ಎರಡು ವರ್ಷಗಳ ಹಿಂದೆ, ಮಂಗಳೂರಿನ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ನಡೆದ ಪ್ರಜಾ ಪ್ರಭುತ್ವ ದಿನದ ವೇಳೆ ನಾನು ಮಾಡಿದ ಭಾಷಣದ ಲೇಖನ ರೂಪವನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನೆ. ಅಂದಿಗೂ, ಇಂದಿಗೂ, ಋಣಾತ್ಮಕ ಅಂಶಗಳಲ್ಲಿ ಗಣನೀಯ ಹೆಚ್ಚಳವಾಗಿದೆಯೇ ಹೊರತು, ಧನಾತ್ಮಕವಾಗಿ ನಾವಿನ್ನೂ ಅಲ್ಲಿಯೇ ಇದ್ದೇವೆ....ಅಥವಾ ಅದಕ್ಕಿಂತಲೂ ಕೆಳಗಿಳಿದಿದ್ದೇವೆ ಎಂಬುದು ಇಂದಿಗೂ ಸತ್ಯ ಅನಿಸುತ್ತದೆ....ಆ ಹಿನ್ನೆಲೆಯಲ್ಲಿ ಈ ಲೇಖನದ ಸಾರ ಇಂದಿಗೂ ಅನ್ವಯ ಎಂಬ ಹಿನ್ನೆಲೆಯಲ್ಲಿ ಇದೊಂದು ಮರು ಓದು.........
ಪರಿಮಿತಿಯರಿತಾಶೆ, ಪರವಶತೆಯಳಿದ ಸುಖ
ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ
ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ
ವರಗಳೀ ನಾಲ್ಕೆ ವರ-ಮಂಕುತಿಮ್ಮ
ಪರಿಮಿತವಾದ ಆಸೆ ಇರಬೇಕು, ವ್ಯಾಮೋಹ ತೊರೆದ ಸುಖವಿರಬೇಕು, ವಿರಕ್ತಿಯಿಂದ ಕೂಡಿದ ಉದ್ಯೋಗ ಯುಕ್ತಿ ಇರಬೇಕು. ಜೀವನವನ್ನು ಪರೀಕ್ಷಿಸುತ್ತಾ, ಸತ್ಯವನ್ನು ಪ್ರೀತಿಸುವ ಬುದ್ದಿ ಇರಬೇಕು.
ಇದು ಕನ್ನಡದ ಭಗವದ್ಗೀತೆಯೆಂದೇ ಜನಜನಿತವಾಗಿರುವ ಮಂಕುತಿಮ್ಮನ ಕಗ್ಗದ ಸಾಲುಗಳು. ಇದರ ಉದ್ಧರಣೆಯೊಂದಿಗೆ ನಾನು ಇಂದು ಪ್ರಸ್ತುತ ಪಡಿಸಲಿರುವ ವಿಚಾರಧಾರೆಗೆ ಮೊದಲಂಕಿತ ಇಡುತ್ತಿದ್ದೇನೆ.
ಇಡಿಯ ಭಾರತ ದೇಶ ಇಂದು ತನ್ನ ಗಣರಾಜ್ಯೋತ್ಸವಕ್ಕೆ ಮತ್ತೊಂದು ವರ್ಷವನ್ನು ಪೇರಿಸಿಕೊಂಡು ಮುಂದುವರಿದಿದೆ. ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ಎಂಬಿತ್ಯಾದಿ ತರ್ಕಗಳ ನಡುವೆಯೂ ಸ್ವತಂತ್ರ ಭಾರತವಾಗಿ ನಮ್ಮ ದೇಶ ಸಾಧಿಸಿದ್ದು ಬಹಳಷ್ಟಿದೆ. ಸಾಧಿಸಲು ಉಳಿದಿರುವುದೂ ಬಹಳಷ್ಟಿದೆ. ಉಳಿದಿರುವುದರ ಪಟ್ಟಿ ಯಾವತ್ತೂ ಬೆಳೆಯುತ್ತಿರುತ್ತದೆ. ಯಾಕೆಂದರೆ ಅಗಾಧವಾದ ಪ್ರಪಂಚದಲ್ಲಿ ಈ ಸೃಷ್ಟಿಕಾರ್ಯ,ಅಂದರೆ ನಾವು ಕ್ರಿಯೇಟಿವ್‌ನೆಸ್ ಎಂದು ಕರೆಯುವ ಪೃಕ್ರಿಯೆ ನಿತ್ಯ ನಿರಂತರವಾದದ್ದು. ಆ ಹಿನ್ನೆಲೆಯಲ್ಲಿ ಸಾಧಿಸಬೇಕಾದ್ದು ಬಹಳಷ್ಟಿದೆ ಎಂಬುದು ನನ್ನ ತರ್ಕ.ಎಂಬಲ್ಲಿಗೆ ಗಣರಾಜ್ಯವಾಗಿ ನಾವೆಷ್ಟು ಪ್ರಬುದ್ಧರಾಗಿದ್ದೇವೆ ಎಂಬುದಕ್ಕಿಂತಲೂ, ನಾವು ಸಾಧಿಸಿದ್ದೆಷ್ಟು, ಏನು ಎಷ್ಟು ಎಂಬುದಕ್ಕಿಂತಲೂ, ನಾವು ಹೇಗೆ ಬದುಕುತ್ತಿದ್ದೇವೆ, ಏಕೆ ಬದುಕುತ್ತಿದ್ದೇವೆ ಎಂಬುದು ಬಹು ಮುಖ್ಯ ಪ್ರಶ್ನೆಯಾಗಿ ಕಾಡುತ್ತಿದೆ.
ಇತ್ತೀಚೆಗೆ ಓದಿದ ಒಂದು ದೃಷ್ಟಾಂತ ನನಗಿಲ್ಲಿ ನೆನಪಾಗುತ್ತದೆ. ಒಂದು ಮನೆಯಲ್ಲಿ ಒಂದು ಆಮೆಯನ್ನು ಸಾಕಿದ್ದರು. ಅದು ಮನೆಯೊಳಗೆ ಹೊರಗೆ ತಿರುಗಾಡಿಕೊಂಡಿತ್ತು ಮತ್ತು ಮನೆಯ ಒಂದು ಸದಸ್ಯನಂತೆ ಬದುಕುತ್ತಿತ್ತು. ಆ ಮನೆಯಲ್ಲಿ ಒಂದು ಮಗು ಹುಟ್ಟುತ್ತದೆ. ಅದೂ ಆಮೆಯೊಂದಿಗೇ ಬೆಳೆದು ದೊಡ್ಡದಾಗುತ್ತಾ ಹೋಗುತ್ತದೆ. ಆದರೆ ಮಗುವಿನ ಬಾಲ್ಯ ಇನ್ನೂ ಪ್ರಾಪಂಚಿಕ ವ್ಯಾಮೋಹಕ್ಕೆ ತೆರೆದುಕೊಳ್ಳುವ ಮೊದಲೇ ಒಂದು ಬೆಳಿಗ್ಗೆ ಆಮೆ ತನ್ನ ಕಾಲುಗಳನ್ನು ಮೇಲೆ ಮಾಡಿಕೊಂಡು ಅಂಗಾತ ಬಿದ್ದುಕೊಂಡಿತ್ತು. ಮನೆಯ ದೊಡ್ಡವರು ಎಲ್ಲಾ ಸೇರಿ ನೋಡುತ್ತಾರೆ-ಮಗು ಅಳುತ್ತಿದೆ. ಆಮೆ ಯಾಕೋ ಅಲ್ಲಾಡುತ್ತಲೇ ಇಲ್ಲ. ಎಲ್ಲರೂ ಸೇರಿ ನಿರ್ಧರಿಸಿದರು-ಆಮೆ ಸತ್ತಿದೆ. ಅದರೊಡನೇ ಬೆಳೆದು ಒಂದು ಅಪರೂಪದ್ದೆಂಬ ಸ್ನೇಹ ಸಂಪಾದಿಸಿದ ಮಗು ಈಗ ಆಮೆ ಸತ್ತಿರುವ ವಿಷಯ ತಿಳಿದು ಬೊಬ್ಬೆ ಹಾಕಾರಂಭಿಸಿತು, ಏನು ಮಾಡಿದರೂ ಮಗುವಿನ ಅಳು ನಿಲ್ಲದು. ಎಲ್ಲರೂ ಸಮಾಧಿನಸಲು ಪ್ರಯತ್ನಿಸಿ ಸೋತರು. ಕೊನೆಗೆ ಯಾರೋ ಮಗುವಿಗೆ ಹೇಳುತ್ತಾರೆ;- ಮಗು, ಸಾವು ಪ್ರತೀ ಜೀವಿಗೂ ಸಹಜ ಅವಸ್ಥೆ. ಅದನ್ನು ಯಾರೂ ತಡೆಯಲಾರರು. ಒಂದು ಕೆಲಸ ಮಾಡೋಣ. ನಿನ್ನ ಪ್ರೀತಿಯ ಆಮೆಗೆ ನಾವೆಲ್ಲರೂ ಸೇರಿ ಒಂದು ಗುಡಿ ಕಟ್ಟೋಣ. ಜನರೆಲ್ಲಾ ಅದನ್ನು ಪೂಜಿಸುತ್ತಾರೆ. ಆ ಆಮೆಯೊಂದಿಗೆ ಜನರೆಲ್ಲರಿಗೂ ನಿನ್ನ ಹೆಸರೂ ತಿಳಿಯುತ್ತದೆ. ಆಮೆಂii ಗುಡಿಯೊಂದಿಗೆ ಜನ ನಿನ್ನನ್ನೂ ದೈವತ್ವಕ್ಕೇರಿಸುತ್ತಾರೆ. ನಿನಗೂ ಒಳ್ಳೆಯ ಹೆಸರು ಬರುತ್ತದೆ. ಎಲ್ಲರೂ ನಿನ್ನನ್ನೂ ಆಮೆಯೊಂದಿಗೆ ಆರಾಧಿಸುತ್ತಾರೆ. ಸುಮ್ಮನಿರು ಎಂಬಂತೆ ಸಮಾಧಾನಿಸಿದಾಗ ಬಾಲಕನಿಗೆ ಇದೂ ಹೌದಲ್ಲವೇ, ನಾನು ಎಲ್ಲರಿಗೂ ತಿಳಿದ ದೊಡ್ಡ ವ್ಯಕ್ತಿಯಾಗುತ್ತೇನೆ ಎಂಬ ಭ್ರಮೆ ಮೂಡುತ್ತದೆ. ಅವನು ಸಮಾಧಾನ ಹೊಂದುತ್ತಾನೆ. ಆಗ ಯಾರೋ ಸತ್ತ ಆಮೆಯನ್ನು ಸಮಾಧಿ ಮಾಡುವ ಉದ್ದೇಶದಿಂದ ಎತ್ತಲು ಹೋಗುತ್ತಾರೆ. ವಾಸ್ತವವಾಗಿ ಆಮೆ ಸತ್ತಿರುವುದೇ ಇಲ್ಲ. ಅದು ತನ್ನ ಸಹಜ ಸ್ತಿಥಿಗೆ ಬರುತ್ತಲೇ ಭಯದಿಂದ ಓಡಲಾರಂಭಿಸುತ್ತದೆ. ಆಗ ಎಲ್ಲರೂ ಹರ್ಷಿತರಾಗಿ ನೋಡಿದರೆ, ಆಗಷ್ಟೇ ಸಹಜ ಸ್ತಿಥಿಗೆ ಬಂದಿದ್ದ ಬಾಲಕ ಮಾತ್ರ ಮತ್ತೆ ಅಳುತ್ತಾ ಬೊಬ್ಬೆ ಹೊಡೆಯುತ್ತಾನೆ... ಅಯ್ಯೋ ಆ ಆಮೆಯನ್ನು ಹಿಡಿಯಿರಿ. ಅದು ಸತ್ತಿಲ್ಲ, ಅದನ್ನು ಕೊಂದು ಬಿಡಿ. ಮತ್ತೆ ನನಗೆ ಗುಡಿ ಕಟ್ಟ ಬೇಕು, ಅದರ ಹೆಸರಿನೊಂದಿಗೆ ನನ್ನ ಹೆಸರೂ ಎಲ್ಲೆಡೆಯಲ್ಲಿ ಪಸರಿಸಬೇಕು.. ಎಂದು ಬೊಬ್ಬೆ ಹೊಡೆಯುತ್ತದೆ.!
ನೋಡಿ, ಮನುಜ ಸ್ವಭಾವದ ಒಂದು ಮುಖವನ್ನು ಈ ದೃಷ್ಟಾಂತ ಹೇಗೆ ಬಿಚ್ಚಿಡುತ್ತದೆ. ಸ್ವತಂತ್ರಾನಂತರದ ನಮ್ಮ ದೇಶದ ಅವಸ್ಥೆಗೆ-ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತೆ ಈ ದೃಷ್ಟಾಂತವನ್ನು ನಾವು ಅರ್ಥೈಸಿಕೊಳ್ಳಬಹುದು ನಮ್ಮ ಮನ:ಸ್ತಿಥಿಯೂ ಇವತ್ತು ಇದಕ್ಕಿಂತ ಹೊರತಾಗಿಲ್ಲ ನಮಗೆ ದಿಢೀರ್ ಜನಪ್ರಿಯತೆ ಬೇಕು ಅಥವಾ ನಮ್ಮನ್ನು ನಾವು ಎತ್ತರದ ಸ್ಥಾನದಲ್ಲಿ ಪೃತಿಷ್ಠಾಪಿಸಿಕೊಳ್ಳಲು ದಿನ ನಿತ್ಯದ ಹೆಣಗಾಟ ನಡೆದಿದೆಯೇ ಹೊರತು, ಬೇರಾರ ಹಿತ-ಅಹಿತದ ಗಣನೆಯೇ ಇಲ್ಲಿ ಬರುತ್ತಿಲ್ಲ. ಇಂದು ನಾವು ಗಣರಾಜ್ಯೋತ್ಷವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಮುಖ್ಯವಾಗಿ ಇಲ್ಲಿ, ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ನಾವು ಸೇರಿದ್ದೇವೆ. ಈ ಗಾಂಧಿ ತತ್ವ ವೆಂದರೆ ಏನು? ಇದು ಯಾಕೆ? ಇದು ಹೇಗೆ ಮತ್ತು ಇದು ಇಂದು ಎಷ್ಟರ ಮಟ್ಟಿಗೆ ಪ್ರಸ್ತುತ ಎಂಬ ಗೊಂದಲದಲ್ಲಿ ನಾವಿದ್ದೇವೆ.
ಗಾಂಧಿ ಎಂಬ ಚಲನಚಿತ್ರವನ್ನು ನೋಡಿದ ಖ್ಯಾತ ಬರಹಗಾರ ದೇವನೂರು ಮಹಾದೇವ ಹೀಗೆ ಬರೆದರೆಂದು ಓದಿದ ನೆನಪು:-ಸಾಯಲು ಮಾನಸಿಕವಾಗಿ ದ್ರಢವಾಗಿ ಸಿದ್ದನಾದವನು ಮಾತ್ರ ಗಾಂಧಿಯಾಗಬಲ್ಲ. ಅಹಿಂಸಾವಾದಿಯಾದ ಗಾಂಧಿಯ ದೇಹದ ಒಂದು ರೋಮದಲ್ಲಿಯೂ, ಹೇಡಿತನದ ಸುಳಿವು ಇಲ್ಲದಿರುವುದು, ನಮ್ಮನ್ನು ನಡುಗಿಸುತ್ತದೆ. ಹೇಡಿಯಾದವನು ಅಹಿಂಸಾವಾದಿಯಾಗುವುದು ಅಸಾಧ್ಯ. ಇಂಥಾ ಗಾಂಧಿಯನ್ನು ನಾವು ಎಷ್ಟು ಅಪಾರ್ಥಕ್ಕೊಳಗಾಗಿಸಿದ್ದೇವೆ ಎಂಬುದೇ ಸಂಕಟದ ವಿಷಯ
ಮತ್ತೊಂದು ಉದಾಹರಣೆ ಕೊಡುತ್ತೇನೆ. ಇತ್ತೀಚೆಗೆ ನನಗೆ ಡಾ.ಇಸ್ಮಾಯಿಲ್ ಅವರು ಗಣರಾಜ್ಯ ದಿನದಂದು ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿನ ಸಬೆಯಲ್ಲಿ ನೀವು ಅರ್ಧ ಗಂಟೆ ಮಾತಾಡಬೇಕು ಎಂದರು. ನಾನೂ ಅದಾವುದೋ ಧೈರ್ಯದಲ್ಲಿ ಒಪ್ಪಿಕೊಂಡೆ. ಇದೇ ವಿಷಯವನ್ನು ಮಾತಿಗೆ ಬಂದಾಗ, ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನಲ್ಲಿ ಹೇಳಿದೆ. ಅದಕ್ಕಾತ ತಕ್ಷಣ ಗೊಳ್ಳೆಂದು ನಕ್ಕ. ಮತ್ತು ಹೇಳಿದ ಅರ್ಧ ಘಂಟೆ-ಅದೂ ಗಾಂಧಿಯ ಬಗ್ಗೆ ಮಾತಾಡುವುದು..ಇಂಪಾಸಿಬಲ್! ಬಿಟ್ಟು ಬಿಡು ಆ ಸಾಹಸ!. ಮುಂದುವರಿದಾತ ಅಂದ, ಬೇಕಿದ್ದರೆ ಶಾರುಖ್ ಖಾನ್ ಬಗ್ಗೆ ಮಾತಾಡು-ವಿಷಯವಿದೆ!. ಇದಲ್ಲವೇ ದುರಂತ. ಇಲ್ಲಿ ಶಾರುಖ್ ಖಾನ್ ಎಂದದ್ದು ಯಾವ ಹೆಗ್ಗಳಿಕಯಿಂದಲ್ಲ ಬದಲಿಗೆ ಗಾಂಧಿಯವರ ಅವಹೇಳನಕ್ಕೆ!, ಇದ್ಯಾಕೆ? ನಾವು, ಇಂದಿನ ಯುವ ಜನತೆ ಗಾಂಧಿಯನ್ನು ಯಾವ ಮಟ್ಟದಲ್ಲಿಟ್ಟು ನೋಡುತ್ತಿದ್ದೇವೆ ಎಂಬುದನ್ನು ಯೋಚಿಸಿದರೆ ಕಳವಳ ಹುಟ್ಟುತ್ತದೆ.
ಗಾಂಧಿ ಎಂದರೆ ಏನು ಎಂದು ಇಂದು ಒಬ್ಬ ಹುಡುಗನಲ್ಲಿ ಕೇಳಿದರೆ ಅವನು ಹೆಚ್ಚೆಂದರೆ ಏನು ಹೇಳಿಯಾನು? ಒಂದು ಒಡೆದ ಕನ್ನಡಕ ತೊಟ್ಟ, ಪಂಚೆಯನ್ನು ಮೈಗೆ ಸುತ್ತಿಕೊಂಡ, ಕೋಲು ಹಿಡಿದು ಯಾವುದೋ ಸರ್ಕಲ್‌ನಲ್ಲಿ ನಿಂತಿರುವ ಒಂದು ಪ್ರತಿಮೆ-ಅಷ್ಟು ಮಾತ್ರ ಇಂದಿನ ಜನಾಂಗಕ್ಕೆ ತಿಳಿಯುವ ವಿಚಾರ. ಆದರೆ ಈ ಗಾಂಧಿ, ಮೈ ಮೇಲೆ ಕೇವಲ ಮಾನ ಮುಚ್ಚುವಷ್ಟು ಮಾತ್ರ ಬಟ್ಟೆ ಹಾಕಿಕೊಂಡು ಅರೆನಗ್ನವಾಗಿ ಯಾಕಿದ್ದಾರೆ? ಒಮ್ಮೆ ನರ್ಮದಾ ನದಿಯ ತಟದಲ್ಲಿ ಒಬ್ಬ ಮಹಿಳೆ ತನ್ನ ಸೀರೆಯ ಅರ್ಧ ಭಾಗವನ್ನು ಮಾತ್ರ ತೊಳೆದು, ಉಳಿದರ್ಧ ತಾನು ಉಟ್ಟುಕೊಂಡು ಒಣಗಿಸುತ್ತಿದ್ದಳು. ತೊಳೆದ ಭಾಗ ಒಣಗಿದ ನಂತರೆ, ಅದನ್ನು ಸುತ್ತಿಕೊಂಡು ಉಟ್ಟ ಭಾಗದ ಸೀರೆಯನ್ನು ತೊಳೆಯುವುದು ಅವಳ ಉದ್ದೇಶ. ಯಾಕೆಂದರೆ ಅವಳ ಬಳಿ ಇರುವುದು ಅದೊಂದೇ ಸೀರೆ. ಅದನ್ನು ಗಾಂಧಿ ಗಮನಿಸುತ್ತಾರೆ, ದೇಶದಲ್ಲಿ ಉಡಲು ತೊಡಲು ಇಲ್ಲದ ಜನರ ಬಗ್ಗೆ ಮರುಗುತ್ತಾರೆ, ಮರು ಕ್ಷಣವೇ ನಿರ್ಧರಿಸುತ್ತಾರೆ, ದೇಶದಲ್ಲಿನ ಪ್ರತೀ ಪ್ರಜೆಯೂ ಸಾಕಷ್ಟು ಬಟ್ಟೆ ತೊಡುವ ತನಕ ನಾನೂ ಹೀಗೆ ಸರಳ ವಸ್ತ್ರದಾರಿಯಾಗಿ ಇರುತ್ತೇನೆ ಎಂದು ಅಂತೆಯೇ ಬದುಕುತ್ತಾರೆ. ಎಲ್ಲೋ ಒಮ್ಮೆ ಈ ವಿಷಯ ಹೇಳಿದರೆ, ಒಬ್ಬ ತುಂಟ ಯುವಕ ಕೇಳುತ್ತಾನೆ, ಸದ್ಯ, ಗಾಂಧೀಜಿ ಈಗ ಹುಟ್ಟಿಲ್ಲವಲ್ಲ ಎಂದು.
ಆ ವಿಷಯವನ್ನೂ ನಾವು ಯೋಚಿಸೋಣ. ಗಾಂಧಿತ್ವ ಎಂದರೆ ಏನು? ಈ ವಿಚಾರವಾಗಿ ಒಮ್ಮೆ ನಾನು ಕವಿ ಮಿತ್ರ ಸುಬ್ರಾಯ ಭಟ್‌ರಲ್ಲಿ ಮಾತಾಡುತ್ತಿದ್ದಾಗ ಅವರೆಂದರು, ಗಾಂಧಿತ್ವ ಎಂದರೆ ಒಳ್ಳೆಯದು ಎಂದು. ಅಂದರೆ ಒಳ್ಳೆಯ ವಿಚಾರ, ಆಚಾರ, ಚಿಂತನೆ, ಸಂಸ್ಕೃತಿ, ಸಂಸ್ಕಾರ... ಹೀಗೆ ಎಲ್ಲವೂ ಒಳ್ಳೆಯದು ಎಂದು ನಾವು ತೀರ್ಮಾನಿಸುವ ಎಲ್ಲದೂ, ಎಲ್ಲಾ ಯೋಚನೆಗಳೂ ಗಾಂಧಿತ್ವ!. ಹೌದಲ್ಲವೇ? ಇಲ್ಲಿಯೂ ಒಂದು ಮಾತು ಹೇಳಲೇ ಬೇಕೆನಿಸುತ್ತದೆ. ಗಾಂಧೀಯವರ ನನ್ನ ಸತ್ಯಾನ್ವೇಷಣೆ ಓದಿದವರಿಗೆ ತಿಳಿದಿರಬಹುದು. ಗಾಂಧಿ ಹೇಳುತ್ತಾರೆ, ಸತ್ಯ ಹರಿಶ್ಚಂದ್ರನ ಕಥೆ ಕೇಳುತ್ತಲೇ ಅಥವಾ ಓದುತ್ತಲೇ ನಾನು ಕಣ್ಣೀರು ಸುರಿಸುತ್ತಿದ್ದೆ. ಶ್ರವಣನ ಕಥೆ ಓದುತ್ತಲೇ ನಾನು ಭಾವ ಪರವಶನಾಗುತ್ತಿದ್ದೆ. ಶ್ರವಣ ಹಾಗೂ ಹರಿಶ್ಚಂದ್ರ ರಿಬ್ಬರೂ ಜೀವಂತ ವ್ಯಕ್ತಿಗಳು... ಹೀಗೆ. ಇಲ್ಲಿ ನನಗೂ ಒಂದು ಘಟನೆ ನೆನಪಾಗುತ್ತದೆ. ಬಾಲ್ಯದಲ್ಲಿ ನಾವು ಪುಣ್ಯಕೋಟಿ ಕಥೆಯನ್ನು ಓದುತ್ತಿದ್ದೆವು. ನಾನು ನನ್ನ ಕೆಲವು ಸ್ನೇಹಿತು ಕುಳಿತು ಇದನ್ನು ಓದುತ್ತಾ ಭಾವಪರವಶರಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಅಳುತ್ತಿದ್ದೆವು. ಇದನ್ನೇ ಇಂದಿನ ಮಕ್ಕಳೆದುರು ಹೇಳಿದರೆ ಅವರು ಮುಸಿ ಮುಸಿ ನಗುತ್ತಾರೆ. ಈ ಮನುಷ್ಯನೆಷ್ಟು ದುರ್ಬಲ ಎಂದು ತಮಾಷೆ ಮಾಡುತ್ತಾರೆ.
ಅಂದರೆ ಗಾಂಧಿತ್ವ ಇಂದು ಸಂಪೂರ್ಣ ಅವನತಿಮುಖಿಯಾಗಿದೆಯೇ ಎಂಬುದು ಕಳವಳ ಹುಟ್ಟಿಸುತ್ತದೆ. ಬದುಕು ಯಾವಾಗಲೂ ಒಂದು ಸಾರ್ಥಕ್ಯ ಕಾಣುವುದು, ಅಲ್ಲಿ ಸಂಸ್ಕಾರ ನೆಲೆಗೊಂಡಾಗ. ಇಂದು ಬದುಕು ಏನಾಗಿದೆ ಹೇಳಿ? ಸಂಸ್ಕಾರ ವಿಹೀನವಾಗಿದೆ. ಒಳ್ಳೆಯದು ಎಂಬ ಯಾವ ವಿಚಾರವನ್ನು ನಾವು ಗಾಂಧಿತ್ವ ಎಂದು ಭಾವಿಸಿಕೊಳ್ಳುತ್ತೇವೆಯೋ ಅದು ಏನೂ ಅಲ್ಲ ಎಂಬ ಭಾವ ಎಲ್ಲರಲ್ಲೂ ಮನೆ ಮಾಡಿದೆ. ಅಲ್ಲಿಗೆ ನಾವು ಗಾಂಧಿತ್ವ ದಿಂದ ವಿಮುಖರಾಗಿದ್ದೇವೆ.
ಇವತ್ತು ಗಣರಾಜ್ಯ ಆಚರಣೆಯ ಹಿನ್ನೆಲೆಯಲ್ಲಿ ನಾವು ನಮ್ಮ ಗಾಂಧಿತ್ವ ಮತ್ತು ಆ ಪ್ರತಿಪಾದನೆಯಡಿ ಬೆಳೆದು ಬರಬೇಕಾಗುವ ದೇಶಪ್ರೇಮದ ಬಗ್ಗೆ ಯೋಚಿಸುವ ಅನಿವಾರ್ಯತೆಯಲ್ಲಿದ್ದೇವೆ. ನಿಮಗೂ ತಿಳಿದಿರಬಹುದು. ಕರಿಯ ಬಿಳಿಯ ಎಂಬ ವರ್ಣ ಬೇಧ ನೀತಿಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಒಬ್ಬ ಮೋಹನ ದಾಸ್‌ನನ್ನು ರೈಲಿನಿಂದಾಚೆ ಎಸೆಯಲಾಯಿತು. ಆದರೇನಾಯ್ತು? ಯಾವ ಬಿಳಿಯರು ನನ್ನನ್ನು ಇಂದು ರೈಲಿನಿಂದಾಚೆಗೆಸೆದಿರುವಿರೋ, ಅದೇ ಬಿಳಿಯರನ್ನು ನನ್ನ ದೇಶದಿಂದಲೇ ಎಸೆಯುತ್ತೇನೆ ಎಂದು ಪ್ರತಿಜ್ಞೆ ಮಾಡಿ ಭಾರತಕ್ಕೆ ಹಿಂದುರಿಗಿದ ಅದೇ ಮೋಹನದಾಸರ ಅಹಿಂಸಾ ಚಳುವಳಿಯಿಂದಾಗಿ ಬ್ರಿಟಿಷರು ಭಾರತ ಬಿಟ್ಟೋಡಿದರು. ಆದರೆ ನಾವು ಮಾಡಿದ್ದೇನು? ಅಂತಹ ಮಹಾನ್ ಚೇತನವನ್ನು ಸ್ವತಂತ್ರ ಭಾರತದಲ್ಲಿ ಒಂದು ವರ್ಷವೂ ಬದುಕಗೊಡಲಿಲ್ಲ. ಅಂದರೆ ನಾವು ಸ್ವತಂತ್ರರಾದ ತಕ್ಷಣವೇ ಗಾಂಧಿತ್ವವನ್ನು ಮರೆತೆವು. ಅದು ಇನ್ನು ನಮಗೆ ಬೇಕಿಲ್ಲೆಂಬಂತೆ ಬದುಕಲಾರಂಭಿಸಿದೆವು.
ಗಾಂಧಿ ಹೋದರು, ಅವರನ್ನು ಕೊಂದ ಗೋಡ್ಸೆಯೂ. ಗಾಂಧಿ ಯಾಕೋ ಬರಲೇ ಇಲ್ಲ ಮತ್ತೆ, ಗೋಡ್ಸೆ ಮಾತ್ರ ಹುಟ್ಟುತ್ತಲೇ ಇದ್ದಾನೆ ಮತ್ತೆ ಮತ್ತೆ. ಇದಲ್ಲವೇ ದುರಂತ?
ಇನ್ನು ನಾವು ಪ್ರಜಾಪ್ರಭುತ್ವಕ್ಕೆ ಅಣಕವೆಂಬಂತೆ ಗಾಂಧಿತ್ವವನ್ನು ಬಳಸಿಕೊಳ್ಳುತ್ತಿರುವುದು ಮತ್ತೊಂದು ದುರಂತ. ಇಂದು ನಮ್ಮ ಪವಿತ್ರ ಲೋಕಸಭೆಯ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವನ್ನು ನಾವು ಇನ್ನೂ ಸಾಕುತ್ತಿದ್ದೇವೆ. ಬಹುಷ ತಾಜ್ ಹೋಟೆಲ್ ಮೇಲೆ ದಾಳಿಗೆ ಕಾರಣನಾಗಿ ನೂರಾರು ಜೀವಾಹುತಿ ತೆಗೆದುಕೊಂಡಿರುವ ಕಸಬ್‌ಗೂ ನಾವು ಅದನ್ನೇ ಮಾಡುತ್ತೇವೆ. ಆಸ್ಟ್ರೇಲಿಯಾ ಗ್ರಹಾಂ ಸ್ಟೇನ್ ಮತ್ತವನ ಮಕ್ಕಳನ್ನು ಜೀವಂತವಾಗಿ ದಹಿಸಿ, ಕೊಂದ ದಾರಾ ಸಿಂಗ್‌ನ ಕೆಲಸವನ್ನು ನಾವು ಇದೇನೂ ಅಪರೂಪದ ಘಟನೆಯಲ್ಲ ಎಂಬ ಹೇಳಿಕೆ ಕೊಟ್ಟು ಮರಣದಂಡನೆಯನ್ನು ತಡೆಹಿಡಿದು,ಶಿಕ್ಷೆಯನ್ನು ಕಡಿಮೆ ಮಾಡುತ್ತೇವೆ. ಗಾಂಧೀಜಿ ಸಾಯುವ ವೇಳಯಲ್ಲಿ ಹೇ ರಾಮ್ ಅನ್ನುತ್ತಾರೆ. ತನ್ನ ವೈರಿಯನ್ನೂ ಕ್ಷಮಿಸಿ ಬಿಡು ಎನ್ನುತ್ತಾರೆ. ಹಾಗೆಯೇ ನಾವೂ ಇದ್ದೇವೆ ಎಂದು ಮೇಲಿನ ಎಲ್ಲಾ ಘಟನೆಗಳನ್ನು ಉದಾಹರಿಸಿ ನಾವು ಗಾಂಧಿತ್ವವನ್ನು ಅನುಸರಿಸುತ್ತಿದ್ದೇವೇನೊ ಎಂಬ ದುರಂತ ಮತ್ತು ಗಾಬರಿಯಲ್ಲಿ ನಾವಿಂದು ಇದ್ದೇವೆ. ಇದರಲ್ಲಿ ಕೆಲವು ದುರಂತಗಳು, ಮತ್ತು ಹೆಚ್ಚಿನ ದುರಂತಗಳು ನಮ್ಮ ಇಂದಿನ ರಾಜಕಾರಣ ಹಿಡಿದ ಅಧೋಗತಿಯ ಪ್ರತಿಫಲನಗಳು. ಇಂದಿನ ರಾಜಕಾರಣವನ್ನೇನಾದರೂ ಗಾಂಧಿ ನೋಡುತ್ತಿದ್ದರೆ ಏನಾಗುತ್ತಿತ್ತು? ಅವರೂ ಬಹುಶ:, ಅಯ್ಯಾ ಗೋಡ್ಸೆ, ನೀನಿಷ್ಟು ದಿನ ಕಾದದ್ದು ಯಾಕೆ, ಮೊದಲೇ ನನಗೆ ಮುಕ್ತಿ ಕೊಡಬಾರದಿತ್ತೇ ಎಂದು ಮರುಗುತ್ತಿದ್ದರೋ ಏನೋ!. ಇದು ನಾವು ಹಿಡಿದ ದುರಂತದ ಮತ್ತೊಂದು ಮಗ್ಗುಲೆಂಬುದು ವಿಪರ್ಯಾಸ.
ಮೇಲಧಿಕಾರಿಗಳು ಮಾತ್ರ
ಮಾತಾಡುತ್ತಿದ್ದರೆ ಅದು
ಸರಕಾರಿ ಕಛೇರಿಯ ಸಭೆ.
ಯಾರೂ ಮಾತಾಡದೆ
ತಲೆ ತಗ್ಗಿಸಿ ನಿಂತಿದ್ದರೆ
ಅದು ಶೋಕ ಸಭೆ.
ಎಲ್ಲರೂ ಮಾತಾಡುತ್ತಾ
ಕಿರುಚಾಡುತ್ತಾ ಇದ್ದರೆ ಅದು
ಲೋಕಸಭೆ!
ಕನ್ನಡದ ಪ್ರಸಿದ್ದ ಹನಿಗವಿ ಡುಂಡಿರಾಜ್ ಅವರು ಹೀಗೆ ಚುಚ್ಚುತ್ತಾರೆ ರಾಜಕಾರಣಿಗಳನ್ನು. ಗಾಂಧಿತ್ವ ಹಿಡಿದ ದಾರಿಯ ಬಗ್ಗೆ ಖೇದಗೊಳ್ಳುತ್ತಿರುವಾಗಲೇ ನಾವಿವತ್ತು ಮತ್ತೊಂದು ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದ್ದೇವೆ. ಪ್ರಜೆಗಳಿಂದಾಗಿ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಆಡಳಿತ ಎಂಬುದು ಪ್ರಜಾಪ್ರಭುತ್ವಕ್ಕೆ ನಾವು ಕಂಠಪಾಠ ಹೊಡೆಯುತ್ತಾ ಕೊಡುವ ವ್ಯಾಖ್ಯೆ. ಆದರೆ ಇಂದಿನ ಪ್ರಜಾಪ್ರಭುತ್ವ ಹೀಗೆ ಜನರಿಂದ, ಜನರಿಗಾಗಿ, ಜನರಿಂದ ನಡೆಸಲ್ಪಡುತ್ತಿದೆಯೇ? ಒಂದು ಉದಾಹರಣೆ ಕೊಡುವ ಮನಸ್ಸಾಗುತ್ತದೆ.
ನೀವೂ ಈ ಲೇಖನವನ್ನು ಇತ್ತೀಚೆಗೆ ಓದಿರಬಹುದು. ಇಂದು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ವಿಮುಖರಾಗುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಸಾಧಾರಪೂರ್ವಕವಾಗಿ ಎತ್ತಿ ಚಿಂತನೆಗೆ ಹಚ್ಚುವ ವಿಷಯವನ್ನು ಬಹುಶ: ನಾವೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಲೇ ಬೇಕಾಗಿದೆ. ಅದು ಇಂದು ನಮ್ಮ ರಾಜಕಾರಣದಲ್ಲಿ ಕಂಡುಬರುತ್ತಿರುವ ವಂಶಪಾರಂಪರ್ಯದ ವಿಷಯ. ನಮ್ಮನ್ನು ಅಂದು ಆಳಿ, ಸ್ವಾತಂತ್ರ್ಯ ಹೋರಾಟದಂತ ದೊಡ್ಡ ಕ್ರಾಂತಿಗೆ ಕಾರಣರಾಗಿ, ಕೊನೆಗೆ ಪ್ರಜಾಪ್ರಭುತ್ವ ವ್ವವಸ್ಥೆಗೆ ಒಂದು ಕಾಯಕಲ್ಪವನ್ನು ನಿರ್ಮಿಸಿಕೊಳ್ಳುವಂತೆ ಮಾಡಿದ್ದು ಬ್ರಿಟಿಷರು. ಇಂದು ಅದೇ ಒಬ್ಬ ಬ್ರಿಟಿಷ್ ಬರಹಗಾರ ನಮ್ಮ ಪ್ರಜಾಪ್ರಭುತ್ವ ವ್ವವಸ್ಥೆಯಲ್ಲಿ, ನಮ್ಮರಿವಿಗೇ ಬಾರದೇ ಬೆಳೆಯುತ್ತಿರುವ ಅಪಾಯಕಾರಿ ಬೆಳವಣಿಗೆಯೊಂದನ್ನು ನಮ್ಮ ಎದುರಿಗೆ ಹಿಡಿದಿಡುತ್ತಿದ್ದಾನೆ. ಅವರೇ ಪ್ಯಾಟ್ರಿಕ್ ಫ್ರೆಂಚ್ ಎಂಬ ಬರಹಗಾರ. ಜನತಂತ್ರ ಎಂಬುದು ಖಾಸಗಿ ದರ್ಬಾರಿನತ್ತ ಹೊರಳುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಯನ್ನು ನಮ್ಮ ಮುಂದೆ ಇವರು ತೆರೆದಿಟ್ಟಿದ್ದಾರೆ. ನಮ್ಮ ಸಂಸತ್ತಿನಲ್ಲಿರುವ ಎಲ್ಲಾ ೫೪೫ ಸಂಸದರ ಇತಿಹಾಸವನ್ನು, ಹಿನ್ನೆಲೆಯನ್ನು ಸಂಗ್ರಹಿಸಿ, ಕಲೆಹಾಕಿದ ಪ್ಯಾಟ್ರಿಕ್, ಕುತೂಹಲ ಹಾಗೂ ಆತಂಕಕಾರಿ ವಿಷಯವನ್ನು ತೆರೆದಿಡುತ್ತಾರೆ. ಕೆಲವು ಅಂಕಿಅಂಶಗಳನ್ನು ನಾವು ಗಮನಿಸೋಣ:-
ಒಟ್ಟೂ ೫೪೫ ಸಂಸದರಲ್ಲಿ, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಆರಿಸಿ ಬಂದವರು, ೨೫೫ ಜನ. ಕುಟುಂಬ ರಾಜಕಾರಣದಿಂದ ಆಯ್ಕೆಯಾದವರು ೧೫೬ ಜನ. ವಿದ್ಯಾರ್ಥಿ ಜೀವನದ ರಾಜಕೀಯ ಹಿನ್ನೆಲೆಯಿಂದ ಬಂದವರು ೪೭ ಜನ. ವ್ಯವಹಾರದ ಹಿನ್ನೆಲೆಯವರು ೩೫ಜನ, ಆರ್‌ಎಸ್‌ಎಸ್ ೧೮, ರಾಜಕೀಯಕ್ಕೆ ಬರಮಾಡಿಕೊಂಡವರು ೧೬, ಟ್ರೇಡ್ ಯೂನಿಯನ್-೧೦, ರಾಜವಂಶ-೭ ಹಾಗೂ ಕಮಾಂಡರ್-೧.
ಇಲ್ಲಿ ಗಮನಿಸಬೇಕಾದ ಮತ್ತೂ ಒಂದು ಅಚ್ಚರಿಯ ವಿಷಯವಿದೆ. ನಾವೀ ಅಂಕಿ ಅಂಶದಲ್ಲಿ ಗಮನಿಸಿದಂತೆ, ೧೫೬ಜನ ಸಂಸದರು ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ೨೫೫ ಜನ ಯಾವುದೇ ರಾಜಕೀಯ ಹಿನ್ನೆಲೆಇಲ್ಲದೇ ಬಂದವರು. ಮತ್ತು ಗಮನಿಸಿ, ೩೦ ವರ್ಷದೊಳಗಿನ ಎಲ್ಲಾ ಸಂಸದರೂ, ಹಾಗೂ ೪೦ ವರ್ಷ ಒಳಗಿನ ೬೬ಸಂಸದರಲ್ಲಿ ೪೪ಸಂಸದರು ಕೌಟುಂಬಿಕ ಹಿನ್ನೆಲೆ ಇದ್ದವರು. ಅಂದರೆ ನಮ್ಮ ಯುವಕರ ರಾಜಕೀಯ ಇಂದು ಪಂಚಾಯತ್ ಮಟ್ಟಕ್ಕಿಂತ ಮೇಲೇರದಂತೆ ಹಿರಿಯ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ. ಮತ್ತೊಂದು ವಿಷಯ ಗಮನಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮುಖ್ಯ ಪಾತ್ರವಹಿಸಿದ್ದ ಕಾಂಗ್ರೆಸ್ ನಲ್ಲಂತೂ, ೩೫ವರ್ಷ ವಯಸ್ಸು ಮೀರಿದ ಎಲ್ಲಾ ಸಂಸದರೂ ಈ ರೀತಿಯ ಕೌಟುಂಬಿಕ ಹಿನ್ನೆಲೆಯಿಂದ ಸಂಸದರಾದವರು. ಅಂದರೆ ಇದು ಮತ್ತೂ ಒಂದು ಅಂಶವನ್ನು ತೆರೆದಿಡುತ್ತದೆ. ರಾಷ್ಟ್ರದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಸಹಜವಾಗಿಯೇ ಈ ಕುಟುಂಬ ರಾಜಕಾರಣಕ್ಕೆ ತನ್ನನ್ನು ಒಗ್ಗಿಕೊಂಡ ಕಾರಣವಾಗಿ, ಅಲ್ಲಿ ಈಗಿದು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದುಬಿಟ್ಟಿದೆ. ನೋಡಿ, ೨೦೦೪ರ ಚುನಾವಣೆಯಲ್ಲಿ ಮಾಧ್ಯಮಗಳು ಕಣದಲ್ಲಿದ್ದಿದ್ದ ಉಮೇದುವಾರರನ್ನು ಕಂಡು ಯಂಗ್ ಗನ್ಸ್, ಯಂಗ್ ಟರ್ಕ್ಸ್ ಎಂದೆಲ್ಲಾ ಕರೆದರು. ಯಾರು? ಅಂದು ಚುನಾವಣಾ ಕಣಕ್ಕೆ ದುಮುಕಿದ್ದ ಯುವಕರು ಯಾರಾಗಿದ್ದರು? ರಾಜೇಶ್ ಪೈಲಟ್, ಮಾಧವರಾವ್ ಸಿಂಧ್ಯಾ, ಜಿತೇಂದ್ರ ಪ್ರಸಾದ, ಫಾರೂಕ್ ಅಬ್ದುಲ್ಲಾ, ಮುಲಾಯ ಸಿಂಗ್ ಯಾದವ್ ಇವರೆಲ್ಲರ ಸುಪುತ್ರರಾಗಿದ್ದ ಸಚಿನ್ ಪೈಲಟ್, ಜ್ಯೋತಿರಾಧಿತ್ಯ ಸಿಂಧ್ಯಾ, ಜಿತಿನ್ ಪ್ರಸಾದ್, ಓಮರ್ ಅಬ್ದುಲ್ಲಾ, ಅಖಿಲೇಶ್ ಯಾದವ್ ಇಂತವರು. ಇಲ್ಲಿ ಗಮನಿಸಬೇಕಿರುವ ಇನ್ನೊಂದು ಅಂಶವೆಂದರೆ, ಇದೇ ರೀತಿಯ ಬೆಳವಣಿಗೆ ಮಹಿಳಾ ರಾಜಕಾರಣಿಗಳ ವಂಶದಲ್ಲಿ ಕಂಡು ಬರುತ್ತಿಲ್ಲ. ಇನ್ನು ಈ ರೀತಿಯ ವಂಶ ಪಾರಂಪರ್ಯವನ್ನು ನಾವಿತ್ತೀಚಿನ ದಿನಗಳಲ್ಲಿ ಕರ್ನಾಟಕದ ರಾಜಕಾರಣದಲ್ಲಿಯೂ ಕಾಣುತ್ತಿದ್ದೇವೆ.
ಈ ಎಲ್ಲಾ ಅಂಕಿ ಅಂಶಗಳು ನಾವು ಗಣ ತಂತ್ರ ವ್ಯವಸ್ಥೆಯಿಂದ ವಿಮುಖರಾಗಿ ಮತ್ತೆ ಎಲ್ಲಾ ಸಂಸದರು ಅಥವಾ ಆಳುವವರು, ಹೀಗೆ ಕುಟುಂಬ ರಾಜಕಾರಣದಿಂದ ಬಂದವರಿಂದಲೇ ತುಂಬಿ ಹೋಗಿ, ನಮ್ಮ ಪ್ರಜಾ ತಂತ್ರ ಮತ್ತೆ ಚಕ್ರವರ್ತಿಗಳು, ರಾಜರು, ಸಾಮಂತರಿಂದೊಡಗೂಡಿ, ರಾಜಾಧಿಪತ್ವವೇ ಆಗಿಬಿಡುವ ಅಪಾಯದ ಘಂಟೆ ಬಾರಿಸುತ್ತಿದೆಯೇ?
ಹೀಗೇಕೆ ಎಂಬುದು ಚಿಂತನಾರ್ಹ ವಿಷಯವೇ. ಯಾಕೆ ನಾವು, ನಮ್ಮ ಯುವಕರು ರಾಜಕೀಯದಿಂದ ವಿಮುಕ್ತರಾಗುತ್ತಿದ್ದಾರೆಯೇ? ರಾಜಕಾರಣದಲ್ಲಿ ಮಿತಿಮೀರಿದ ಕೊಳಕು, ಆದರ್ಶಗಳಿಗೆ ಅಲ್ಲಿ ಜಾಗವೇ ಇಲ್ಲ ಎಂಬ ಭಾವ ತುಂಬಿಸುವ ಮೂಲಕ, ಯುವಕರನ್ನು ಅಲ್ಲಿ ಪ್ರವೇಶಿಸಗೊಡುತ್ತಿಲ್ಲವೇ? ಅಥವಾ ಪಂಚಾಯತ್ ಮಟ್ಟದಿಂದಲೂ ಎದ್ದು ನಿಂತಿರುವ ಈ ಕುಟುಂಬ ರಾಜಕಾರಣದ ವ್ಯವಸ್ಥೆ, ಯುವ ಜನರಲ್ಲಿ ಭ್ರಮನಿರಸನವನ್ನು ತುಂಬಿಬಿಟ್ಟಿದೆಯೇ? ಈಗ ನೋಡಿ, ಕುಟುಂಬ ರಾಜಕಾರಣದ ಅಪಾಯ ಯಾವ ಮಟ್ಟ ಮುಟ್ಟಿದೆ ಎಂದರೆ, ದೇಶ-ರಾಜ್ಯವನ್ನು ಕೊಳ್ಳೆ ಹೊಡೆಯಲು ಕುಟುಂಬದ ಎಲ್ಲಾ ಸದಸ್ಯರೂ ಒಟ್ಟಾಗಿ ನಿಲ್ಲುತ್ತಾರೆ. ಕೆಲವೇ ಕೆಲವು ಸಂದರ್ಭಗಳಲ್ಲಿ ಈ ಅನಾಚಾರಗಳು ಹೊರಬರುತ್ತವೆ. ಕಾನೂನಿನ ಮುಷ್ಟಿ ಬಿಗಿಯಾದರೆ, ಎಲ್ಲರ ಮೇಲೂ ಕೇಸುಗಳು ಜಡಿಯಲ್ಪಡುತ್ತವೆ. ಪರಿಣಾಮವಾಗಿ ದ್ವೇಷ ರಾಜಕಾರಣ ಬೆಳೆದು ನಿಲ್ಲುತ್ತದೆ. ನಾವೂ ಇತ್ತೀಚೆಗೆ ಗಮನಿಸದ್ದೇವೆ. ಅಪ್ಪ ಮಕ್ಕಳು ಎಂದುಕೊಂಡು, ಮತ್ತೊಂದು ಸಂಸಾರದ ಅಪ್ಪ ಮಕ್ಕಳೇ ಕಾಲ್ಕೆರೆದು ನಿಂತು, ರಾಜ್ಯದ ಅಪಾರ ಆಸ್ತಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು, ಸಾಲದ್ದಕ್ಕೆ ಸಾರ್ವಜನಿಕರ ಜೀವನದ ಮೇಲೆ ಆಟ ವಾಡುವ ಈ ರಾಜಕಾರಣ, ಭ್ರಮನಿರಸನ ಹುಟ್ಟಿಸದೇ ಇನ್ನೇನು ಮಾಡೀತು?
ಹೀಗೆ ಒಟ್ಟಾರೆ ವಿವೇಚನೆಗೆ ಕುಳಿತರೆ, ನಮ್ಮ ಗಣತಂತ್ರ ವ್ಯವಸ್ಥೆ, ಯಾವ ರಾಜಮಾರ್ಗದಲ್ಲಿ ಓಡಾಡಬೇಕೆಂದು ನಾವು ಭಾವಿಸಿದ್ದೇವೆಯೋ, ಅದನ್ನು ಬಿಟ್ಟು ಕುಟುಂಬ ವ್ಯವಸ್ಥೆಯ ದಾರಿ ಹಿಡಿದು, ಮರಳಿ ರಾಜಾಧಿಕಾರದತ್ತ ಹೋಗುತ್ತಿರುವಂತೆ ಭಾಸವಾಗುತ್ತಿದೆ. ಇದು ನಾವು ಗಣತಂತ್ರವನ್ನು ನಮಗೆ ಬೇಕಾದ ಹಾಗೆ ಬೆಳೆಸಿಕೊಂಡ ವಿಧಾನದ ದುರಂತ ಫಲಿತಾಂಶ. ಮುಂದೊಂದು ದಿನ, ಇದೇ ಬೆಳವಣಿಗೆ ಅತಿಯಾಗಿ, ರಾಜಕಾರಣ ಕೆಲವೇ ಕೆಲವು ಕುಟುಂಬಿಕರ ಸ್ವತ್ತು ಎಂಬಲ್ಲಿಗೆ ಬಂದು ನಿಂತು, ನಾವೆಲ್ಲರೂ ಅದಕ್ಕೆ ಶರಣಾಗಿ ನಿಲ್ಲಬೇಕಾದ ದಿನಗಳು ಬಂದರೂ ಅಚ್ಚರಿ ಏನಿಲ್ಲ.
ಗಾಂಧಿ ನೆಹರು ಬಳುವಳಿ ಎನ್ನುವ ಪುಸ್ತಕದಲ್ಲಿ ಕೇರಳದ ಕಮ್ಯೂನಿಷ್ಟ್ ನಾಯಕ ಇ ಎಂ ಎಸ್ ನಂಬೂದಿರಿಪ್ಪಾಡ್ ದಾಖಲಿಸಿದ ವಿಚಾರವೊಂದು ನೆನಪಾಗುತ್ತದೆ. ಕಾಲು ಶತಮಾನದ ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಬದುಕನ್ನೇ ದೇಶಕ್ಕಾಗಿ ಮತ್ತು ಕೊನೆಗೆ ತನ್ನ ಜೀವವನ್ನು ತಾನು ನಂಬಿದ ಅಹಿಂಸಾ ತತ್ವಕ್ಕೆ ಬಲಿಕೊಟ್ಟ ಮಹಾನ್ ಚೇತನ ಗಾಂಧಿ, ಅಗಸ್ಟ್ ೧೫, ೧೯೪೭ರಂದು ಸ್ವಾತಂತ್ರ್ಯ ಸಿಕ್ಕ ನಂತರ ಹೇಳುತ್ತಾರೆ, ನನ್ನ ಕನಸಿನ ಸ್ವಾತಂತ್ರ್ಯ ಇದಲ್ಲ. ಅಧಿಕಾರ ದಾಹ ನನ್ನ ಹಿಂದಿನ ಶಿಷ್ಯರನ್ನು ಎಷ್ಟು ಸ್ವಾರ್ಥಪರವಾಗಿಸಿದೆಯೆಂದರೆ, ಕುಯುಕ್ತಿ ನಡೆಸುವವರನ್ನಾಗಿಸಿದೆಯೆಂದರೆ, ನಾನು ರೂಪಿಸಿದ ರಾಜಕೀಯ ಸಂಘಟನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಂದಯೂ ಉಳಿಯುವ ಆಸೆ ತನಗೆ ಉಳಿದಿಲ್ಲ ಸ್ನೇಹಿತರೇ, ಇದ್ದದ್ದನ್ನು ಸ್ವಲ್ಪವೂ ಅಳುಕಿಲ್ಲದೇ ಸತ್ವಯುತ ಸತ್ಯವನ್ನು ಮುಲಾಜಿಲ್ಲದೇ ಹೇಳುವ ಇದು ಗಾಂಧಿತ್ವ. ತನ್ನ ಈ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿ ಕಾಂಗ್ರೆಸಿಗರ ಹುಬ್ಬೇರುವಂತೆ ಮಾಡಿದ ಈ ಮಹಾತ್ಮ ಇಂದೇನಾದರೂ ಇದ್ದಿದ್ದರೆ, ನಾನು ಆರಂಭದಲ್ಲೇ ಹೇಳಿದಂತೆ ಗೊಡ್ಸೆಯನ್ನು ಹುಡುಕಿಕೊಂಡು ಹೋಗುತ್ತಿದ್ದರೇನೋ ಅನಿಸದಿರದೆ ನೀವೇ ಹೇಳಿ.
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ
ದೂರವಾದೊಡೇನು? ಕಾಲು ಕುಂಟಿರಲೇನು?
ಊರ ನನಪೇ ಬಲವೊ ಮಂಕುತಿಮ್ಮ
ಈ ಭೂಮಿಯಲ್ಲಿ ಮುನ್ನಡೆವ ನಮಗೆ ಉನ್ನತವಾದ ಗುರಿ ಇರಲಿ. ಗುರಿಯನ್ನು ತಪ್ಪಿದರೆ ನರಕಕ್ಕೆ ದಾರಿ. ಆ ಮುಕ್ತಿಮನೆ ದೂರವಿದ್ದರೇನು, ಕಾಲು ಕುಂಟಾದರೇನು? ಮುಕ್ತಿ ಗುರಿಯಿದ್ದರೆ ಮಾತ್ರ ಸಾಕು.
ಅಂತಾದ್ದೊಂದು ಗುರಿ ಇರದಿದ್ದರೆ, ಇಂದು ನಾವು ಸ್ವತಂತ್ರರಾಗುತ್ತಿರಲಿಲ್ಲವಾಗಿತ್ತು. ಅಂತಹಾ ಗುರಿಯೇ ಅಂದು ನಮ್ಮ ನಡುವೆ ದೇಶಾಭಿಮಾನ ಉಕ್ಕಿಸುವ ನೇತಾರರನ್ನು ಸೃಷ್ಟಿಸಿದ್ದು. ಆಂತಹಾ ಗುರಿಯಿದ್ದ ನಾಯಕರಿಂದಲೇ ನಾವು ಇಂದು ನಿಂತು ಇಲ್ಲಿ ಮುಕ್ತವಾಗಿ ಮಾತಾಡುತ್ತಿದ್ದೇವೆ. ಆದರೆ ಇಂದು ನಮ್ಮ ಗುರಿ ತಪ್ಪಿದ ನಾಯಕರು, ಇನ್ನೂ ತಮ್ಮ ತಮ್ಮ ಸ್ವಾರ್ಥದಲ್ಲಿಯೆ ಇದ್ದರೆ, ದೇಶದ ಭವಿಷ್ಯ ಡೋಲಾಯಮಾನವಾಗುವುದರಲ್ಲಿ ಸಂದೇಹವೇ ಇಲ್ಲ.
ಭವ್ಯ ಭವಿತವ್ಯದ ನಮ್ಮ ಗಣ ತಂತ್ರ ವ್ಯವಸ್ಥೆಗೆ ಈಗಿದು ೬೦ರ ಹರೆಯ. ಒಬ್ಬ ವ್ಯಕ್ತಿಯ ಜೀವನದಲ್ಲಿ ಅರುವತ್ತು ವ್ರದ್ಯಾಪ್ಯದ ಸಂಕೇತವಾದರೆ, ಒಂದು ರಾಷ್ಟ್ರ ಅಥವಾ ವ್ಯವಸ್ಥೆಗೆ ಇದು ನಮ್ಮ ಬಗ್ಗೆ ನಾವೇ ಸ್ವ ವಿಮರ್ಶೆ ಮಾಡಲು ಒಂದು ಘಟ್ಟ. ಆ ಘಟ್ಟದಲ್ಲಿ ನಾವಿದ್ದೇವೆ. ನಮ್ಮ ಗಣ ತಂತ್ರ ವ್ಯವಸ್ಥೆ, ಆರುವತ್ತರ ಹರೆಯವನ್ನು ಮುಟ್ಟುವ ವೇಳೆಗೆ, ನಿಜಕ್ಕೂ ವೃದ್ಯಾಪ್ಯದ ಬಳಲಿಕೆಯಿಂದ ಕೂಡಿದೆಯೇ ಎಂಬುದು, ಮೇಲೆ ಹೇಳಿದ ಅಂಶಗಳಿಂದ ನಮ್ಮನ್ನು ಚಿಂತನೆಗೆ ಒಳಪಡಿಸುತ್ತದೆ. ಮುಖ್ಯವಾದ ಇಂತಹ ಬಳಲಿಕೆಗೆ ಕಾರಣವಾಗಿದ್ದು ನಮ್ಮನ್ನಾಳುವವರ ಭ್ರಷ್ಟಾಚಾರ. ಭ್ರಷ್ಟಾಚಾರ ಮುಕ್ತ ಭಾರತ ಗಾಂಧಿಯವರ ಕನಸಾಗಿತ್ತು. ಸ್ವಾತಂತ್ರ್ಯಾಪೂರ್ವದಲ್ಲಿ ದೇಶ ಕೆಲವು ಮೂಡನಂಬಿಗೆಗಳಿಗೆ ಎರವಾಗಿತ್ತು ಮತ್ತು ಅದು ಜನ ಜೀವನದ ಮೇಲೆ ವಿಪರೀತ ದುಷ್ಪರಿಣಾಮ ಬೀರಿತ್ತು. ಜನರನ್ನು ಅಂತಹ ಮೌಡ್ಯತೆಗಳಿಂದ ಹೊರತರುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ದೊಡ್ಡ ಸಮಸ್ಯೆ ಹಗೂ ಸವಾಲಾಗಿತ್ತು. ಆದರೂ ನಮ್ಮ ನಾಯಕರಲ್ಲಿನ ನಿಸ್ವಾರ್ಥ ಹಾಗೂ ದ್ರಢ ನಿರ್ಧಾರಗಳು, ನಿಖರ ಗುರಿಗಳು ಅವರನ್ನು ಗೆಲ್ಲುವ ಛಲ ಹಾಗೂ ವಿಶ್ವಾಸದಿಂದ ಮುಂದುವರಿಯುವಲ್ಲಿ ಸಹಕಾರಿಯಾಗಿದ್ದುವು-ಉತ್ತೇಜಿತವಾಗಿದ್ದುವು. ಆದರೆ ಇಂದು ನಾವು ಯಾವ ನಾಯಕರಿಂದ ಇಂತವನ್ನು ನಿರೀಕ್ಷಿಸುತ್ತಿದ್ದೇವೆಯೋ ಆ ನಾಯಕರೇ ಅಡ್ಡ ದಾರಿ ಹಿಡಿದು ಹೊರಟಿರುವುದು ನಮ್ಮ ದುರಂತವಲ್ಲವೇ? ಎಲ್ಲಿ ನೋಡಿದರೂ ಭ್ರಷ್ಟಾಚಾರ, ಯಾವ ಕಾನೂನೂ ನಮ್ಮನ್ನು ರಕ್ಷಿಸುವ ಭರವಸೆ ಇಲ್ಲದ ಭಯದ ವಾತಾವರಣ.....ಇದೆಲ್ಲವೂ ಯಾಕಾಯ್ತು ಎಂದೇನಾದರೂ ನಾವು ವಿಶ್ಲೇಷಣೆಗೆ ಕುಳಿತರೆ, ನಮಗೆ ಸಿಗುವ ಉತ್ತರ ಬಹುಶ: ಹಿರಿಯರು ತಂದು ಕೊಟ್ಟ ಸ್ವಾತಂತ್ರ್ಯದ ದುರುಪಯೋಗ ಅನಿಸುತ್ತದೆ. ಹಿಂದಿನ ನಾಯಕರಿಗಿದ್ದಿದ್ದ ಯಾವುದೇ ಸಾಮಾಜಿಕ ಸಮಸ್ಯೆಗಳಿಲ್ಲದ ಈ ನಮ್ಮ ಇಂದಿನ ನಾಯಕರು, ಸುಖ ಲೋಲುಪರಾಗಿ, ಸ್ವ ಪರಿವಾರ ಹಿತಾಕಾಂಕ್ಷಿಗಳಾಗಿ, ಸ್ವಜನ ಪಕ್ಷಪಾತಿಗಳಾಗಿ... ಒಟ್ಟಾರೆಯಾಗಿ ಸಮಾಜವನ್ನು ಅವನತಿಯತ್ತ ಕೊಂಡೊಯ್ಯುವ ಎಲ್ಲವನ್ನೂ ಮೈಗೂಡಿಸಿಕೊಂಡು, ಗಣತಂತ್ರ ಎಂಬ ವ್ಯವಸ್ಥೆಗೇ ಮಾರಕವಾಗುತ್ತಿರುವುದು ದುರಂತದ ಪರಮಾವಧಿಯೇ ಸರಿ.
ಈ ಎಲ್ಲದರ ನಡುವೆಯೂ ಆಶಾವಾದವನ್ನು ಸೃಷ್ಟಿಸುವ ಕೆಲವು ವ್ಯವಸ್ಥೆಗಳಿಗೆ ನಾವು ಧನ್ಯರಾಗಲೇ ಬೇಕಿದೆ. ಹಗಲಿರುಳೂ ಹೊಲದಲ್ಲಿ ದುಡಿದು ದೇಶದ ಕಟ್ಟ ಕಡೆಯ ವ್ಯಕ್ತಿಯ ಹಸಿವು ತಣಿಸುವ ಸಂಕಲ್ಪದೊಂದಿಗೆ ಇನ್ನೂ ಆಶಾವಾದಿಯಾಗಿಯೇ ಬದುಕುತ್ತಿರುವ ರೈತ, ತನ್ನ ಅರೆಹೊಟ್ಟೆಯನ್ನೂ ಲೆಕ್ಕಿಸದೇ ದುಡಿವ ಪರಿ ಮನತುಂಬಿಸುತ್ತದೆ. ಹಿಮಚ್ಚಾದಿತ ಪ್ರದೇಶಗಳಲ್ಲಿ ಬಂದೂಕಿನ ಗುಂಡಿಗೆ ಎದೆಯೊಡ್ಡಿ ನಿಂತು, ತನ್ನ ಕುಟುಂಬ, ಜೀವನವನ್ನೆಲ್ಲಾ ಪಣಕ್ಕಿಟ್ಟು ಹೋರಾಡುವ ಸೈನಿಕನಿಂದಾಗಿ ನಾವು ಬೆಚ್ಚನೆಯ ಸೂರಿನಡಿ ಸುಖ ನಿದ್ದೆಯಲ್ಲಿರುತ್ತೇವೆ. ನಮ್ಮ ನಾಯಕರು ಯಾವುದೇ ಮಟ್ಟದ ರಾಜಕಾರಣದಲ್ಲಿ ತಲ್ಲೀನರಾಗಲಿ, ಕರ್ತವ್ಯವೇ ದೇವರೆಂದು ಬಲಿದಾನ ಮಾಡುವ ಈ ಸೈನಿಕ ವರ್ಗವನ್ನು ನಾವು ಇಂತಹಾ ರಾಷ್ಟ್ರೀಯ ದಿನಗಳಂದೂ ಸ್ಮರಿಸಿಕೊಳ್ಳದಿದ್ದರೆ ಅದು ಬಹುದೊಡ್ಡ ಅಪರಾಧವೇ ಸರಿ.
ಒಂದು ವರ್ಗದ ಭ್ರಷ್ಟತೆ ನಿರಾಶೆಯನ್ನು ತುಂಬಿದರೆ, ಮತ್ತೊಂದು ವರ್ಗದ ದಿನ ನಿತ್ಯದ ಬವಣೆಯ ಬದುಕಿನಲ್ಲೂನಿಸ್ವಾರ್ಥತೆ ಹೊಸ ಆಶಾವಾದಕ್ಕೆ ಕಾರಣವಾಗುತ್ತದೆ. ಆ ಮಟ್ಟಿಗೆ ಭಾರತೀಯ ಹೆಮ್ಮೆ ಪಡಲೇ ಬೇಕು. ಕೊನೆಗೆ ಗೆಲ್ಲುವುದು ಸತ್ಯವೇ ಮತ್ತು ಅದುವೇ ಗಾಂಧಿಯವರ ನಂಬುಗೆ ಎಂಬುದನ್ನು ನಾವೀ ಹೊತ್ತು ನೆನಪಿಸಿಕೊಳ್ಳಲೇ ಬೇಕು.
ಈ ಎಲ್ಲಾ ಹಿನ್ನೆಲೆಗಳ ನಡುವೆ, ನಮ್ಮ ಪ್ರಸಕ್ತ ರಾಜಕಾರಣ ಹಿಡಿದ ದಾರಿಯನ್ನು ವಿಡಂಬಿಸುವ ಡುಂಡಿರಾಜರ ಈ ಹನಿಯೊಂದಿಗೆ ಮುಗಿಸುತ್ತೇನೆ.
ಲೋಕ ಸಭೆಯಲ್ಲಿ ಕೆಲವು ಎಂಪಿಗಳು
ಬಾಯಿ ತೆರೆದದ್ದು ಕೇವಲ ಆಕಳಿಸಲು
ಮಾತಾಡದ ಸಂಸದರು ನಿಜಕ್ಕೂ ಬುದ್ದಿವಂತರು
ಬಾಯಿಬಿಟ್ಟು ಬಣ್ಣಗೇಡು ಆಗುವುದೇಕೆ ವೃಥಾ?
ಆದ್ದರಿಂದಲೇ ಐದು ವರ್ಷ ಆಚರಿಸಿದರು ಮೌನವ್ರತ
ಪ್ರಜಾಪ್ರಭುತ್ವ ಚಿರಾಯುವಾಗಲಿ
*****