Prajavani..16.03.18 ರ ಕರಾವಳಿ ವಿಭಾಗದ ರಂಗಲಹರಿಯಲ್ಲ್ಲಿ ಪ್ರಕಟವಾದ ನನ್ನ ಬರಹ.....
‘ಏನಿಲ್ಲವೆಂದರೂ ಬದುಕಬಹುದೇನೋ... ಆದರೆ ಪ್ರೀತಿ, ಗೆಳೆತನ, ಮಾನವೀಯ ಅಂತಃಕರಣ, ಸಹಾನುಭೂತಿ ಇಲ್ಲದ ಬದುಕು ಸಾಧ್ಯವೇ? ಇವಿಲ್ಲವಾದರೆ ಬದುಕಬೇಕಾದರೂ ಯಾಕೆ?’
–ಇದು ಯಶವಂತ ಚಿತ್ತಾಲರು ತಮ್ಮ ಕಾದಂಬರಿ ‘ಶಿಕಾರಿ’ಯ ಮೂಲಕ ಪದೇಪದೇ ಎತ್ತುವ ಪ್ರಶ್ನೆ.
ತನ್ನ ಸ್ವಸಾಮರ್ಥ್ಯದಿಂದ ವೃತ್ತಿ ಜೀವನದ ಔನ್ನತ್ಯದ ನಾಗಾಲೋಟದಲ್ಲಿರುವ ವ್ಯಕ್ತಿಯೊಬ್ಬ ತನ್ನ ಸುತ್ತಲಿನ ವಾತಾವರಣದ ಮೇಲೊಂದು ಕಣ್ಣಿಟ್ಟಿರದೇ ಅಜಾಗೃತನಾದಾಗ ಸಂಭವಿಸಬಹುದಾದ ಅವನತಿಯ ಸುತ್ತ ಹೆಣೆದ ವಿಶಿಷ್ಟ ಕಾದಂಬರಿ ‘ಶಿಕಾರಿ’. ಇದನ್ನು ರಂಗದ ಮೇಲೆ ತರುವ ಕಠಿಣ ಸವಾಲನ್ನು ಸ್ವೀಕರಿಸಿ, ಯಶಸ್ವಿಯಾದವರು ಹಿರಿಯ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿಯವರಾದರೆ, ನಿರ್ದೇಶಕರ ಪರಿಶ್ರಮಕ್ಕೆ ತಕ್ಕ ಫಲಿತಾಂಶ ನೀಡುವ ಮೂಲಕ ಮೂರು ಗಂಟೆಗಳ ಸುದೀರ್ಘ ನಾಟಕಕ್ಕೆ ಜೀವ ತುಂಬಿದವರು ಮೈಸೂರು ರಂಗಾಯಣದ ಹಿರಿಯ ಕಲಾವಿದರು.
ಕರಾವಳಿ ಭಾಗಕ್ಕೆ ರಂಗಾಯಣದ ನಾಟಕಗಳು ಬರುವುದೇ ಅಪರೂಪ. ಆರು ವರ್ಷಗಳಿಂದ ಉಡುಪಿಯಲ್ಲಿ ರಂಗಹಬ್ಬವನ್ನು ಆಚರಿಸುತ್ತಿರುವ ಉಡುಪಿಯ ಸುಮನಸಾ ಕೊಡವೂರು ಸಂಸ್ಥೆ ಈ ಬಾರಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಮೈಸೂರು ರಂಗಾಯಣ ಕಲಾವಿದರು ಅಭಿನಯಿಸಿದ ‘ಶಿಕಾರಿ’ ಪ್ರದರ್ಶನಕಂಡು, ರಂಗಾಸಕ್ತರಿಗೆ ರಸದೌತಣ ನೀಡಿತು.
ಕಾರ್ಪೋರೆಟ್ ಜಗತ್ತಿನ ಅನೇಕ ಒಳ ತಿರುಳುಗಳನ್ನು ಅರಿತ ಉದ್ಯೋಗಿಯೊಬ್ಬ ತನ್ನ ಸಾಮರ್ಥ್ಯದಿಂದ ಹಂತ ಹಂತವಾಗಿ ವೃತ್ತಿಯಲ್ಲಿ ಔನ್ನತ್ಯ ಸಾಧಿಸುತ್ತಾ, ತನ್ನ ಸಾಮರ್ಥ್ಯವೇ ತನ್ನ ಶಕ್ತಿ ಎಂದುಕೊಂಡಿರುತ್ತಾನೆ. ಆದರೆ, ವ್ಯಾವಹಾರಿಕವಾದ ಅವನ ಕನಿಷ್ಠ ಜ್ಞಾನ ಎಂತ ಬೆಲೆ ತೆರುವಂತೆ ಮಾಡಬಲ್ಲುದು ಎಂಬುದನ್ನು ಕತೆ ಎಳೆಎಳೆಯಾಗಿ ತೆರೆದಿಡುತ್ತಾ ಸಾಗುತ್ತದೆ.
ಮೂರು ಗಂಟೆಗಳ ‘ಶಿಕಾರಿ’ ನಾಟಕ ಪ್ರೇಕ್ಷಕರಿಗೆ ಇಡೀ ಕಾರ್ಪೋರೆಟ್ ಜಗತ್ತನ್ನೇ ಪರಿಚಯಿಸಿದ್ದು ಅಚ್ಚರಿ. ನಾಗಪ್ಪ ಎಂಬ ಒಬ್ಬ ಸಾಮಾನ್ಯ ನೌಕರ, ಸ್ವ–ಸ್ವಾಮರ್ಥ್ಯದಿಂದ ಕಂಪನಿಯೊಂದರಲ್ಲೆ ಉನ್ನತ ಪದವಿ ಪಡೆಯುತ್ತಲೇ ಸಾಗುತ್ತಾನೆ. ನಾಗಪ್ಪನ ಬಾಲ್ಯ ಕರಾಳ ನೆನಪುಗಳ ಆಗರ. ಆ ನೆನಪನ್ನು ಆತ ಮರೆಯಲೆತ್ನಿಸಿದರೂ, ಅವನ ಉನ್ನತಿ ಸಹಿಸದ ಒಂದು ವರ್ಗ, ಅವನದ್ದೇ ಕಂಪನಿಯೊಳಗೆ ಹುಟ್ಟಿಕೊಳ್ಳುತ್ತದೆ. ವ್ಯವಸ್ಥಿತವಾಗಿ ಅವರು ಹೆಣೆದ ಪರಿಸ್ಥಿತಿಯ ಕೈಗೊಂಬೆಯಾಗುವಂತೆ ವ್ಯೂಹದೊಳಗೆ ನಾಗಪ್ಪ ಬಂಧಿಯಾಗುತ್ತಲೇ ಸಾಗುತ್ತಾನೆ.
ನಾಗಪ್ಪ ಬೆಳೆಯುತ್ತಾನೆ ನಿಜ. ಆದರೆ, ಆ ಅವಸರದಲ್ಲಿ ಆತ ವ್ಯಾವಹಾರಿಕವಾಗಿ ಸಂಪೂರ್ಣ ಸೋತಿರುತ್ತಾನೆ. ತನ್ನದೇ ಸಾಮರ್ಥ್ಯದ ಅನೇಕ ರಹಸ್ಯಗಳನ್ನೂ ತನ್ನ ಆಪ್ತರೆಂದು ನಂಬಿದವರಲ್ಲೆಲ್ಲಾ ಬಿಟ್ಟು ಕೊಡುತ್ತಾನೆ. ಅವನೊಳಗೆ ಅವನ ಅರಿವಿಗೆ ಬಾರದೆಯೂ ಮಾನವ ಸಹಜ ದೌರ್ಬಲ್ಯಗಳು, ಅದಕ್ಕಿಂಬು ನೀಡುವಂತೆ ಒದಗುವ ಕೆಲ ದುರ್ಬಲ ಕ್ಷಣಗಳು ಉರುಳಾಗುತ್ತವೆ. ಇನ್ನೇನು, ಔನ್ನತ್ಯದ ಶಿಖರದಲ್ಲಿ ನಾಗಪ್ಪನ ಪ್ರತಿಷ್ಠೆ ಆಗಬೇಕು ಎಂಬಷ್ಟರಲ್ಲಿ ಅವನೊಳಗಿದ್ದ ಎಲ್ಲಾ ಸಾಮರ್ಥ್ಯಗಳೂ ವಿರೋಧಿಗಳು ಉರುಳಿಸಿದ ದಾಳಕ್ಕೆ ಧೂಳೀಪಟವಾಗುತ್ತಾ, ಅವನ ಜನ್ಮ ಜಾಲಾಡುವಷ್ಟೂ ಕಠೋರವಾಗುತ್ತವೆ.
ನಾಗಪ್ಪನ ಜನನದ ಮೂಲ, ಸಮಾಜ ಒಪ್ಪಿರದ ಅವನ ಬಾಲ್ಯ, ನಿರ್ದಿಷ್ಟ ಜಾತಿಯ ಆವರಣ ಇಲ್ಲದ ಅವನ ಬದುಕು, ದುರ್ಬಲ ಕ್ಷಣದಲ್ಲಿನ ಅವನದೇ ಆದ ದಾಖಲಾಗಬಾರದೆಯೂ ದಾಖಲಾಗದ ಹೇಳಿಕೆಗಳು, ವಯೋಸಹಜ ಆಕರ್ಷಣೆಯಿಂದಾದ ಪ್ರೇಮ, ಪರಿಸ್ಥಿತಿ ವಿರೋಧವಾದಾಗ ಅದೂ ಮುಳ್ಳಾಗುವ ರೀತಿ... ಎಲ್ಲವೂ ಅವನನ್ನು ಬಂಧಿಸುತ್ತಲೇ ಸಾಗುತ್ತವೆ. ಎಲ್ಲವನ್ನೂ ಸತ್ಯವೇ ಎಂದು ಭಾವಿಸುವ ನಾಗಪ್ಪ, ಎಲ್ಲರಲ್ಲೂ ವಿಶ್ವಾಸವಿಡುತ್ತಾನೆ. ಆದರೆ, ಒಂದೊಂದಾಗಿ ವಿಶ್ವಾಸದ ಪರದೆ ಕಳಚಿದಾಗ ವಿಹ್ವಲನಾಗುತ್ತಾನೆ.
ನಮ್ಮ ಎಲ್ಲಾ ವ್ಯವಹಾರಗಳ ಅಡಿಗೆ, ಸಾಮಾಜಿಕ ನಡವಳಿಕೆಯ ಕೆಳಗೆ ಕೆಲಸ ಮಾಡುವ ಶಕ್ತಿ ಎಂಬುದಿದ್ದರೆ ಅದು ಕೇವಲ ‘ಸ್ವಾರ್ಥ’ ಎಂಬ ಸತ್ಯ ದರ್ಶನ ನಾಗಪ್ಪನಿಗೆ ಆಗುವಾಗ ಪರಿಸ್ಥಿತಿ ಕೈ ಮೀರಿರುತ್ತದೆ. ಕೊನೆಗೂ ಸತ್ಯ ಗೆಲ್ಲುತ್ತದಾ? ಎಂಬ ಆಶಾದಾಯಕ ವಾತಾವರಣ ನಿರ್ಮಾಣವಾಗುವಾಗ ನಾಗಪ್ಪನಿಗೆ ಆ ಗೆಲುವೂ ಬೇಡವಾಗಿರುತ್ತದೆ!
ಆಧುನಿಕ ಜಗತ್ತು ಸೃಷ್ಟಿಸುವ ಸಂಕೀರ್ಣ ಜಗತ್ತು ತಲ್ಲಣ ಹುಟ್ಟಿಸುವ ಗೊಂಡಾರಣ್ಯವಾದರೆ ಏನಾದೀತು ಎಂಬುದನ್ನು ಚಿತ್ರಿಸುವ ಕಾದಂಬರಿ ರಂಗರೂಪಕ್ಕೆ ಬರುವಾಗ ಗಟ್ಟಿತನ ಕಳೆದುಕೊಳ್ಳುವ ಅಪಾಯವಿದೆ. ಆದರೆ, ಇಲ್ಲಿ ಪ್ರತಿಯೊಂದೂ ಸಮರ್ಥವಾಗಿ ಪ್ರತಿಪಾದಿತವಾಗಿದೆ. ನಾಗಪ್ಪನ ಪಾತ್ರದ ಮೂಲಕ ಮನುಷ್ಯತ್ವದ ಅಂತಿಮ ಲಕ್ಷಣವೊಂದೇ ಅನ್ಯಾಯಕ್ಕೆ ಬಗ್ಗದೇ ಇರುವುದು. ಅದರ ವಿರುದ್ಧ ಹೋರಾಡುವುದು. ಸತ್ತರೂ ಅಡ್ಡಿ ಇಲ್ಲ, ಸೋಲೊಪ್ಪಲಾರೆ ಎಂಬ ಸ್ವಾಭಿಮಾನವೇ ಸ್ಥಾಯಿಯಾಗುವುದು ಮುಖ್ಯವೆನಿಸುತ್ತದೆ.
ರಂಗಾಯಣದ ಪ್ರತಿ ನಟನರು ಪ್ರಬುದ್ಧತೆ ಮೂಲಕ ಗೆಲ್ಲುತ್ತಾರೆ. ಕಾರ್ಪೋರೆಟ್ ಜಗತ್ತು ಇಂದು (ಹಿಂದಿನಿಂದಲೂ) ಹಲವಾರು ವಿಸ್ಮಯಗಳ ಸಾಗರದಂತಾಗಿದೆ. ಇಲ್ಲಿ ಜಾಣ್ಮೆ ಮತ್ತು ವ್ಯಾವಹಾರಿಕ ಜಾಣ್ಮೆಗಳೆರಡೂ ಸಮಾನವಾಗಿದ್ದರಷ್ಟೇ ಬದುಕಲು ಸಾಧ್ಯ. ರಂಗಭೂಮಿಯ ವಿಶೇಷತೆ ಎಂದರೆ, ಅದರಲ್ಲಿನ ಪ್ರಬುದ್ಧ ನಟರು ಕಾಲಕ್ಕೆ ತಕ್ಕಂತೆ, ಕಾಲ-ಲಿಂಗ-ಸ್ಥಿತ್ಯಂತರ ಬೇಧವಿಲ್ಲದೇ ಪಾತ್ರಗಳಲ್ಲಿ ಲೀನರಾಗುವ ಪರಿ. ಇತಿಹಾಸ, ಪೌರಾಣಿಕ, ಸಾಮಾಜಿಕ ಅಥವಾ ಇತ್ತೀಚೆಗೆ ಹೆಚ್ಚು ಜನಾಕರ್ಷಿಸುವ ನಗೆನಾಟಕಗಳು ಹೀಗೆ ಎಲ್ಲಾ ರೀತಿಯ ಕತೆಗಳಲ್ಲೂ ಪಾತ್ರವಾಗುವ ನಟರು, ‘ಶಿಕಾರಿ’ಯಂತಹ ನಾಟಕದ ಬೇರೆಯದೇ ಆದ ಲೋಕದಲ್ಲೂ ಎಲ್ಲೂ ಸೋಲದಿದ್ದುದು ಅಚ್ಚರಿ.
‘ಈ ದಿನವನ್ನು ಎಲ್ಲಾ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಭಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದು ಏನು ಪ್ರಯೋಜನ?’ ಎನ್ನುವ ನಿರಂತರವಾಗಿ ಮನುಷ್ಯನನ್ನು ಕಾಡುವ ಪ್ರಶ್ನೆಯೇ ಮತ್ತೆ ಮತ್ತೆ ಎದುರಾಗುವಂತೆ ಹೆಣೆದ ಕಾದಂಬರಿ ‘ಶಿಕಾರಿ’ ರಂಗದ ಮೇಲೂ ಇದೇ ಪ್ರಶ್ನೆ ಹುಟ್ಟಿಸುವಲ್ಲಿ ಯಶಸ್ವಿಯಾಯಿತು.
ಇಡೀ ನಾಟಕವನ್ನು ವ್ಯಾಪಿಸಿಕೊಂಡಿರುವ ‘ಸಾಕ್ಷಿ’ಯಾದ ನಂದಿನಿ ಕೆ.ಆರ್. ಮತ್ತು ನಾಗಪ್ಪನಾಗಿ ಹುಲುಗಪ್ಪ ಕಟ್ಟೀಮನಿ, ವಿಶಿಷ್ಟ ಪಾತ್ರವಾಗಿ ನಗೆಯ ಬುಗ್ಗೆ ಚಿಮ್ಮಿಸುತ್ತಲೇ ಕಾಣದ ಮುಖದ ಹಿಂದಿನ ಸತ್ಯದ ಶ್ರೀನಿವಾಸ ರಾವ್ ಪಾತ್ರದಲ್ಲಿ ಕೃಷ್ಣಕುಮಾರ್ ನಾರ್ಣಕಜೆ, ಕಾರ್ಪೋರೆಟ್ ಕಂಪನಿಯ ಗತ್ತು ಗೈರತ್ತನ್ನೇ ಮೈವೆತ್ತಂತೆ ನಟಿಸಿದ ಜಗದೀಶ್ ಮನವಾರ್ತೆ, ಫಿರೋಜ್ ಬಂದೂಕ್ ವಾಲಾನಾಗಿ, ಇಡೀ ನಾಟಕದ ಸೂತ್ರಧಾರನಾಗಿ ನಾಟಕ ಗೆಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಿದ ಪ್ರಶಾಂತ್ ಹಿರೇಮಠ್... ಹೀಗೆ ನಾಟಕಕ್ಕೆ ಜೀವಾಳವಾದ ಎಲ್ಲಾ ನಟರೂ ಅಭಿನಂದನಾರ್ಹರು.
ಹಿರಿಯ ನಟ ರಾಮು, ಕೃಷ್ಣ ಪ್ರಸಾದ್ ಎಂ.ಸಿ., ವಿನಾಯಕ ಭಟ್ ಹಾಸಣಗಿ, ಮಹಾದೇವ್, ಗೀತಾ ಮೊಂಟಡ್ಕ, ಶಶಿಕಲಾ ಎನ್., ಪ್ರಮೀಳಾ ಬೆಂಗ್ರೆ, ನೂರ್ ಅಹಮದ್ ಶೇಖ್, ವನಿತಾ ಎಸ್.ಎಸ್., ಲಕ್ಷ್ಮೀ ವಿ., ಹೊಯ್ಸಳ, ಪ್ರದೀಪ್ ಬಿ.ಎಂ., ಬೋಪಣ್ಣ ಹೀಗೆ ಎಲ್ಲ ಕಲಾವಿದರೂ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದರು. ನಾಟಕಕ್ಕೆ ಎಚ್.ಕೆ.ದ್ವಾರಕಾನಾಥ್ ರಂಗವಿನ್ಯಾಸವಿದ್ದು, ಪವನ್ ಕೆ.ಜೆ. ಅವರ ಸಂಗೀತ ಮತ್ತು ಮಹೇಶ್ ಕಲ್ಲತ್ತಿ ಅವರ ಬೆಳಕು ‘ಶಿಕಾರಿ’ಯ ಯಶಸ್ಸಿನ ಹಿಂದಿನ ಶಕ್ತಿಗಳು. ಸಂಕೀರ್ತಿ ಐಪಂಜಗುಳಿ ಅವರ ವಸ್ತ್ರ ವಿನ್ಯಾಸ ಗಮನ ಸೆಳೆಯಿತು
No comments:
Post a Comment