Tuesday 25 March 2014

'ಕೊಲೆ'ಯ ಹಿಂದೆ-ಮುಂದೆ...!

ಸಹಜವಾಗಿಯೇ ಮನುಷ್ಯ ಭಾವನಾ ಜೀವಿ. ಅವನ ಭಾವನೆಗಳು ಅವನ ನಿಯಂತ್ರಣ ತಪ್ಪಿ ಹೋದಾಗ ಅನಾಹುತಗಳು ಆಗುತ್ತವೆ. ಈ ಕೊಲೆ ಎಂಬುದಕ್ಕೆ ಇಂತಾದ್ದೇ ಎಂಬ ಕಾರಣಗಳಿರುವುದಿಲ್ಲ. ಹತಾಶೆ, ಕೋಪ, ಹಠಮಾರಿತನ, ದ್ವೇಷ, ನಿರಾಸೆ...ಜನಪ್ರತಿನಿಧಿ ಯಲ್ಲಿ ನನ್ನ ಇಂದಿನ ಲೇಖನ... 


ಒಂದು ಕ್ಷಣ ಬೆಚ್ಚಿ ಬೀಳಿಸುವ ಘಟನೆ ಆಗಿತ್ತದು!

ಅದೊಂದು ಪುಟ್ಟ ಸಂಸಾರ. ಕಿರಣ್ ಎಂಬ ಗಂಡ, ಸೌಮ್ಯಾ ಎಂಬ ಹೆಂಡತಿ ಮತ್ತು ನಾಲ್ಕರ ಹರೆಯದ ಮುದ್ದಾದ ಮಗುವಿದ್ದ ಆ ಸಂಸಾರ ನೆಮ್ಮದಿಯಿಂದಿತ್ತು. ಆತ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಮೆನೇಜರ್.   ಆಂಧ್ರ ಮೂಲದ ಅವರು ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.  

ಕಿರಣನ  ಕೈಕೆಳಗೆ ಶ್ರದ್ಧಾ ಎಂಬ ಆಕೆ ಕೆಲಸ ಮಾಡುತ್ತಿದ್ದಳು. ಅವಳು ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ಶ್ರದ್ಧಾ ಮತ್ತು ಕಿರಣ್  ಮಧ್ಯೆ ಇದ್ದ ಸಂಬಂಧ ನಿಧಾನವಾಗಿ ಪ್ರೀತಿಗೆ, ನಂತರ ಪ್ರೇಮಕ್ಕೆ ತಿರುಗಿತು. ಎಂಟು ತಿಂಗಳಾಗುವಷ್ಟರಲ್ಲಿ ಆ ಇಬ್ಬರೂ ಬಹಳ ಹತ್ತಿರ ಬಂದರು. ಆದರೆ ಅದೇ ಸಂದರ್ಭದಲ್ಲಿ ಕಿರಣನಿಗೆ ಬೆಂಗಳೂರಿಗೆ ವರ್ಗವಾಯಿತು. ಶ್ರದ್ಧಾಳಿಗೆ ಬಹಳ ನೋವಾಯಿತು. ಕಿರಣ್‌ನನ್ನು ಬಿಟ್ಟಿರಲಾರದೇ ಶ್ರದ್ಧಾ ಒದ್ದಾಡಿದಳು. ಅದೇ ಸಂದರ್ಭದಲ್ಲಿ ಬೆಂಗಳೂರಿಗೆ ಹೋದ ಕಿರಣ್, ಸೌಮ್ಯಾ ಮತ್ತು ಮಗುವನ್ನು ಅಲ್ಲಿಗೆ ಕರೆದೊಯ್ಯಲು ಒಂದು ಮನೆಯನ್ನೂ ನೋಡುತ್ತಾನೆ. ಇದು ಶ್ರದ್ಧಾಳಿಗೆ ಮತ್ತಷ್ಟು ನೋವು ನೀಡಿತು. ಪರಿಣಾಮ, ಒಂದು ಬೆಳಿಗ್ಗೆ ಆಕೆ ಕಿರಣನ ಮಂಗಳೂರಿನ ಬಾಡಿಗೆ ಮನೆಗೆ ಬರುತ್ತಾಳೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೌಮ್ಯಾಗೆ ನಿದ್ದೆ ಮಾತ್ರೆ ನೀಡುತ್ತಾಳೆ. ಮಗುವನ್ನು ಎತ್ತಿಕೊಂಡು ಹೋಗುವ ಮುನ್ನ, ನಿದ್ದೆಯಲ್ಲಿದ್ದ ಸೌಮ್ಯಾಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾಳೆ. ಕೊಲೆ ಮಾಡುತ್ತಾಳೆ.

 ಮರುದಿನ ಬೆಳಿಗ್ಗೆ ಕಿರಣ ಬೆಂಗಳೂರಿನಿಂದ ಬರುತ್ತಾನೆ. ಕೊಲೆಯಾದ ಬಗ್ಗೆ ಆತನಿಗೆ ಪೂರ್ವಮಾಹಿತಿ ಇತ್ತೆಂಬ ಅನುಮಾನವೂ ಇದೆ. ಆತ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುತ್ತಾನೆ. ಈಗ ಇಬ್ಬರೂ ಪೋಲಿಸರ ಅತಿಥಿಗಳು. ಇದು ಕೇವಲ ಒಂದು ವಾರದ ಕೆಳಗೆ ಮಂಗಳೂರಿನಲ್ಲಿ ನಡೆದ ಒಂದು ಕೊಲೆಯ ಘಟನೆ.

ಇಂತಹ ಹತ್ತು ಹಲವಾರು ಘಟನೆಗಳನ್ನು ನಾವು ದಿನ ನಿತ್ಯವೂ ನೋಡುತ್ತಿರುತ್ತೇವೆ. ಪತ್ರಿಕೆಗಳಲ್ಲಿ ಈ ತರದ ಘಟನೆಗಳು ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತವೆ. ಸುಮಾರು ಒಂದೂವರೆ ತಿಂಗಳ ಹಿಂದೆ, ಇದೇ ಮಂಗಳೂರಿನಲ್ಲಿ, ಹಳೆಯ ಪೇಪರ್ ವ್ಯಾಪಾರಿಯೊಬ್ಬನ ಕೊಲೆಯಾಗುತ್ತದೆ. ಪೊದೆಯೊಂದರ ಬಳಿ ಸತ್ತು ಬಿದ್ದಿದ್ದ ಆ ನತದ್ರಷ್ಟನ ಅಸಹಜ ಸಾವಿನ ಬೆನ್ನು ಹತ್ತಿ ಹೋದ ಪೋಲಿಸರು, ಆತನ ಪತ್ನಿಯನ್ನು ಬಂಧಿಸುತ್ತಾರೆ. ಆಗ ಆಕೆ ಬಾಯ್ಬಿಟ್ಟ ಸತ್ಯ ಎಂದರೆ, ಆಕೆ ಮತ್ತು ಇತ್ತೀಚೆಗೆ ಪರಿಚಯವಾದ ಆಕೆಯ ಪ್ರಿಯಕರ ಸೇರಿ, ಆತನನ್ನು ಮುಗಿಸಿರುತ್ತಾರೆ.

ಈ ಎಲ್ಲಾ ಘಟನೆಗಳನ್ನು ಓದುತ್ತಿರುವಂತೆ, ಮನುಷ್ಯ-ಮನುಷ್ಯನ ನಡುವಿನ ಸಂಬಂಧ ಇಂದು ಯಾವ ಮಟ್ಟದಲ್ಲಿದೆ ಎಂಬ ನೋವು ಮತ್ತು ಹತಾಶೆಗಳೆರಡೂ ಕಾಣುತ್ತವೆ. ಈ ರೀತಿಯ ಘಟನೆಗಳು ಸಾಮಾನ್ಯವೆಂಬಂತೆ ಇಂದು ನಮ್ಮ ಸುತ್ತ ಮುತ್ತಲೇ ನಡೆಯುತ್ತಿದ್ದರೆ, ಸಾಮಾಜಿಕವಾಗಿ ನಾವು ಯಾವ ಪರಿ ಅಧ:ಪತನಕ್ಕಿಳಿಯುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ. 

ಒಂದರ್ಥದಲ್ಲಿ ಬದುಕೇ ಹಾಗೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಮತ್ತು ಹೊಸದಕ್ಕೆ ಹಾತೊರೆಯುವ ಮನ. ಪ್ರತಿಯೊಬ್ಬನ ಬದುಕಿನಲ್ಲೂ ಸಹಜವಾಗಿ ಕೆಲವು ವಿಷಯಗಳಲ್ಲಿ ಅತೃಪ್ತಿ ಇರುತ್ತದೆ. ಆ ಕೊರತೆಯ ನಿವಾರಣೆಗಾಗಿ ಹಲವು ದಾರಿಗಳೂ ಇರುತ್ತವೆ. ಆದರೆ ಕಾನೂನು ತನ್ನ ಚೌಕಟ್ಟಿನಡಿ ಅನೇಕ ಕಟ್ಟುಪಾಡುಗಳನ್ನು ನಿರ್ಮಿಸಿಟ್ಟಿದ್ದು, ಇದನ್ನು ಅರಿತು ಮುನ್ನಡೆಯಬೇಕಾದ ಅನಿವಾರ್ಯತೆ, ಆರೋಗ್ಯಪೂರ್ಣ ಸಮಾಜದ ಹಿನ್ನೆಲೆಯಲ್ಲಿ ಇಂದಿನ ಅಗತ್ಯವಾಗಿದೆ.

ಮೇಲಿನೆರಡೂ ಘಟನೆಗಳಲ್ಲಿ ಅನೇಕ ಸಂಶಯಗಳು ಹುಟ್ಟಿಕೊಳ್ಳುತ್ತವೆ. ನಮಗೆ ತೀರಾ ಬೇಕು ಎನಿಸಿದಾಗ, ಮನಸ್ಸು ಬೇರಾವುದನ್ನೂ ಯೋಚಿಸದೇ, ಮುಂದೆ ಆಗಲಿರುವ ಯಾವುದೇ ಅನಾಹುತಗಳನ್ನೂ ಲೆಕ್ಕಿಸದೇ, ಇಂದು, ಈ ಕ್ಷಣಕ್ಕೆ ನನಗೆ ಬೇಕಾದ್ದನ್ನು ಪಡೆಯುವಲ್ಲಿ ಹಾತೊರೆಯುತ್ತದೆ. ಅದಕ್ಕಾಗಿ ಬೇರೆ ಜೀವದ ಬಲಿಯಾದರೂ ಆಗಬಹುದು, ನಾನು ಪಾತ್ರ ನೆಮ್ಮದಿಯಿಂದಿರಬೇಕೆಂದು ಮನ ಹಾತೊರೆಯುತ್ತದೆ.

ದುರಂತವೆಂದರೆ ನಮ್ಮ ಸುತ್ತ ಮುತ್ತಲೂ ಇಂತಹ ಹತ್ತು ಹಲವಾರು ಘಟನೆಗಳು ಮರುಕಳಿಸುತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧ ಮಾಡಿದವರು ಸಿಕ್ಕಿ ಬೀಳುತ್ತಾರೆ. ಜೀವನ ಪರ್ಯಂತ ಇದಕ್ಕಾಗಿ ಪರಿತಪಿಸುತ್ತಾ ಶಿಕ್ಷೆ ಅನುಭವಿಸುತ್ತಾರೆ. ಇದನ್ನು ನೋಡುತ್ತಲೇ, ಮತ್ತೆ ಮತ್ತೆ ಆ ತಪ್ಪು ಸಮಾಜದಲ್ಲಿ ಮರುಕಳಿಸುತ್ತಿದೆ ಎಂದಾದರೆ, ಜೀವನ ಶೈಲಿಯಲ್ಲಿ ನಾವು ತಪ್ಪಿದ್ದೆಲ್ಲಿ ಎಂಬ ಪ್ರಶ್ನೆ ಕಾಡುತ್ತದೆ.

ಈ ರೀತಿಯ ಅಪರಾಧಗಳಿಂದಾಗಿ, ಅತ್ತ ಬಯಸಿದ್ದೂ ಸಿಗದೇ, ಇತ್ತ ಇದ್ದುದನ್ನೂ ಕಳೆದುಕೊಂಡು, ಜೈಲಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬರುತ್ತದೆ. 

ಸಹಜವಾಗಿಯೇ ಮನುಷ್ಯ ಭಾವನಾ ಜೀವಿ. ಅವನ ಭಾವನೆಗಳು ಅವನ ನಿಯಂತ್ರಣ ತಪ್ಪಿ ಹೋದಾಗ ಅನಾಹುತಗಳು ಆಗುತ್ತವೆ. ಈ ಕೊಲೆ ಎಂಬುದಕ್ಕೆ ಇಂತಾದ್ದೇ ಎಂಬ ಕಾರಣಗಳಿರುವುದಿಲ್ಲ. ಹತಾಶೆ, ಕೋಪ, ಹಠಮಾರಿತನ, ದ್ವೇಷ, ನಿರಾಸೆ...ಇಂತಹ ಭಾವನೆಗಳು ಹೆಚ್ಚಿನ ಸಂದರ್ಭದಲ್ಲಿ ನಮ್ಮನ್ನು ನಿಯಂತ್ರಿಸುತ್ತವೆ. ಹೀಗೆ ಈ ರೀತಿ, ನಮ್ಮೊಳಗಿನ ಭಾವನೆಗಳೇ ನಮ್ಮನ್ನು ನಿಯಂತ್ರಿಸಲಾರಂಭಿಸಿದಾಗ, (ಅವುಗಳನ್ನು ನಾವು ನಿಯಂತ್ರಿಸುವ ಬದಲು), ಅನಾಹುತಗಳು ಘಟಿಸುತ್ತವೆ. ನಾವು ಓದಿರುತ್ತೇವೆ, ರಜೆ ಕೊಡದ ಮೇಲಧಿಕಾರಿಯನ್ನು ಕೊಂದ ಘಟನೆ, ಪ್ರೇಮ ನಿರಾಕರಣೆಯನ್ನು ಮಾಡಿದಾಗ ಕೊಲೆ ನಡೆದದ್ದು, ಆಸಿಡ್ ದಾಳಿಯಾದದ್ದು...ಸಂದರ್ಭಗಳು ಬೇರೆ ಬೇರೆಯಾಗಿದ್ದರೂ, ಪರಿಣಾಮ ಮತ್ತು ಅದಕ್ಕೆ ಕಾರಣವಾಗುವುದು ನಮ್ಮ ಮಾನಸಿಕ ದೌರ್ಬಲ್ಯ. ಇದನ್ನೇ ಮನ:ಶಾಸ್ರಜ್ಞರು ಮನೋ ವೈಕಲ್ಯ ಎಂದು ಕರೆದದ್ದು. ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ, ಕ್ಷಣಿಕ ದೌರ್ಬಲ್ಯ ಕೆಲಸ ಮಾಡುತ್ತವೆ. ಅನೇಕ ಕೊಲೆಗಳು, ಪೂರ್ವ ಯೋಜಿತವಾಗಿರುತ್ತವಾದರೂ, ಇದರ ಹಿನ್ನೆಲೆ, ಕ್ಷಣಿಕವಾಗಿ ಏನನ್ನೋ ತನ್ನ ಕೈವಶ ಮಾಡಿಕೊಳ್ಳುವ ಅಥವಾ ದ್ವೇಷದ ಪರಮಾವಧಿಯದ್ದಾಗಿರುತ್ತದೆ.

ಆತ್ಮಹತ್ಯೆಯೂ ಒಂದು ರೀತಿಯ ಕೊಲೆಯೇ ಆಗಿರುತ್ತದೆ. ಬೇರೊಂದು ಜೀವಿಯನ್ನು ಕೊಲ್ಲವುದಕ್ಕೆ ಭಿನ್ನವಾಗಿ ತನ್ನನ್ನೇ ತಾನು ಕೊಂದುಕೊಳ್ಳುವ ಸ್ಥಿತಿಯೇ ಆತ್ಮಹತ್ಯೆ. ಇದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದಂತೆ, ಅನೇಕ ಸಂದರ್ಭಗಳಲ್ಲಿ ಕ್ಷುಲ್ಲಕ ಕಾರಣಗಳೇ, ಜೀವಾಂತ್ಯಕ್ಕೆ ಕಾರಣವಾಗಿರುತ್ತವೆ. ತನ್ನ ಇಷ್ಟದ ಚ್ಯಾನೆಲ್ ನೋಡಲು ಮನೆಯವರು ಬಿಡಲಿಲ್ಲ ಎಂಬ ಕಾರಣ, ಪರೀಕ್ಷೆಯಲ್ಲಿ ಫೇಲ್ ಆಗಿ ಜೀವನವೇ ಮುಗಿಯಿತು ಎಂಬ ಭಾವನೆ...ಹೀಗೆ ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆಗಳು ನಡೆದದ್ದನ್ನು ಕೇಳೀದ್ದೇವೆ, ಕಂಡಿದ್ದೇವೆ.

ಸಾಮಾಜಿಕ ಸ್ವಾಸ್ಥ್ಯಗಳು ಈ ರೀತಿ ಕೆಡುತ್ತಿದ್ದರೆ, ನಮ್ಮ ಸುತ್ತಲಿನ ಪ್ರಪಂಚವೇ ಭೀಬತ್ಸವಾಗುತ್ತಾ ಹೋಗುತ್ತದೆ. ಈ ರೀತಿಯ ಮನೋ ವೈಕಲ್ಯ ಅಥವಾ ಹತಾಶೆಗೊಳಗಾಗುವುದನ್ನು ತಪ್ಪಿಸಲು ಅನೇಕ ಸಂದರ್ಭಗಳಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಡುವ ಕಲೆ, ಸಾಂಸ್ಕೃತಿಕ ಅಥವಾ ಧಾರ್ಮಿಕತೆಗೆ ನಮ್ಮನ್ನು ತೆರೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಒಂದು ಕ್ಷಣದ ಹತಾಶಾ ಭಾವನೆಯಿಂದ ನಾವು ಸೀದಾ ಸಾವಿನ ಮನೆಯ ಬಾಗಿಲಿಗೆ ಹೋಗುವ ಅಥವಾ ಬೇರೊಬ್ಬರನ್ನು ದೂಡುವ ಬದಲಿಗೆ, ಯಾವುದೋ ಒಂದು ಮಂದಿರದಲ್ಲೋ, ಅಥವಾ ಸಮಾರಂಭದಲ್ಲೋ ಒಂದಷ್ಟು ಹೊತ್ತು ಕಳೆದು ಬರುವ ಯೋಚನೆಯಿಂದ ಅತ್ತ ಹೋದರೆ...ಬರುವುದರಲ್ಲಿ ಮನಸ್ಸು ಪ್ರಫುಲ್ಲವಾಗಿರದಿದ್ದರೆ ಕೇಳಿ!! ಆಗ ಯಾವುದೇ ಅವಘಡಗಳಿಗೂ ಕಾರಣವೇ ಇರುವುದಿಲ್ಲ.

ಇದೀಗ ಪರೀಕ್ಷೆಯ ಸಮಯ-ಫಲಿತಾಂಶದ ಸಮಯ. ಎಲ್ಲಾ ವಿದ್ಯಾರ್ಥಿಗಳಲ್ಲೂ ಒಂದು ರೀತಿಯ ಅವ್ಯಕ್ತ ಭಯ ಇರುತ್ತದೆ. ಇದೇ ಮುಂದೆ ಫಲಿತಾಂಶ ಬಂದಾಗ, ಹತಾಶೆಯಾಗಿ ಮಾರ್ಪಟ್ಟು ಆತ್ಮ ಹತ್ಯೆಗೆ ಶರಣಾಗುವ ಅಪಾಯವಿರುವುದರಿಂದ, ನಿಜಕ್ಕೆಂದರೆ ಈ ಸಮಯಗಳಲ್ಲಿ ಪತ್ರಿಕೆ ನೋಡುವುದೇ ಹೆದರಿಕೆ ಹುಟ್ಟಿಸುವ ಹಾಗಿರುತ್ತದೆ. ಎಲ್ಲಿಯ ತನಕ ಎಂದರೆ ಫೆಲಾದವರು ಮತ್ತು ಅನೇಕ ಸಂದರ್ಭಗಳಲ್ಲಿ ನಿರೀಕ್ಷಿತ ಶೆಕಡಾವಾರು ಫಲಿತಾಂಶ ಬರದ ಕಾರಣವನ್ನೂ ಮುಂದೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಕಾಣುತ್ತವೆ!!. ದುರಂತವಲ್ಲವೇ??

ಮೇಲೆ ತಿಳಿಸಿದ ಎಲ್ಲಾ ಸೂಚ್ಯ ಘಟನೆಗಳು ನಮ್ಮ ಇಂದಿನ ದುರಂತಮಯ ಸನ್ನಿವೇಶಗಳನ್ನು ತೆರೆದಿಡುತ್ತಿವೆ. ಪ್ರಜ್ಞಾವಂತರಾದ ನಾವು ಯೋಚಿಸಿ, ದುಡುಕಿನ ಕೈಗೆ ಬುದ್ದಿ ಕೊಡದೇ, ಬದುಕನ್ನು ಹಸನು ಮಾಡಿಕೊಳ್ಳಬಹುದು...ಅಲ್ಲವೇ..!!

No comments:

Post a Comment