Thursday, 13 August 2015

ಸಮಾಧಿಯೊಳಗಿನ ಪ್ರಶ್ನೆ ...!!!

ಇತ್ತೀಚೆಗೆ ಬರೆದ ಕವನ..... ಸತ್ಯವಿರಬಹುದೇನೋ....ಅಲ್ಲಿ...
ಯಾರದ್ದೋ ಸಮಾಧಿ ಮೇಲೆ
ಎದ್ದು ನಿಂತಿದೆ ಬಂಗಲೆ-
ಇಂದದರ ಪ್ರವೇಶವಂತೆ!!
ಸಂಭ್ರಮವೋ ಸಂಭ್ರಮ!
ಒಳಗಿನ ಆತ್ಮ ಕಣ್ಣುಜ್ಜಿ
ಕಣ್ತೆರೆದು ಹೊರ ನೋಡುತಿತ್ತು
ಇವರಲ್ಲವೇ ಮಣ್ಣು ಮಾಡುವಾಗ
ಅತ್ತವರು-ಜಗ ಬಿರಿಯುವಂತೆ!!
ಅಲ್ಲಿ...
ಬಂಗಲೆಯ ತುತ್ತ ತುದಿಯಲ್ಲಿ
ಕುಳಿತಿದ್ದ ಕಾಗೆಯನು ಕಂಡರಾರೋ!
ಎಸೆದು ಬಿಡಿ ಒಂದು ತುತ್ತು
ಸಮಾಧಾನವಾಗಲಿ ಆತ್ಮ...!
ಮತ್ತೆ ಬಡಿಸೋಣ ಭೂರಿ
ಭೋಜನವ ನಮ್ಮೆಲೆಗೆ!!
ಅಲ್ಲಿ...
ಆತ್ಮ ನಕ್ಕಿತು, ತನ್ನವರ ಕುಟಿಲತೆಗೆ
ಅಲುಗಾಡಲಾರದೇ ಬಂಗಲೆಯ
ಗಟ್ಟಿ ತಳಪಾಯದೊಳಗೆ!!
ಕಣ್ಮುಚ್ಚಿತು ಮತ್ತೆಂದೂ
ತಪ್ಪಿಯೂ ತೆರೆಯದ ಹಾಗೆ!


Monday, 15 June 2015

ವ್ಯತ್ಯಾಸಗಳು---ಹೀಗೇ ಟೈಂ ಪಾಸ್

ಕಡತದಲ್ಲಿ ಹುಡುಕಿದಾಗ ಎಂದೋ ಬರೆದಿದ್ದ ಒಂದು ಚಿಕ್ಕ ಬರಹ ಕಾಣಿಸಿತು... ಬ್ಲಾಗ್ ಸಂಗ್ರಹಕ್ಕಿಳಿಸಿದ್ದೇನೆ... ಓದಿ ಬಿಡಿ.. 
ನೈಜತೆ:-
ಬೆಂಗಳೂರಿನ ಮಹಿಳೆಯ ಹ್ರದಯವೊಂದು ಚೆನ್ನೈನಯುವಕನೋರ್ವನ ಬದುಕನ್ನು ಹಸನುಗೊಳಿಸಿದ ಘಟನೆ ನಾವು ಓದಿದ್ದೇವೆ. ಇನ್ನೂ ವಿಶೇಷ ಎಂದರೆ ಹ್ರದಯ, ಕಿಡ್ನಿ, ಕಣ್ಣು ಮತ್ತು ಲಿವರ್ ಗಳ ಮೂಲಕ ಆ ಮಹಿಳೆ ಆರುಜನರಿಗೆ ಹೊಸ ಜೀವನ ಕೊಟ್ಟಿದ್ದಾಳೆ.ಒಂದುತ್ಯಾಗಕ್ಕಿರುವ ಶಕ್ತಿ ಮತ್ತು ಮಹತ್ವವನ್ನು ಈ ಘಟನೆ ಹೇಳುತ್ತದೆ.ಅದರಲ್ಲೂ ಓರ್ವ ಮಹಿಳೆ ಈ ರೀತಿಯ ಉದಾತ್ತತೆ ಮೆರೆದಿದ್ದಾಳೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಕಣ್ಣುತೆರೆಸಿದ ಈ ಘಟನೆಯ ಜೊತೆಗೆ ಒಂದು ದೃಷ್ಟಾಂತ ಮತ್ತು ಕೊನೆಯಲ್ಲಿ ನಾನೇ ಹೆಣೆದ ಬರಹ ನಿಮಗಾಗಿ...!!
***
ದ್ರಷ್ಠಾಂತ-೧ (ಹಳೆ ಕಥೆ)
(ಸಂಗ್ರಹಿಸಿದ್ದು)


ಆಕೆಗೆ ತೀರಾ ವಯಸ್ಸಾಗಿದೆ.ಮಗ ನೋಡಿದ.ಇನ್ನು ಈಕೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದೇ ಸೂಕ್ತ ಎಂದುಕೊಂಡು, ಒಂದು ದಿನ ಸೇರಿಸಿ ಬಂದೂ ಬಿಟ್ಟ.ಒಂದೆರಡು ವರ್ಷಗಳುರುಳಿದುವು. ಆಕೆಗೆ ಅನಾರೋಗ್ಯ...ಕೊನೆಯಕ್ಷಣ. ಕೊನೆಯ ಆಸೆ ಕೇಳಲಾಯಿತು.ಒಮ್ಮೆ ಮಗನನ್ನು ನೋಡುವ ಬಯಕೆ ಇದೆ ಎಂದಿತು ಆ ಮುದಿ ಜೀವ. ಮಗ ಓಡೋಡಿ ಬಂದ.’ಮಗನೇ, ಆಸೆಯೊಂದಿದೆ, ನಡೆಸಿಕೊಡುವೆಯಾ’ ಎಂದಳು ತಾಯಿ. ’ಹೇಳಮ್ಮ, ಎಷ್ಟು ಲಕ್ಷಖರ್ಚಾದರೂ ಪರವಾಗಿಲ್ಲ, ಮಾಡುವೆ’ಎಂದ ಮಗ. ನಗುತ್ತಾಅವನನ್ನು ಬಳಿಕರೆದ ತಾಯಿ ಎಂದಳು, ’ಏನೂ ಬೇಡ ಮಗುವೇ. ಇಲ್ಲಿ ವಿಪರೀತ ಸೆಖೆ. ಒಂದಷ್ಟು ಫ್ಯಾನ್‌ಗಳನ್ನು ಹಾಕಿಸು.ಚಳಿಗಾಲದಲ್ಲಿ ಸ್ನಾನವೇ ಕಷ್ಟ.ಗೀಸರ್‌ಇಲ್ಲ, ಒಂದೆರಡು ಗೀಸರ್ ಕೊಡಿಸಿದರೆ ಉತ್ತಮ. ಹೊದ್ದುಕೊಳ್ಳಲು ಬಟ್ಟೆಯೂ ಇಲ್ಲ. ಒಂದಷ್ಟು ಹೊದಿಕೆ ಕೊಡು.....’ ತಾಯಿ ಹೇಳುತ್ತಿದ್ದರೆ ಮಗನಿಗೆ ಅಚ್ಚರಿ.’ಎಲ್ಲಾ ಸರಿಅಮ್ಮಾ, ನಿನಗೂ ಗೊತ್ತು, ನಿನ್ನದಿದು ಕೊನೆಗಾಲ...ಇದೆಲ್ಲಾ ಯಾರಿಗೆ?’.ತಾಯಿಯ ಹ್ರದಯ ಭಾರವಾಗುತ್ತದೆ, ಕಣ್ಣಲ್ಲಿ ಕಣ್ಣೀರು, ನಿಧಾನವಾಗಿ ನಡುಗುವ ಧ್ವನಿಯಲ್ಲಿ ಹೇಳುತ್ತಾಳೆ, ’ಮುಂದೆ ನಿನ್ನ ಮಕ್ಕಳು ನಿನ್ನನ್ನು ಇಲ್ಲಿ ಬಿಟ್ಟಾಗ ಈ ಕಷ್ಟಗಳು ನಿನಗೆ ಬರಬಾರದಲ್ಲ ಮಗುವೇ, ಅದಕ್ಕೆ!!’

***


ದ್ರಷ್ಠಾಂತ-೨ (ಮತ್ತೂ ಹಳೆ ಕಥೆ)
(ಇದನ್ನೂ ಸಂಗ್ರಹಿಸಿದ್ದು)

’ನಿನ್ನನ್ನೇ ಪ್ರೀತಿಸುತ್ತೇನೆ.....ಜೀವಕ್ಕಿಂತಲೂ ಮಿಗಿಲಾಗಿ’-ಆತ ಹೇಳಿದ
’ಹೌದಾ..ನಿಜವಾಗ್ಲೂ??’ಕುತೂಹಲ ಮತ್ತುಅಚ್ಚರಿ ಆಕೆಗೆ
’ಹೇಗೆ ತೋರಿಸಲಿ ಹೇಳು- ಆತನ ಸವಾಲು
’ನಿನ್ನಅಮ್ಮನ ಹ್ರದಯವನ್ನು ನನಗೆ ತಂದುಕೊಡು, ನಂಬುತ್ತೇನೆ' ಆಕೆಯಮರುಸವಾಲು

ಮಗ ಹೊರಟ.ಅಮ್ಮನ ಬಳಿ ಹೋದ.’ಮಗನೇ ಬಾ, ನಿನಗಾಗಿಯೇ ಕಾಯುತ್ತಿದ್ದೆ, ಊಟ ಮಾಡು’ತಾಯಿಯ ಮಾತು ಮುಗಿಯುವ ಮುನ್ನವೇ ಆತ ಅವಳ ಎದೆ ಬಗೆದ. ಹಸಿ ಹಸಿಯಾಗಿ ಆ ಹ್ರದಯವನ್ನು ಕೈಯಲ್ಲಿ ಹಿಡಿದು ಪ್ರಿಯತಮೆಗೆ ತೋರಿಸಲೆಂದು ಅವಸರದಓಟ ಅವನದ್ದು.

ದಾರಿಯಲ್ಲಿಕಲ್ಲೊಂದಕ್ಕೆಎಡವಿದ. ಬಿದ್ದು ಬಿಟ್ಟ.ಆಗ ಕೈಯಲ್ಲಿದ್ದ ಹ್ರದಯ ಅಷ್ಟು ದೂರ ಬಿತ್ತು.ಬಿದ್ದವ ಎದ್ದು ಸಾವರಿಸಿಕೊಂಡು ಮತ್ತೆ ಹ್ರದಯ ಹೆಕ್ಕಿದಾಗ ಅದು ಹೇಳಿತು 'ಅಯ್ಯೋ ಮಗನೇ, ನಿಧಾನ...ಬಿದ್ದು ಬಿಟ್ಟೆಯಾ, ನೋವಾಯ್ತಾ!!...'
***
ದ್ರಷ್ಟಾಂತ-೩(ಹೊಚ್ಚ ಹೊಸ ಕಥೆ)

(ನಾನೇ ಬರೆದದ್ದು!!)


ಆತ ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದ.ಆಕೆಯೂ ಆತನನ್ನು...ಜೀವದಂತೆ!
ಊರಿಡೀ ಸುತ್ತಿದರು, ಮಾಲ್‌ಎಲ್ಲಾ ಮುಗಿಯಿತು.ಯಾವುದೋ ನೆಪದಲ್ಲಿ ಒಂದೆರಡು ತಿರುಗಾಟ, ರೆಸಾರ್ಟ್, ಲಾಡ್ಜ ಎಲ್ಲಾ ವಾಸ.
ಆತ ಪ್ರೀತಿಯ ಹೊಳೆ ಹರಿಸಿದ.ಆಕೆ ಅದರಲ್ಲಿ ಮಿಂದೆದ್ದಳು.
ಒಂದು ಸಂಜೆ, ತಾಯಿ ಹೇಳಿದಳು, ’ಮಗಳೇ, ನಿನ್ನನ್ನು ನೋಡಲು ನಾಳೆ ಹುಡುಗ ಬರುತ್ತಿದ್ದಾನೆ. ಅಗರ್ಭ ಶ್ರೀಮಂತ.ಅವನನ್ನು ಒಪ್ಪು'
ಅತ್ತಳು, ಗೋಗರೆದಳು...ಮಗಳ ಮಾತುಯಾರೂ ಕೇಳಲಿಲ್ಲ.
’ಅರೆ, ಹುಡುಗ ಬಹು ಸುಂದರ, ಸಂಭಾವಿತನೂ ಇರಬಹುದು. ಹಣ..ಕೊಳೆವಷ್ಟಿದೆ!.ಅವನೋ, ನನ್ನ ಹಾಗೆ ಬೇರೆಯವರ ಜೊತೆಗೂ ಇರಬಹುದು...ಇವನೇ ವಾಸಿ ' ಹುಡುಗಿ ಎಂದುಕೊಂಡಳು.
ಬೈ ಬೈ ಹೇಳಿದ ಹುಡುಗಿಯ ನೆನಪಲ್ಲಿ ಆತ ಈಗ ವಿರಹಿ.ಆದರೂ ಹಠ-ಛಲವಾದಿ. ಬಹು ಕಷ್ಟ ಪಟ್ಟು ಕೆಲವೇ ದಿನದಲ್ಲಿಆತ ಶ್ರೀಮಂತ..ಅಗರ್ಭ ಶ್ರೀಮಂತ!
ಏನಾಯ್ತೋ, ಸುರ ಸುಂದರಾಂಗ ಕೈ ಕೊಟ್ಟ. ನಿಶ್ಚತಾರ್ಥ ಮುಗಿಸಿದ, ಮದುವೆಯು ಆಯಿತು...     ಕೆಲವು ಕಾಲ ಅಕೆಯೊಂದಿಗೆ ಸುತ್ತಾಡಿ ಹುಡುಗಿ ಒಲ್ಲೆ ಎಂದ. ಡೈವೋರ್ಸ್ ಪತ್ರ ನೀಡಿದ... 
ಹುಡುಗಿಗೆ ಆಕಾಶವೇ ತಲೆ ಮೇಲೆ. ಆದರೆ ಸಮಾಧಾನ....ನನ್ನ ಪ್ರಿಯಕರ ನನ್ನ ಕೈ ಬಿಡಲೊಲ್ಲ! ಆತನೂ ಈಗ ಶ್ರೀಮಂತ-ಹ್ರದಯದಲ್ಲೂ!!.ಓಡಿ ಬಂದಳು, ಕೈ ಹಿಡಿದು ಹೇಳಿದಳು.... ’ನಿನ್ನೇ ಪ್ರೀತಿಸುವೆ
ಹುಡುಗ ಕಕ್ಕಾವಿಕ್ಕಿ. ಕೈ ಕೊಡವಿದ. ’ಮನಸ್ಸು ಮುರಿದಿದೆ...ಅಜೀವ ಪರ್ಯಂತ ನಾನು ಬ್ರಹ್ಮಾಚಾರಿ..ಮದುವೆಒಲ್ಲೆ!!’
ಈಗ, ಹುಡುಗ ಅತ್ಯಾಚಾರದ ಆರೋಪದಲ್ಲಿ ಜೈಲಿನಲ್ಲಿದ್ದಾನೆ. ಆರೋಪಿಸಿದ ಆ ಹುಡುಗಿ ನ್ಯೂಸ್‌ಚ್ಯಾನೆಲ್ ನಿಂದ ಚ್ಯಾನೆಲ್‌ಗೆ ಅಲೆದು, ಅಲೆದು ಅವನ ಕಥೆ ಹೇಳುತ್ತಿದ್ದಾಳೆ.
ಇಲ್ಲಿಗೆಕಥೆ ಮುಗಿಯಿತು!!
***
ಮರವಂತೆಯ ಸೂರ್ಯಾಸ್ತ....

ಮರವಂತೆ.... ನಾನು  ಬಹುವಾಗಿ ಪ್ರೀತಿಸುವ ಸ್ಥಳ... ನನ್ನೆಲ್ಲಾ ನೋವು, ನಲಿವಿಗೆ, ಸಂತಸ, ದು:ಖಕ್ಕೆ ಕಿವಿಯಾದದ್ದು ಈ ಸುಂದರಿ... ಎಂದೋ ಬರೆದಿಟ್ಟಿದ್ದ ಈ  ಸಾಲುಗಳಿಗೆ ಈಗ ಇಲ್ಲಿ ಹೊರ ಹೊಮ್ಮುವ ಅವಸರ... 


ದಿವ್ಯತೆಯೇ ಮೈವೆತ್ತ ಓ ನನ್ನ ಮರವಂತೆ

ಇರುವಂತೆ ನೀನು ಭೂಲೋಕಪ್ಸರೆಯೂ
ನಿನ್ನ ತಡಿಯಲಿ ಕುಳಿತು ಹಿಡಿದಿಡಲು ಕನಸುಗಳ
ಸೂರ್ಯಾಸ್ತದ ದೃಶ್ಯ ಕಾಣುವುದು ಹೀಗೆ
ನಸು ನಾಚಿ ಕೆಂಪಾದ ಹದಿಹೆಣ್ಣ ಹಾಗೆ!

ಆಚೆ ಸೌಪರ್ಣಿಕೆಯು ಕಲ್ಪ ಮುಕುಟವ ತೊಟ್ಟು
ಹೆದ್ದಾರಿ ಸೆರಗನ್ನು ಹೊದ್ದು ಮಲಗಿರಲು
ಬೆರಗಾದ ಅರಬಿಯೂ ತಲೆಬಾಗಿ ನರ್ತಿಸಲು
ಅರುಣನೂ ನಸು ನಾಚಿ ಓಡಿರುವ ಹೀಗೆ


ತುಂಟ ಮಗು ತೆರೆಸರಿಸಿ ಹಾಲ್ಕುಡಿದ ಹಾಗೆ!

ಯಕ್ಷಗಾನದ ಚೆಂಡೆ ಮದ್ದಳೆಯ ಆರ್ಭಟಕೆ
ಕುಳಿರ್ಗಾಳಿಗೂ ಒಮ್ಮೆ ಭೋರ್ಗರೆತದಾಸೆ
ನಿನ್ನ ಈ ಆರ್ಭಟಕೆ ಮನಸೋತ ಭೂರಮೆಗೂ
ಆ ರವಿಯ ತನ್ನೊಳಗೆ ಅಡಗಿಸಲು ಹೀಗೆ
ಕುಂಕುಮರಶಿನವನ್ನು ಚಿಲ್ಲಿರುವ ಹಾಗೆ!

ಒಮ್ಮೆ ಭೋರ್ಗರೆತ ಶಾಂತತೆಯು ಮತ್ತೊಮ್ಮೆ
ನಿನ್ನಾಟ ನಿನ್ನರಿವ ಪರಿಧಿ ಹೊರಗೇ
ಮರಳು ಕಲ್ಲುಗಳೆಲ್ಲಾ ನಿನ್ನ ತಡೆಗವಸರಿಸಿ
ನಿನ್ನೊಳಗೆ ಕರಗುವ  ಆ ಆದಿಯೇ ಹೀಗೆ
ಶಶಿಗೆ ಸ್ವಾಗತವೀವ ಮನದನ್ನೆಯ ಹಾಗೆ!

ಓ ಭವ್ಯ ಮರವಂತೆ, ಓ ದಿವ್ಯ ಮರವಂತೆ
ಶಾಂತನಾಗಿರು ವರಾಹ ಮಡಿಲಲ್ಲಿ ನೀನು
ನಿನ್ನ ಏರಿಳಿತವೀ  ಸೌಪರ್ಣಿಕೆಯ ಮಡಿಲೊಳಗೆ
ಭಾಗವತ  ಕಂಠದ ಹಾಡಾಗಿ ಹೀಗೆ
ಈ ಬದುಕ ಬೆಳಗಲಿ ಸವಿಜೇನ ಹಾಗೆ!!

Wednesday, 10 June 2015

ನಿವೇದನೆ..

ಕಳೆದ ಡಿಸೆಂಬರ್ ನಲ್ಲಿ ಮಂಗಳೂರು ಆಕಾಶವಾಣಿ ಯಲ್ಲಿ ಪ್ರಸಾರವಾದ ನನ್ನ ಕವನ.... ನಿವೇದನೆ.... ನಿಮ್ಮ ಓದಿಗಾಗಿ ಮತ್ತು ನನ್ನ ಖುಷಿಗಾಗಿ... ಒಂದು ಹಿಡಿ ಪ್ರೀತಿಯನುಚೆಲ್ಲಿಬಿಡು ಎದೆಯೊಳಗೆ
ಬೆಳೆದು ಹೆಮ್ಮರವಾಗಿ ಫಲ ನೀಡಲಿ|
ಶತ ಶತಕ ಕಳೆದರೂ ಇದಕಿಲ್ಲ ವೃದ್ದಾಪ್ಯ
ನಿತ್ಯತೆರೆ ಮೊರೆಯುವ ಹೊನ್ನಕಡಲು..|

ಒಂದು ಹನಿ ಕಣ್ಣೀರುಜಾರಿದರೂ ನಿನ್ನೊಳಗೆ
ಅದುವೆ ನೆತ್ತರಧಾರೆ ನನ್ನೆದೆಯಲಿ|
ನಿನ್ನೆದೆಯಚೈತ್ರದಲಿ ಕೋಗಿಲೆಯದನಿ ಇರಲು
ಅದುವೇ ನಿತ್ಯೋತ್ಸವದಜಾತ್ರೆ ನನಗೆ|

ಒಂದು ದಿನವೂ ಏನೂ  ಕೇಳಲೊಲ್ಲದ ಮನವು
ಬಯಸುವುದು ನಿನ್ನೆದೆಯತಾಣವನ್ನು|
ಅಪ್ಪಿಬಿಡುಎದೆಗೊಮ್ಮೆ ನನ್ನ ಮೊಗವನು ನೀನು
ಈ ಜಗವ ಮರೆತೇನುಆ ಬಿಗಿತದಲ್ಲಿ|

ಒಂದಿನಿತು ಅಳುಕದೆಯೇ ಅಂಜದೆಯೇ ನಿನ್ನೊಡನೆ
ಹೆಜ್ಜೆಯನು ಸವೆಸುವೆನು ಬದುಕಕಡಲಲ್ಲಿ|
ಏರಿ ಬರುವಲೆಗೆ ಹುಚ್ಚು ಧೈರ್ಯವೇ ಹೇಗೆ
ನೀನಿರಲು ನನ್ನ ಬಳಿ ಕರವ ಹಿಡಿದು|

ಒಂದಿನಿತುಕಣ್ಣೋಟ ನನ್ನೆಡೆಗೆಎಸೆದು ಬಿಡು
ಬಂಧಿಯಾಗುವೆನಲ್ಲೇಎಂದೆಂದಿಗೂ|
ಹೌದಿನಿಯಾ ಹರಿದು ಬಿಡು ನಿನ್ನ ಪ್ರೀತಿಯತೊರೆಯ
ತೊರೆದು ಬರುವೆನು ನಾನು ಜಗದ ಬಂಧ|

ಒಂದು ಹಿಡಿ ಪ್ರೀತಿಯನುಚೆಲ್ಲಿಬಿಡು ಎದೆಯೊಳಗೆ
ಎದೆಗೂಡಿನಲಿ ನಿನ್ನ ಬಚ್ಚಿಡುವೆನು|
ಎಂದಾದರೂ ಮುಂದೆ ಮರಳಿ ಬರದಾಗ ನೀ
ಬರದ ಲೋಕದ ಪಯಣ ಬಲು ಸುಲಭವೆನಗೆ|

Tuesday, 9 June 2015

ಸಮಾಧಾನ

ಅಪರೂಪಕ್ಕೆ ಹುಟ್ಟಿಕೊಂಡ ಕವನ..ಬಹಳ ದಿನಗಳ ನಂತರ ಬ್ಲಾಗ್ ಲೋಕಕ್ಕೆಳೆತಂತು... 


ಸಮಾಧಾನ ಬತ್ತಿ ಹೋಗಿದೆಯೇಕಣ್ಣೀರು?
ಬಾ ನನ್ನ ಬಳಿಗೆ, ಕೊಡುವೆ ಒಂದಿಷ್ಟು ಕಡ
ಉದುರಿಸಿ ಬಿಡು ಒಮ್ಮೆಆನಂದದಿಂದ!

ಜಗದಚಿಂತೆ ಬಿಡು, ವ್ಯಂಗ್ಯವೇಅದರ ಬಗೆ
ಇರದಿದ್ದರೆ ಹೇಗೆ ಒಬ್ಬನಾದರೂ ಹಗೆ?
ನಿನ್ನ ನೀನರಿಯುವ ಬಗೆ ಎಂತು ಮತ್ತೆ?

ಸಂಭ್ರಮಕೆ ಮುಖ ತೂರುವ ಮಂದಿ ನೂರೆಂಟು
ಸಂಗ್ರಾಮಕೆ ಹಾತೊರೆಯುವ ಜಗಳಗಂಟರೇ ಎಲ್ಲ
ಆದರೂ ಹರಿಸಿ ಬಿಡು..ಆನಂದ ಬಾಷ್ಪ|

ಎಂದಾದರೊಂದು ದಿನ ಏಕಾಂಗಿ ಅನಿಸಿದರೆ
ನೋಡಿ ಬಿಡು ಕಡಲಲೆಯ ಶ್ರೀಮಂತಿಕೆಯ
ಅದು ನಿನ್ನ ಹಾಗೆಯೇ ಏಕಾಂಗಿ ತಾನೇ!!!

ಬಯಸಿದ್ದೆಲ್ಲಾ ಬರದ ಈ ಬದುಕ ಬಗೆಗೇಕೆ
ತಾತ್ಸಾರ ನಿನ್ನ ಮನದೊಳಗೆ ಗೆಳತೀ
ಅತ್ತು ಹಗುರಾಗಿ ಬಿಡು ನೀನೇ ನಿನ್ನೊಡತಿ!!