Monday, 10 December 2012

ಇದೆಂಥಾ ವಿಧಿಯಾಟ....????

ಈ ವಿಧಿಯಾಟದಿಂದ ನಲುಗಿದ ನನ್ನಂತಹ ಅನೇಕರು ಫೊನಾಯಿಸಿದಾಗೆಲ್ಲಾ ವಿಧಿ ಕ್ರೂರ ಎನ್ನುತ್ತಾರೆ. ಯಾವುದನ್ನು ಹೇಗೆ ಸ್ವೀಕರಿಸಬೇಕೋ ತಿಳಿಯದ ಗೊಂದಲವನ್ನಂತೂ ಈ ವಿಧಿ ಸೃಷ್ಟಿಸಿದರೂ, ಅವನ ಆಟಕ್ಕೆ ನಾವು ಬಲಿಪಶುವಾಗಲೇ ಬೇಕು. ತೀರಾ ನಮ್ಮವರೆಂಬಂತೆ ನಮ್ಮ ಬದುಕು, ಉಸಿರಿನಲ್ಲಿ ಒಂದಾಗಿರುವವರನ್ನು ಕಳೆದುಕೊಳ್ಳುವ ಆ ದು:ಖವನ್ನು, ಆ ನೋವನ್ನು ಹೇಗೆ ವಿವರಿಸಲಾದೀತು.????....

ನಾವು ಬಯಸಲಿ, ಬಯಸದಿರಲಿ, ವಿಧಿ ಅದರದ್ದೇ ಆದ ಸಂಚಿನೊಂದಿಗೆ ಕಾಯುತ್ತಿರುತ್ತದೆ. ಸಾವು ಹುಟ್ಟಿದ ಪ್ರತೀ ಜೀವಿಗೂ ಕಟ್ಟಿಟ್ಟದ್ದು ಎಂದು ನಾವು ಹೇಳುತ್ತೇವಾದರೂ, ನಮಗೆ ಮಾತ್ರ ಅದು ಅನ್ವಯಿಸದ ರೀತಿಯಲ್ಲಿ ಬದುಕುತ್ತೇವೆ. ಇದನ್ನೇ ಜೀವನೋತ್ಸಾಹ ಎಂದೋ, ಜೀವನ ಕ್ರಮ ಎಂದೋ ಭಾವಿಸುತ್ತೇವೆ. ಅದು ತಪ್ಪಲ್ಲ, ಆದರೆ ತೀರಾ ನಮ್ಮೊಳಗೆ ಬೆರೆತು ಹೋದ ಜೀವವೊಂದು ಇನ್ನಿಲ್ಲವಾದಾಗ, ಅಥವಾ ನಮ್ಮೊಳಗೆ ಜೀವನಕ್ಕೆ ಹೊಸ ಅರ್ಥ ನೀಡುವ ಬದುಕು ಕೊನೆಗೊಂಡಾಗ, ಮನಸ್ಸು ಭಾರವಾಗುತ್ತದೆ.
ಇತ್ತೀಚೆಗೆ ಮನಸ್ಸನ್ನು ಛಿದ್ರಗೊಳಿಸುವಂತೆ ಕೆಲವು ಸಾವುಗಳು ಮನಸ್ಸನ್ನು ಕಲಕಿ ಬಿಟ್ಟುವು! ಮೊನ್ನೆ ಊರಿನಿಂದ ಬಂದ ಒಂದು ಕರೆ ದಿಗಿಲು ಹುಟ್ಟಿ ಸಿತು. ಊರಿನಲ್ಲಿ ಆತ್ಮೀಯನಾಗಿದ್ದ, ದೇವರ ಪಾತ್ರಿ ಎಂದೇ ಗುರುತಿಸಿಕೊಳ್ಳುತ್ತಿದ್ದ ದೇವದಾಸ (೪೮ವರ್ಷ) ಎಂಬ ಸ್ನೇಹಿತ, ತಿರುಪತಿಗೆ ಹೋಗುವಾಗ ಬೆಂಗಳೂರು ಸಮೀಪದ ಅಪಘಾತದಲ್ಲಿ ನಿಧನರಾದರು. ಒಂದು ಕ್ಷಣ ಮನ ತುಂಬಿ ಬಂತು. ಕಳೆದ ಬಾರಿ ಊರಿಗೆ ಹೋಗಿದ್ದಾಗ, ನಮ್ಮ ಅರೆಹೊಳೆ ದಿಬ್ಬಣದ ಬಗ್ಗೆ ವಿಚಾರಿಸಿ, ಈ ವರ್ಷ ಅದು ಯಾವಾಗ, ನಾನೂ ಜೊತೆಗೂಡುತ್ತೇನೆ ಎಂದು ಹೇಳಿದ್ದ ಆ ಮನಸ್ಸು ಇನ್ನೆಲ್ಲಿ??. ಯಾವುದೋ ಊರಿನಲ್ಲಿ ಹುಟ್ಟಿ ಬೆಳೆದು, ಅದೆಲ್ಲೋ ಮರೆಯಾಗಿ ಹೋದ ಆ ಚೇತನಕ್ಕೆ ನನ್ನದೊಂದು ನುಡಿ ನಮನ.
ಆ ಆಘಾತದಿಂದ ಇನ್ನು ಬಳಲಿರುವಾಗಲೇ, ಮೊನ್ನೆ ಭಾನುವಾರದ ಮುಂಜಾವು ಮತ್ತೆ ಅಶುಭವಾಗಿತ್ತು. ಭುವನಕ್ಕ (ಭುವನೇಶ್ವರಿ ಹೆಗಡೆ) ಮಂಗಳೂರಿನಿಂದ ಕರೆ ಮಾಡುವಾಗ ಕೆಲಸವೊಂದರ ನಿಮಿತ್ತ ಉಡುಪಿ ಬಳಿ ಇದ್ದೆ. ಕರೆ ಸ್ವೀಕರಿಸಿದವನ ಕೈಗಳು ನಡುಗಲಾರಂಭಿಸಿದುವು. ನಮ್ಮೆಲ್ಲರ ಹಿರಿಯರಾಗಿದ್ದ, ಆತ್ಮೀಯರಾಗಿದ್ದ, ಹಿರಿಯ ವಿದ್ವಾಂಸ ಡಾ.ಪಾ ನ ಮಯ್ಯ ಇನ್ನಿಲ್ಲ ಎಂದು ಅವರ ಮಾತುಗಳು, ಮತ್ತೆ ಗರ ಬಡಿಸಿದುವು. ಕೇವಲ ಎರಡು ತಿಂಗಳ ಹಿಂದೆ, ಅರೆಹೊಳೆ ಸಾಹಿತ್ಯ ಪ್ರದಕ್ಷಿಣೆಯನ್ನು ಆರಂಭಿಸಿದಾಗ, ಮೊದಲ ಅತಿಥಿಯಾಗಿ ಬಂದು, ತಮ್ಮ ಗುರು ಜಿ ವಿ ಶತಾಯುಷಿಯಾದುದನ್ನು ಹೆಮ್ಮೆಯಿಂದ ವಿವರಿಸಿ, ಬಹಳ ಲವಲವಿಕೆಯಿಂದ ಮಾತಾಡಿದ್ದರು. ವಾಮನ ನಂದಾವರ ಅವರ ಮನೆಯ ದೃಶ್ಯ ಚಾವಡಿಯಲ್ಲಿ,

 ಸಾಹಿತ್ಯ ಪ್ರದಕ್ಷಿಣೆಯಲ್ಲಿ  ನಮ್ಮೊಂದಿಗೆ ಮಯ್ಯರು...ಎಡದಿಂದ ಮೂರನೆಯವರು.....

 ಹಲವು ಸಾಹಿತ್ಯಾಭಿಮಾನಿಗಳ ನಡುವೆ, ಕುಂದಗನ್ನಡದ ಸೊಬಗನ್ನು ಉಣಬಡಿಸುತ್ತಾ, ಎಲ್ಲರೊಡನೆ ಒಂದಾಗಿ ಹರಟಿದ್ದರು. ಅಂದು ಅವರಂದ ಮಾತೊಂದು ಈಗಲೂ ಕಿವಿಯಲ್ಲಿ ಗಂಯ್ ಗುಡುತ್ತಿದೆ.  ’ಜಿವಿ’ ಯಂತಹ ದೊಡ್ಡ ’ಜೀವಿ’ ಮಾತ್ರ ನೂರು ವರ್ಷ ಬದುಕಲು ಸಾಧ್ಯ, ಅವರದ್ದು ಸಾರ್ಥಕ ನೂರು, ಅದನ್ನು ನೋಡವುದೇ ಒಂದು ಸೌಭಾಗ್ಯ ಎಂದವರಿಗೆ ನಿಮ್ಮ ನೂರನ್ನೂ ನಾವು ನೋಡಬೇಕು ಸಾರ್ ಎಂದು ಹೇಳಿದ್ದೆ!. ಆಗ ನಂದಾವರ ಅವರ ಮನೆಯ ಮೆಟ್ಟಿಲಿಳಿದು ಹೋಗುತ್ತಿದ್ದವರು, ಗಕ್ಕನೆ ನಿಂತು ತಿರುಗಿ, ’ಕಾಂಬ, ಕಾಂಬ’ ಎಂದು ಕುಂದಾಪುರ ಕನ್ನಡದಲ್ಲಿ ಹೇಳಿ ಹೋಗಿದ್ದರು. ಮತ್ತೆ ಅವರನ್ನು ಒಂದೆರಡು ಬಾರಿ ಸಮಾರಂಭಗಳಲ್ಲಿ ಕಂಡದ್ದು ಬಿಟ್ಟರೆ, ಮುಖತಾ: ಸಿಗಲಿಲ್ಲ. ಇಂದು ಅವರು ನೆನಪು ಮಾತ್ರ ಎಂದುಕೊಂಡಾಗ ಕಣ್ಣು ಹನಿಗೂಡುತ್ತಿದೆ.
ಈ ಎರಡೂ ಆಘಾತದಿಂದ ಇನ್ನೂ ಹೊರ ಬರದ ನಿನ್ನೆ, ಫೇಸ್ ಬುಕ್‌ನಲ್ಲಿ ಸಿಕ್ಕಿದ ಇತ್ತೀಚೆಗೆ ಪರಿಚಯವಾದ ಗೆಳೆಯ ಆಝಾದ್ ಐ ಎಸ್ ಅವರೊಂದಿಗೆ ಒಂದು ಕಿರು ಚಾಟ್ ಮಾಡಲು ಕುಳಿತೆ. ೩ ಕೆ ಬಳಗವನ್ನು ಕಟ್ಟಿ ಬೆಳೆಸಿದ್ದು ನಮ್ಮೆಲ್ಲರಿಂದ ಪ್ರೀತಿಯಿಂದ  ರೂಪಕ್ಕ ಎಂದೇ ಕರೆಸಿಕೊಳ್ಳುವ ರೂಪಾ ಸತೀಶ್ ಅವರು. ಯಾವಾಗಲೂ ನಗುತ್ತಿರುವ, ಅರೆಹೊಳೆ ಸರ್ ಎಂದು ಮನತುಂಬಿ ಕರೆದು ತುಂಟಾಟವಾಡುತ್ತಿದ್ದ, ಹಾಗೆಲ್ಲಾ ಸರ್ ಎನ್ನ ಬೇಡಿ ಎಂದಾಗ ಅದು ನನ್ನ ರೈಟ್ಸ್ ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದ ರೂಪಕ್ಕ ಯಾವಾಗಲೂ ನಗು ನಗುತ್ತಿದ್ದವರು. ಅವರ ಪತಿ, ಸತೀಶ್ ಮೊನ್ನೆ ರಾತ್ರಿ ತೀರಿಕೊಂಡ ಸುದ್ದಿಯನ್ನು ಆಝಾದ್ ಅವರು ಹೇಳಿದಾಗ, ಕೀಲಿ ಮಣೆ ಕೀಲಿಸುತ್ತಿದ್ದ ಕೈಗಳು ಸ್ತಬ್ದವಾದುವು. ಇತ್ತೀಚೆಗಷ್ಟೇ ಬೆಂಗಳೂರಿಗೆ ಹೋಗಿದ್ದಾಗ, ಸ್ವಲ್ಪ ಸಮಯದ ಅಂತರದಲ್ಲಿ ರೂಪಾ ಅವರ ಯಜಮಾನರನ್ನು ಮೀಟ್ ಆಗುವ ಅವಕಾಶ ಕೈ ತಪ್ಪಿ ಹೋಗಿತ್ತು. ಯಾವತ್ತೋ ಒಮ್ಮೆ ಸಾಂಧರ್ಭಿಕವಾಗಿ ತಮ್ಮ ಯಜಮಾನರ ಅನಾರೋಗ್ಯ ವಿಚಾರ ಹೇಳಿದ ರೂಪಕ್ಕನಿಗೆ, ನಿಮ್ಮ ಹಿರಿಯಣ್ಣನಂತೆ ನಾನೂ ಅವರು ಬೇಗ ಗುನಮುಖರಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ, ನೀವು, ಸತೀಶ್ ಹಾಗೂ ಮೇಘನಾ(ರೂಪಕ್ಕನ ಮಗಳು) ಒಮ್ಮೆ ಮಂಗಳೂರಿಗೆ ಬನ್ನಿ, ಎಲ್ಲಾ ದೇವಸ್ಥಾನಗಳಿಗೂ ಕರೆದೊಯ್ಯುತ್ತೇನೆ ಎಂದಿದ್ದೆ. ಆದಷ್ಟು ಬೇಗ ಬರುತ್ತೇವೆ ಎಂದಿದ್ದರು ರೂಪಕ್ಕ. ಆದರೆ ವಿಧಿಯಾಟ, ಅವರನ್ನು ಅವರ ಪತಿಯನ್ನು ರೂಪಕ್ಕನವರ ಕೈಯಿಂದ ಕಸಿದುಕೊಂಡು ಬಿಟ್ಟಿತು. ಎಂದೆಂದೂ ಎಲ್ಲರನ್ನೂ ನಗಿಸುತ್ತಾ, ಮಕ್ಕಳಂತೆ ಓಡಾಡಿಕೊಂಡಿದ್ದ ಆ ತಂಗಿಯ ಮನದೊಳಗಿದ್ದ ಬೇಗುದಿಯನ್ನು ನಾನು ಅರ್ಥೈಸಿಕೊಂಡಿದ್ದೆ. ಸಾಂತ್ವನ ಹೇಳುವುದಾದರೂ ಹೇಗೆ??. ಮನಸ್ಸುಭಾರವಾಗಿದೆ. ಯಾವ ಕೆಲಸ ಮಾಡಲೂ ಆಗದ ದು:ಸ್ಥಿತಿಯಲ್ಲಿ ಮನ  ಮಿಡಿಯುತ್ತಿದೆ. ರೂಪಾ ಎಂಬ ಈ ತಂಗಿಗೆ ಇಂದು ಸತೀಶ್ ರಿಗೆ ಆರೋಗ್ಯ ತಂದುಕೊಡಲಾಗದ ದೇವರೇ, ದು:ಖ ಸಹಿಸುವ ಶಕ್ತಿ ನೀಡಬೇಕು. ಪುಟಾಣಿ ಮೇಘನಾ, ಈ ಆಘಾತವನ್ನು ಹೇಗೆ ಸ್ವೀಕರಿಸಿದಳೋ, ಹೇಗಿದ್ದಾಳೋ ಎಂದು ನೆನೆಸಿಕೊಂಡರೆ ಮನಸ್ಸು ಚುರುಕ್ ಅನ್ನುತ್ತಿದೆ. ಅವರನ್ನು ಸಂಪರ್ಕಿಸಲೂ ದಾರಿ ಕಾಣದೇ, ಈ ಬರಹದ ಮೂಲಕ ಒಮ್ಮೆ ಬೇಗುದಿಯನ್ನು ಹೊರ ಹಾಕೋಣವೆಂದು ಕೊಂಡೆ. ರೂಪಕ್ಕಾ.....ನಿಮಗೆ ದು:ಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಸತೀಶ್‌ರಿಗೆ ಶಾಂತಿ ಲಭಿಸಲಿ ಎಂದಷ್ಟೇ ಆತ್ಮೀಯ ಅಣ್ಣನಾಗಿ ಹೇಳಬಲ್ಲೆ.
ಹೀಗೆ ಈ ವಿಧಿಯಾಟದಿಂದ ನಲುಗಿದ ನನ್ನಂತಹ ಅನೇಕರು ಫೊನಾಯಿಸಿದಾಗೆಲ್ಲಾ ವಿಧಿ ಕ್ರೂರ ಎನ್ನುತ್ತಾರೆ. ಯಾವುದನ್ನು ಹೇಗೆ ಸ್ವೀಕರಿಸಬೇಕೋ ತಿಳಿಯದ ಗೊಂದಲವನ್ನಂತೂ ಈ ವಿಧಿ ಸೃಷ್ಟಿಸಿದರೂ, ಅವನ ಆಟಕ್ಕೆ ನಾವು ಬಲಿಪಶುವಾಗಲೇ ಬೇಕು. ತೀರಾ ನಮ್ಮವರೆಂಬಂತೆ ನಮ್ಮ ಬದುಕು, ಉಸಿರಿನಲ್ಲಿ ಒಂದಾಗಿರುವವರನ್ನು ಕಳೆದುಕೊಳ್ಳುವ ಆ ದು:ಖವನ್ನು, ಆ ನೋವನ್ನು ಹೇಗೆ ವಿವರಿಸಲಾದೀತು.????....
ನಿಜ, ಮನ ಭಾರವಾಗಿದೆ...ಇಂದು ಇಷ್ಟೇ ಹೇಳಬಲ್ಲೆ. ಮತ್ತೆ ಮಾತು ಹೊರಡದು.

5 comments:

 1. ಹೌದು ಸರ್ ನಾವು ಕೂಡ ಆ ದುಖದಿಂಬ ಹೊರ ಬರಲು ಸಾಧ್ಯವಾಗುತ್ತಿಲ್ಲ ಇದೊಂದು ನಂಬಲಸಾಧ್ಯವಾದ ಅಘಾತ ಆಗಿದೆ ಬೆಳಗಿನಿಂದ ಮನ ಒದ್ದಾಡುತ್ತಿದೆ

  ತಮ್ಮ ಹೃದಯದೊಳು ಅಗ್ನಿ ಪರ್ವತವೇ ಸುಡುತ್ತಿದ್ದರೂ...... ಪರರ ಮೇಲೆ ಹಿಮದ ಮಳೆಯನ್ನು ಸುರಿಸಿದ.... ಆ ಮಾತೃ ಹೃದಯಿಗೆ ನೋವ ಸಹಿಸುವ ಶಕ್ತಿಯ ಆ ಭಗವಂತ ಕರುಣಿಸಲಿ

  ReplyDelete
 2. ರೂಪಕ್ಕನಿಗೆ ಎಲ್ಲವನ್ನೂ ಸಹಿಸುವ ಶಕ್ತಿ ಪರಮಾತ್ಮ ಕೊಡಲಿ..

  ReplyDelete
 3. "ಹುಟ್ಟು ಸಾವೇ
  ಅವನಿರುವಿಕೆಯನ್ನು
  ಎತ್ತಿ ತೋರುತ್ತವೆ.
  ನಮ್ಮೊಳಗೇ ಇರುವ
  ಅವನಿರುವಿಕೆಯನ್ನು
  ನಾವಾಗಿ ಅರಿತರೇ ಚೆನ್ನ.
  ಚದುರಂಗದ
  ಪಡೆಗಳು ನಾವು.
  ಅವ ನಡೆಸಿದ
  ನಡೆಯನ್ನು ಒಪ್ಪಲೇಬೇಕು.
  ಅವನ ಕರೆ ಬಂದಾಗ
  ಹೊರಡಲೇಬೇಕು.
  ಕಷ್ಟವಾದರೂ ಹೊರಟವರ
  ಒಮ್ಮನಸಿನಿಂದಲೇ
  ಬೀಳ್ಕೊಡಬೇಕು ಆ
  ಆತ್ಮ ಪರಮಾತ್ಮನಲಿ
  ಲೀನವಾಗಲಿ
  ಎಂಬ ಹಾರೈಕೆಯಲಿ."

  ಮಂಜುಳಾ ಬಬಲಾಡಿಯವರ ಪತಿಯ ಅಕಾಲ ಮೃತ್ಯು, ಈ ಬರಹದ ಹುಟ್ಟಿಗೆ ಕಾರಣ.
  ಹೌದು, ಕೆಲ ಘಳಿಗೆಯ ಹಿಂದೆ ನಕ್ಕು ನಲಿದ ನಮ್ಮ ಪ್ರಿಯರು ಇನ್ನೊಂದು ಘಳಿಗೆಯಲ್ಲೇ ಕಾಲನ ಕ್ರೂರ ಪಾಶಕ್ಕೆ ಬಲಿಯಾದಾಗ ಹೃದಯ ನರಳುತ್ತದೆ...ಆದರೂ ನಾವೆಲ್ಲ ಅಸಹಾಯಕರು. ಅವರ ನೋವನ್ನು ಹಂಚಿಕೊಂಡು ಒಂದಿಷ್ಟು ಕಡಿಮೆ ಮಾಡುವ ಪ್ರಯತ್ನ ಮಾಡುವುದನ್ನು ಹೊರತು ಮತ್ತೇನು ಮಾಡಲು ಅಸಾಧ್ಯ!

  ReplyDelete
 4. ಧನ್ಯವಾದಗಳು ಶೀಲಾ ಅವರೇ, ನಿಮ್ಮ ಮೂರೂ ಅಭಿಪ್ರಾಯಗಳನ್ನು ಓದಿದೆ. ಮನ ತುಂಬಿ ಬಂತು, ಎಷ್ಟಾದರೂ ಭಾವನಾ ಜೀವಿಗಳಲ್ಲವೇ ನಾವು?. ಪರಸ್ಪರ ಭಾವನೆಗಳಿಗೆ ಬೆಲೆ ಕೊಟ್ಟಷ್ಟೂ, ಆತ್ಮೀಯತೆ ಹೆಚ್ಚುತ್ತದೆ ಎಂಬುದು ನನ್ನ ಅನಿಸಿಕೆ. ತಮ್ಮ ಅಬಿಪ್ರಾಯ, ಪ್ರೋತ್ಸಾಹಕರವಾಗಿದೆ. ಅದಕ್ಕಾಗಿ ನಾನು ಋಣಿ....ನಮಸ್ಕಾರಗಳು
  --------------------------
  ಅಶೋಕ, ಸತೀಶ್, ನಿಮ್ಮ ಪ್ರತಿಕ್ರಿಯೆಗಳಿಗೆ ವಂದನೆಗಳು. ಬ್ಲಾಗ್ ಲೋಕದಲ್ಲಿ ನನ್ನ ಮೊದಲ ಹೆಜ್ಜೆಗಳು...ಎಡವಿದರೆ ಸುಧಾರಿಸಿಕೊಳ್ಳಿ.
  ಇನ್ನೂ ಮನ ತಹಬಂದಿಗೆ ಬಂದಿಲ್ಲ....ಈ ದು:ಖ .....ಸಹಿಸಲಸದಳ

  ReplyDelete
 5. ಕಾಲನು ನಮ್ಮ ಬಂಡಿಯನ್ನು ಓಡಿಸುತ್ತಾ ಸುಮಧುರ ಮನಗಳನ್ನು ಪರಿಚಯಿಸುತ್ತಲೇ ಹಠಾತ್ ಬಂಡಿಯನ್ನು ನಿಲ್ಲಿಸಿಬಿಡುತ್ತಾನೆ...ಇಂತಹ ಸನ್ನಿವೇಶಗಳ ಅರಿವಿದ್ದರೂ ಮನಸ್ಸು
  ತಲ್ಲಣಗೊಳ್ಳುವುದು ಸಹಜ..ಅಶ್ರುತರ್ಪಣ ಎನ್ನ ಬಹುದಾದ ನಿಮ್ಮ ಲೇಖನ ಅಗಲಿದ ಎಲ್ಲ ಸುಮಧುರ ಮನಗಳಿಗೂ ನೆಮ್ಮದಿ ಕಾಣಿಸಲಿ, ಹಾಗು ಅಗಲುವಿಕೆಯ ಮನೋಭಾರವನ್ನು ಸಹಿಸಿಕೊಳ್ಳುವ ಶಕ್ತಿ ಆ ಭಗವಂತ ನೀಡಲಿ...

  ReplyDelete