Thursday, 30 January 2014

ನೆನಪಾಗುತ್ತಿರುವ ಅಂಚೆಯವನು......

ಜನ ಪ್ರತಿನಿಧಿಯ 'ಪ್ರದಕ್ಷಿಣೆ'ಯ ಈ ವಾರದ ನನ್ನ ಅಂಕಣ ಬರಹ...

ಕೆಲವೊಮ್ಮೆ ಕೆಲವು ವ್ಯವಸ್ಥೆಗಳು ಒಂದು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದುವುಗಳು, ಕಾಲ ಮತ್ತು ಬದಲಾಣೆಯ ಹೊಡೆತಕ್ಕೆ ಸಿಕ್ಕು ವಿರೂಪ ಗೊಳ್ಳುತ್ತಿರುತ್ತವೆ. ಬದಲಾವಣೆಯ ಒಂದು ಮಜಲಿನ ನಂತರ ಅದರ ಬಗ್ಗೆ ಯೋಚಿಸಿದರೆ, ನಾವೇನೋ ಕಳೆದುಕೊಂಡ ಭಾವಕ್ಕೊಳಗಾಗುತ್ತೇವೆ. ಇಂತಹ ಕಳೆದು ಕೊಂಡ ವ್ಯವಸ್ಥೆಯಲ್ಲಿ ಇಂದು ನಮ್ಮ ಅಂಚೆಯಣ್ಣನ ಆತ್ಮೀಯತೆಯೂ ಒಂದು.

ಬಾಲ್ಯದ ಒಂದು ಘಟನೆ ನೆನಪಾಗುತ್ತದೆ. ನನಗೆ ವಿಪರೀತ ಪತ್ರ ಬರೆಯುವ ಹುಚ್ಚು. ಒಂದು ರೀತಿಯಲ್ಲಿ ನನ್ನ ಬರಹಕ್ಕೆ ಮತ್ತು ಅನೇಕ ಹಿರಿಯ ಬರಹಗಾರರ ಬರಹದ ಮೊದಲ ಮೆಟ್ಟಿಲು ಇದೇ ಇರಬಹುದೇನೋ. ಊರಿನಲ್ಲಿ ಆಗುವ ಜಾತ್ರೆ ಇರಲಿ, ದೈವದ ಹಬ್ಬ ಇರಲಿ, ಹೊಸತಿರಲಿ, ತಿಥಿ ಇರಲಿ ಅಥವಾ ಸುಖ ದ:ಖದ ಯಾವುದೇ ವಾತಾವರಣವಿರಲಿ, ಆತ್ಮೀಯರಿಗೆಲ್ಲಾ ಪತ್ರ ಬರೆಯುವುದು ಅಂದು ಸಾಮಾನ್ಯವಾಗಿತ್ತು. ಆ ಹಂತದಲ್ಲಿ ನಮ್ಮ ಜ್ಞಾನದ ಮಿತಿ ಎಷ್ಟಿರುತ್ತಿತ್ತೆಂದರೆ, ಪತ್ರ ಬರೆದು ಡಬ್ಬಕ್ಕೆ ಹಾಕಿದರೆ ಆಯ್ತು, ಅದು ತಲುಪ ಬೇಕಾದ  ಜಾಗ ತಲುಪುತ್ತದೆ ಎಂಬುದು ನಮ್ಮ ತಿಳುವಳಿಕೆ. ಒಮ್ಮೆ ಹಾಗೆಯೇ ನನ್ನೂರ ಜಾತ್ರೆಗೆ ಬರುವಂತೆ ಒಂದೆರಡು ಸಂಬಂಧಿಗಳಿಗೆ ಪತ್ರ ಬರೆದು, ಚೆನ್ನಾಗಿ ಮಡಚಿ, ಪೋಸ್ಟ್ ಡಬ್ಬಕ್ಕೆ ಹಾಕಿ ಬಿಟ್ಟಿದ್ದೆ-ಸ್ಟಾಂಪ್ ಹಾಕದೆಯೇ!!. ಆದರೆ ಅನೇಕ ದಿನದ ನಂತರ ತಿಳಿದದ್ದೇನೆಂದರೆ, ಆ ಪತ್ರಗಳು ಮುಟ್ಟಬೇಕಾದ ವಿಳಾಸ ಮುಟ್ಟಲೇ ಇಲ್ಲ. ಅಜ್ಞಾನದ ಪರಿಧಿ ಎಂದರೆ, ನನ್ನ ವಿಳಾಸವನ್ನೂ ಬರೆಯದ ಕಾರಣ, ಅಂಚೆಯವರು ಪ್ರಾಮಾಣಿಕವಾಗಿ ಅದನ್ನು ಹರಿದೆಸೆದಿರಬೇಕು!. ಇದರ ಮುಂದುವರಿದ ಭಾಗವಾಗಿ, ಮತ್ತೊಮ್ಮೆ ಒಂದು ಪತ್ರವನ್ನು ಬರೆದು, ಅದಕ್ಕೆ ಸ್ಟಾಂಪ್ ಹಾಕಬೇಕು ಎಂಬ  ತಿಳುವಳಿಕೆ ಬಂದಿದ್ದ ನಾನು, ಅಂಚೆಯವನು ಬರುವುದನ್ನೇ ಕಾಯುತ್ತಿದ್ದೆ. ಅವನು ಬರುತ್ತಲೇ, ಅಂದಿನ ಮಟ್ಟಿಗೆ ದೊಡ್ಡ ಮೊತ್ತವಾಗಿದ್ದ ಐದು ಪೈಸೆ ನಾಣ್ಯವನ್ನು ಕೊಟ್ಟು ಸ್ಟಾಂಪ್ ಕೊಡಲು ಹೇಳಿದೆ. ಯಾಕೆ ಎಂದು ಕೇಳಿದ್ದಕ್ಕೆ, ಬರೆದು ಮಡಚಿ ಕಿಸೆಯೊಳಗಿಟ್ಟಿದ್ದ ಪತ್ರ ತೋರಿಸಿದ್ದೆ ಇದಕ್ಕೆ ಅಂದು ೨೫ಪೈಸೆ ಸ್ಟಾಂಪ್ ಆಗಬೇಕೆಂದ ಅವನ ಮಾತು ಕೇಳಿ ನಿರಾಸೆಯಿಂದ ಮರಳುವಾಗ, ಅವನೇ ಕರೆದು ಆ ಮೊತ್ತಕ್ಕೆ ಸ್ಟಾಂಪ್ ಹಚ್ಚುತ್ತೇನೆ ಎಂದು ಹೇಳಿ, ಕೊಂಡು ಹೋದ. ನನ್ನ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಯಾಕೆಂದರೆ ಆ ಪತ್ರ ಮುಟ್ಟಬೇಕಾದ ಸ್ಥಳ ತಲುಪಿತ್ತು. ಇದು 'ಅಂದು' ಅಂಚೆಯವನ ಆತ್ಮೀಯತೆ!


ಇದನ್ನಿಂದು ಜ್ಞಾಪಿಸಿಕೊಳ್ಳಲು ಕಾರಣ ಒಂದಿದೆ. ನಾನು ವ್ಯವಾಹಾರದ ಹಿನ್ನೆಲೆಯಲ್ಲಿ, ಇತ್ತೀಚೆಗೆ ದೊಡ್ಡ ಸಂಖ್ಯೆಯ ಕೆಲವು ಅಂಚೆಗಳನ್ನು ಕಳುಹಿಸುತ್ತಿರುತ್ತೇನೆ. ಚನ್ನರಾಯ ಪಟ್ಟಣದ ಒಬ್ಬ ಆತ್ಮೀಯರಲ್ಲಿ ಆ ಅಂಚೆ ಬಂದಿತೇ ಎಂದು ಕೇಳಿದಾಗ ಅವರು ನಕ್ಕು ಬಿಟ್ಟರು. 'ಸ್ವಾಮೀ, ಇಂದಿನ ಅಂಚೆಯವರ ಪರಿಸ್ಥಿತಿ ನಿಮಗೆ ಗೊತ್ತಿಲ್ಲ. ಸರಕಾರದ ಪ್ರತಿಯೊಂದನ್ನೂ ತಮ್ಮದೇ ವಾಹನದಲ್ಲಿ (ಸೈಕಲ್, ಬೈಕ್) ಮೂಲಕ ಹೋಗಿ ಬಟವಾಡೆ ಮಾಡುವುದರಲ್ಲಿ ಅವರು ಹೈರಾಣಾಗಿರುತ್ತಾರೆ. ಹಾಗಾಗಿ ಇಂದಿನ ಅಂಚೆಯವರಲ್ಲಿ 'ಹೆಚ್ಚಿನವರು'   ರಿಜಿಸ್ಟರ್ಡ್ ಅಂಚೆ ಮಾತ್ರ ವಿಲೆವಾರಿ ಮಾಡುತ್ತಾರೆ. ಇಂತಹ ಸಾಮಾನ್ಯ ಪೋಸ್ಟ್‌ಗಳನ್ನು ಹಂಚುವ ಸಾಹಸಕ್ಕೇ ಕೈಹಾಕುವುದಿಲ್ಲ' ಎಂದಾಗ ನನಗೆ ನಂಬಲೂ ಆಗದ ಆಶ್ಚರ್ಯ!.ಕೊನೆಗೆ ಹೀಗೇ ಮಾತಾಡುವಾಗ ಅವರೆಂದರು, 'ಇಂದು ಅಂಚೆಯನಿಗೆ ಸರಕಾರದ ಅಂಚೆಯ ಬಟವಾಡೆ ಅಷ್ಟು ದೊಡ್ಡ ಸಂಖ್ಯೆಯಲ್ಲಿರುತ್ತದೆ. ಮಾಸಾಶನ, ಆಧಾರ್.....ಹೀಗೆ ಕಾಲ ಕಾಲಕ್ಕೆ ಸರಕಾರ ತರುವ ಸವಲತ್ತು ವಿತರಣೆಯೇ ದೊಡ್ಡ ಸಾಹಸ. ಹಾಗಿರುವಾಗ ಸಾಮಾನ್ಯ ಅಂಚೆಗಳನ್ನು ಅವರು ವಿಲೆವಾರಿ ಮಾಡುವುದೂ ಅಸಾಧ್ಯ ಬಿಡಿ!'

ಕಾನೂನು, ಸಂವಿಧಾನಾತ್ಮಕವಾಗಿ ನೋಡಿದರೆ, ಇಲ್ಲಿ ಒಂದು ಅಪರಾಧ ಬಹಿರಂಗವಾಗಿ ಆಗುತ್ತಿರುತ್ತದೆ. ಆದರೆ ಮಾನವೀಯ ದೃಷ್ಟಿಯಲ್ಲಿ ನೋಡಿದರೆ ಆ ಸ್ನೇಹಿತ ಹೇಳಿದ್ದೂ ನನಗೆ ಹೌದೆನಿಸುತ್ತದೆ. ಉದಾಹರಣೆಗೆ ನನ್ನ ಹಳ್ಳಿಯ ಅಂಚೆಯವನನ್ನೇ ತೆಗೆದುಕೊಂರೆ, ನನ್ನ ಬಾಲ್ಯದಿಂದಲೂ ಗಮನಿಸುತ್ತಿದ್ದೇನೆ. ಇಂದಿಗೂ ತನ್ನ ಸೈಕಲ್ ಮೂಲಕ, ಅಂಚೆ ಬಟವಾಡೆ ಮಾಡುವ ಈ ಹಿರಿಯ, ಸೈಕಲ್‌ನ್ನು ಒಂದೆಡೆ ನಿಲ್ಲಿಸಿ, ಮನೆ ಮನೆಗೆ ಹೋಗಿ ಅಂಚೆ ವಿತರಿಸುತ್ತಾರೆ. ನನಗೆ ಇಂದಿನ ತನಕ ಅವರು ಯಾವುದೇ ಅಂಚೆ ವಿತರಣೆಯಲ್ಲಿ ವ್ಯತ್ಯಾಸ ಮಾಡಿದ್ದು ತಿಳಿದಿಲ್ಲ. ಆದರೆ ನಗರ ಪ್ರದೇಶಗಳಲ್ಲಿ ಇದು ತೀರಾ ಕಷ್ಟದ ಕೆಲಸ ಮತ್ತು ಈ ರೀತಿಯ ಸಾಮಾನ್ಯ ಅಂಚೆಗಳು ಕಸದ ಬುಟ್ಟಿ-ತೊಟ್ಟಿ ಸೇರುವ ಸಂಭವ ಹೆಚ್ಚು ಎಂಬುದು ಅನುಮಾನವೇ ಇಲ್ಲ. ನನ್ನ ಹಳ್ಳಿಯ ಅಂಚೆಯವನನ್ನು ನಾನು ಈಗ ನೆನಪಿಸಿಕೊಳ್ಳಲೂ ಮುಖ್ಯ ಕಾರಣವೆಂದರೆ, ಮೇಲೆ  ಹೇಳಿದ ಸ್ಟಾಂಪ್ ಹಾಕಿ ನನ್ನ ಪತ್ರ ಮುಟ್ಟಬೇಕಾದ ಜಾಗಕ್ಕೆ ತಲುಪಿಸಿದವರು ಅವರೇ!!!.

ಈ ವಿಷಯ ಇಲ್ಲೇಕೆ ಎಂದರೆ ಹಿಂದೆ ಅಂಚೆಯವನು ಮತ್ತು ಊರಿನ ಪ್ರತೀ ಮನೆಯವರ ನಡುವೆಯೂ ಒಂದು ಆತ್ಮೀಯತೆ ನಮಗರಿವಿಲ್ಲದೆಯೇ ಗಟ್ಟಿಯಾಗಿರುತ್ತಿತ್ತು. ಹಳ್ಳಿ/ಊರಿನ ಪ್ರತೀ ಮನೆಯ ವ್ಯಕ್ತಿಗೂ ಈ ಅಂಚೆಯಾತ ವೈಯಕ್ತಿಕವಾಗಿ ಉತ್ತಮ ಸ್ನೇಹಿತ. ಹಳ್ಳಿಗಳಲ್ಲಿ ಎಷ್ಟೋ ಮನೆಗಳಲ್ಲಿ ಈ ಅಂಚೆಯವರು ಪತ್ರ ತಲುಪಿಸುವುದು ಮಾತ್ರವೇ ಅಲ್ಲದೇ, ಅನೇಕ ಸಂದರ್ಭಗಳಲ್ಲಿ ಪತ್ರವನ್ನು ಓದಿ ಹೇಳುತ್ತಿದ್ದುದೂ ಇತ್ತು. ಈ ಮೂಲಕ ಅದೆಷ್ಟೋ ರಹಸ್ಯ ವಿಷಯಗಳು ಅಂಚೆಯವನಿಗೆ ತಿಳಿಯುತ್ತಿತ್ತು!. ಆದರೆ ಗಮನಿಸಬೇಕಾದ ವಿಷಯವೆಂದರೆ, ಹೆಚ್ಚಿನ ಅಂಚೆಯವರು ಈ ವಿಷಯವನ್ನು ಅಲ್ಲಿಗೇ ಬಿಡುತ್ತಿದ್ದರು ಮತ್ತು ಯಾವುದೇ ಕಾರಣದಿಂದಲೂ ಅದು ಸೋರಿ ಹೋಗುತ್ತಿರಲಿಲ್ಲ. ಇಂತಾದ್ದೇ ಪ್ರಾಮಾಣಿಕತೆಗಳು ಅಂಚೆಯವನು ಮತ್ತು ಊರಿನವರ ನಡುವೆ ಆತ್ಮೀಯತೆಯನ್ನು ಗಟ್ಟಿಗೊಳಿಸಿಕೊಂಡಿರುತ್ತಿದ್ದುವು. 

ನಾನು ವಿದ್ಯಾಭ್ಯಾಸ ಮುಗಿಸಿ, ಎರಡು ವರ್ಷಗಳ ಕಾಲದ ಹುಬ್ಬಳ್ಳಿಯ ಹೋಟೆಲೊಂದರಲ್ಲಿ ನಂತರ  ಮಣಿಪಾಲದ 'ಉದಯವಾಣಿ'ಯಲ್ಲಿ, ಅದಾದ ನಂತರ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ  ಒಂದಷ್ಟು ಕಾಲ ಕೆಲಸ ಮಾಡುತ್ತಿದ್ದೆ. ಆಗೆಲ್ಲಾ ನನಗೆ ಸ್ನೇಹಿತರು ಹಾಗೂ ಮನೆಯವರಿಂದ, ಬಂಧುಗಳಿಂದ ದಿನಕ್ಕೆ ಒಂದಾದರೂ ಪತ್ರ ಬರುತ್ತಿತ್ತು. ಹಾಗೆ ನಾನು ನೆಲೆಸಿದೆಲ್ಲೆಡೆಯಲ್ಲಿ, ಹಳ್ಳಿ-ನಗರ ಎಂಬ ಭೇಧವಿಲ್ಲದೆಯೇ  ಅಂಚೆಯವನು ಆತ್ಮೀಯ ಸ್ನೇಹಿತನಾಗಿರುತ್ತಿದ್ದ. ಮಣಿಪಾಲದಲ್ಲಿಯಂತೂ, ಅಂಚೆಯವನು ಮನೆಯೊಳಗೆ ಬಂದು, ಕುಳಿತು ಕುಶಲ ವಿಚಾರಿಸಿ, ಪೋಸ್ಟ್ ಕೊಟ್ಟು ಹೋಗುತ್ತಿದ್ದುದು ನನ್ನ ನೆನಪಿನಲ್ಲಿ ಇನ್ನೂ ಹಸಿರಾಗಿದೆ.

ಇಂದು ಈ ಕಾಲ ಎಲ್ಲಿ ಹೋಯಿತು??. ನಮ್ಮ ನಮ್ಮ ನಡುವಿನ ಸಂವಹನದ ಕೊಂಡಿಯಾಗಿದ್ದ ಈ ಅಂಚೆ, ಇಂದು ವ್ಯಾವಹಾರಿಕ 'ಕೆಲಸ'ವೆಂಬಷ್ಟು ಬದಲಾಗಿದೆ. ಎಲ್ಲೋ ಅಪರೂಪಕ್ಕೆ ಹಳೆಯ ಸಂಪ್ರದಾಯದ ಅಂಚೆಯವರನ್ನು ಕಾಣಬಹುದು ಬಿಟ್ಟರೆ, ಅಂಚೆಯವನ ಮುಖದಲ್ಲಿ ಇಂದು ಆತ್ಮೀಯ ನಗುವಿಲ್ಲ ಹಾಗೆಯೇ ಅವನ ನಗುವಲ್ಲಿ ಆತ್ಮೀಯತೆ ಕಾಣಲು ಯಾರಿಗೂ ಪುರುಸೊತ್ತಿಲ್ಲ! ಅಂಚೆಯಲ್ಲಿ ಆತ್ಮೀಯತೆ ಸೊರಗಿದೆ. ಅಲ್ಲಿ ಬರುವುದೇನಿದ್ದರೂ, ಬ್ಯಾಂಕ್ ಸ್ಟೇಟ್‌ಮೆಂಟ್, ಸಾಲದ ಮರುಪಾವತಿಯ ನೋಟೀಸ್, ಆಧಾರ್-ಅಥವಾ ಅಂತಹ ಬೇರೆ ಕಾರ್ಡ್‌ಗಳು......ಹೀಗೆ ಅಂಚೆಯಲ್ಲಿನ 'ಸರಕಿ'ನ ಸ್ವರೂಪವೇ ಬದಲಾಗಿದೆ. ಇಲ್ಲಿ ಒಂದು ರೀತಿಯ ದೂರದೂರಿನ ಬಂಧು, ಸಂಬಂಧ ಅಥವಾ ಸ್ನೇಹದ 'ಸೇತು' ಮುರಿದು ಬಿದ್ದಿದೆ. ಬದಲಾಗಿ ಒಂದು ರೀತಿಯ ನೀರಸ, ವ್ಯವಾಹಾರಕ್ಕೆ ಇದು ಸೀಮಿತವಾಗಿದೆ ಅಥವಾ ತನ್ನನ್ನು ಅದು ಕಟ್ಟಿಕೊಂಡಿದೆ. ಹೀಗೇ ಇದೇ ವಿಷಯದ ಬಗ್ಗೆ ಮಾತಾಡುತ್ತಿದ್ದಾಗ, ಎಂಟನೆಯ ತರಗತಿಯ ನನ್ನ ಮಗಳೂ ಹೇಳುತ್ತಾಳೆ, ಇಂದು ಆ ತರದ ಕಾಯುವಿಕೆ ಏನಿದ್ದರೂ ಅದು ಎಸ್‌ಎಂಎಸ್‌ಗೆ ಸೀಮಿತವಾಗಿದೆ!!. ಎಷ್ಟು ಸತ್ಯ ನೋಡಿ.

ನಾನೀ ಲೇಖನದಲ್ಲಿ ಅಂಚೆಯವರ ಕಷ್ಟ ಕಾರ್ಪಣ್ಯದ ಬಗ್ಗೆ ಬರೆಯ ಹೊರಟರೆ ಅದೇ ಒಂದು ಕಥೆಯಾದೀತು. ಬದಲಾದ ಭಾವನಾತ್ಮಕ ಸಂಬಂಧಗಳ ಕಿರು ವಿಶ್ಲೇಷಣೆಯೇ ನನ್ನ ಉದ್ದೇಶ. ಕೊರಿಯರ್, ಮೊಬೈಲ್ ಸೇವೆಗಳು ಇಂದು ಅಂಚೆಯವನ ಮತ್ತು ನಮ್ಮ ನಡುವಿನ ಆತ್ಮೀಯ ಸಂಬಂಧಕ್ಕೆ ಕೊಳ್ಳಿ ಇಟ್ಟಿವೆ.  ದೃಶ್ಯ ಮಾಧ್ಯಮಗಳು, ಕಂಪ್ಯೂಟರ್ ಹಾಗೂ ಮೊಬೈಲ್‌ಗಳು ಓದುಗ-ಬರಹಗಾರನ ನಡುವಿನ ಸಂಬಂಧವನ್ನು ಕಿರಿದುಗೊಳಿಸಿದ ಹಾಗೆಯೇ, ಇಂದು ಜಗತ್ತನ್ನೇ ಕಿರಿದುಗೊಳಿಸಿದ ಆಧುನಿಕ ತಂತ್ರಜ್ಞಾನ, ಮನುಷ್ಯ ಮನುಷ್ಯ ನಡುವಿನ ಆತ್ಮೀಯತೆಯನ್ನೂ 'ಅಪಾಯಕಾರಿ' ಮಟ್ಟದಲ್ಲಿ ಕಿರಿದುಗೊಳಿಸಿವೆ. ಇದಕ್ಕೆ ಅಂಚೆಯವನೂ ಹೊರತಾಗಿಲ್ಲ-ಇದು ನಮ್ಮ ಇಂದಿನ ಖೇದ.

ಈ ಎಲ್ಲಾ ಹಿನ್ನೆಲೆಯ ಕಾರಣದಿಂದ ಸಾಮಾಜಿಕವಾಗಿಯೂ ಅಂಚೆಯಣ್ಣ ಕ್ರಮೇಣ ಸಮಾಜದ ಮುಖ್ಯವಾಹಿನಿಯಿಂದ ಬದಿಗೆ ಸರಿಯುತ್ತಿದ್ದಾನೆ. ನಮಗೆಲ್ಲಾ ಗೊತ್ತಿರುವ ಹಾಗೆ, ಒಂದು ಕಾಲದಲ್ಲಿ ಜನರ ಬಹು ಮುಖ್ಯ  ತ್ವರಿತ ಸಂಪರ್ಕ ಸೇತುವಾಗಿದ್ದ ಟೆಲಿಗ್ರಾಂ ಇಂದು ಅವಸಾನ ಕಂಡಿದೆ!!. ಅಂಚೆಯೂ ಆ ಹಾದಿಯಲ್ಲಿ ಸಾಗುತ್ತಿತ್ತೇನೋ, ಆದರೆ ಅದ್ರಷ್ಟವಶಾತ್ ಸರಕಾರಗಳು ಅದನ್ನೇ ನೆಚ್ಚಿಕೊಂಡ ಕಾರಣ ಅದಿನ್ನೂ ಉಳಿದಿದೆ ಎಂಬುದೇ ಸಮಾಧಾನ. ಆ ಸಮಾಧಾನಕ್ಕೆ ಏನೂ ಧಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಆದರೆ ಜನರ ಬರೆಯುವ ಅಭಿರುಚಿ, ಓದುವ ಅಭಿರುಚಿ, ಪತ್ರ ಸಂಪರ್ಕ ನಿಯಮಿತವಾದ ಕಾರಣದಿಂದ, ಅಂಚೆಯವನ ಜೊತೆಗಿನ ಬಾಂಧವ್ಯದಲ್ಲಿ ಒಂದು ಅನಿವಾರ್ಯ ಬಿರುಕು ಕಂಡಿದೆ. ಇದು ನಿಜಕ್ಕೂ ನೋವಿನ ಸಂಗತಿ. 

Tuesday, 21 January 2014

ಗಣರಾಜ್ಯದಂದು ಕಾಡುವ ಘಟನೆಗಳು...


ಜನಪ್ರತಿನಿಧಿಯ 'ಪ್ರದಕ್ಷಿಣೆ'ಯ  ವಾರದ ಬರಹ..... 


ನಮ್ಮ ದೇಶದಲ್ಲಿ ರಾಜಕಾರಣಕ್ಕೂ ಆದರ್ಶಕ್ಕೂ ಸಂಬಂಧವೇ ಇಲ್ಲ ಬಿಡಿ!

ಎರಡು ವಾರದ ಹಿಂದೆ ಇದೇ ಅಂಕಣದಲ್ಲಿ ಕೇಜ್ರಿವಾಲ್ ಬಗ್ಗೆ ಬರೆಯುತ್ತಾ, ಅವರು ಕಾಲ ಕ್ರಮೇಣ 'ಪಕ್ಕಾ'ರಾಜಕಾರಣಿಯಾಗದಿದ್ದರೆ ಸಾಕೆಂದು ಹೇಳಿದ್ದೆ. ಕೇವಲ ಎರಡೇ ವಾರಗಳಲ್ಲಿ 'ಆಮ್ ಆದ್ಮಿ' ಬದಲಾಗುತ್ತಿದೆ. ಕೆಲವರು ಇದನ್ನು ಬಣ್ಣ ಬಯಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಆಮ್ ಆದ್ಮಿಯ ಬಣ್ಣ ಬಯಲಾಗುತ್ತಿರುವುದಲ್ಲ. ಅವರ ಆರಂಭದ ಉದ್ದೇಶದಲ್ಲಿ ಆದರ್ಶ ಇದ್ದುದರಲ್ಲಿ ಎರಡು ಮಾತಿಲ್ಲ. ಆದರೆ ರಾಜಕಾರಣಕ್ಕೂ ಆದರ್ಶಕ್ಕೂ ಸಂಬಂಧವೇ ಇಲ್ಲ ಎಂಬುದು ನಮ್ಮ ಪ್ರಜಾಪ್ರಭುತ್ವ ಭಾರತದಲ್ಲಿ ಸಾಬೀತಾಗುತ್ತಲೇ ಬಂದಿರುವ ಮಾತು-ಅದು ಇಲ್ಲಿ 'ಆಮ್ ಆದ್ಮಿ'ಯನ್ನು ಬದಲಾಯಿಸಿದೆ- ಅಷ್ಟೇ!

ಇಂದು 'ಆಮ್ ಆದ್ಮಿ'ಯ ರಾಜ್ಯ ಸರಕಾರ ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಸಂಘರ್ಷಕ್ಕಿಳಿದಿದೆ. ರಾಜ್ಯ-ಕೇಂದ್ರ ಸರಕಾರಗಳು ಸಂಘರ್ಷಕ್ಕಿಳಿಯುವುದು ಹೊಸತಲ್ಲ. ಆದರೆ ಅಲ್ಲಿನ ಸಂಘರ್ಷ ಬೀದಿಗಿಳಿದಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ವಿಶೇಷವೆಂಬಂತೆ ರಾಜ್ಯದ ಮುಖ್ಯ ಮಂಂತ್ರಿಯೇ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ವಿಶ್ಲೇಷಣೆಯ ಪ್ರಕಾರ, ಈ ಹೋರಾಟದ ಮೂಲಕ ಕಾರಣಕ್ಕೂ, ತೋರಿಕೆಯ ಕಾರಣಕ್ಕೂ ವ್ಯತ್ಯಾಸವಿದೆ!. ತಮ್ಮ ಸರಕಾರದ ಒಬ್ಬ ಸಚಿವ, ಸಂವಿಧಾನದ ನಿಯಮ ಗಾಳಿಗೆ ತೂರಿ ಓರ್ವ ಮಹಿಳೆಗೆ ಕಿರುಕುಳ ನೀಡಿದರು ಎಂಬ ಆರೋಪದಿಂದ ಹೊರಬರಲು, ಮತ್ತೊಂದೆಡೆ ತಮ್ಮೊಳಗಿನ ಭಿನ್ನಮತದಿಂದ ಮತ್ತೋರ್ವ ನಾಯಕ ಸಿಡಿದೆದ್ದ ಘಟನೆಯ ಗಮನವನ್ನು ಮತ್ತೊಂದೆಡೆ ಸೆಳೆಯಲು ಈ ತಂತ್ರ ಎನ್ನಲಾಗುತ್ತಿದೆ. ಕಾರಣ ಏನೇ ಇದ್ದರೂ, ಫಲಿತಾಂಶ ಮಾತ್ರ ಒಂದೇ-ಅದು ಪ್ರಜಾಪ್ರಭುತ್ವದ ಅಣಕ.


ಇನ್ನೊಂದೆಡೆ ದಕ್ಷಿಣ ಕನ್ನಡದ ವಿಷಯ. ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ವೀರಪ್ಪ ಮೊಯ್ಲಿ ಮತ್ತು ಜನಾರ್ದನ ಪೂಜಾರಿಯವರ ನಡುವೆ ಹಣಾ ಹಣಿ ಏರ್ಪಟ್ಟಿದೆ-ಕಾಂಗ್ರಸ್ ಪಕ್ಷದ ಟಿಕೆಟ್‌ಗಾಗಿ!. ಒಬ್ಬರದ್ದು ಪುತ್ರವ್ಯಾಮೋಹವಾದರೆ ಮತ್ತೊಬ್ಬರದು ಸ್ವ ವ್ಯಾಮೋಹ. ಇಬ್ಬರ ಉದ್ದೇಶವೂ ಒಂದೇ. ವಿಷಯ ಅಷ್ಟೇ ಆದರೆ ಬೇರೆ ಮಾತು. ಇಂದು ಇಡೀ ದಕ್ಷಿಣ ಕನ್ನಡ ಜಿಲ್ಲೆಯ 'ಪ್ರಜ್ಞಾವಂತ' ಜನ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ಸಿಡಿದು ನಿಂತಿದ್ದಾರೆ. ಈ ಹಂತದಲ್ಲಿ ವೀರಪ್ಪ ಮೊಯ್ಲಿಯವರು ಮಾತ್ರ, ಕೇವಲ 'ತಮ್ಮ' ಚಿಕ್ಕಬಳ್ಳಾಪುರ  ಕ್ಷೇತ್ರದ ಸಂಸದನಾಗಿ, ಕಾಂಗ್ರೆಸ್ ನಾಯಕನಾಗಿ ಅಥವಾ ಕೇಂದ್ರ ಸರಕಾರದ ದ್ವನಿಯಾಗಿ ಮಾತಾಡುತ್ತಾ, ಈ ಯೋಜನೆಯಿಂದ ದಕ್ಷಿಣ ಕನ್ನಡಿಗನಿಗೆ ಏನೂ ಅನ್ಯಾಯವಾಗದು ಎಂಬ 'ಬಾಲಿಶ'ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡಿಗರು ಮತ್ತು ನೆರೆಯ ಜನರು ಈ ಬಾರಿ ಯೋಚಿಸಿ ಮತ ನೀಡಬೇಕಾದ 'ಅನಿವಾರ್ಯತೆ'ಗೆ ಸಿಲುಕಿದ್ದಾರೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ಬೆಂಬಲಿಸುವ ಯಾವುದೇ ಸಂಸದ, ಶಾಸಕ ನಮಗೆ ಬೇಕಾಗಿಲ್ಲ ಎಂಬ ಸತ್ಯವನ್ನು ಮನಗಂಡು, ಹಾಗೆಯೇ ನಡೆದುಕೊಳ್ಳ ಬೇಕಾಗಿದೆ. ಈ ನಡುವೆ ಇಬ್ಬರು ಹಿರಿಯ ನಾಯಕರು ದೆಹಲಿಯಲ್ಲಿ ಲಾಬಿ ಮಾಡಿ, ಟಿಕೆಟ್‌ಗಾಗಿ ಹೊಡೆದಾಡಿಕೊಳ್ಳುವುದನ್ನು ಬಿಟ್ಟು, ತಮ್ಮ ಕ್ಷೇತ್ರದ ನಿಜವಾದ ಸಮಸ್ಯೆಯ ಬಗ್ಗೆ ಯೋಚಿಸುವುದೊಳಿತು. ಅಷ್ಟಕ್ಕೂ ಪಕ್ಷ ನೀಡುವ ಟಿಕೆಟ್ ಹೇಗೋ ಗಿಟ್ಟಿಸಬಹುದು. ಆದರೆ ಜನತೆ.....??
***
ಈ ಹಂತದಲ್ಲಿ ಕವಿ ಮಿತ್ರ ರವಿಶಂಕರ ಒಡ್ಡಂಬೆಟ್ಟು ಅವರ ಹನಿಕವನದ ಸಾಲೊಂದು ನೆನಪಾಗುತ್ತದೆ...

ಸಾವು ಹತ್ತಿರವೆಂದು 
ಗೊತ್ತಿದ್ದರೂ
ಗೊನೆ ಹಾಕಿದ ಬಾಳೆಗೆ
ಸಂತಸವೋ ಸಂತಸ|

ಬಾಳೆಗಿಡ-ಇದು ಒಮ್ಮೆ ಗೊನೆ ಹಾಕಿತು ಎಂದರೆ ಅದರ ಬದುಕು ಮುಗಿಯಿತು. ಮತ್ತೆ ಅದು ಗೊನೆ ಹಾಕುವುದೂ ಇಲ್ಲ, ಅದರ ಗೊನೆ ಬೆಳೆಯುತ್ತಲೇ ಬಾಳೆಯನ್ನು ಬುಡಸಮೇತ ಕಿತ್ತು ಹಾಕುವುದು ಪಕೃತಿಯಲ್ಲಿ ನಡೆದುಕೊಂಡು ಬಂದಿರುವ ವಾಡಿಕೆ. ಇದನ್ನೇ ಮನುಷ್ಯ ಜೀವನಕ್ಕೆ ಅಳವಡಿಸಿಕೊಂಡರೆ, ನಮ್ಮದಿದು ನಶ್ವರದ ಬದುಕು ಎಂದು ಹೇಳುತ್ತಲೇ ನಾವು ಪ್ರಪಂಚದ ಎಲ್ಲವೂ ನಮಗೇ ಬೇಕು ಎಂಬ ಹಪ ಹಪಿಯಲ್ಲಿರುತ್ತೇವೆ. ಸಿಕ್ಕಿದಷ್ಟೂ ಬಾಚಿಕೊಳ್ಳುವ, ಬಾಚಿಕೊಂಡದ್ದನ್ನೆಲ್ಲಾ ನನ್ನಲ್ಲೇ ಇರಬೇಕೆನ್ನುವ ಎಂದಿಗೂ ತೀರದ ಚಪಲ ನಮ್ಮ-ನಿಮ್ಮಂತಹ ಸಾಮಾನ್ಯ ಮನುಷ್ಯರದ್ದು. 

ಆದರೆ, ಹೀಗೆ ಗಳಿಸಿದ್ದರಲ್ಲಿ, ಅಷ್ಟಿಷ್ಟನ್ನಾದರೂ ಸಮಾಜಕ್ಕೆ ನೆರವಾಗುವ ಮೂಲಕ, ಬದುಕಿನಲ್ಲಿ ಸಾಮಾಜಿಕ ಕಾಳಜಿ ಯನ್ನು ಅಳವಡಿಸಿಕೊಳ್ಳುವುದರಿಂದ, ಜೀವನ ಸಾರ್ಥಕ್ಯ ಪಡಿಸಿಕೊಳ್ಳುವ ಅವಕಾಶಗಳು ನಮ್ಮೆದುರು ಇದ್ದರೂ ಅದನ್ನು ನಾವು ನಿರ್ಲಕ್ಷಿಸುತ್ತಲೇ ಇರುತ್ತೇವೆ. ಇಂದು ನಾವು ನಮ್ಮ  ಕೈಯಲ್ಲಿರುವ ಅಧಿಕಾರ, ಹುದ್ದೆಯನ್ನೇ ಪರಮೋಚ್ಚ ಎಂದು ಭಾವಿಸಿ, ನಮ್ಮ ಬಳಿ ಆಗುವ ಸಹಾಯ-ಸಹಕಾರವನ್ನೂ ಮಾಡದೇ, ಕೇವಲ ಸ್ವಾರ್ಥದಿಂದ ಬದುಕುತ್ತಿದ್ದೇವೆ.

ಈ ರೀತಿಯ ಸ್ವಾರ್ಥ ಕೇವಲ ರಾಜಕಾರಣದಲ್ಲಿ ಮಾತ್ರವಲ್ಲ, ಪ್ರತೀ ಜೀವಿಯಲ್ಲೂ ಇರುತ್ತದೆ. ಆದರೆ ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಿತಿ ಮೀರಿದೆ. ರಾಜಕಾರಣಿಯಾದವ, ತನ್ನ 'ಗಳಿಕೆ'ಯನ್ನು ಸಮಾಜಕ್ಕೆ ಕೊಡಬೇಕೆಂದು ಯಾರೂ ಬಯಸುವುದಿಲ್ಲ. ಆದರೆ ಸ್ವಲ್ಪ ತನ್ನ ಮೆದುಳಿಗೆ ಕೆಲಸ ಕೊಟ್ಟು, ಸಾಮಾಜಿಕ ಹಿತ-ಅಹಿತಗಳನ್ನು ಯೋಚಿಸಿ, ಯೋಜಿಸಿ ಮುನ್ನಡೆದರೆ ಸಾಕು ಎಂಬುದು ನಮ್ಮ ಪ್ರಜಾಪ್ರಭುತ್ವದ ಆಶಯ ಅಷ್ಟೇ!. ಆದರೆ ದುರಂತೆವೆಂದರೆ ಅದೇ ಆಗುತ್ತಿಲ್ಲ ಎಂಬುದು ಮತ್ತು ಇದರಿಂದ ಜನತೆ ನಿತ್ಯವೂ ಸಂಕಟ ಪಡಬೇಕಾದ ಅನಿವಾರ್ಯತೆಗೆ ಸಿಲುಕಿರುವುದು.

ಮತ್ತೊಂದು ಸಣ್ಣ ಉದಾಹರಣೆ ಕೊಡುತ್ತೇನೆ. ಇಂದು ಹೊರದೇಶದಿಂದ ಬರುವ ಮತ್ತು ನಮ್ಮ ನಡುವಿನ ಅತೀ ಚಿಕ್ಕ (ಕೇವಲ ಹೊಟ್ಟೆ ಪಾಡಿನ ಉದ್ದೇಶದ) ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುವ ಉದ್ಯಮಗಳಿಗೆ ನಾವು ಕೆಂಪುಹಾಸಿನ ಸ್ವಾಗತ ನೀಡುತ್ತೇವೆ. ಅದೇ ನೀವು, ನಿಮ್ಮದೇ ಪುಟ್ಟ ಊರಿನಲ್ಲಿ ಒಂದು ಸಣ್ಣ ವ್ಯಾಪಾರಕ್ಕೆ ಬೇಕೆಂದು ಸರಕಾರದ ಅವಶ್ಯಕವಾಗಿರುವ ಅನುಮತಿ ಕೇಳ ಹೋಗಿ. ಸಣ್ಣ ಗ್ರಾಮ ಪಂಚಾಯತಿ/ಕಾರ್ಪೊರೇಶನ್ ಮಟ್ಟದಿಂದ ಪ್ರತೀ ಅಧಿಕಾರಿಯೂ ನಿಮ್ಮಕಿಸೆ ನೋಡುತ್ತಾನೆ. ನಾವೇ ಸರಕಾರಕ್ಕೆ ಪರವಾನಿಗೆಗೆ ಬೇಕಾದ ಹಣ ನೀಡುತ್ತೇವೆ, ನಾವೇ ಸರಕಾರಕ್ಕೆ ಬರುವ ಲಾಭದಿಂದ ತೆರಿಗೆ ನೀಡುತ್ತೇವೆ, ಇನ್‌ಕಂ ಟ್ಯಾಕ್ಸ್, ಮಾರಾಟ ತೆರಿಗೆ, ವ್ಯವಾಹಾರ ಪರವಾನಿಗೆ, ಕ್ಷೇಮನಿಧಿ.....ಹೀಗೆ ಅನೇಕ ರೀತಿಯ ಮೊತ್ತವನ್ನು ಸರಕಾರಕ್ಕೆ ನೀಡುತ್ತಲೇ ಇರುತ್ತೇವೆ. ಸಾಮಾನ್ಯ ವ್ಯಕ್ತಿಯೊಬ್ಬನಿಂದ ಸಂಗ್ರಹವಾಗುವ ಈ ಮೊತ್ತವನ್ನು ನಿಡುವವನೇ ನಿಜವಾಗಿಯೂ ಸರಕಾರದ ಆಧಾರಸ್ತಂಭವೇ ಆಗಿರುತ್ತಾನೆ. ಆದರೆ, ಇಂತಾದ್ದೊಂದು ವ್ಯವಾಹಾರವನ್ನು ತೊಡಗಿಕೊಳ್ಳಲು ಆರಂಭಿಸಲು, ನೀವು ಒಮ್ಮೆ ಸಂಬಂಧಿಸಿದ ಇಲಾಖೆಗೆ ಹೋಗಿ ನೋಡಿ. ಅಲ್ಲಿ ಯಾವೊಬ್ಬ ನೌಕರನೂ, ಇದ್ಯಾವುದನ್ನೂ ಸರಕಾರದ ಪರವಾಗಿ ತಾನು ಮಾಡಿಕೊಡಬೇಕಾದ ಕೆಲಸ ಎಂದುಕೊಂಡು ಮಾಡುವುದೇ ಇಲ್ಲ. ನಿನ್ನೆ ತಾನೇ ಒಂದು ವ್ಯಾಪಾರ ಪರವಾನಿಗಿ ನವೀಕರಣದ ಬಗ್ಗೆ ಕಾರ್ಪೊರೇಶನ್ ಕಛೇರಿಗೆ ಹೋಗಿದ್ದೆ. ಆದರೆ ಅಲ್ಲಿನ ಸಿಬಂದಿ, ನಡೆದುಕೊಂಡ ತೀರಿ ವಾಕರಿಕೆ ತರುವಂತಿತ್ತು. ಒಂದು ಉದಾಹರಣೆ ಎಂದರೆ, ಹಿಂದೆ ಕಾರ್ಪೊರೇಶನ್ ನಲ್ಲಿ ವ್ಯವಹಾರ ಪರವಾನಿಗೆಗೆ ಅರ್ಜಿ ಬರೆದುಕೊಟ್ಟಿದ್ದೆ. ಅದರ ಪರಿಶೀಲನೆಗೆ ಬಂದ ಅಧಿಕಾರಿ, ಹೋಗುತ್ತಲೇ ಏನೇನೋ ನೆಪ ಒಡ್ಡಿ, ಕಛೇರಿಯ ಹುಡುಗನಿಂದ ಕೈಬಿಸಿ ಮಾಡಿಕೊಂಡು ಹೋಗಿದ್ದ. ಹೋದಾತ, ತನ್ನ ವರದಿ ಬರೆಯುವಾಗ, ಕಟ್ಟದ ಸಂಖ್ಯೆಯಲ್ಲಿ ಏನೋ ಸಣ್ಣ ತಪ್ಪು ಮಾಡಿಬಿಟ್ಟ. ನಂತರ ಪರವಾನಿಗೆ ಕೊಡುವ ಮಹಿಳೆ, ಈ ತಪ್ಪಿಗಾಗಿ ಪರವಾನಿಗೆ ಕೊಡಲಾಗದು ಎಂದು ಕುಳಿತರೆ, ನಾವು ಆ ತಪ್ಪಾದುದು ಅವರ ಕಡೆಯವರಿಂದಲೇ ಎಂದು ಹೇಳಿದರೂ ಕೇಳಲು ತಯಾರಿರಲಿಲ್ಲ. ಕೊನೆಗೆ ನೇರವಾಗಿ ಆ ಅಧಿಕಾರಿಯನ್ನು ಕಂಡು 'ಕೈಬಿಸಿ'ಮಾಡಿ ಎಂಬ ಪುಕ್ಕಟೆ ಸಲಹೆ ಬೇರೆ!. ಕೊನೆಗೂ ಕೆಲಸ ಮಾಡಿಸಿಕೊಂಡು ಬರಬೇಕಾದರೆ ನಾವು ಪಟ್ಟ ಪಾಡು ಯಾರಿಗೂ ಬೇಡ.

ಇದು ನಿತ್ಯವೂ ನಡೆಯುತ್ತಿರುವ ಘಟನೆಗಳು. ಪ್ರತಿಯೊಬ್ಬನೂ ಈ ರೀತಿಯ ತುಳಿತಕ್ಕೆ ಒಳಗಾಗುತ್ತಲೇ ಇರುತ್ತಾನೆ. ಇದು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಸಡ್ಡುಹೊಡೆದು ನಿಂತಿದೆ. ಜನವರಿ ೨೬ಬಂತೆಂದರೆ ನಾವು ಪ್ರಭುಗಳಾಗುತ್ತೇವೆ. ೨೭ರ ಬೆಳಗ್ಗಿನಿಂದ ಮತ್ತೆ ಕುರಿಗಳಾಗುತ್ತೇವೆ. ಈ ವ್ಯವಸ್ಥೆಗೆ ಸಡ್ಡು ಹೊಡೆದು ನಿಲ್ಲಬಲ್ಲ ಬೆರಳೆಣಿಕೆಯ ನಾಯಕರು, ಪ್ರಜೆಗಳು ವ್ಯವಸ್ಥೆಯ ಗಟ್ಟಿತನದೊಳಗೆ ಸಿಲುಕಿ, ಬಳಲಿ ಬೆಂಡಾಗಿ ಹೋಗುತ್ತಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಇನ್ನು ನಮ್ಮ ಸರಕಾರಗಳು, ನಿಜಾರ್ಥದ ಜನಸೇವೆಯ ಅಧಿಕಾರಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದು. ಅದಕ್ಕೆ ಇತ್ತೀಚೆಗೆ ಬಲಿಯಾದ ಬಂಡೆಯಂತ ನಿಷ್ಠಾವಂತ ಅಧಿಕಾರಿಯ ಉದಾಹರಣೆ ಇದೆ. ಬಂಡೆಯ ಬಲಿದಾನ, ಅದರ ನಂತರ ಸರಕಾರ ನಡೆದುಕೊಂಡ ರೀತಿ, ಚಿಕಿತ್ಸೆಯಿಂದ ಹಿಡಿದು, ಪರಿಹಾರ ಘೋಷಣೆಯ ತನಕ ಅದು 'ಚೌಕಾಸಿ'ಗೆ ಕುಳಿತದ್ದು.....ಪ್ರಜಾಪ್ರಭುತ್ವಕ್ಕೇ ಹೇಸಿಗೆ ತರುವಂತಿದ್ದುವು.

ನಮ್ಮ ದುರಂತವೆಂದರೆ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ದಿನದ ವೇಳೆಯಲ್ಲಿ ನಾವೀ ಬಗ್ಗೆ ಮಾತಾಡುತ್ತೇವೆ. ಮತ್ತೆ ಮರೆತು ಬಿಡುತ್ತೇವೆ. ಅಥವಾ ಯಾವುದೇ ಘಟನೆ ನಡೆದ ನಂತರ ಒಮ್ಮೆ ಕೂಗಾಡಿ ಮತ್ತೆ ಮರೆತು ಬಿಡುತ್ತೇವೆ. ಸಾರ್ವಜನಿಕ ನೆನಪು ತಾತ್ಕಾಲಿಕ ಎಂಬ ಮಾತನ್ನು ಈ ರಾಜಕಾರಣಿಗಳು, ಆಡಳಿತಗಾರರು ಮರೆಯುವುದೇ ಇಲ್ಲ. ಹಾಗಾಗಿ ಬಚಾವಾಗುತ್ತಲೇ ಹೋಗುತ್ತಾರೆ. 

ಇಷ್ಟರಲ್ಲೇ ನಮ್ಮ ರಾಜಕಾರಣದ ನಿರ್ಲಕ್ಷ್ಯದಿಂದ ಘನಘೋರ ಅಪರಾಧವೆಸಗಿ, ಗಲ್ಲು ಶಿಕ್ಷೆಗೆ ಗುರಿಯಾದ ಹಲವರು ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ ಈ ತೀರ್ಪಿಗೆ ಕಾರಣರಾದ ರಾಷ್ಟ್ರಪತಿಗಳು, ಇಷ್ಟು ವರ್ಷಕಾಲ ಮಾಡಿದ್ದೇನೆಂಬುದನ್ನು ಗಮನಿಸಿದರೆ, ಅವರಿಗೆ ಯಾವ ಶಿಕ್ಷೆ..??

ಹೌದು, ಗಣರಾಜ್ಯ ದಿನದ ಈ ವೇಳೆಯಲ್ಲಿ ಇದೆಲ್ಲವೂ ಮತ್ತೆ ಮತ್ತೆ ಕಾಡುತ್ತಿದೆ. 

Wednesday, 15 January 2014

ಎಲ್ಲಿ ಹೋಗತ್ತಾರೆ ಬುದ್ದಿ ಜೀವಿಗಳು...??

ಜನಪ್ರತಿನಿಧಿಯ ನನ್ನ  ಪ್ರದಕ್ಷಿಣೆಯ ವಾರದ  ಲೇಖನ 

ಇತ್ತೀಚೆಗೆ ಎರಡು ಕಡೆ ನಡೆದ ಸಾಹಿತ್ಯ ಸಮ್ಮೇಳನಗಳು, ಒಂದು ಸಾಮಾನ್ಯ ವಿಷಯದ ಮೇಲೆ ಬೆಳಕು ಚೆಲ್ಲಿದುವು. ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಪ್ರಬಂಧ ಮಂಡನೆ, ಕವನ ವಾಚನ ಅಥವಾ ವೇದಿಕೆಯಲ್ಲಿ ಯಾವುದಾದರೂ ಪ್ರಮುಖ ಪಾತ್ರ ವಿದ್ದ ಸಾಹಿತಿಗಳನ್ನು ಬಿಟ್ಟು, ಒಬ್ಬರೇ ಒಬ್ಬರು ಸಾಹಿತಿಯೂ ಭಾಗವಹಿಸಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿತು. ಇನ್ನೂ ಒಂದು ಸಂತಸದ(?) ಸುದ್ದಿ ಎಂದರೆ, ಈ ಸಮ್ಮೇಳನ ಯಶಸ್ಸಾಗಲು ಮುಖ್ಯ ಕಾರಣವಾದದ್ದು, ಕನ್ನಡದ ಸಾಹಿತಗಳೋ, ಲೇಖಕರೋ ಬುದ್ದಿ ಜೀವಿಗಳೋ ಅಲ್ಲ, ಸಾಮಾನ್ಯ ಜನರು ಎಂಬುದು!

ಇನ್ನೊಂದು ಸುದ್ದಿ ಪುತ್ತೂರಿನಿಂದ. ಅಲ್ಲಿಯೂ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿಯೂ ಖಾಲಿ ಕುರ್ಚಿಗಳ ನಡುವೆ ನಡೆ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡಿದ ಸಮ್ಮೇಳನಾಧ್ಯಕ್ಷ ಆರ್ತಿಕಜೆಯವರು, ಸಾಹಿತಿಗಳೇಕೆ ದಂತಗೋಪುರದಿಂದ ಹೊರಬಂದು ಸಾಮಾಜಿಕ ಸಮಸ್ಯೆಗಳ ಬಗ್ಗೆ ಯೋಚಿಸುತ್ತಿಲ್ಲ ಎಂದು ಹರಿಹಾಯ್ದರು. ಇದು ನಮ್ಮ ಸಾಹಿತಿಗಳ ಮತ್ತೊಂದು ಮುಖವನ್ನು ಕಳಚಿ ಹಿಡಿದ ಘಟನೆ.

ಇದು ಈ ಎರಡೂ ಸಮ್ಮೇಳನಗಳ ಅವಧಿಯಲ್ಲಿ ಹೊರ ಬಂದ ಸತ್ಯಗಳಾದರೂ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಿಪಾಠವಾಗಿದೆ. ಸಾಹಿತ್ಯ ಸಮ್ಮೇಳನಗಳಿಗೆ ಮಾತ್ರ ಅನ್ವಯಿಸಿಕೊಳ್ಳದೇ, ಸಾಹಿತ್ಯಿಕವಾದ ಯಾವುದೇ ಸಭೆ-ಸಮಾರಂಭಗಳಲ್ಲಿಯೂ ಇದನ್ನು ನಾವು ಗಮನಿಸಬಹುದು. ವೇದಿಕೆಯಲ್ಲಿ ಅವಕಾಶ ಸಿಗದು ಅಥವಾ ಆಮಂತ್ರಣ ಪತ್ರಿಕೆಗಳಲ್ಲಿ ಹೆಸರು ಇಲ್ಲದ ಕಡೆ, ಅನೇಕ ಸಾಹಿತಿಗಳು ಮುಖವನ್ನೂ ಹಾಕೂವೂದಿಲ್ಲ.   ಕಳೆದ ಹಲವಾರು ವರ್ಷಗಳಿಂದ ಈ ತರದ ಸಮಾರಂಭಗಳನ್ನು ಆಯೋಜಿಸುತ್ತಿರುವ ಅಥವಾ ಹೋಗುತ್ತಿರುವ ನಾನು ಇದನ್ನಂತೂ ಧಾರಾಳ ಗಮನಸಿದ್ದೇನೆ. ಈ ಬಗ್ಗೆ ಸ್ನೇಹಿತರಲ್ಲಿ ಅನೇಕ ಸಲ ಚರ್ಚಿಸಿ, ಸಾಹಿತ್ಯ ಸಮಾರಂಭಗಳಿಗೆ ಸಾಹಿತಿಗಳನ್ನು ಕರೆತರಲು ಯಾವ ತಂತ್ರ ಅನುಸರಿಸಬೇಕು ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದೇನೆ!.(ವೇದಿಕೆಯಲ್ಲಿ ಅವಕಾಶ ನೀಡುವುದು ಬಿಟ್ಟು)


ಇನ್ನು ಇದರಂತೆಯೇ ಸ್ಥಳೀಯವಾಗಿ ತಲೆದೋರುವ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲಿಯೂ ಸಾಹಿತಿಗಳು ಬಹಳ ಹಿಂದೆ. ಹಿಂದೆಲ್ಲಾ ಕನ್ನಡ ಪರ ಹೋರಾಟಗಳಲ್ಲಿ, ಬರಹಗಾರರ ಪಾತ್ರ ಬಹಳ ದೊಡ್ಡದಿರುತ್ತಿತ್ತು. ಅದರೆ ಈಗ, ರಾಜಕೀಯ-ಸಾಮಾಜಿಕವಾಗಿ ತಲೆದೋರುವ ಯಾವುದೇ ಸಮಸ್ಯೆಗಳಲ್ಲಿ, ಬುದ್ದಿಜೀವಿಗಳೆಂದು ಕರೆಸಿಕೊಂಡವರ ಸೊಲ್ಲೇ ಇರುವುದಿಲ್ಲ.
ಈಗ ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ನದಿ ತಿರುವಿನ ಯೋಜನೆಯ ಬಗ್ಗೆ ಗಲಾಟೆ ಎದ್ದಿದೆ. ಈ ಯೋಜನೆಯಿಂದ ದಕ್ಷಿಣ ಕನ್ನಡ ಬರಡಾಗುವುದರಲ್ಲಿ ಎರಡು ಮಾತಿಲ್ಲ. ಯಾವುದೋ ಒಂದು ಭಾಗದ ಜನತೆಯನ್ನು ಖುಷಿ ಪಡಿಸಲು ಮತ್ತು ರಾಜಕೀಯವಾಗಿ ಬರಬಹುದಾದ ಲಾಭದ ಲೆಕ್ಕಾಚಾರದಲ್ಲಿ ಈ ಯೋಜನೆಯನ್ನು ರಾಜಕೀಯ ಪಕ್ಷಗಳು ಕೈಗೆತ್ತಿಕೊಂಡಿವೆ. ಪರಿಚಿತ ಕಲಾವಿದರೊಬ್ಬರು ಇದರ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಎಲ್ಲಿಯ ತನಕ ಎಂದರೆ ಅವರು ತಮ್ಮ ವೃತ್ತಿ, ಪ್ರವೃತ್ತಿಗಳೆಲ್ಲವನ್ನೂ ಈ ಹೋರಾಟಕ್ಕೆ ಧಾರೆ ಎರೆದಿದ್ದಾರೆ.ತಮಗೆ ದೇಶ ವಿದೇಶಗಳಲ್ಲಿ ಒದಗಿ ಬರುತ್ತಿರುವ ಆರ್ಥಿಕವಾಗಿ ಲಾಭ ತರುವ ಅನೇಕ ಅವಕಾಶಗಳನ್ನು ಕೈ ಚೆಲ್ಲಿಕೊಂಡು, ಹಗಲಿರುಳೂ ಈ ಯೋಜನೆಯ ವಿರುದ್ದದ ಹೋರಾಟದಲ್ಲಿ  ಬಾಗಿಯಾಗಿದ್ದಾರೆ.
ಹೀಗೇ ಒಮ್ಮೆ ಮಾತಿಗೆ ಸಿಕ್ಕಿದ ಅವರ ಬಳಿ, ಲೋಕಾಭಿರಾಮವಾಗಿ ಈ ಬಗ್ಗೆ ಕೇಳಿದೆ. ಜಿಲ್ಲೆಯ ಬುದ್ದಿಜೀವಿಗಳ ಬೆಂಬಲ ನಿಮ್ಮ ಹೋರಾಟಕ್ಕೆ ಯಾವ ರೀತಿ ಸಿಗುತ್ತಿದೆ ಎಂದು ವಿಚಾರಿಸಿದಾಗ ಅವರ ಧ್ವನಿಯಲ್ಲಿ ವಿಷಾದ ಮಡುಗಟ್ಟಿತ್ತು. ಇಲ್ಲಿ ಬೆಂಬಲ ಇಲ್ಲವಾದರೂ ಅದು ಬೇರೆಮಾತು. ಆದರೆ ನಮ್ಮ ಹೋರಾಟದಲ್ಲಿ ಬೇರೇನೋ ಅರ್ಥವನ್ನು ಹುಡುಕಿ, ಬಹುಶ: ಇದಕ್ಕೆಲ್ಲಾ ಎಲ್ಲಿಂದಲೋ ಹಣ ಬರುತ್ತಿರಬಹುದು, ಅದಕ್ಕೆ ಇವರು ಹೋರಾಟ ಮಾಡುತ್ತಿದ್ದಾರೆ, ಇಲ್ಲವಾದರೆ ಎಲ್ಲಾ ಬಿಟ್ಟು ಹೀಗೆ ಹೋರಾಡಲು ಇವರಿಗೇನು ಹುಚ್ಚೇ ಎಂದು ತಮಗೆ ತೀರಾ ಆಪ್ತರೆಂದುಕೊಳ್ಳುವ ಬುದ್ದಿ ಜೀವಿಗಳೂ ಮಾತಾಡಿಕೊಳ್ಳುತ್ತಾರೆ ಎಂದವರು ಹೇಳಿದರು. 

ಇದು ಅಚ್ಚರಿ ತರಿಸಿತು. ಇತ್ತೀಚೆಗೆ ಇವರ ಹೋರಾಟ ಪ್ರಖರತೆ ಕಂಡುಕೊಂಡಿದೆ. ಮೀನುಗಾರರನ್ನು, ಸಾರ್ವಜನಿಕರನ್ನು ಒಂದೆಡೆ ಸೇರಿಸಿ, ಎಲ್ಲರಿಗೂ ಈ ಯೋಜನೆಯಿಂದಾಗುವ ಅನಾಹುತಗಳನ್ನು ಮನದಟ್ಟು ಮಾಡಿ, ಹೋರಾಟಕ್ಕೆ ಅಣಿಗೊಳಿಸುತ್ತಿದ್ದಾರೆ. ಆದರೆ, ದುರಂತ ಹಾಗೂ ಅಚ್ಚರಿಯ ವಿಚಾರವೆಂದರೆ, ಇವರಂತಿರುವ ಇತರ ಕಲಾವಿದರು ಹಾಗೂ ಸಾಹಿತಿಗಳು ಮಾತ್ರ ತಮ್ಮ ದಂತಗೋಪುರದಿಂದ ಹೊರ ಬರುತ್ತಿಲ್ಲ. ಇತ್ತೀಚೆ ಈ ಬಗ್ಗೆ ವಿರೋಧಿಸಿ, ಮೆರವಣಿಗೆಯೊಂದನ್ನು ಮಾಡಿದಾಗ, ಜಿಲ್ಲೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ  ಹೆಸರಾದ ಅನೇಕ ಗಣ್ಯ ಮುಖಗಳು ಅಲ್ಲಿ ಕಾಣಲೇ ಇಲ್ಲ-ಇದಲ್ಲವೇ ದುರಂತ.
ಇನ್ನೂ ಮುಂದುವರಿದ ಅವರು ಹೇಳುತ್ತಾರೆ. ಈ ಹೋರಾಟದ ಬಗ್ಗೆ ಇದೇ ತರದ ಬುದ್ದಿಜೀವಿಗಳು ಕೇಳುವ ಒಂದು ಪ್ರಶ್ನೆ, ನೀವು ಈ ಯೋಜನೆಯ ಪರವೋ, ವಿರುದ್ಧವೋ ಎಂದು!. ಅಷ್ಟೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಇವರಿಗೆ ಅರಿವೇ ಇರುವುದಿಲ್ಲ ಎಂಬುದು ಎಂತಹ ದುರಂತ ನೋಡಿ. ಈ ಯೋಜನೆಯನ್ನು ನಿಲ್ಲಿಸಲು, ಸಂಬಂಧಿಸಿದ ಕಾನೂನು ಹೋರಾಟಕ್ಕೆ ನ್ಯಾಯಾಲಯದ ಮೆಟ್ಟಿಲೇರಲು ಮತ್ತು ಅಲ್ಲಿ ಹೋರಾಡಲು ಕನಿಷ್ಟ ೨೫ಲಕ್ಷ ರೂಪಾಯಿಗಳು ಬೇಕಾಗಬಹುದು ಎಂಬುದು ತಜ್ಞರ ಅಭಿಮತ. ಏನೇ ಇರಲಿ, ಅದನ್ನೂ ನೋಡಿ ಬಿಡೋಣ ಎಂದು ಆ ದಾರಿಯನ್ನು ಹಿಡಿಯ ಹೊರಟರೆ, ಕೊಡುಗೈ ದಾನಿಗಳು ಅನಿಸಿಕೊಂಡವರೂ ಇದಕ್ಕೆ ಸಹಾಯ ಮಾಡಲು ಹಿಂಜರಿಯುತ್ತಾರೆ. ಅದಕ್ಕೆ ಕಾರಣ, ರಾಜಕೀಯವಾಗಿ ತಾವು ಗುರುತಿಗೆ ಬಂದರೆ ಮುಂದೆ ತಮ್ಮ ವ್ಯವಾಹಾರಕ್ಕೆ ಅಡ್ಡಿಯಾಗಬಹುದು ಎನ್ನುವುದು ಮತ್ತು ಈ ಕೊಡುಗೆ ಯಾವ ಮಟ್ಟದಲ್ಲಿಯೂ ತಮಗೆ ಹೆಸರು ತಂದುಕೊಡದೇ ಇರುವುದು!. ಇದನ್ನೆಲ್ಲಾ ವಿವರಿಸುವಾಗ, ಆ ಕಲಾವಿದ-ಹೋರಾಟಗಾರನ ದನಿ ಗದ್ಗದಿತವಾಗುತ್ತದೆ ಮತ್ತು ನಮ್ಮ ಬುದ್ದಿಜೀವಿಗಳು ಮತ್ತು ವ್ಯವಸ್ಥೆ ಹೀಗೇಕೆ ಎಂಬ ಪ್ರಶ್ನೆ ಕಾಡುತ್ತದೆ.

ಇಲ್ಲಿ ಸಾಹಿತಿಗಳನ್ನು ಮಾತ್ರವೇ ಗಮನದಲ್ಲಿಟ್ಟು ನಾನೀ ವಿಷಯ ಹೇಳುತ್ತಿಲ್ಲ. ಸಾಮಾಜಿಕವಾಗಿ ತಲೆದೋರುವ ಎಲ್ಲಾ ಸಮಸ್ಯೆಗಳಿಗೂ ಇಂತಹ ವರ್ಗದಿಂದ ಸಿಗುತ್ತಿರುವ ಒಟ್ಟಾರೆ ಸ್ಪಂದನೆ ನಿರಾಶಾದಾಯಕ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಇತ್ತೀಚೆಗೆ ಆಳ್ವಾಸ್ ನುಡಿಸಿರಿ ನಡೆಯಿತು. ಅಲ್ಲಯೂ 'ತಾತ್ವಿಕ'ವಿರೋಧದ ಹೆಸರಲ್ಲಿ ನುಡಿಸಿರಿಗೆ ವಿರುದ್ಧದ ದನಿ ಕೇಳಿಬಂತು. ಗಮನಿಸಬೇಕಾದ್ದು ಎಂದರೆ, ಈ ರೀತಿ ವಿರೋಧ ವ್ಯಕ್ತವಾದದ್ದು, ಅನೇಕ ವರ್ಷಗಳಿಂದ ಒಂದಿಲ್ಲೊಂದು ರೀತಿಯಲ್ಲಿ ನುಡಿಸಿರಿಗಳಲ್ಲಿ   ಭಾಗವಹಿಸಿದವರಿಂದಲೇ ಎಂಬುದು. ಆದರೆ ಈ ಬಗ್ಗೆ ಒಮ್ಮೆ ನಾಡಿನ ಖ್ಯಾತ ಸಂಘಟಕರಲ್ಲಿ ವಿಚಾರಿಸಿದೆ. ಅವರು ಅದಕ್ಕೆ ವಿರೋಧ ವ್ಯಕ್ತ ಪಡಿಸುವುದು ಬಹು ಸುಲಭ. ಆದರೆ ಅಂತಾದ್ದೊಂದು ಸಮ್ಮೇಳನವನ್ನು ಆಯೋಜಿಸುವುದು ಬಹಳ ಕಷ್ಟ ಎಂದರು. ಇದು ನಿಜದ ವಿಷಯ. ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಯಾವುದೇ ಕೆಲಸಕ್ಕೆ ಒಂದೆರಡು ವಿರೋಧದ ಸಾಲು ಗೀಚಿ. ಮೈಕ್ ಹಿಡಿದು ಕೂಗಿ ವಿರೋಧ ವ್ಯಕ್ತ ಪಡಿಸಬಹುದು. ಆದರೆ ಅಂತಾದ್ದೊಂದು ಸಂಘಟನೆಯನ್ನು ನಮಗೆ ಮಾಡಲಾದೀತೆ ಎಂಬುದು ಪ್ರಶ್ನೆ. ಇಂತಹ ಸಂಘಟನೆಗಳನ್ನು ನಾವು ಮಾಡುವುದಿಲ್ಲ ಬಿಡಿ ಎಂಬ ಹಾರಿಕೆಯ ಉತ್ತರ ವ್ಯಂಗ್ಯವಾಗಿ ಬರಬಹುದು. ಆದರೆ ವಿಷಯ ಅದಲ್ಲ. ಒಂದು ವ್ಯವಸ್ಥೆಯಲ್ಲಿ ಎಲ್ಲವನ್ನೂ ಸರಿಯಾಗಿ ನಡೆಸಲಾಗದು. ಅಲ್ಲಿಯೂ ಒಂದಷ್ಟು ಲೋಪದೋಷಗಳಿರಬಹುದು. ಹಾಗೆಂದು ಆ ಲೋಪ ದೋಷಗಳನ್ನು ಸರಿಪಡಿಸಲು ವ್ಯವಸ್ಥೆಯ ಜೊತೆಗೆ ನಿಂತು, ಉಳಿದು ಸಹಕರಿಸುವುದು ಬಿಟ್ಟು, ಅದರ ಮೂಲ ಬೇರನ್ನೇ ಕಿತ್ತು ತೆಗೆಯುತ್ತೇವೆ ಎಂದು ಹೊರಡುವುದು ಮೂರ್ಖತನವೇ ಸರಿ. ಕೆಲವು 'ಜನಮಾರಕ' ವ್ಯವಸ್ಥೆಗಳನ್ನು ಅಮೂಲಾಗ್ರವಾಗಿ ನಾಶ ಮಾಡಬೇಕು. ಅದನ್ನೂ ನಾನು ಒಪ್ಪುತ್ತೇನೆ. ಆ ಬಗ್ಗೆ ಯುಕ್ತ ವಿವೇಚನೆ ಇರಬೇಕು ಎಂಬುದು ನನ್ನ ಅಭಿಮತ.

ಈಗ ಮತ್ತೊಮ್ಮೆ ನಾನು ಹೇಳಿದ ಎರಡೂ ವಿಚಾರಗಳನ್ನು ಅವಲೋಕಿಸಹೊರಟರೆ...ಆಳ್ವಾಸ್ ನುಡಿಸಿರಿ ವಿರುದ್ದ 'ತಾತ್ವಿಕತೆ'ಯ ಮಾತಾಡಿ ಹೋರಾಡುತ್ತಿರುವ ಈ ವರ್ಗ, ನೇತ್ರಾವತಿಯಂತಹ ಪರಿಸರ-ಜನಜೀವನ ವಿರೋಧಿ ಯೋಜನೆಯ ವಿರುದ್ಧ ಬೀದಿಗಿಳಿಯುವುದಿಲ್ಲ. ಬೀದಿಗಿಳಿಯುವುದು ಮತ್ತೆ, ಕನಿಷ್ಟ ಆ ಹೋರಾಟಕ್ಕೆ ತಮ್ಮ 'ತಾತ್ವಿಕ'ಬೆಂಬಲವನ್ನೂ ಘೋಷಿಸುವುದಿಲ್ಲ...ಯಾಕೆ ಎಂಬುದು ಈಗಿನ ಪ್ರಶ್ನೆ.

ಯಾಕೆಂದರೆ ಈ ಹೋರಾಟದಲ್ಲಿ ಯಾವುದೇ ವೇದಿಕೆ ಇರುವುದಿಲ್ಲ ಎಂಬುದು ಉತ್ತರವೇ? ಯಾವುದೇ ಹೆಸರು ಬರದು, ಪ್ರಶಸ್ತಿ ಬಾರದು ಎಂಬುದು ಉತ್ತರವೇ? ಗೊತ್ತಾಗುತ್ತಿಲ್ಲ. ಆಗಬೇಕಾದ್ದು ಆಗಬೇಕಾದ ದಾರಿಯಲ್ಲಿ ಆಗುತ್ತಿಲ್ಲವೆಂಬುದು ಮಾತ್ರ ಕಣ್ಣಿಗೆ ಕಾಣುವ ಸತ್ಯ.

ಇನ್ನು ಸಮ್ಮೇಳನದ ವಿಷಯಕ್ಕೇ ಮರಳಿ ಬಂದರೆ, ಅಲ್ಲಿತೆಗೆದುಕೊಳ್ಳುವ ನಿರ್ಣಯಗಳು. ಇದರ ಬಗ್ಗೆ ಮೊದಲಿನಿಂದಲೂ ಅಪಸ್ವರ ಕೇಳುತ್ತಲೇ ಇದೆ. ಅಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಸಮ್ಮೇಳನ ನಂತರ ಏನಾಗುತ್ತವೆ ಮತ್ತು ಅವುಗಳ ಆಯುಷ್ಯ ಎಷ್ಟು ಎಂಬುದು ಯಕ್ಷ ಪ್ರಶ್ನೆಯೇ ಸರಿ. ಅದರ ಬಗ್ಗೆ ಬರೆಯ ಹೊರಟರೆ, ಲೇಖನ ಸರಣಿ ಆರಂಭಿಸಬೇಕಾದೀತು. ಹರಿಕೃಷ್ಣ ಪುರೂರು ಅವರು ಸಿಕ್ಕಿದಾಗೆಲ್ಲಾ ಹೇಳುತ್ತಿರುತ್ತಾರೆ, ತಮ್ಮ ಅವಧಿಯಲ್ಲಿ ಸರಕಾರಗಳು ಸಮ್ಮೇಳನಕ್ಕೆ ಲಕ್ಷದ ಲೆಕ್ಕದಲ್ಲಿ ಹಣ ಕೊಡಲು ಹಿಂದೇಟು ಹಾಕುತ್ತಿತ್ತು, ಅದರೂ ಸಮ್ಮೇಳನ ಪರಿಣಾಮಕಾರಿಯಾಗುತ್ತಿತ್ತು(ಕನಿಷ್ಟ ಸಾಹಿತಗಳಾದರೂ ಭಾಗವಹಿಸುತ್ತಿದ್ದರು??). ಆದರೆ ಈಗ ಕೋಟಿಗಟ್ಟಲೇ ಹಣದ ಹೊಳೆ ಹರಿದರೂ, ಸಮ್ಮೇಳನ ಮುಗಿವಾಗ ಲೆಕ್ಕ ಎಲ್ಲೋ ಸೋರಿರುತ್ತದೆ-ಸೇರಿರುತ್ತದೆ ಎನ್ನುತ್ತಾರೆ!. ಸಮ್ಮೇಳನದ ಪರಿಣಾಮ ಮಾತ್ರ ದೊಡ್ಡ ಶೂನ್ಯವೆಂಬುದು ಒಪ್ಪಬೇಕಾದ ಮಾತೇ ಸರಿ.

ಹೀಗೆ ನಮ್ಮ ಸುತ್ತಲಿನ ಸಾಮಾಜಿಕ ಬದುಕಿನ ಗೊಡವೆಯೇ ಇಲ್ಲದೇ ಬದುಕುವ ಸಾಹಿತ್ಯ, ಸಾಹಿತಿ, ಬುದ್ದಿಜೀವಿ ವರ್ಗ ಎಲ್ಲವೂ ಯೋಚಿಸಲೇ ಬೇಕಾದ ವಿಚಾರ ಬಹಳಷ್ಟಿದೆ. ಅಷ್ಟನ್ನು ಮಾತ್ರ ಹೇಳಬಹುದು. 

Tuesday, 7 January 2014

ಮಕ್ಕಳೇ ಆಸ್ತಿಯಾಗಲಿ, ಅವರಿಗೆ ಆಸ್ತಿ ಬೇಡ!

ಈ  ವಾರದ 'ಜನಪ್ರತಿನಿಧಿ'ಯ ಅಂಕಣ, 'ಪ್ರದಕ್ಷಿ ಣೆ 'ಗೆ ನಾನು ಬರೆದ ಲೇ ಖನ..... ಓದಿ ಅಬಿಪ್ರಾಯ ತಿಳಿಸಿ.... 

ಬದುಕಲು ದಾರಿ ತೋರಿಸುವ ಒಂದು ದ್ರಷ್ಟಾಂತವನ್ನು ತಮ್ಮ ಮುಂದಿಡುವ ಮೂಲಕ, ನಮ್ಮನ್ನು ಒಂದು ವಿಶ್ಲೇಷಣೆಗೆ ತೊಡಗಿಸಿಕೊಳ್ಳಬೇಕು ಎನಿಸುತ್ತದೆ.

ಇದು ಬೀಚಿಯವರು ಬಹಳ ಹಿಂದೆಯೇ ಬರೆದಿದ್ದರೂ, ಇಂದಿಗೂ ಮತ್ತು ಮುಂದಿಗೂ ಪ್ರಸ್ತುತ. ನಮ್ಮ ಜೀವನದಲ್ಲಿ, ಈ ಕಥೆ ಓದಿ, ಒಬ್ಬನಾದರೂ ತನ್ನ ನಡೆಯಲ್ಲಿ ಬದಲಾವಣೆ ತಂದುಕೊಂಡರೆ, ಅದು ಸಾರ್ಥಕ.(ಪ್ರಸಂಗವನ್ನು ಅಳವಡಿಸಿಕೊಂಡದ್ದು... ಬೀಚಿಯವರ ಬರಹದ ಮೂಲ ರೂಪವಲ್ಲ)

ಮೂರನೆಯ ತರಗತಿ ಹುಡುಗನೋರ್ವ, ಶಾಲೆಯಲ್ಲಿ ತನ್ನ ಸ್ನೇಹಿತನ ಪೆನ್ಸಿಲ್ ಒಂದನ್ನು ಕದಿಯುತ್ತಾನೆ, ಅದನ್ನು ಶಿಕ್ಷಕಿ ಗಮನಿಸುತ್ತಾರೆ. ಅವರು ಏನೂ ಹೇಳದೇ, ಆ ಮಗುವಿನ ಕೈಯಲ್ಲೇ, ತಾಯಿಗೊಂದು ಚೀಟಿ ಬರೆದು ಕಳುಹಿಸುತ್ತಾರೆ. ಮಗು ಚೀಟಿಯನ್ನು ತಂದು ತಾಯಿಗೆ ಕೊಡುತ್ತದೆ. ಅದರಲ್ಲಿ ಎರಡೇ ಸಾಲುಗಳು:- 'ನಿಮ್ಮ ಮಗ ಇಂದು ಸ್ನೇಹಿತನ ಪೆನ್ಸಿಲ್ ಕದ್ದಿದ್ದಾನೆ. ಅವನಿಗೆ ಬುದ್ದಿ ಹೇಳಿ ಮುಂದೆ ಹೀಗಾಗದಂತೆ ನೋಡಿಕೊಳ್ಳಿ'.

ಚೀಟಿ ಓದಿದ ತಾಯಿಗೆ ಭೂಮಿಯೇ ಬಾಯ್ತೆರೆದು ತನ್ನನ್ನು ನುಂಗಿದ ಅನುಭವ. ಮಗುವಿಗೆ ಏನೂ ಮಾಡದೇ, ಅದನ್ನು ಅಪ್ಪಿ ಹಿಡಿದು, ಗೋಳೋ ಎಂದು ಅಳುತ್ತಾಳೆ. ಕುಳಿತಲ್ಲಿ ಕುಳ್ಳಿರಲಾಗದೇ, ನಿಂತಲ್ಲಿ ನಿಲ್ಲಲಾಗದೇ ಓಡಾಡುತ್ತಾಳೆ. ಕೊನೆಗೆ ಇವನಿಗೆ ಇವನ ಅಪ್ಪ ಕಚೇರಿಯಿಂದ ಬಂದ ನಂತರ ಹೇಳಿ, ಏನೆಂದು ನೋಡಿದರಾಯಿತು ಎಂದು ಕೊಳ್ಳುವಷ್ಟರಲ್ಲಿ ಕಚೇರಿಗೆ ಹೋಗಿದ್ದ ಅಪ್ಪ ಮನೆಗೆ ಬರುತ್ತಾನೆ.

ಹೆಂಡತಿಯ ಅವಸ್ಥೆ ಕಂಡ ಅಪ್ಪ ಕಾರಣ ಕೇಳುತ್ತಾನೆ. ಹೆಂಡತಿ, ಶಿಕ್ಷಕಿ ಕೊಟ್ಟಿದ್ದ ಚೀಟಿಯನ್ನು ಗಂಡನ ಕೈಯಲ್ಲಿಟ್ಟು, ವಿಷಯ ಹೇಳುತ್ತಾಳೆ. ಗಂಡನೋ...ಈಗ ಕೆಂಡಾ ಮಂಡಲವಾಗುತ್ತಾನೆ!. ಸಿಟ್ಟಿನಿಂದ ಕುದಿಯುತ್ತಾನೆ!!. ಮನೆಯಲ್ಲಿದ್ದ ಒಂದು ಬಾರುಕೋಲಿನಿಂದ, ಮಗನಿಗೆ ಸರಿಯಾಗಿ ಬಾರಿಸುತ್ತಾನೆ. ಕೊನೆಗೆ ತಾನೇ ಸುಸ್ತಾಗಿ ಹೇಳುತ್ತಾನೆ, ಮಗನೇ, ಇಂದಿಗೆ ಮುಗಿಯಿತು. ಇನ್ನು ಮುಂದೇನಾದರೂ, ಈ ರೀತಿ ಕದ್ದರೆ, ನಿನ್ನನ್ನು ಹುಟ್ಟಿಲ್ಲ ಅನಿಸಿಬಿಡುತ್ತೇನೆ. ಎನ್ನುತ್ತಾ ಮುಂದುವರಿದು, ಹಾಗೇನಾದರೂ ನಿನಗೆ ಏನಾದರೂ ಬೇಕು ಅನಿಸಿದರೆ, ನನ್ನಲ್ಲಿ ಕೇಳು, ನಾನು ನನ್ನ ಆಫಿಸಿನಿಂದ (ಕದ್ದು)ತಂದುಕೊಡುತ್ತೇನೆ ಎನ್ನುತ್ತಾನೆ!!!!

ಇದು ನಮ್ಮ ಇಂದಿನ ಬದುಕಿನ ಶೈಲಿಯಾಗಿದೆ. ಇದನ್ನೇ ಜೀವನದ ಪ್ರತಿಯೊಂದು ಮಗ್ಗುಲಿಗೂ ಹೊಂದಿಸಿಕೊಳ್ಳುತ್ತಾ ಹೋದರೆ..!! ಇತ್ತೀಚೆಗೆ ರೂಪಾ ಅಯ್ಯರ್ ಅವರು ಅತಿಥಿಯಾಗಿದ್ದ ಭಾಗವಹಿಸಿದ್ದ ಸಭೆಯೊಂದಕ್ಕೆ ಹೋಗಿದ್ದೆ. ಅಲ್ಲಿ ಬಹಳ ವಿಚಾರ ಪ್ರಚೋದಕವಾಗಿ ಮಾತಾಡುತ್ತಾ ಅವರು ಹೇಳಿದರು, ಮಕ್ಕಳಿಗಾಗಿ ಆಸ್ತಿ ಮಾಡಿಸುವ ಪ್ರಯತ್ನ ಮಾಡಬೇಡಿ, ಆದರೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ!!. ಎಂತಹಾ ಅರ್ಥಗರ್ಬಿತ ಮಾತುಗಳು ನೋಡಿ. ಇಂದಿನ ಪ್ರತೀ ತಂದೆ ತಾಯಿಯ ಕನಸು ಒಂದೇ-ಮಕ್ಕಳಿಗೆ ಏನಾದರೂ ಮಾಡಿಡಬೇಕು ಮತ್ತು ಅದು ಲಕ್ಷ ಕೋಟಿ ಲೆಕ್ಕದಲ್ಲಿರುವ ಆಸ್ತಿ ಆಗಿರಬೇಕು. ನಾವ್ಯಾರೂ ಮಕ್ಕಳನ್ನು ಈ ದೇಶದ ಅಥವಾ ಈ ಸಮಾಜದ ಆಸ್ತಿಯಾಗಿಸುವ ನಿಟ್ಟಿನಲ್ಲಿ ಯೋಚಿಸುವುದೇ ಇಲ್ಲ. ಅದೇಕೆ?

ಇಂದು ನಾವೂ ಗಮನಿಸುತ್ತಿದ್ದೇವೆ. ಸಮಾಜದಲ್ಲಿ ಅನೈತಿಕತೆಯ ಮಟ್ಟ ಪರಾಕಾಷ್ಟೆ ಮುಟ್ಟಿದೆ. ಆರು ತಿಂಗಳ ಮಗುವಿನಿಂದ ಹಿಡಿದು ಎಂಭತ್ತು-ತೊಭತ್ತರ ಮುದುಕಿಯರ ಮೇಲೂ ಅತ್ಯಾಚಾರ ಆಗುತ್ತದೆ...ಕೊಲೆಯೂ ಆಗುತ್ತದೆ. ಇದು ಒಂದೆಡೆ ಆತಂಕ ಸೃಷ್ಟಿಸುವ ವಿಷಯ. ಅದೇ ಇನ್ನೊಂದು ಮಗ್ಗುಲನ್ನೂ ನೋಡಿ. ನಿನ್ನೆಯಷ್ಟೇ ಒಂದು ಕಡೆ ಓದಿದೆ. ೧೩ರ ಹರೆಯದ ಹುಡುಗನೋರ್ವ, ತನ್ನ ಸಹಪಾಠಿ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾನೆ!!. ಇದು ಏನನ್ನು ಸೂಚಿಸುತ್ತದೆ? ನಮ್ಮ ಮಕ್ಕಳ ಮನ:ಸ್ತಿತಿ ಸಾಗಿದ ದಾರಿಗೆ ಬೇರೆ ನಿದರ್ಶನ ಬೇಕೆ..??
ಇದೇಕೆ ಎಂದು ನಾವು ಪ್ರಶ್ನಿಸ ಹೊರಟರೆ, ಉತ್ತರ ಅಷ್ಟು ಸರಳವಲ್ಲ. ಇದೇ ಮನ:ಸ್ತಿತಿಯ ಮಗು ಬೆಳೆಯುತ್ತದೆ, ದೊಡ್ಡದಾಗುತ್ತದೆ. ಅದು ಮುಂದೆ ಈ ಸಮಾಜಕ್ಕೆ ಏನು ಕೊಡುಗೆ ತಾನೇ ಕೊಡಬಲ್ಲುದು? ಆರಂಭದಲ್ಲಿ ಹೇಳಿದ ಪೆನ್ಸಿಲ್ ಕದ್ದ ಮಗುವೇ ದೊಡ್ಡದಾಗುವಾಗ, ತನ್ನ ತಂದೆಯಂತೇ ಆಫೀಸಿನಿಂದ ಮತ್ತೇನನ್ನೋ ಕದ್ದು ತರಬಲ್ಲುದಲ್ಲದೇ ಬೇರೇನು ಮಾಡೀತು..??
ಅಂದರೆ ಬಾಲ್ಯದಲ್ಲಿ ನಾವು ಮಗುವಿನಗೆ ನೀಡುವ ಸಂಸ್ಕಾರದ ಕೊರತೆಯೇ ಇದಕ್ಕೆ ಕಾರಣವೆಂದು ಷರಾ ಬರೆದು ಬಿಡಬಹುದೇ? ಅದೂ ಸಾಧ್ಯವಿಲ್ಲ. ಮಗುವಿಗೆ ಬಾಲ್ಯದಲ್ಲಿ ತಂದೆ-ತಾಯಿ ಆದರ್ಶರಾಗುತ್ತಾರೆ. ಬೆಳೆದಂತೆ ಸುತ್ತಲಿನ ಪರಿಸರದ ಸ್ನೇಹಿತರು, ಸಂಗಾತಿಗಳು ಆದರ್ಶರಾಗುತ್ತಾರೆ. ಬಾಲ್ಯದಲ್ಲಿಯೇ ತನ್ನ ತಂದೆ ತಾಯಿ ನಡೆದ ದಾರಿಯನ್ನು ಗಮನಿಸುತ್ತಿರುವ ಮಗು, ದೊಡ್ಡದಾಗುತ್ತಲೇ ಪರಿಸರದಲ್ಲೂ ಅದೇ ವಾತಾವರಣವನ್ನು ಗಮನಿಸಿದಾಗ, ಅದೇ ಬದುಕು ಎಂಬಂತೆ ಭಾವಿಸುತ್ತದೆ. ಯಾಕೆಂದರೆ, ಉತ್ತಮ ಸಂಸ್ಕಾರ ಹಾಗೂ ಆದರ್ಶಗಳು ಎಲ್ಲರಲ್ಲೂ ಕಾಣ ಸಿಗುವುದಿಲ್ಲ...ಅದೇ ಹಿತವಲ್ಲದ ಜೀವನ ಶೈಲಿ ಎಲ್ಲೆಂದರಲ್ಲಿ ಸಿಗುತ್ತದೆ. ಹೀಗೆ   ಬಾಲ್ಯದಿಂದಲೂ ಇದನ್ನೇ ಗಮನಿಸಿದ ಮಗು, ಸಹಜವಾಗಿ ಅದನ್ನೇ ಒಪ್ಪಿಕೊಳ್ಳುತ್ತದೆ...ಅದನ್ನೇ ಅನುಕರಿಸುವ ಯತ್ನ ಮಾಡುತ್ತದೆ.

ಒಂದಕ್ಕೊಂದು ಎಷ್ಟು ಪೂರಕ ಎಂಬುದು ಬೇರೆ ಮಾತು. ಇಲ್ಲೊಂದು ಉದಾಹರಣೆ ನೆನಪಾಗುತ್ತದೆ. ಮೊನ್ನೆ ಒಂದು ರಾಜಕೀಯ ಪಕ್ಷದ ಓರ್ವ ನಾಯಕ, ತನ್ನ ನಾಯಕನ ಯಾವುದೋ ತೀರ್ಮಾನವೊಂದನ್ನು ಒಪ್ಪುವುದಿಲ್ಲ. ತಾನು ಭಿನ್ನನಾಗಿಯೇ ಉಳಿಯುತ್ತೇನೆ ಎಂದು ಮನೆಯಲ್ಲಿಯೇ ಕುಳಿತು ಬಿಡುತ್ತಾನೆ. ಆಗ ಉಳಿದೆಲ್ಲಾ ನಾಯಕರ ದಂಡು ಆ ಭಿನ್ನನ ಮನೆಗೆ ಹೋಗುತ್ತದೆ. ಅವನನ್ನು ತಮ್ಮ ಧೋರಣೆ ಒಪ್ಪಿಕೊಳ್ಳುವ ವಿನಂತಿ ಮಾಡುತ್ತದೆ. ಅದಕ್ಕೆ ಆ ಭಿನ್ನ ಹೇಳಿದ ಶರತ್ತು ಒಂದೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ಮಗನಿಗೆ ಟಿಕೇಟ್ ನೀಡಬೇಕು!!. ಇದಕ್ಕೆ ಎಲ್ಲರೂ ಒಪ್ಪುತ್ತಾರೆ, ಪರಿಸ್ಥಿತಿ ತಿಳಿಯಾಗುತ್ತದೆ!
ಇಂತಹ ಅನೇಕ ದ್ರಷ್ಟಾಂತಗಳು ಕಣ್ಣೆದುರಿಗಿವೆ. ಪುತ್ರ ವ್ಯಾಮೋಹ ಸಹಜ. ಆದರೆ ಇಲ್ಲಿ, ನಮ್ಮ ಮಕ್ಕಳನ್ನು ಆಸ್ತಿಯಾಗಿಸುವ ಬದಲು, ಅವರಿಗೇ ಆಸ್ತಿ ಮಾಡಿ, ಕಷ್ಟದ ಬದುಕಿನ ಪರಿಚಯವೇ ಇಲ್ಲದಂತೆ ಬೆಳೆಸಿದ ಅನಾಹುತಕಾರಿ ಫಲಿತಾಂಶದ ಭೀಕರತೆ ಗಮನಿಸಬೇಕು. ಬದುಕು ಎಂದರೆ, ಸುಖದ ಸುಪ್ಪತ್ತಿಗೆ ಎಂದೇ ಭಾವಿಸುವ ಮೇಲೆ ಹೇಳಿದ ನಾಯಕ, ಅದೇನು ಜನಸೇವೆ ಮಾಡಿಯಾನು ಮತ್ತು ಅವನಿಗೆ ಜನರ ನಾಡಿಮಿಡಿತ ತಿಳಿದೀತಾದರೂ ಹೇಗೆ.?

ಇದು ಎಲ್ಲಾ ರಂಗಕ್ಕೂ ಅನ್ವಯಿಸುತ್ತದೆ. ಇಂದು ಮಾಧ್ಯಮಗಳು ಬಹಳ ಮುಂದುವರಿದು, ನಮ್ಮ ಮನೆಯ ಹಾಲ್‌ನಲ್ಲಿಯೇ ಇಡೀ ಪ್ರಪಂಚದ ಐಷಾರಾಮಿ, ಆಡಂಬರದ ಬದುಕನ್ನು ತೋರಿಸುತ್ತವೆ. ಟಿವಿ, ಕಂಪ್ಯೂಟರ್‌ಗಳು ಇಂದು ಹಳೆಯ ಮಾತಾಗಿವೆ. ಸ್ಮಾರ್ಟ್ ಫೋನ್, ಟ್ಯಾಬ್‌ಗಳು, ಐಷಾರಾಮಿ ಕಾರುಗಳು ಇಂದಿನ ಮಕ್ಕಳ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿವೆ. ಶಾಲೆಗೆ ಹೋಗುವ ಮಕ್ಕಳ ನಡುವಿನ ಒಂದು ಸಂಭಾಷಣೆಯ ತುಣುಕನ್ನು ಗಮನಿಸಿ:-
ಏಯ್, ನಿನ್ನ ಅಪ್ಪನ ಹತ್ತಿರ ಯಾವ ಕಾರಿದೆ -ಕೇಳುತ್ತದೆ ಒಂದು ಮಗು
ಇಲ್ಲ, ನಮ್ಮನೆಯಲ್ಲಿ ಟೂ ವೀಲರ್ ಇದೆ ಸಪ್ಪೆ ಮೋರೆಯ ಮತ್ತೊಂದು ಮಗು ಹೇಳುತ್ತದೆ.
ಓಹ್, ಹೌದಾ, ಡಬ್ಬ ಸ್ಕೂಟರ್ ಮೊದಲ ಮಗು ಗೇಲಿ  ಮಾಡುತ್ತದೆ.
ಮತ್ತೊಂದು ಮಗು ತಟ್ಟನೆ ಪ್ರಶ್ನಿಸುತ್ತದೆ, ನಿಮ್ಮ ಮನೆಯಲ್ಲಿ ಯಾವ ಕಾರಿದೆ?.
ಅದಕ್ಕೆ ಮೊದಲ ಮಗು ಉತ್ತರಿಸುತ್ತದೆ, ಮಾರುತಿ ರಿಟ್ಜ್.
ಮೂರನೆಯ ಮಗು ಗಹಗಹಿಸಿ ನಕ್ಕು ಹೇಳುತ್ತದೆ, ಅಯ್ಯೋ, ಆ ಡಬ್ಬಾ ಕಾರಾ? ನಮ್ಮನೆಯಲ್ಲಿ ಹೊಂಡಾ ಸಿಟಿ ಇದೆ. ನನ್ನಪ್ಪನೇ ಸೂಪರ್...!!!!.

ಇದು ಇಂದು ನಿಜಕ್ಕೂ ಮಕ್ಕಳ ನಡುವೆ ನಡೆಯುವ ಸಂಭಾಷಣೆ. ಇದೇ ಮಾತುಕತೆ, ಮನೆಯಲ್ಲಿರುವ ಎಲ್ಲಾ ವಸ್ತುಗಳಿಗೂ ಅನ್ವಯಿಸುತ್ತದೆ. ಇಲ್ಲಿ ಮಕ್ಕಳ ಈ ಸಂಭಾಷಣೆಯ ತಪ್ಪಿಗಿಂತಲೂ ಇರುವ ಭೀಕರ ದುರಂತ ಎಂದರೆ, ಎಷ್ಟೋ ತಂದೆ ತಾಯಿತರು, ಇಂತಹ ಸಂಭಾಷಣೆಗಳನ್ನು ಕೇಳಿದಾಗ, ಹೆಮ್ಮೆ ಪಟ್ಟುಕೊಳ್ಳುತ್ತಾರೆಯೇ ಹೊರತು, ತಮ್ಮ ಮಗುವಿನ ಮನ:ಸ್ತಿತಿಯನ್ನು ಬದಲಾಯಿಸುವ ಗೋಜಿಗೇ ಹೋಗುವುದಿಲ್ಲ!!. ಇದುವೇ ಮಕ್ಕಳ ಈ ಮನೋಸ್ತಿತಿ ಮತ್ತೂ ಬೆಳೆಯಲು ಕಾರಣ.

ಪರಿಚಿತ ಸ್ನೇಹಿತರೋರ್ವರು, ಆರ್ಥಿಕವಾಗಿ ಬಹಳ ನಷ್ಟದಲ್ಲಿದ್ದರು. ಅವರ ಬಳಿ ಸಾಧಾರಣ ವಾದ ಒಂದು ಮೊಬೈಲ್ ಇತ್ತು. ಒಮ್ಮೆ ಸಿಕ್ಕಿದವರು,  ಏನಾದರೂ ಆಗಲಿ, ಬೇಗ ಒಂದು ಸ್ಮಾರ್ಟ್ ಫೋನ್ ಖರೀದಿಸಬೇಕು ಎಂಬ ಇಂಗಿತ ವ್ಯಕ್ತ ಪಡಿಸಿದಾಗ, ಈಗಿರುವ ಫೋನ್‌ಗೇನಾಗಿದೆ ಎಂದರೆ, ಇಲ್ಲ, ಮನೆಯಲ್ಲಿ ಶಾಲೆಗೆ ಹೋಗುವ ಮಗನದ್ದು ಒಂದೇ ಕಂಪ್ಲೇಂಟ್, ಈ ಡಬ್ಬಾ ಫೋನ್ ಬಿಸಾಡಿ ಬೇರೆ ತಗೋ, ಸ್ನೇಹಿತರು ತಮಾಷೆ ಮಾಡುತ್ತಾರೆ ಮತ್ತು ನನಗೂ ಗೇಮ್ಸ್, ಇಂಟರ್ ನೆಟ್ ಎಲ್ಲಾ ನೋಡಲು ಬೇಕಾಗುತ್ತದೆ.  ಈಗ ಹೇಳಿ, ಆ ಮಗುವಿಗೆ ನಾವು ಬೇಕಾದ ಸಂಸ್ಕಾರ ಕಲಿಸಬೇಕೆ, ಸಾಲ ಸೋಲ ಮಾಡಿಯಾದರೂ ಅದರ ಐಷಾರಾಮಿ ಕನಸುಗಳಿಗೆ ಭವಿಷ್ಯವನ್ನು ಬಲಿ ಕೊಡಬೇಕೆ?

ಇಂತಹ ಅನೇಕ ಉದಾಹರಣೆಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತದೆ. ಇಂದು ತಿನ್ನುವ ಚಾಕಲೇಟಿನಿಂದ ಹಿಡಿದು, ಓಡಾಡುವ ವಾಹನಗಳಿಂದ ತೊಡಗಿ, ವಾಸಿಸುವ ಮನೆಯ ತನಕ, ಇನ್ನೂ ಶಾಲೆಗೆ ಹೋಗುವ ಮಗು, ತೀರ್ಮಾನಿಸುವ, ತನ್ನ ಬದುಕಿನ ಐಷಾರಾಮಿತನಕ್ಕೆ ಬಲಿಯಾಗುವ ಸನ್ನಿವೇಶ ಬಂದಿದ್ದರೆ, ಅದಕ್ಕೆ ಮಗು ಕಾರಣವಲ್ಲ, ಹೆತ್ತವರು ಎಂಬುದು ಸತ್ಯ.

ಈ ಎಲ್ಲಾ ಉದಾಹರಣೆಗಳನ್ನು ಗಮನಿಸಿದರೆ, ಮಕ್ಕಳಿಗೆ ಆಸ್ತಿ ಮಾಡುವುದಕ್ಕೂ, ಮಕ್ಕಳನ್ನೇ ಆಸ್ತಿಯಾಗಿ ಮಾಡುವುದಕ್ಕೂ ಇರುವ ವ್ಯತ್ಯಾಸ ತಿಳಿಯುತ್ತದೆ. ಬೀದಿ ದೀಪದಲ್ಲಿ ಓದಿ, ಮೈಲುಗಟ್ಟಲೇ ದಾರಿಯನ್ನು ನಡೆದೇ ಹೋಗಿ, ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಂಡು, ಕಷ್ಟಪಟ್ಟು ಓದಿ ಬೆಳೆದ ಮಕ್ಕಳು ಮಹಾನ್ ನಾಯಕರಾದ ಕಥೆಯೂ ನಮ್ಮ ಮುಂದಿದೆ. ನಾವು ಮತ್ತೆ ಅಷ್ಟು ಹಿಂದೆ ಹೋಗಬೇಕೇ ಎಂಬುದು ಇಲ್ಲಿ ಪ್ರಶ್ನೆಯಲ್ಲ. ನಮ್ಮ ಸುತ್ತಲಿನ ಪ್ರಪಂಚದ ಜೊತೆಗೇ ಮುಂದುವರಿಯುತ್ತಾ, ಬದುಕಿನಲ್ಲಿ 'ಸಂಸ್ಕಾರ'ದ ಪರಿಚಯವನ್ನು ಮಗುವಿಗೆ ಮಾಡಿ ಕೊಡುತ್ತಾ ಅದನ್ನು ಬೆಳೆಸಿದರೆ, ಹೌದು, ಮಕ್ಕಳೇ ಆಸ್ತಿಯಾಗುತ್ತಾರೆ.

ಮಕ್ಕಳನ್ನು ಆಸ್ತಿಯಾಗಿಸೋಣ...
Thursday, 2 January 2014

ಸ್ಮರಣಿಕಾ ಮಹಾತ್ಮೆ..


ಬಹಳ ಹಿಂದೆ ಬರೆದಿದ್ದ ಒಂದು ನಗೆ ಲೇಖನ ಇತ್ತೀಚೆಗೆ ಥಟ್ಟೆಂದು  ಕಣ್ಣಿಗೆ ಬಿತ್ತು.... ಅದನ್ನಿಲ್ಲಿ ಮರಳಿ ಪ್ರಕಟಿಸುತ್ತಿದ್ದೇನೆ..... 


ಸಭೆಸಮಾರಂಭಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವು ಸಾಹಿತ್ಯ ಸಂಬಂಧಿ ಹಿನ್ನೆಲೆಗಳಿಂದ ಇತ್ತೀಚೆಗೆ ಅನೇಕ ಸಭೆ ಸಮಾರಂಭಗಳಿಗೆ ಹೋಗುವ ತೆವಲು ನನಗೂ ಹಿಡಿದಿದೆ ಎಂಬುದು ನಿಸ್ಸಂಕೋಚದಿಂದ ಒಪ್ಪಿಕೊಳ್ಳಲೇ ಬೇಕಾದ ಮಾತು. ಕೆಲವು ಸಂದರ್ಭಗಳಲ್ಲಿ ಕರೆದು, ಕೆಲವು ಸಂದರ್ಭಗಳಲ್ಲಿ ಅಕಸ್ಮಾತ್ತಾಗಿ ( ಇನ್ನು ಕೆಲವೊಮ್ಮೆ ಬಯಸಿ??) ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಎಲ್ಲಿಯೂ ಸಲ್ಲದವನು ಸಲ್ಲುವ ಜಾಗಕ್ಕೆಂಬಂತೆ ಸಮಾರಂಭಗಳಿಗೆ ವಕ್ರಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿದೆ. ಎಲ್ಲಾ ಕಡೆಯಲ್ಲಿಯೂ ನೀವು ಬಯಸಲಿ, ಬಯಸದಿರಲಿ ಒದಗಿಬರುವ (ಸು?)ಯೋಗವೆಂದರೆ ಸ್ಮರಣಿಕೆಗಳನ್ನು ಸ್ವೀಕರಿಸುವುದು!!

ಇಂಥವರು ತಮ್ಮ ಬಿಡುವಿರದ ವೇಳೆಯಲ್ಲೂ ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ನಮ್ಮ ಕರೆಗೆ ಓಗೊಟ್ಟು ಬಂದು ಈ ಸಮಾರಂಭವನ್ನು ಚೆಂದಗಾಣಿಸಿಕೊಟ್ಟಿದ್ದಾರೆ ಎಂಬ ಎಂದಿನ ಧನ್ಯವಾದ ಸಮರ್ಪಣೆಯ ಹೇಳಿಕೆಯ ನಂತರ, ಅದಕ್ಕಾಗಿ ನಾವು ಇವರಿಗೆ ಸ್ಮರಣಿಕೆಯನ್ನು ಕೊಟ್ಟು ಅಭಿ-'ನಂದಿ'ಸುತ್ತೇವೆ ಎಂಬ ಘೋಷಣೆಯೊಂದಿಗೆ ಸ್ಮರಣಿಕೆ ಬೇಡವೆಂದರೂ ಮಡಿಲು ಸೇರಿಕೊಳ್ಳುತ್ತದೆ. ಬೇಡವೆಂದರೂ.....???. ಹೌದು! ಕೆಲವು ಸ್ಮರಣಿಕೆಗಳನ್ನು ಸ್ವೀಕರಿಸಿದ ನಂತರ ಈ ಬೇಡವೆಂಬ ಮನೋಸ್ಥಿತಿ ಹೆಚ್ಚಿನವರಿಗೆ ಬಂದರೆ ಆಶ್ಚರ್ಯವೇನೂ ಇಲ್ಲ ಬಿಡಿ.

ಇತ್ತೀಚೆಗೆ ಹಾಗೇ ಆಯ್ತ. ಪರಿಚಿತರೊಬ್ಬರು ಒಂದು ಕಾರ್ಯಕ್ರಮಕ್ಕೆ ಕರೆದಾಗ, ಸ್ನೇಹ ಮತ್ತು ಒತ್ತಾಯಗಳೆರಡೂ ಸೇರಿದ ಕಾರಣದಿಂದ ನಾನು ಒಪ್ಪಿಕೊಂಡೆ. ಘಂಟೆಗಟ್ಟಲೆ ಭಾಷಣದ ಭೀಷಣ ಸಭೆಯ ಬಳಿಕ ಎಂದಿನಂತೆ ಸ್ಮರಣಿಕೆಯ ನೀಡಿಕೆ ಆರಂಭವಾಯ್ತು. ವೇದಿಕೆಯಲ್ಲಿದ್ದ ಹತ್ತು ಹನ್ನೆರಡು ಜನರಿಗೂ ಸ್ಮರಣಿಕೆಗಳನ್ನು ನೀಡಲಾಯ್ತು. ದೊಡ್ಡ ಪೊಟ್ಟಣದಲ್ಲಿ ಬಣ್ಣ ಬಣ್ಣದ  ಮಿನುಗುವ ಪೇಪರ್‌ಗಳಿಂದ ಸುತ್ತಿದ ಸ್ಮರಣಿಕೆಗಳು ಕೈ ಸೇರಿದುವು. ಮನೆಗೆ ಬರುತ್ತಲೇ ಮನುಷ್ಯ ಸಹಜ ಕುತೂಹಲ! ಎಷ್ಟು ಬೇಗ ಒಡೆದು ನೋಡುತ್ತೇನೆಯೋ ಎಂಬ ಹಪಹಪಿ. ಮನೆಯೊಳಗೆ ಕಾಲಿಡುತ್ತಲೇ ಅರ್ಧಾಂಗಿಯ ಕೈಯಲ್ಲಿ ಗಂಧದ ಮಾಲೆ ತುರುಕಿ, ಬಣ್ಣದ ಪೇಪರ್‌ನ ಕವರನ್ನು ರಪರಪನೇ ಹರಿದೆಸೆದೆ-ಒಳಗೇನಿದಯೋ ಎಂಬ ಕುತೂಹಲದಿಂದ! ಸ್ಮರಣಿಕೆ ಹೊರಬಂದಾಗ ಒಮ್ಮೆ ಕಣ್ಣುಜ್ಜಿಕೊಂಡು ಎರಡೆರಡು ಬಾರಿ ನೋಡಿದೆ. ಅದು ನಾನು ಸಂಬಂಧಿಸಿದ ಸಂಘಟಕರಿಗೆ ಕೆಲವು ದಿನಗಳ ಹಿಂದಿನ ಸಭೆಯೊಂದರಲ್ಲಿ ನೀಡಿದ್ದ ಸ್ಮರಣಿಕೆಯಾಗಿತ್ತು!. ಆದರೆ ಅದರ ಮೇಲೆ ನಾನು ಹೆಸರನ್ನೂ ಬರೆದ ಹಾಗೆ ನನಗೆ ನೆನಪಾಗಿ ನೋಡಿದರೆ, ಅದರ ಮೇಲೆ ತಮ್ಮ ಹೆಸರಿನ ಸ್ಟಿಕ್ಕರನ್ನು ಅಂದವಾಗಿ ಮುದ್ರಿಸಿ, ಗಮ್‌ಟೇಪ್‌ನಿಂದ ಹಚ್ಚಿಟ್ಟಿದ್ದರು! ಆದರೂ ಕುತೂಹಲ ತಡೆಯಲಾರದೇ, ಆ ಟೇಪ್‌ನ್ನೂ ಹರಿದು ನೋಡಿದರೆ, ನನ್ನ ಅಸಲಿ ಹೆಸರು ಬರೆಯಿಸಿದ ಜಾಗದಲ್ಲಿ ನನ್ನ ಹೆಸರು ರಾರಾಜಿಸುತ್ತಿತ್ತು-ನನ್ನನ್ನೇ ಅಣಕಿಸುವಂತೆ!!. ಆ ಕ್ಷಣವೇ ನಿರ್ಧಾರ ಮಾಡಿದೆ ಇನ್ನು ಯಾರಿಗಾದರೂ ನಾನು ಸ್ಮರಣಿಕೆ ಕೊಟ್ಟಿದ್ದರೆ ಅಂತಹ ಸಂಘಟಕರ ಸಭೆಗೆ ಹೋಗಬಾರದೆಂದು!. ಅಥವಾ ನೀಡಿದ ಸ್ಮರಣಿಕೆಗೆ ತಪ್ಪಿಯೂ ಹೆಸರು ಬರೆಯಬಾರದೆಂದು.
ಹಾಗೆಂದುಕೊಂಡು ನಾನು ಯಾವುದೇ ಸಂಘಟಕರನ್ನು ದೂರುವುದಿಲ್ಲ ಬಿಡಿ. ಯಾಕೆಂದರೆ ಈ ತರದ ಸ್ಮರಣಿಕೆಗಳನ್ನು ಸ್ವೀಕರಿಸುವವರ ಪಾಡು ಸ್ವೀಕರಿಸಿದವರಿಗಷ್ಟೇ ಗೊತ್ತು!. ಈಗೀಗಂತೂ ನಗರ ಪ್ರದೇಶಗಳಲ್ಲಿ ಬೆಂಕಿಪೊಟ್ಟಣದಂತ ಮನೆಗಳೇ ಜಾಸ್ತಿ. ಸರ್ಕಾರದವರು ಕಾನೂನು ತರದಿದ್ದರೂ, ನಾವಿಬ್ಬರು ನಮಗೊಬ್ಬರೇ ಎಂಬ ತತ್ವಕ್ಕೆ ನಾವು ಯಾವಾಗಲೋ ಅಂಟಿಕೊಂಡಾಗಿದೆ. ಹಾಗಿದ್ದೂ ದಿನ ದೂಡುವುದೇ ದುಸ್ತರವಾಗಿರುವ ಕಾಲದಲ್ಲಿ, ಮನೆಯೊಳಗೆ ಈ ಸ್ಮರಣಿಕೆಗಳಿಗೆ ಒಂದಿಷ್ಟು ಸ್ಥಳಾವಕಾಶ ಒದಗಿಸುವುದು ಆಗದ ಮಾತೇ ಸರಿ. ಪರಿಚಿತ ಲೇಖಕಿಯೊಬ್ಬರು, ತನ್ನ ಮನೆಯ ಗ್ಯಾಸ್‌ಸ್ಟವ್, ಮಂಚದಡಿ, ಅಡುಗೆ ಕೋಣೆ, ದೇವರ ಕೋಣೆ, ಹಳೆ ಪೆಟ್ಟಿಗೆಗಳು ಕೊನೆಗೆ ಎಲ್ಲಾ ಮುಗಿದು ಬಚ್ಚಲು ಮನೆಯಲ್ಲೂ ಇಂತಹ ಸ್ಮರಣಿಕೆಗಳನ್ನು ತುಂಬಿಟ್ಟುಕೊಂಡು, ಇನ್ನು ಯಾರಾದರೂ ಸ್ಮರಣಿಕೆಗಳನ್ನು ಕೊಡದೇ ಇದ್ದರೆ ಸಾಕಪ್ಪಾ ಎಂದುಕೊಳ್ಳುತ್ತಿದ್ದುದನ್ನೂ ಕೇಳಿದ್ದೇನೆ. ಇನ್ನು ಕೆಲವೊಮ್ಮೆ ವೇದಿಕೆ ಬಳಕೆದಾರರು ಎಂಬ ವರ್ಗವೊಂದಿರುತ್ತದೆ. ಅವರಿಗಂತೂ ಯಾವುದೇ ಸಾಧನೆಯ ಹೊರತಾಗಿಯೂ ವೇದಿಕೆಯನ್ನು ಬಳಸಿಕೊಳ್ಳುವುದೊಂದೇ ಮೊದಲ ಮತ್ತು ಕೊನೆಯ ಅಜೆಂಡಾ. ನಗರ ಅಥವಾ ಊರಿನ ಯಾವುದೇ ಸ್ಥಳಗಳಲ್ಲಿ ಸಭೆಸಮಾರಂಭಗಳು ನಡೆಯುತ್ತಿದ್ದರೆ, ಅಲ್ಲಿ ವೇದಿಕೆಯ ಮೇಲೆ ಇವರು ರಾರಾಜಿಸುತ್ತಿರುತ್ತಾರೆ!. ಅವರ ಬಗ್ಗೆ ಎಲ್ಲೆಡೆಯಲ್ಲೂ ಹೇಳಿ ಹೇಳೀ ಸಾಕಾದ ಅದೇ ಗುಣಗಾನದೊಂದಿಗೆ ಮತ್ತೆ ಸ್ಮರಣಿಕೆಗಳನ್ನು ನೀಡಲಾಗುತ್ತದೆ. ಇಲ್ಲಿ ಇರುವ ಒಂದು ಉಪಯೋಗವೆಂದರೆ, ಇವರಿಗೆ ಸ್ಮರಣಿಕೆಯ ಅಂತಹಾ ಮೋಹ ಇರುವುದಿಲ್ಲ. ಹಾಗಾಗಿ, ಯಾವುದಾದರೂ ಸಬೆಯಲ್ಲಿ ಈ ಮೊದಲೇ ಹಂಚಲಾದ ಸ್ಮಣಿಕೆಯನ್ನು ಹಂಚಿದರೂ ಅವರೇನು ಬೇಸರಿಸಿಕೊಳ್ಳುವುದಿಲ್ಲ! ಹೇಗಿದ್ದರೂ ವೇದಿಕೆ ಬಳಕೆದಾರರು ಬಳಕೆದಾರರ ವೇದಿಕೆಗೆ ದೂರನ್ನಂತೂ ನೀಡಲಾರರಲ್ಲವೇ?. ಅವರಿಗೆ ತೋರಿಕೆಗೆ ಸ್ಮರಣಿಕೆ ಕೊಟ್ಟರೆ ಸಾಕು-ಅದೆಂತದ್ದಾದರೂ ಸರಿ!. ವೇದಿಕೆಯ ಮೇಲೆ ಮಾತ್ರ ಅವರಿಗೆ ಒಂದು ಖಾಯಂ ಜಾಗ-ಅದೂ ಮುಖ್ಯವಾದ ಜಾಗ- ಮತ್ತು ಮಾತಾಡಲು ಅವರಿಗೆ ಅವರು ಬಯಸಿದಷ್ಟು ಸಮಯ ಕೊಟ್ಟರೆ ಸಾಕು. ಕೊನೆಗೊಂದು ಮಾಮೂಲಿ ಸ್ಮರಣಿಕೆ! ಇಂತಹಾ ವೇದಿಕೆ ಬಳಕೆದಾರರ ಮನೆಯಲ್ಲಿ ಕೆಜಿಗಟ್ಟಲೇ ಸ್ಮರಣಿಕೆಗಳು ಇರುತ್ತವೆ. ಯಾವುದಾದರೂ ಸಂಘಟಕರು ಇವರಲ್ಲಿ ಅರ್ಧಬೆಲೆಗೆ ಕೇಳಿದರೂ ಸ್ಮರಣಿಕೆಗಳು ಸಿಕ್ಕಬಹುದೇನೋ!!

ಈ ಎಲ್ಲಾ   ಆವಾಂತರ ನೋಡಿ, ಅವುಗಳನ್ನು ಇಡಲು ಸ್ಥಳ ಇಲ್ಲದವರ ಪೇಚಾಟ ಕಂಡು, ಒಂದು ಆಲೋಚನೆಯೂ ಬರುತ್ತಿದೆ. ನಗರದ ಯಾವುದಾದರೂ ಒಂದು ಪ್ರದೇಶದಲ್ಲಿ 'ಬಾಡಿಗೆ ಸ್ಮರಣಿಕಾ ಗ್ಯಾಲರಿ'ಯೊಂದನ್ನು ತೆರೆದರೆ ಹೇಗೆ?  (ಬೇಕಿದ್ದರೆ ಅದಕ್ಕೆ 'ಸ್ಮರಣಿಕಾ' ಎಂದೂ ಹೆಸರಿಸಬಹುದೇನೋ).ಮನೆಯಲ್ಲಿ ಜಾಗ ಇಲ್ಲದ ಪ್ರಸಿದ್ದರು, ಸ್ವಘೋಷಿತ ಪ್ರಸಿದ್ದರು, ಸಭೆಸಮಾರಂಭಗಳಲ್ಲಿ ನಿಯಮಿತವಾಗಿ ಭಾಗವಹಿಸುವ ವೇದಿಕೆ ಬಳಕೆದಾರರು, ಸ್ಮರಣಿಕೆ ಸಿಗುತ್ತಲೇ ಈ ಗ್ಯಾಲರಿಯಲ್ಲಿ ಅದನ್ನಿಟ್ಟು, ಒಂದು ಸಣ್ಣ ಮೊತ್ತವನ್ನು ಬಾಡಿಗೆಯಾಗಿ ನೀಡಿದರೆ, ಅವರ ಸ್ಮರಣಿಕೆಗಳಿಗೆಂದೇ ಒಂದು ಜಾಗ ಕಾದಿರಿಸಿ (ಹೆಸರನ್ನೂ ಬರೆಸಿ), ಪ್ರದರ್ಶನಕ್ಕಿಟ್ಟರೆ, ಒಂದು ಸಣ್ಣ ವ್ಯವಾಹಾರವೂ ಆಗಬಹುದೇನೋ. ತಮಗೆ ಸಿಕ್ಕ ಸನ್ಮಾನ ಪತ್ರ, ಶಾಲು ಹಾಗೂ ಸ್ಮರಣಿಕೆಗಳನ್ನು ತಮಗೆ ಕಾದಿರಿಸಿದ ಜಾಗದಲ್ಲಿರಿಸಿ, ಹೂ ಹಣ್ಣುಗಳಂತಹ 'ನಶ್ವರ' ವಸ್ತುಗಳನ್ನು ಮಾತ್ರ ಮನೆಗೆ ಒಯ್ದರೆ 'ಸ್ಮರಣಿಕಾ ಸ್ಥಳ ಸಮಸ್ಯೆ'ಯಿಂದ ಮುಕ್ತರಾಗಬಹುದೇನೋ!. ಖಾಸಗಿ ಅಥವಾ ಸರಕಾರಿ ಸಂಸ್ಥೆಗಳು ಈ ಬಗ್ಗೆ ಯೋಚಿಸಿದರೆ, ನನಗೊಂದು ಸ್ಮರಣಿಕೆ ನೀಡುವಲ್ಲಿ ಮರೆಯದಿದ್ದರಾಯ್ತು!.

ಇನ್ನು ಕೆಲವರಿಗೆ ಸ್ಮರಣಿಕೆ ತೆಗೆದುಕೊಳ್ಳುವ ಗೀಳಿನ ಹಾಗೆಯೇ  ನೀಡುವ ಗೀಳೂ ಇರುತ್ತದೆ. ಇತ್ತೀಚೆಗೆ ಹಾಗೇ ಒಂದು ಘಟನೆ ನಡೆಯಿತು. ಒಂದು ಸಮಾರಂಭ ಆಯೋಜಿಸಿದವರಿಗೆ ಇದೇ ಹುಚ್ಚು. ಸರಿ, ಸಭೆ ಮುಕ್ತಾಯದ ಹಂತಕ್ಕೆ ಬಂದಿತ್ತು. ನಾನು ಕಾರ್ಯಕ್ರಮ ನಿರೂಪಿಸುತ್ತಿದ್ದೆ. ಸ್ಮರಣಿಕೆ ನೀಡಬೇಕಾದವರ ಪಟ್ಟಿ ಹಿಡಿದು ಹೆಸರು ಕೂಗಿದೆ. ವೇದಿಕೆಯಲ್ಲಿ ಆಸೀನರಾಗಿದ್ದ ಆಯೋಜಕರು, ನಡುವೆ ಮೈಕ್ ಮುಂದೆ ನಿಂತು ತಮಗೆ ವೇದಿಕೆಯ ಮುಂಬಾಗದಲ್ಲಿ ಕಾಣುತ್ತಿದ್ದ ಪರಿಚಿತರನ್ನೆಲ್ಲಾ ಕರೆದು ಸ್ಮರಣಿಕೆ ನೀಡಲಾರಂಭಿಸಿದರು!. ಪರಿಸ್ತಿತಿ ಎಷ್ಟು ಹಾಸ್ಯಾಸ್ಪದ ಅಗಿತ್ತು ಎಂದರೆ, ಬಳಿ ನಿಂತ ಓರ್ವ ಸ್ನೇಹಿತರು, ಯಾರಾದರೂ ಸ್ಮರಣಿಕೆ ಸಿಗದವರಿದ್ದರೆ, ಬಂದು ಪಡೆಯಬಹುದು ಎಂದೊಂದು ಅನೌನ್ಸ್ ಮಾಡಿಬಿಡಿ ಎಂದು ತಮಾಷೆಯಾಗಿ ಹೇಳಿ ಬಾಯಿ ಮುಚ್ಚುವುದಕ್ಕೂ, ವೇದಿಕೆಯಲ್ಲಿದ್ದ ಆಯೋಜಕರು ಹಾಗೇ ಹೇಳಿಬಿಡಬೇಕೆ!?. ಅಯ್ಯೋ ಎಂದುಕೊಂಡು ಹಣೆ ಚಚ್ಚಿಕೊಂಡದ್ದನ್ನು ಕಂಡ ಅವರು, ಮಾನ್ಯ ಕಾರ್ಯಕ್ರಮ ನಿರೂಪಕರಿಗೆ ಸ್ಮರಣಿಕೆ ನೀಡುವಲ್ಲಿ ತಪ್ಪಿ ಹೋಯ್ತು; ನಾಳೆ ದಯವಿಟ್ಟು ಬಂದು ನಮ್ಮ ಮನೆಯಿಂದ ಅವರ ಸ್ಮರಣಿಕೆ ಪಡೆಯಬಹುದು ಎಂದೂ ಹೇಳಿದಾಗ, ನಾನು ಎಚ್ಚರ ತಪ್ಪುವುದೊಂದೇ ಬಾಕಿ!
ಈ ಪರಿಯ ಸ್ಮರಣಿಕಾ ಮಹಾತ್ಮೆಯ ಪ್ರಸಂಗಗಳು ನಿಮ್ಮ ಬಳಿಯೂ ಇರಬಹುದು ಎಂದುಕೊಂಡಿದ್ದೇನೆ. ಅಷ್ಟಕ್ಕೂ ಈ ಲೇಖನ ಓದಿದವರು ನನಗೆ ಸ್ಮರಣಿಕೆ ನೀಡಿ, ಸುಮ್ಮನಿರು ಎನ್ನಬಾರದಲ್ಲ? ಮುಗಿಸುತ್ತೇನೆ.

Wednesday, 1 January 2014

ಏಳುನೂರು ಲೀಟರ್ ನೀರು ಮತ್ತು ಮರಳಿ ಮನೆಯೆಡೆಗೆ...!!


01.01.2014ರ ಜನಪ್ರತಿನಿಧಿಯಲ್ಲಿ ಪ್ರಕಟವಾದ ನನ್ನ ಅಂಕಣ, 'ಪ್ರದಕ್ಷಿಣೆ'ಯ  ಲೇಖನ...... 


೨೦೧೩ರ ಕೊನೆ, ರಾಜಕೀಯವಾಗಿ ಎರಡು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು.....ಬಹುಶ: ಇವೆರಡನ್ನು 'ಮಹತ್ವ'ದ ಘಟನೆಗಳ ಸಾಲಿನಲ್ಲಿ ಸೇರಿಸಲು ಯಾರದಾದರೂ ತಕರಾರು ಇರಲೂ ಬಹುದಾದರೂ, ಎರಡನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ, ಇದು ಒಂದು ರೀತಿಯಲ್ಲಿ ಮಹತ್ವದ ವಿಚಾರವೇ!

ಅಣ್ಣಾ ಹಜಾರೆ ದೇಶದಲ್ಲಿ ಎಬ್ಬಿಸಿದ ಭ್ರಷ್ಟಾಚಾರ ವಿರೋಧಿ ಅಲೆ ಎಲ್ಲರಿಗೂ ಗೊತ್ತು. ಅವರ ಜಗುಲಿಯಿಂದ ಎದ್ದು ಹೋಗಿ, 'ರಾಜಕೀಯವಲ್ಲದ' ಪಕ್ಷ ಕಟ್ಟಿಯೇ ದೇಶದಲ್ಲಿನ ಕೊಳಕನ್ನು ಪೊರಕೆಯಿಂದ ಹೊಡೆದೋಡಿಸುವ ಹಟ ತೊಟ್ಟ, ಈ ಅರವಿಂದ ಕೇಜ್ರಿವಾಲ್ ಎಂಬ ಆಮ್ ಆದ್ಮಿ ಮಾಡಿದ ಬದಲಾವಣೆ, ಪ್ರಜಾ ಪ್ರಭುತ್ವದ ಮೇಲೆ ವಿಶ್ವಾಸವನ್ನು ಗಟ್ಟಿಗೊಳಿಸಿದೆ. ಜನ ಮರುಳಲ್ಲ, ರಾಜಕಾರಣಿಗಳ ಮರುಳುತನವನ್ನು ಹೊಡೆದೋಡಿಸಲು ಶಕ್ತರೆನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ......ಪ್ರಜಾ ಪ್ರಭುತ್ವ ಜಿಂದಾಬಾದ್.

ಅತ್ತ ದೆಹಲಿಯಲ್ಲಿ ಇಂತಾದ್ದೊಂದು ಕೌತುಕ ಘಟಿಸಿ, ಘಟಾನುಘಟಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಥರಗುಟ್ಟುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ, 'ಜನರಿಗೋಸ್ಕರ' ಭಾಜಪ ಬಿಟ್ಟು ಕೆಜೆಪಿ ಎಂಬ 'ಬಾಡಿಗೆ' ಪಕ್ಷ ಕಟ್ಟಿದ ಯಡ್ಯೂರಪ್ಪ ಮತ್ತೆ ಭಾಜಪದ ಬಾಗಿಲ ಬಳಿಗೆ ಬಂದುದು ಮತ್ತು ಇದನ್ನು ಅವರೇ 'ಬೇಷರತ್'ವಾಪಸಾತಿ ಎಂದು ಕರೆದದ್ದು, ಕರ್ನಾಟಕದ ಜನತೆಯ ಪಾಲಿಗೆ ನಗಲೋ, ಅಳಲೋ ಎಂದು ತಿಳಿಯಲಾರದ ಸಂದಿಗ್ಧ...ಈಗ ಈ ಎರಡೂ ಘಟನೆಗಳು ಅದು ಹೇಗೆ ಮಹತ್ವ ಎಂದು ವಿಮರ್ಶಿಸ ಹೊರಟರೆ........

ನಿಜ!. ಸ್ವತ: ಕೇಜ್ರಿವಾಲ್ ಮತ್ತು ಯಡ್ಯೂರಪ್ಪ ಇಬ್ಬರೂ ಆಲೋಚಿಸಿರದ, ಆದರೆ ಬಯಸಿದ್ದ ಫಲಿತಾಂಶ ಇದು!. ಆಮ್ ಆದ್ಮಿ ಎಂಬ ಪಕ್ಷ, ಪೊರಕೆ ಹಿಡಿದು ಹೊರಟಾಗ ಕೊಟ್ಟ ಭರವಸೆಯ ಮಹಾಪೂರ ಕಂಡ, ಚುನಾವಣೆಯಲ್ಲಿ ಭರವಸೆಗಳಿಂದಲೇ ಗೆಲುವು ಸಾಧಿಸುತ್ತಿದ್ದ ಹಳೆ ಪಕ್ಷಗಳು, ಫಕ ಪಕನೇ ನಕ್ಕದ್ದು, ಈಗ ಅವರ ಸ್ಥಿತಿಯನ್ನು ಕಂಡು ಗೊಳ್ಳೆಂದು ನಗುವಂತೆ ಮತದಾರ ಮಾಡಿದ್ದು, ಎರಡೂ ಸತ್ಯವೇ. ತಮ್ಮದು ಬಹುಮತವಲ್ಲದ ಪಕ್ಷ ಎಂಬ ಸಂಪೂರ್ಣ ಅರಿವಿನೊಂದಿಗೇ, ಯಾವ ಕಾಂಗ್ರೆಸ್‌ನ್ನು ಆರಂಭದಿಂದಲೂ ವಿರೋಧಿಸುತ್ತಿದ್ದರೋ, ಅದೇ ಕಾಂಗ್ರೆಸ್ ಬೆಂಬಲದೊಂದಿಗೆ ಮುಂದೆ ಹೆಜ್ಜೆ ಇಟ್ಟ ಕೇಜ್ರಿವಾಲ್ ಸಾಧನೆ-ಒಂದು ರೀತಿ ರಾಜಕೀಯ ಪ್ರಹಸನವೋ.....ಅಥವಾ ವಿಪರ್ಯಾಸ ಎನ್ನಬಹುದೇನೋ. ಇಲ್ಲಿ ಜನತಂತ್ರ ವ್ಯವಸ್ಥೆಯ ರಕ್ಷಣೆ ಮುಖ್ಯವೋ, ದೆಹಲಿ ಗದ್ದುಗೆಯ ಮೂಲಕ ಆಮ್ ಆದ್ಮಿಗೆ ಉತ್ತಮ ಸರಕಾರ ನೀಡುವುದು ಮುಖ್ಯವೋ ಅಥವಾ......ನಮಗೆ ಬೇಡಪ್ಪ ಅಧಿಕಾರದ ಗದ್ದುಗೆ ಎಂಬ ಮೂಲಕ ಮತ್ತೆ ಆಸೆ ಪಟ್ಟದ್ದು ಅಧಿಕಾರವನ್ನೇ ಎಂಬುದು ಮುಖ್ಯವೋ.....ಕಾಲವೇ ನಿರ್ಧರಿಸಬೇಕು. ದೆಹಲಿಗ ಅಂತೂ ಖುಷಿ ಪಟ್ಟಿದ್ದಾನೆ. ದಿನಕ್ಕೆ ಏಳು ನೂರು ಲೀಟರ್ ನೀರನ್ನು ಉಚಿತವಾಗಿ ಕುಡಿಸುವ ಕೇಜ್ರಿವಾಲ್ ಘೋಷಣೆ, ಹಾಲು ಕುಡಿದಂತೆ ಕಂಡರೂ, ಅದಕ್ಕೆ ಮಿಕ್ಕಿ ನೀರು ಕುಡಿಯುವವರಿಗೆ ಕಸಿವಿಸಿ ಉಂಟು ಮಾಡಿದೆ. ಇನ್ನೂ ಭರವಸೆಯ ಪಟ್ಟಿ ಬಹು ದೊಡ್ಡದಿದೆ.....ಕೇಜ್ರಿವಾಲ್ ಏನು  ಮಾಡುತ್ತಾರೆ ಎಂಬ ಕುತೂಹಲಕ್ಕಿಂತಲೂ, ಇಲ್ಲಿ ಕಾಂಗ್ರೆಸ್ ಅವರ 'ಕೈ'ಹಿಡಿದ ಬಗೆಗಿನ ಕುತೂಹಲ ಹೆಚ್ಚಿದೆ!!

ಹೌದು! ಕಾಂಗ್ರೆಸ್ ಪಕ್ಷ, ತನ್ನೊಳಗೆ ಅನೇಕ ಅಸಮಾಧಾನದ ಹೊಗೆಯನ್ನು ಹಾಕಿಕೊಂಡೇ ಕೇಜ್ರಿವಾಲ್ ಪರವಾಗಿ ನಿಂತಿದೆ-ಬಹಿರಂಗವಾಗಿ-ಬೇಷರತ್ ಆಗಿ!. ಅಂತರಂಗದಲ್ಲಿ ಯಾವ 'ಶರತ್ತು'ಗಳು ಕೇಜ್ರಿವಾಲ್ ಜೊತೆಗಿದೆಯೋ, ಅಥವಾ ಕಾಂಗ್ರೆಸ್ ಒಳಗೇ ಇದೆಯೋ, ಹೊರ ಬರುವುದಕ್ಕೆ ಹೆಚ್ಚು ದಿನ ಬೇಕಾಗುವುದಿಲ್ಲ!.  ಆದರೆ ಕೇಜ್ರಿವಾಲ್ ತಮ್ಮ ಯೋಜನೆಗಳನ್ನೆಲ್ಲಾ ಜಾರಿಗೊಳಿಸುವ ಹುಮ್ಮಸ್ಸಿನಲ್ಲಿ ಮುಂದುವರಿದರೆ ಮತ್ತು ಅವರಿಗೂ ಒಳಗೊಳಗೇ ತಮ್ಮದು ಅಲ್ಪಕಾಲ ಬಾಳಬಹುದಾದ ಸರಕಾರ ಎಂಬ ಅರಿವಿದ್ದರೆ, ದೆಹಲಿಯ ಆರ್ಥಿಕ ಕೋಶ ಬರಿದಾಗುವುದಕ್ಕೂ ಹೆಚ್ಚು ದಿನ ಬೇಕಾಗುವುದಿಲ್ಲ. ಇದನ್ನೂ ಒಂದು ಮುಖ್ಯ ಉದ್ದೇಶವವಾಗಿಟ್ಟುಕೊಂಡೇ, ಮುಂದಿನ ಲೋಕಸಭಾ ಚುನಾವಣೆಗೆ ಈ ಬೆಂಬಲವನ್ನು ಮೆಟ್ಟಿಲಾಗಿ ಕಾಂಗ್ರೆಸ್ ಉಪಯೋಗಿಸಿಕೊಳ್ಳಬಹುದೇ?? ಅಚ್ಚರಿ ಇಲ್ಲ ಮತ್ತು ರಾಜಕೀಯದಲ್ಲಿ ಅದು 'ಸಾಧು'ವೂ ಹೌದು.
ಇದೊಂದು ಮುಖವಾದರೆ ಮತ್ತೊಂದು ಮುಖ ಬಹು ಚರ್ಚಿತವಾಗಲೇ ಬಾಕಾಗಿದ್ದು. ಆಮ್ ಆದ್ಮಿಯ ಜಯ, ನಿಜಕ್ಕೂ ಆಮ್ ಆದ್ಮಿಯದ್ದೇ, ಅಥವಾ ಶೀಲಾ ದೀಕ್ಷಿತ್ ವಿರೋಧವಾದದ್ದೇ ಅಥವಾ ರಾಹುಲ್-ಸೋನಿಯಾ ವಿರುದ್ಧವಾದುದೇ ಎಂಬುದೂ ಮತ್ತೊಂದು ಪ್ರಶ್ನೆ. ಚುನಾವಣೆಗೆ ಮುನ್ನ, ಸೋತ ಪ್ರಮುಖ ಪಕ್ಷಗಳೂ ಸೇರಿ ಎಲ್ಲರೂ ಇದನ್ನು ಲೋಕಸಭಾ ಚುನಾವಣೆಯ ಫಲಿತಾಂಶದ ಮುನ್ನೋಟ ಎಂದೇ ಪರಿಗಣಿಸಿದ್ದರು. ಚುನಾವಣೆ ಮುಗಿದು ಫಲಿತಾಂಶ ತಿರುವು ಮುರುವಾದಾಗ, ಇದು ಅದಲ್ಲ ಬಿಡಿ, ಅದೇ ಬೇರೆ, ಇದೇ ಬೇರೆ ಎಂದು ಇವರೇ ಹೇಳಲೂ ಆರಂಭಿಸಿದ್ದಾರೆ. ಒಳಗೊಳಗೇ, 'ಮೋದಿ'ಸುವವರೂ, 'ಮೋಹಿ'ಸುವವರೂ ತಲ್ಲಣಗೊಂಡಿದ್ದಾರೆ. ಇಬ್ಬರದ್ದು ಒಂದೇ ಯೋಚನೆ, ತಮ್ಮ ಆಮ್ ಆದ್ಮಿಗೆ ಕೊಡುವ ಬೆಂಬಲವನ್ನು ಜನ ಅನು 'ಮೋದಿ'ಸುತ್ತಾರೊ, ಮನ 'ಮೋಹಿ'ಸುತ್ತಾರೋ ಎಂಬ ಗೊಂದಲ. ಅಂತೂ 'ಮೋಹಿಸುವ' ಹುಮ್ಮಸ್ಸಿನವರು ಇದನ್ನೇ ಬಂಡವಾಳ ಮಾಡಿಕೊಳ್ಳಲು ಆಮ್ ಆದ್ಮಿಗೆ ಬೆಂಬಲ ಕೊಟ್ಟರೆ, 'ಮೋದಿ'ಸುವವರು ಬೇರೆಯೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ....

ಹೀಗೆ ಬೇರೆಯೇ ಲೆಕ್ಕಾಚಾರದಲ್ಲಿಯೇ ಕರ್ನಾಟಕದಲ್ಲಿ ಕೆಜೆಪಿಗೆ 'ಶಟರ್'ಎಳೆಯಲಾಗಿದೆ! ಯಡ್ಯೂರಪ್ಪನವರನ್ನು ಮತ್ತೆ ಕರೆಸೋಣ ಎಂಬ ಕೂಗು, ಕಳೆದ ಬಾರಿ ತಮ್ಮ 'ಒಳಜಗಳ'ಎಂಬ ಹರಿವಾಣದಿಂದ. 'ಕೈ'ಗೆ ಅಧಿಕಾರ ಹಸ್ತಾಂತರಿಸಿದ ಭಾಜಪಮಣಿಗಳಿಂದ ಆರಂಭವಾಗಿದ್ದು, ವರ್ಷಾಂತ್ಯದಲ್ಲಿ ಯಡ್ಯೂರಪ್ಪನವರನ್ನು ಒಂದು 'ಹದ'ಕ್ಕೆ ತಂದು ನಿಲ್ಲಿಸಿದೆ!. 'ಈ ಜನ್ಮದಲ್ಲಿ ಭಾಜಪ ಇನ್ನು ಮುಚ್ಚಿದ ಬಾಗಿಲು', ಯಾರೇ ಕರೆದರೂ ಪ್ರಾಣ ಬಿಟ್ಟೇನು, ಭಾಜಪ ಸೇರೆನು', 'ನನ್ನ ಬೆಂಬಲಿಗರಿಗೆ ಬೆಲೆ ಇಲ್ಲದ ಪಕ್ಷ ನನಗೆ ಬೇಕಿಲ್ಲ', 'ನಾನಾಗಿ ಭಾಜಪದ ಕದ ತಟ್ಟುವುದಿಲ್ಲ ಮತ್ತು ನನಗದು ಅನಿವಾರ್ಯವೂ ಅಲ್ಲ'......ಇರಲಿ ಬಿಡಿ, ಇಂತಹಾ ಸಾಲು ಸಾಲು ಹೇಳಿಕೆಗಳನ್ನು ಪತ್ರಕರ್ತರು ದಾಖಲಿಸಿಕೊಂಡು ಪ್ರಸಾರ ಮಾಡಿದ್ದು ಎಲ್ಲರಿಗೂ ಗೊತ್ತು!. ಇದನ್ನು ಯಾರು ಯಾರಿಗೆ ಹೇಳಿದರು ಎಂಬ ಪ್ರಶ್ನೆಗೆ ರಾಜಕೀಯ ಅರಿಯದ ಮಕ್ಕಳೂ ಥಟ್ಟೆಂದು ಯಡ್ಯೂರಪ್ಪ, ಕರ್ನಾಟಕದ ಜನತೆಗೆ ಹೇಳಿದ್ದು ಎಂದು ಉತ್ತರಿಸುತ್ತಾರೆ.
ಉತ್ತಮ ರಾಜ್ಯಾಭಾರ ಮಾಡಿ, ಕರ್ನಾಟಕವನ್ನು ಗುಜರಾತ್ ಮಾಡುವ ಮಾತಾಡುತ್ತಾ, ಯಡ್ಯೂರಪ್ಪ ಏನೇನು  ಮಾಡಿದರು ಎಂದು  ಜನರಿಗೂ ಗೊತ್ತು, ಭಾಜಪಕ್ಕೂ ಗೊತ್ತು. ವಿಧಾನ ಸಭಾ ಚುನಾವಣೆಯಲ್ಲಿ ಇದಕ್ಕೆ ಎಲ್ಲರೂ ಊಟ ಮಾಡಿದ್ದೂ ಆಯ್ತು!. ಮಂಗ ತಾನು ತಿಂದ ಏನನ್ನೋ ಮತ್ತೊಂದರ ಮುಖಕ್ಕೆ ಒರೆಸಿತ್ತಂತೆ. ಇಲ್ಲಿಯೂ ಹಾಗೆಯೇ, ಇಬ್ಬರೂ ಸೋತು ಸುಣ್ಣವಾದರೂ, ಬೈದುಕೊಂಡದ್ದು ಪಾತ್ರ ಪರಸ್ಪರರಿಗೆ. ಆದರೆ ಆ ಬೈಗುಳದಲ್ಲಿಯೂ ಮೊದಲು ಕ್ಷೀಣವಾಗಿ, ಮತ್ತೆ ತುಸು ಗಟ್ಟಿಯಾಗಿ, ಕೊನೆಗೆ ಬೊಬ್ಬೆಯಾದದ್ದು 'ಯಡ್ಯೂರಪ್ಪ, ಮರಳಿ ಮನೆಗೆ ಬಾ' ಎಂಬ ಘೋಷಣೆ. ಕೂಗಿದವರೂ, ಕೂಗಿಸಿಕೊಂಡವರೂ ಇದಕ್ಕೇ ಕಾದಿದ್ದವರು. ಯಾವ ಜನತೆಯ ಸೇವೆಯ ಅವಕಾಶದಿಂದ  ವಂಚಿತರಾದ ನೋವಿನಿಂದ ಭಾಜಪ ಒಡೆದಿದ್ದರೋ, ಯಾವ ಜನತೆಯ ಹಿತದೃಷ್ಟಿಯಿಂದ ಪಕ್ಷ ತೊರೆದಿದ್ದರೋ,  ಜನತೆಯನ್ನು ದೋಚಿದವರು ಪಕ್ಷದಿಂದ ಹೋಗಲಿ ಬಿಡಿ ಎಂದು ಯಾರು ಬೊಬ್ಬೆ ಹೊಡೆದಿದ್ದರೋ.....ಯಾರೂ ಭಾಜಪಕ್ಕೆ ಅನಿವಾರ್ಯರಲ್ಲ ಎಂದು ಯಾರೆಲ್ಲಾ ಕೂಗಿದ್ದರೋ, ಭಾಜಪಕ್ಕೆ ಪಕ್ಷ ಮುಖ್ಯ, ವ್ಯಕ್ತಿ ಎಲ್ಲ ಎಂದು ಯಾರೆಲ್ಲಾ ಹಾರಾಡಿದ್ದರೋ.....ಎಲ್ಲರದ್ದೂ ಈಗ ಒಂದೇ ಮನ- ಒಂದೇ ಮಾತು...ಯಡ್ಯೂರಪ್ಪ ಮರಳಿ ಬರಲಿ!!. ಯಡ್ಯೂರಪ್ಪನವರದ್ದೂ ಒಂದೇ ಮಾತು, ಭಾಜಪದ ಬಾಗಿಲು ತೆರೆದರೆ ಸಾಕು!!

ಫಲಿತಾಂಶ  ಎದುರಿಗಿದೆ. ರಾಜಕಾರಣದಲ್ಲಿ ಈ ಮಾತನ್ನು ಯಾರು 'ಹುಟ್ಟಿಸಿದರೋ'ಗೊತ್ತಿಲ್ಲ-ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ!!. ಜಗತ್ತೇ ತಲೆ ಮೇಲೆ ಬೀಳಲಿ, ಈ ರಾಜಕಾರಣಿಗಳು 'ಈ ಒಂದು ಮಾತಿಗೆ' ಮಾತ್ರ ಯಾವಾಗಲೂ ಬದ್ಧರು. ಅದೇ ಇಲ್ಲೂ ಆಗಿದೆ.

'ಬೇಷರತ್' ಆಗಿ ಯಡ್ಯೂರಪ್ಪ ಈಗ ಭಾಜಪಕ್ಕೆ ಮರಳುತ್ತಿದ್ದಾರೆ. 'ಬೇಷರತ್' ಆಗಿ ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಕೊಟ್ಟಿದೆ. 'ಬೇಷರತ್' ಆಗಿ ಮತದಾರ ಎಲ್ಲವನ್ನೂ ಗಮನಿಸುತ್ತಿದ್ದಾನೆ.!!

ಈಗ ಯೋಚಿಸಬೇಕಾದ್ದು ಈ ಎರಡೂ 'ರಾಜಕೀಯ'ಘಟನೆಗಳ ಮಹತ್ವವನ್ನು. ಈಗ ನಿಜಕ್ಕೂ ಎದುರಿಗೆ ಬರುತ್ತಿರುವ ಪ್ರಶ್ನೆಗಳೇ ಎರಡು. ದೆಹಲಿ ಸರಕಾರ ಭ್ರಷ್ಟಾಚಾರ ಓಡಿಸುತ್ತಾ? ಏಳು ನೂರು ಲೀಟರ್ ನೀರಿನ ಜೊತೆಗೆ ಉಳಿದ ಭರವಸೆಗಳನ್ನು ಅಲ್ಲಿನ ಕೇಜ್ರಿವಾಲ್ ಈಡೇರಿಸುತ್ತಾರಾ?. ಜನತೆ ಇಟ್ಟ ಈ ವಿಶ್ವಾಸವನ್ನು ಅವರು ಕೊನೆತನದ('ಬೇಷರತ್' ಬೆಂಬಲದ ಕಾಂಗ್ರೆಸ್ ಬಿಟ್ಟರೆ!) ಉಳಿಸಿಕೊಳ್ಳುತ್ತಾರಾ??. ಈ ಪ್ರಶ್ನೆಗೆ ಈ ರಾಜಕೀಯ ಬದಲಾವಣೆಯಲ್ಲಿ 'ಸಕಾರಣ' ಉತ್ತರ ಸಿಕ್ಕದರೆ, ೨೦೧೩ರ ಕೊನೆಯಲ್ಲಿ ನಡೆದ ರಾಜಕೀಯ ಬದಲಾವಣೆ, ದೇಶದ ಇತಿಹಾಸದಲ್ಲಿ ಮುಂದೆಂದಿಗೂ ಅಳಿಸಲಾರದ ಅಕ್ಷರಗಳಲ್ಲಿ ದಾಖಲಾಗಲಿದೆ!!. ಒಂದೊಮ್ಮೆ ಇದಕ್ಕೆಲ್ಲಾ ಉತ್ತರ ಋಣಾತ್ಮಕವಾದರೆ...??. ಆಗಲೂ ಒಂದು ದಾಖಲೆಯಾಗುತ್ತದೆ! ರಾಜಕೀಯದಲ್ಲಿ  ಬದುಕಬೇಕಾದರೆ, 'ರಾಜಕಾರಣಿ'ಯಾಗಿಯೇ ಬದುಕಬೇಕು, ಆಮ್ ಆದ್ಮಿ ಆದರೆ ಸಾಕಾಗದು!. ಇಂದಿನ ಪ್ರಜಾಪ್ರಭುತ್ವದಲ್ಲಿ 'ರಾಜಕಾರಣಿ'ಎಂಬುದಕ್ಕೆ ಈಗಾಗಲೇ ಪ್ರಚಲಿತದಲ್ಲಿರುವ ವ್ಯಾಖ್ಯಾನದಂತೆಯೇ 'ರಾಜಕಾರಣಿ'ಯಾಗಬೇಕು ಎಂಬುದು ಇದರೊಳಗಿನ ಮರ್ಮ. ಇಂದು ಕೇಜ್ರಿವಾಲ್ ಅವರನ್ನು ಜನ ಆಮ್ ಆದ್ಮಿ ಎಂದು ಗುರುತಿಸಿ, 'ರಾಜಕಾರಣಿ'ಯನ್ನಾಗಿ ಮಾಡಿದ್ದಾರೆ. ಕೇಜ್ರಿವಾಲ್ 'ರಾಜಕಾರಣಿ'ಯಾಗುತ್ತಾರಾ ಎಂಬದು ಈಗಿನ ಯಕ್ಷ ಪ್ರಶ್ನೆ!!!.. ಇನ್ನು ಯಡ್ಯೂರಪ್ಪನವರ ಬಗ್ಗೆ...? ಈ ವಾಪಸಾತಿಯೂ ಮಹತ್ವದ್ದೇ!. ಕೇಜ್ರಿವಾಲ್ ಇಂದು ಕಾಂಗ್ರೆಸ್ ಬೆಂಬಲದಿಂದ ಸರಕಾರ ರಚಿಸಿದ್ದಾರೆ. ಮುಂದೆ ಅವರು ಆಮ್ ಆದ್ಮಿಯಾಗಿಯೇ ಉಳಿಯುತ್ತಾರಾ ಅಥವಾ ಕಾಲ ಕ್ರಮಿಸಿದಂತೆ, ಅಧಿಕಾರ ಅವರ ಮುಷ್ಟಿಯಲ್ಲಿ ನಲುಗಿದಂತೆ, ಯಡ್ಯೂರಪ್ಪನಾಗಿ ಬದಲಾಗುತ್ತಾರಾ.....???!!!. ಮತ್ತೊಂದು ಯಕ್ಷ ಪ್ರಶ್ನೆ...
ಈಗ ಹೇಳಿ, ಏಳುನೂರು ಲೀಟರ್ ನೀರು ಮತ್ತು ಮರಳಿ ಮನೆಯೆಡೆಗೆ ಹೊರಟ ಈ ಘಟನೆಗಳು,  ರಾಜಕೀಯವಾಗಿ ವರ್ಷದ ಕೊನೆಯ ಮಹತ್ವದ ಘಟನೆಗಳಲ್ಲವೇ..??