Thursday, 2 January 2014

ಸ್ಮರಣಿಕಾ ಮಹಾತ್ಮೆ..


ಬಹಳ ಹಿಂದೆ ಬರೆದಿದ್ದ ಒಂದು ನಗೆ ಲೇಖನ ಇತ್ತೀಚೆಗೆ ಥಟ್ಟೆಂದು  ಕಣ್ಣಿಗೆ ಬಿತ್ತು.... ಅದನ್ನಿಲ್ಲಿ ಮರಳಿ ಪ್ರಕಟಿಸುತ್ತಿದ್ದೇನೆ..... 


ಸಭೆಸಮಾರಂಭಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವು ಸಾಹಿತ್ಯ ಸಂಬಂಧಿ ಹಿನ್ನೆಲೆಗಳಿಂದ ಇತ್ತೀಚೆಗೆ ಅನೇಕ ಸಭೆ ಸಮಾರಂಭಗಳಿಗೆ ಹೋಗುವ ತೆವಲು ನನಗೂ ಹಿಡಿದಿದೆ ಎಂಬುದು ನಿಸ್ಸಂಕೋಚದಿಂದ ಒಪ್ಪಿಕೊಳ್ಳಲೇ ಬೇಕಾದ ಮಾತು. ಕೆಲವು ಸಂದರ್ಭಗಳಲ್ಲಿ ಕರೆದು, ಕೆಲವು ಸಂದರ್ಭಗಳಲ್ಲಿ ಅಕಸ್ಮಾತ್ತಾಗಿ ( ಇನ್ನು ಕೆಲವೊಮ್ಮೆ ಬಯಸಿ??) ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಎಲ್ಲಿಯೂ ಸಲ್ಲದವನು ಸಲ್ಲುವ ಜಾಗಕ್ಕೆಂಬಂತೆ ಸಮಾರಂಭಗಳಿಗೆ ವಕ್ರಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿದೆ. ಎಲ್ಲಾ ಕಡೆಯಲ್ಲಿಯೂ ನೀವು ಬಯಸಲಿ, ಬಯಸದಿರಲಿ ಒದಗಿಬರುವ (ಸು?)ಯೋಗವೆಂದರೆ ಸ್ಮರಣಿಕೆಗಳನ್ನು ಸ್ವೀಕರಿಸುವುದು!!

ಇಂಥವರು ತಮ್ಮ ಬಿಡುವಿರದ ವೇಳೆಯಲ್ಲೂ ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ನಮ್ಮ ಕರೆಗೆ ಓಗೊಟ್ಟು ಬಂದು ಈ ಸಮಾರಂಭವನ್ನು ಚೆಂದಗಾಣಿಸಿಕೊಟ್ಟಿದ್ದಾರೆ ಎಂಬ ಎಂದಿನ ಧನ್ಯವಾದ ಸಮರ್ಪಣೆಯ ಹೇಳಿಕೆಯ ನಂತರ, ಅದಕ್ಕಾಗಿ ನಾವು ಇವರಿಗೆ ಸ್ಮರಣಿಕೆಯನ್ನು ಕೊಟ್ಟು ಅಭಿ-'ನಂದಿ'ಸುತ್ತೇವೆ ಎಂಬ ಘೋಷಣೆಯೊಂದಿಗೆ ಸ್ಮರಣಿಕೆ ಬೇಡವೆಂದರೂ ಮಡಿಲು ಸೇರಿಕೊಳ್ಳುತ್ತದೆ. ಬೇಡವೆಂದರೂ.....???. ಹೌದು! ಕೆಲವು ಸ್ಮರಣಿಕೆಗಳನ್ನು ಸ್ವೀಕರಿಸಿದ ನಂತರ ಈ ಬೇಡವೆಂಬ ಮನೋಸ್ಥಿತಿ ಹೆಚ್ಚಿನವರಿಗೆ ಬಂದರೆ ಆಶ್ಚರ್ಯವೇನೂ ಇಲ್ಲ ಬಿಡಿ.

ಇತ್ತೀಚೆಗೆ ಹಾಗೇ ಆಯ್ತ. ಪರಿಚಿತರೊಬ್ಬರು ಒಂದು ಕಾರ್ಯಕ್ರಮಕ್ಕೆ ಕರೆದಾಗ, ಸ್ನೇಹ ಮತ್ತು ಒತ್ತಾಯಗಳೆರಡೂ ಸೇರಿದ ಕಾರಣದಿಂದ ನಾನು ಒಪ್ಪಿಕೊಂಡೆ. ಘಂಟೆಗಟ್ಟಲೆ ಭಾಷಣದ ಭೀಷಣ ಸಭೆಯ ಬಳಿಕ ಎಂದಿನಂತೆ ಸ್ಮರಣಿಕೆಯ ನೀಡಿಕೆ ಆರಂಭವಾಯ್ತು. ವೇದಿಕೆಯಲ್ಲಿದ್ದ ಹತ್ತು ಹನ್ನೆರಡು ಜನರಿಗೂ ಸ್ಮರಣಿಕೆಗಳನ್ನು ನೀಡಲಾಯ್ತು. ದೊಡ್ಡ ಪೊಟ್ಟಣದಲ್ಲಿ ಬಣ್ಣ ಬಣ್ಣದ  ಮಿನುಗುವ ಪೇಪರ್‌ಗಳಿಂದ ಸುತ್ತಿದ ಸ್ಮರಣಿಕೆಗಳು ಕೈ ಸೇರಿದುವು. ಮನೆಗೆ ಬರುತ್ತಲೇ ಮನುಷ್ಯ ಸಹಜ ಕುತೂಹಲ! ಎಷ್ಟು ಬೇಗ ಒಡೆದು ನೋಡುತ್ತೇನೆಯೋ ಎಂಬ ಹಪಹಪಿ. ಮನೆಯೊಳಗೆ ಕಾಲಿಡುತ್ತಲೇ ಅರ್ಧಾಂಗಿಯ ಕೈಯಲ್ಲಿ ಗಂಧದ ಮಾಲೆ ತುರುಕಿ, ಬಣ್ಣದ ಪೇಪರ್‌ನ ಕವರನ್ನು ರಪರಪನೇ ಹರಿದೆಸೆದೆ-ಒಳಗೇನಿದಯೋ ಎಂಬ ಕುತೂಹಲದಿಂದ! ಸ್ಮರಣಿಕೆ ಹೊರಬಂದಾಗ ಒಮ್ಮೆ ಕಣ್ಣುಜ್ಜಿಕೊಂಡು ಎರಡೆರಡು ಬಾರಿ ನೋಡಿದೆ. ಅದು ನಾನು ಸಂಬಂಧಿಸಿದ ಸಂಘಟಕರಿಗೆ ಕೆಲವು ದಿನಗಳ ಹಿಂದಿನ ಸಭೆಯೊಂದರಲ್ಲಿ ನೀಡಿದ್ದ ಸ್ಮರಣಿಕೆಯಾಗಿತ್ತು!. ಆದರೆ ಅದರ ಮೇಲೆ ನಾನು ಹೆಸರನ್ನೂ ಬರೆದ ಹಾಗೆ ನನಗೆ ನೆನಪಾಗಿ ನೋಡಿದರೆ, ಅದರ ಮೇಲೆ ತಮ್ಮ ಹೆಸರಿನ ಸ್ಟಿಕ್ಕರನ್ನು ಅಂದವಾಗಿ ಮುದ್ರಿಸಿ, ಗಮ್‌ಟೇಪ್‌ನಿಂದ ಹಚ್ಚಿಟ್ಟಿದ್ದರು! ಆದರೂ ಕುತೂಹಲ ತಡೆಯಲಾರದೇ, ಆ ಟೇಪ್‌ನ್ನೂ ಹರಿದು ನೋಡಿದರೆ, ನನ್ನ ಅಸಲಿ ಹೆಸರು ಬರೆಯಿಸಿದ ಜಾಗದಲ್ಲಿ ನನ್ನ ಹೆಸರು ರಾರಾಜಿಸುತ್ತಿತ್ತು-ನನ್ನನ್ನೇ ಅಣಕಿಸುವಂತೆ!!. ಆ ಕ್ಷಣವೇ ನಿರ್ಧಾರ ಮಾಡಿದೆ ಇನ್ನು ಯಾರಿಗಾದರೂ ನಾನು ಸ್ಮರಣಿಕೆ ಕೊಟ್ಟಿದ್ದರೆ ಅಂತಹ ಸಂಘಟಕರ ಸಭೆಗೆ ಹೋಗಬಾರದೆಂದು!. ಅಥವಾ ನೀಡಿದ ಸ್ಮರಣಿಕೆಗೆ ತಪ್ಪಿಯೂ ಹೆಸರು ಬರೆಯಬಾರದೆಂದು.
ಹಾಗೆಂದುಕೊಂಡು ನಾನು ಯಾವುದೇ ಸಂಘಟಕರನ್ನು ದೂರುವುದಿಲ್ಲ ಬಿಡಿ. ಯಾಕೆಂದರೆ ಈ ತರದ ಸ್ಮರಣಿಕೆಗಳನ್ನು ಸ್ವೀಕರಿಸುವವರ ಪಾಡು ಸ್ವೀಕರಿಸಿದವರಿಗಷ್ಟೇ ಗೊತ್ತು!. ಈಗೀಗಂತೂ ನಗರ ಪ್ರದೇಶಗಳಲ್ಲಿ ಬೆಂಕಿಪೊಟ್ಟಣದಂತ ಮನೆಗಳೇ ಜಾಸ್ತಿ. ಸರ್ಕಾರದವರು ಕಾನೂನು ತರದಿದ್ದರೂ, ನಾವಿಬ್ಬರು ನಮಗೊಬ್ಬರೇ ಎಂಬ ತತ್ವಕ್ಕೆ ನಾವು ಯಾವಾಗಲೋ ಅಂಟಿಕೊಂಡಾಗಿದೆ. ಹಾಗಿದ್ದೂ ದಿನ ದೂಡುವುದೇ ದುಸ್ತರವಾಗಿರುವ ಕಾಲದಲ್ಲಿ, ಮನೆಯೊಳಗೆ ಈ ಸ್ಮರಣಿಕೆಗಳಿಗೆ ಒಂದಿಷ್ಟು ಸ್ಥಳಾವಕಾಶ ಒದಗಿಸುವುದು ಆಗದ ಮಾತೇ ಸರಿ. ಪರಿಚಿತ ಲೇಖಕಿಯೊಬ್ಬರು, ತನ್ನ ಮನೆಯ ಗ್ಯಾಸ್‌ಸ್ಟವ್, ಮಂಚದಡಿ, ಅಡುಗೆ ಕೋಣೆ, ದೇವರ ಕೋಣೆ, ಹಳೆ ಪೆಟ್ಟಿಗೆಗಳು ಕೊನೆಗೆ ಎಲ್ಲಾ ಮುಗಿದು ಬಚ್ಚಲು ಮನೆಯಲ್ಲೂ ಇಂತಹ ಸ್ಮರಣಿಕೆಗಳನ್ನು ತುಂಬಿಟ್ಟುಕೊಂಡು, ಇನ್ನು ಯಾರಾದರೂ ಸ್ಮರಣಿಕೆಗಳನ್ನು ಕೊಡದೇ ಇದ್ದರೆ ಸಾಕಪ್ಪಾ ಎಂದುಕೊಳ್ಳುತ್ತಿದ್ದುದನ್ನೂ ಕೇಳಿದ್ದೇನೆ. ಇನ್ನು ಕೆಲವೊಮ್ಮೆ ವೇದಿಕೆ ಬಳಕೆದಾರರು ಎಂಬ ವರ್ಗವೊಂದಿರುತ್ತದೆ. ಅವರಿಗಂತೂ ಯಾವುದೇ ಸಾಧನೆಯ ಹೊರತಾಗಿಯೂ ವೇದಿಕೆಯನ್ನು ಬಳಸಿಕೊಳ್ಳುವುದೊಂದೇ ಮೊದಲ ಮತ್ತು ಕೊನೆಯ ಅಜೆಂಡಾ. ನಗರ ಅಥವಾ ಊರಿನ ಯಾವುದೇ ಸ್ಥಳಗಳಲ್ಲಿ ಸಭೆಸಮಾರಂಭಗಳು ನಡೆಯುತ್ತಿದ್ದರೆ, ಅಲ್ಲಿ ವೇದಿಕೆಯ ಮೇಲೆ ಇವರು ರಾರಾಜಿಸುತ್ತಿರುತ್ತಾರೆ!. ಅವರ ಬಗ್ಗೆ ಎಲ್ಲೆಡೆಯಲ್ಲೂ ಹೇಳಿ ಹೇಳೀ ಸಾಕಾದ ಅದೇ ಗುಣಗಾನದೊಂದಿಗೆ ಮತ್ತೆ ಸ್ಮರಣಿಕೆಗಳನ್ನು ನೀಡಲಾಗುತ್ತದೆ. ಇಲ್ಲಿ ಇರುವ ಒಂದು ಉಪಯೋಗವೆಂದರೆ, ಇವರಿಗೆ ಸ್ಮರಣಿಕೆಯ ಅಂತಹಾ ಮೋಹ ಇರುವುದಿಲ್ಲ. ಹಾಗಾಗಿ, ಯಾವುದಾದರೂ ಸಬೆಯಲ್ಲಿ ಈ ಮೊದಲೇ ಹಂಚಲಾದ ಸ್ಮಣಿಕೆಯನ್ನು ಹಂಚಿದರೂ ಅವರೇನು ಬೇಸರಿಸಿಕೊಳ್ಳುವುದಿಲ್ಲ! ಹೇಗಿದ್ದರೂ ವೇದಿಕೆ ಬಳಕೆದಾರರು ಬಳಕೆದಾರರ ವೇದಿಕೆಗೆ ದೂರನ್ನಂತೂ ನೀಡಲಾರರಲ್ಲವೇ?. ಅವರಿಗೆ ತೋರಿಕೆಗೆ ಸ್ಮರಣಿಕೆ ಕೊಟ್ಟರೆ ಸಾಕು-ಅದೆಂತದ್ದಾದರೂ ಸರಿ!. ವೇದಿಕೆಯ ಮೇಲೆ ಮಾತ್ರ ಅವರಿಗೆ ಒಂದು ಖಾಯಂ ಜಾಗ-ಅದೂ ಮುಖ್ಯವಾದ ಜಾಗ- ಮತ್ತು ಮಾತಾಡಲು ಅವರಿಗೆ ಅವರು ಬಯಸಿದಷ್ಟು ಸಮಯ ಕೊಟ್ಟರೆ ಸಾಕು. ಕೊನೆಗೊಂದು ಮಾಮೂಲಿ ಸ್ಮರಣಿಕೆ! ಇಂತಹಾ ವೇದಿಕೆ ಬಳಕೆದಾರರ ಮನೆಯಲ್ಲಿ ಕೆಜಿಗಟ್ಟಲೇ ಸ್ಮರಣಿಕೆಗಳು ಇರುತ್ತವೆ. ಯಾವುದಾದರೂ ಸಂಘಟಕರು ಇವರಲ್ಲಿ ಅರ್ಧಬೆಲೆಗೆ ಕೇಳಿದರೂ ಸ್ಮರಣಿಕೆಗಳು ಸಿಕ್ಕಬಹುದೇನೋ!!

ಈ ಎಲ್ಲಾ   ಆವಾಂತರ ನೋಡಿ, ಅವುಗಳನ್ನು ಇಡಲು ಸ್ಥಳ ಇಲ್ಲದವರ ಪೇಚಾಟ ಕಂಡು, ಒಂದು ಆಲೋಚನೆಯೂ ಬರುತ್ತಿದೆ. ನಗರದ ಯಾವುದಾದರೂ ಒಂದು ಪ್ರದೇಶದಲ್ಲಿ 'ಬಾಡಿಗೆ ಸ್ಮರಣಿಕಾ ಗ್ಯಾಲರಿ'ಯೊಂದನ್ನು ತೆರೆದರೆ ಹೇಗೆ?  (ಬೇಕಿದ್ದರೆ ಅದಕ್ಕೆ 'ಸ್ಮರಣಿಕಾ' ಎಂದೂ ಹೆಸರಿಸಬಹುದೇನೋ).ಮನೆಯಲ್ಲಿ ಜಾಗ ಇಲ್ಲದ ಪ್ರಸಿದ್ದರು, ಸ್ವಘೋಷಿತ ಪ್ರಸಿದ್ದರು, ಸಭೆಸಮಾರಂಭಗಳಲ್ಲಿ ನಿಯಮಿತವಾಗಿ ಭಾಗವಹಿಸುವ ವೇದಿಕೆ ಬಳಕೆದಾರರು, ಸ್ಮರಣಿಕೆ ಸಿಗುತ್ತಲೇ ಈ ಗ್ಯಾಲರಿಯಲ್ಲಿ ಅದನ್ನಿಟ್ಟು, ಒಂದು ಸಣ್ಣ ಮೊತ್ತವನ್ನು ಬಾಡಿಗೆಯಾಗಿ ನೀಡಿದರೆ, ಅವರ ಸ್ಮರಣಿಕೆಗಳಿಗೆಂದೇ ಒಂದು ಜಾಗ ಕಾದಿರಿಸಿ (ಹೆಸರನ್ನೂ ಬರೆಸಿ), ಪ್ರದರ್ಶನಕ್ಕಿಟ್ಟರೆ, ಒಂದು ಸಣ್ಣ ವ್ಯವಾಹಾರವೂ ಆಗಬಹುದೇನೋ. ತಮಗೆ ಸಿಕ್ಕ ಸನ್ಮಾನ ಪತ್ರ, ಶಾಲು ಹಾಗೂ ಸ್ಮರಣಿಕೆಗಳನ್ನು ತಮಗೆ ಕಾದಿರಿಸಿದ ಜಾಗದಲ್ಲಿರಿಸಿ, ಹೂ ಹಣ್ಣುಗಳಂತಹ 'ನಶ್ವರ' ವಸ್ತುಗಳನ್ನು ಮಾತ್ರ ಮನೆಗೆ ಒಯ್ದರೆ 'ಸ್ಮರಣಿಕಾ ಸ್ಥಳ ಸಮಸ್ಯೆ'ಯಿಂದ ಮುಕ್ತರಾಗಬಹುದೇನೋ!. ಖಾಸಗಿ ಅಥವಾ ಸರಕಾರಿ ಸಂಸ್ಥೆಗಳು ಈ ಬಗ್ಗೆ ಯೋಚಿಸಿದರೆ, ನನಗೊಂದು ಸ್ಮರಣಿಕೆ ನೀಡುವಲ್ಲಿ ಮರೆಯದಿದ್ದರಾಯ್ತು!.

ಇನ್ನು ಕೆಲವರಿಗೆ ಸ್ಮರಣಿಕೆ ತೆಗೆದುಕೊಳ್ಳುವ ಗೀಳಿನ ಹಾಗೆಯೇ  ನೀಡುವ ಗೀಳೂ ಇರುತ್ತದೆ. ಇತ್ತೀಚೆಗೆ ಹಾಗೇ ಒಂದು ಘಟನೆ ನಡೆಯಿತು. ಒಂದು ಸಮಾರಂಭ ಆಯೋಜಿಸಿದವರಿಗೆ ಇದೇ ಹುಚ್ಚು. ಸರಿ, ಸಭೆ ಮುಕ್ತಾಯದ ಹಂತಕ್ಕೆ ಬಂದಿತ್ತು. ನಾನು ಕಾರ್ಯಕ್ರಮ ನಿರೂಪಿಸುತ್ತಿದ್ದೆ. ಸ್ಮರಣಿಕೆ ನೀಡಬೇಕಾದವರ ಪಟ್ಟಿ ಹಿಡಿದು ಹೆಸರು ಕೂಗಿದೆ. ವೇದಿಕೆಯಲ್ಲಿ ಆಸೀನರಾಗಿದ್ದ ಆಯೋಜಕರು, ನಡುವೆ ಮೈಕ್ ಮುಂದೆ ನಿಂತು ತಮಗೆ ವೇದಿಕೆಯ ಮುಂಬಾಗದಲ್ಲಿ ಕಾಣುತ್ತಿದ್ದ ಪರಿಚಿತರನ್ನೆಲ್ಲಾ ಕರೆದು ಸ್ಮರಣಿಕೆ ನೀಡಲಾರಂಭಿಸಿದರು!. ಪರಿಸ್ತಿತಿ ಎಷ್ಟು ಹಾಸ್ಯಾಸ್ಪದ ಅಗಿತ್ತು ಎಂದರೆ, ಬಳಿ ನಿಂತ ಓರ್ವ ಸ್ನೇಹಿತರು, ಯಾರಾದರೂ ಸ್ಮರಣಿಕೆ ಸಿಗದವರಿದ್ದರೆ, ಬಂದು ಪಡೆಯಬಹುದು ಎಂದೊಂದು ಅನೌನ್ಸ್ ಮಾಡಿಬಿಡಿ ಎಂದು ತಮಾಷೆಯಾಗಿ ಹೇಳಿ ಬಾಯಿ ಮುಚ್ಚುವುದಕ್ಕೂ, ವೇದಿಕೆಯಲ್ಲಿದ್ದ ಆಯೋಜಕರು ಹಾಗೇ ಹೇಳಿಬಿಡಬೇಕೆ!?. ಅಯ್ಯೋ ಎಂದುಕೊಂಡು ಹಣೆ ಚಚ್ಚಿಕೊಂಡದ್ದನ್ನು ಕಂಡ ಅವರು, ಮಾನ್ಯ ಕಾರ್ಯಕ್ರಮ ನಿರೂಪಕರಿಗೆ ಸ್ಮರಣಿಕೆ ನೀಡುವಲ್ಲಿ ತಪ್ಪಿ ಹೋಯ್ತು; ನಾಳೆ ದಯವಿಟ್ಟು ಬಂದು ನಮ್ಮ ಮನೆಯಿಂದ ಅವರ ಸ್ಮರಣಿಕೆ ಪಡೆಯಬಹುದು ಎಂದೂ ಹೇಳಿದಾಗ, ನಾನು ಎಚ್ಚರ ತಪ್ಪುವುದೊಂದೇ ಬಾಕಿ!
ಈ ಪರಿಯ ಸ್ಮರಣಿಕಾ ಮಹಾತ್ಮೆಯ ಪ್ರಸಂಗಗಳು ನಿಮ್ಮ ಬಳಿಯೂ ಇರಬಹುದು ಎಂದುಕೊಂಡಿದ್ದೇನೆ. ಅಷ್ಟಕ್ಕೂ ಈ ಲೇಖನ ಓದಿದವರು ನನಗೆ ಸ್ಮರಣಿಕೆ ನೀಡಿ, ಸುಮ್ಮನಿರು ಎನ್ನಬಾರದಲ್ಲ? ಮುಗಿಸುತ್ತೇನೆ.

No comments:

Post a Comment