Monday 15 June 2015

ಮರವಂತೆಯ ಸೂರ್ಯಾಸ್ತ....

ಮರವಂತೆ.... ನಾನು  ಬಹುವಾಗಿ ಪ್ರೀತಿಸುವ ಸ್ಥಳ... ನನ್ನೆಲ್ಲಾ ನೋವು, ನಲಿವಿಗೆ, ಸಂತಸ, ದು:ಖಕ್ಕೆ ಕಿವಿಯಾದದ್ದು ಈ ಸುಂದರಿ... ಎಂದೋ ಬರೆದಿಟ್ಟಿದ್ದ ಈ  ಸಾಲುಗಳಿಗೆ ಈಗ ಇಲ್ಲಿ ಹೊರ ಹೊಮ್ಮುವ ಅವಸರ... 


ದಿವ್ಯತೆಯೇ ಮೈವೆತ್ತ ಓ ನನ್ನ ಮರವಂತೆ

ಇರುವಂತೆ ನೀನು ಭೂಲೋಕಪ್ಸರೆಯೂ
ನಿನ್ನ ತಡಿಯಲಿ ಕುಳಿತು ಹಿಡಿದಿಡಲು ಕನಸುಗಳ
ಸೂರ್ಯಾಸ್ತದ ದೃಶ್ಯ ಕಾಣುವುದು ಹೀಗೆ
ನಸು ನಾಚಿ ಕೆಂಪಾದ ಹದಿಹೆಣ್ಣ ಹಾಗೆ!

ಆಚೆ ಸೌಪರ್ಣಿಕೆಯು ಕಲ್ಪ ಮುಕುಟವ ತೊಟ್ಟು
ಹೆದ್ದಾರಿ ಸೆರಗನ್ನು ಹೊದ್ದು ಮಲಗಿರಲು
ಬೆರಗಾದ ಅರಬಿಯೂ ತಲೆಬಾಗಿ ನರ್ತಿಸಲು
ಅರುಣನೂ ನಸು ನಾಚಿ ಓಡಿರುವ ಹೀಗೆ


ತುಂಟ ಮಗು ತೆರೆಸರಿಸಿ ಹಾಲ್ಕುಡಿದ ಹಾಗೆ!

ಯಕ್ಷಗಾನದ ಚೆಂಡೆ ಮದ್ದಳೆಯ ಆರ್ಭಟಕೆ
ಕುಳಿರ್ಗಾಳಿಗೂ ಒಮ್ಮೆ ಭೋರ್ಗರೆತದಾಸೆ
ನಿನ್ನ ಈ ಆರ್ಭಟಕೆ ಮನಸೋತ ಭೂರಮೆಗೂ
ಆ ರವಿಯ ತನ್ನೊಳಗೆ ಅಡಗಿಸಲು ಹೀಗೆ
ಕುಂಕುಮರಶಿನವನ್ನು ಚಿಲ್ಲಿರುವ ಹಾಗೆ!

ಒಮ್ಮೆ ಭೋರ್ಗರೆತ ಶಾಂತತೆಯು ಮತ್ತೊಮ್ಮೆ
ನಿನ್ನಾಟ ನಿನ್ನರಿವ ಪರಿಧಿ ಹೊರಗೇ
ಮರಳು ಕಲ್ಲುಗಳೆಲ್ಲಾ ನಿನ್ನ ತಡೆಗವಸರಿಸಿ
ನಿನ್ನೊಳಗೆ ಕರಗುವ  ಆ ಆದಿಯೇ ಹೀಗೆ
ಶಶಿಗೆ ಸ್ವಾಗತವೀವ ಮನದನ್ನೆಯ ಹಾಗೆ!

ಓ ಭವ್ಯ ಮರವಂತೆ, ಓ ದಿವ್ಯ ಮರವಂತೆ
ಶಾಂತನಾಗಿರು ವರಾಹ ಮಡಿಲಲ್ಲಿ ನೀನು
ನಿನ್ನ ಏರಿಳಿತವೀ  ಸೌಪರ್ಣಿಕೆಯ ಮಡಿಲೊಳಗೆ
ಭಾಗವತ  ಕಂಠದ ಹಾಡಾಗಿ ಹೀಗೆ
ಈ ಬದುಕ ಬೆಳಗಲಿ ಸವಿಜೇನ ಹಾಗೆ!!

No comments:

Post a Comment