ನನ್ನ ಮೆಚ್ಚಿನ ಲೇಖಕ, ನಾ ದಾಮೋದರ ಶೆಟ್ಟಿಯವರ ಕಾದಂಬರಿ, "ಸರದಿ"ಯಾ ಬಗ್ಗೆ ನಾನು
ಹಿಂದೊಮ್ಮೆ ಬರೆದಿದ್ದ, ವಿಮರ್ಶೆಯನ್ನು ಮತ್ತೊಮ್ಮೆ ಇಲ್ಲಿ ನೀಡುತ್ತಿದ್ದೇನೆ.
ಎಲ್ಲೆಲ್ಲೋ ಹಂಚಿಹೋಗಿದ್ದ ನನ್ನ ಬರಹಗಳನ್ನು ಒಂದೆಡೆ ದಾಖಲಿಸುವ ಪ್ರಯತ್ನದ ಒಂದು ಭಾಗ
ಮತ್ತು ಆಸಕ್ತರಿಗೆ ಮಗದೊಮ್ಮೆ ಓದುವ ಅವಕಾಶವನ್ನಾಗಿ ನಾನು ಮಾಡುವ "ರಗಳೆಗಳನ್ನು"
ದಯವಿಟ್ಟು ಸಹಿಸಿಕೊಳ್ಳಿ. ನಿಮ್ಮ ಅನಿಸಿಕೆಗಳು ಮತ್ತೆ ಮತ್ತೆ ಹುಮ್ಮಸ್ಸು
ನೀಡುತ್ತವೆ.....ಇನ್ನು ನೀವುಂಟು, ನನ್ನ ಈ ಲೇಖನವುಂಟು.....
ಮುನ್ನುಡಿಯಲ್ಲಿ ವಿವೇಕ ರೈಯವರು ಹೇಳಿದಂತೆ ’ಕುಟುಂಬ’ ಎಂಬ ಸಂಸ್ಥೆಯ ಮೂಲಭೂತ ತಿರುಳಾದ ’ಮದುವೆ’ ಕೂಡ ಕೆಲಸದ ನೆಲೆಗಳೊಂದಿಗೆ ಸಂಬಂಧ ಹೊಂದಿದ್ದು ಜಾತಿ, ಧರ್ಮ, ಭಾಷೆಗಳನ್ನು ಮೀರಿ ಚಲಿಸುತ್ತದೆ. ಕಥೆಗೆ ನಾಯಕನಿಗಿಂತ, ಅವನ ಹಠಮಾರಿ ಪ್ರವೃತ್ತಿಗಿಂತ, ಕಥೆಗಾರನ ತಾಯಿ, ನಾಯಕ-ನಾಯಕಿ ಇಬ್ಬರ ಪಾತ್ರಗಳಲ್ಲೂ ದ್ವಿಪಾತ್ರಿಯಾದಂತೆ ಭಾಸವಾಗುತ್ತದೆ!. ತನ್ನ ಹಠಮಾರಿತನದ ಪೃವೃತ್ತಿಯಿಂದಾಗಿ, ರಘು ಎಂಬ ಪಾತ್ರ, ಬದುಕಿನ ಆರಂಭಿಕ ವಿದ್ಯಾಭ್ಯಾಸದಿಂದ ಕುಟುಂಬ ವ್ಯವಸ್ಥೆಯ ತನಕದ ಮದುವೆಯ ತನಕವೂ, ಗೆದ್ದ ಭ್ರಮೆಯಲ್ಲಿ ಸೋತದ್ದು ಅವನರಿವಿಗೆ ಬಾರದೇ, ಕೊನೆಗೂ ಮುಂದೊಂದು ದಿನ ಅವನೂ ದೊಡ್ಡಮ್ಮ, ತಾಯಿ ನಳಿನಿಯ ಜೊತೆ, ಬದುಕಿನ ಅನಿವಾರ್ಯ ಹಂತದ ’ಸರದಿ’ಯಲ್ಲಿ ನಿಲ್ಲಬೇಕಾದವನೇ ಮತ್ತು ಆಗ ಯಾವ ಹಠಮಾರಿತನವವೂ ಕೆಲಸ ಮಾಡಲಾರದೆಂಬುದನ್ನು ಲೇಖಕರು ಮಾರ್ಮಿಕವಾಗಿ ತಿಳಿ ಹೇಳುತ್ತಾರೆ.
ಕಾದಂಬರಿಯ ನಳಿನಿಯ ಪಾತ್ರ ಒಂದೆಡೆ ಭಾರತೀಯತೆಯನ್ನು ಪೃತಿಬಿಂಬಿಸುವಂತೆ ಕಂಡುಬಂದರೂ, ನನ್ನ ದೃಷ್ಟಿಯಲ್ಲಿ ಆಕೆ ಭಾರತೀಯ ತಾಯಿಯ ದುಗುಡದ ಸಂಕೇತವಾಗಿ ಪ್ರತಿನಿಧಿಸಲ್ಪಡುತ್ತಾಳೆ. ತನ್ನ ಮಗನ ಹಠಮಾರಿ ಧೋರಣೆಯಿಂದ ಆರಂಭವಾಗುವ ಆಕೆಯ ಕಳವಳ, ಪರೀಕ್ಷೆಯಲ್ಲಿ ಕೇವಲ ಪೃಥಮ ದರ್ಜೆಯಲ್ಲಿ ಪಾಸಾದ ಮಗನನ್ನು ಏನೋ ಮಾಡಹೊರಡುವ ಆರಂಭಿಕ ಯತ್ನಕ್ಕೆ ಬಿದ್ದ ಮೊದಲ ಏಟಾಗಿ ಆಕೆ ಮಾನಸಿಕ ಜರ್ಝರತೆಗೆ ಸಿಲುಕಿಕೊಳ್ಳುತ್ತಾಳೆ. ಅದೇ ಆಕೆಯ ನಿರೀಕ್ಷೆಯ ಬುಡಕ್ಕೆ ಬಿದ್ದ ಮೊದಲ ಏಟು. ಮಗ ಮುಂದೆ ಹೇಗೋ, ತಂದೆ ಗೊತ್ತು ಮಾಡಿದ ಕೆಲಸವನ್ನು ತಿರಸ್ಕರಿಸುವ ಪರಿ ಇಂದಿನ ಯುವ ಜನಾಂಗವನ್ನೇ ತನ್ನ ಕಾಲಮೇಲೆ ತಾನೇ ನಿಲ್ಲಬೇಕೆಂಬ ಹಠಮಾರಿತನಕ್ಕಿಂತಲೂ, ರಘುವಿನೊಳಗೆ ಎಲ್ಲೋ ಹುದುಗಿದ್ದ ಪಾಶ್ಚಾತ್ಯ ರಿವಾಜನ್ನು ಸಂಕೇತಿಸುತ್ತದೆ ಮತ್ತು ಅಂತಹ ಒಳಾರ್ಥವನ್ನು ಲೇಖಕರು ಕಾದಂಬರಿಯ ಆರಂಭದಿಂದಲೇ ಸೂಚಿಸುತ್ತಾ ಹೋಗುತ್ತಾರೆ. ಕಥೆ ಮುಂದುವರಿಯುತ್ತದೆ. ಮರ್ಲಿನ್ ಎಂಬ ಜರ್ಮನಿಯ ಒಂದು ಮಗುವಿನ ತಾಯಿಯನ್ನು ಜರ್ಮನಿಯಲ್ಲಿರುವ ತನ್ನ ಬಾಸ್ ಗುಪ್ತಾ ತನ್ನ ಕುತ್ತಿಗೆಗೆ ’ವ್ಯವಸ್ಥಿತ’ವಾಗಿ ತಗುಲಿಸುವ ಒಳಾರ್ಥ ಅರಿವಾಗದೇ, ಅದು ತನ್ನ ಮೇಲೆ ಬಾಸ್ ಇಟ್ಟ ವಿಶ್ವಾಸವೆಂದೇ ಭಾವಿಸುವ ರಘು, ಮುಂದೆ ಸಾಂದರ್ಭಿಕವಾಗಿ ಬಾಸ್‌ನ್ನು ತನ್ನ ಸ್ನೇಹಿತ ರಾಜಾರಾಮ್ ನಗ್ನಗೊಳಿಸುತ್ತಾ ಹೋಗುವಾಗ, ಅದನ್ನು ಅರಗಿಸಿಕೊಳ್ಳಲು ’ಇಷ್ಟ’ಪಡುವುದಿಲ್ಲ. ಈ ಹಂತದಲ್ಲಿ ಭಾರತೀಯ ರಕ್ತ, ಪ್ರೀತಿ-ಪ್ರೇಮ-ಪೃಣಯವನ್ನು ಎಷ್ಟು ಗೌರವಿಸುತ್ತದೆ, ನಂಬಿಕೆಯನ್ನು ಎಂದೂ ಕಳೆದುಕೊಳ್ಳಬಾರದೆಂಬ ಭಾರತೀಯತೆ ಎಂತ ಹಠಮಾರಿಯಲ್ಲು ಇರಬಹುದು ಎಂಬುದನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಇಡೀ ಕಾದಂಬರಿಯಲ್ಲಿ ಜರ್ಮನಿ ಮತ್ತು ಭಾರತದ ಸಂಸ್ಕಾರ, ಸಂಸ್ಕೃತಿಗಳು ತಾಕಲಾಡುತ್ತಿರುತ್ತವೆ. ಮರ್ಲಿನ್‌ಳ ಸಿಗರೇಟು ಚಟ, ಮುಂದೆ ರಘುವಿಗೆ ಕುಡಿತವನ್ನು ಯಾವುದೇ ತಡೆಯಿಲ್ಲದೇ ಕಲಿಸುವ ಪರಿ, ರಘು ಮದುವೆಯ ಕಾರಣದಿಂದ ಜಾನ್ ರಘು ವಾದರೂ ಹಿಂದೂ ಸಂಪ್ರದಾಯದ ಮದುವೆಯನ್ನು ಕಾಟಾಚಾರದ ಶಾಸ್ತ್ರದಂತೆ ಮಾಡಿ, ’ಮೀನಾಕ್ಸಿ’ ಎ೦ದು ತನ್ನ ಹೆಸರನ್ನು ಉಚ್ಚರಿಸಿಕೊಂಡ ಮರ್ಲಿನ್ ಮರುಕ್ಷಣದಲ್ಲಿಯೇ ಸೀರೆ, ತಾಳಿ ಕಿತ್ತೆಸೆದದ್ದನ್ನು ರಘು ಸಹಿಸಿಕೊಂಡ ಪರಿ, ಭಾರತೀಯರು, ಮುಖ್ಯವಾಗಿ ಕನ್ನಡಿಗರು ಎಲ್ಲದಕ್ಕೂ ಉದಾರರು ಎಂಬ ಮಾತಿಗೆ ಪುಷ್ಠಿ ಕೊಡುತ್ತದೆ. ಹಿಟ್ಲರ್‌ನ ಬಗ್ಗೆ ಏನೂ ಮಾತಾಡದ ಜರ್ಮನೀಯರ ಪರಿಯಿಂದ ಭೂತದ ದುರ್ಘಟನೆಗೆ ವರ್ತಮಾನದ ಲೇಪ ಹಚ್ಚಿ ಅದೇ ಜಾಡಿನಲ್ಲಿ ಅನವಶ್ಯಕ ಚರ್ಚೆ ಮಾಡದವರು ತಾವೆಂಬ ಭ್ರಮೆ ಸೃಷ್ಟಿಸುವಲ್ಲಿ ಅಲ್ಲಿಯ ಪ್ರಜೆಗಳು ನಿಷ್ಣಾತರು ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಲೇಖಕರು ಹೇಳಹೊರಟ ವಿಷಯ ಮತ್ತು ವಿಚಾರ, ಅವರವರ ಭಾವದಲ್ಲಿ ಚಿಂತನೆಗೆ ಹಚ್ಚುತ್ತದೆ ಎಂಬಲ್ಲಿಗೆ ಕಾದ೦ಬರಿಕಾರನ ಚಾಣಾಕ್ಷತೆ ಕಥೆಗೆ ಯಾವುದೇ ವಿಪರೀತ ತಿರುವು ನೀಡದೆ, ವಸ್ತುವನ್ನು ವಿಶ್ಲೇಷಿಸುವಲ್ಲಿ ಯಶಸ್ವಿಯಾಗುತ್ತದೆ. ಕೊನೆಗೂ ತನ್ನ ಇಚ್ಚೆಗೆ ವಿರುದ್ದವಾಗಿ, ತನ್ನ ಹಠಮಾರಿ ಧೋರಣೆಗಿಂತ ಭಿನ್ನವಾಗಿ, ದೈಹಿಕ ವಾಂಛೆ ಮತ್ತು ’ಮತ್ತು’ ಬರಿಸುವ ಮರ್ಲಿನ್‌ಳಿಗೆ ದಾಸನಾಗುವ ಪರಿಯನ್ನು ಮಾರ್ಮಿಕವಾಗಿ ಚಿತ್ರಿಸುವಾಗ ನಾದಾ ಅವರ ಲೇಖನಿಯ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಆದರೆ ಇಲ್ಲೆಲ್ಲೋ ಬೈರಪ್ಪನವರ ಕಾದಂಬರಿಯಲ್ಲಿ ಬರುವ ಗಂಡು- ಹೆಣ್ಣಿನ ಸಹಜ ದೈಹಿಕ ವಾಂಛೆಯ ನಿರೂಪಣೆಯನ್ನು ನಾದಾ ಅನುಸರಿಸದ್ದಾರೇನೋ ಅನಿಸುತ್ತದೆ. ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳು ಹೇಗೆ ತಾಕಲಾಡುತ್ತವೆ, ರಘು- ಮರ್ಲಿನ್-ನಳಿನಿ-ಜಾನಕಮ್ಮ-ಸಿದ್ದಾರ್ಥ ಮತ್ತವನ ಗುಜಾರಾಥಿ ವಧುವಿನ ಮೂಲಕ, ಭಾರತೀಯತೆಯಲ್ಲಿನ ಪ್ರಾದೇಶಿಕತೆ ಮತ್ತು ಭಾರತೀಯತೆಗೆ ಜೊತೆಗೆ ಪಾಶ್ಚಾತ್ಯ ಶೈಲಿ ಹೇಗೆ ಸಂಘರ್ಷಮಯವಾಗುತ್ತವೆ, ಭಾರತೀಯ ಮನೋಸ್ಥಿತಿ ಪ್ರಾದೇಶಿಕ ಚಿಂತನೆಗಳನ್ನು(ಅಥವಾ ಸಂಪ್ರದಾಯಗಳನ್ನು) ಅರಗಿಸಿಕೊಂಡಷ್ಟು ಸರಳವಾಗಿ ವಿದೇಶಿ ಚಿಂತನೆಗಳನ್ನು ಸ್ವೀಕರಿಸಲು ಹಿಂದೇಟು ಹಾಕುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ ಮತ್ತು ಅದೂ ನಳಿನಿ, ಜಾನಕಮ್ಮ ಸ್ವೀಕರಿಸಿದ ರೀತಿಯೊಂದಿಗೆ ವೇದ್ಯವಾಗುತ್ತದೆ. ಗುಜರಾಥಿ ಹುಡುಗಿಯನ್ನು ಮದುವೆಯಾಗಿ ಸಿದ್ದಾರ್ಥ ಅಮೆರಿಕಾಕ್ಕೆ ಹಾರುವುದನ್ನು ತಡೆಯದ ಇವರ ಮಾನಸಿಕತೆ, ರಘುವನ್ನು ತಡೆಯುವ ನಿಜವಾದ ಉದ್ದೇಶ ಪಾಶ್ಚಾತ್ಯ ಹುಡುಗಿಯ ಜೊತೆಗೆ ಅವನು ಅಲ್ಲಿಯೇ ಬದುಕನ್ನು ಹಂಚಿಕೊಳ್ಳುವುದನ್ನು ವಿರೋಧಿಸುವುದಷ್ಟೇ ಆಗಿರುತ್ತದೆ ಎಂಬ ಸಂದೇಶವನ್ನೂ ಕೊಡುತ್ತದೆ. ಅಂದರೆ ರಘು ಬಹುಶ: ನಳಿನಿ ಹುಡುಕಿದ ನಾಲ್ಕು ಹುಡುಗಿಯರಲ್ಲಿ ಒಬ್ಬಳನ್ನು ವರಿಸಿ, ವೃತ್ತಿನಿಮಿತ್ತವಾಗಿ ವಿದೇಶಕ್ಕೆ, ಬೇಕಿದ್ದರೆ ಜರ್ಮನಿಗೇ ಹೋಗಿದ್ದರೂ ಭಾರತೀಯ ತಾಯಿ ವಿರೋಧಿಸುತ್ತಿರಲಿಲ್ಲವಾಗಿತ್ತೇನೋ ಎಂದು ಅನಿಸುವಲ್ಲಿಗೆ, ಇಲ್ಲಿ ಭಾರತೀಯ ಸಂಬಂಧಗಳು ಜಾಗತೀಕರಣಕ್ಕೆ ತೆರೆದುಕೊಳ್ಳುವಲ್ಲಿನ ವೈರುಧ್ಯದ ತಾಕಲಾಟಕ್ಕೆ ನಿದರ್ಶನವಾಗುತ್ತದೆ.
’ಸರದಿ’ಯಲ್ಲಿ ಬರುವ ಬಹುತೇಕ ಪಾತ್ರಗಳು ತಮ್ಮದೇ ಒಳನೋಟಗಳಿಂದ ಗಮನ ಸೆಳೆಯುತ್ತವೆ. ರಘುವಿನ ಸ್ನೇಹಿತರಾದ ರಾಜಾರಮ್ ಮತ್ತು ಸಿದ್ದಾರ್ಥರ ರಘುವನ್ನು ಮರಳಿ ’ರಘು’ವನ್ನಾಗಿ ಮಾಡುವ ವಿಫಲ ಪ್ರಯತ್ನ, ಜಾನಕಮ್ಮ-ಕ್ರಷ್ಣರ ನೆರೆಮನೆಗೆ ಒದಗಿ ಬರುವ ಸ್ನೇಹಶೀಲ ವ್ಯಕ್ತಿತ್ವದಲ್ಲೂ ಕಂಡುಕೊಳ್ಳುವ ಒಳಬೇಗುದಿ, ರಘುವನ್ನು ಮದುವೆಯಾಗಲು ಒಪ್ಪಿದ ಹುಡುಗಿ ಅವನಿಗೇ ಫೋನಾಯಿಸಿ ಇನ್ನೂ ಯಾವುದೇ ಆಶ್ವಾಸನೆ ಸಿಗದಿದ್ದಾಗಲೂ ಅವನು ನಿರಾಕರಿಸಿದಾಗ ದಂಗಾಗುವ ಭಾರತೀಯ ವಧುವಿನ ನೈಜಪರಿ, ನೇರವಾಗಿ ಎದುರಿಗೆ ಬರದೇ ಕಥೆಯಲ್ಲೂ, ಮರ್ಲಿನ್‌ಳಲ್ಲೂ ಕಲ್ಪನೆಯ (!) ವ್ಯಕ್ತಿಯಾಗಿಯೇ ಮರೆಯಾಗುವ ಭೋಪಾಲದ ಮುಖರ್ಜಿ, ತನ್ನ ಮಗುವನ್ನು ಕರುಣಿಸಿ ಅದಕ್ಕೊಂದು ಅಪ್ಪನನ್ನು ಕೊಟ್ಟು ಕೈತೊಳೆದುಕೊಳ್ಳುವ ಆಟವಾಡುವ ಗುಪ್ತಾ......ಎಲ್ಲರೂ ಸಮಾಜದ ಸುತ್ತಲಿನ ವ್ಯಕ್ತಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿನಿಧಿಸುತ್ತಾ ’ಒಹ್, ಹೌದಲ್ಲ’ ಎಂಬ ಭಾವನೆ ಹುಟ್ಟಿಸುತ್ತಾರೆ.
ಕೊನೆಯಲ್ಲಿ ಕೆಲವು ಪ್ರಶ್ನೆಗಳನ್ನು ಕಾದಂಬರಿ ಹುಟ್ಟುಹಾಕುತ್ತದೆ ಮತ್ತು ಅವು ನಿರುತ್ತರಿಗಳಾಗುತ್ತವೆ. ಹ್ಯಾರಿಸ್ ಎಂಬ ಮರ್ಲಿನ್‌ಳ ಮಗುವಿಗೆ ತಂದೆಯ ಅವಶ್ಯಕತೆಗಾಗಿ ರಘುವನ್ನು ಮರ್ಲಿನ್ ಬಯಸುತ್ತಾಳೆ ಎಂದರೆ ಅದು ಮತ್ತೆ ಆಕೆಯೊಳಗೆ ಹುಟ್ಟಿದ ಮಗುವಿಗೆ ತಂದೆ ಒಬ್ಬ, ಎಂತವನಾದರೂ ಇರಲೇಬೇಕು ಎಂಬ ಭಾರತೀಯ ಭಾವನೆ ಬಂದಂತೆ ’ಅಭಾಸ’ವೆನಿಸುತ್ತದೆ. ಅದಾಗಿಯೂ ಮದುವೆಯ ನಂತರ ಹ್ಯಾರಿಸ್, ರಘು-ಮರ್ಲಿನ್ ಜೊತೆಗಿರುವುದಿಲ್ಲ, ಬದಲಾಗಿ ಅಜ್ಜ-ಅಜ್ಜಿಯ ಜೊತೆಗಿರುತ್ತಾನೆ. ಭಾರತೀಯತೆಗೆ ವಿರುಧ್ಧವಾಗಿ ಮುಕ್ತ ಲೈಂಗಿಕತೆ ಜರ್ಮನಿಯ ಬೀದಿಬೀದಿಯಲ್ಲೂ ಕಂಡುಬರುವಾಗ,ನಳಿನಿಗೂ ಮತ್ತು ಒಂದು ಹಂತದಲ್ಲಿ ರಘುವಿಗೂ ಇರಿಸು ಮುರಿಸುಂಟಾದಾಗ, ಮರ್ಲಿನ್‌ಗೆ ರಘುವಿನ ಅನಿವಾರ್ಯತೆಯನ್ನು ಸೃಷ್ಟಿಸಲು ಇದ್ದ ಕಾರಣಗಳು, ಅಂದರೆ ರಘುವನ್ನೇ ಆಯ್ದುಕೊಳ್ಳಲು ಇರುವ ಅನಿವಾರ್ಯತೆ, ಸಮಂಜಸವಾಗಿ ಪುಷ್ಠೀಕರಣವಾಗಿಲ್ಲನಿಸುತ್ತದೆ. ಜರ್ಮನಿಯ ಒಳಹೊರಗನ್ನು ಮನಮುಟ್ಟುವಂತೆ ಚಿತ್ರಿಸಿದ್ದರೂ, ಅದು ಕಥೆಗೆ ಎಷ್ಟರ ಮಟ್ಟಿಗೆ ಪೂರಕ ಎಂಬ ಪ್ರಶ್ನೆ ಹುಟ್ಟಿಸುತ್ತದೆ.
ಮಂಗಳೂರು-ಬೆಂಗಳೂರು ಮುಗಿಸಿ ನೆರವಾಗಿ ಜರ್ಮನಿಗೆ ಹಾರುವ ಕಥಾನಕ, ಜಗತ್ತು ಇಂದು ಎಷ್ಟು ಸಂಕೀರ್ಣಗೊಂಡಿದೆ ಎಂಬುದನ್ನು ಸೂಚಿಸುತ್ತಾ, ಮಾನಸಿಕವಾಗಿ ಕುಗ್ಗಿಹೋದ ನಳಿನಿ, ಕೈಗೆ ಸಿಗಲಾರದ ಪ್ರೀತಿಯನ್ನು ಎಷ್ಟುಕಾಲ ಅಂತ ಹಿಡಿದಿಟ್ಟುಕೊಳ್ಳಬಹುದು ಎಂದುಕೊಳ್ಳುವಾಗ ಮನ ಕರಗುವಂತೆ ಮಾಡುತ್ತದೆ. ನಳಿನಿಯ ಕಾರಣದಿಂದಲೇ ದೊಡ್ಡಮ್ಮ ಅಭಯಾಶ್ರಮಕ್ಕೆ ಹೋದರು ಎಂಬಂತೆ ಮೊದಲು ಚಿತ್ರಿತವಾಗಿದ್ದರೂ, ಕೊನೆಗೆ ನಳಿನಿಯೂ ಅದೇ ಹಾದಿ ಹಿಡಿದಾಗಿನ ದೃಶ್ಯ ಕರುಳುಹಿಂಡುತ್ತದೆ! ಆಕೆಯ ಅಭಯಾಶ್ರಮದತ್ತ ಸಾಗುವ ಹೆಜ್ಜೆ, ಒಂದು ಕ್ಷಣ ನಾವೆಲ್ಲರೂ ಆ ’ಸರದಿ’ ಯಲ್ಲಿ ನಿಂತ ಭಾವನೆ ತರಿಸುತ್ತದೆ. ತಾಯಿಯ ಮನಸ್ಸಿನ ಅಕಳಂಕತೆಯನ್ನೂ ಅನಾವರಣಗೊಳಿಸುವ ನಾದಾ ಅವರ ಶೈಲಿ ಮೆಚ್ಚುವಂತೆ ಮಾಡುತ್ತದೆ. ನಳಿನಿ ಅಂದುಕೊಳ್ಳುತ್ತಾಳೆ-ನೆನಪಿಡಿ-ಮಗನ ವ್ಯಾಮೋಹದಿಂದಾಗಿ ಗಂಡನ ಆರೋಗ್ಯವನ್ನೂ ಕಡೆಗಣಿಸಿ ಗಂಡನ ನಿಧನಾನಂತರ ಊರಿಡೀ ಬೈಸಿಕೊಂಡ ತಾಯಿ, ದೊಡ್ಡಮ್ಮನನ್ನು ಅಭಯಾಶ್ರಮಕ್ಕೆ ಹೋಗಲು ಮಗನ ವ್ಯಾಮೋಹವೇ ಕಾರಣವಾದರೂ ಮುಂದೆ ಮಗನಿಗಾಗಿ ಅವಳೇ ಅಂದುಕೊಳ್ಳುವಂತೆ ಯಾವುದೋ ತಂದೆಯ ಮಗುವಿನ ಕುಂಡೆ ತೊಳೆದ ತಾಯಿ ಮತ್ತೂ ತಾನೇ ಸೋತು ಮಗನ ಹಿಂದೆ ಹೋಗಿ ಜರ್ಮನಿ ಸೇರಿ ಅಲ್ಲಿ ಮಾನಸಿಕವಾಗಿ ಪೂರ್ತಿ ಕುಗ್ಗಿ ಹೋಗಿ, ಅನಾರೋಗ್ಯದೊಂದಿಗೆ ಮರಳಿ ಭಾರತಕ್ಕೆ ಬಂದ ತಾಯಿ-ಕೊನೆಗೆ ಅಂದುಕೊಳ್ಳುತ್ತಾಳೆ: ಇದರಲ್ಲಿ ರಘುವಿನದೇ ಪೂರ್ತಿ ತಪ್ಪೆಂದು ಒಪ್ಪಿಕೊಳ್ಳಲಾಗುತ್ತಿಲ್ಲ;ಎರಡೂ ಕೈ ಸೆರಿದರೆ ತಾನೇ ಚಪ್ಪಾಳೆ ಎಂದು!! ಇದು ಭಾರತೀಯ ತಾಯಿ, ಕ್ಷಮೆಯಲ್ಲಿ ಭೂಮಿಗೆ ಸಮಾನಳು ಎಂಬುದನ್ನು ಘಂಟಾಘೋಷವಾಗಿ ಸಾರುವ ಪರಿ. ದಿನ ನಿತ್ಯ ನಾವು ನೋಡುತ್ತಿರುವ ಈ ತಾಯಿಯ ಗುಣ, ನಾದಾ ಅವರ ಲೇಖನಿಯಿಂದ ಹೊರಹೊಮ್ಮಿದಾಗ ಆಗುವ ಅನುಭೂತಿ , ಕಣ್ಣಿಂದುದುರುವ ಎರಡು ಹನಿಗಳನ್ನು ತಡೆಯಲಾಗದು ಎಂದಾದಾಗ, ಲೇಖಕನ ಶ್ರಮದ ಸಾರ್ಥಕ್ಯ ಗೆಲ್ಲುತ್ತದೆ.
ಕಾದ೦ಬರಿಯ ಬಗ್ಗೆ ಈಗಾಗಲೇ ಮಾತುಕತೆಗಳು ಆರಂಭವಾಗಿದ್ದು, ಜಾಗತೀಕರಣದ ಸವಾಲನ್ನು ಇಲ್ಲಿಗೆ ಎಳೆದು ತರಲಾಗುತ್ತಿದೆ. ಆದರೆ ಭಾರತೀಯತೆಯ ದ್ರಷ್ಡಿಕೋನದಿಂದ ನೋಡಿದರೆ, ಇಲ್ಲಿ ಜಾಗತೀಕರಣಕ್ಕಿಂತಲೂ ಭಾರತೀಯತೆಯ ಪ್ರತಿಪಾದನೆಗೆ ದೇಶ-ವಿದೇಶದ ಅಂತ:ದ್ರಷ್ಟಿಯಿಂದ ನೋಡಿದಾಗ ಆಗುವ ಭಿನ್ನ ಅನುಭವಗಳನ್ನು ಮನಮುಟ್ಟಿಸುತ್ತದೆ. ಅಲ್ಲಿಗೆ ಲೇಖಕರ ಅಭಿಪ್ರಾಯ ಹೇಗೇ ಇರಲಿ...ಓದುಗನಿಗೆ ಒಂದು ಉತ್ತಮ ಓದನ್ನು ಕೊಡುವಲ್ಲಿ ಕಾದಂಬರಿ ಯಶಸ್ವಿಯಾಗುತ್ತದೆ.
ಕೊನೆಯವರೆಗೂ ಉಳಿದುಕೊಳ್ಳುವ ಒಂದೇ ಪ್ರಶ್ನೆ- ಲೇಖಕರು ಸಂಭಾಷಣೆಗಳನ್ನು ಕಾದಂಬರಿಯ ನೆಲೆಯಲ್ಲಿ ಬರೆಯುವ ಬದಲಾಗಿ ನಾಟಕದಂತೆ ಬರೆದದ್ದು! ನಾಟಕ ಹಿನ್ನೆಲೆಯಿಂದ ಬಂದವರು ಅವರೆಂಬ ಸಮಜಾಯಿಷಿ ಇಲ್ಲಿ ಸಮಂಜಸವಲ್ಲ ಅನಿಸುತ್ತದೆ. ಏಕೆಂದರೆ ಇದು ಕಾದಂಬರಿ ಎಂಬ ಚೌಕಟ್ಟಿನಲ್ಲಿಯೇ ಬಂದ ಕೃತಿಯಾದಾಗ ಆ ಚೌಕಟ್ಟಿಗೆ ಒದಗಿಸಬಹುದಾದ ನ್ಯಾಯವೆಂದರೆ ಅಲ್ಲಿಯ ಎಲ್ಲವೂ ಈ ಚೌಕಟ್ಟಿನಲ್ಲಿಯೇ ಇರಬೆಕೆಂಬುದು.
ಒಟ್ಟಾರೆಯಾಗಿ ನಾದಾ ಅವರ ಬಹುಮುಖ ವ್ಯಕ್ತಿತ್ವದಿಂದ ಮೂಡಿದ ಉತ್ತಮ ಕಾದಂಬರಿ ಇದು ಎಂಬುದರಲ್ಲಿ ಎರಡು ಮಾತಿಲ್ಲ ಮತ್ತು ನಾವು ಅವರ ಮುಂದಿನ ಕೃತಿಗಾಗಿ ಕಾಯುವವರ ’ಸರದಿ’ಯಲ್ಲಿ ಉತ್ಸಾಹದಿಂದ ನಿಂತಿದ್ದೇವೆ.
ನಾದಾ ಅವರ ಕಾದಂಬರಿಯನ್ನು ಸರಿಯಾಗಿ ಗ್ರಹಿಸಿ ಬರೆದಿದ್ದೀರಿ.
ReplyDelete-ಸಂದೀಪ
ಕಥೆ, ಕಾದಂಬರಿಗಳನ್ನು ಓದುವ ತವಕ ಹೆಚ್ಚು ಮಾಡುವ ಇಂತಹ ಸುಂದರ ಪರಿಚಯ ಇಷ್ಟವಾಗುತ್ತದೆ...ಒಬ್ಬರು ಮೆಚ್ಚಿದ್ದನ್ನು ಮೆಚ್ಚಿದ ಅಂಶಗಳನ್ನು ಹೇಳುವ ಬಗೆ ಮನಸಿಗೆ ಹಾಯ್ ಎನ್ನುವ ಭಾವ ಕೊಡುತ್ತದೆ. ಸರ್ ಸುಂದರವಾಗಿದೆ ಲೇಖನದ ಪರಿ..ಅಭಿನಂದನೆಗಳು
ReplyDelete