Wednesday, 1 January 2014

ಏಳುನೂರು ಲೀಟರ್ ನೀರು ಮತ್ತು ಮರಳಿ ಮನೆಯೆಡೆಗೆ...!!


01.01.2014ರ ಜನಪ್ರತಿನಿಧಿಯಲ್ಲಿ ಪ್ರಕಟವಾದ ನನ್ನ ಅಂಕಣ, 'ಪ್ರದಕ್ಷಿಣೆ'ಯ  ಲೇಖನ...... 


೨೦೧೩ರ ಕೊನೆ, ರಾಜಕೀಯವಾಗಿ ಎರಡು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು.....ಬಹುಶ: ಇವೆರಡನ್ನು 'ಮಹತ್ವ'ದ ಘಟನೆಗಳ ಸಾಲಿನಲ್ಲಿ ಸೇರಿಸಲು ಯಾರದಾದರೂ ತಕರಾರು ಇರಲೂ ಬಹುದಾದರೂ, ಎರಡನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ, ಇದು ಒಂದು ರೀತಿಯಲ್ಲಿ ಮಹತ್ವದ ವಿಚಾರವೇ!

ಅಣ್ಣಾ ಹಜಾರೆ ದೇಶದಲ್ಲಿ ಎಬ್ಬಿಸಿದ ಭ್ರಷ್ಟಾಚಾರ ವಿರೋಧಿ ಅಲೆ ಎಲ್ಲರಿಗೂ ಗೊತ್ತು. ಅವರ ಜಗುಲಿಯಿಂದ ಎದ್ದು ಹೋಗಿ, 'ರಾಜಕೀಯವಲ್ಲದ' ಪಕ್ಷ ಕಟ್ಟಿಯೇ ದೇಶದಲ್ಲಿನ ಕೊಳಕನ್ನು ಪೊರಕೆಯಿಂದ ಹೊಡೆದೋಡಿಸುವ ಹಟ ತೊಟ್ಟ, ಈ ಅರವಿಂದ ಕೇಜ್ರಿವಾಲ್ ಎಂಬ ಆಮ್ ಆದ್ಮಿ ಮಾಡಿದ ಬದಲಾವಣೆ, ಪ್ರಜಾ ಪ್ರಭುತ್ವದ ಮೇಲೆ ವಿಶ್ವಾಸವನ್ನು ಗಟ್ಟಿಗೊಳಿಸಿದೆ. ಜನ ಮರುಳಲ್ಲ, ರಾಜಕಾರಣಿಗಳ ಮರುಳುತನವನ್ನು ಹೊಡೆದೋಡಿಸಲು ಶಕ್ತರೆನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ......ಪ್ರಜಾ ಪ್ರಭುತ್ವ ಜಿಂದಾಬಾದ್.

ಅತ್ತ ದೆಹಲಿಯಲ್ಲಿ ಇಂತಾದ್ದೊಂದು ಕೌತುಕ ಘಟಿಸಿ, ಘಟಾನುಘಟಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಥರಗುಟ್ಟುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ, 'ಜನರಿಗೋಸ್ಕರ' ಭಾಜಪ ಬಿಟ್ಟು ಕೆಜೆಪಿ ಎಂಬ 'ಬಾಡಿಗೆ' ಪಕ್ಷ ಕಟ್ಟಿದ ಯಡ್ಯೂರಪ್ಪ ಮತ್ತೆ ಭಾಜಪದ ಬಾಗಿಲ ಬಳಿಗೆ ಬಂದುದು ಮತ್ತು ಇದನ್ನು ಅವರೇ 'ಬೇಷರತ್'ವಾಪಸಾತಿ ಎಂದು ಕರೆದದ್ದು, ಕರ್ನಾಟಕದ ಜನತೆಯ ಪಾಲಿಗೆ ನಗಲೋ, ಅಳಲೋ ಎಂದು ತಿಳಿಯಲಾರದ ಸಂದಿಗ್ಧ...ಈಗ ಈ ಎರಡೂ ಘಟನೆಗಳು ಅದು ಹೇಗೆ ಮಹತ್ವ ಎಂದು ವಿಮರ್ಶಿಸ ಹೊರಟರೆ........

ನಿಜ!. ಸ್ವತ: ಕೇಜ್ರಿವಾಲ್ ಮತ್ತು ಯಡ್ಯೂರಪ್ಪ ಇಬ್ಬರೂ ಆಲೋಚಿಸಿರದ, ಆದರೆ ಬಯಸಿದ್ದ ಫಲಿತಾಂಶ ಇದು!. ಆಮ್ ಆದ್ಮಿ ಎಂಬ ಪಕ್ಷ, ಪೊರಕೆ ಹಿಡಿದು ಹೊರಟಾಗ ಕೊಟ್ಟ ಭರವಸೆಯ ಮಹಾಪೂರ ಕಂಡ, ಚುನಾವಣೆಯಲ್ಲಿ ಭರವಸೆಗಳಿಂದಲೇ ಗೆಲುವು ಸಾಧಿಸುತ್ತಿದ್ದ ಹಳೆ ಪಕ್ಷಗಳು, ಫಕ ಪಕನೇ ನಕ್ಕದ್ದು, ಈಗ ಅವರ ಸ್ಥಿತಿಯನ್ನು ಕಂಡು ಗೊಳ್ಳೆಂದು ನಗುವಂತೆ ಮತದಾರ ಮಾಡಿದ್ದು, ಎರಡೂ ಸತ್ಯವೇ. ತಮ್ಮದು ಬಹುಮತವಲ್ಲದ ಪಕ್ಷ ಎಂಬ ಸಂಪೂರ್ಣ ಅರಿವಿನೊಂದಿಗೇ, ಯಾವ ಕಾಂಗ್ರೆಸ್‌ನ್ನು ಆರಂಭದಿಂದಲೂ ವಿರೋಧಿಸುತ್ತಿದ್ದರೋ, ಅದೇ ಕಾಂಗ್ರೆಸ್ ಬೆಂಬಲದೊಂದಿಗೆ ಮುಂದೆ ಹೆಜ್ಜೆ ಇಟ್ಟ ಕೇಜ್ರಿವಾಲ್ ಸಾಧನೆ-ಒಂದು ರೀತಿ ರಾಜಕೀಯ ಪ್ರಹಸನವೋ.....ಅಥವಾ ವಿಪರ್ಯಾಸ ಎನ್ನಬಹುದೇನೋ. ಇಲ್ಲಿ ಜನತಂತ್ರ ವ್ಯವಸ್ಥೆಯ ರಕ್ಷಣೆ ಮುಖ್ಯವೋ, ದೆಹಲಿ ಗದ್ದುಗೆಯ ಮೂಲಕ ಆಮ್ ಆದ್ಮಿಗೆ ಉತ್ತಮ ಸರಕಾರ ನೀಡುವುದು ಮುಖ್ಯವೋ ಅಥವಾ......ನಮಗೆ ಬೇಡಪ್ಪ ಅಧಿಕಾರದ ಗದ್ದುಗೆ ಎಂಬ ಮೂಲಕ ಮತ್ತೆ ಆಸೆ ಪಟ್ಟದ್ದು ಅಧಿಕಾರವನ್ನೇ ಎಂಬುದು ಮುಖ್ಯವೋ.....ಕಾಲವೇ ನಿರ್ಧರಿಸಬೇಕು. ದೆಹಲಿಗ ಅಂತೂ ಖುಷಿ ಪಟ್ಟಿದ್ದಾನೆ. ದಿನಕ್ಕೆ ಏಳು ನೂರು ಲೀಟರ್ ನೀರನ್ನು ಉಚಿತವಾಗಿ ಕುಡಿಸುವ ಕೇಜ್ರಿವಾಲ್ ಘೋಷಣೆ, ಹಾಲು ಕುಡಿದಂತೆ ಕಂಡರೂ, ಅದಕ್ಕೆ ಮಿಕ್ಕಿ ನೀರು ಕುಡಿಯುವವರಿಗೆ ಕಸಿವಿಸಿ ಉಂಟು ಮಾಡಿದೆ. ಇನ್ನೂ ಭರವಸೆಯ ಪಟ್ಟಿ ಬಹು ದೊಡ್ಡದಿದೆ.....ಕೇಜ್ರಿವಾಲ್ ಏನು  ಮಾಡುತ್ತಾರೆ ಎಂಬ ಕುತೂಹಲಕ್ಕಿಂತಲೂ, ಇಲ್ಲಿ ಕಾಂಗ್ರೆಸ್ ಅವರ 'ಕೈ'ಹಿಡಿದ ಬಗೆಗಿನ ಕುತೂಹಲ ಹೆಚ್ಚಿದೆ!!

ಹೌದು! ಕಾಂಗ್ರೆಸ್ ಪಕ್ಷ, ತನ್ನೊಳಗೆ ಅನೇಕ ಅಸಮಾಧಾನದ ಹೊಗೆಯನ್ನು ಹಾಕಿಕೊಂಡೇ ಕೇಜ್ರಿವಾಲ್ ಪರವಾಗಿ ನಿಂತಿದೆ-ಬಹಿರಂಗವಾಗಿ-ಬೇಷರತ್ ಆಗಿ!. ಅಂತರಂಗದಲ್ಲಿ ಯಾವ 'ಶರತ್ತು'ಗಳು ಕೇಜ್ರಿವಾಲ್ ಜೊತೆಗಿದೆಯೋ, ಅಥವಾ ಕಾಂಗ್ರೆಸ್ ಒಳಗೇ ಇದೆಯೋ, ಹೊರ ಬರುವುದಕ್ಕೆ ಹೆಚ್ಚು ದಿನ ಬೇಕಾಗುವುದಿಲ್ಲ!.  ಆದರೆ ಕೇಜ್ರಿವಾಲ್ ತಮ್ಮ ಯೋಜನೆಗಳನ್ನೆಲ್ಲಾ ಜಾರಿಗೊಳಿಸುವ ಹುಮ್ಮಸ್ಸಿನಲ್ಲಿ ಮುಂದುವರಿದರೆ ಮತ್ತು ಅವರಿಗೂ ಒಳಗೊಳಗೇ ತಮ್ಮದು ಅಲ್ಪಕಾಲ ಬಾಳಬಹುದಾದ ಸರಕಾರ ಎಂಬ ಅರಿವಿದ್ದರೆ, ದೆಹಲಿಯ ಆರ್ಥಿಕ ಕೋಶ ಬರಿದಾಗುವುದಕ್ಕೂ ಹೆಚ್ಚು ದಿನ ಬೇಕಾಗುವುದಿಲ್ಲ. ಇದನ್ನೂ ಒಂದು ಮುಖ್ಯ ಉದ್ದೇಶವವಾಗಿಟ್ಟುಕೊಂಡೇ, ಮುಂದಿನ ಲೋಕಸಭಾ ಚುನಾವಣೆಗೆ ಈ ಬೆಂಬಲವನ್ನು ಮೆಟ್ಟಿಲಾಗಿ ಕಾಂಗ್ರೆಸ್ ಉಪಯೋಗಿಸಿಕೊಳ್ಳಬಹುದೇ?? ಅಚ್ಚರಿ ಇಲ್ಲ ಮತ್ತು ರಾಜಕೀಯದಲ್ಲಿ ಅದು 'ಸಾಧು'ವೂ ಹೌದು.
ಇದೊಂದು ಮುಖವಾದರೆ ಮತ್ತೊಂದು ಮುಖ ಬಹು ಚರ್ಚಿತವಾಗಲೇ ಬಾಕಾಗಿದ್ದು. ಆಮ್ ಆದ್ಮಿಯ ಜಯ, ನಿಜಕ್ಕೂ ಆಮ್ ಆದ್ಮಿಯದ್ದೇ, ಅಥವಾ ಶೀಲಾ ದೀಕ್ಷಿತ್ ವಿರೋಧವಾದದ್ದೇ ಅಥವಾ ರಾಹುಲ್-ಸೋನಿಯಾ ವಿರುದ್ಧವಾದುದೇ ಎಂಬುದೂ ಮತ್ತೊಂದು ಪ್ರಶ್ನೆ. ಚುನಾವಣೆಗೆ ಮುನ್ನ, ಸೋತ ಪ್ರಮುಖ ಪಕ್ಷಗಳೂ ಸೇರಿ ಎಲ್ಲರೂ ಇದನ್ನು ಲೋಕಸಭಾ ಚುನಾವಣೆಯ ಫಲಿತಾಂಶದ ಮುನ್ನೋಟ ಎಂದೇ ಪರಿಗಣಿಸಿದ್ದರು. ಚುನಾವಣೆ ಮುಗಿದು ಫಲಿತಾಂಶ ತಿರುವು ಮುರುವಾದಾಗ, ಇದು ಅದಲ್ಲ ಬಿಡಿ, ಅದೇ ಬೇರೆ, ಇದೇ ಬೇರೆ ಎಂದು ಇವರೇ ಹೇಳಲೂ ಆರಂಭಿಸಿದ್ದಾರೆ. ಒಳಗೊಳಗೇ, 'ಮೋದಿ'ಸುವವರೂ, 'ಮೋಹಿ'ಸುವವರೂ ತಲ್ಲಣಗೊಂಡಿದ್ದಾರೆ. ಇಬ್ಬರದ್ದು ಒಂದೇ ಯೋಚನೆ, ತಮ್ಮ ಆಮ್ ಆದ್ಮಿಗೆ ಕೊಡುವ ಬೆಂಬಲವನ್ನು ಜನ ಅನು 'ಮೋದಿ'ಸುತ್ತಾರೊ, ಮನ 'ಮೋಹಿ'ಸುತ್ತಾರೋ ಎಂಬ ಗೊಂದಲ. ಅಂತೂ 'ಮೋಹಿಸುವ' ಹುಮ್ಮಸ್ಸಿನವರು ಇದನ್ನೇ ಬಂಡವಾಳ ಮಾಡಿಕೊಳ್ಳಲು ಆಮ್ ಆದ್ಮಿಗೆ ಬೆಂಬಲ ಕೊಟ್ಟರೆ, 'ಮೋದಿ'ಸುವವರು ಬೇರೆಯೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ....

ಹೀಗೆ ಬೇರೆಯೇ ಲೆಕ್ಕಾಚಾರದಲ್ಲಿಯೇ ಕರ್ನಾಟಕದಲ್ಲಿ ಕೆಜೆಪಿಗೆ 'ಶಟರ್'ಎಳೆಯಲಾಗಿದೆ! ಯಡ್ಯೂರಪ್ಪನವರನ್ನು ಮತ್ತೆ ಕರೆಸೋಣ ಎಂಬ ಕೂಗು, ಕಳೆದ ಬಾರಿ ತಮ್ಮ 'ಒಳಜಗಳ'ಎಂಬ ಹರಿವಾಣದಿಂದ. 'ಕೈ'ಗೆ ಅಧಿಕಾರ ಹಸ್ತಾಂತರಿಸಿದ ಭಾಜಪಮಣಿಗಳಿಂದ ಆರಂಭವಾಗಿದ್ದು, ವರ್ಷಾಂತ್ಯದಲ್ಲಿ ಯಡ್ಯೂರಪ್ಪನವರನ್ನು ಒಂದು 'ಹದ'ಕ್ಕೆ ತಂದು ನಿಲ್ಲಿಸಿದೆ!. 'ಈ ಜನ್ಮದಲ್ಲಿ ಭಾಜಪ ಇನ್ನು ಮುಚ್ಚಿದ ಬಾಗಿಲು', ಯಾರೇ ಕರೆದರೂ ಪ್ರಾಣ ಬಿಟ್ಟೇನು, ಭಾಜಪ ಸೇರೆನು', 'ನನ್ನ ಬೆಂಬಲಿಗರಿಗೆ ಬೆಲೆ ಇಲ್ಲದ ಪಕ್ಷ ನನಗೆ ಬೇಕಿಲ್ಲ', 'ನಾನಾಗಿ ಭಾಜಪದ ಕದ ತಟ್ಟುವುದಿಲ್ಲ ಮತ್ತು ನನಗದು ಅನಿವಾರ್ಯವೂ ಅಲ್ಲ'......ಇರಲಿ ಬಿಡಿ, ಇಂತಹಾ ಸಾಲು ಸಾಲು ಹೇಳಿಕೆಗಳನ್ನು ಪತ್ರಕರ್ತರು ದಾಖಲಿಸಿಕೊಂಡು ಪ್ರಸಾರ ಮಾಡಿದ್ದು ಎಲ್ಲರಿಗೂ ಗೊತ್ತು!. ಇದನ್ನು ಯಾರು ಯಾರಿಗೆ ಹೇಳಿದರು ಎಂಬ ಪ್ರಶ್ನೆಗೆ ರಾಜಕೀಯ ಅರಿಯದ ಮಕ್ಕಳೂ ಥಟ್ಟೆಂದು ಯಡ್ಯೂರಪ್ಪ, ಕರ್ನಾಟಕದ ಜನತೆಗೆ ಹೇಳಿದ್ದು ಎಂದು ಉತ್ತರಿಸುತ್ತಾರೆ.
ಉತ್ತಮ ರಾಜ್ಯಾಭಾರ ಮಾಡಿ, ಕರ್ನಾಟಕವನ್ನು ಗುಜರಾತ್ ಮಾಡುವ ಮಾತಾಡುತ್ತಾ, ಯಡ್ಯೂರಪ್ಪ ಏನೇನು  ಮಾಡಿದರು ಎಂದು  ಜನರಿಗೂ ಗೊತ್ತು, ಭಾಜಪಕ್ಕೂ ಗೊತ್ತು. ವಿಧಾನ ಸಭಾ ಚುನಾವಣೆಯಲ್ಲಿ ಇದಕ್ಕೆ ಎಲ್ಲರೂ ಊಟ ಮಾಡಿದ್ದೂ ಆಯ್ತು!. ಮಂಗ ತಾನು ತಿಂದ ಏನನ್ನೋ ಮತ್ತೊಂದರ ಮುಖಕ್ಕೆ ಒರೆಸಿತ್ತಂತೆ. ಇಲ್ಲಿಯೂ ಹಾಗೆಯೇ, ಇಬ್ಬರೂ ಸೋತು ಸುಣ್ಣವಾದರೂ, ಬೈದುಕೊಂಡದ್ದು ಪಾತ್ರ ಪರಸ್ಪರರಿಗೆ. ಆದರೆ ಆ ಬೈಗುಳದಲ್ಲಿಯೂ ಮೊದಲು ಕ್ಷೀಣವಾಗಿ, ಮತ್ತೆ ತುಸು ಗಟ್ಟಿಯಾಗಿ, ಕೊನೆಗೆ ಬೊಬ್ಬೆಯಾದದ್ದು 'ಯಡ್ಯೂರಪ್ಪ, ಮರಳಿ ಮನೆಗೆ ಬಾ' ಎಂಬ ಘೋಷಣೆ. ಕೂಗಿದವರೂ, ಕೂಗಿಸಿಕೊಂಡವರೂ ಇದಕ್ಕೇ ಕಾದಿದ್ದವರು. ಯಾವ ಜನತೆಯ ಸೇವೆಯ ಅವಕಾಶದಿಂದ  ವಂಚಿತರಾದ ನೋವಿನಿಂದ ಭಾಜಪ ಒಡೆದಿದ್ದರೋ, ಯಾವ ಜನತೆಯ ಹಿತದೃಷ್ಟಿಯಿಂದ ಪಕ್ಷ ತೊರೆದಿದ್ದರೋ,  ಜನತೆಯನ್ನು ದೋಚಿದವರು ಪಕ್ಷದಿಂದ ಹೋಗಲಿ ಬಿಡಿ ಎಂದು ಯಾರು ಬೊಬ್ಬೆ ಹೊಡೆದಿದ್ದರೋ.....ಯಾರೂ ಭಾಜಪಕ್ಕೆ ಅನಿವಾರ್ಯರಲ್ಲ ಎಂದು ಯಾರೆಲ್ಲಾ ಕೂಗಿದ್ದರೋ, ಭಾಜಪಕ್ಕೆ ಪಕ್ಷ ಮುಖ್ಯ, ವ್ಯಕ್ತಿ ಎಲ್ಲ ಎಂದು ಯಾರೆಲ್ಲಾ ಹಾರಾಡಿದ್ದರೋ.....ಎಲ್ಲರದ್ದೂ ಈಗ ಒಂದೇ ಮನ- ಒಂದೇ ಮಾತು...ಯಡ್ಯೂರಪ್ಪ ಮರಳಿ ಬರಲಿ!!. ಯಡ್ಯೂರಪ್ಪನವರದ್ದೂ ಒಂದೇ ಮಾತು, ಭಾಜಪದ ಬಾಗಿಲು ತೆರೆದರೆ ಸಾಕು!!

ಫಲಿತಾಂಶ  ಎದುರಿಗಿದೆ. ರಾಜಕಾರಣದಲ್ಲಿ ಈ ಮಾತನ್ನು ಯಾರು 'ಹುಟ್ಟಿಸಿದರೋ'ಗೊತ್ತಿಲ್ಲ-ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ!!. ಜಗತ್ತೇ ತಲೆ ಮೇಲೆ ಬೀಳಲಿ, ಈ ರಾಜಕಾರಣಿಗಳು 'ಈ ಒಂದು ಮಾತಿಗೆ' ಮಾತ್ರ ಯಾವಾಗಲೂ ಬದ್ಧರು. ಅದೇ ಇಲ್ಲೂ ಆಗಿದೆ.

'ಬೇಷರತ್' ಆಗಿ ಯಡ್ಯೂರಪ್ಪ ಈಗ ಭಾಜಪಕ್ಕೆ ಮರಳುತ್ತಿದ್ದಾರೆ. 'ಬೇಷರತ್' ಆಗಿ ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಕೊಟ್ಟಿದೆ. 'ಬೇಷರತ್' ಆಗಿ ಮತದಾರ ಎಲ್ಲವನ್ನೂ ಗಮನಿಸುತ್ತಿದ್ದಾನೆ.!!

ಈಗ ಯೋಚಿಸಬೇಕಾದ್ದು ಈ ಎರಡೂ 'ರಾಜಕೀಯ'ಘಟನೆಗಳ ಮಹತ್ವವನ್ನು. ಈಗ ನಿಜಕ್ಕೂ ಎದುರಿಗೆ ಬರುತ್ತಿರುವ ಪ್ರಶ್ನೆಗಳೇ ಎರಡು. ದೆಹಲಿ ಸರಕಾರ ಭ್ರಷ್ಟಾಚಾರ ಓಡಿಸುತ್ತಾ? ಏಳು ನೂರು ಲೀಟರ್ ನೀರಿನ ಜೊತೆಗೆ ಉಳಿದ ಭರವಸೆಗಳನ್ನು ಅಲ್ಲಿನ ಕೇಜ್ರಿವಾಲ್ ಈಡೇರಿಸುತ್ತಾರಾ?. ಜನತೆ ಇಟ್ಟ ಈ ವಿಶ್ವಾಸವನ್ನು ಅವರು ಕೊನೆತನದ('ಬೇಷರತ್' ಬೆಂಬಲದ ಕಾಂಗ್ರೆಸ್ ಬಿಟ್ಟರೆ!) ಉಳಿಸಿಕೊಳ್ಳುತ್ತಾರಾ??. ಈ ಪ್ರಶ್ನೆಗೆ ಈ ರಾಜಕೀಯ ಬದಲಾವಣೆಯಲ್ಲಿ 'ಸಕಾರಣ' ಉತ್ತರ ಸಿಕ್ಕದರೆ, ೨೦೧೩ರ ಕೊನೆಯಲ್ಲಿ ನಡೆದ ರಾಜಕೀಯ ಬದಲಾವಣೆ, ದೇಶದ ಇತಿಹಾಸದಲ್ಲಿ ಮುಂದೆಂದಿಗೂ ಅಳಿಸಲಾರದ ಅಕ್ಷರಗಳಲ್ಲಿ ದಾಖಲಾಗಲಿದೆ!!. ಒಂದೊಮ್ಮೆ ಇದಕ್ಕೆಲ್ಲಾ ಉತ್ತರ ಋಣಾತ್ಮಕವಾದರೆ...??. ಆಗಲೂ ಒಂದು ದಾಖಲೆಯಾಗುತ್ತದೆ! ರಾಜಕೀಯದಲ್ಲಿ  ಬದುಕಬೇಕಾದರೆ, 'ರಾಜಕಾರಣಿ'ಯಾಗಿಯೇ ಬದುಕಬೇಕು, ಆಮ್ ಆದ್ಮಿ ಆದರೆ ಸಾಕಾಗದು!. ಇಂದಿನ ಪ್ರಜಾಪ್ರಭುತ್ವದಲ್ಲಿ 'ರಾಜಕಾರಣಿ'ಎಂಬುದಕ್ಕೆ ಈಗಾಗಲೇ ಪ್ರಚಲಿತದಲ್ಲಿರುವ ವ್ಯಾಖ್ಯಾನದಂತೆಯೇ 'ರಾಜಕಾರಣಿ'ಯಾಗಬೇಕು ಎಂಬುದು ಇದರೊಳಗಿನ ಮರ್ಮ. ಇಂದು ಕೇಜ್ರಿವಾಲ್ ಅವರನ್ನು ಜನ ಆಮ್ ಆದ್ಮಿ ಎಂದು ಗುರುತಿಸಿ, 'ರಾಜಕಾರಣಿ'ಯನ್ನಾಗಿ ಮಾಡಿದ್ದಾರೆ. ಕೇಜ್ರಿವಾಲ್ 'ರಾಜಕಾರಣಿ'ಯಾಗುತ್ತಾರಾ ಎಂಬದು ಈಗಿನ ಯಕ್ಷ ಪ್ರಶ್ನೆ!!!.. ಇನ್ನು ಯಡ್ಯೂರಪ್ಪನವರ ಬಗ್ಗೆ...? ಈ ವಾಪಸಾತಿಯೂ ಮಹತ್ವದ್ದೇ!. ಕೇಜ್ರಿವಾಲ್ ಇಂದು ಕಾಂಗ್ರೆಸ್ ಬೆಂಬಲದಿಂದ ಸರಕಾರ ರಚಿಸಿದ್ದಾರೆ. ಮುಂದೆ ಅವರು ಆಮ್ ಆದ್ಮಿಯಾಗಿಯೇ ಉಳಿಯುತ್ತಾರಾ ಅಥವಾ ಕಾಲ ಕ್ರಮಿಸಿದಂತೆ, ಅಧಿಕಾರ ಅವರ ಮುಷ್ಟಿಯಲ್ಲಿ ನಲುಗಿದಂತೆ, ಯಡ್ಯೂರಪ್ಪನಾಗಿ ಬದಲಾಗುತ್ತಾರಾ.....???!!!. ಮತ್ತೊಂದು ಯಕ್ಷ ಪ್ರಶ್ನೆ...
ಈಗ ಹೇಳಿ, ಏಳುನೂರು ಲೀಟರ್ ನೀರು ಮತ್ತು ಮರಳಿ ಮನೆಯೆಡೆಗೆ ಹೊರಟ ಈ ಘಟನೆಗಳು,  ರಾಜಕೀಯವಾಗಿ ವರ್ಷದ ಕೊನೆಯ ಮಹತ್ವದ ಘಟನೆಗಳಲ್ಲವೇ..??


No comments:

Post a Comment