Thursday 26 December 2013

ಹಣತೆ ಆರಿದ ಮೇಲೆ...ಉಳಿದದ್ದು ಬೆಳಕು


ಎಲ್ಲಿಂದ ಆರಂಭಿಸಲಿ ಎಂದು ಕೊಂಡರೆ, ಮತ್ತೆ ಮತ್ತೆ ತಲೆಯೊಳಗೆ ದ್ವಂದ್ವದ ಗೂಡು. ಮಂಗಳೂರಿಗೆ ಬಂದು ಇದೀಗ ಎಂಟನೆಯ ವರ್ಷ. ಎಂಟರಲ್ಲಿ ಸಾಧಿಸಿದ್ದು ಏನು ಎಂದುಕೊಂಡರೆ, ಉತ್ತರ ಅಷ್ಟು ಸರಳವಲ್ಲ. ಸಾಲ-ಸೋಲಗಳನ್ನು ಸಾಧನೆಯ ಪಟ್ಟಿಯಿಂದ ಹೊರಗಿಟ್ಟು ನೋಡುವುದು, ಆಶಾವಾದ ಎಂಬುದು ನನ್ನ ಭಾವನೆ. ಮಂಗಳೂರಿಗರ ನಡುವ, 'ಅರೆಹೊಳೆ' ಎಂದು ಗುರುತಿಸಿಕೊಳ್ಳುವಷ್ಟು ಪ್ರೀತಿಯನ್ನಂತೂ ಗಳಿಸಿದ್ದು ಸುಳ್ಳಲ್ಲ. ಇದಕ್ಕಿಂತ ಹೆಚ್ಚೇನು ಬೇಕು ಹೇಳಿ. ಅಂತೂ ಬದುಕು ಸಾಗಿದೆ-ನಿರಾಳವಾಗಿ, ಸರಾಗವಾಗಿ ಮತ್ತು ಅಷ್ಟೇ ಸರಳವಾಗಿ. ಕೂದಲು ಬೆಳ್ಳಿಗೆರೆಯಾಗುತ್ತಿರುವ ಈ ಹೊತ್ತಿನಲ್ಲಿ, ಮತ್ತೆ ವಾರ ವಾರವೂ ನಿಮ್ಮೆದುರು ಬರುವ ಕಲ್ಪನೆಯೇ, ಮೈ ಜುಮ್ಮೆನಿಸುವಷ್ಟೂ ಸಂತಸ ನೀಡುತ್ತಿದೆ. ಕಾಲ ಕಾಲಕ್ಕೆ ಏನೇನು ಆಗಬೇಕು ಅದು ಆಗುತ್ತಲೇ ಇರುತ್ತದೆ. ಎಲ್ಲವೂ ನಾವಂದು ಕೊಂಡಂತೆ ಆದರೆ ಬದುಕು ನೀರಸ...ಹಾಗಂದು ಅಂದು ಕೊಂಡ ಯಾವುದೂ ಆಗದೇ ಹೋದರೆ...?? ಬದುಕೇ ಜುಗುಪ್ಸೆ!!. ಹೀಗೆ ಎಲ್ಲವನ್ನೂ ಧನಾತ್ಮಕವಾಗಿಯೇ ಯೋಚಿಸುವ ಆಶಾವಾದದ ಬದುಕಿನ ಮತ್ತೊಂದು ಮಜಲೇ, ಈ 'ಜನಪ್ರತಿನಿಧಿ' ಮತ್ತು 'ಪ್ರದಕ್ಷಿಣೆ'ಯ ಸಂಬಂಧ. ಮತ್ತೆ 'ಪ್ರದಕ್ಷಿಣೆ'ಯೊಂದಿಗೆ ವಾರ ವಾರವೂ ತಮ್ಮ ಬಳಿ ಬರುವ ನನ್ನ ಈ ಬದುಕಿನ 'ಹೊರಳ'ನ್ನು, ನಾನು ಏನೆಂದು ಕರೆದರೂ ಕಡಿಮೆಯೇ!. ತಾವು, ಮತ್ತೆ ಅದೇ ಪ್ರೀತಿಯಿಂದ ಈ ಬರಹಗಳನ್ನು ಬರ ಮಾಡಿಕೊಳ್ಳುತ್ತೀರೆಂಬ ಭರವಸೆ ನನ್ನದು.
***
ಸ್ನೇಹಿತರೇ, ಹಳೆಯದನ್ನು ಮತ್ತೆ ಮತ್ತೆ ಕೆದಕಿ ನೋಡಬಾರದು, ಅದೂ ಕೆಟ್ಟದ್ದನ್ನಂತೂ ನೆನೆಯಲೂ ಬಾರದು ಎನ್ನುತ್ತಾರೆ. ಆದರೆ ಅದು ಹೇಳಿದಷ್ಟು ಸುಲಭವಲ್ಲ. ಅದರಲ್ಲೂ ಪ್ರತೀ ವರ್ಷ ಡಿಸೆಂಬರ್ ತಿಂಗಳು ಕನ್ನಡದ ಪಾಲಿಗೆ ಕರಾಳವಾಗುತ್ತಿರುವುದು ಕಾಕತಾಳೀಯವೋ ಏನೋ. ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಕನ್ನಡ ನಾಡು ಈ ಡಿಸೆಂಬರ್ ನಲ್ಲಿ ಕಳೆದುಕೊಂಡುದು ಬಹಳ. ಸಾಹಿತ್ಯಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಅದೆಷ್ಟೋ ಹಿರಿಯ-ಕಿರಿಯ ಚೇತನಗಳು, ಹಳೆಯ ವರ್ಷದ ಜೊತೆಗೇ ವಿದಾಯ ಹೇಳುತ್ತಿರುವುದು ಮನ ನೋಯುವ ವಿಚಾರ. ಈ ಡಿಸೆಂಬರ್ ಸಹಾ, ಶ್ರೀಕಂಠದತ್ತ ನರಸೊಂಹ ರಾಜ ಒಡೆಯರ್ ಹಾಗೂ ಜಿ ಎಸ್ ಶಿವರುದ್ರಪ್ಪನವರನ್ನು ತನ್ನೊಂದಿಗೆ ಕೊಂಡು ಹೋಗಿದ್ದು ನೆನೆಸಿಕೊಂಡಾಗ ಹೀಗನಿಸಿದ್ದು ಸಹಜ. ಕಾಲನ ಮಹಿಮೆ, ಯಾರೂ ಕೇಳಲಾಗದು. ಎಲ್ಲರೂ ಇದಕ್ಕೆ ತಲೆ ಬಾಗಲೇ ಬೇಕು. ಡಿಸೆಂಬರ್ ನಲ್ಲಿ ಆರಂಭವಾಗುವ ನವಿರು ಚಳಿ, ಈ ರೀತಿಯ ಅಸಹನೀಯ ಯಾತನೆಗೆ ಯಾಕೆ ಕಾರಣವಾಗುತ್ತದೋ... ಆ ಕಾಲನಿಗೇ ಗೊತ್ತು.
***
ಕಳೆದ ಸಲ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಿದ್ದಾಗ, ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರನ್ನು ನೋಡುವ, ಅವರೊಂದಿಗೆ ಮಾತಾಡುವ ಅಪೂರ್ವ ಅವಕಾಶ ಸಿಕ್ಕಿತ್ತು. ಆ ಹಿರಿಯರ ಕೈ ಕುಲುಕಿದಾಗ, ರೇಷಿಮೆ ಮುಟ್ಟಿದಷ್ಟೂ ಮಧುರತೆ! ಇಂತಹ ಕೈ ಭಾವ ಗೀತೆಗಳ ಭಾಂಡಾರವನ್ನೇ ಕನ್ನಡ ನಾಡಿಗೆ ಒದಗಿಸಿದ್ದರಲ್ಲಿ ಅಚ್ಚರಿ ಇಲ್ಲ ಅನಿಸಿತ್ತು. ಗೆಳೆಯ ಕರುಣಾಕರ ಬಳ್ಕೂರು ಜೊತೆಗೆ ಅವರನ್ನು ಕಂಡು ಮಾತಾಡಿ, ಒಂದು ಫೋಟೋ ಕ್ಲಿಕ್ಕಿಸಬೇಕೆಂಬ ವಿನಂತಿಗೆ, ಅಂದು ಅವರು ಫೋಟೋಗೆ ಫೋಸ್ ಕೊಟ್ಟ ಗಳಿಗೆ, ಮಧುರವಾದ ಮಾತು ಮತ್ತು ಸದಾ ಮುಗುಳ್ನಗೆ......ಇಂದು ಎಲ್ಲವೂ ನೆನಪಾಗುತ್ತದೆ.
ಪ್ರೀತಿ ಮತ್ತು ಮಾನವೀಯ ಸಂಬಂಧಗಳ ಬಗ್ಗೆ ಗಾಢಾಲೋಚನೆಗೆ ಹಚ್ಚುವ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟ,ಜೀವನ ಶ್ರದ್ಧೆಯ ತಾತ್ವಿಕ ನೆಲೆಗಟ್ಟಿನ ಕವಿ, ಜಿ ಎಸ್‌ಎಸ್. ರೇಷನ್ ಅಂಗಡಿಯೊಂದರಲ್ಲಿ ಗುಮಾಸ್ತನಾಗಿ ಕೆಲಸ ಆರಂಭಿಸಿ, ರಾಷ್ಟ್ರಕವಿಯಾದ ಈ ಮಹಾನ್ ಕವಿಯ ಕವನದ ಪ್ರತೀ ಸಾಲು ಒಂದೊಂದು ಜೀವನ ಸಂದೇಶವೇ. ಎರಡು ವರ್ಷಗಳ ಕೆಳಗೆ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಧಾರಾವಾಹಿ,  'ಪ್ರೀತಿ ಇಲ್ಲದ ಮೇಲೆ' ಯಲ್ಲಿ ಇವರ 'ಪ್ರೀತಿ ಇಲ್ಲದ ಮೇಲೆ, ಮಾತಿಗೆ ಮಾತು ಕೂಡೀತು ಹೇಗೆ?' ಎಂಬ ಕವನ ಇಡೀ ಮನೆ ಮಂದಿಯನ್ನು ತಟ್ಟುತ್ತಿದ್ದರೆ, ಅದರ ಭಾವ ಮತ್ತು ಪ್ರೀತಿಯ ಬಗೆಗಿನ ಒಳಾರ್ಥ ಪ್ರತೀ ಮನಸ್ಸನ್ನೂ ತಟ್ಟುತ್ತಿತ್ತು. ನನಗೆ ಇಡೀ ಧಾರಾವಾಹಿಯನ್ನು ನೋಡುವ ಬದಲು, ಈ ಗೀತೆಗಾಗಿಯೇ ಕಾಯುತ್ತಿದ್ದ ಕಾಲ, ಧಾರಾವಾಹಿಯವರ ಸಮಯ ಉಳಿಕೆಗೆ ಈ ಗೀತೆಗೇ ಕತ್ತರಿ ಹಾಕಿದ್ದಕ್ಕೆ ಬರುತ್ತಿದ್ದ ಅಸಮಾಧಾನ...ಈಗಲೂ ನೆನಪಾಗುತ್ತದೆ.
ಕಾಕತಾಳೀಯ ಎಂದರೆ ತಮ್ಮ ಗುರು ಕುವೆಂಪು ಅವರ ನಂತರ, ತಾವೂ ರಾಷ್ಟ್ರಕವಿಯೆಂದು ಗುರುತಿಸಿಕೊಂಡವರು ಜಿಎಎಸ್‌ಎಸ್. 'ಸದ್ದು ಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು/ನಿಶ್ಶಬ್ದದಲ್ಲಿ ನೆನೆಯುತ್ತೇನೆ/ಗೌರವದಿಂದ...' ಎಂದು ತಮ್ಮ ಗುರು ಕುವೆಂಪು ಅವರ ಬಗೆಗೆ ಬರೆದವರು ಈ ಹಿರಿಯ ಕವಿ. ಇದು ಜಿಎಸ್‌ಎಸ್ ಅವರನ್ನು ಇಂದು ನೆನಪಿಸಿಕೊಳ್ಳಲೂ ಸಶಕ್ತ ಕವಿತೆಯ ಸಾಲಾಗಿದ್ದು, ಒಂದು ಅಚ್ಚರಿಯೇ ಸರಿ. ಜಿಎಸ್‌ಎಸ್ ಬದುಕನ್ನು ಹೇಗೆ ಸಮೀಪದಿಂದ ಕಾಣುತ್ತಾರೆ ಮತ್ತು ಅದಕ್ಕೆ ಎಷ್ಟು ದೂರಗಾಮಿ ದೃಷ್ಟಿಯನ್ನು ಕೀಲಿಸುತ್ತಾರೆ ಎಂಬುದಕ್ಕೆ ಅವರ 'ಹಣತೆ ಹಚ್ಚುತ್ತೇನೆ ನಾನೂ, ಈ ಕತ್ತಲೆಯನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ' ಎನ್ನುವ ಸಾಲುಗಳೇ ಸಾಕ್ಷ್ಯ! ಮುಂದುವರಿದು ಹೇಳುತ್ತಾರೆ, 'ಈ ಹಣತೆ ಇರುವಷ್ಟು ಹೊತ್ತು ನಿನ್ನ ಮುಖ ನಾನು/ನನ್ನ ಮುಖ  ನೀನು/ನೋಡಬಹುದೆಂಬ ಒಂದೇ ಆಸೆಯಿಂದ!!.' ಅದೆಷ್ಟು ಭಾವಾರ್ಥದ ಆಗರ ಇದು. ಸಾಮಾಜಿಕ, ಆಧ್ಯಾತ್ಮಿಕತೆ, ಜೀವನ ಪ್ರೀತಿ, ಅದಕ್ಕೆ ಗೌರವ...ಎಲ್ಲವನ್ನೂ ಹಿಡಿದಿಟ್ಟು, ಬೊಗಸೆ ಬೊಗಸೆ ಪ್ರೀತಿಯನ್ನು, ಭಾವಲಹರಿಯಾಗಿ ಹರಿಯ ಬಿಡುವ ಉದಾತ್ತತೆ, ಶಕ್ತತೆ, ನಾವೀನ್ಯತೆ,  ಜಿಎಸ್‌ಎಸ್ ಅವರ ಕವನಗಳಿಗಿದ್ದರೆ, ತಮ್ಮ ಕವನಗಳಂತೆಯೇ ಬದುಕಿದವರು ಇವರು.
ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಕವಿಯಾಗಿ ರೂಪುಗೊಳ್ಳುತ್ತಾ ಹೋದವರು ಇವರು. ರಾಷ್ಟ್ರಕವಿಯಾಗುವ ಮೊಳಕೆ ಆಗಲೇ ಬಾನತ್ತ ಮುಖ ಮಾಡಿತ್ತು. "ಇರುವೆಯೊಂದು ತನ್ನ ಮರಿಗೆ, ನೀರೊಳೀಜು ಕಲಿಸಲೆಂದು, ಹರಿವ ತೊರೆಯ ತಡಿಗೆ ಬಂದು ನಿಂತುಕೊಂಡಿತು!!". ಇದು ಜಿಎಸ್‌ಎಸ್ ಹದಿನಾಲ್ಕರಲ್ಲಿ ಬರೆದ ಕವನದ ಸಾಲುಗಳು. ಇಲ್ಲಿಂದಲೇ ಆರಂಭವಾದ ಅವರ ಜೀವನ ಪ್ರೀತಿ, ಜೀವನೋತ್ಸಾಹದ ಕವಿಯ ಸಾಲುಗಳು ಎಂದೂ ಬತ್ತಲೇ ಇಲ್ಲ. ಎಲ್ಲಿಯ ತನಕ ಅದು ಬೆಳೆದು ಹೆಮ್ಮರವಾಯಿತು ಎಂದರೆ, ತಮ್ಮ ಸಾವು ಸಮೀಪಿಸುವ ಮುನ್ನ ಸೂಚನೆಯನ್ನು ಮೊದಲೇ ಗ್ರಹಿಸಿದಂತೆ ಜಿಎಸ್‌ಎಸ್, ತಮ್ಮ ಮಕ್ಕಳಿಗೆ ತನ್ನ ಅಂತ್ಯ ಸಂಸ್ಕಾರದ ಬಗ್ಗೆ ಹೇಳಿ, ಬರೆದೂ ಹೋಗಿದ್ದಾರೆ!. ಯಾವುದೆ ಜಾತಿಗೆ ಸೇರಿದವನು ತಾನು ಎಂಬ ಜಾಯಮಾನ ಅವರದ್ದಲ್ಲ. ತನ್ನ ಅಂತ್ಯ ಸಂಸ್ಕಾರದ ಬಗ್ಗೆಬರೆಯುತ್ತಾ ಅವರು ಹೇಳಿದ್ದರಂತೆ, 'ನನ್ನ ಅಂತ್ಯಕ್ರಿಯೆಯನ್ನು  ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಿ ಮಾಡದೇ, ಸುಟ್ಟು, ಒಂದು ಹಿಡಿ ಬೂದಿಯನ್ನು ಕಾವೇರಿ ನದಿಯಲ್ಲಿ ಎಸೆದು ಬಿಡಿ" ಎಂದು!!. ಅದೆಷ್ಟು ಘನತೆವೆತ್ತ ಮಾತುಗಳು!!. ಅದೆಂತಹಾ ಕವಿಮನಸ್ಸು!!.

                                            ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ 'ರಾಷ್ಟ್ರಕವಿ'ಯ ಜೊತೆ

ಒಬ್ಬ ಕವಿ ರಾಷ್ಟ್ರ ಕವಿಯಾಗಬೇಕಾದರೆ ಅವರೊಳಗಿನ ಕವಿತ್ವಕ್ಕೆ ವಿಶೇಷ ಶಕ್ತಿ ಇರಲೇ ಬೇಕು. ಆ ಶಕ್ತಿ, ಯಾವುದನ್ನೂ ಗ್ರಹಿಸಿ, ಯಾವ ರೀತಿಯ ಜೀವನಕ್ಕೂ ಅರ್ಥ ನೀಡುವ ಕವಿಮನದ್ದಾಗಿರಲೇ ಬೇಕು. ಜಿ ಎಸ್‌ಎಸ್ ಬಗ್ಗೆ ಯು ಆರ್ ಅನಂತ ಮೂರ್ತಿ ಬರೆಯುತ್ತಾರೆ 'ಜಿಎಸ್‌ಎಸ್ ಅವರು ತಮ್ಮ ಪೂರ್ವ ಸೂರಿಗಳಿಂದಲೂ, ತಮ್ಮ ನಂತರದವರಿಂದಲೂ ಏಕಕಾಲದಲ್ಲಿ ಕಲಿತು, ತಮ್ಮದೇ ಆದ ಹೊಸದಾರಿಯಲ್ಲಿ ನಡೆದವರು. ಕೃಷ್ಣನ ಅವಸಾನದ ಬಗ್ಗೆ ಅವರು ಬರೆದ ಪದ್ಯ, ಅವ ವಿಶಿಷ್ಟ ಸೃಜನಶೀಲತೆಯನ್ನು ತೋರಿಸುತ್ತದೆ. ಕೃಷ್ಣನನ್ನು ಎಲ್ಲರಂತೆ ಸೌಂದರ್ಯದ ಅನುಭೂತಿಯಾಗಿ ಕಾಣುತ್ತಿದ್ದ ಅವರಿಗೆ ಕೃಷ್ಣನ ಅವಸಾನವನ್ನೂ ದಾಖಲಿಸುವ ಶಕ್ತಿ ಇತ್ತು'. ಇದಕ್ಕಿಂತ ಹೆಚ್ಚಿನ ಕವಿಗೆ ಮತ್ತಿನ್ನೇನು ಬೇಕು ಹೇಳಿ!. ಸೌಂದರ್ಯದ ಅನುಭೂತಿಗೂ, ಅವಸಾನಕ್ಕೂ ನಡುವಿನ ಬದುಕಿನಲ್ಲಿ, ಹಣತೆ ಹಚ್ಚುತ್ತಾ, 'ಹಣತೆ'ಕವಿ ಎಂದೇ ಗುರುತಿಸಿಕೊಂಡು, ಆದರ್ಶದಂತೆ ಬಾಳಿದ ಜಿಎಸ್‌ಎಸ್ ಬದುಕಿನ ಹಣತೆ ಇಂದು ಆರಿರಬಹುದು. ಆದರೆ ಬೆಳಕು ಮಾತ್ರ ಎಂದೂ ಆರದು...ಇದು ಈ ಕವಿಯ ಹೆಗ್ಗಳಿಕೆ.
ಕನ್ನಡ ನಾಡಿನ ಮೂರೇ ಮೂರು ರಾಷ್ಟ್ರಕವಿಗಳಲ್ಲಿ ಗುರು-ಶಿಷ್ಯರಿಬ್ಬರೂ ರಾಷ್ಟ್ರಕವಿಯಾದ ಹೆಗ್ಗಳಿಕೆ ಕುವೆಂಪು ಮತ್ತು ಜಿಎಸ್‌ಎಸ್ ಅವರದ್ದು. ಇನ್ನೋರ್ವ ರಾಷ್ಟ್ರಕವಿ ಎಂದರೆ ಗೋವಿಂದ ಪೈ ಅವರು. ಇಂದು ನಾವು ಮೂವರೂ ರಾಷ್ಟ್ರಕವಿಗಳನ್ನು ಕಳೆದುಕೊಂಡಿದ್ದೇವೆ.
ಪ್ರೀತಿ ಇಲ್ಲದ ಮೇಲೆ
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?
ಪ್ರೀತಿ ಇಲ್ಲದ ಮೇಲೆ
ಸಂಶಯದ ಗಡಿಗಳುದ್ದಕ್ಕೂ
ಸಿಡಿಗುಂಡುಗಳ ಕವನ ನಿಂತೀತು ಹೇಗೆ?
ಜಾತಿ-ಮತ-ಭಾಷೆ ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ-ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?

ಜಿಎಸ್‌ಎಸ್ ಅವರ, ಈ ಕವನದ ಸಾಲುಗಳು ಅನೇಕ ಸಲ ಮನವನ್ನು ಕಾಡಿದ್ದು, ಕಾದ ಮನಕ್ಕೆ ತಂಪೆರಗಿದ್ದು, ಯಾವುದೋ ಸಂತೃಪ್ತಿಯನ್ನು ತಂದುದು.....ಎಲ್ಲವನ್ನೂ ನೆನಪಿಸಿಕೊಳ್ಳುತ್ತಾ, ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ನಿಜ, ಹಣತೆ ಆರಿದೆ, ಬೆಳಕು ಎಂದೆಂದಿಗೂ ಉಳಿಯುತ್ತದೆ.



                 


6 comments:

  1. This comment has been removed by the author.

    ReplyDelete
  2. Ji v nice article . GSS avara mugdha nuguvina kaanada kadalige namma nudi namana ..Karun Balkur S.

    ReplyDelete
  3. ಅರೆಹೊಳೇ....
    ಚೆನ್ನಾಗಿ ಮೂಡಿ ಬಂದಿದೆ...
    ಜಿ.ಎಸ್.ಎಸ್. ಅವರಿಗೆ ಹೃದಯ ಸ್ಪರ್ಶಿ...ಅಂತಿಮ ನಮನ.
    -ಕೇದಿಗೆ

    ReplyDelete
  4. ಅರೆಹೊಳೇ....
    ಚೆನ್ನಾಗಿ ಮೂಡಿ ಬಂದಿದೆ...
    ಜಿ.ಎಸ್.ಎಸ್. ಅವರಿಗೆ ಹೃದಯ ಸ್ಪರ್ಶಿ...ಅಂತಿಮ ನಮನ.
    -ಕೇದಿಗೆ

    ReplyDelete