Wednesday, 10 June 2015

ನಿವೇದನೆ..

ಕಳೆದ ಡಿಸೆಂಬರ್ ನಲ್ಲಿ ಮಂಗಳೂರು ಆಕಾಶವಾಣಿ ಯಲ್ಲಿ ಪ್ರಸಾರವಾದ ನನ್ನ ಕವನ.... ನಿವೇದನೆ.... ನಿಮ್ಮ ಓದಿಗಾಗಿ ಮತ್ತು ನನ್ನ ಖುಷಿಗಾಗಿ... 



ಒಂದು ಹಿಡಿ ಪ್ರೀತಿಯನುಚೆಲ್ಲಿಬಿಡು ಎದೆಯೊಳಗೆ
ಬೆಳೆದು ಹೆಮ್ಮರವಾಗಿ ಫಲ ನೀಡಲಿ|
ಶತ ಶತಕ ಕಳೆದರೂ ಇದಕಿಲ್ಲ ವೃದ್ದಾಪ್ಯ
ನಿತ್ಯತೆರೆ ಮೊರೆಯುವ ಹೊನ್ನಕಡಲು..|

ಒಂದು ಹನಿ ಕಣ್ಣೀರುಜಾರಿದರೂ ನಿನ್ನೊಳಗೆ
ಅದುವೆ ನೆತ್ತರಧಾರೆ ನನ್ನೆದೆಯಲಿ|
ನಿನ್ನೆದೆಯಚೈತ್ರದಲಿ ಕೋಗಿಲೆಯದನಿ ಇರಲು
ಅದುವೇ ನಿತ್ಯೋತ್ಸವದಜಾತ್ರೆ ನನಗೆ|

ಒಂದು ದಿನವೂ ಏನೂ  ಕೇಳಲೊಲ್ಲದ ಮನವು
ಬಯಸುವುದು ನಿನ್ನೆದೆಯತಾಣವನ್ನು|
ಅಪ್ಪಿಬಿಡುಎದೆಗೊಮ್ಮೆ ನನ್ನ ಮೊಗವನು ನೀನು
ಈ ಜಗವ ಮರೆತೇನುಆ ಬಿಗಿತದಲ್ಲಿ|

ಒಂದಿನಿತು ಅಳುಕದೆಯೇ ಅಂಜದೆಯೇ ನಿನ್ನೊಡನೆ
ಹೆಜ್ಜೆಯನು ಸವೆಸುವೆನು ಬದುಕಕಡಲಲ್ಲಿ|
ಏರಿ ಬರುವಲೆಗೆ ಹುಚ್ಚು ಧೈರ್ಯವೇ ಹೇಗೆ
ನೀನಿರಲು ನನ್ನ ಬಳಿ ಕರವ ಹಿಡಿದು|

ಒಂದಿನಿತುಕಣ್ಣೋಟ ನನ್ನೆಡೆಗೆಎಸೆದು ಬಿಡು
ಬಂಧಿಯಾಗುವೆನಲ್ಲೇಎಂದೆಂದಿಗೂ|
ಹೌದಿನಿಯಾ ಹರಿದು ಬಿಡು ನಿನ್ನ ಪ್ರೀತಿಯತೊರೆಯ
ತೊರೆದು ಬರುವೆನು ನಾನು ಜಗದ ಬಂಧ|

ಒಂದು ಹಿಡಿ ಪ್ರೀತಿಯನುಚೆಲ್ಲಿಬಿಡು ಎದೆಯೊಳಗೆ
ಎದೆಗೂಡಿನಲಿ ನಿನ್ನ ಬಚ್ಚಿಡುವೆನು|
ಎಂದಾದರೂ ಮುಂದೆ ಮರಳಿ ಬರದಾಗ ನೀ
ಬರದ ಲೋಕದ ಪಯಣ ಬಲು ಸುಲಭವೆನಗೆ|

No comments:

Post a Comment