Saturday 17 March 2018

ಬಹುಮುಖಿ ನೃತ್ಯ ಗುರು-ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ

ಮೂರು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನ ಬರಹ- ವಿದುಷಿ ವಿದ್ಯಾಶ್ರೀ ರಾಧಾಕೃಷ್ಣರ ಬಗೆಗಿನ ಪರಿಚಯ ಲೇಖನ.... ಇಂದು ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ, ನನ್ನ ಬ್ಲಾಗ್ ಮೂಲಕ ಮತ್ತೊಮ್ಮೆ.... ತಮ್ಮ ಮುಂದೆ 

ನೃತ್ಯ ಅಥವಾ ಸಂಗೀತ  ಕಲಾವಿದರಿಗೆ ಯಾವುದಾದರೂ ಒಂದು ಕಲೆಯಲ್ಲಿ ಮಾತ್ರ ಪರಿಣತಿ  ಇರುತ್ತದೆ ಎಂಬ ಮಾತಿಗೆ ಅಪವಾದವಾಗಿ ನಮ್ಮ ಜಿಲ್ಲೆಯಲ್ಲಿ  ಹಲವಾರು ಕಲಾವಿದರು ಮಹತ್ಸಾಧನೆ ಮಾಡಿದ್ದಾರೆ.  ಅದರಲ್ಲೂ ಕಲಿಕೆ ನಿರಂತರ ಎಂಬಂತೆ ಪ್ರತೀ ಕ್ಷಣವೂ ಹೊಸತನದ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಪ್ರಯೋಗ ಶೀಲರಾಗಿರುವ  ಕಲಾವಿದರು ವಿರಳ ಎಂದೇ ಹೇಳಬಹುದು. ಇಂತಹ ವಿರಳರಲ್ಲಿ ಸರಳರಾಗಿ, ನಾಟ್ಯ-ಸಂಗೀತ-ಭಾಷಣ-ಸಾಹಿತ್ಯ...ಹೀಗೆ  ಅನೇಕ ಕ್ಷೇತ್ರಗಳಲ್ಲಿ ಪರಿಪೂರ್ಣತೆ ಸಾಧಿಸಿ, ರಾಜ್ಯದ ಅಗ್ರಗಣ್ಯ ಕಲಾವಿದೆಯರಲ್ಲಿ ಗುರುತಿಸಿಕೊಳ್ಳುತ್ತಿರುವವರು ಗಾನ ನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರು ಶ್ರೀಮತಿ ಜಯಲಕ್ಷ್ಮೀ ಹಾಗೂ   ಶ್ರೀ ಪದ್ಮನಾಭ ಭಟ್ ಪುತ್ರಿಯಾಗಿ    ಪುತ್ತೂರಿನಲ್ಲಿ ಜನಿಸಿ,  ಸುಳ್ಯದಲ್ಲಿ ವಿದ್ಯಾಭ್ಯಾಸ  ಮುಗಿಸಿ, ಪ್ರಸ್ತುತ ಮಂಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ನಾಡಿನಾದ್ಯಂತ ತಮ್ಮ ಕಲಾ ಸೇವೆ ಮುಂದುವರಿಸಿದ್ದಾರೆ.

ನೃತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ  ಎರಡು ದಶಕಗಳನ್ನು ಪೂರೈಸಿರುವ, ’ಗಾನ ನೃತ್ಯ ಅಕಾಡೆಮಿ’ಯ  ನಿರ್ದೇಶಕಿಯಾಗಿ, ಸುಳ್ಯ ಹಾಗೂ ಮಂಗಳೂರಿನ  ಒಟ್ಟೂ ನಾಲ್ಕು ಶಾಖೆಗಳ  ಮೂಲಕ  ಹಲವಾರು ವಿದ್ಯಾರ್ಥಿಗಳನ್ನು  ಈ ಕ್ಷೇತ್ರಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದು. ತಾಯಿಯೇ ಮೊದಲ ಗುರು ಎಂಬಂತೆ ತಾಯಿ ಜಯಲಕ್ಷ್ಮಿಯವರಲ್ಲಿ ತನ್ನ ಐದನೆಯ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಆರಂಭಿಸಿದ ಇವರು ಹದಿನಾರನೆಯ ವಯಸ್ಸಿನಲ್ಲಿಯೇ ನೃತ್ಯ ತರಬೇತಿ ಕೇಂದ್ರ  ಸ್ಥಾಪಿಸಿದವರು. ಶ್ರೀಮತಿ ನಳಿನಿ ಬೈಪಡಿತ್ತಾಯ, ಡಾ.ಸೀತಾ ಕೋಟೆ ಹಾಗೂ ಶ್ರೀ ಮುರಳೀಧರ ರಾವ್ ಅವರಲ್ಲಿ ನೃತ್ಯಾಭ್ಯಾಸ ಮಾಡಿ, ಕಲಾ ಕ್ಷೇತ್ರ ಶೈಲಿಯ ಉನ್ನತ ವ್ಯಾಸಂಗವನ್ನು ಚೆನ್ನೈಯ ಪದ್ಮಶ್ರೀ ಕಲೈಮಾಮಣಿ ಅಡಯಾರ್ ಕೆ  ಲಕ್ಷ್ಮಣ್ ಅವರಲ್ಲಿ ನಡೆಸಿದವರು. ನೃತ್ಯದೊಂದಿಗೆ ಸಂಗೀತವನ್ನೂ ದಿವಂಗತ ಶ್ರೀ ಗೋಪಾಲ ಕೃಷ್ಣ ಮಜಿಗುಂಡಿಯವರಲ್ಲಿ ಆರಂಭಿಸಿ, ಶ್ರೀಮತಿ ಸತ್ಯಭಾಮಾ ಬಾಳಿಲ, ಶ್ರೀ ಶ್ಯಾಂ ಭಟ್ ಉಪ್ಪಂಗಳ, ದಿ. ಶ್ರೀನಾಥ್ ಮರಾಠೆಯವರಲ್ಲಿ ಅಭ್ಯಾಸ  ಮಾಡಿದ್ದಾರೆ. ನಿರಂತರ ಕಲಿಕೆಯ ತುಡಿತ ಹೊಂದಿರುವ ಇವರ ಪ್ರತಿಭೆಯನ್ನು ಕಲಾ ಜಗತ್ತು ಪ್ರೌಢಿಮೆಯ ಶ್ರೇಯಸ್ಸಿನೊಂದಿಗೆ ಗುರುತಿಸುತ್ತಿದ್ದರೂ, ತಾನಿನ್ನೂ ವಿದ್ಯಾರ್ಥಿನಿಯೇ ಎಂಬ ವಿನಮೃತೆಯೊಡನೆ, ಗುರು ಶ್ರೀಮತಿ ಬ್ರಘಾ ಬೆಸೆಲ್ ಇವರಲ್ಲಿ ಅಭಿನಯ ತರಬೇತಿಯನ್ನೂ ಪಡೆದು ಪ್ರಸ್ತುತ   ದೆಹಲಿಯ ಶ್ರೀಮತಿ ರಮಾವೈದ್ಯನಾಥನ್ ಅವರಲ್ಲಿ ನೃತ್ಯ  ಹಾಗೂ ಉಡುಪಿಯ ಗುರುಶ್ರೀ ಮಧೂರು ಬಾಲಸುಬ್ರಹ್ಮಣ್ಯ ಅವರಲ್ಲಿ ಸಂಗೀತವನ್ನು ಮುಂದುವರಿಸಿದ್ದಾರೆ. 

ಸಾಹಿತ್ಯದಲ್ಲಿ ಎಂಎ ಪದವೀಧರೆಯಾಗಿರುವ ಇವರು  ಪ್ರಸ್ತುತ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಮ್ಯೂಸಿಕ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇವರ  ಮೇರು ಶೈಕ್ಷಣಿಕ ಆರ್ಹತೆಗಳಿಗನುಗುಣವಾಗಿ ಇವರನ್ನರಸಿ ಬಂದ ಅನೇಕ ಉದ್ಯೋಗಗಳನ್ನು ನಿರಾಕರಿಸಿ, ಕಲೆಯ ಮೇಲಿನ ತಮ್ಮ ಅಪರಿಮಿತ ಪ್ರೀತಿಯಿಂದಾಗಿ, ಕಲಾ ಜಗತ್ತಿಗೇ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಮೂಲಕ, ನಮ್ಮ ನಾಡಿನ ಸಾಂಸ್ಕೃತಿಕ ರಂಗ ಶ್ರೀಮಂತಿಕೆಗೆ ಕಾರಣರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. 

ವಿದ್ಯಾಶ್ರೀ  ಅವರು ಮಿತಭಾಷಿ. ಆದರೆ ಸದಾ ಕಾಲ ಏನಾದರೂ ಒಂದು ಹೊಸತನದ ಹುಡುಕಾಟದ ತುಡಿತದಲ್ಲಿ  ಸದಾ ಸಕ್ರಿಯರಾಗಿರುವವರು. ಪ್ರತೀ ವರ್ಷ ಸುಳ್ಯ ಹಾಗೂ ಮಂಗಳೂರಿನಲ್ಲಿ ತನ್ನ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ  ಕಲೆಯ ಅನಾವರಣವನ್ನು  ’ಆರೋಹಣ’ ಎಂಬ ಹೆಸರಿನಲ್ಲಿ ಆಯೋಜಿಸುವ ಇವರು,   ಪ್ರತೀ ಬಾರಿಯೂ ಕಲಾಸಕ್ತರನ್ನು ನಿರೀಕ್ಷೆಯಲ್ಲಿರುವಂತೆ ಆಕರ್ಷಿಸುತ್ತಾರೆ!. ಭರತನಾಟ್ಯ ಅಥವಾ ತಾವು ಅಳವಡಿಸಿಕೊಳ್ಳುವ ಯಾವುದೇ ನೃತ್ಯ ಪ್ರಕಾರದಲ್ಲಿ, ಯಾವುದೇ ಹೆಜ್ಜೆ,   ನಡೆ, ಭಂಗಿ, ಎಲ್ಲಿಯೂ ಪುನರಾವರ್ತನೆ ಆಗದಂತೆ, ವಿಶಿಷ್ಠ ಹಾಗೂ ಆಕರ್ಷಕವಾಗಿರುವಂತೆ ನೃತ್ಯ ಸಂಯೋಜನೆ ಮಾಡುವ ಕಲೆ ಇವರಿಗೆ ಸಿದ್ದಿಸಿದೆ.

ಭರತನಾಟ್ಯ ಕಲೆ ಮಂಗಳೂರಿಗೆ ಹೊಸತೇನೂ ಅಲ್ಲ. ಆದರೆ ಭುವನೇಶ್ವರದ ಗೀತಾಂಜಲಿ ಆಚಾರ್ಯ ಮತ್ತು ಮಧುಲಿತಾ ಮೊಹಾಪಾತ್ರ ಅವರಲ್ಲಿ,  ಒಡಿಸ್ಸಿ ಕಲೆಯನ್ನು ಸ್ವತ: ಅಭ್ಯಸಿಸಿ, ಮಂಗಳೂರಿನಲ್ಲಿ ಒಡಿಸ್ಸಿ  ನೃತ್ಯ ತಂಡ ನಿರ್ಮಿಸಿದ ಮೊದಲ ಕಲಾವಿದೆ.  ಕಥಕ್ ನೃತ್ಯವನ್ನೂ ಬಹುವಾಗಿ ಮೆಚ್ಚಿಕೊಳ್ಳುವ ಇವರು, ಮಂಗಳೂರಿನ ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕಥಕ್ ನೃತ್ಯ ಪಟು ಗುರು ಸ್ವೀಕೃತ್ ಇವರಿಂದ ನಿರಂತರವಾಗಿ ಕಥಕ್ ಕಾರ್ಯಾಗಾರ ನಡೆಸುತ್ತಾ, ತಮ್ಮದೇ ಸಂಸ್ಥೆಯಲ್ಲಿ ಅನೇಕ ಕಥಕ್ ನೃತ್ಯಗಳನ್ನೂ ಪ್ರದರ್ಶಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. 

ನಿರಂತರ ಕಲಿಕೆಯ ಆಸಕ್ತಿ ಇವರನ್ನು ಪರಿಪೂರ್ಣ ಕಲಾವಿದೆಯನ್ನಾಗಿ ರೂಪಿಸುತ್ತಾ ಬಂದಿದೆ. ದೇಶದ ಯಾವುದೇ ಭಾಗಗಳಲ್ಲಿ, ಇಂದಿಗೂ  ಯಾವುದೇ ರೀತಿಯ ನೃತ್ಯ-ಸಂಗೀತ ಕಾರ್ಯಾಗಾರಗಳಾದಲ್ಲಿ ನಿಯಮಿತವಾಗಿ ಭಾಗವಹಿಸುತ್ತಾ, ತಮ್ಮೊಳಗಿನ ಕಲಾ ಹಸಿವಿನ ನೀಗುವಿಕೆಯಲ್ಲಿ ನಿರಂತರ ನಿರತರಾಗಿರುತ್ತಾರೆ.ಪದ್ಮಭೂಷಣ ಡಾ.ಪದ್ಮಾಸುಬ್ರಮಣ್ಯಮ್ ಅವರ ನಾಟ್ಯಶಾಸ್ತ್ರ ಕರಣ ಕಾರ್ಯಾಗಾರದಲ್ಲಿ ಸತತ ಎರಡು ಬಾರಿ ಹಾಗೂ ಚೆನ್ನೈನ ಕಲಾಕ್ಷೇತ್ರ ನಡೆಸಿದ ಹತ್ತುದಿನ ವಿಂಟರ್ ವರ್ಕ್‌ಶಾಪ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿದ ಅಧ್ಯಯನ ಶೀಲತೆ ಇವರದ್ದು. 

ಇದರೊಂದಿಗೆ ಹಲವು ಪ್ರಥಮಗಳ ದಾಖಲೆಯುನ್ನು ಬರೆದ ಕೀರ್ತಿಯೂ ವಿದ್ಯಾಶ್ರೀ ಅವರಿಗೆ ಸಲ್ಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಭರತನಾಟ್ಯದ ಮೂಲ ಅಡವುಗಳನ್ನು ಹೊಂದಿರುವ ಡಿವಿಡಿ ’ನೃತ್ಯಾಕ್ಷರಂ’ ನ್ನು ತಾವೇ ನಿರ್ದೇಶಿಸಿ, ತಯಾರಿಸುವುದರ ಮೂಲಕ ಭರತನಾಟ್ಯ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಇನ್ನೂ ಅಂತರಜಾಲ ತನ್ನ ವಿಸ್ತರಣೆಯ ಆರಂಭದಲ್ಲಿರುವಾಗಲೇ,   ತಮ್ಮ ನೃತ್ಯ ಸಂಸ್ಥೆಯ ವೆಬ್ ಸೈಟ್ ನ್ನು ಆರಂಭಿಸಿದ್ದು, ಅದು ಈ ಕ್ಷೇತ್ರದ  ಸಂಸ್ಥೆಯೊಂದು ಜಿಲ್ಲೆಯಲ್ಲಿ ಆರಂಭಿಸಿದ ಮೊದಲ ಹೆಜ್ಜೆಯಾಗಿ ಗುರುತಿಸಲ್ಪಟ್ಟಿದೆ. 
ತನ್ನ ಶಿಷ್ಯ ವೃಂದದ ಯಾವುದೇ ವಿದ್ಯಾರ್ಥಿ ಪರಿಪೂರ್ಣ ಕಲಾವಿದೆಯಾಗದ ಹೊರತು, ಆಡಂಬರಕ್ಕಾಗಿ ರಂಗಪ್ರವೇಶದ ತರಾತುರಿಯನ್ನು ಬಯಸದ ಕಲಾವಿದೆಯರಲ್ಲಿ ಇವರು ಪೋಷಕರ ಮನ ಗೆಲ್ಲುತ್ತಾರೆ. ತಾಳ್ಮೆ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಹಾಗೂ ಪಾಲನೆ, ಅಕ್ಕರೆಯಿಂದ ಶಿಷ್ಯರೊಂದಿಗೆ ಬೆರೆವ ಇವರ ಸ್ನೇಹ ಶೀಲ ಸ್ವಭಾವ ಇವರ ವಿದ್ಯಾಸಂಸ್ಥೆಯ ಶ್ರೇಯಸ್ಸಿಗೆ ಕಾರಣವಾಗಿದ್ದರೆ, ಈಗಾಗಲೇ ಇವರ ಸಂಸ್ಥೆ ಇಪ್ಪತ್ತು ಸಂವತ್ಸರಗಳನ್ನು ಮುಗಿಸಿ, ಸಾವಿರಾರು ಕಲಾವಿದರನ್ನು ಕಲಾ ಜಗತ್ತಿಗೆ ನೀಡಿದೆ.  ಜಿಲ್ಲೆಯ ಅತೀ ಕಿರಿಯ ನೃತ್ಯ ನಿರ್ದೇಶಕಿ ಎಂಬ  ಹಿರಿಮೆಯಲ್ಲಿಯೇ ಇದುವರೆಗೆ  ಒಂಭತ್ತು ವಿದ್ಯಾರ್ಥಿನಿಯರ ಯಶಸ್ವೀ ರಂಗ ಪ್ರವೇಶ ಮಾಡಿಸಿದ್ದಾರೆ. ಏಳು ವಿದ್ಯಾರ್ಥಿನಿಯರು ದೂರದರ್ಶನದ ಗ್ರೇಡೆಡ್ ಕಲಾವಿದೆಯರಾಗಿ, ಹತ್ತು ವಿದ್ಯಾರ್ಥಿನಿಯರು   ವಿದ್ವತ್ ಮುಗಿಸಿ ವಿದುಷಿಯರಾಗಿದ್ದೇ ಅಲ್ಲದೇ, ನಾಲ್ಕು ಜನ ಪೂರ್ಣಾವಧಿಯ  ನೃತ್ಯ ಶಿಕ್ಷಕಿಯರಾಗಿ ಕಲಾ ಕ್ಷೇತ್ರದ  ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಪೂರ್ಣ ಕಲಾವಿದೆಯರ ಹೊಸ ತಂಡ, ’ಯಜ್ಞ’ವನ್ನು ನೃತ್ಯ ಲೋಕಕ್ಕೆ ಪರಿಚಯಿಸುವ ಪ್ರಯೋಗ ಶೀಲತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಂಗ ನಿರ್ವಹಣೆ ಮತ್ತು ಪ್ರದರ್ಶನಗಳಲ್ಲೂ ಇವರು ಹೊಸತನದ ಹರಿಕಾರ. ಈವರೆಗೆ ೭೦೦ಕ್ಕೂ ಮಿಕ್ಕಿ ಏಕ ವ್ಯಕ್ತಿ ಹಾಗೂ ಸಮೂಹ ನೃತ್ಯಗಳ ಪ್ರಸ್ತುತಿಯನ್ನು ಮಾಡಿದ್ದಾರೆ.      ’ಸತ್ಯಮೇವ ಜಯತೇ’, ’ಕನ್ನಡ ಸಾಹಿತ್ಯ-ನೃತ್ಯ ವೈಭವ’,   ’ಕೃಷ್ಣ ಲೀಲೆ’, ’ಋತು ಶ್ರಂಗಾರ’, ’ವಿರಾಟಪರ್ವ’ ’ಜ್ವಾಲಾಮುಖಿ ಅಂಬೆ’, ’ದಶಾವತಾರಂ’, ’ನವರಸ ರಾಮಾಯಣ’, ’ಸಮನ್ವಯ’.... ಹೀಗೆ ಅನೇಕ ವಿನೂತನ ಹಾಗೂ ಅಪರೂಪದ  ಪ್ರಸ್ತುತಿಗಳು ಇವರ ನಿರ್ದೇಶನದಲ್ಲಿ ಪ್ರಸ್ತುತಿಗೊಂಡು ಅಪಾರ  ಪ್ರೇಕ್ಷಕರ ಮನಸೂರೆಗೊಂಡಿದ್ದು, ಈಗಾಗಲೇ ನೂರಾರು ಪ್ರದರ್ಶನಗಳನ್ನು ಕಂಡಿವೆ.   ಮಂಗಳೂರಿಗೆ ಮೊದಲ ಬಾರಿಗೆ ಮತ್ತು ಏಕೈಕ ತಂಡವಾಗಿ ಒಡಿಸ್ಸಿ ಹಾಗೂ ಕಥಕ್ ನೃತ್ಯಪ್ರದರ್ಶನಗಳನ್ನು ನೀಡುತ್ತಿರುವ ಏಕೈಕ ಕಲಾವಿದೆ ಯೂ ಆಗಿ ಲಘು  ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನೂ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.  

1 comment:

  1. ಕಲಾವಿದರ ಮನಸ್ಸು ಕಲಾವಿದರಿಗೆ ಅರ್ಥವಾಗುತ್ತೆ ಎನ್ನುವಂತೆ.. ನೃತ್ಯ ಪ್ರತಿಭೆಯನ್ನು ಪರಿಚಯಿಸಿರುವ ಪರಿ ಮತ್ತು ಅದಕ್ಕೆ ಬೇಕಾದ ಪೂರಕ ಮಾತುಗಳು ಸುಂದರವಾಗಿ ಮೂಡಿ ಬಂದಿದೆ.. .
    ಜನುಮದಿನಕ್ಕೆ ಸಕಾಲಿಕ ಕೊಡುಗೆಯಾಗಿ ಹಂಚಿಕೊಂಡಿರುವ ಈ ಲೇಖನ ಸುಂದರ

    ReplyDelete