Saturday, 8 December 2012

ನನ್ನ ಜುಟ್ಟು ತೆಗೆದ ಕಥೆ.......

ಬಾಲ್ಯದ ನೆನಪುಗಳೇ ಹಾಗೆ...ಮಧುರ...ಸುಮಧುರ.....ಇಲ್ಲಿ ಎಲ್ಲವು ಹಚ್ಚ ಹಸಿರು ಮತ್ತು ಅದು ಒಂದು ರೀತಿಯ ಶುದ್ಧ ನೀರಿನ ಹಾಗೆ. ಅಲ್ಲಿನ ಅದೆಷ್ಟೋ ಘಟನೆಗಳಿಗೆ ಕಾರಣವೇ ಬೇಕಿಲ್ಲ .....ಇಂಥ ಘಟನೆಯೊಂದರ ಸವಿ ಮೆಲುಕು ಇದು.....


ಹಿಂದೆಲ್ಲಾ ಸೆಲೂನು ಎಂದಾಕ್ಷಣ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತಿದ್ದ ದೃಶ್ಯವೇ ವಿಶಿಷ್ಠ. ಊರಿನ ಒಂದು ಕಡೆ, ಸರಿಯಾದ ಬಾಗಿಲೂ ಇರದಿರುತ್ತಿದ್ದ, ಎತ್ತರದ ಕುರ್ಚಿ, ಎದುರಿಗೊಂದು ಅಗಲವಾದ ಕನ್ನಡಿ. ಎದುರಿನ ಮೇಜಿನ ಮೇಲೆ, ಎರಡು ಮೂರು ಕತ್ತರಿಗಳು, ಬಣ್ಣ ಮಸುಕಾದ ಬ್ರಶ್, ತುಂಡು ಮಾಡಿ ಎಸೆದ ಬ್ಲೇಡುಚೂರುಗಳು, ಯಾರದ್ದೋ ಶೇವಿನ ನೊರೆ, ಕಾಲ ಕೆಳಗೆ ಹುಡಿ ಹುಡಿಯಾಗಿ ಬಿದ್ದ ಕೂದಲುಗಳ ತುಂಡುಗಳು.......ಹೀಗೆ!. ಸೆಲೂನಿನಾತನೋ ನಮ್ಮೂರ ಎಲ್ಲಾ ಸುದ್ದಿಗೆ ವಾರೀಸುದಾರ. ಆಗೊಮ್ಮೆ ಈಗೊಮ್ಮೆ ನಿಮ್ಮ ತಲೆಯನ್ನು ವಿಧೇಯವಾಗಿ ಅವನಿಗೊಪ್ಪಿಸಿ ಕುಳಿತು, ಅವನ ಕತ್ತರಿಯೊಂದಿಗೆ ಆಡುವ ಎಲೆಯುಡಿಕೆ ಮೆಲ್ಲುತ್ತಿರುವ ಆ ಬಾಯಿಯಲ್ಲಿ ಬರದಿರುವ ವಿಚಾರಗಳೇ ಇಲ್ಲ!

ಊರಿನ ಭಟ್ಟರ ಮಗ ಬಾರಿನಲ್ಲಿ ಸಿಕ್ಕಿ ಬಿದ್ದಿದ್ದು, ಶೆಟ್ಟರ ಮನೆಯ ನಾಯಿ ಜ್ವರ ಬಂದು ಸತ್ತಾಗ ಅದಕ್ಕೆ ಶೆಟ್ಟರು ಸುರಿದ ಲಕ್ಷದ ಲೆಕ್ಕ, ಯಾರದ್ದೋ ಮಗಳು ಯಾರನ್ನೋ ನಂಬಿ ಓಡಿ ಹೋಗಿ ಅವ ಕೈ ಕೊಟ್ಟದ್ದು, ಈ ಸಲದ ಚುನಾವಣೆಯಲ್ಲಿ ಇಂತವರೇ ಬರುವುದು ಎಂಬ ಭವಿಷ್ಯ, ಕಳೆದ ರಾತ್ರಿ ನಡೆದ ಯಕ್ಷಗಾನದ ಅಮೂಲಾಗ್ರ ವಿಮರ್ಶೆ, ಈಗಿನ ರಾಜಕಾರಣಿಗಳ ಆಡಳಿತದ ವೈಖರಿಗಳು, ಸಿಕ್ಕಾ ಪಟ್ಟೆ ಏರಿರುವ ಅಡಿಕೆ-ತೆಂಗು ಧಾರಣೆ, ಸೊಸಾಯಿಟಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ಯಾರ ಮನೆಯ ಎಮ್ಮೆ ಎಷ್ಟು ಲೀಟರ್ ಹಾಲು ಕೊಡುತ್ತದೆ, ಯಾರ ಮನೆಯಲ್ಲಿ ಮದುವೆಗೆ ಬಂದ ಹೆಣ್ಣು ಗಂಡುಗಳಿದ್ದಾರೆ, ನಿನ್ನೆಯ ಓಸಿ ನಂಬರ್ ಎಷ್ಟು ಮತ್ತು ಕಳೆದುಕೊಂಡವರು, ಗೆದ್ದವರು ಯಾರ್‍ಯಾರು ಎಂಬಲ್ಲಿಂದ ಹಿಡಿದು ಯಾರ್‍ಯಾರ ಮನೆಯಲ್ಲಿ ಯಾವ್ಯಾವ ಕಾರ್ಯಗಳು ಯಾವಾಗ ಎಂಬ ಕ್ಯಾಲೆಂಡರ್ ......ಹೀಗೆ ಅಲ್ಲಿ ಮಾತುಕತೆಗೆ ಬರದ ವಿಚಾರಗಳೇ ಇಲ್ಲ. ಎಲ್ಲವನ್ನೂ ಹಲವು ಕೋನಗಳಿಂದ ಅಳೆದೂ ಸುರಿದೂ, ಕೊನೆಗೂ ಒಂದು  ಅಂತಿಮ  ರೂಪ ಕೊಡದೇ, ಮುಂದೆ ತಲೆ ಬಗ್ಗಿಸುವವನಲ್ಲಿ ಇದೇ ವಿಚಾರಗಳು ವರ್ಗಾವಣೆಯಾಗುತ್ತವೆ!. ಅಲ್ಲಿಂದ ಮತ್ತೆ ಬೇರೆ ಹೊಸ ವಿಚಾರಗಳೂ ಸೇರುವುದೂ ಇದೆ ಎನ್ನಿ!
ನನಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಪುಟ್ಟ ಊರಲ್ಲಿ ಮಾಲಿಂಗ ಎಂಬ ಕ್ಷೌರಿಕ ಇದ್ದರು. ನಾನು ಸಣ್ಣವನಿದ್ದಾಗ, ಸುಮಾರು ೭ ವರ್ಷದ ತನಕ ವಿರಬೇಕು, ನನಗೆ ಕೂದಲೇ ಕತ್ತರಿಸಿರಲಿಲ್ಲ. ಎಲ್ಲದಕ್ಕೂ ಒಂದು ಕೊನೆ ಇರಲೇ ಬೇಕು ಎಂಬಂತೆ,  ಕೊನೆಗೂ ಅದಕ್ಕೆ ಕತ್ತರಿ ಇಡುವ ದಿನ ಬಂದಾಗ, ನನಗೋ ಅದನ್ನು ಕತ್ತರಿಸಲು ಇಷ್ಟವೇ ಇಲ್ಲ. ಅಲ್ಲಿಯ ತನಕ ಮಾಲಿಂಗನ ಅಂಗಡಿಯಲ್ಲಿ ತಲೆ ಕೊಟ್ಟು, ಅವನ ಕಥೆ ಕೇಳುವವರನ್ನು ಬಾಗಿಲ ಹೊರಗೆ ನಿಂತು ಕೌತುಕದಿಂದ ನೋಡುತ್ತಿದ್ದೆ. ’ಬಾ ಮಾಣಿ, ನಿನ್ನ ಕೂದಲೂ ಕತ್ತರಿಸ್ತೆ’ ಎಂದು ಮಾಲಿಂಗ ಹೇಳುತ್ತಿದ್ದರೆ ಕಾಲಿಗೆ ಬುದ್ದಿ ಹೇಳುತ್ತಿದ್ದೆ. ಆದರೆ ಮಾಲಿಂಗನಿಗೆ ನನ್ನ ಮೇಲೆ ಅದೇನೋ ಅಕ್ಕರೆ. ಹೋದಾಗೆಲ್ಲಾ ಒಂದು ’ಪೆಪ್ಪರಮೆಂಟು’ ಕೊಡಿಸುತ್ತಿದ್ದುದು, ಕರೆದು ಕುಳ್ಳಿರಿಸಿಕೊಳ್ಳುತ್ತಿದ್ದು ನನಗೆ ಅಂದಿನ ನೊಬೆಲ್!. ಅಂದು ಸೆಲೂನಿನಂಗಡಿಯೊಳ ಹೊಕ್ಕರೆ ಮನೆಗೆ ಬಂದು ಬಟ್ಟೆ ಸಮೇತ ಸ್ನಾನ ಮಾಡಬೇಕು ಎಂಬ ಕಟ್ಟಳೆಯೂ ಇತ್ತು. ಆದರೆ ನಾನು ಮಾತ್ರ ಮಾಲಿಂಗನ ಅಂಗಡಿಯೊಳಗೆ ಹೋಗಿದ್ದು, ಅವ ಕೊಟ್ಟ ಪೆಪ್ಪರಮೆಂಟು ತಿಂದದ್ದು, ಅಲ್ಲಿ ಹೋಗಿ ಕೂತದ್ದು ಮನೆಯಲ್ಲಿ ಹೇಳುತ್ತಲೇ ಇರಲಿಲ್ಲ.
ಅಂತೂ ನನ್ನ ಕೂದಲು ತೆಗೆಸಲೇ ಬೇಕಾದ ಅನಿವಾರ್ಯತೆ ಬಂದಿತು. ಅದು ನನಗೆ ಇಷ್ಟವೇ ಇರದಿದ್ದರೂ, ಎಲ್ಲರೂ ನನ್ನನ್ನು ’ಜುಟ್ಟಣ್ಣ’ ಎಂದು ತಮಾಷೆ ಮಾಡುತ್ತಿದ್ದುದರಿಂದ ಕತ್ತರಿಸಿಕೊಳ್ಳಲು ಒಲ್ಲದ ಮನಸ್ಸಿನಿಂದ ಒಪ್ಪಿದೆ. ಆಗ ನನ್ನ ಕೂದಲನ್ನೆಲ್ಲಾ ಒಂದು ಗೂಡಿಸಿ, ಜುಟ್ಟು ಹಾಕಿ, ಬಾಳೆ ದಿಂಬಿನಿಂದ ತಯಾರಿಸಿದ ಬಾಳೆ ಹಗ್ಗದಲ್ಲಿ ಜುಟ್ಟನ್ನು ಕಟ್ಟಿ ಬಿಡುತ್ತಿದ್ದಳು ಅಮ್ಮ!.  ಇಂದು ನನ್ನ ಕೆಲವು ಆತ್ಮೀಯರು ಅದನ್ನು ನೆನೆಸಿಕೊಂಡು ತಮಾಷೆ ಮಾಡುತ್ತಿದ್ದರೆ, ಅಂದಿನ ದಿನಗಳ ನೆನಪು ಹಾದು ಹೋಗುತ್ತವೆ.
ಕೊನೆಗೂ ನನ್ನ ಜುಟ್ಟು ತೆಗೆಯುವ ದಿನ ಬಂದೇ ಬಿಟ್ಟಿತು. ನನ್ನಪ್ಪ   ನನ್ನನ್ನು ಎರಡು ರೂಪಾಯಿ ’ಬಿಸ್ಕುಟ್’ ಆಮಿಷದೊಂದಿಗೆ   ಮಾಲಿಂಗನ ಅಂಗಡಿಗೆ ಎಳೆದುಕೊಂಡೇ ಹೋದರು. . ಅದೇನೋ ಅಳುಕು. ಮುಜುಗರ! ಕೂದಲನ್ನು ಕತ್ತರಿಸುವಾಗ ನೋವಾದರೆ ಎಂದ ಭಯ ಬೇರೆ. ಮಾಲಿಂಗನೋ ನನಗೆ ಹೇಗೆ ಬೇಕೋ ಹಾಗೆ ಪೂಸಿ ಹೊಡೆಯುತ್ತಾ ಎರಡೆರಡು ಪೆಪ್ಪರಮೆಂಟ್ ಕೊಡುತ್ತಿದ್ದರೆ, ನನಗೆ ಅಂದಿನ ಮಟ್ಟಿಗೆ ಆತ ಭಯಂಕರ ವಿನ್!. ಅಷ್ಟು ವರ್ಷಗಳಿಂದ ಜೋಪಾನವಾಗಿದ್ದ ಕೂದಲನ್ನು ಇಂದು ಯಾವುದೇ ಕರುಣೆ ಇಲ್ಲದೆ ಆ ಪುಣ್ಯಾತ್ಮ ಹೇಗಾದರೂ ಕತ್ತರಿಸುತ್ತಾನೋ ಎಂಬ ಸಿಟ್ಟು ನನಗೆ. ಅವನ ಅಂಗಡಿಯಲ್ಲಿ ಆಗಲೇ ಹೇಳಿದ ಹಾಗೆ ಎತ್ತರದ ಕುರ್ಚಿ. ಅದರ ಮೇಲೆ ಮಕ್ಕಳಿಗೆ ಅವರ ಎತ್ತರ ಹೆಚ್ಚಸಿ, ಅವನ ಕತ್ತರಿಗೆ ತಲೆ ಸಿಗುವ ಹಾಗೆ ಮಾಡಲು ಒಂದು ಹಲಗೆ (ಸಿಂಹಾಸನ??) ಇಡುತ್ತಿದ್ದ. ಅದನ್ನು ತೆಗೆದು ಆತ ಇಡುತ್ತಲೇ, ನಾನು ’ಅಯ್ಯೋ, ನನಗೆ ಕೂದಲು ಬೇಕು’ ಎಂದು ಬೊಬ್ಬೆ ಹೊಡೆಯುತ್ತಾ, ಓಡಿ ಹೊರ ಬಂದು ಬಿಟ್ಟೆ!. ಆಗೆಲ್ಲಾ ನಮ್ಮೂರ ಶೆಟ್ಟರ ಮನೆಯ ಮುಂದೆ ಶೇಂದಿ ತೆಗೆಯುವವರು ಸೇರುತ್ತಿದ್ದರು. ಹೊಳೆಯಾಚೆಗಿನ ಬಡಾಕೆರೆ ಮತ್ತು ಸುತ್ತ ಮುತ್ತಲಿನ ಶೇಂದಿ ತೆಗೆಯುವ ಮೂರ್ತೆದಾರರೆಲ್ಲಾ  ಅಲ್ಲಿಗೇ ಶೇಂದಿ ತಂದು, ಅಲ್ಲಿ ಬೇರೊಂದು ಟೆಂಪೋ ಬಂದು ಅದೆಲ್ಲವನ್ನೂ ಕೊಂಡೊಯ್ಯುವುದು ಮಾಮೂಲಿ. ಒಮ್ಮೆ ದೋಣಿ ಆಚೆ ದಡದಿಂದ ಈಚೆ ದಡಕ್ಕೆ ಬಂತೆಂದರೆ, ಹತ್ತು ಹನ್ನೆರಡು ಮಂದಿ ಶೇಂದಿಯನ್ನು ದೊಡ್ಡ ಗಡಿಗೆಯಲ್ಲಿಟ್ಟು ತರುತ್ತಿದ್ದರು. ಅದರ ಸೊಬಗನ್ನು ನೋಡುವುದೇ ಆಗ ಒಂದು ಚೆಂದ. ಹಾಗೆ ಅವರು ಹೊತ್ತು ಬರುವ ದಾರಿಯ ಬದಿಯಲ್ಲೇ ನಮ್ಮ ಈ ಮಾಲಿಂಗನ ಚೌರದಂಗಡಿ ಇರುವುದು. ನಾನು ’ಕೂದಲು ಬೇಕು’ ಎಂದು ಬೊಬ್ಬೆ ಹಾಕಿ ಹೊರ ಜಿಗಿಯುವುದುಕ್ಕೂ, ಎದುರಿನಿಂದ ಯಾರೋ ಶೇಂದಿ ಹೊತ್ತು ಬರುವುದಕ್ಕೂ ಸರಿ ಹೋಯಿತು. ನಾನು ದೊಪ್ಪನೇ ಅವರನ್ನು ಹಾದೆ.(ಬಿದ್ದೆ?). ಅವರ ತಲೆ ಮೇಲಿದ್ದ ಶೇಂದಿಯ ಗಡಿಗೆ ಆವರ ಆಯದಿಂದ ತಪ್ಪಿ ದೊಪ್ಪನೆ ನನ್ನ ಮೇಲೆ ಬಿದ್ದು ಒಡೆದೇ ಹೋಯ್ತು!!. ಗ್ರಹಚಾರ, ನನ್ನ ಮೈ ಪೂರ್ತಿ ಶೇಂದಿಯ ಅಭಿಷೇಕ. ಕತೆ ಮುಗಿಯಿತು ಎಂಬಷ್ಟರಲ್ಲಿ ಆ ಶೇಂದಿ ತಂದ ದ್ರಢಕಾಯದ ವ್ಯಕ್ತಿ, ನೇರವಾಗಿ ನನ್ನ ಜುಟ್ಟಿಗೇ ಕೈ ಹಾಕಿ, ಎತ್ತಿ ಬಿಟ್ಟಿದ್ದ!. ಅಷ್ಟರಲ್ಲಿ ತನ್ನ ಅಂಗಡಿಯಿಂದ ಹೊರಬಂದ ಮಾಲಿಂಗ, ’ಅಯ್ಯೋ, ಈ ಮಾಣಿಗೆ ಎಂತಾ ಆಪ್ದು ಮಾರ್ರೆ" ಎನ್ನುತ್ತಾ ನನ್ನ ಕೈ ಹಿಡಿದೆಳೆದುಕೊಂಡೇ ಒಳ ಹೋದ. ಶೇಂದಿಯವ ಮುಂದೆ ಏನೆಂದುಕೊಂಡನೊ ಏನು ಮಾಡಿದನೋ ನನಗಂತೂ ಗೊತ್ತಿಲ್ಲ. ಹಾಗೆ ಎಳದುಕೊಂಡು ಹೋದ ಮಾಲಿಂಗ, ಕುರ್ಚಿಯ ಮೇಲೆ ಹಾಕಿದ್ದ ಸಿಂಹಾಸನದಲ್ಲಿ ನನ್ನನ್ನು ಕುಳ್ಳಿರಿಸಿಯೇ ಬಿಟ್ಟ. ನಿನಗಿವತ್ತು ಮಾಡ್‌ಸ್ತೆ ಎಂದವನೇ, ನನ್ನ ಅಪ್ಪನಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ, ನಿರ್ದಾಕ್ಷಿಣ್ಯವಾಗಿ ತನ್ನ ಕತ್ತರಿಯನ್ನು ಹೇಗೆ ಬೇಕೋ ಹಾಗೆ ನನ್ನ ತಲೆಯ ಮೇಲೆ ಓಡಿಸಿ ಬಿಡ್ಡ. ಕ್ಷಣಾರ್ಧದಲ್ಲಿ ಸಪ್ತ ವರ್ಷಗಳಿಂದ  ಜತನದಿಂದ ಕಾದು ಕೊಂಡು ಬಂದಿದ್ದ ಕೂದಲು ಧರೆಗುರುಳಿಯಾಗಿತ್ತು!. ಸೆಲೂನಿನ ಒಳಗೆ ಶೇಂದಿಯ ವಾಸನೆಯ ನಡುವೆ, ಕೂದಲು ಬುಡ ಕಡಿದ ಮರದಂತೆ ಬೀಳುತ್ತಿದ್ದರೆ, ಮಾಲಿಂಗ ಈ ಹಿಂದೆ ಆದ ಇಂತಾದ್ದೇ ಅನುಭವಗಳ ಮೂಟೆಯನ್ನು ಬಿಚ್ಚಿ ಬಿಚ್ಚಿ ಇಡುತ್ತಿದ್ದ. ಅಂತೂ ಜುಟ್ಟಣ್ಣ ಎಂಬ ನನ್ನ ನಾಮಧೇಯಕ್ಕೆ ಕತ್ತರಿ ಬಿದ್ದಿತ್ತು. ಆದರೆ ಈ ಗಡಿಬಿಡಿಯಲ್ಲಿ ಶೇಂದಿಯವನಿಗೆ ಹಾದ ಪರಿಣಾಮವಾಗಿ ಮತ್ತು ಕೂದಲನ್ನೂ ಕತ್ತರಿಸಿಕೊಂಡಿದ್ದ ಕಾರಣದಿಂದ ನಾನು ಸಂಪೂರ್ಣ ಅಶುದ್ಧನಾಗಿದ್ದೆ(!?). ಕೂದಲು ಕತ್ತರಿಸಿದ ತಲೆಯನ್ನ ಎತ್ತಲೂ ನನಗೆ ನಾಚಿಕೆ. ಕತ್ತರಿಸಿಕೊಂಡು ಮಾಲಿಂಗನ ಅಂಗಡಿಯಿಂದ ಹೊರ ಬಿದ್ದರೆ ಎಲ್ಲರೂ ನನ್ನನ್ನೇ ಅತ್ಯಾಚಾರ ಮಾಡಿ ಹೊರಬಂದ ಆರೋಪಿಯನ್ನು ನೋಡಿದಂತೆ ನೋಡಿದರೆ ಹೇಗಾಗಿರಬೇಡ??. ತಲೆ ತಗ್ಗಿಸಿಯೇ ಮಾಲಿಂಗನ ಅಂಗಡಿಯಿಂದ ಕಾಲಿಗೆ ಬುದ್ದಿ ಹೇಳಿದವ, ಮತ್ತೆ ನಿಂತದ್ದು ಮನೆಯ ಅಂಗಳದಲ್ಲಿಯೇ. ನಮ್ಮ ಗಾಡಿ ಬಹುಶ: ಮನೆಯೊಳಗೇ ನಿಲ್ಲುತ್ತಿತ್ತೇನೋ......ಅಂಗಳದಲ್ಲಿಯೇ ಇದ್ದ ಅಮ್ಮ ಬ್ರೇಕ್ ಹಾಕಿ, ’ಹಾಗೆ ಬಚ್ಚಲಿಗೆ ಹೋಗು’ ಎಂದವಳೇ, ಬಚ್ಚಲಲ್ಲಿ ನಿಲ್ಲಿಸಿ, ಬಟ್ಟೆ ಹಾಕಿರುವಂತೆಯೇ ದೊಪ ದೊಪನೇ ಕೊಡಗಟ್ಟಲೇ ನೀರು ಸುರಿದು ನನ್ನ ಮೈಲಿಗೆಯನ್ನು ತೊಳೆದೇ ಬಿಟ್ಟಳು. ಅಂತೂ ನಾನು ಮಡಿಯಾಗಿದ್ದೆ. ಆದರೆ ಆ ಜುಟ್ಟಿಲ್ಲದ ಅಣ್ಣನಾಗಿ ಹೊರ ಬರಲೇ ನನಗೆ ಮುಜುಗುರವಾಗುತ್ತಿತ್ತು. ಮೂರು ದಿನ ಮನೆಯಿಂದ ಹೊರಬರಲೇ ಇಲ್ಲ. ನಮ್ಮನೆಗೇ ಬಂದವರೆಲ್ಲರಿಗೂ ಇಂದು ಒಂದು ಹೊಸ ತಮಾಷೆಯ ವಿಷಯ ಸಿಕ್ಕಿತ್ತು. ’ಜುಟ್ಟಣ್ಣ’ ಹೋಗಿ "ಕಳ್ಳಣ್ಣ" (ಕಳ್ಳು ಅಂದರೆ ಕುಂದಾಪುರ ಕನ್ನಡದಲ್ಲಿ ಶೇಂದಿ) ಆಗಿ ಬಿಟ್ಟಿದ್ದೆ.
ಇಂದು ಮಾಲಿಂಗನೂ ಇಲ್ಲ. ಆ ರೀತಿಯಲ್ಲಿ ಶೇಂದಿ ಹೊತ್ತು ತರುವ ಮೂರ್ತೆದಾರರೂ ಇಲ್ಲ. ಸೆಲೂನಿನ ಅಂಗಡಿಯವನಿಗೂ ಊರ ಜನರಿಗೂ ಅಂಥ ಬಾಂಧವ್ಯವೂ ಇಲ್ಲ. ಆದರೂ ಈ ನೆನಪುಗಳು ಮಾಸುವುದೇ ಇಲ್ಲ.

**********


4 comments:

  1. tumba chennagi odisikondu hoyitu,,nanagoo nanna balyada gatanegalu nenapaadavu..Dhanyavadagalu :)

    ReplyDelete
  2. ನಿಮ್ಮ ಬರವಣಿಯ ಶೈಲಿ ತುಂಬಾನೆ ಚೆನ್ನಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಯಿತು....ಅಂತೂ ಜುಟ್ಟಣ್ಣ ಕಳ್ಳುಣ್ಣ...ಆದ!ಹುಂ, ನಿಜ ಆ ಬಾಲ್ಯದ ಸವಿ ದಿನಗಳ ನೆನಪು ಜೇನಿನಷ್ಟೇ ಸಿಹಿ!

    ReplyDelete
  3. ಸೆಲೂನ್ ಶಾಪ್ ಒಂದು ರೀತಿಯ ಅಂದಿನ ಟಿವಿ ಮಾಧ್ಯಮಗಳೇ..ಊರು, ಕೇರಿಯ ಎಲ್ಲ ವಿಷಯಗಳು ಅಲ್ಲಿ ಒರಳಿಗೆ ಸಿಕ್ಕ ಕೊಬ್ಬರಿಯ ತರಹ ಆಗಿ ಬಿಡುತ್ತದೆ.ಇಂದಿನ ನಾಗರೀಕ (?) ಸಲೂನ್ ಹೋಗಿ ಬ್ಯೂಟಿ ಪಾರ್ಲರ್ ನಲ್ಲಿ ಆ ದಿನಗಳ ಗಮ್ಮತ್ತು ಇರುವುದಿಲ್ಲ...ನಿಮ್ಮ ಅನುಭವ ಬಲು ಸುಂದರವಾಗಿ ಮೂಡಿ ಬಂದಿದೆ...ಆ ಬಾಲ್ಯದ ದಿನಗಳ ಇಂಪು ಕಂಪು, ಅದನ್ನು ನೆನೆದಾಗ (ಮರೆತಿದ್ದರೆ ತಾನೇ) ಸಿಗುವ ಮಜವೇ ಬೇರೆ..ಸುಂದರ ಬಾಲ್ಯದ ಪಯಣ ಖುಷಿ ಕೊಟ್ಟಿತು..ಅಭಿನಂದನೆಗಳು ಸರ್...

    ReplyDelete
  4. ಪುಟ್ಟ ಬಾಲನ ಗೊಂದಲ, ಗಾಬರಿ, ಜುಟ್ಟು ಕಳಕೊಂಡ ನೋವು, ನಂತರದ ಹೊಸ ಹೆಸರಿನ ಅವಮಾನ... ಎಲ್ಲವನ್ನೂ ನಿರ್ಲಿಪ್ತವಾಗಿಯೂ ಆಪ್ತವಾಗುವ ಹಾಗೆ ಬರೆದ ನಿಮ್ಮ ಶೈಲಿಗೆ ಶರಣು.

    ReplyDelete