ಫೆಬ್ರವರಿ 11,2018 ರಿಂದ ಫೆಬ್ರವರಿ 17,2018 ರವರೆಗೆ ಉಡುಪಿಯಲ್ಲಿ ನಡೆದ ಸುಮನಸಾ ರಂಗಹಬ್ಬ-೬ರ ನಾಟಕಗಳ ಕಿರು ಅವಲೋಕನ- 30.03.2018 ರ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹದ ಪೂರ್ಣ ರೂಪ
ಪ್ರಜಾವಾಣಿ ೩೦.೦೩.೨೦೧೮ |
ಸಾಂಸ್ಕೃತಿಕವಾಗಿ ಶ್ರೀಮಂತ ನಗರ ಎಂದೇ ಪರಿಗಣಿಸಲ್ಪಡುವ ಪೊಡವಿಗೊಡೆಯನ ನಾಡು ಉಡುಪಿಯ ರಂಗಭೂಮಿಗೆ ಹದಿನಾರರ ಹರೆಯದ ಸುಮನಸಾ ಕೊಡವೂರು-ಉಡುಪಿಯ ಕೊಡುಗೆ ಮಹತ್ವದ್ದು. ಸಾಂಸ್ಕೃತಿಕ, ಸೇವಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆಗೆ, ತನ್ನ ಹತ್ತನೆಯ ವರ್ಷದಲ್ಲಿ ರಂಗ ಹಬ್ಬಕ್ಕಿದು ಆರರ ಹರ್ಷ. ಏಳು ದಿನಗಳ ಈ ರಂಗ ಹಬ್ಬದಲ್ಲಿ ಸುಮನಸಾದ ಒಂದು ನಾಟಕ, ಯಕ್ಷಗಾನ ಹಾಗೂ ಏಕವ್ಯಕ್ತಿ ಅಭಿನಯಗಳನ್ನೂ ಒಳಗೊಂಡು ಒಂದಕ್ಕಿಂತ ಒಂದು ಭಿನ್ನವಾದ ಎಂಟು ಪ್ರಸ್ತುತಿಯನ್ನು ನೀಡಿದ್ದು, ಕಲಾಸಕ್ತರ ಗಮನ ಸೆಳೆದುವು.
ಥ್ರೀ ರೋಸಸ್ (ತಕ್ಷ ಥಯೇಟ್ರಿಕ್ಸ್, ಬೆಂಗಳೂರು ಪೃಸ್ತುತಿ)
ಉದ್ಘಾಟನಾ ದಿನ ಪ್ರದರ್ಶಿತವಾದ ನಾಟಕ ಥ್ರೀ ರೋಸಸ್. ತೀರಾ ಸಾಮಾನ್ಯವಾದ ಕಥೆಯೊಂದಕ್ಕೆ ರಂಗದ ಮೇಲೆ ಅಸಾಧಾರಣತೆಯ ರೂಪು ಕೊಟ್ಟು ರಂಗಾಸಕ್ತರನ್ನು ಸೆಳೆದ ಈ ನಾಟಕ, ಮೂವರು ಹೆಣ್ಣುಗಳ ನಡುವಿನ ತಾಕಲಾಟದಿಂದ ತಿಣುಕಾಡುವ ಪ್ರೇಮಿಯೊಬ್ಬನ ಪರಿಸ್ಥಿತಿಯನ್ನು ಪ್ರತಿಬಿಂಬಿಸಿತ್ತು.
ಸ್ನೇಹಿತನೋರ್ವನನ್ನು ಅವನ ಕೋರಿಕೆಯ ಮೇಲೆ ಪ್ರೇಯಸಿಯಿಂದ ಬಿಡುಗಡೆ ಮಾಡಿಸಲು ಹೋಗುವ ಕಥಾ ನಾಯಕ, ತಾನೇ ಆಕೆಯೊಂದಿಗೆ ಏಕಮುಖ ಪ್ರೀತಿಗೆ ಸಿಲುಕುವುದು, ಅವನಿಷ್ಟದ ವಿರುದ್ಧವಾಗಿ ಅವನ ಕಛೇರಿಯ ಮತ್ತೋರ್ವ ಯುವತಿ ತನ್ನ ಪ್ರೀತಿಯಲ್ಲಿ ನಾಯಕನನ್ನು ಬೀಳಿಸಿಕೊಳ್ಳಲು ಯತ್ನಿಸುವುದು, ಹೊಸದಾಗಿ ಕಛೇರಿಗೆ ಬಂದ ಮತ್ತೋರ್ವ ಮುಗ್ಧೆಯನ್ನು ಕಥಾನಾಯಕ ಪ್ರೀತಿಸುವುದು.....ಈ ಎಲ್ಲಾ ಗೊಂದಲಗಳ ನಡುವೆ ಕಥಾ ನಾಯಕ ತನ್ನ ಮನದಿಂಗಿತವನ್ನು ತಿಳಿಸುವಲ್ಲಿ ಮೂವರೊಂದಿಗೂ ವಿಳಂಬ ಮಾಡುವ ಪರಿಣಾಮ, ಕೊನೆಗೆ ಯಾರೂ ಇವನ ಪ್ರೀತಿಯನ್ನು ಅರಿತುಕೊಳ್ಳದೇ ಹೋಗುವುದು ಇದು ಕಥೆಯ ತಿರುಳಾದರೆ, ಹಾಸ್ಯಮಯ ಸನ್ನಿವೇಶಗಳು, ನಟರ ಪ್ರಬುದ್ಧ ಅಭಿನಯ ಉತ್ತಮ ಪೃಸ್ತುತಿಯ ಸಾಲಿನಲ್ಲಿ ನಾಟಕವನ್ನು ನಿಲ್ಲಿಸಿದರೂ, ಧ್ವನಿಮುದ್ರಿತ ಸಂಗೀತದ ಅನಿಯಂತ್ರಿತ ನಿರ್ವಹಣೆ ಪ್ರೇಕ್ಷಕರಿಗೆ ಕಿರಿ ಕಿರಿ ಉಂಟು ಮಾಡಿ ನಾಟಕದ ನೈಜ ಪ್ರದರ್ಶನ ಕಳೆಗುಂದಿತು
ಶಿಕಾರಿ (ರಂಗಾಯಣ, ಮೈಸೂರು ಪೃಸ್ತುತಿ)
ಯಶವಂತ ಚಿತ್ತಾಲರ ಜನಪ್ರಿಯ ಕಾದಂಬರಿಗಳಲ್ಲೊಂದಾದ ’ಶಿಕಾರಿ’ಯನ್ನು, ರಂಗಕ್ಕಳವಡಿಸುವ ಸಾಹಸದಲ್ಲಿ ನಿರ್ದೇಶಕ ಪ್ರಕಾಶ್ ಬೆಳವಾಡಿಯವರು ಗೆದ್ದಿದ್ದಾರೆ. ಉಡುಪಿಯ ರಂಗಭೂಮಿಯಲ್ಲಿ ಈ ಪ್ರದರ್ಶನವೇ ಒಂದು ದಾಖಲೆಯಾಗಿ ಜನ ಮಾನಸದಲ್ಲಿ ಉಳಿಯುವ ಮಟ್ಟದ ಪ್ರದರ್ಶನವಾಗಿ ಶಿಕಾರಿ ಮೂಡಿಬಂತು.
ಶಿಕಾರಿ |
ಕಾರ್ಪೊರೇಟ್ ಜಗತ್ತಿನ ಅನೇಕ ಒಳ ತಿರುಳುಗಳನ್ನು ಮತ್ತು ಅದರಲ್ಲಿರುವ ಸಮರ್ಥ ಉದ್ಯೋಗಿಯೊಬ್ಬ ತನ್ನ ಸಾಮರ್ಥ್ಯದಿಂದ ಹಂತ ಹಂತವಾಗಿ ವೃತ್ತಿಯಲ್ಲಿ ಔನ್ನತ್ಯ ಸಾಧಿಸುತ್ತಾ, ವ್ಯಾವಹಾರಿಕವಾದ ಅವನ ಕನಿಷ್ಠ ಜ್ಞಾನ ಎಂತ ಬೆಲೆ ತೆರುವಂತೆ ಮಾಡಬಲ್ಲುದು ಎಂಬುದನ್ನು ಕತೆ ಎಳೆ ಎಳೆಯಾಗಿ ತೆರೆದಿಡುತ್ತಾ ಸಾಗುತ್ತದೆ.
ಮೂರುಘಂಟೆಗಳ ಅವಧಿಯ ನಾಟಕದ ಮೂಲಕ ಇಡೀ ಕಾರ್ಪೊರೇಟ್ ವಲಯವನ್ನೇ ಸುತ್ತಿಸಿದ್ದು ಅಚ್ಚರಿ. ಓರ್ವ ಸಾಮಾನ್ಯ ನೌಕರ, ತನ್ನ ಸ್ವ ಸ್ವಾಮರ್ಥ್ಯದಿಂದ ಕಂಪೆನಿಯೊಂದರಲ್ಲೆ ಉನ್ನತ ಪದವಿ ಪಡೆಯುತ್ತಲೇ ಸಾಗುತ್ತಾನೆ. ಅವನ ಬಾಲ್ಯ ಕರಾಳ ನೆನಪುಗಳ ಆಗರ. ಆ ನೆನಪನ್ನು ಆತ ಮರೆಯಲೆತ್ನಿಸಿದರೂ, ಅವನ ಉನ್ನತಿ ಸಹಿಸದ ಒಂದು ವರ್ಗ, ಅವನದ್ದೇ ಕಂಪೆನಿಯೊಳಗೆ ಹುಟ್ಟಿಕೊಳ್ಳುತ್ತದೆ. ವ್ಯವಸ್ಥಿತವಾಗಿ ಅವರು ಹೆಣೆದ ಪರಿಸ್ಥಿತಿಯ ಕೈಗೊಂಬೆಯಾಗುವಂತೆ ವ್ಯೂಹದೊಳಗೆ ಆತ ಬಂಧಿಯಾಗುತ್ತಲೇ ಸಾಗುತ್ತಾನೆ.
ಕಾರ್ಪೊರೇಟ್ ಜಗತ್ತು ಹಲವಾರು ವಿಸ್ಮಯಗಳ ಸಾಗರದಂತೆ. ಇಲ್ಲಿ ಜಾಣ್ಮೆ ಮತ್ತು ವ್ಯವಾಹಾರಿಕ ಜಾಣ್ಮೆಗಳೆರಡೂ ಸಮಾನವಾಗಿದ್ದರಷ್ಟೇ ಬದುಕಲು ಸಾಧ್ಯ. ’ಶಿಕಾರಿ’ ಯ ವಿಶೇಷತೆ ಎಂದರೆ, ಅದರಲ್ಲಿನ ಪ್ರಬುದ್ಧ ನಟರು ಕಾಲಕ್ಕೆ ತಕ್ಕಂತೆ, ಕಾಲ-ಲಿಂಗ-ಸ್ಥಿತ್ಯಂತರ ಬೇಧವಿಲ್ಲದೇ ಪಾತ್ರಗಳಲ್ಲಿ ಲೀನರಾಗುವ ಪರಿ.’ಈ ದಿನವನ್ನು ಎಲ್ಲಾ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಭಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದು ಏನು ಪ್ರಯೋಜನ?’ ಎನ್ನುವ ನಿರಂತರವಾಗಿ ಮನುಷ್ಯನನ್ನು ಕಾಡುವ ಪ್ರಶ್ನೆಯೇ ಮತ್ತೆ ಮತ್ತೆ ಎದುರಾಗುವಂತೆ ಹೆಣೆದ ಕಾದಂಬರಿ ’ಶಿಕಾರಿ’-ರಂಗದ ಮೇಲೂ ಇದೇ ಪ್ರಶ್ನೆ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಕತ್ತಲೆ ಬೆಳಕು(ರಂಗಾಯಣ, ಮೈಸೂರು ಪೃಸ್ತುತಿ)
ಶ್ರೀ ರಂಗರ ವಿಶಿಷ್ಠ ಕೃತಿಗಳಲ್ಲಿ ಕತ್ತಲೆ-ಬೆಳಕು ಒಂದು. ಇದನ್ನು ಮೂರನೆಯ ದಿನ ರಂಗಾಯಣದ ಕಲಾವಿದರು ಪ್ರಸ್ತುತ ಪಡಿಸುವ ಮೂಲಕ, ’ಶಿಕಾರಿ’ಗಿಂತ ಸಂಪೂರ್ಣ ಭಿನ್ನವಾಗಿದ್ದ (ಕತ್ತಲೆ-ಬೆಳಕಿನ ಹಾಗೇ!) ನಾಟಕದ ಆಸ್ವಾದನೆಗೆ ನೆರೆದ ಪ್ರೇಕ್ಷಕರನ್ನು ಕೊಂಡೊಯ್ದರು.
ನಾಟಕ-ಜೀವನ-ವಸ್ತು-ಶೈಲಿ ಇವುಗಳ ನಡುವೆ ನಮ್ಮ ಪ್ರೇಕ್ಷಕ- ನಿರ್ದೇಶಕಇವರ ಪರಸ್ಪರ ಸಂವಹನ ಈ ನಾಟಕದ ವಿಶೇಷತೆ. ಕೆಲವೊಂದು ಸಾರ್ವಕಾಲಿಕ ಪ್ರಶ್ನೆಗಳಿಗೆ ಉತ್ತರ ಸಿಗದೆ ಕತ್ತಲಲ್ಲಿ ತೊಳಲಾಡುವ, ಮೆದುಳನ್ನು ಚಿಂತನೆಗೆ ಹಚ್ಚಿ ಅವುಗಳಿಗೆ ಸಮಾಧಾನ ಹುಡುಕುತ್ತಾ ಬೆಳಕನ್ನು ಅರಸುವ ಪ್ರಯತ್ನದ ನಡುವೆ ನವಿರಾದ ಹಾಸ್ಯ ಹಾಗೂ ಮೊನಚಾದ ಮಾತುಗಳು ನಾಟಕದ ಮೆರುಗನ್ನು ಹೆಚ್ಚಿಸುತ್ತವೆ. ರಂಗದ ಮೇಲೆ ಬಂದ ಪಾತ್ರಗಳೆಲ್ಲವೂ ಲವಲವಿಕೆಯಿಂದತಮ್ಮಕಾರ್ಯ ನಿರ್ವಹಿಸಿ ಪ್ರಖ್ಯಾತರಂಗನಿರ್ದೇಶಕ- ನಾಟಕಕಾರ-ಸಂಗೀತಜ್ಞ ಬಿ.ವಿಕಾರಂತರ ನೆನಪನ್ನು ಮಾಡುತ್ತವೆ. ಅಂದಿನ ಕಾಲಕ್ಕೆ ಅನ್ವಯವಾಗುವ ಶ್ರೀರಂಗರ ಟೀಕೆ-ಟಿಪ್ಪಣಿಗಳು ಇಂದಿಗೂ ಪ್ರಸ್ತುತವಾಗಿಕತ್ತಲೆ-ಬೆಳಕು ಪ್ರೇಕ್ಷಕರ ಮನದಂಗಳದಲ್ಲಿ ಚಿರಕಾಲ ಇರುವಂತೆ ಮಾಡುತ್ತವೆ. ಬೆಳಕು ಹಾಗೂ ಸಂಗೀತ ನಾಟಕದಧನಾತ್ಮಕ ಅಂಶಗಳು.
ನೆರಳು (ಸುಮನಸಾ ಕೊಡವೂರು ಪೃಸ್ತುತಿ)
ನೆರಳು |
ಮಂಗಳೂರಿನ ಯುವ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ರಾಷ್ಟ್ರೀಯ ರಂಗ ಶಾಲೆಯ ಪದವೀಧರ, ಸುಮನಸಾ ಕೊಡವೂರಿನ ಕಲಾವಿದೆ ಅಕ್ಷತ್ ಪೃಸ್ತುತ ಪಡಿಸಿದ ಏಕವ್ಯಕ್ತಿ ನಾಟಕ ನೆರಳು. ಇಂದಿನ ನಮ್ಮ ಸಮಾಜದಲ್ಲಿ ನಮ್ಮ ನಮ್ಮ ನಡುವೆ ಇರುವ ಜನ ಸಾಮಾನ್ಯರಿಂದ ಹಿಡಿದು, ಅತ್ಯುನ್ನತ ಪಟ್ಟದ ರಾಜಕಾರಣಿ, ಪೋಲೀಸ್ ವ್ಯವಸ್ಥೆ, ಮಾಧ್ಯಮಗಳ ತನಕವೂ ಹರಡಿಕೊಂಡಿರುವ ’ತಮ್ಮ ತಮ್ಮ ಮೂಗಿನ ನೇರದ’ ಜೀವನ ಶೈಲಿಯನ್ನು ಈ ನಾಟಕದ ಮೂಲಕ ವಿಡಂಬಿಸಿದ ರೀತಿ, ಸಾಮಾನ್ಯರಿಂದ ಅಸಾಮಾನ್ಯರ ತನಕವೂ ತಲುಪಬೇಕಾದ ಸ್ತರದಲ್ಲಿ ತಲುಪಿದೆ!. ಕಾಣೆಯಾದ ತಂಗಿಯನ್ನು ಅರಸುವ ಅಣ್ಣನಾಗಿ, ಸಮಾಜದ ಎಲ್ಲಾ ವರ್ಗಗಳನ್ನು, ಎಲ್ಲಾ ವ್ಯವಸ್ಥೆಗಳನ್ನೂ ಎಡತಾಕುವ ಅಣ್ಣ, ಅಲ್ಲೆಲ್ಲವೂ ತನ್ನ ನೋವಿಗೆ ಸ್ಪಂದಿಸುವ ಕನಸುಗಳ ಹೊರತಾಗಿ, ಸ್ವಾರ್ಥವನ್ನೇ ಕಾಣುತ್ತಾ, ಕೊನೆಗೂ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ಪ್ರೇಕ್ಷಕರೊಳಗೆ ಬಿಡುತ್ತಾನೆ. ಒಂದು ವಿಶಿಷ್ಠ ಪೃಸ್ತುತಿ ಎನ್ನಲಡ್ಡಿ ಇಲ್ಲದಿದ್ದರೂ. ನಾಟಕದ ಕೊನೆಯಲ್ಲಿ ಅನಿರೀಕ್ಷಿತ ತಿರುವಿನ ನಿರೀಕ್ಷೆಯಲ್ಲಿದ್ದವರಿಗೆ, ಇಂದಿನ ಸಾಮಾನ್ಯ ಕೊನೆಯೇ ಕಂಡಾಗ, ಒಂದು ಅಚ್ಚರಿ, ಒಂದು ವಾಸ್ತವ...ಹೀಗೆ ಭಿನ್ನ ಭಾವಕ್ಕೆ ಕಾರಣವಾದ ಪೃಸ್ತುತಿ. ಒಬ್ಬ ಸಮರ್ಥ ನಿರ್ದೇಶಕ ಮತ್ತು ಪ್ರಬುತ್ವಮುಖೀ ನಟನನ್ನು ’ನೆರಳು’ ಪರಿಚಯಿಸಿದ್ದು ಗೆಲುವೇ ಹೌದು!.
ಬಲಿದಾನ (ಚಂದ್ರಶೇಖರ ಪ್ರತಿಷ್ಠಾನ, ಬೆಂಗಳೂರು ಪೃಸ್ತುತಿ)
ಭಾರತ ಮಾತೆಯ ಸ್ವಾತಂತ್ರ್ಯ ಹೋರಾಟದ ಕಥಾ ಹಂದರದ ನಾಟಕ ’ಬಲಿದಾನ’. ಕುವೆಂಪು ಅವರ ರಚನೆ ಎಂದಾಗ ಇದ್ದ ಸಹಜ ನಿರೀಕ್ಷೆಯ ಮಟ್ಟವನ್ನು ತಲುಪಿಸುವಲ್ಲಿ ಕಲಾವಿದರು ನಿರೀಕ್ಷಿತ ಯಶ ಕಾಣದಿದ್ದರೂ, ಭಾರತಮಾತೆಯದಾಸ್ಯಸಂಕೋಲೆಯ ಬಿಡುಗಡೆಗಾಗಿ ಬಲಿದಾನಗೈದ ಸ್ವಾತಂತ್ರ್ಯ ಹೋರಾಟದ ನೈಜಚಿತ್ರಣ ವನ್ನು ಪ್ರೇಕ್ಷಕರಿಗೆ ತಲುಪಿಸಿದ ಸಮಾಧಾನ ಪ್ರಧಾನವಾಗಿತ್ತು. ಸುಧಾರಿಸ ಬಹುದಾದ ಅನೇಕ ಅಂಶಗಳು ಡಾಳಾಗಿ ಕಾಣುತ್ತಿದ್ದ ಈ ನಾಟಕ, ಅತ್ಯಂತ ಚುಟುಕು ನಾಟಕವಾಗಿಯೂ ರಂಗ ಹಬ್ಬದಲ್ಲಿ ದಾಖಲಾಯ್ತು.
ಚಿತ್ರಪಟ ರಾಮಾಯಣ(ಸುಮನಸಾ ಕೊಡವೂರು ಪೃಸ್ತುತಿ)
ಚಿತ್ರಪಟ ರಾಮಾಯಣ |
ಐದನೆಯ ದಿನ ನಡೆದದ್ದು ಮಾತ್ರ ಸುಮನಸಾ ಕಲಾವಿದರ ಬಹುಮುಖೀ ಪ್ರತಿಭಾ ದರ್ಶನ!!. ಪ್ರತೀ ವರ್ಷದ ರಂಗ ಹಬ್ಬದಲ್ಲಿ ಒಂದು ಯಕ್ಷಗಾನ ಪ್ರದರ್ಶನವನ್ನೂ ನೀಡುವ ನಾಟಕ ಕಲಾವಿದರು, ಇಲ್ಲಿ ವಿಶೇಷವಾಗಿ ಯಕ್ಷಗಾನಕ್ಕೆ ನಾಟಕದ ಸ್ಪರ್ಶ ಒದಗಿಸಿ ರಂಜಿಸಿದರು! ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಚಿತ್ರಪಟ ರಾಮಾಯಣವನ್ನು ವಿಶೇಷವಾಗಿ ಹೆಣೆದು ಪ್ರದರ್ಶಿಸಿದರು. ಪುಟ್ಟ ಬಾಲಕನಿಂದ ಹಿಡಿದು ಸುಮನಸಾದ ಹಿರಿಯ ಸ್ತ್ರೀ ಪುರುಷ ಕಲಾವಿದರು ಅಭಿನಯಿಸುವ ಮೂಲಕ, ಚಿತ್ರ ಪಟ ರಾಮಾಯಣ ವಿಶಿಷ್ಠ ರಂಗು ಪಡೆದು ರಂಗದ ಮೇಲಿಳಿದಾಗ, ಸುಮನಸಾದ ಕಲಾ ಬದ್ಧತೆಗೆ ಮೂಗಿನ ಮೇಲೆ ಬೆರಳಿಡದೇ ದಾರಿ ಇರಲಿಲ್ಲ. ರಂಗ ಹಬ್ಬಕ್ಕೆ ರಂಗು ತುಂಬಿದ ಒಂದು ವಿಶಿಷ್ಠ ಪೃಸ್ತುತಿಯಾಗಿ ದಾಖಲಾದದ್ದು ಚಿತ್ರಪಟ ರಾಮಾಯಣದ ಹೆಗ್ಗಳಿಕೆ.
ಶೂರ್ಪನಖಿಯ ಮಾಯಾ ವಿದ್ಯೆಗೆ ಮೋಸ ಹೋಗಿ ರಾವಣನಚಿತ್ರಪಟ ರಚಿಸಿ ಅದಕ್ಕೆಜೀವತುಂಬಿ ಶ್ರೀ ರಾಮನ ಸಂದಿಗ್ಧತೆಗೆ ಕಾರಣವಾಗಿ ಕಾಡನ್ನು ಸೇರುವ ಸೀತೆಯ ವ್ಯಥೆಯ ಕಥೆಯಿದು. ಸಮರ್ಥ ಹಿಮ್ಮೇಳ, ಬೆಳಕು, ಅಭಿನಯ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಗೋಕುಲ ನಿರ್ಗಮನ (ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದೆಯರು-ಮಂಗಳೂರು)
ಗೋಕುಲ ನಿರ್ಗಮನ |
ಕನ್ನಡದ ಕವಿ ಶ್ರೇಷ್ಠ ಪುತಿನ ಅವರ ಕೃತಿ ಗೋಕುಲ ನಿರ್ಗಮನವನ್ನು ಮಂಗಳೂರಿನ ಕಲಾ ತಂಡ ನಂದಗೋಕುಲದ ’ಮಹಿಳಾ’ ಕಲಾವಿದೆಯರೇ ಪೃಸ್ತುತ ಪಡಿಸಿದ್ದು ವಿಶೇಷ. ವಿದ್ದು ಉಚಿಲ್ ಅವರ ನಿರ್ದೇಶನದ ಈ ನೃತ್ಯ ನಾಟಕದಲ್ಲಿ, ಪುತಿನ ಅವರದ್ದೇ ಭಾಷಾ ಶೈಲಿ ಬಳಸಿಕೊಂಡಿದ್ದು, ಹಾಡುಗಳನ್ನು ವಿಶಿಷ್ಠವಾಗಿ ಸಂಯೋಜಿಸಲಾಗಿತ್ತು. ಪ್ರದರ್ಶನದ ಅವಧಿಯಲ್ಲಿ ಪ್ರೇಕ್ಷಕರನ್ನು ಎಲ್ಲಿಯೂ ರಸಭಂಗವಾಗದ ರೀತಿಯಲ್ಲಿ ಸೆಳೆಯುವಲ್ಲಿ ನಾಲ್ಕನೇ ತರಗತಿಯಿಂದ ಗೃಹಿಣಿಯರ ವರೆಗಿನ ಕಲಾವಿದೆಯರು ಯಶಸ್ವಿಯಾದರು. ಕೃಷ್ಣ ಒಂದು ಹುಣ್ಣಿಮೆಯ ರಾತ್ರಿಯಲ್ಲಿ ಗೋಕುಲ, ರಾಧೆ ಹಾಗೂ ಕೊಳಲನ್ನು ತೊರೆದು ಮಧುರೆಗೆ ಹೊರಡುವ ಸನ್ನಿವೇಶದ ಈ ಕೃತಿಯನ್ನು ರಂಗದ ಮೇಲೆ ತರುವುದೇ ಒಂದು ಸವಾಲಾಗಿದ್ದರೂ, ಆ ಸವಾಲಿನಲ್ಲಿ ನಿರ್ದೇಶಕರು, ನಟಿಯರು ಗೆದ್ದಿದ್ದಾರೆಂಬುದೂ ಒಂದು ಗಮನಾರ್ಹ ದಾಖಲೆ.
ರಥಯಾತ್ರೆ(ಸುಮನಸಾ ಕೊಡವೂರು)
ರವೀಂದ್ರನಾಥ ಟಾಗೋರರ ಪುಟ್ಟ ಕತೆ ರಥಯಾತ್ರೆ. ಗುರುರಾಜ ಮಾರ್ಪಳ್ಳಿಯವರು ಇದಕ್ಕೆ ರಂಗ ರೂಪ ನೀಡುವಾಗ, ಕಾಲಾತೀತವಾಗಿ ಎಂದೆಂದಿಗೂ ಸಲ್ಲುವ ವಚನಗಳನ್ನು ಸಂಯೋಜಿಸುವ ಮೂಲಕ ರಂಗ ಹಬ್ಬದ ಸಮಾರೋಪದಂದು ಸುಮನಸಾ ಕಲಾವಿದರ ಮೂಲಕ ’ರಥಯಾತ್ರೆ’ ಮಾಡಿಸುವಲ್ಲಿ ಸಫಲರಾದರು. ಎಂದಿಗೂ ಅಳಿಯದ ಮೇಲು, ಕೀಳು, ಸಮಾಜದ ವರ್ಗ ತಾರತಮ್ಯವನ್ನು ವಿಡಂಬನಾತ್ಮಕವಾಗಿ ಹೆಣೆದ ಕಥೆ ’ರಥಯಾತ್ರೆ’. ಸುಮನಸಾ ಕಲಾವಿದರೆಲ್ಲರ ಪ್ರಬುದ್ಧ ಅಭಿನಯದೊಂದಿಗೆ ಮೂಡಿ ಬಂದ ನಾಟಕದಲ್ಲಿ ಬೆಳಕಿನ ಚಲನೆ, ಸಂಗೀತ ಸಂಯೋಜನೆ ಧನಾತ್ಮಕ ಅಂಶಗಳಾದರೆ, ಎಲ್ಲೂ ಸೋಲದ ಕಲಾವಿದರು ನಾಟಕಕ್ಕೆ ನವಚೈತನ್ಯ ತುಂಬಿದ್ದರು. ಸಮಾರೋಪಕ್ಕೆ ಒಂದು ಚೆಂದದ ಚುಕ್ಕೆ ಇಡುವಲ್ಲಿ ರಥಯಾತ್ರೆ ಯಶಸ್ವಿಯಾಗಿ ಸುಮನಸಾ ರಂಗ ಹಬ್ಬ -೬ ಮುಗಿದಾಗ ಮುಂದಿನ ಅವಧಿರಂಗ ಹಬ್ಬ ಬಹುನಿರೀಕ್ಷೆಯ ಬೆಟ್ಟವನ್ನು ರಂಗಾಸಕ್ತಲ್ಲಿ ಸೃಷ್ಟಿಸಿದೆ. ಈ ಮೂಲಕ ಸುಮನಸಾದ ಜವಾಬ್ದಾರಿಯನ್ನೂ ಹೆಚ್ಚಿಸಿದೆ.
No comments:
Post a Comment