಗಳ ಕಾಲ, ಜನಸಾಮಾನ್ಯ ದಾರಿ ಬದಿ ನಿಲ್ಲಲೇ ಬೇಕು. ಆ ಮಟ್ಟಿಗೆ ಇದು ಟ್ರಾಫ಼ಿಕ್ ಜಾಮ್‌ಗೂ ಕಾರಣ.


ಈ ಕೆ೦ಗೂಟದ ಕಾರುಗಳ ಶಕ್ತಿಯಾದರೂ ಇ೦ತಿಷ್ಟೇ ಎ೦ದು ಹೇಳಲಾಗದು. ಮೊನ್ನೆ ಮೊನ್ನೆ ಇ೦ತಹ ಒ೦ದು ಕಾರು ನಮ್ಮ ನಗರದ ಕೆಲವು ಕಾರ್ಯಕ್ರಮಗಳ ಉದ್ಘಾಟನೆಗೆ ಬರುವ ಸುದ್ದಿ ಹರಡಿದ್ದೇ ತಡ, ಅ೦ದಿನ ತನಕ ಹಾಳುಬಿದ್ದಿದ್ದ ರಸ್ತೆಗಳೆಲ್ಲಾ ರಾತ್ರೋರಾತ್ರಿ ರಿಪೇರಿಯಾದುವು!. ನಮ್ಮ ಸರ್ಕಾರಿ ವಿಶ್ರಾ೦ತಿಗ್ರಹದಲ್ಲಿ ಅದರೊಡೆಯ ತ೦ಗುವ ಕಾರ್ಯಕ್ರಮವಿತ್ತು. ಅಲ್ಲಿಯತನಕ ಕಾ೦ಕ್ರೀಟೀಕರಣದ ನೆವದಲ್ಲಿ ಅಲ್ಲಿನ ರಸ್ತೆ ಸ೦ಚಾರಕ್ಕೆ ನಿರ್ಬ೦ಧವೇ ಗಟ್ಟಿಯಾಗಿತ್ತು. ಇದೂ ಸಹಾ ರಾತ್ರೋರಾತ್ರಿ ರಿಪೇರಿಯಾಗಿ, ಸ೦ಚಾರ ಮುಕ್ತವಾದದ್ದುದಕ್ಕೆ ನಾವು ಕೆ೦ಪುಗೂಟದ ಕಾರಿಗೇ ಧನ್ಯರು.
ಈ ಕಾರುಗಳ ಇನ್ನೂ ಒ೦ದು ವೈಶಿಷ್ಟ್ಯವೆ೦ದರೆ ಇದು ಬರುವಾಗ ಒ೦ದೇ ಬರುವುದಿಲ್ಲ! ಹಿ೦ದೆ ಮು೦ದೆ ತನ್ನ೦ತಹ ಹಲವು ಸಹಪರಿವಾರಗಳೊ೦ದಿಗೆ, ಹತ್ತು ಹಲವು ಕಾರುಗಳ ಹಿ೦ಬಾಲಕರ ದ೦ಡೇ ಇದಕ್ಕಿರುತ್ತದೆ. ಅಷ್ಟೇ ಅಲ್ಲ, ಅದು ಬರುವ ಸೂಚನೆ ತಿಳಿದು ಎಲ್ಲರೂ ದಾರಿ ಮಾಡಿಕೊಡಬೇಕೆ೦ಬುದನ್ನು ಸಹ ಕಾರುಗಳ ಸೈರನ್ ಕಿವಿಗಡಚಿಕ್ಕುವ೦ತೆ ಘೋಷಿಸುತ್ತದೆ. ಸಾಲು ಸಾಲು ಪೋಲಿಸರು ರಸ್ತೆಯ ಇಕ್ಕೆಲಗಳಲ್ಲಿ ನಿ೦ತು ಪಾಪದ ಜನರನ್ನು ಮು೦ದೆ ಹಿ೦ದೆ ಹೋಗದ೦ತೆ ತಡೆದು ನಿಲ್ಲಿಸುತ್ತಾರೆ. ಆ ಕ್ಷಣಗಳಲ್ಲಿ ಈ ಪೋಲಿಸರು ಅವರ ಉಳಿದ ಕೆ೦ಗೂಟದ ಕಾರುಗಳ ಆಜ್ನೆ ಪಾಲಿಸಲೇ ಬೇಕು.
ಹಾಗ೦ತ ಎಲ್ಲಾ ಕೆ೦ಗೂಟದ ಕಾರುಗಳು ಒ೦ದೇ ದರ್ಜೆಯವಾಗಿರುದಿಲ್ಲ. ಕೆಲವು ನಗರಗಳಲ್ಲಿ ದಿನ ನಿತ್ಯ ಕಾಣುವ ಕೆಲವು ಕೆ೦ಗೂಟಗಳಿಗೂ ಹಿ೦ಬಾಲಕರಿದ್ದರೂ ಸ೦ಖ್ಯೆ ಕಡಿಮೆ ಇರುತ್ತದೆ. ಇನ್ನು ಕೆಲವಕ್ಕೆ ಶರವೇಗಇದ್ದರೆ, ಹೆಚ್ಚಿನ ಕೆ೦ಗೂಟಗಳಿಗೆ ಯಾವುದೇ ಟ್ರಾಫ಼ಿಕ್ ನಿಯಮಗಳು ಅನ್ವಯವಾಗುವುದಿಲ್ಲ. ಅ೦ದ ಮಾತ್ರಕ್ಕೆ ಈ ಸ೦ಚಾರ ನಿಯಮ ಧೂಳೀಪಟ ಸಾ೦ವಿಧಾನಾತ್ಮಕವಾದದ್ದೆ೦ದೇನೂ ಭಾವಿಸಬೇಡಿ. ಅದು ಸ೦ವಿಧಾನದ ಹೊರಗಿದ್ದೇ ಕೆ೦ಗೂಟದ ಕಾರುಗಳ ಮಟ್ಟಿಗೆ ರಚಿಸಿಕೊ೦ಡಿರುವ ಅನುಕೂಲಶಾಸ್ತ್ರ. ಕೆಲವು ಘಟನೆಗಳು, ಕೆ೦ಪುಗೂಟದ ಕಾರುಗಳನ್ನು ಯಾರೂ ಹಿ೦ದಿಕ್ಕಬಾರದು ಎ೦ಬ ಅಘೋಷಿತ ನಿಯಮವನ್ನು ಸ್ರಷ್ಟಿಸಿರುವುದನ್ನು ನೋಡಿದರೆ, ಇವುಗಳ ಅತಿರೇಕದ ಅದಿಕಾರ ದರ್ಪ ಮರುಕಹುಟ್ಟಿಸುತ್ತದೆ.  ಇತ್ತೀಚೆಗೆ ಮ೦ತ್ರಿಗಳೊಬ್ಬರ ಕೆ೦ಗೂಟದ ಕಾರನ್ನು ಯಾವನೋ ಬಡಪಾಯಿ ಉದ್ಯಮಿ ಹಿ೦ದಿಕ್ಕುವ ಸಾಹಸ ಮಾಡಿದ್ದು, ಆ ಕೆ೦ಗೂಟದೊಡೆಯ ಉದ್ಯಮಿಯ ಮೇಲೆ ಹಲ್ಲೆ ಮಾಡಿದ್ದು, ನಾಡಿನ ಮುಖ್ಯಮ೦ತ್ರಿಯೇ ಈ ಘಟನೆಗೆ ಕ್ಷಮೆ ಕೋರಿದ್ದು, ಕೆ೦ಗೂಟಕ್ಕೇ ಸವಾಲು ಹಾಕುವವರನ್ನು ಸುಮ್ಮನೆ ಬಿಡೆನೆ೦ದು ಸಚಿವಮಹಾಶಯ ಪಣತೊಟ್ಟದ್ದು... ಎಲ್ಲವೂ ಬಹುದೊಡ್ಡ ಸುದ್ಧಿಯಾದದ್ದು ಈ ಕೆ೦ಗೂಟದ ಮಹಿಮೆಯನ್ನು ಪ್ರಶ್ನಾತೀತಗಾಗಿಸಿದ್ದು ದೊಡ್ಡ ಸುದ್ದಿ. ಇದೆಲ್ಲವೂ ಇ೦ತಹ ಕಾರುಗಳನ್ನು ಬೇರೆಲ್ಲಾ ಲಕ್ಷ ಲಕ್ಷ ಕಾರುಗಳಿಗಿ೦ತ ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿದ್ದ೦ತೂ ಸತ್ಯ.
ಆದರೆ ಒಮ್ಮೊಮ್ಮೆ ಈ ಕೆ೦ಗೂಟಗಳು ಅಧ್ವಾನದಲ್ಲಿ ಸಿಲುಕುವುದೂ, ಸಿಲುಕಿಸುವುದೂ  ಇದೆ. ಇತ್ತೀಚಿಗೆ ಇ೦ತಹ ಒ೦ದು ಕಾರು ಸರ್ಕಾರಿ ಅತಿಥಿಗ್ರಹದಲ್ಲಿ ವಿಶ್ರಾ೦ತಿಯಲ್ಲಿತ್ತು. ಅದರ ಮು೦ದೆ ಅದು ಯಾರಿಗೆ ಸ೦ಬ೦ಧಿಸಿದ್ದೆ೦ಬ ಮಾಹಿತಿ ಫಲಕ ಬೇರೆ. ಆ ಗಣ್ಯರು ಅಲ್ಲಿದ್ದರೆ೦ದು ಭಾವಿಸಿ ನೋಡ ಹೋದರೆ, ಅವರು ಮಾತ್ರ ಕಾರನ್ನು ಅಲ್ಲೇ ಬಿಟ್ಟು ಸ್ನೇಹಿತನ ಮನೆಯಲ್ಲಿ ಬಿಡಾರ ಬಿಟ್ಟಿದ್ದರು!!. ಕಾರು ಪಾಪ, ಎಲ್ಲಾ ಸಾಕ್ಷ್ಯ ಬಿಟ್ಟುಕೊಟ್ಟು ತೆಪ್ಪಗೆ ನಿ೦ತಿತ್ತು! ಮರುದಿನ ಬರಬೇಕಾಗಿದ್ದ ಒಡೆಯ ಮೈ ಎಲ್ಲಾ ಕೊಳೆ ಮಾಡಿಕೊ೦ಡು ಬ೦ದಾಗಲೇ ಈ ಕೆ೦ಗೂಟವೂ ಒಮ್ಮೊಮ್ಮೆ ಅಪಾಯಕಾರಿಯಾಗುವುದಿದೆ ಎ೦ದು ಆ ಗಣ್ಯರಿಗೆ ಮತ್ತು ಅವರ ಸ್ನೇಹಿತರಿಗೆ ಅರಿವಾದದ್ದು! ಅದೀಗ ಹಳೆಯ ಕಥೆ ಬಿಡಿ.
ಹೀಗೆ ಕೆ೦ಗೂಟದ ಕಾರುಗಳನ್ನು ಎಲ್ಲಿಯೂ ನೋಡಿದಾಕ್ಷಣ ತೆಪ್ಪಗೆ ಬದಿಸರಿದುಬಿಡಿ. ಅದು ಒಮ್ಮೆ ನಿಮ್ಮ ಮೈಮೇಲೆ ಅಥವಾ ವಾಹನದ ಮೇಲೆ ಹಾದು ಹೋದರೂ, ನಿಮ್ಮ ಜೀವ ನಿಮ್ಮನ್ನು ಬಿಟ್ಟು ಹೊರಟೇ ಹೋದರೂ ಏನೂ ಮಾಡಲಾಗದು. ಏಕೆ೦ದರೆ ಅದರ ಕೆ೦ಗೂಟಕ್ಕೆ ಅ೦ತಹಾ ಹಲವು ವಿನಾಯತಿಗಳಿರುತ್ತವೆ.
ಇಷ್ಟು ಬರೆದು ಮುಗಿಸುವಷ್ಟರಲ್ಲಿ ಯಾವುದೋ ಕೆ೦ಗೂಟ ಬರುವ ಸೂಚನೆಯ ಸೈರನ್ ಮೊಳಗುತ್ತಿದೆ. ಇನ್ನಾವ ಅಪಾಯ ಕಾದಿದೆಯೋ!!


Monday, 10 December 2012

ಇದೆಂಥಾ ವಿಧಿಯಾಟ....????

ಈ ವಿಧಿಯಾಟದಿಂದ ನಲುಗಿದ ನನ್ನಂತಹ ಅನೇಕರು ಫೊನಾಯಿಸಿದಾಗೆಲ್ಲಾ ವಿಧಿ ಕ್ರೂರ ಎನ್ನುತ್ತಾರೆ. ಯಾವುದನ್ನು ಹೇಗೆ ಸ್ವೀಕರಿಸಬೇಕೋ ತಿಳಿಯದ ಗೊಂದಲವನ್ನಂತೂ ಈ ವಿಧಿ ಸೃಷ್ಟಿಸಿದರೂ, ಅವನ ಆಟಕ್ಕೆ ನಾವು ಬಲಿಪಶುವಾಗಲೇ ಬೇಕು. ತೀರಾ ನಮ್ಮವರೆಂಬಂತೆ ನಮ್ಮ ಬದುಕು, ಉಸಿರಿನಲ್ಲಿ ಒಂದಾಗಿರುವವರನ್ನು ಕಳೆದುಕೊಳ್ಳುವ ಆ ದು:ಖವನ್ನು, ಆ ನೋವನ್ನು ಹೇಗೆ ವಿವರಿಸಲಾದೀತು.????....

ನಾವು ಬಯಸಲಿ, ಬಯಸದಿರಲಿ, ವಿಧಿ ಅದರದ್ದೇ ಆದ ಸಂಚಿನೊಂದಿಗೆ ಕಾಯುತ್ತಿರುತ್ತದೆ. ಸಾವು ಹುಟ್ಟಿದ ಪ್ರತೀ ಜೀವಿಗೂ ಕಟ್ಟಿಟ್ಟದ್ದು ಎಂದು ನಾವು ಹೇಳುತ್ತೇವಾದರೂ, ನಮಗೆ ಮಾತ್ರ ಅದು ಅನ್ವಯಿಸದ ರೀತಿಯಲ್ಲಿ ಬದುಕುತ್ತೇವೆ. ಇದನ್ನೇ ಜೀವನೋತ್ಸಾಹ ಎಂದೋ, ಜೀವನ ಕ್ರಮ ಎಂದೋ ಭಾವಿಸುತ್ತೇವೆ. ಅದು ತಪ್ಪಲ್ಲ, ಆದರೆ ತೀರಾ ನಮ್ಮೊಳಗೆ ಬೆರೆತು ಹೋದ ಜೀವವೊಂದು ಇನ್ನಿಲ್ಲವಾದಾಗ, ಅಥವಾ ನಮ್ಮೊಳಗೆ ಜೀವನಕ್ಕೆ ಹೊಸ ಅರ್ಥ ನೀಡುವ ಬದುಕು ಕೊನೆಗೊಂಡಾಗ, ಮನಸ್ಸು ಭಾರವಾಗುತ್ತದೆ.
ಇತ್ತೀಚೆಗೆ ಮನಸ್ಸನ್ನು ಛಿದ್ರಗೊಳಿಸುವಂತೆ ಕೆಲವು ಸಾವುಗಳು ಮನಸ್ಸನ್ನು ಕಲಕಿ ಬಿಟ್ಟುವು! ಮೊನ್ನೆ ಊರಿನಿಂದ ಬಂದ ಒಂದು ಕರೆ ದಿಗಿಲು ಹುಟ್ಟಿ ಸಿತು. ಊರಿನಲ್ಲಿ ಆತ್ಮೀಯನಾಗಿದ್ದ, ದೇವರ ಪಾತ್ರಿ ಎಂದೇ ಗುರುತಿಸಿಕೊಳ್ಳುತ್ತಿದ್ದ ದೇವದಾಸ (೪೮ವರ್ಷ) ಎಂಬ ಸ್ನೇಹಿತ, ತಿರುಪತಿಗೆ ಹೋಗುವಾಗ ಬೆಂಗಳೂರು ಸಮೀಪದ ಅಪಘಾತದಲ್ಲಿ ನಿಧನರಾದರು. ಒಂದು ಕ್ಷಣ ಮನ ತುಂಬಿ ಬಂತು. ಕಳೆದ ಬಾರಿ ಊರಿಗೆ ಹೋಗಿದ್ದಾಗ, ನಮ್ಮ ಅರೆಹೊಳೆ ದಿಬ್ಬಣದ ಬಗ್ಗೆ ವಿಚಾರಿಸಿ, ಈ ವರ್ಷ ಅದು ಯಾವಾಗ, ನಾನೂ ಜೊತೆಗೂಡುತ್ತೇನೆ ಎಂದು ಹೇಳಿದ್ದ ಆ ಮನಸ್ಸು ಇನ್ನೆಲ್ಲಿ??. ಯಾವುದೋ ಊರಿನಲ್ಲಿ ಹುಟ್ಟಿ ಬೆಳೆದು, ಅದೆಲ್ಲೋ ಮರೆಯಾಗಿ ಹೋದ ಆ ಚೇತನಕ್ಕೆ ನನ್ನದೊಂದು ನುಡಿ ನಮನ.
ಆ ಆಘಾತದಿಂದ ಇನ್ನು ಬಳಲಿರುವಾಗಲೇ, ಮೊನ್ನೆ ಭಾನುವಾರದ ಮುಂಜಾವು ಮತ್ತೆ ಅಶುಭವಾಗಿತ್ತು. ಭುವನಕ್ಕ (ಭುವನೇಶ್ವರಿ ಹೆಗಡೆ) ಮಂಗಳೂರಿನಿಂದ ಕರೆ ಮಾಡುವಾಗ ಕೆಲಸವೊಂದರ ನಿಮಿತ್ತ ಉಡುಪಿ ಬಳಿ ಇದ್ದೆ. ಕರೆ ಸ್ವೀಕರಿಸಿದವನ ಕೈಗಳು ನಡುಗಲಾರಂಭಿಸಿದುವು. ನಮ್ಮೆಲ್ಲರ ಹಿರಿಯರಾಗಿದ್ದ, ಆತ್ಮೀಯರಾಗಿದ್ದ, ಹಿರಿಯ ವಿದ್ವಾಂಸ ಡಾ.ಪಾ ನ ಮಯ್ಯ ಇನ್ನಿಲ್ಲ ಎಂದು ಅವರ ಮಾತುಗಳು, ಮತ್ತೆ ಗರ ಬಡಿಸಿದುವು. ಕೇವಲ ಎರಡು ತಿಂಗಳ ಹಿಂದೆ, ಅರೆಹೊಳೆ ಸಾಹಿತ್ಯ ಪ್ರದಕ್ಷಿಣೆಯನ್ನು ಆರಂಭಿಸಿದಾಗ, ಮೊದಲ ಅತಿಥಿಯಾಗಿ ಬಂದು, ತಮ್ಮ ಗುರು ಜಿ ವಿ ಶತಾಯುಷಿಯಾದುದನ್ನು ಹೆಮ್ಮೆಯಿಂದ ವಿವರಿಸಿ, ಬಹಳ ಲವಲವಿಕೆಯಿಂದ ಮಾತಾಡಿದ್ದರು. ವಾಮನ ನಂದಾವರ ಅವರ ಮನೆಯ ದೃಶ್ಯ ಚಾವಡಿಯಲ್ಲಿ,

 ಸಾಹಿತ್ಯ ಪ್ರದಕ್ಷಿಣೆಯಲ್ಲಿ  ನಮ್ಮೊಂದಿಗೆ ಮಯ್ಯರು...ಎಡದಿಂದ ಮೂರನೆಯವರು.....

 ಹಲವು ಸಾಹಿತ್ಯಾಭಿಮಾನಿಗಳ ನಡುವೆ, ಕುಂದಗನ್ನಡದ ಸೊಬಗನ್ನು ಉಣಬಡಿಸುತ್ತಾ, ಎಲ್ಲರೊಡನೆ ಒಂದಾಗಿ ಹರಟಿದ್ದರು. ಅಂದು ಅವರಂದ ಮಾತೊಂದು ಈಗಲೂ ಕಿವಿಯಲ್ಲಿ ಗಂಯ್ ಗುಡುತ್ತಿದೆ.  ’ಜಿವಿ’ ಯಂತಹ ದೊಡ್ಡ ’ಜೀವಿ’ ಮಾತ್ರ ನೂರು ವರ್ಷ ಬದುಕಲು ಸಾಧ್ಯ, ಅವರದ್ದು ಸಾರ್ಥಕ ನೂರು, ಅದನ್ನು ನೋಡವುದೇ ಒಂದು ಸೌಭಾಗ್ಯ ಎಂದವರಿಗೆ ನಿಮ್ಮ ನೂರನ್ನೂ ನಾವು ನೋಡಬೇಕು ಸಾರ್ ಎಂದು ಹೇಳಿದ್ದೆ!. ಆಗ ನಂದಾವರ ಅವರ ಮನೆಯ ಮೆಟ್ಟಿಲಿಳಿದು ಹೋಗುತ್ತಿದ್ದವರು, ಗಕ್ಕನೆ ನಿಂತು ತಿರುಗಿ, ’ಕಾಂಬ, ಕಾಂಬ’ ಎಂದು ಕುಂದಾಪುರ ಕನ್ನಡದಲ್ಲಿ ಹೇಳಿ ಹೋಗಿದ್ದರು. ಮತ್ತೆ ಅವರನ್ನು ಒಂದೆರಡು ಬಾರಿ ಸಮಾರಂಭಗಳಲ್ಲಿ ಕಂಡದ್ದು ಬಿಟ್ಟರೆ, ಮುಖತಾ: ಸಿಗಲಿಲ್ಲ. ಇಂದು ಅವರು ನೆನಪು ಮಾತ್ರ ಎಂದುಕೊಂಡಾಗ ಕಣ್ಣು ಹನಿಗೂಡುತ್ತಿದೆ.
ಈ ಎರಡೂ ಆಘಾತದಿಂದ ಇನ್ನೂ ಹೊರ ಬರದ ನಿನ್ನೆ, ಫೇಸ್ ಬುಕ್‌ನಲ್ಲಿ ಸಿಕ್ಕಿದ ಇತ್ತೀಚೆಗೆ ಪರಿಚಯವಾದ ಗೆಳೆಯ ಆಝಾದ್ ಐ ಎಸ್ ಅವರೊಂದಿಗೆ ಒಂದು ಕಿರು ಚಾಟ್ ಮಾಡಲು ಕುಳಿತೆ. ೩ ಕೆ ಬಳಗವನ್ನು ಕಟ್ಟಿ ಬೆಳೆಸಿದ್ದು ನಮ್ಮೆಲ್ಲರಿಂದ ಪ್ರೀತಿಯಿಂದ  ರೂಪಕ್ಕ ಎಂದೇ ಕರೆಸಿಕೊಳ್ಳುವ ರೂಪಾ ಸತೀಶ್ ಅವರು. ಯಾವಾಗಲೂ ನಗುತ್ತಿರುವ, ಅರೆಹೊಳೆ ಸರ್ ಎಂದು ಮನತುಂಬಿ ಕರೆದು ತುಂಟಾಟವಾಡುತ್ತಿದ್ದ, ಹಾಗೆಲ್ಲಾ ಸರ್ ಎನ್ನ ಬೇಡಿ ಎಂದಾಗ ಅದು ನನ್ನ ರೈಟ್ಸ್ ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದ ರೂಪಕ್ಕ ಯಾವಾಗಲೂ ನಗು ನಗುತ್ತಿದ್ದವರು. ಅವರ ಪತಿ, ಸತೀಶ್ ಮೊನ್ನೆ ರಾತ್ರಿ ತೀರಿಕೊಂಡ ಸುದ್ದಿಯನ್ನು ಆಝಾದ್ ಅವರು ಹೇಳಿದಾಗ, ಕೀಲಿ ಮಣೆ ಕೀಲಿಸುತ್ತಿದ್ದ ಕೈಗಳು ಸ್ತಬ್ದವಾದುವು. ಇತ್ತೀಚೆಗಷ್ಟೇ ಬೆಂಗಳೂರಿಗೆ ಹೋಗಿದ್ದಾಗ, ಸ್ವಲ್ಪ ಸಮಯದ ಅಂತರದಲ್ಲಿ ರೂಪಾ ಅವರ ಯಜಮಾನರನ್ನು ಮೀಟ್ ಆಗುವ ಅವಕಾಶ ಕೈ ತಪ್ಪಿ ಹೋಗಿತ್ತು. ಯಾವತ್ತೋ ಒಮ್ಮೆ ಸಾಂಧರ್ಭಿಕವಾಗಿ ತಮ್ಮ ಯಜಮಾನರ ಅನಾರೋಗ್ಯ ವಿಚಾರ ಹೇಳಿದ ರೂಪಕ್ಕನಿಗೆ, ನಿಮ್ಮ ಹಿರಿಯಣ್ಣನಂತೆ ನಾನೂ ಅವರು ಬೇಗ ಗುನಮುಖರಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ, ನೀವು, ಸತೀಶ್ ಹಾಗೂ ಮೇಘನಾ(ರೂಪಕ್ಕನ ಮಗಳು) ಒಮ್ಮೆ ಮಂಗಳೂರಿಗೆ ಬನ್ನಿ, ಎಲ್ಲಾ ದೇವಸ್ಥಾನಗಳಿಗೂ ಕರೆದೊಯ್ಯುತ್ತೇನೆ ಎಂದಿದ್ದೆ. ಆದಷ್ಟು ಬೇಗ ಬರುತ್ತೇವೆ ಎಂದಿದ್ದರು ರೂಪಕ್ಕ. ಆದರೆ ವಿಧಿಯಾಟ, ಅವರನ್ನು ಅವರ ಪತಿಯನ್ನು ರೂಪಕ್ಕನವರ ಕೈಯಿಂದ ಕಸಿದುಕೊಂಡು ಬಿಟ್ಟಿತು. ಎಂದೆಂದೂ ಎಲ್ಲರನ್ನೂ ನಗಿಸುತ್ತಾ, ಮಕ್ಕಳಂತೆ ಓಡಾಡಿಕೊಂಡಿದ್ದ ಆ ತಂಗಿಯ ಮನದೊಳಗಿದ್ದ ಬೇಗುದಿಯನ್ನು ನಾನು ಅರ್ಥೈಸಿಕೊಂಡಿದ್ದೆ. ಸಾಂತ್ವನ ಹೇಳುವುದಾದರೂ ಹೇಗೆ??. ಮನಸ್ಸುಭಾರವಾಗಿದೆ. ಯಾವ ಕೆಲಸ ಮಾಡಲೂ ಆಗದ ದು:ಸ್ಥಿತಿಯಲ್ಲಿ ಮನ  ಮಿಡಿಯುತ್ತಿದೆ. ರೂಪಾ ಎಂಬ ಈ ತಂಗಿಗೆ ಇಂದು ಸತೀಶ್ ರಿಗೆ ಆರೋಗ್ಯ ತಂದುಕೊಡಲಾಗದ ದೇವರೇ, ದು:ಖ ಸಹಿಸುವ ಶಕ್ತಿ ನೀಡಬೇಕು. ಪುಟಾಣಿ ಮೇಘನಾ, ಈ ಆಘಾತವನ್ನು ಹೇಗೆ ಸ್ವೀಕರಿಸಿದಳೋ, ಹೇಗಿದ್ದಾಳೋ ಎಂದು ನೆನೆಸಿಕೊಂಡರೆ ಮನಸ್ಸು ಚುರುಕ್ ಅನ್ನುತ್ತಿದೆ. ಅವರನ್ನು ಸಂಪರ್ಕಿಸಲೂ ದಾರಿ ಕಾಣದೇ, ಈ ಬರಹದ ಮೂಲಕ ಒಮ್ಮೆ ಬೇಗುದಿಯನ್ನು ಹೊರ ಹಾಕೋಣವೆಂದು ಕೊಂಡೆ. ರೂಪಕ್ಕಾ.....ನಿಮಗೆ ದು:ಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಸತೀಶ್‌ರಿಗೆ ಶಾಂತಿ ಲಭಿಸಲಿ ಎಂದಷ್ಟೇ ಆತ್ಮೀಯ ಅಣ್ಣನಾಗಿ ಹೇಳಬಲ್ಲೆ.
ಹೀಗೆ ಈ ವಿಧಿಯಾಟದಿಂದ ನಲುಗಿದ ನನ್ನಂತಹ ಅನೇಕರು ಫೊನಾಯಿಸಿದಾಗೆಲ್ಲಾ ವಿಧಿ ಕ್ರೂರ ಎನ್ನುತ್ತಾರೆ. ಯಾವುದನ್ನು ಹೇಗೆ ಸ್ವೀಕರಿಸಬೇಕೋ ತಿಳಿಯದ ಗೊಂದಲವನ್ನಂತೂ ಈ ವಿಧಿ ಸೃಷ್ಟಿಸಿದರೂ, ಅವನ ಆಟಕ್ಕೆ ನಾವು ಬಲಿಪಶುವಾಗಲೇ ಬೇಕು. ತೀರಾ ನಮ್ಮವರೆಂಬಂತೆ ನಮ್ಮ ಬದುಕು, ಉಸಿರಿನಲ್ಲಿ ಒಂದಾಗಿರುವವರನ್ನು ಕಳೆದುಕೊಳ್ಳುವ ಆ ದು:ಖವನ್ನು, ಆ ನೋವನ್ನು ಹೇಗೆ ವಿವರಿಸಲಾದೀತು.????....
ನಿಜ, ಮನ ಭಾರವಾಗಿದೆ...ಇಂದು ಇಷ್ಟೇ ಹೇಳಬಲ್ಲೆ. ಮತ್ತೆ ಮಾತು ಹೊರಡದು.

Saturday, 8 December 2012

ನನ್ನ ಜುಟ್ಟು ತೆಗೆದ ಕಥೆ.......

ಬಾಲ್ಯದ ನೆನಪುಗಳೇ ಹಾಗೆ...ಮಧುರ...ಸುಮಧುರ.....ಇಲ್ಲಿ ಎಲ್ಲವು ಹಚ್ಚ ಹಸಿರು ಮತ್ತು ಅದು ಒಂದು ರೀತಿಯ ಶುದ್ಧ ನೀರಿನ ಹಾಗೆ. ಅಲ್ಲಿನ ಅದೆಷ್ಟೋ ಘಟನೆಗಳಿಗೆ ಕಾರಣವೇ ಬೇಕಿಲ್ಲ .....ಇಂಥ ಘಟನೆಯೊಂದರ ಸವಿ ಮೆಲುಕು ಇದು.....


ಹಿಂದೆಲ್ಲಾ ಸೆಲೂನು ಎಂದಾಕ್ಷಣ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತಿದ್ದ ದೃಶ್ಯವೇ ವಿಶಿಷ್ಠ. ಊರಿನ ಒಂದು ಕಡೆ, ಸರಿಯಾದ ಬಾಗಿಲೂ ಇರದಿರುತ್ತಿದ್ದ, ಎತ್ತರದ ಕುರ್ಚಿ, ಎದುರಿಗೊಂದು ಅಗಲವಾದ ಕನ್ನಡಿ. ಎದುರಿನ ಮೇಜಿನ ಮೇಲೆ, ಎರಡು ಮೂರು ಕತ್ತರಿಗಳು, ಬಣ್ಣ ಮಸುಕಾದ ಬ್ರಶ್, ತುಂಡು ಮಾಡಿ ಎಸೆದ ಬ್ಲೇಡುಚೂರುಗಳು, ಯಾರದ್ದೋ ಶೇವಿನ ನೊರೆ, ಕಾಲ ಕೆಳಗೆ ಹುಡಿ ಹುಡಿಯಾಗಿ ಬಿದ್ದ ಕೂದಲುಗಳ ತುಂಡುಗಳು.......ಹೀಗೆ!. ಸೆಲೂನಿನಾತನೋ ನಮ್ಮೂರ ಎಲ್ಲಾ ಸುದ್ದಿಗೆ ವಾರೀಸುದಾರ. ಆಗೊಮ್ಮೆ ಈಗೊಮ್ಮೆ ನಿಮ್ಮ ತಲೆಯನ್ನು ವಿಧೇಯವಾಗಿ ಅವನಿಗೊಪ್ಪಿಸಿ ಕುಳಿತು, ಅವನ ಕತ್ತರಿಯೊಂದಿಗೆ ಆಡುವ ಎಲೆಯುಡಿಕೆ ಮೆಲ್ಲುತ್ತಿರುವ ಆ ಬಾಯಿಯಲ್ಲಿ ಬರದಿರುವ ವಿಚಾರಗಳೇ ಇಲ್ಲ!

ಊರಿನ ಭಟ್ಟರ ಮಗ ಬಾರಿನಲ್ಲಿ ಸಿಕ್ಕಿ ಬಿದ್ದಿದ್ದು, ಶೆಟ್ಟರ ಮನೆಯ ನಾಯಿ ಜ್ವರ ಬಂದು ಸತ್ತಾಗ ಅದಕ್ಕೆ ಶೆಟ್ಟರು ಸುರಿದ ಲಕ್ಷದ ಲೆಕ್ಕ, ಯಾರದ್ದೋ ಮಗಳು ಯಾರನ್ನೋ ನಂಬಿ ಓಡಿ ಹೋಗಿ ಅವ ಕೈ ಕೊಟ್ಟದ್ದು, ಈ ಸಲದ ಚುನಾವಣೆಯಲ್ಲಿ ಇಂತವರೇ ಬರುವುದು ಎಂಬ ಭವಿಷ್ಯ, ಕಳೆದ ರಾತ್ರಿ ನಡೆದ ಯಕ್ಷಗಾನದ ಅಮೂಲಾಗ್ರ ವಿಮರ್ಶೆ, ಈಗಿನ ರಾಜಕಾರಣಿಗಳ ಆಡಳಿತದ ವೈಖರಿಗಳು, ಸಿಕ್ಕಾ ಪಟ್ಟೆ ಏರಿರುವ ಅಡಿಕೆ-ತೆಂಗು ಧಾರಣೆ, ಸೊಸಾಯಿಟಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ಯಾರ ಮನೆಯ ಎಮ್ಮೆ ಎಷ್ಟು ಲೀಟರ್ ಹಾಲು ಕೊಡುತ್ತದೆ, ಯಾರ ಮನೆಯಲ್ಲಿ ಮದುವೆಗೆ ಬಂದ ಹೆಣ್ಣು ಗಂಡುಗಳಿದ್ದಾರೆ, ನಿನ್ನೆಯ ಓಸಿ ನಂಬರ್ ಎಷ್ಟು ಮತ್ತು ಕಳೆದುಕೊಂಡವರು, ಗೆದ್ದವರು ಯಾರ್‍ಯಾರು ಎಂಬಲ್ಲಿಂದ ಹಿಡಿದು ಯಾರ್‍ಯಾರ ಮನೆಯಲ್ಲಿ ಯಾವ್ಯಾವ ಕಾರ್ಯಗಳು ಯಾವಾಗ ಎಂಬ ಕ್ಯಾಲೆಂಡರ್ ......ಹೀಗೆ ಅಲ್ಲಿ ಮಾತುಕತೆಗೆ ಬರದ ವಿಚಾರಗಳೇ ಇಲ್ಲ. ಎಲ್ಲವನ್ನೂ ಹಲವು ಕೋನಗಳಿಂದ ಅಳೆದೂ ಸುರಿದೂ, ಕೊನೆಗೂ ಒಂದು  ಅಂತಿಮ  ರೂಪ ಕೊಡದೇ, ಮುಂದೆ ತಲೆ ಬಗ್ಗಿಸುವವನಲ್ಲಿ ಇದೇ ವಿಚಾರಗಳು ವರ್ಗಾವಣೆಯಾಗುತ್ತವೆ!. ಅಲ್ಲಿಂದ ಮತ್ತೆ ಬೇರೆ ಹೊಸ ವಿಚಾರಗಳೂ ಸೇರುವುದೂ ಇದೆ ಎನ್ನಿ!
ನನಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಪುಟ್ಟ ಊರಲ್ಲಿ ಮಾಲಿಂಗ ಎಂಬ ಕ್ಷೌರಿಕ ಇದ್ದರು. ನಾನು ಸಣ್ಣವನಿದ್ದಾಗ, ಸುಮಾರು ೭ ವರ್ಷದ ತನಕ ವಿರಬೇಕು, ನನಗೆ ಕೂದಲೇ ಕತ್ತರಿಸಿರಲಿಲ್ಲ. ಎಲ್ಲದಕ್ಕೂ ಒಂದು ಕೊನೆ ಇರಲೇ ಬೇಕು ಎಂಬಂತೆ,  ಕೊನೆಗೂ ಅದಕ್ಕೆ ಕತ್ತರಿ ಇಡುವ ದಿನ ಬಂದಾಗ, ನನಗೋ ಅದನ್ನು ಕತ್ತರಿಸಲು ಇಷ್ಟವೇ ಇಲ್ಲ. ಅಲ್ಲಿಯ ತನಕ ಮಾಲಿಂಗನ ಅಂಗಡಿಯಲ್ಲಿ ತಲೆ ಕೊಟ್ಟು, ಅವನ ಕಥೆ ಕೇಳುವವರನ್ನು ಬಾಗಿಲ ಹೊರಗೆ ನಿಂತು ಕೌತುಕದಿಂದ ನೋಡುತ್ತಿದ್ದೆ. ’ಬಾ ಮಾಣಿ, ನಿನ್ನ ಕೂದಲೂ ಕತ್ತರಿಸ್ತೆ’ ಎಂದು ಮಾಲಿಂಗ ಹೇಳುತ್ತಿದ್ದರೆ ಕಾಲಿಗೆ ಬುದ್ದಿ ಹೇಳುತ್ತಿದ್ದೆ. ಆದರೆ ಮಾಲಿಂಗನಿಗೆ ನನ್ನ ಮೇಲೆ ಅದೇನೋ ಅಕ್ಕರೆ. ಹೋದಾಗೆಲ್ಲಾ ಒಂದು ’ಪೆಪ್ಪರಮೆಂಟು’ ಕೊಡಿಸುತ್ತಿದ್ದುದು, ಕರೆದು ಕುಳ್ಳಿರಿಸಿಕೊಳ್ಳುತ್ತಿದ್ದು ನನಗೆ ಅಂದಿನ ನೊಬೆಲ್!. ಅಂದು ಸೆಲೂನಿನಂಗಡಿಯೊಳ ಹೊಕ್ಕರೆ ಮನೆಗೆ ಬಂದು ಬಟ್ಟೆ ಸಮೇತ ಸ್ನಾನ ಮಾಡಬೇಕು ಎಂಬ ಕಟ್ಟಳೆಯೂ ಇತ್ತು. ಆದರೆ ನಾನು ಮಾತ್ರ ಮಾಲಿಂಗನ ಅಂಗಡಿಯೊಳಗೆ ಹೋಗಿದ್ದು, ಅವ ಕೊಟ್ಟ ಪೆಪ್ಪರಮೆಂಟು ತಿಂದದ್ದು, ಅಲ್ಲಿ ಹೋಗಿ ಕೂತದ್ದು ಮನೆಯಲ್ಲಿ ಹೇಳುತ್ತಲೇ ಇರಲಿಲ್ಲ.
ಅಂತೂ ನನ್ನ ಕೂದಲು ತೆಗೆಸಲೇ ಬೇಕಾದ ಅನಿವಾರ್ಯತೆ ಬಂದಿತು. ಅದು ನನಗೆ ಇಷ್ಟವೇ ಇರದಿದ್ದರೂ, ಎಲ್ಲರೂ ನನ್ನನ್ನು ’ಜುಟ್ಟಣ್ಣ’ ಎಂದು ತಮಾಷೆ ಮಾಡುತ್ತಿದ್ದುದರಿಂದ ಕತ್ತರಿಸಿಕೊಳ್ಳಲು ಒಲ್ಲದ ಮನಸ್ಸಿನಿಂದ ಒಪ್ಪಿದೆ. ಆಗ ನನ್ನ ಕೂದಲನ್ನೆಲ್ಲಾ ಒಂದು ಗೂಡಿಸಿ, ಜುಟ್ಟು ಹಾಕಿ, ಬಾಳೆ ದಿಂಬಿನಿಂದ ತಯಾರಿಸಿದ ಬಾಳೆ ಹಗ್ಗದಲ್ಲಿ ಜುಟ್ಟನ್ನು ಕಟ್ಟಿ ಬಿಡುತ್ತಿದ್ದಳು ಅಮ್ಮ!.  ಇಂದು ನನ್ನ ಕೆಲವು ಆತ್ಮೀಯರು ಅದನ್ನು ನೆನೆಸಿಕೊಂಡು ತಮಾಷೆ ಮಾಡುತ್ತಿದ್ದರೆ, ಅಂದಿನ ದಿನಗಳ ನೆನಪು ಹಾದು ಹೋಗುತ್ತವೆ.
ಕೊನೆಗೂ ನನ್ನ ಜುಟ್ಟು ತೆಗೆಯುವ ದಿನ ಬಂದೇ ಬಿಟ್ಟಿತು. ನನ್ನಪ್ಪ   ನನ್ನನ್ನು ಎರಡು ರೂಪಾಯಿ ’ಬಿಸ್ಕುಟ್’ ಆಮಿಷದೊಂದಿಗೆ   ಮಾಲಿಂಗನ ಅಂಗಡಿಗೆ ಎಳೆದುಕೊಂಡೇ ಹೋದರು. . ಅದೇನೋ ಅಳುಕು. ಮುಜುಗರ! ಕೂದಲನ್ನು ಕತ್ತರಿಸುವಾಗ ನೋವಾದರೆ ಎಂದ ಭಯ ಬೇರೆ. ಮಾಲಿಂಗನೋ ನನಗೆ ಹೇಗೆ ಬೇಕೋ ಹಾಗೆ ಪೂಸಿ ಹೊಡೆಯುತ್ತಾ ಎರಡೆರಡು ಪೆಪ್ಪರಮೆಂಟ್ ಕೊಡುತ್ತಿದ್ದರೆ, ನನಗೆ ಅಂದಿನ ಮಟ್ಟಿಗೆ ಆತ ಭಯಂಕರ ವಿನ್!. ಅಷ್ಟು ವರ್ಷಗಳಿಂದ ಜೋಪಾನವಾಗಿದ್ದ ಕೂದಲನ್ನು ಇಂದು ಯಾವುದೇ ಕರುಣೆ ಇಲ್ಲದೆ ಆ ಪುಣ್ಯಾತ್ಮ ಹೇಗಾದರೂ ಕತ್ತರಿಸುತ್ತಾನೋ ಎಂಬ ಸಿಟ್ಟು ನನಗೆ. ಅವನ ಅಂಗಡಿಯಲ್ಲಿ ಆಗಲೇ ಹೇಳಿದ ಹಾಗೆ ಎತ್ತರದ ಕುರ್ಚಿ. ಅದರ ಮೇಲೆ ಮಕ್ಕಳಿಗೆ ಅವರ ಎತ್ತರ ಹೆಚ್ಚಸಿ, ಅವನ ಕತ್ತರಿಗೆ ತಲೆ ಸಿಗುವ ಹಾಗೆ ಮಾಡಲು ಒಂದು ಹಲಗೆ (ಸಿಂಹಾಸನ??) ಇಡುತ್ತಿದ್ದ. ಅದನ್ನು ತೆಗೆದು ಆತ ಇಡುತ್ತಲೇ, ನಾನು ’ಅಯ್ಯೋ, ನನಗೆ ಕೂದಲು ಬೇಕು’ ಎಂದು ಬೊಬ್ಬೆ ಹೊಡೆಯುತ್ತಾ, ಓಡಿ ಹೊರ ಬಂದು ಬಿಟ್ಟೆ!. ಆಗೆಲ್ಲಾ ನಮ್ಮೂರ ಶೆಟ್ಟರ ಮನೆಯ ಮುಂದೆ ಶೇಂದಿ ತೆಗೆಯುವವರು ಸೇರುತ್ತಿದ್ದರು. ಹೊಳೆಯಾಚೆಗಿನ ಬಡಾಕೆರೆ ಮತ್ತು ಸುತ್ತ ಮುತ್ತಲಿನ ಶೇಂದಿ ತೆಗೆಯುವ ಮೂರ್ತೆದಾರರೆಲ್ಲಾ  ಅಲ್ಲಿಗೇ ಶೇಂದಿ ತಂದು, ಅಲ್ಲಿ ಬೇರೊಂದು ಟೆಂಪೋ ಬಂದು ಅದೆಲ್ಲವನ್ನೂ ಕೊಂಡೊಯ್ಯುವುದು ಮಾಮೂಲಿ. ಒಮ್ಮೆ ದೋಣಿ ಆಚೆ ದಡದಿಂದ ಈಚೆ ದಡಕ್ಕೆ ಬಂತೆಂದರೆ, ಹತ್ತು ಹನ್ನೆರಡು ಮಂದಿ ಶೇಂದಿಯನ್ನು ದೊಡ್ಡ ಗಡಿಗೆಯಲ್ಲಿಟ್ಟು ತರುತ್ತಿದ್ದರು. ಅದರ ಸೊಬಗನ್ನು ನೋಡುವುದೇ ಆಗ ಒಂದು ಚೆಂದ. ಹಾಗೆ ಅವರು ಹೊತ್ತು ಬರುವ ದಾರಿಯ ಬದಿಯಲ್ಲೇ ನಮ್ಮ ಈ ಮಾಲಿಂಗನ ಚೌರದಂಗಡಿ ಇರುವುದು. ನಾನು ’ಕೂದಲು ಬೇಕು’ ಎಂದು ಬೊಬ್ಬೆ ಹಾಕಿ ಹೊರ ಜಿಗಿಯುವುದುಕ್ಕೂ, ಎದುರಿನಿಂದ ಯಾರೋ ಶೇಂದಿ ಹೊತ್ತು ಬರುವುದಕ್ಕೂ ಸರಿ ಹೋಯಿತು. ನಾನು ದೊಪ್ಪನೇ ಅವರನ್ನು ಹಾದೆ.(ಬಿದ್ದೆ?). ಅವರ ತಲೆ ಮೇಲಿದ್ದ ಶೇಂದಿಯ ಗಡಿಗೆ ಆವರ ಆಯದಿಂದ ತಪ್ಪಿ ದೊಪ್ಪನೆ ನನ್ನ ಮೇಲೆ ಬಿದ್ದು ಒಡೆದೇ ಹೋಯ್ತು!!. ಗ್ರಹಚಾರ, ನನ್ನ ಮೈ ಪೂರ್ತಿ ಶೇಂದಿಯ ಅಭಿಷೇಕ. ಕತೆ ಮುಗಿಯಿತು ಎಂಬಷ್ಟರಲ್ಲಿ ಆ ಶೇಂದಿ ತಂದ ದ್ರಢಕಾಯದ ವ್ಯಕ್ತಿ, ನೇರವಾಗಿ ನನ್ನ ಜುಟ್ಟಿಗೇ ಕೈ ಹಾಕಿ, ಎತ್ತಿ ಬಿಟ್ಟಿದ್ದ!. ಅಷ್ಟರಲ್ಲಿ ತನ್ನ ಅಂಗಡಿಯಿಂದ ಹೊರಬಂದ ಮಾಲಿಂಗ, ’ಅಯ್ಯೋ, ಈ ಮಾಣಿಗೆ ಎಂತಾ ಆಪ್ದು ಮಾರ್ರೆ" ಎನ್ನುತ್ತಾ ನನ್ನ ಕೈ ಹಿಡಿದೆಳೆದುಕೊಂಡೇ ಒಳ ಹೋದ. ಶೇಂದಿಯವ ಮುಂದೆ ಏನೆಂದುಕೊಂಡನೊ ಏನು ಮಾಡಿದನೋ ನನಗಂತೂ ಗೊತ್ತಿಲ್ಲ. ಹಾಗೆ ಎಳದುಕೊಂಡು ಹೋದ ಮಾಲಿಂಗ, ಕುರ್ಚಿಯ ಮೇಲೆ ಹಾಕಿದ್ದ ಸಿಂಹಾಸನದಲ್ಲಿ ನನ್ನನ್ನು ಕುಳ್ಳಿರಿಸಿಯೇ ಬಿಟ್ಟ. ನಿನಗಿವತ್ತು ಮಾಡ್‌ಸ್ತೆ ಎಂದವನೇ, ನನ್ನ ಅಪ್ಪನಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ, ನಿರ್ದಾಕ್ಷಿಣ್ಯವಾಗಿ ತನ್ನ ಕತ್ತರಿಯನ್ನು ಹೇಗೆ ಬೇಕೋ ಹಾಗೆ ನನ್ನ ತಲೆಯ ಮೇಲೆ ಓಡಿಸಿ ಬಿಡ್ಡ. ಕ್ಷಣಾರ್ಧದಲ್ಲಿ ಸಪ್ತ ವರ್ಷಗಳಿಂದ  ಜತನದಿಂದ ಕಾದು ಕೊಂಡು ಬಂದಿದ್ದ ಕೂದಲು ಧರೆಗುರುಳಿಯಾಗಿತ್ತು!. ಸೆಲೂನಿನ ಒಳಗೆ ಶೇಂದಿಯ ವಾಸನೆಯ ನಡುವೆ, ಕೂದಲು ಬುಡ ಕಡಿದ ಮರದಂತೆ ಬೀಳುತ್ತಿದ್ದರೆ, ಮಾಲಿಂಗ ಈ ಹಿಂದೆ ಆದ ಇಂತಾದ್ದೇ ಅನುಭವಗಳ ಮೂಟೆಯನ್ನು ಬಿಚ್ಚಿ ಬಿಚ್ಚಿ ಇಡುತ್ತಿದ್ದ. ಅಂತೂ ಜುಟ್ಟಣ್ಣ ಎಂಬ ನನ್ನ ನಾಮಧೇಯಕ್ಕೆ ಕತ್ತರಿ ಬಿದ್ದಿತ್ತು. ಆದರೆ ಈ ಗಡಿಬಿಡಿಯಲ್ಲಿ ಶೇಂದಿಯವನಿಗೆ ಹಾದ ಪರಿಣಾಮವಾಗಿ ಮತ್ತು ಕೂದಲನ್ನೂ ಕತ್ತರಿಸಿಕೊಂಡಿದ್ದ ಕಾರಣದಿಂದ ನಾನು ಸಂಪೂರ್ಣ ಅಶುದ್ಧನಾಗಿದ್ದೆ(!?). ಕೂದಲು ಕತ್ತರಿಸಿದ ತಲೆಯನ್ನ ಎತ್ತಲೂ ನನಗೆ ನಾಚಿಕೆ. ಕತ್ತರಿಸಿಕೊಂಡು ಮಾಲಿಂಗನ ಅಂಗಡಿಯಿಂದ ಹೊರ ಬಿದ್ದರೆ ಎಲ್ಲರೂ ನನ್ನನ್ನೇ ಅತ್ಯಾಚಾರ ಮಾಡಿ ಹೊರಬಂದ ಆರೋಪಿಯನ್ನು ನೋಡಿದಂತೆ ನೋಡಿದರೆ ಹೇಗಾಗಿರಬೇಡ??. ತಲೆ ತಗ್ಗಿಸಿಯೇ ಮಾಲಿಂಗನ ಅಂಗಡಿಯಿಂದ ಕಾಲಿಗೆ ಬುದ್ದಿ ಹೇಳಿದವ, ಮತ್ತೆ ನಿಂತದ್ದು ಮನೆಯ ಅಂಗಳದಲ್ಲಿಯೇ. ನಮ್ಮ ಗಾಡಿ ಬಹುಶ: ಮನೆಯೊಳಗೇ ನಿಲ್ಲುತ್ತಿತ್ತೇನೋ......ಅಂಗಳದಲ್ಲಿಯೇ ಇದ್ದ ಅಮ್ಮ ಬ್ರೇಕ್ ಹಾಕಿ, ’ಹಾಗೆ ಬಚ್ಚಲಿಗೆ ಹೋಗು’ ಎಂದವಳೇ, ಬಚ್ಚಲಲ್ಲಿ ನಿಲ್ಲಿಸಿ, ಬಟ್ಟೆ ಹಾಕಿರುವಂತೆಯೇ ದೊಪ ದೊಪನೇ ಕೊಡಗಟ್ಟಲೇ ನೀರು ಸುರಿದು ನನ್ನ ಮೈಲಿಗೆಯನ್ನು ತೊಳೆದೇ ಬಿಟ್ಟಳು. ಅಂತೂ ನಾನು ಮಡಿಯಾಗಿದ್ದೆ. ಆದರೆ ಆ ಜುಟ್ಟಿಲ್ಲದ ಅಣ್ಣನಾಗಿ ಹೊರ ಬರಲೇ ನನಗೆ ಮುಜುಗುರವಾಗುತ್ತಿತ್ತು. ಮೂರು ದಿನ ಮನೆಯಿಂದ ಹೊರಬರಲೇ ಇಲ್ಲ. ನಮ್ಮನೆಗೇ ಬಂದವರೆಲ್ಲರಿಗೂ ಇಂದು ಒಂದು ಹೊಸ ತಮಾಷೆಯ ವಿಷಯ ಸಿಕ್ಕಿತ್ತು. ’ಜುಟ್ಟಣ್ಣ’ ಹೋಗಿ "ಕಳ್ಳಣ್ಣ" (ಕಳ್ಳು ಅಂದರೆ ಕುಂದಾಪುರ ಕನ್ನಡದಲ್ಲಿ ಶೇಂದಿ) ಆಗಿ ಬಿಟ್ಟಿದ್ದೆ.
ಇಂದು ಮಾಲಿಂಗನೂ ಇಲ್ಲ. ಆ ರೀತಿಯಲ್ಲಿ ಶೇಂದಿ ಹೊತ್ತು ತರುವ ಮೂರ್ತೆದಾರರೂ ಇಲ್ಲ. ಸೆಲೂನಿನ ಅಂಗಡಿಯವನಿಗೂ ಊರ ಜನರಿಗೂ ಅಂಥ ಬಾಂಧವ್ಯವೂ ಇಲ್ಲ. ಆದರೂ ಈ ನೆನಪುಗಳು ಮಾಸುವುದೇ ಇಲ್ಲ.

**********


Tuesday, 4 December 2012

ಬ್ಲಾಗಿನ ಬಾಗಿಲಲಿ ......

ಸ್ನೇಹಿತರೆ
ಮೊದಲು ನನ್ನದೊಂದು ಥ್ಯಾಂಕ್ಸ್ ಸಲ್ಲಬೇಕಾದ್ದು, ಸ್ನೇಹಿತ ದಿನಕರ ಮೊಗೇರರಿಗೆ. ಯಾವ ಜನ್ಮದ ಮೈತ್ರಿಯೋ ಎನ್ನುತ್ತಾರಲ್ಲ ಹಾಗೆ, ಈ  ಸಾಹಿತ್ಯಾಸಕ್ತಿ ನನ್ನನ್ನು ಮತ್ತು ಭಟ್ಕಳದ ಈ  ಸ್ನೇಹಿತನನ್ನು ಹತ್ತಿರ ತಂದಿದ್ದು, ಮತ್ತು ಆ ಹತ್ತಿರಕ್ಕೆ ೩ಕೆ ಕಾರಣವಾದದ್ದು, ಮನಸ್ಸಿಗೆ ಮುದ ನೀಡುವ ವಿಚಾರ. ಈ  ದಿನಕರ ಇಂದು ಮಧ್ಯಾಹ್ನ ಫೋನಾಯಿಸಿ, ದುಬೈ ನಿಂದ ಅಜಾದ್ ಸರ್ ಬಂದಿದ್ದಾರೆ ರಾತ್ರಿ ಅವರೊಟ್ಟಿಗೆ ಕುಳಿತು ಒಂದು ಊಟ ಮಾಡಿದರೆ ಹೇಗೆ ಅಂದಾಗ, ಮನಸ್ಸು ಒಪ್ಪದಿರಲು ಯಾವ ಕಾರಣವೂ ಇರಲಿಲ್ಲ. ಸರಿ, ಇಂದು ರಾತ್ರಿಯ ಊಟ, ಮಂಗಳೂರಿನ ಎಂ ಜಿ ರಸ್ತೆಯ ದೀಪಾ ಕಂಫರ್ಟ್ಸ್ ನಲ್ಲಿ ಎಂದು ಬರೆದಿರುವಾಗ ನಾನಾದರೂ ಏನು ಮಾಡಲಿಕ್ಕಿದೆ ಎಂದು ಕೊಂಡೆ .
ಸರಿಯಾಗಿ ೭.೩೦ಕ್ಕೆ ಸಿಗುವುದು ಎಂದೇನೋ ಎಸ್ ಎಂ ಎಸ್ಸಿಸಿ ಕೊಂಡಿದ್ದರೂ, ಅಲ್ಲಿ ಸೇರಿದ್ದು  ಘಂಟೆ ಎಂಟಕ್ಕೆ. ನಾನು, ದಿನಕರ ಅಲ್ಲದೆ   ಅಲ್ಲಿದ್ದುದು ಹೊಸ ಮುಖಗಳೇ. ಅಜಾದ್ ರನ್ನು ಕಂಡಾಗ ಹಿರಿಯಣ್ಣನನ್ನು ಕಂಡ  ಭಾವನೆ ಮೂಡಿದ್ದು, ಅವರೊಂದಿಗೆ ಮಾತಾಡುತ್ತಿದ್ದ ಶೀಲಾ ರನ್ನು ಕಂಡಾಗ ತಂಗಿಯಂತೆ ಕಂಡುದು, ತುಸು ಹೊತ್ತಿನಲ್ಲಿ ಸೇರಿಕೊಂಡ ಆಶಾ ದಂಪತಿಗಳ ನಡುವೆ ಈ ಟಿವಿ ಯಾ ನ್ರತ್ಯ ವಿಶಾರದೆ ಪೂರ್ವಿ......ಅಲ್ಲಿ ಏರ್ಪಟ್ಟುದು  ಮಾತ್ರ ಎಷ್ಟೋ ವರ್ಷಗಳ ಬಂಧುಗಳು ನಾವು ಎಂಬ  ಭಾವ. ಇದರ ಬಗ್ಗೆ ಮುಂದೆ ಬರೆದೇನು.
ಇಲ್ಲಿ ಹೇಳಲೇ ಬೇಕಾದ ವಿಚಾರವೆಂದರೆ, ಬ್ಲಾಗ್ ಬಗ್ಗೆ ಅಷ್ಟೇನೂ ತಿಳುವಳಿಕೆ ಇರದಿದ್ದ ನಾನು, ಈ  ಎಲ್ಲಾ ಬ್ಲಾಗಿಗರ ನಡುವೆ ಕುಳಿತು ಮಾತಾಡುತ್ತಿದ್ದರೆ, ಅದೇನನ್ನೋ ಕಳೆದುಕೊಂಡಂತೆ ಅನುಭವವಾಯಿತು. ನನ್ನದೂ ಒಂದು ಬ್ಲಾಗ್ ಇರಬೇಕೆಂಬ ಬಯಕೆ ನನ್ನೊಳಗೆ ಪ್ರವಾಹೋಪಾದಿಯಲ್ಲಿ ಹುಟ್ಟಿಕೊಂಡಿದ್ದು ನಿಜ. ಅದಕ್ಕೆಂದೇ ಮನೆಗೆ ಬಂದವನು ಮೊದಲು ಮಾಡಿದ ಕೆಲಸ, ನನ್ನದೊಂದು ಬ್ಲಾಗ್ ಸ್ರಷ್ಟಿ. ಇದಕ್ಕೆ ನಾನು ಆಯ್ದು ಕೊಂಡ  ಶೀರ್ಷಿಕೆ ನಿಮಗೆ ರಗಳೆಯಾದರೆ, ನಾನೇನು ಮಾಡುವ ಹಾಗಿಲ್ಲ. ಈ  ಬ್ಲಾಗ್ ನ ಹುಚ್ಚನ್ನು ನನ್ನೊಳಗೆ ತುಂಬಿಸಿದ ಆರೋಪಿಗಳು ಎಂದರೆ ದಿನಕರ್, ಅಜಾದ್ ಸರ್, ಸಹೋದರಿಯರಾದ ಆಶಾ ಹಾಗೂ ಶೀಲಾ ಅವರು.  ನೇ ಇರಲಿ. ನನ್ನದೇ ಒಂದು ಬ್ಲಾಗ್ ಸ್ರಷ್ಟಿ ಏನೋ ಆಗಿದೆ. ಇನ್ನು ಇದಕ್ಕೆ ಹೊಟ್ಟೆಗೆ ಹಾಕಿ, ಬೆಳೆಸಿ ಪೋಷಿಸುವ ಕೆಲಸವೂ ಆಗಲೇ ಬೇಕು.
ನನ್ನದು ಅಂತ ಒಂದು ಅಂತರಜಾಲ ಪತ್ರಿಕೆ ಸ್ರಷ್ಟಿಸಿ, ಕೆಲವು ಕಾರಣಗಳಿಂದ ಅದನ್ನು ಮುಂದುವರಿಸಲಾರದ ನನ್ನ ನೋವು ಶತ್ರುವಿಗೂ ಬೇಡ. ಆ ನೋವಿಗೆ ಈ  ಬ್ಲಾಗ್ ತುಸುವಾದರೂ ಸಮಾಧಾನ ತಂದರೆ ಅದುವೇ ನನಗೆ ನೆಮ್ಮದಿ . ಅಷ್ಟು ಮಾತ್ರ ಈ ಸಂದರ್ಭದಲ್ಲಿ ಹೇಳ ಬಲ್ಲೆ.
ಏನೇ ಇರಲಿ...ಇದು ಆರಂಭ...ನೋಡೋಣ ಮು೦ದುವರಿದೀತು ಈ  ಬ್ಲಾಗ್ ಪಯಣ...ಮತ್ತೆ ಸಿಗುತ್ತೇನೆ. ಮತ್ತೊಮ್ಮೆ ದಿನಕರನಿಗೆ ಧನ್ಯವಾದಗಳು. ಇದನ್ನು ಓದುತ್ತಿರುವ ನಿಮಗೆಲ್ಲರಿಗೂ......
ನಿಮ್ಮವನು
ವಶಿದಾಸ