Wednesday, 15 January 2014

ಎಲ್ಲಿ ಹೋಗತ್ತಾರೆ ಬುದ್ದಿ ಜೀವಿಗಳು...??

ಜನಪ್ರತಿನಿಧಿಯ ನನ್ನ  ಪ್ರದಕ್ಷಿಣೆಯ ವಾರದ  ಲೇಖನ 

ಇತ್ತೀಚೆಗೆ ಎರಡು ಕಡೆ ನಡೆದ ಸಾಹಿತ್ಯ ಸಮ್ಮೇಳನಗಳು, ಒಂದು ಸಾಮಾನ್ಯ ವಿಷಯದ ಮೇಲೆ ಬೆಳಕು ಚೆಲ್ಲಿದುವು. ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಪ್ರಬಂಧ ಮಂಡನೆ, ಕವನ ವಾಚನ ಅಥವಾ ವೇದಿಕೆಯಲ್ಲಿ ಯಾವುದಾದರೂ ಪ್ರಮುಖ ಪಾತ್ರ ವಿದ್ದ ಸಾಹಿತಿಗಳನ್ನು ಬಿಟ್ಟು, ಒಬ್ಬರೇ ಒಬ್ಬರು ಸಾಹಿತಿಯೂ ಭಾಗವಹಿಸಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿತು. ಇನ್ನೂ ಒಂದು ಸಂತಸದ(?) ಸುದ್ದಿ ಎಂದರೆ, ಈ ಸಮ್ಮೇಳನ ಯಶಸ್ಸಾಗಲು ಮುಖ್ಯ ಕಾರಣವಾದದ್ದು, ಕನ್ನಡದ ಸಾಹಿತಗಳೋ, ಲೇಖಕರೋ ಬುದ್ದಿ ಜೀವಿಗಳೋ ಅಲ್ಲ, ಸಾಮಾನ್ಯ ಜನರು ಎಂಬುದು!

ಇನ್ನೊಂದು ಸುದ್ದಿ ಪುತ್ತೂರಿನಿಂದ. ಅಲ್ಲಿಯೂ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿಯೂ ಖಾಲಿ ಕುರ್ಚಿಗಳ ನಡುವೆ ನಡೆ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡಿದ ಸಮ್ಮೇಳನಾಧ್ಯಕ್ಷ ಆರ್ತಿಕಜೆಯವರು, ಸಾಹಿತಿಗಳೇಕೆ ದಂತಗೋಪುರದಿಂದ ಹೊರಬಂದು ಸಾಮಾಜಿಕ ಸಮಸ್ಯೆಗಳ ಬಗ್ಗೆ ಯೋಚಿಸುತ್ತಿಲ್ಲ ಎಂದು ಹರಿಹಾಯ್ದರು. ಇದು ನಮ್ಮ ಸಾಹಿತಿಗಳ ಮತ್ತೊಂದು ಮುಖವನ್ನು ಕಳಚಿ ಹಿಡಿದ ಘಟನೆ.

ಇದು ಈ ಎರಡೂ ಸಮ್ಮೇಳನಗಳ ಅವಧಿಯಲ್ಲಿ ಹೊರ ಬಂದ ಸತ್ಯಗಳಾದರೂ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಿಪಾಠವಾಗಿದೆ. ಸಾಹಿತ್ಯ ಸಮ್ಮೇಳನಗಳಿಗೆ ಮಾತ್ರ ಅನ್ವಯಿಸಿಕೊಳ್ಳದೇ, ಸಾಹಿತ್ಯಿಕವಾದ ಯಾವುದೇ ಸಭೆ-ಸಮಾರಂಭಗಳಲ್ಲಿಯೂ ಇದನ್ನು ನಾವು ಗಮನಿಸಬಹುದು. ವೇದಿಕೆಯಲ್ಲಿ ಅವಕಾಶ ಸಿಗದು ಅಥವಾ ಆಮಂತ್ರಣ ಪತ್ರಿಕೆಗಳಲ್ಲಿ ಹೆಸರು ಇಲ್ಲದ ಕಡೆ, ಅನೇಕ ಸಾಹಿತಿಗಳು ಮುಖವನ್ನೂ ಹಾಕೂವೂದಿಲ್ಲ.   ಕಳೆದ ಹಲವಾರು ವರ್ಷಗಳಿಂದ ಈ ತರದ ಸಮಾರಂಭಗಳನ್ನು ಆಯೋಜಿಸುತ್ತಿರುವ ಅಥವಾ ಹೋಗುತ್ತಿರುವ ನಾನು ಇದನ್ನಂತೂ ಧಾರಾಳ ಗಮನಸಿದ್ದೇನೆ. ಈ ಬಗ್ಗೆ ಸ್ನೇಹಿತರಲ್ಲಿ ಅನೇಕ ಸಲ ಚರ್ಚಿಸಿ, ಸಾಹಿತ್ಯ ಸಮಾರಂಭಗಳಿಗೆ ಸಾಹಿತಿಗಳನ್ನು ಕರೆತರಲು ಯಾವ ತಂತ್ರ ಅನುಸರಿಸಬೇಕು ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದೇನೆ!.(ವೇದಿಕೆಯಲ್ಲಿ ಅವಕಾಶ ನೀಡುವುದು ಬಿಟ್ಟು)


ಇನ್ನು ಇದರಂತೆಯೇ ಸ್ಥಳೀಯವಾಗಿ ತಲೆದೋರುವ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲಿಯೂ ಸಾಹಿತಿಗಳು ಬಹಳ ಹಿಂದೆ. ಹಿಂದೆಲ್ಲಾ ಕನ್ನಡ ಪರ ಹೋರಾಟಗಳಲ್ಲಿ, ಬರಹಗಾರರ ಪಾತ್ರ ಬಹಳ ದೊಡ್ಡದಿರುತ್ತಿತ್ತು. ಅದರೆ ಈಗ, ರಾಜಕೀಯ-ಸಾಮಾಜಿಕವಾಗಿ ತಲೆದೋರುವ ಯಾವುದೇ ಸಮಸ್ಯೆಗಳಲ್ಲಿ, ಬುದ್ದಿಜೀವಿಗಳೆಂದು ಕರೆಸಿಕೊಂಡವರ ಸೊಲ್ಲೇ ಇರುವುದಿಲ್ಲ.
ಈಗ ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ನದಿ ತಿರುವಿನ ಯೋಜನೆಯ ಬಗ್ಗೆ ಗಲಾಟೆ ಎದ್ದಿದೆ. ಈ ಯೋಜನೆಯಿಂದ ದಕ್ಷಿಣ ಕನ್ನಡ ಬರಡಾಗುವುದರಲ್ಲಿ ಎರಡು ಮಾತಿಲ್ಲ. ಯಾವುದೋ ಒಂದು ಭಾಗದ ಜನತೆಯನ್ನು ಖುಷಿ ಪಡಿಸಲು ಮತ್ತು ರಾಜಕೀಯವಾಗಿ ಬರಬಹುದಾದ ಲಾಭದ ಲೆಕ್ಕಾಚಾರದಲ್ಲಿ ಈ ಯೋಜನೆಯನ್ನು ರಾಜಕೀಯ ಪಕ್ಷಗಳು ಕೈಗೆತ್ತಿಕೊಂಡಿವೆ. ಪರಿಚಿತ ಕಲಾವಿದರೊಬ್ಬರು ಇದರ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಎಲ್ಲಿಯ ತನಕ ಎಂದರೆ ಅವರು ತಮ್ಮ ವೃತ್ತಿ, ಪ್ರವೃತ್ತಿಗಳೆಲ್ಲವನ್ನೂ ಈ ಹೋರಾಟಕ್ಕೆ ಧಾರೆ ಎರೆದಿದ್ದಾರೆ.ತಮಗೆ ದೇಶ ವಿದೇಶಗಳಲ್ಲಿ ಒದಗಿ ಬರುತ್ತಿರುವ ಆರ್ಥಿಕವಾಗಿ ಲಾಭ ತರುವ ಅನೇಕ ಅವಕಾಶಗಳನ್ನು ಕೈ ಚೆಲ್ಲಿಕೊಂಡು, ಹಗಲಿರುಳೂ ಈ ಯೋಜನೆಯ ವಿರುದ್ದದ ಹೋರಾಟದಲ್ಲಿ  ಬಾಗಿಯಾಗಿದ್ದಾರೆ.
ಹೀಗೇ ಒಮ್ಮೆ ಮಾತಿಗೆ ಸಿಕ್ಕಿದ ಅವರ ಬಳಿ, ಲೋಕಾಭಿರಾಮವಾಗಿ ಈ ಬಗ್ಗೆ ಕೇಳಿದೆ. ಜಿಲ್ಲೆಯ ಬುದ್ದಿಜೀವಿಗಳ ಬೆಂಬಲ ನಿಮ್ಮ ಹೋರಾಟಕ್ಕೆ ಯಾವ ರೀತಿ ಸಿಗುತ್ತಿದೆ ಎಂದು ವಿಚಾರಿಸಿದಾಗ ಅವರ ಧ್ವನಿಯಲ್ಲಿ ವಿಷಾದ ಮಡುಗಟ್ಟಿತ್ತು. ಇಲ್ಲಿ ಬೆಂಬಲ ಇಲ್ಲವಾದರೂ ಅದು ಬೇರೆಮಾತು. ಆದರೆ ನಮ್ಮ ಹೋರಾಟದಲ್ಲಿ ಬೇರೇನೋ ಅರ್ಥವನ್ನು ಹುಡುಕಿ, ಬಹುಶ: ಇದಕ್ಕೆಲ್ಲಾ ಎಲ್ಲಿಂದಲೋ ಹಣ ಬರುತ್ತಿರಬಹುದು, ಅದಕ್ಕೆ ಇವರು ಹೋರಾಟ ಮಾಡುತ್ತಿದ್ದಾರೆ, ಇಲ್ಲವಾದರೆ ಎಲ್ಲಾ ಬಿಟ್ಟು ಹೀಗೆ ಹೋರಾಡಲು ಇವರಿಗೇನು ಹುಚ್ಚೇ ಎಂದು ತಮಗೆ ತೀರಾ ಆಪ್ತರೆಂದುಕೊಳ್ಳುವ ಬುದ್ದಿ ಜೀವಿಗಳೂ ಮಾತಾಡಿಕೊಳ್ಳುತ್ತಾರೆ ಎಂದವರು ಹೇಳಿದರು. 

ಇದು ಅಚ್ಚರಿ ತರಿಸಿತು. ಇತ್ತೀಚೆಗೆ ಇವರ ಹೋರಾಟ ಪ್ರಖರತೆ ಕಂಡುಕೊಂಡಿದೆ. ಮೀನುಗಾರರನ್ನು, ಸಾರ್ವಜನಿಕರನ್ನು ಒಂದೆಡೆ ಸೇರಿಸಿ, ಎಲ್ಲರಿಗೂ ಈ ಯೋಜನೆಯಿಂದಾಗುವ ಅನಾಹುತಗಳನ್ನು ಮನದಟ್ಟು ಮಾಡಿ, ಹೋರಾಟಕ್ಕೆ ಅಣಿಗೊಳಿಸುತ್ತಿದ್ದಾರೆ. ಆದರೆ, ದುರಂತ ಹಾಗೂ ಅಚ್ಚರಿಯ ವಿಚಾರವೆಂದರೆ, ಇವರಂತಿರುವ ಇತರ ಕಲಾವಿದರು ಹಾಗೂ ಸಾಹಿತಿಗಳು ಮಾತ್ರ ತಮ್ಮ ದಂತಗೋಪುರದಿಂದ ಹೊರ ಬರುತ್ತಿಲ್ಲ. ಇತ್ತೀಚೆ ಈ ಬಗ್ಗೆ ವಿರೋಧಿಸಿ, ಮೆರವಣಿಗೆಯೊಂದನ್ನು ಮಾಡಿದಾಗ, ಜಿಲ್ಲೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ  ಹೆಸರಾದ ಅನೇಕ ಗಣ್ಯ ಮುಖಗಳು ಅಲ್ಲಿ ಕಾಣಲೇ ಇಲ್ಲ-ಇದಲ್ಲವೇ ದುರಂತ.
ಇನ್ನೂ ಮುಂದುವರಿದ ಅವರು ಹೇಳುತ್ತಾರೆ. ಈ ಹೋರಾಟದ ಬಗ್ಗೆ ಇದೇ ತರದ ಬುದ್ದಿಜೀವಿಗಳು ಕೇಳುವ ಒಂದು ಪ್ರಶ್ನೆ, ನೀವು ಈ ಯೋಜನೆಯ ಪರವೋ, ವಿರುದ್ಧವೋ ಎಂದು!. ಅಷ್ಟೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಇವರಿಗೆ ಅರಿವೇ ಇರುವುದಿಲ್ಲ ಎಂಬುದು ಎಂತಹ ದುರಂತ ನೋಡಿ. ಈ ಯೋಜನೆಯನ್ನು ನಿಲ್ಲಿಸಲು, ಸಂಬಂಧಿಸಿದ ಕಾನೂನು ಹೋರಾಟಕ್ಕೆ ನ್ಯಾಯಾಲಯದ ಮೆಟ್ಟಿಲೇರಲು ಮತ್ತು ಅಲ್ಲಿ ಹೋರಾಡಲು ಕನಿಷ್ಟ ೨೫ಲಕ್ಷ ರೂಪಾಯಿಗಳು ಬೇಕಾಗಬಹುದು ಎಂಬುದು ತಜ್ಞರ ಅಭಿಮತ. ಏನೇ ಇರಲಿ, ಅದನ್ನೂ ನೋಡಿ ಬಿಡೋಣ ಎಂದು ಆ ದಾರಿಯನ್ನು ಹಿಡಿಯ ಹೊರಟರೆ, ಕೊಡುಗೈ ದಾನಿಗಳು ಅನಿಸಿಕೊಂಡವರೂ ಇದಕ್ಕೆ ಸಹಾಯ ಮಾಡಲು ಹಿಂಜರಿಯುತ್ತಾರೆ. ಅದಕ್ಕೆ ಕಾರಣ, ರಾಜಕೀಯವಾಗಿ ತಾವು ಗುರುತಿಗೆ ಬಂದರೆ ಮುಂದೆ ತಮ್ಮ ವ್ಯವಾಹಾರಕ್ಕೆ ಅಡ್ಡಿಯಾಗಬಹುದು ಎನ್ನುವುದು ಮತ್ತು ಈ ಕೊಡುಗೆ ಯಾವ ಮಟ್ಟದಲ್ಲಿಯೂ ತಮಗೆ ಹೆಸರು ತಂದುಕೊಡದೇ ಇರುವುದು!. ಇದನ್ನೆಲ್ಲಾ ವಿವರಿಸುವಾಗ, ಆ ಕಲಾವಿದ-ಹೋರಾಟಗಾರನ ದನಿ ಗದ್ಗದಿತವಾಗುತ್ತದೆ ಮತ್ತು ನಮ್ಮ ಬುದ್ದಿಜೀವಿಗಳು ಮತ್ತು ವ್ಯವಸ್ಥೆ ಹೀಗೇಕೆ ಎಂಬ ಪ್ರಶ್ನೆ ಕಾಡುತ್ತದೆ.

ಇಲ್ಲಿ ಸಾಹಿತಿಗಳನ್ನು ಮಾತ್ರವೇ ಗಮನದಲ್ಲಿಟ್ಟು ನಾನೀ ವಿಷಯ ಹೇಳುತ್ತಿಲ್ಲ. ಸಾಮಾಜಿಕವಾಗಿ ತಲೆದೋರುವ ಎಲ್ಲಾ ಸಮಸ್ಯೆಗಳಿಗೂ ಇಂತಹ ವರ್ಗದಿಂದ ಸಿಗುತ್ತಿರುವ ಒಟ್ಟಾರೆ ಸ್ಪಂದನೆ ನಿರಾಶಾದಾಯಕ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಇತ್ತೀಚೆಗೆ ಆಳ್ವಾಸ್ ನುಡಿಸಿರಿ ನಡೆಯಿತು. ಅಲ್ಲಯೂ 'ತಾತ್ವಿಕ'ವಿರೋಧದ ಹೆಸರಲ್ಲಿ ನುಡಿಸಿರಿಗೆ ವಿರುದ್ಧದ ದನಿ ಕೇಳಿಬಂತು. ಗಮನಿಸಬೇಕಾದ್ದು ಎಂದರೆ, ಈ ರೀತಿ ವಿರೋಧ ವ್ಯಕ್ತವಾದದ್ದು, ಅನೇಕ ವರ್ಷಗಳಿಂದ ಒಂದಿಲ್ಲೊಂದು ರೀತಿಯಲ್ಲಿ ನುಡಿಸಿರಿಗಳಲ್ಲಿ   ಭಾಗವಹಿಸಿದವರಿಂದಲೇ ಎಂಬುದು. ಆದರೆ ಈ ಬಗ್ಗೆ ಒಮ್ಮೆ ನಾಡಿನ ಖ್ಯಾತ ಸಂಘಟಕರಲ್ಲಿ ವಿಚಾರಿಸಿದೆ. ಅವರು ಅದಕ್ಕೆ ವಿರೋಧ ವ್ಯಕ್ತ ಪಡಿಸುವುದು ಬಹು ಸುಲಭ. ಆದರೆ ಅಂತಾದ್ದೊಂದು ಸಮ್ಮೇಳನವನ್ನು ಆಯೋಜಿಸುವುದು ಬಹಳ ಕಷ್ಟ ಎಂದರು. ಇದು ನಿಜದ ವಿಷಯ. ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಯಾವುದೇ ಕೆಲಸಕ್ಕೆ ಒಂದೆರಡು ವಿರೋಧದ ಸಾಲು ಗೀಚಿ. ಮೈಕ್ ಹಿಡಿದು ಕೂಗಿ ವಿರೋಧ ವ್ಯಕ್ತ ಪಡಿಸಬಹುದು. ಆದರೆ ಅಂತಾದ್ದೊಂದು ಸಂಘಟನೆಯನ್ನು ನಮಗೆ ಮಾಡಲಾದೀತೆ ಎಂಬುದು ಪ್ರಶ್ನೆ. ಇಂತಹ ಸಂಘಟನೆಗಳನ್ನು ನಾವು ಮಾಡುವುದಿಲ್ಲ ಬಿಡಿ ಎಂಬ ಹಾರಿಕೆಯ ಉತ್ತರ ವ್ಯಂಗ್ಯವಾಗಿ ಬರಬಹುದು. ಆದರೆ ವಿಷಯ ಅದಲ್ಲ. ಒಂದು ವ್ಯವಸ್ಥೆಯಲ್ಲಿ ಎಲ್ಲವನ್ನೂ ಸರಿಯಾಗಿ ನಡೆಸಲಾಗದು. ಅಲ್ಲಿಯೂ ಒಂದಷ್ಟು ಲೋಪದೋಷಗಳಿರಬಹುದು. ಹಾಗೆಂದು ಆ ಲೋಪ ದೋಷಗಳನ್ನು ಸರಿಪಡಿಸಲು ವ್ಯವಸ್ಥೆಯ ಜೊತೆಗೆ ನಿಂತು, ಉಳಿದು ಸಹಕರಿಸುವುದು ಬಿಟ್ಟು, ಅದರ ಮೂಲ ಬೇರನ್ನೇ ಕಿತ್ತು ತೆಗೆಯುತ್ತೇವೆ ಎಂದು ಹೊರಡುವುದು ಮೂರ್ಖತನವೇ ಸರಿ. ಕೆಲವು 'ಜನಮಾರಕ' ವ್ಯವಸ್ಥೆಗಳನ್ನು ಅಮೂಲಾಗ್ರವಾಗಿ ನಾಶ ಮಾಡಬೇಕು. ಅದನ್ನೂ ನಾನು ಒಪ್ಪುತ್ತೇನೆ. ಆ ಬಗ್ಗೆ ಯುಕ್ತ ವಿವೇಚನೆ ಇರಬೇಕು ಎಂಬುದು ನನ್ನ ಅಭಿಮತ.

ಈಗ ಮತ್ತೊಮ್ಮೆ ನಾನು ಹೇಳಿದ ಎರಡೂ ವಿಚಾರಗಳನ್ನು ಅವಲೋಕಿಸಹೊರಟರೆ...ಆಳ್ವಾಸ್ ನುಡಿಸಿರಿ ವಿರುದ್ದ 'ತಾತ್ವಿಕತೆ'ಯ ಮಾತಾಡಿ ಹೋರಾಡುತ್ತಿರುವ ಈ ವರ್ಗ, ನೇತ್ರಾವತಿಯಂತಹ ಪರಿಸರ-ಜನಜೀವನ ವಿರೋಧಿ ಯೋಜನೆಯ ವಿರುದ್ಧ ಬೀದಿಗಿಳಿಯುವುದಿಲ್ಲ. ಬೀದಿಗಿಳಿಯುವುದು ಮತ್ತೆ, ಕನಿಷ್ಟ ಆ ಹೋರಾಟಕ್ಕೆ ತಮ್ಮ 'ತಾತ್ವಿಕ'ಬೆಂಬಲವನ್ನೂ ಘೋಷಿಸುವುದಿಲ್ಲ...ಯಾಕೆ ಎಂಬುದು ಈಗಿನ ಪ್ರಶ್ನೆ.

ಯಾಕೆಂದರೆ ಈ ಹೋರಾಟದಲ್ಲಿ ಯಾವುದೇ ವೇದಿಕೆ ಇರುವುದಿಲ್ಲ ಎಂಬುದು ಉತ್ತರವೇ? ಯಾವುದೇ ಹೆಸರು ಬರದು, ಪ್ರಶಸ್ತಿ ಬಾರದು ಎಂಬುದು ಉತ್ತರವೇ? ಗೊತ್ತಾಗುತ್ತಿಲ್ಲ. ಆಗಬೇಕಾದ್ದು ಆಗಬೇಕಾದ ದಾರಿಯಲ್ಲಿ ಆಗುತ್ತಿಲ್ಲವೆಂಬುದು ಮಾತ್ರ ಕಣ್ಣಿಗೆ ಕಾಣುವ ಸತ್ಯ.

ಇನ್ನು ಸಮ್ಮೇಳನದ ವಿಷಯಕ್ಕೇ ಮರಳಿ ಬಂದರೆ, ಅಲ್ಲಿತೆಗೆದುಕೊಳ್ಳುವ ನಿರ್ಣಯಗಳು. ಇದರ ಬಗ್ಗೆ ಮೊದಲಿನಿಂದಲೂ ಅಪಸ್ವರ ಕೇಳುತ್ತಲೇ ಇದೆ. ಅಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಸಮ್ಮೇಳನ ನಂತರ ಏನಾಗುತ್ತವೆ ಮತ್ತು ಅವುಗಳ ಆಯುಷ್ಯ ಎಷ್ಟು ಎಂಬುದು ಯಕ್ಷ ಪ್ರಶ್ನೆಯೇ ಸರಿ. ಅದರ ಬಗ್ಗೆ ಬರೆಯ ಹೊರಟರೆ, ಲೇಖನ ಸರಣಿ ಆರಂಭಿಸಬೇಕಾದೀತು. ಹರಿಕೃಷ್ಣ ಪುರೂರು ಅವರು ಸಿಕ್ಕಿದಾಗೆಲ್ಲಾ ಹೇಳುತ್ತಿರುತ್ತಾರೆ, ತಮ್ಮ ಅವಧಿಯಲ್ಲಿ ಸರಕಾರಗಳು ಸಮ್ಮೇಳನಕ್ಕೆ ಲಕ್ಷದ ಲೆಕ್ಕದಲ್ಲಿ ಹಣ ಕೊಡಲು ಹಿಂದೇಟು ಹಾಕುತ್ತಿತ್ತು, ಅದರೂ ಸಮ್ಮೇಳನ ಪರಿಣಾಮಕಾರಿಯಾಗುತ್ತಿತ್ತು(ಕನಿಷ್ಟ ಸಾಹಿತಗಳಾದರೂ ಭಾಗವಹಿಸುತ್ತಿದ್ದರು??). ಆದರೆ ಈಗ ಕೋಟಿಗಟ್ಟಲೇ ಹಣದ ಹೊಳೆ ಹರಿದರೂ, ಸಮ್ಮೇಳನ ಮುಗಿವಾಗ ಲೆಕ್ಕ ಎಲ್ಲೋ ಸೋರಿರುತ್ತದೆ-ಸೇರಿರುತ್ತದೆ ಎನ್ನುತ್ತಾರೆ!. ಸಮ್ಮೇಳನದ ಪರಿಣಾಮ ಮಾತ್ರ ದೊಡ್ಡ ಶೂನ್ಯವೆಂಬುದು ಒಪ್ಪಬೇಕಾದ ಮಾತೇ ಸರಿ.

ಹೀಗೆ ನಮ್ಮ ಸುತ್ತಲಿನ ಸಾಮಾಜಿಕ ಬದುಕಿನ ಗೊಡವೆಯೇ ಇಲ್ಲದೇ ಬದುಕುವ ಸಾಹಿತ್ಯ, ಸಾಹಿತಿ, ಬುದ್ದಿಜೀವಿ ವರ್ಗ ಎಲ್ಲವೂ ಯೋಚಿಸಲೇ ಬೇಕಾದ ವಿಚಾರ ಬಹಳಷ್ಟಿದೆ. ಅಷ್ಟನ್ನು ಮಾತ್ರ ಹೇಳಬಹುದು. 

6 comments:

 1. ನಮಸ್ತೆ.. ನಿಮ್ಮ ಲೇಖನ ಅತ್ಯುತ್ತಮ. ಬುದ್ದಿಜೀವಿಗಳು ಹಾಗೂ ದೊಡ್ಡವರ ಸಣ್ಣತನಗಳ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಮತ್ತು ಇವರಿಗೆ ಯಾವತ್ತೂ ಜಾಣ ಕುರುಡು, ಕಿವುಡರಂತೆ ವರ್ತಿಸುವುದು ಗೊತ್ತು. ನೀವು ಹೇಳಿದಂತೆ ಚಿಕ್ಕದೊಂದು ಸಮಾರಂಭ ಆಯೋಜಿಸಿದರೆ ಅದರಲ್ಲೂ ಸಾಹಿತಿಗಳ ಮತ್ತು ಸಾಹಿತ್ಯಪ್ರಿಯರ ಹುಡುಕಿ ತರಬೇಕಾಗಿದೆ ಇಂದು. ಸಾಹಿತಿಗಳು ಮತ್ತು ಬುದ್ದಿಜೀವಿಗಳೆಂದರೆ ಎಲ್ಲವನ್ನೂ ಅರಿತ ಸರ್ವಜ್ಞರಂತೆ ಆಡುತ್ತಾರೆ. ಒಬ್ಬರನ್ನು ವೇದಿಕೆಗೆ ಕರೆದರೆ ಇನ್ನೊಬ್ಬ ಸಾಹಿತಿ ಸಭೆಯತ್ತ ಮುಖ ಮಾಡಿಯೂ ನಡೆಯುವುದಿಲ್ಲ. ಇಷ್ಟೊಂದು ಈಗೋ, ಅಹಂಗಳನ್ನೇ ತುಂಬಿಕೊಂಡು ಕೇವಲ ಸ್ವಾರ್ಥ ಸಾಧಿಸುವ ಬುದ್ದಿಜೀವಿಗಳು ಮತ್ತು ದೊಡ್ಡವರೆನಿಸಿಕೊಂಡವರು ಮುಂದಿನ ಪೀಳೀಗೆಗೆ ಏನು ಕೊಡಬಲ್ಲರು? ನಾಡಿಗೆ ಸಂಸ್ಕೃತಿಗೆ ಯಾವ ಪಾಠ ಹೇಳಬಲ್ಲರು? ವಿದ್ವತ್ತು ಇದ್ದಲ್ಲಿಯೂ ವಿನಯ ನಿಜವಾದ ದೊಡ್ಡತನ ತೋರುವವರ ಮುಂದೆ ನಮ್ಮ ಯುವ ಪೀಳಿಗೆ ಸಾಕಷ್ಟು ಕಲಿಯುವುದಿದೆ. ಸಾಮಾಜಿಕ ಜವಾಬ್ಧಾರಿಗಳ, ಒಗ್ಗೂಡಿ ಹೋರಾಡುವುದ ತೋರಿಸಿಕೊಡಬೇಕಾದವರೇ ಹೀಗೆ ಆಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಇದು ಕೇವಲ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ವಿಷಯವಲ್ಲ. ಇಡೀ ನಾಡಿನ ಎಲ್ಲ ಜಿಲ್ಹೆಗಳು ಹಾಗೂ ಸಾಹಿತ್ಯ ಪ್ರಪಂಚದಲ್ಲಿ ಕಾಣುತ್ತಿರುವುದು. ಆದರೆ ಬುದ್ಧಿಜೀವಿಗಳಿಗೆ ಇವೆಲ್ಲ ಕೇಳುವುದಿಲ್ಲ ಬಿಡಿ.

  ReplyDelete
 2. vicaragalu hidida kannadiya hage ide aadre illi bekki ge gante kattuvavaru yaru ennuvude prashne?

  ReplyDelete
 3. ಸೊಗಸಾಗಿದೆ ಬರಹ.

  ReplyDelete
 4. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಜನವರಿ ೨೬ರಿಂದ ಅಂತರಜಾಲ ಪತ್ರಿಕೆ ಪ್ರದಕ್ಷಿಣೆ (www.pradakshine.com)ಆರಂಭವಾಗಲಿದೆ. ಎಲ್ಲರ ಅಭಿಪ್ರಾಯ, ಬರಹಗಳಿಗೆ ಸ್ವಾಗತ್. ನಂತರ ಅತೀ ಸನಿಹದಲ್ಲಿ, ಸಮಾನ ಮನಸ್ಕರ ಸಮಾವೇಶದ ಆಲೋಚನೆಯೂ ಇದೆ. ನಿಮ್ಮೆಲ್ಲರ ಸಹಕಾರವಿರಲಿ

  ReplyDelete