Thursday, 13 August 2015

ಸಮಾಧಿಯೊಳಗಿನ ಪ್ರಶ್ನೆ ...!!!

ಇತ್ತೀಚೆಗೆ ಬರೆದ ಕವನ..... ಸತ್ಯವಿರಬಹುದೇನೋ....



ಅಲ್ಲಿ...
ಯಾರದ್ದೋ ಸಮಾಧಿ ಮೇಲೆ
ಎದ್ದು ನಿಂತಿದೆ ಬಂಗಲೆ-
ಇಂದದರ ಪ್ರವೇಶವಂತೆ!!
ಸಂಭ್ರಮವೋ ಸಂಭ್ರಮ!
ಒಳಗಿನ ಆತ್ಮ ಕಣ್ಣುಜ್ಜಿ
ಕಣ್ತೆರೆದು ಹೊರ ನೋಡುತಿತ್ತು
ಇವರಲ್ಲವೇ ಮಣ್ಣು ಮಾಡುವಾಗ
ಅತ್ತವರು-ಜಗ ಬಿರಿಯುವಂತೆ!!
ಅಲ್ಲಿ...
ಬಂಗಲೆಯ ತುತ್ತ ತುದಿಯಲ್ಲಿ
ಕುಳಿತಿದ್ದ ಕಾಗೆಯನು ಕಂಡರಾರೋ!
ಎಸೆದು ಬಿಡಿ ಒಂದು ತುತ್ತು
ಸಮಾಧಾನವಾಗಲಿ ಆತ್ಮ...!
ಮತ್ತೆ ಬಡಿಸೋಣ ಭೂರಿ
ಭೋಜನವ ನಮ್ಮೆಲೆಗೆ!!
ಅಲ್ಲಿ...
ಆತ್ಮ ನಕ್ಕಿತು, ತನ್ನವರ ಕುಟಿಲತೆಗೆ
ಅಲುಗಾಡಲಾರದೇ ಬಂಗಲೆಯ
ಗಟ್ಟಿ ತಳಪಾಯದೊಳಗೆ!!
ಕಣ್ಮುಚ್ಚಿತು ಮತ್ತೆಂದೂ
ತಪ್ಪಿಯೂ ತೆರೆಯದ ಹಾಗೆ!