Friday, 20 April 2018

ರುತ್ ಪ್ರೀತಿಕಾ ತೆರೆದಿಟ್ಟ ’ಕ್ರಿಸ್ತಪಥ’

 ಏಪ್ರಿಲ್ ೧ರಂದು ಮಂಗಳೂರು ಪುರಭವನದಲ್ಲಿ ಪ್ರದರ್ಶಿತವಾದ ಕ್ರಿಸ್ತಪಥದ ಬಗ್ಗೆ ನಾನು ಬರೆದ ವಿಶ್ಲೇಷಣೆ ಇಂದಿನ (೨೦.೦೪. ೨೦೧೮) ಪ್ರಜಾವಾಣಿಯಲ್ಲಿ.... ಲೇಖನದ ಪೂರ್ಣ ಪಾಠ ಇಲ್ಲಿದೆ 

ಕೃಷ್ಣನಲ್ಲಿ ನಾವು ಎಲ್ಲಾ ದೇವರನ್ನು ಕಾಣ ಬಲ್ಲೆವಾದರೆ ಕ್ರಿಸ್ತನಲ್ಲೂ ನಾವೇಕೆ ಕೃಷ್ಣನನ್ನು ನೋಡಬಾರದು ಎಂಬುದು ಯೋಚನಾರ್ಹ ಜಿಜ್ಞಾಸೆ. ರಾಮ , ರಹೀಮ ಕ್ರಿಸ್ತರನ್ನು ಪರಸ್ಪರರಲ್ಲಿ ಕಾಣಬಹುದಾದರೆ  ಸಮಾಜದ ಬಹುದೊಡ್ಡ ಪಿಡುಗೊಂದು ತಂತಾನೇ ಸಾಮರಸ್ಯವಾಗಿ ಬದಲಾಗಬಹುದೇನೋ!!. ಆದರೆ ಇದು ಅಷ್ಟು ಸುಲಭದ ಮಾತಲ್ಲ. ಹೀಗೇನಾದರೂ ಆಗಬಹುದಾದರೆ ಅದನ್ನು ಮಾಡುವ ತಾಕತ್ತು ಕಲೆಗೆ ಇದೆ ಎಂಬುದನ್ನಿ ನಿರೂಪಿಸಿದ ವಿಭಿನ್ನ ಆಲೋಚನೆಯ ಆಯೋಜನೆಗೆ ಮಂಗಳೂರು ಪುರಭವನದಲ್ಲಿ ವಿದುಷಿ ರುತ್ ಪ್ರೀತಿಕಾ ಪ್ರಸ್ತುತ ಪಡಿಸಿದ ಕ್ರಿಸ್ತ ಪಥ ಕಾರಣವಾಯಿತು. 

ನೃತ್ಯ ಗುರು ವಿದ್ಯಾಶ್ರೀ ರಾಧಾಕೃಷ್ಣ ಸದಾ ಹೊಸತನದ ಹುಡುಕಾಟದಲ್ಲಿರುವವರು. ಸವಾಲು, ವಿರೋಧ, ಬೆಂಬಲ ಇಂತಹ ಹುಡುಕಾಟದಲ್ಲಿ ಸಹಜವೆಂದು ನಂಬಿ, ಅದಕ್ಕೆ ಪೂರ್ವತಯಾರಿಯೊಂದಿಗೇ ತಮಗನಿಸಿದ ಧನಾತ್ಮಕ ಯೋಜನೆಯನ್ನು ಕಾರ್ಯರೂಪಕ್ಕೆ ತರುವವರು. ಇಂತಾದ್ದೇ ಸಾಹಸವನ್ನು ಅವರು ಕೈಗೊಂಡಿದ್ದು, ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತ ನಾಟ್ಯಕ್ಕೆ ಏಸು ಕ್ರಿಸ್ತನ ಚರಿತ್ರೆಯನ್ನು ಅಳವಡಿಸಿಕೊಂಡು ಕ್ರಿಸ್ತ ಪಥದ ಮೂಲಕ ರಂಗಕ್ಕೇರಿಸಿದ್ದು-ಗೆದ್ದದ್ದು!

ಇವರ ಗರಡಿಯಲ್ಲಿ ಪಳಗಿದ ಶಿಷ್ಯೆ ರುತ್ ಪ್ರೀತಿಕಾ ಈ ಯೋಜನೆಯ ಕ್ರಿಸ್ತ ಪಥದಲ್ಲಿ ಹೆಜ್ಜೆ ಹಾಕಿದ್ದಾರೆ. ಈಕೆಯ ತಂದೆ ತಾಯಿ ವೈದ್ಯರು. ತಮ್ಮ  ಬಿಡುವಿರದ ವೃತ್ತಿಯಲ್ಲೂ ಕಲೆಗೆ ಪ್ರೋತ್ಸಾಹ ನೀಡುತ್ತಲೇ ಬಂದವರು. ಇದಕ್ಕೂ ಮಿಗಿಲಾಗಿ ಮಗಳ ಮೂಲಕ ಕ್ರಿಸ್ತ ಪಥವನ್ನು ಏಸು ಕ್ರಿಸ್ತನ ಪುನರುತ್ಥಾನದ ದಿನವೇ ವೇದಿಕೆಗೆ ಏರಿಸುವ ಪರಿಕಲ್ಪನೆ ಮಾಡಿದವರು. ವೃತ್ತಿ. ಮತ, ಪಂಥಗಳ್ಯಾವುದೂ ಕಲೆಯ ಅಭಿವ್ಯಕ್ತಿಗೆ ಅಡ್ಡಿಯಾಗದು ಎಂಬುದನ್ನು ತೋರಿದವರು-ಮೆಚ್ಚುಗೆಗೆ ಪಾತ್ರರಾದವರು. 

ಕ್ರಿಸ್ತ ಪಥದ ನಿರ್ಮಾಣಕ್ಕೆ ವಿದ್ಯಾಶ್ರೀ ರಾಧಾ ಕೃಷ್ಣ ತಮ್ಮನ್ನು ತೊಡಗಿಸಿಕೊಂಡ ರೀತಿ, ತಪಸ್ಸಿನಂತೆ! ಅನೇಕ   ಗ್ರಂಥಗಳನ್ನು ಹೊಕ್ಕು ತಲ್ಲೀನರಾದ ತಾದಾತ್ಮ್ಯತೆ,   ಸಾಹಿತ್ಯ ರಚನೆಯೂ ಸವಾಲೆಂಬುದನ್ನು ಮನಗಂಡು ಸ್ವತಃ ತಾವೇ ಸಾಹಿತ್ಯ ರಚಿಸಿದ್ದು, ಅದಕ್ಕನುಗುಣವಾಗಿ ತನ್ನ ಶಿಷ್ಯೆಯನ್ನು ಪ್ರತೀ ಹೆಜ್ಜೆಯಲ್ಲೂ ನಾವೀನ್ಯತೆಯ ಎರಕ ಹೊಯ್ದು ಅಣಿಗೊಳಿಸಿದ್ದು, ಕ್ರಿಸ್ತ ಪಥದ ಯಶಸ್ಸಿನ ಬಹುಪಾಲು ಶ್ರೇಯಕ್ಕೆ ಕಾರಣವೆನ್ನುವುದು ನಿರೂಪಿತವಾದ ಸತ್ಯ.

ಭರತನಾಟ್ಯ ಪೃಸ್ತುತಿಯ ಆರಂಭದ ಭಾಗ ಪುಷ್ಪಾಂಜಲಿ. ಕ್ರಿಸ್ತಪಥದಲ್ಲಿ ಇದನ್ನು ಹೇಗೆ ಅಳವಡಿಸಿಕೊಳ್ಳಲಾಗುವುದೋ ಎಂಬ ಸಹಜ ಕುತೂಹಲ ಪ್ರೇಕ್ಷಕನದ್ದು. ಸತ್ಯವೇದದ ’ಆದಿಕಂಡ’   ಪುಸ್ತಕದ ಪ್ರಥಮ ಅಧ್ಯಾಯದ ಪ್ರಕಾರ ಈ ವಿಶ್ವದ ಸೃಷ್ಟಿ ಆರುದಿನಗಳಲ್ಲಿ ಆಗುತ್ತದೆ. ಇಂತಹ ವಿಶಿಷ್ಟ ಸೃಷ್ಟಿಯ ಕಾರಣೀಕರ್ತ ಭಗವಂತನಿಗೆ ಪ್ರತೀ ದಿನಕ್ಕೂ ಸಲ್ಲಿಸುವ ಪುಷ್ಪಾಂಜಲಿಯ ಕಲ್ಪನೆಯೇ ತಲೆದೂಗುವಂತೆ ಮಾಡಿತ್ತು. ಬೆಳಕು ಕತ್ತಲೆ,  ಆಕಾಶ,  ಭೂಜಲಸಸ್ಯರಾಶಿ,  ಸೂರ್ಯನಕ್ಷತ್ರಾದಿಗಳು, ಪಕ್ಷಿ, ಜಲ-ಭೂಚರ ಪ್ರಾಣಿ ಸಂಕುಲ ಹಾಗೂ ಕೊನೆಗೆ ಮಣ್ಣಿನಿಂದ ಮಾನವನ ಉದ್ಭವ-ಓಹ್! ದೈವ ಸೃಷ್ಟಿ ಅದ್ಭುತವೆನ್ನುತ್ತೇವೆ-ಈ ಅದ್ಭುತವನ್ನು ನೃತ್ಯ ಬಂಧದಲ್ಲಿ ಕಟ್ಟಿ ಹಾಕಿ, ಹೆಜ್ಜೆ-ತಾಳ-ಲಯಗತಿಗಳ ಮೂಲಕ ಪುಷ್ಪಾಂಜಲಿ ಸೃಷ್ಟಿಯ ಆರೂ ದಿನಗಳಿಗೆ ಪುಷ್ಪಾಂಜಲಿ  ಸಲ್ಲಿಸುತ್ತಾ   ಸಾಗಿದಾಗ ಕ್ರಿಸ್ತ ಪಥದಲ್ಲಿ ಪ್ರೇಕ್ಷಕರೂ ಹೆಜ್ಜೆ ಆರಂಭಿಸಿಯಾಗಿತ್ತು!. ಈ ಲೋಕದ ವೈಚಿತ್ರ್ಯವೆಂಬಂತೆ ಸುಂದರ ಸೃಷ್ಟಿಯಲ್ಲಿ ಮಾನವ  ಕಾಲ ಸರಿದಂತೆ ಸೈತಾನನಾಗುತ್ತಾ ಸಾಗುವುದು, ಅವನನ್ನು ತಿದ್ದಲು ಪ್ರವಾದಿಯ ರೂಪದಲ್ಲಿ ದೇವರು ಮತ್ತೆ ಸೃಷ್ಟಿಕಾರ್ಯ ಮಾಡುವುದು....ನಡೆದೇ ಇದೆ. ಇದನ್ನು ರಾಗಮಾಲಿಕೆ ಆದಿತಾಳದಲ್ಲಿ    ನೃತ್ಯಗಾತಿ ಪ್ರಸ್ತುತಪಡಿಸಿದರು.

ಗುರು ಶಿಷ್ಯರ ನಡುವಿನ ಸಂಯೋಜನಾ ಸಾಮರ್ಥ್ಯಕ್ಕೆ ಸಾಕ್ಷಿಯೆನ್ನುವಂತೆ ಪ್ರಸ್ತುತವಾಗುವುದು ವರ್ಣ. ಇದು ನೃತ್ಯ ಪ್ರಸ್ತುತಿಯಲ್ಲಿ ಬಹುಮುಖ್ಯ ಮತ್ತು ಅಷ್ಟೇ ದೀರ್ಘ, ಕ್ಲಿಷ್ಟಕರ ಭಾಗ.   ವರ್ಣವನ್ನು ಇಲ್ಲಿ ವಿಶೇಷ ಆಸ್ತೆಯಿಂದ, ಸಿಂಹೇಂದ್ರ ಮಧ್ಯಮ ಆದಿತಾಳದಲ್ಲಿ ಸಮಗ್ರ ಸಾಹಿತ್ಯದೊಂದಿಗೆ  ಸಂಯೋಜಿಸಲಾಗಿತ್ತು.    ತಾಪತ್ರಯಗಳಿಂದ ಬಳಲುವ ನಮ್ಮಂತವರನ್ನು  ಕರುಣೆಯಿಂದ ಕಾಯಲಾರೆಯಾ ಎಂದು ಕೇಳಿಕೊಳ್ಳುವ ದೃಶ್ಯದೊಂದಿಗೆ, ಕುರಿಗಳ ಮಧ್ಯೆ ಕ್ರಿಸ್ತಜನನ ವಾಗುವ ಸನ್ನಿವೇಶವನ್ನು ತನ್ನ ನೃತ್ಯದ ಮೂಲಕ ಪ್ರಸ್ತುತ ಪಡಿಸಿದಾಗ ರುತ್ ಅಭಿನಯ ಸಾಮರ್ಥ್ಯಕ್ಕೆ ತಲೆದೂಗದವರೇ ಇಲ್ಲ. ಚರಣದಲ್ಲಿ ಬಾಲ ಯೇಸು ಧರ್ಮಬೋಧಕರ ಜೊತೆ ಉಪದೇಶ ಕೇಳುವಾಗ ಅಚ್ಚರಿಯಿಂದ ಗಮನಿಸುವ ಮರಿಯಾಳನ್ನು ಸಮೀಕರಿಸುವ ನರ್ತಕಿ ಆ ವಿಚಾರಧಾರೆಯನ್ನು ನನಗೂ ಹರಿಸು ಎನ್ನುತ್ತಾಳೆ. ಎತ್ತುಗಡೆ ಸಾಹಿತ್ಯದಲ್ಲಿ ನಿರಾಭರಣ ಸುಂದರ ದೇವರನ್ನು ಸ್ತುತಿಸುವ ಮೂಲಕ, ವರ್ಣ ನಿಜಾರ್ಥದಲ್ಲಿ ಗುರು-ಶಿಷ್ಯರ ನಡುವಿನ ಸಂವಹನ ಸಾಮರ್ಥ್ಯ ಒರೆಗೆ ಹಚ್ಚಿ, ಇಬ್ಬರನ್ನೂ ಗೆಲ್ಲಿಸಿದ ಕೃತಿಯಾಗಿ ಮೂಡಿಬಂದುದು ಗಮನಾರ್ಹ.
ಏಳು ಶತಮಾನಗಳ ಇತಿಹಾಸವಿರುವ, ವಿಶೇಷ ಸಂಚಾರಿ ಭಾವವುಳ್ಳ ಶುದ್ಧ ನಾಟ್ಯ ಭಾಗವಾಗಿರುವುದು  ಪದಂ ಪ್ರಸ್ತುತಿ. ಸತ್ಯವೇದದಲ್ಲಿ ಯೋಹಾನ ರಚಿಸಿದ ಸುವಾರ್ತೆಯ ನಾಲ್ಕನೇ ಅಧ್ಯಾಯದ ಮೇಲೆ ರಚಿತವಾದ ಪದಂ ರುತ್ ಹೆಜ್ಜೆಗಳಲ್ಲಿ ಮತ್ತು ಭಾವಾಭಿವ್ಯಕ್ತಿಯಲ್ಲಿ ಮೂಡಿ ಬಂತು. ಸರಿ ಸರಿ ಆತ ಗುರುವೇ ಸರಿ ಎನ್ನುವ ಉದ್ಘಾರಾಧಾರಿತ ಸಾಹಿತ್ಯ ಅದ್ಭುತವೆನ್ನುವಂತೆ ಮೂಡಿ ಬಂತು. ಅಸ್ಪ್ರಶ್ಯ, ಕುಲಹೀನ ಮಹಿಳೆ ಎಂದು ಹೀಗಳೆತಕ್ಕೊಳಗಾದ  ಮಹಿಳೆಯೋರ್ವಳನ್ನು ಅಮ್ಮಾ ಎಂದು ಸಂಭೋಧಿಸುವ ಮೂಲಕ ಕ್ರಸ್ತ ಸಮಾನತೆ ಸಾರುವ ಮತ್ತು ಇಂತಹ ವಾತ್ಸಲ್ಯದ ಕರೆಗೆ ಕರಗಿದ ಆ ಮಹಿಳೆ ಉದ್ಘರಿಸುವ  ನೀನು ಗುರುವೇ  ಸರಿ ಸರಿ ಎನ್ನುವ ಭಾವವನ್ನು ಅಭಿವ್ಯಕ್ತಗೊಳಿಸಿದ ರೀತಿ ಅನನ್ಯ-ಅತಿಸುಂದರವಾಗಿತ್ತು. ಲಘು ಶಾಸ್ರೀಯ ಶೈಲಿಯಲ್ಲಿ ಮೂಡಿಬಂದ ಕೀರ್ತನೆಯಲ್ಲಿ ಕ್ರಿಸ್ತ ಪುನರುತ್ಥಾನದ ನಂತರ  ಸಾಂಕೇತಿಕವಾಗಿ ಆತನಿಂದ ಶಿಲುಬೆಯನ್ನು ಪಡೆದು ಹೊತ್ತು ಸಾಗುವ ಅಭಿನಯ ಕಣ್ಣೆದುರು ಕಟ್ಟಿದಂತಿತ್ತು.

ಭರತನಾಟ್ಯ ಪ್ರದರ್ಶನದ ಕೊನೆಯ ಭಾಗ ತಿಲ್ಲಾನ.  ಕ್ರಿಸ್ತನ ಸಮಾಧಿಯ ಕಲ್ಲುರುಳಲ್ಲಪಟ್ಟದ್ದನ್ನು ಕಂಡ ಮರಿಯ, ಸಲೋಮೆಯರು ಯೇಸು ಜೀವಿತವಾಗಿ ಎದ್ದುಹೋದ ಸನ್ನಿವೇಶವನ್ನು ದೇವದೂತನಿಂದ ಕೇಳಿ  ಅಚ್ಚರಿ, ಭಾವಾವೇಶಕ್ಕೊಳಗಾಗುವ ಸನ್ನಿವೇಶ, ಮೃತ್ಯಂಜಯ ಕ್ರಿಸ್ತ ನಮ್ಮನ್ನೆಲ್ಲಾ ಯುಗ ಸಮಾಪ್ತಿಯವರೆಗೂ  ಮುನ್ನಡೆಸುವ ಪಥವಾಗಿರುತ್ತಾನೆ ಎಂಬ ಸಂದೇಶದ ಸಾರ ಪ್ರಸ್ತುತಗೊಂಡಿತು. 

ಒಟ್ಟೂ ಕ್ರಿಸ್ತ ಪಥದಲ್ಲಿ ಅನೇಕವನ್ನು ಏಕವಾಗಿ ಹೊರತಂದದ್ದು ವಿಶೇಷ. ಶಾಸ್ತ್ರೀಯ ಕಲೆಯ ಯಾವ ಭಾಗಕ್ಕೂ ಚ್ಯುತಿ ತರದಂತೆ, ಯಾವುದೇ ಮತ-ಧರ್ಮಕ್ಕೆ ಕಲೆ ಸೀಮಿತವಲ್ಲವೆಂಬುದನ್ನು ನಿರೂಪಿಸುವಂತೆ,  ಭರತನಾಟ್ಯ ಪ್ರಸ್ತುತಿಯ ಮೂಲಕ ದೇವನೊಬ್ಬನೇ, ನಾಮ ಹಲವು ಎಂಬ ತತ್ವಾಧಾರವನ್ನು ಪ್ರೇಕ್ಷಕನ ಯಾವ ಭಾವನೆಗೂ ನೋವುಂಟಾಗದಂತೆ ಪ್ರಸ್ತುತ ಪಡಿಸಿದ್ದು ವಿಶೇಷ. ಸ್ವತ ನೃತ್ಯ-ಸಂಗೀತ ಕಲಾವಿದೆಯಾಗಿ ಗುರುತಿಸಿಕೊಂಡಿರುವ ವಿದ್ಯಾಶ್ರೀ ಇಲ್ಲಿ ಸಾಹಿತ್ಯ ರಚನೆಯ ಮೂಲಕ ತಮ್ಮ ಗಟ್ಟಿ ತನ ತೋರಿದ್ದಾರೆ. ಹೆಚ್ಚಿನ ಎಲ್ಲಾ ಹಾಡುಗಳೂ ಅವರವೇ ರಚನೆಯಾಗಿದ್ದು, ರುತ್ ತಂದೆ ಡಾ.ಸುರಂಜನ್ ಮಾಬೆನ್ ಮತ್ತು ಶ್ರೀ ಸಾಮ್ಯುವೆಲ್ ಸಾಧು ಒಂದೊಂದು ರಚನೆ ಮಾಡಿದ್ದಾರೆ. ಜಿ ಗುರುಮೂರ್ತಿಯವರ ಸಂಗೀತ ಸಂಯೋಜನೆ, ನೃತ್ಯ ಸಂಯೋಜನೆ ಗುರುವಿನದ್ದಾಗಿತ್ತು. 
ರುತ್ ಪ್ರೀತಿಕಾ ಈ ಹಿಂದೆ ಭರತ ನಾಟ್ಯದ ಮೂಲ ಪ್ರಕಾರವಾದ ಹಿಂದೂ ದೇವತೆಗಳನ್ನು ಸಂಕೇತಿಸುವ ನೃತ್ಯಗಳಿಗೂ  ಸೈ ಎನ್ನುವಂತೆ ಹೆಜ್ಜೆ ಹಾಕಿದ್ದು, ಕ್ರಿಸ್ತ ಪಥದ ಮೂಲಕ ಹೊಸ ಸಾಧ್ಯತೆಯೊಂದನ್ನು  ಪರಿಚಯಿಸುವ ಯಶಸ್ವೀ ಪ್ರಯತ್ನ ಮಾಡಿದ್ದಾರೆ. ಈ ಮೂಲಕ, ಭರತನಾಟ್ಯ ಎಂಬ ಶಾಸ್ತ್ರೀಯ ನೃತ್ಯ ಚರ್ಚ್‌ಗಳ ಅಂಗಣದಲ್ಲೂ ಪ್ರದರ್ಶಿತವಾದರೆ  ನಿಜಕ್ಕೂ ಇದೊಂದು ಸ್ವಾಗತಾರ್ಹ ಕ್ರಾಂತೀಕಾರಿ ಹೆಜ್ಜೆ ಎಂಬುದು ನಿಸ್ಸಂದೇಹ ಮತ್ತು ಅದು ಆಗುವ ಎಲ್ಲಾ ವಿಶ್ವಾಸ ಈ ಪ್ರದರ್ಶನದ ನಂತರ ಗಟ್ಟಿಯಾಗಿದೆ. ಒಟ್ಟಾರೆಯಾಗಿ ಒಂದು ರೀತಿಯ ಹಿತವಾದ ಸಂಚಲನಕ್ಕೆ ಈ ಪ್ರಸ್ತುತಿ ಕಾರಣವಾಗಿದೆ. ಪ್ರತೀ ನೃತ್ಯದ ವಿವರಣೆಯನ್ನು ಇನ್ನೋರ್ವ ಕಲಾವಿದೆ ದೀಕ್ಷಾ ಸದಾನಂದ ಮತ್ತು ರುತ್ ಕನ್ನಡ, ಇಂಗ್ಲಿಷ್ ನಲ್ಲಿ  ವಿವರಿಸಿ ಹೇಳಿ ಪ್ರಸ್ತುತಗೊಳಿಸಿದ್ದು, ಪ್ರೇಕ್ಷಕನ ಮನ ಪಟಲದಲ್ಲಿ ಇಡೀ ಸಾಹಿತ್ಯ  ಅರ್ಥಪೂರ್ಣವಾಗಿ ಮೂಡುವಂತೆ ಮಾಡಿದ್ದೂ, ಕ್ರಿಸ್ತಪಥದ ಮತ್ತೊಂದು ಹೆಗ್ಗಳಿಕೆ.