ಭಾರತಾಂಬೆಯ ಮಡಿಲಿಗೆ ಯಾರ ಮಕ್ಕಳನ್ನು ನಾಯಕತ್ವ ಕೊಟ್ಟು ಕೂರಿಸುತ್ತಾನೋ ಈ ಪ್ರಬುದ್ಧ ಮತದಾರ ಎಂದು ತಿಳಿಯಲು ಮೇ ೧೭ರ ತನಕ ಕಾಯಬೇಕು. ಅಷ್ಟೇ!! ಜನಪ್ರತಿನಿಧಿಯಲ್ಲಿ ನನ್ನ ಈ ಬಾರಿಯ ಅಂಕಣ 'ಪ್ರದಕ್ಷಿಣೆ'ಯ ಬರಹ....
ರಣವೀಳ್ಯವನ್ನು ತೆಗೆದುಕೊಂಡ ರಾಜಕೀಯ ಪಕ್ಷಗಳು, ಅಜನ್ಮ ಶತ್ರುಗಳಂತೆ, ಇದ್ದ ಬದ್ದ ಕೆಸರನ್ನೆಲ್ಲಾ ಪರಸ್ಪರರಿಗೆರಚಿಕೊಳ್ಳುತ್ತಾ ದೆಹಲಿಯ ಗದ್ದುಗೆಗಾಗಿ ಹೋರಾಡುತ್ತಿವೆ. ಎಲ್ಲಿ ನೋಡಿದರೂ ಈಗ ಇದೇ ಮಾತು. ಸೋಲು-ಗಲುವಿನ 'ತಮ್ಮ ತಮ್ಮ'ದೇ ಲೆಕ್ಕಾಚಾರದಲ್ಲಿ ಮುಳುಗಿರುವ ನಾಯಕರು, ಅಧಿಕಾರವೊಂದನ್ನೇ ಅಜೆಂಡಾವನ್ನಾಗಿಸಿಕೊಂಡು ಹಗಲಿರುಳು ಒದ್ದಾಡುತ್ತಿದ್ದಾರೆ.
ಒಂದೆಡೆ ಮೈಸುಡುವ ಬಿಸಿಲು-ಸೆಖೆ-ಬೆವರಧಾರೆ. ಇನ್ನೊಂದೆಡೆ ಸಂಪೂರ್ಣ ಕಾವೇರಿಸಿಕೊಂಡಿರುವ ಚುನಾವಣೆ. ಈ ಎರಡರ ನಡುವೆ ಮಾಧ್ಯಮಗಳ ನಿರಂತರ ಬಿಸಿ-ಬಿಸಿ ಒಗ್ಗರಣೆ. ಹೌದು, ಅಖಾಡಾ ಸರ್ವ ಸನ್ನದ್ಧವಾಗಿವೆ, ಹಾಗಾದರೆ ಭಾರತ ಮಾತೆಯ ಮಡಿಲಿಗೆ ಈಗ ಹೊಸ ಪ್ರಧಾನಿಯಾಗಿ ಬರಲಿರುವ ನಾಯಕ, ಯಾವ ತಾಯಿಯ ಮಗ ಎಂಬ ಗೊಂದಲ ಎಲ್ಲರಲ್ಲೂ ಮನೆ ಮಾಡಿದ್ದರೂ, ಕಾಯಲೇ ಬೇಕು-ಮೇ-೧೭ರತನಕ.
ದೇಶದಲ್ಲಿ ಇದು ಸಮ್ಮಿಶ್ರ ಸರಕಾರದ ಯುಗ. ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸ್ಥಾಪಿಸುವ ಪರಂಪರೆ ಆರಂಭವಾದಾಗಿನಿಂದ, ದೆಹಲಿಯ ಗದ್ದುಗೆಗೆ ಏಕ ಪಕ್ಷದ ಅಧಿಪತ್ಯ ಕೊನೆಗೊಂಡಿತ್ತು. ಪ್ರತೀ ಚುನಾವಣೆಯಲ್ಲಿಯೂ ಬಹು ದೊಡ್ಡ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳು ತಾವೇ ಅಧಿಕಾರ ಹಿಡಿಯುತ್ತೇವೆ ಎಂದೇ ಆಖಾಡಕ್ಕಿಳಿದರೂ, ಎರಡೂ ಪಕ್ಷಗಳಲ್ಲೂ ಪ್ರಾದೇಶೀಕ ಪಕ್ಷಗಳ ಬಗೆಗೊಂದು 'ಭಯ' ಇದ್ದೇ ಇರುತ್ತದೆ. ಹಾಗೆಂದೇ ಕಾಂಗ್ರೆಸ್ ಹಾಗೂ ಭಾಜಪಗಳು, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯೊಂದಿಗೇ ಚುನಾವಣೆ ಎದುರಿಸುತ್ತವೆ. ದೆಹಲಿಯ ಗದ್ದುಗೆಯ ಮೇಲೆ ಪ್ರಭಾವ ಬೀರುವಷ್ಟೂ ಪ್ರಾದೇಶಿಕ ಪಕ್ಷಗಳು ಪ್ರಭಾವಿಯಾಗಿವೆ. ಈ ಹಿನ್ನೆಲೆಯಲ್ಲಿ, ಹಿಂದೊಮ್ಮೆ ದೇವೇ ಗೌಡರು ಪ್ರಧಾನಿಯಾದ ಹಾಗೆಯೇ, ತಾವೂ 'ಅದ್ರಷ್ಟವಶಾತ್' ಪ್ರಧಾನಿಯಾಗಬಹುದೆಂಬ ಕನಸು ಕಾಣುವ ಅನೇಕ ನಾಯಕರೂ ಹುಟ್ಟಿಕೊಂಡಿದ್ದಾರೆ. ಆದರೂ ಈಗ ಚಾಲ್ತಿಯಲ್ಲಿರುವ ಎರಡು ಪ್ರಮುಖ ಹೆಸರುಗಳು-ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ.
ಸೋನಿಯಾ ಗಾಂಧಿ!. ತನ್ನ ಮನೆಯಂಗಳಕ್ಕೆ ಬಂದಿದ್ದ ಪ್ರಧಾನಿ ಪಟ್ಟವನ್ನು ನಯವಾಗಿ ಹೊರಕಳುಹಿಸುವ ಮೂಲಕ, ಇಡೀ ದೇಶಕ್ಕೇ ಒಮ್ಮೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದವರು!. ಎರಡು ದಶಕದ ಹಿಂದಿನ ಲೋಕ ಸಭಾ ಚುನಾವಣೆಯಲ್ಲಿ, ಚುನಾವಣೆಗೆ ಮುನ್ನ ಎಂದೂ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಪರಂಪರೆ ಇಲ್ಲದ ಕಾಂಗ್ರೆಸ್, ಅಲ್ಲಿಯೂ ಸೋನಿಯಾ ನೇತ್ರತ್ವದಲ್ಲಿಯೇ ಚುನಾವಣಾ ಅಖಾಡಕ್ಕಿಳಿದಿತ್ತು. ಎನ್‌ಡಿಎ ವಿರೋಧಿ ಅಲೆಯಿಂದ ಅಂದು ದೆಹಲಿಯ ಗದ್ದುಗೆಗೆ ಸ್ಪಷ್ಟ ಬಹುಮತ ದೊರಕದಾದಾಗ, ಸೋನಿಯಾ ನೇತ್ರತ್ವದ ಕಾಂಗ್ರೆಸ್, ಯುಪಿಎ ಮೂಲಕ ಅಧಿಕಾರ ಹಿಡಿದಾಗ, ಸೋನಿಯಾ ದೇಶದ ಪ್ರಧಾನಿ ಆದರು ಎಂದೇ ಕಾಂಗ್ರೆಸಿಗರು ಸಂತಸ ಪಟ್ಟಿದ್ದರು. ಆದರೆ ಆದದ್ದೇ ಬೇರೆ! ಪ್ರಧಾನಿ ಪದವಿಯನ್ನು ಒಲ್ಲೆ ಎಂದ ಸೋನಿಯಾ, ಅದನ್ನು ಮನ ಮೋಹನ ಸಿಂಗ್ ಅವರ ಮುಡಿಗೇರಿಸಿದರು. ದೇವೇಗೌಡರಿಗೆ ಅನಿರೀಕ್ಷಿತವಾಗಿ ಒದಗಿ ಬಂದಹಾಗೆ, ದೇಶದ ಪ್ರಧಾನಿ ಪಟ್ಟ ಅಂದು ಮನ ಮೋಹನರಿಗೆ ಒಲಿಯಿತು. ಮುಂದಿನದ್ದು ಇತಿಹಾಸ. ಎರಡು ಅವಧಿಗೆ ನಿರಂತರ ಪ್ರಧಾನಿಯಾದ ,ಮನಮೋಹನ ಸಿಂಗ್‌ರು ಮೌನವಾಗಿದ್ದುದೇ ಹೆಚ್ಚು. ಸೋನಿಯಾ ಅವರ ಕ್ರಪೆಯಿಂದ ತಮಗೊದಗಿದ ಪ್ರಧಾನಿ ಹುದ್ದೆಯನ್ನು ಅವರ ಪ್ರಸಾದವೆಂಬಂತೆ ಮೌನವಾಗಿಯೇ ಅನುಭವಿಸಿದ ಮನಮೋಹನ ಸಿಂಗ್, ಎಂದೂ ಸ್ವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳದೇ, ಪ್ರಧಾನಿ ಪದವಿಗೂ ರಬ್ಬರ್ ಸ್ಟಾಂಪ್ ಲೇಬಲ್ ಹಚ್ಚಿದರು!!.
ಇನ್ನೂ ಇದೇ ಯೋಚನೆಯಿಂದ ಮುನ್ನಡೆದರೆ ಈ ಸಲ ಕಷ್ಟ ಎಂಬ ಸತ್ಯ ಅರಿತ ಕಾಂಗ್ರೆಸ್, ಈ ಸಲ ಕಾಂಗ್ರೆಸಿಗರು ಕರೆಯುವ 'ಯುವರಾಜ'ನನ್ನು ಆಖಾಡಕ್ಕಿಳಿಸಿದೆ. ಒಂದೆಡೆ ವಿಧಾನ ಸಭಾ ಚುನಾವಣೆಗಳಲ್ಲಿ ಅಲ್ಲಲ್ಲಿ ಹೊರತು ಪಡಿಸಿದರೆ ಸಾಲು ಸಾಲು ಸೋಲುಗಳೂ ಕಾಂಗ್ರೆಸ್‌ನ್ನು ಹತಾಶೆಗೊಳಪಡಿಸಿದ್ದರೆ, ಮತ್ತೊಂದೆಡೆ ಬಹಳ ಹಿಂದಿನಿಂದಲೇ ಭಾಜಪ ಹಬ್ಬಿಸಿದ ಮೋದಿ ಅಲೆ, ಕಾಂಗ್ರಸ್ಸಿಗರಿಗೆ 'ಏನಾದರೂ', ಮಾಡಬೇಕೆಂಬ ಅನಿವಾರ್ಯತೆಯನ್ನು ಹುಟ್ಟು ಹಾಕಿತ್ತು. ಕೆಲವು ರಾಜ್ಯ ಮಟ್ಟದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತಿದ್ದ ಕಾಂಗ್ರೆಸ್‌ಗೆ ತನ್ನ ನೇತ್ರತ್ವದ ಯುಪಿಎ ಕೇಂದ್ರದಲ್ಲಿ ಮಾಡಿದ ಭ್ರಷ್ಟಾಚಾರ ಬೆಟ್ಟದತ್ತೆರಕ್ಕೇರಿದಾಗ ಸಹಜವಾಗಿಯೇ ಇರಿಸು ಮುರುಸಾಗಿತ್ತು. ಅತ್ತ ಗುಜಾರಾತ್‌ನಲ್ಲಿ ಮಾದರಿ ಆಡಳಿತವನ್ನು ನೀಡಿ, ಕಾಂಗ್ರ್ರೆಸ್ ಅಥವಾ ಇತರ ರಾಜಕೀಯ ಪಕ್ಷಗಳು ಏನೇ ಕೆಸರೆರಚಿದರೂ, ಜನ ಮಾತ್ರ ಮೋದಿಯ ಕೈ ಬಿಡದಿದ್ದ ಸಂಕಟವೂ, ಅದನ್ನೇ ದೇಶಾದ್ಯಂತ ಹೈಟೆಕ್ ಪ್ರಚಾರದ ಮೂಲಕ ಪಸರಿಸಿದ ಭಾಜಪದ ಯೋಜನಾ ಬದ್ಧ ನಡೆಯೂ ಕಂಗ್ರೆಸ್ಸಿಗೆ ತಲೆನೋವಾಗಿದ್ದು ಸುಳ್ಳಲ್ಲ!
ಇದು ಒಂದೆಡೆಯಾದರೆ, ಮನ ಮೋಹನರಿಗೆ ಈ ಅವಧಿಯೇ ಕೊನೆಯದು, ಮುಂದೆ ಪಕ್ಷ ಗೆದ್ದರೂ ಅವರು ಪ್ರಧಾನಿಯಾಗುವುದಿಲ್ಲ ಎಂಬುದು ಪೂರ್ವ ನಿರ್ಣಯವಾದರೂ, ಮುಂದೆ ಯಾರು ಎಂಬುದನ್ನು ಕಾಂಗ್ರೆಸ್ ಎಲ್ಲಿಯೂ ಹೇಳಲಿಲ್ಲ!. ಈ ಸಲ ಅಧಿಕ್ರತವಾಗಿ ಪ್ರಧಾನಿ ಪದದ ಉಮೇದುವಾರರನ್ನು ಕಾಂಗ್ರೆಸ್ ಸಹಾ ತನ್ನ ಪರಂಪರೆ ಮುರಿದು ಘೋಷಿಸುವ ನಿರೀಕ್ಷೆ ಇತ್ತು. ಅದು ಆಗಲೇ ಇಲ್ಲ. ಹಾಗೆಂದ ಮಾತ್ರಕ್ಕೆ ಅಲ್ಲಿ ಬೇರೆ ಯಾವುದೋ ಉಮೇದುವಾರರಿದ್ದಾರೆ ಎಂಬುದು ಭಾವನೆಯಲ್ಲಿ. ಅಧಿಕೃತ ಘೋಷಣೆ ಆಗಿಲ್ಲ ಅಷ್ಟೇ! ಎಲ್ಲೆಡೆಯಲ್ಲಿಯೂ ಈಗ ರಾಹುಲ್ ನಾಯಕತ್ವದ್ದೇ ಮಾತು-ಅದೇ ಗಾಳಿ.
ರಾಹುಲ್ ಗಾಂಧಿ!. ರಾಜೀವ ಗಾಂಧಿ ದೇಶದ ಚುಕ್ಕಾಣಿ ಹಿಡಿಯುವ ವೇಳೆಯಲ್ಲಿ ಕಾಂಗ್ರೆಸ್ ಜಪಿಸಿದ್ದ ಮಂತ್ರ, ಯುವ ಜನರೇ ದೇಶದ ಆಸ್ತಿ ಎಂಬುದಾಗಿತ್ತು. ಅದಾದ ನಂತರ, ತನ್ನ ಪರಂಪರೆಯಂತೆ 'ವಯೋವೃದ್ದ' ಪರಂಪರೆಯನ್ನು ಮುಂದುವರಿಸಿಕೊಂಡು ಹೋಯಿತು. ಮುಖ್ಯವಾಗಿ ಸೋನಿಯಾ ಗಾಂಧಿಯವರ ಮಾತಿಗೆ ಎದುರಾಡದ ನಾಯಕರನ್ನು ಅದು ಬೆಳೆಸುತ್ತಾ ಹೋಯಿತು. ಇಂದಿನ ಕಾಂಗ್ರೆಸ್‌ನಲ್ಲಿ ಸೋನಿಯಾ ನಿಷ್ಠರು ಮಾತ್ರ ಆಯ ಕಟ್ಟಿನ ಜಾಗದಲ್ಲಿ ಉಳಿಯ ಬಹುದು ಮತ್ತು ಬೇರಾರಿಗೂ ಅಲ್ಲಿ ಸ್ಥಾನವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ. ಹಾಗೆಂದು ತನ್ನ ಮನೆ ಬಾಗಿಲಿಗೆ ಬಂದು, ತಾನೇ ತಿರಸ್ಕರಿಸಿದ್ದ ಪ್ರಧಾನಿ ಪದವಿ ಇನ್ನೂ ತನ್ನ ಮನೆಯಂಗಳದ ಹೊರಗೇ ಉಳಿಯುವುದು ಸೋನಿಯಾಗೆ ಈಗ ಇಷ್ಟವಿಲ್ಲ. ಹಾಗಾಗಿಯೇ ತಾನು ರಾಜಕೀಯವಾಗಿ ಮಗನನ್ನು 'ಸಂಪೂರ್ಣ' ಅಣಿಗೊಳಿಸಿದ್ದೇನೆ ಎಂಬ 'ಸ್ವಯಂತೀರ್ಮಾನ'ಕ್ಕೆ ಬಂದ ಸೋನಿಯಾ, ಅನಧಿಕೃತವಾಗಿ ರಾಹುಲ್ ಪಟ್ಟಾಭಿಷೇಕ ಘೋಷಿಸಿದ್ದಾರೆ!!-ಕಾಂಗ್ರೆಸ್(ಯುಪಿಎ) ಗೆದ್ದರೆ.
ರಾಹುಲ್ ಹೇಗೆ ಎಂಬ ಪ್ರಶ್ನೆಗೆ ಉತ್ತರ ಅಸ್ಪಷ್ಟ. ಕೇಂದ್ರ ಸರಕಾರದ ಆಯಕಟ್ಟಿನ ಜಾಗದಲ್ಲಿ ಯಾವುದೇ ಜವಾಬ್ದಾರಿಯುವ ಹುದ್ದೆಯನ್ನು ಇನ್ನೂ ಅನುಭವಿಸಿದ ಅನುಭವವಿಲ್ಲದ ರಾಹುಲ್ ನೇತ್ರತ್ವದಲ್ಲಿ ನಡೆದ ಚುನಾವಣೆಗಳು, ಕಾಂಗ್ರೆಸ್‌ಗೆ ಗೆಲುವಿಗಿಂತ ಹೆಚ್ಚು ಸೋಲನ್ನೇ ತಂದಿವೆ ಎಂಬುದು ಎಲ್ಲರೂ ಹೇಳುವ ಮತ್ತು ಒಪ್ಪುವ ಮಾತು. ಯಾವುದಕ್ಕೂ ಸಮರ್ಥವಾಗಿ ಉತ್ತರಿಸಲು ರಾಹುಲ್ ತಡಕಾಡುತ್ತಾರೆ. ಯಾರೋ ತಯಾರಿಸಿಕೊಟ್ಟ ಭಾಷಣವನ್ನು ಓದಿ, ಮುಜುಗುರಕ್ಕೊಳಗಾಗುತ್ತಾರೆ. ತಮ್ಮದೇ ಪಕ್ಷದ ಮನಮೋಹನರ ಕೆಲವು ನಿರ್ಣಯಗಳಿಗೆ ತಾವೇ ಎದುರಾಡಿ ಮುಜುಗುರದ ಅನೇಕ ಸನ್ನಿವೇಶಗಳಿಗೆ ಕಾರಣರಾಗಿದ್ದಾರೆ. ಸಂದರ್ಶನದ ವೇಳೆಯಲ್ಲಿ ಪೆದ್ದು ಪೆದ್ದಾಗಿ ಉತ್ತರಿಸುತ್ತಾ, ಕಾಂಗ್ರೆಸಿಗರೂ ಮೈ ಪರಚಿಕೊಳ್ಳುವಂತೆ ಮಾಡಿದ್ದಾರೆ. ತಾವು ಭೇಟಿ ಮಾಡಿದ ಕೊಳಚೆಗೇರಿ, ಅಥವಾ ಇತರ ಪ್ರದೇಶದ ಚಿತ್ರಣಗಳನ್ನು ಕೇವಲ ಚುನಾವಣಾ ಪ್ರಚಾರದ ಗಿಮಿಕ್‌ಗಳಿಗೆಂಬಂತೆ ಬಳಸಿಕೊಂಡಿದ್ದಾರೆ. ಎಲ್ಲಕ್ಕಿಂತಲೂ ಭಾಜಪ(ಎನ್‌ಡಿಎ) ದ ಪ್ರಧಾನಿ ಅಭ್ಯರ್ಥಿ 'ಎಸೆಯುವ' ಸವಾಲುಗಳಿಗೆ ನೇರ ಮತ್ತು ಶಕ್ತ ಮರುಸವಾಲೆಸೆಯುವಲ್ಲಿ ಸೋಲುತ್ತಿದ್ದಾರೆ. ತಮ್ಮ ಸುತ್ತಲೂ ಇರುವ ಆಪ್ತರ ಮಾತುಗಳನ್ನೇ ವೇದ ವಾಕ್ಯದಂತೆ ಪಾಲಿಸುತ್ತಾ, ಅನೇಕ ಹಿರಿಯ-ಕಿರಿಯ ನೆಹರೂ ಕುಟುಂಬಾಪ್ತರಲ್ಲದವರಿಗೆ ಮುಜುಗುರ ತರುತ್ತಿದ್ದಾರೆ. ವಿರೋಧಿಗಳು ಹೇಳುವಂತೆ ದೇಶದ ಉದ್ದಗಲದ ಸಮಸ್ಯೆಗಳು ಅಥವಾ ಇಂದಿನ ಅಗತ್ಯಗಳ ಪರಿಚಯಕ್ಕೆ ಹೊರತಾಗಿ, ಕೇವಲ 'ಯುವ ಭಾರತ'ದ ಕನವರಿಯಕೆಯಲ್ಲಿದ್ದಾರೆ. ಇದು ಪ್ರಧಾನಿ ಪದವಿಗೆ ಸಾಲದು ಎಂಬುದು ರಾಹುಲ್ ಬಗೆಗಿರುವ ಋಣಾತ್ಮಕ ಅಂಶಗಳು. ಈ ರಾಜೀವ್-ಸೋನಿಯಾ ಪುತ್ರ ಭಾರತ ಮಾತೆಯ ಮಡಿಲಿನಲ್ಲಿ ನವತಾರೆಯಾಗಬಹುದೇ..??.
ನರೇಂದ್ರ ಮೋದಿ!. ಗುಜರಾತ್ ಮಂತ್ರವನ್ನೇ ದೇಶದ ಉದ್ದಗಲಕ್ಕೂ ನಿರಂತರ ಜಪಿಸುತ್ತಿರುವ ಮೂಲಕ, ಪ್ರಧಾನಿ ಪದವಿಯ ಮೇಲೆ ಕಣ್ಣಿಟ್ಟಿರುವ ಮತ್ತೋರ್ವ ನಾಯಕ. ಯಾವ ಗುಜರಾತ್ ಅಭಿವೃದ್ಧಿ ಇವರಿಗೆ 'ಖಚಿತ'ಮಾನದಂಡವೋ, ಅದೇ ಗುಜರಾತ್‌ನಲ್ಲಿ ನಡೆದ ನರಮೇಧದ ರಕ್ತದ ಕಲೆಯನ್ನು ವಿರೋಧಿಗಳೂ ಇವರ ಮೈಗೆ ಹಚ್ಚಿ ಟೀಕಿಸುತ್ತಿದ್ದಾರೆ!. ಮೋದಿಯ ಮೋಡಿ ಏನೂ ಇಲ್ಲ, ಎಲ್ಲವೂ ಭಾಜಪ ನಿರ್ಮಿಸಿದ ನಾಟಕ ಕಂಪೆನಿಯೆಂಬುದು ವಿರೋಧಿಗಳ ಮಾತು. ಒಂದು ರೀತಿಯಲ್ಲಿ ನೋಡಿದರೆ, ಈ ನಾಯಕತ್ವಕ್ಕೆ ವಿರೋಧವಿರುವುದು ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳಲ್ಲಾದರೂ, ಕಂಡು ಕೇಳರಿಯದ ವಿರೋಧವನ್ನು ಇವರು ಎದುರಿಸುತ್ತಿರುವುದು ತಮ್ಮದೇ ಪಕ್ಷದ ಹಿರಿಯ ನಾಯಕರಾದ ಅಡ್ವಾಣಿ-ಸುಷ್ಮಾ ಅವರಂತಹ ನಾಯಕರಿಂದ!!. ದೇಶ ಮತ್ತು ಕಾಂಗ್ರೆಸ್ ಪಾಲಿಗೆ ರಾಹುಲ್ ಯುವ ನೇತಾರರಾದರೆ, ಪ್ರಧಾನಿ ಪದವಿಗಾಗಿ ದಶಕಗಳಿಂದ ಕಾಯುತ್ತಿರುವ ಭಾಜಪದ ಕೆಲವು ಹಿರಿಯ ತಲೆಗಳಿಗೆ, ಈ 'ಯುವ'ಮೋದಿ ತಲೆನೋವು!!. ಇನ್ನೂ ರಾಜಕೀಯದಲ್ಲಿ ಪ್ರಧಾನಿಯಾಗಲು 'ಮುಂದೆ'ಅವಕಾಶವಿರುವಾಗ ಮೋದಿಗೆ 'ಇಂದೇ' ಏಕೆ ಅವಸರ ಎಂಬುದು ಭಾಜಪದೊಳಗಿನ 'ಹಿರಿ'ತಲೆಗಳ ಕಿಚ್ಚು. ಇದೂ ಮೋದಿ ವಿರೋಧಿ ಅಲೆಯಾಗಿ ಪರೋಕ್ಷವಾಗಿ ಕೆಲಸ ಮಾಡುತ್ತಿದೆ.
ಮೋದಿಯವರನ್ನು ಭಾಜಪ ಸುಮಾರು ಒಂದು ವರ್ಷದಿಂದೀಚೆಗೆ ಆಖಾಡಕ್ಕೆ ಅಣಿಗೊಳಿಸುತ್ತಿತ್ತು. ವಿರೋಧಿಗಳ ಬಾಯಿ ಮುಚ್ಚಿಸಲು, ಹೊಸ ಹೊಸ ತಂತ್ರ-ಸೂತ್ರಗಳನ್ನು ಅಳವಡಿಸಿಕೊಳ್ಳುತ್ತಾ, ತನ್ನ ಪ್ರತೀ ರ್‍ಯಾಲಿಯಲ್ಲಿ ಹೊಸ ಹೊಸ 'ನುಡಿಬಾಂಬ್'ಗಳನ್ನೆಸೆಯುತ್ತಾ ಮೋದಿಯೂ ಆಕರ್ಷಿಸಿದ್ದು ಯುವಕರನ್ನೇ!!. ಯುವ ಭಾರತ ನಿರ್ಮಾಣದ ಮಾತಾಡುತ್ತಾ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್‌ಗೆ, ಮೋದಿಗೆ ಯುವ ಜನತೆಯನ್ನು ಆಕರ್ಷಿಸುವ ಕಲೆ ಕರಗತವಾಗಿದ್ದು, ಪರಿಣಾಮವಾಗಿ ಈ ವಯಸ್ಸಿನಲ್ಲೂ ಯುವ ನೇತಾರನಾಗಿ ಕಾಣಿಸಿಕೊಳ್ಳುತ್ತಿರುವುದು ತಲೆನೋವಿನ ವಿಚಾರ. ಹಾಗೆಂದು ಮೋದಿ ಅಲೆಗೂ ವಿರೋಧವಿಲ್ಲ ಎಂದಲ್ಲ. 'ಮೋದಿ ಅಲೆ'ಎಂಬ ಅಲೆ ದೇಶದೆಲ್ಲೆಡೆ ಇದೆ ಎಂದು ಕೂಗೆಬ್ಬಿಸಿದ್ದು ಭಾಜಪ ಮತ್ತದರ (ಅವರನ್ನು ಒಪ್ಪಿಕೊಂಡಿರುವ) ಮಿತ್ರ ಪಕ್ಷಗಳೇ ಹೊರತು, ದೇಶದ ಜನತೆ ಅಲ್ಲ!. ಮೋದಿಯವರನ್ನು ಕೇವಲ ಒಂದು 'ಬ್ರಾಂಡ್' ಆಗಿ ಭಾಜಪ ನಿರೂಪಿಸುತ್ತಾ ಹೋಗಿದೆಯೇ ಹೊರತು, ತನ್ನೊಳಗಿನ ಹಿರಿಯ ನಾಯಕರದ್ದೇ ವಿಶ್ವಾಸ ಕಳೆದುಕೊಂಡಿದ್ದು ಸುಳ್ಳಲ್ಲ. ಎಲ್ಲರೂ ಆ ಬಿಸಿಯನ್ನು ಅನುಭವಿಸುತ್ತಲೇ ಇದ್ದರೆ, ಕೆಲವರು ಅದರಲ್ಲಿಯೇ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಅಷ್ಟೆ. ಹೀರಾ ಬೆನ್-ದಾಮೋದರದಾಸ್ ಮೂಲ್ ಚಂದ್ ಮೋದಿ ದಂಪತಿಗಳ ಈ ೬೩ರ ವಯೋವೃದ್ದ 'ಯುವಕ' ಭಾರತಾಂಬೆಯ ಮಡಿಲ ನಾಯಕ ಮಣಿಯಾಗಿ ಹೊರ ಹೊಮ್ಮುತ್ತಾರೆಯೇ..??. ಸ್ವಲ್ಪ ಕಾಯ ಬೇಕು ಅಷ್ಟೇ.
ಇನ್ನು ತೃತೀಯ ರಂಗ ಎಂಬ ಚುನಾವಣಾ ವೇಳೆಯ 'ಶಿಶು'! ಇದು ದೇವೇ ಗೌಡ, ಜಯಲಲಿತಾಎಂಬ ಪ್ರಧಾನಿ ಪಟ್ಟದ ಆಕಾಂಕ್ಷಿಗಳ 'ಗರ್ಭ'ಧರಿಸಿದೆ!!. ಅತ್ತ ಮಮತಾ ಬ್ಯಾನರ್ಜಿ, ಇತ್ತ ಮುಲಾಯಂ ಸಿಂಗ್ ಯಾದವ್-ಮಾಯಾವತಿಗಳೂ ತಮ್ಮ ಅದ್ರಷ್ಟ ಚೀಟಿ ಹಿಡಿದು ಕುಳಿತಿದ್ದಾರೆ!!. ದೆಹಲಿಯಲ್ಲಿ'ಅಚಾತುರ್ಯ'ದಿಂದ ಗದ್ದುಗೆ ಹಿಡಿದ ಆಮ್ ಆದ್ಮಿಗಳು, ಪವಾಡದ ನಿರೀಕ್ಷೆಯಲ್ಲಿದ್ದಾರೆ ಮತ್ತು ದೇಶದ ಜನತೆಗೆ ಇವರಿಂದ ಪುಕ್ಕಟೆ ಮನೋರಂಜನೆ ಸಿಗುತ್ತಿದೆ. ಅವರ ದೃಷ್ಟಿಯಲ್ಲಿ ಕೇಜ್ರಿವಾಲ್ ಪ್ರಧಾನಿಯಾಗಿಯಾಗಿದೆ!!. ಅಂತೂ ಈ ಬಿಸಿಲ ಬೇಗೆ, ಕಾವೂ ಸಹ, ಚುನಾವಣೆಯ ಬಿಸಿ ಯಿಂದಾಗಿ, ತನ್ನತನ ಕಳೆದುಕೊಂಡಿದೆ. ದೇಶದ ಪ್ರಬುದ್ಧ ಮತದಾರ ಮಾತ್ರ, ಮೀಸೆಯ ಕೆಳಗೆ ನಗುತ್ತಾ ತುಂಟ ನಗೆ ಬೀರುತ್ತಿದ್ದಾನೆ. ಅವನಿಗೆ ತಾನು 'ತಾತ್ಕಾಲಿಕ' ಪ್ರಭುವಾದ ಬಗ್ಗೆ ನೋವಿದೆ, ಸಿಡುಕಿದೆ, ಕೋಪವಿದೆ. ಅಷ್ಟೇ ಮುಖ್ಯವಾಗಿ, ತನ್ನ 'ಹಕ್ಕಿನ' ಪರಿಧಿ ಚುನಾವಣೆಗೆ ಮಾತ್ರ ಸೀಮಿತ ಎಂಬ ಅರಿವಿದೆ!!.
ಭಾರತಾಂಬೆಯ ಮಡಿಲಿಗೆ ಯಾರ ಮಕ್ಕಳನ್ನು ನಾಯಕತ್ವ ಕೊಟ್ಟು ಕೂರಿಸುತ್ತಾನೋ ಈ ಪ್ರಬುದ್ಧ ಮತದಾರ ಎಂದು ತಿಳಿಯಲು ಮೇ ೧೭ರ ತನಕ ಕಾಯಬೇಕು. ಅಷ್ಟೇ!!
No comments:
Post a Comment