ಜನ ಪ್ರತಿನಿಧಿಯ 'ಪ್ರದಕ್ಷಿಣೆ'ಯ ಈ ವಾರದ ನನ್ನ ಅಂಕಣ ಬರಹ...
ಮೊನ್ನೆ ತುಳು ರಂಗಭೂಮಿ ಕಲಾವಿದ ಭಾಸ್ಕರ ನೆಲ್ಲಿತೀರ್ಥ ಎಂಬ ಸ್ನೇಹಿತ ಅನಾರೋಗ್ಯದಿಂದ ನಿಧನರಾದರು. ಈ ವಾರ್ತೆ ಅವರ ಅಭಿಮಾನಿಗಳ ಪಾಲಿಗೆ, ಸ್ನೇಹಿತ ವರ್ಗಕ್ಕೆ ನಿಜಕ್ಕೂ ದು:ಖದ ವಿಷಯ ಮತ್ತು ತುಳು ರಂಗಭೂಮಿಯ ಮಟ್ಟಿಗೆ ಬಹು ದೊಡ್ಡ ನಷ್ಟ. ಇದನ್ನು ಎಲ್ಲರೂ ಒಪ್ಪಬೇಕಾದ ಮಾತು.
ದುರಂತವೆಂದರೆ ಇಂತಹ ಮೇರು ಕಲಾವಿದನ ನಿಧನ ಪತ್ರಿಕೆಗಳವರಿಗೆ ಸುದ್ದಿ ಎನಿಸಲೇ ಇಲ್ಲ. ಯಾವ ಪತ್ರಿಕೆಯೂ ಈ ಕಲಾವಿದನ ಸೇವೆಯನ್ನು, ಸಾಧನೆಯನ್ನು ಕನಿಷ್ಟ ನೆನಪೂ ಮಾಡಿಕೊಳ್ಳದೇ, ನಿಧನ ವಾರ್ತೆಯ ಕಾಲಂನಲ್ಲಿ ಬೇಕೋ ಬೇಡವೋ ಎಂಬಂತೆ ಪ್ರಕಟಿಸಿ ಸುಮ್ಮನಾಗಿಬಿಟ್ಟುವು. ಮರುದಿನ ಈ ಕಲಾವಿದನಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅವರ ಸ್ನೇಹಿತು ಇಟ್ಟುಕೊಂಡಿದ್ದರು. ಅದರ ಬಗ್ಗೆಯೂ ಯಾವ ಪತ್ರಿಕೆಯೂ ಕಿರು ವರದಿಯನ್ನೂ ಮಾಡಲಿಲ್ಲ!. ಇದಕ್ಕೆಲ್ಲಾ ಇದ್ದ ಕಾರಣ ಒಂದೇ. ಅದೆಂದರೆ ಈ ವ್ಯಕ್ತಿಗೆ ಪುಟಗಟ್ಟಲೇ ಶ್ರದ್ಧಾಂಜಲಿ ಸಲ್ಲಿಸಿ, 'ಜಾಹೀರಾತು' ಪ್ರಕಟಿಸುವವರಿಲ್ಲ ಎಂಬ ಸತ್ಯ ಮುದ್ರಣ ಮಾಧ್ಯಮಗಳಿಗೆ ತಿಳಿದದ್ದು.
ಸ್ವಲ್ಪ ನಿರ್ದಾಕ್ಷಿಣ್ಯವಾಗಿ ಮಾತಾಡಲೇ ಬೇಕಾಗಿದೆ. ಇಂದು ಪತ್ರಿಕೆಗಳು ಸಾಹಿತ್ಯ, ಕಲೆ, ಸಂಸ್ಕೃತಿಯಂತಹ ರಂಗಗಳಲ್ಲಿ ದುಡಿದು ನಿಧನರಾದರೆ, ಅಥವಾ ಅತೀ ಕಷ್ಟದಲ್ಲಿದ್ದರೆ ಅದನ್ನು ಸುದ್ದಿ ಮಾಡುವುದೇ ಇಲ್ಲ. ದುರಂತ ವೆಂದರೆ ಇದು ಅವರಿಗೆ ಸುದ್ದಿಯೇ ಅಲ್ಲ. ಅದೇ, ಎಷ್ಟೋ ಪತ್ರಿಕೆಗಳ ಪುಟಗಳನ್ನು ಗಮನಿಸಿದರೆ, ಅದರಲ್ಲಿ ದರ ಕಡಿತದ ಮಾರಾಟ, ವಿಶೇಷ ಆಫರ್..ಇಂತವುಗಳ ಸುದ್ದಿಯೇ ಇರುತ್ತದೆ. ಅದನ್ನು ಅವುಗಳು ವಿಶೇಷವಾಗಿ ಮುಖ್ಯ ಸುದ್ದಿಯಂತೆ ಪ್ರಕಟಿಸುತ್ತವೆ.
ಮೊನ್ನೆ ಮಾರುತಿ ಸುಝುಕಿಯವರ ಹೊಸದೊಂದು ಕಾರು ಮಾರುಕಟ್ಟೆಗೆ ಬಿಡುಗಡೆಯಾಯಿತು. ಅದರ ಬಿಡುಗಡೆಯನ್ನು ಉಡುಪಿ, ಮಂಗಳೂರಿನ ಡೀಲರುಗಳು ತಮ್ಮ ತಮ್ಮ ಶೋರೂಂಗಳಲ್ಲಿ ಮಾಡಿದರು. ಸಹಜವಾಗಿಯೇ ಅವರು ಜಾಹೀರಾತನ್ನೂ ಪತ್ರಿಕೆಗಳಲ್ಲಿ ನೀಡಿದರು. ಎಷ್ಟು ಬೋರ್ ಹೊಡೆಸುವ ಸುದ್ದಿ ಎಂದರೆ, ಇದೊಂದೇ ಸುದ್ದಿ, ಪ್ರಮುಖ ದಿನ ಪತ್ರಿಕೆಯೊಂದರಲ್ಲಿ ಒಂದೇ ದಿನ ಮೂರು ಕಡೆ ಬಂದಿತ್ತು. ಅದರಲ್ಲೂ ಪ್ರಥಮ ಗ್ರಾಹಕರಿಗೆ ಕಾರಿನ ಕೀಲಿ ಕೈ ಕೊಡುವ ಫೋಟೋದಿಂದ ಹಿಡಿದು, ಆ ಕಾರಿನ ವೈಶಿಷ್ಟ್ಯತೆಯನ್ನು ಪುನರಪಿ ಪ್ರಕಟಿಸಿ, ಜಾಹೀರಾತುದಾರರಿಗೆ ಪತ್ರಿಕೆ ಧಾರಾಳವಾಗಿ ಕ್ರತಜ್ಞವಾಗಿತ್ತು. ಇಲ್ಲಿ ನಾನು ಪತ್ರಿಕೆಯ ಧೋರಣೆಯನ್ನಾಗಲೀ, ಈ ಪರಿ ಸುದ್ದಿ ಪ್ರಸಾರದ ಬಗ್ಗೆಯಾಗಲೀ ದೂರುತ್ತಿಲ್ಲ. ಬಹುಶ: ಇಂದಿನ ವ್ಯಾಪಾರೀಕರಣಗೊಂಡ ಕಾಲದಲ್ಲಿ, ಮಾಧ್ಯಮ ಅದರಿಂದ ಹೊರತಾಗಿರಬೇಕೆಂದು ಬಯಸುವುದು ತಪ್ಪು. ಇಲ್ಲಿ ಹೇಳ ಹೊರಟಿರುವ ವಿಷಯ ಬೇರೆಯೇ ಇದೆ.
ನಾವು ಕನ್ನಡ ನಾಡು ನುಡಿಯ ಬಗ್ಗೆ ಆಗಾಗ ಕೆಲಸ ಮಾಡುತ್ತಿರುತ್ತೇವೆ. ಆ ಬಗ್ಗೆ ಪತ್ರಿಕೆಗಳಿಗೆ ವಿವರಗಳನ್ನೂ ಒದಗಿಸುತ್ತೇವೆ. ಆದರೆ ಯಾವ ಪತ್ರಿಕೆಗಳೂ ಅದರ ಬಗ್ಗೆ ಆಸಕ್ತಿ ತೋರುವುದಿಲ್ಲ. ಮುಂದೆ ನಾವೇ ಆ ಬಗ್ಗೆ ಸುದ್ದಿಯನ್ನು ಕೊಟ್ಟರೂ, ಅದನ್ನು ಪ್ರಕಟಿಸುವ ಮನಸ್ಸು ಪತ್ರಿಕೆಗಳಿಗೆ ಇರುವುದೇ ಇಲ್ಲ!. ಈ ಬಗ್ಗೆ ಒಮ್ಮೆ ನಾನು ಪರಿಚಿತ ಸಂಪಾದಕರೊಬ್ಬರಲ್ಲಿ ಕೇಳಿದೆ. ಅದಕ್ಕವರು, ನೀವು ಒಂದು ಜಾಹೀರಾತು ನೀಡಿದರೆ ನಮ್ಮ ವರದಿಗಾರ ಬಂದು ವರದಿ ಪ್ರಕಟಿಸುತ್ತೇವೆ. ಇಲ್ಲವಾದರೆ 'ಸಾರಿ'ಎಂದರು.
ಇದು ವಾಸ್ತವ. ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ,ಕಲೆಗಾಗಿ ಕೆಲಸ ಮಾಡುವ ಯಾವುದೂ ಇಲ್ಲಿ ಮಾಧ್ಯಮಕ್ಕೆ ನಗಣ್ಯವಾಗಿರುತ್ತದೆ. ಇದಕ್ಕಾಗಿ ಜೀವಮಾನವಿಡೀ ಶ್ರಮಿಸಿ, ಕೊನೆಗೆ ಅನ್ನ-ನೀರಿಲ್ಲದೇ ಸತ್ತರೂ ಆ ಬಗ್ಗೆ ಯಾರಿಗೂ ಕಾಳಜಿ ಇರುವುದಿಲ್ಲ. ಅದೇ ಒಬ್ಬ ಉದ್ಯಮಿ ಸತ್ತರೆ, ಆ ವ್ಯಕ್ತಿ ಮಾಡಿದ್ದೆಲ್ಲವೂ ಕೇವಲ ತನ್ನ ವ್ಯವಾಹಾರಕ್ಕಾಗಿಯೇ ಆದರೂ, ಅದರಿಂದ ಬರುವ ಶ್ರದ್ಧಾಂಜಲಿ ಜಾಹೀರಾತಿನ ಆಸೆಗಾಗಿ ಪತ್ರಿಕೆಗಳು ದೊಡ್ಡ ಪ್ರಚಾರ ನೀಡುತ್ತವೆ. ಇದಕ್ಕೆ ಏನೆನ್ನಬೇಕೋ!!
ಈಗ ಆರಂಭದಲ್ಲಿ ಹೇಳಿದ ಭಾಸ್ಕರ ನೆಲ್ಲಿತೀರ್ಥರ ವಿಷಯಕ್ಕೆ ಬರೋಣ. ಆ ವ್ಯಕ್ತಿ ನಿಜಕ್ಕೂ ಅನಾರೋಗ್ಯದಿಂದ ಹಾಸಿಗೆ ಹಿಡಿದ ಸಂದರ್ಭದಲ್ಲಿ, ಯಾವ ಮಾಧ್ಯಮವೂ ಬಳಿ ಸುಳಿಯಲಿಲ್ಲ. ಈ ಬಗ್ಗೆ ಕೆಲವು ಸ್ನೇಹಿತರು ಪ್ರಯತ್ನ ಮಾಡಿದರೂ, ಯಾರೂ ಕಿವಿಗೊಡಲಿಲ್ಲ. ದುರಂತವೆಂದರೆ, ಸತ್ತ ಸುದ್ದಿ ತಿಳಿದು, ಅವರ ಸಾಧನೆಯ ಕಿರು ಪಟ್ಟಿಯನ್ನು ಪತ್ರಿಕೆಗೆ ಕಳುಹಿಸಿದರೆ, ಎರಡು ಸಾಲಿನ ವರದಿಯೊಂದಿಗೆ ಪತ್ರಿಕೆಗಳು ಶರಾ ಬರೆದು ಬಿಟ್ಟುವು. ಹೀಗೆ, ಜನಾನುರಾಗಿಯಾಗಿದ್ದ ಓರ್ವ ಕಲಾವಿದನ ಸಾವು, ಏನೂ ಅಲ್ಲವೆಂಬಂತೆ ಮಾಧ್ಯಮಗಳಿಂದ ಅವಗಣನೆಗೆ ಗುರಿಯಾಯಿತು.
ಕರಾವಳಿಯ ಒಂದು ಪತ್ರಿಕೆಯ ಪುಟಗಳನ್ನು ಒಂದು ದಿನ ಸುಮ್ಮನೇ ಕಣ್ಣಾಡಿಸಿ ನೋಡಿ. ನಾನು ಒಂದಷ್ಟು ಕಾಲ ಆ ಪತ್ರಿಕೆಯ ಕಾರ್ಯಾಲಯದಲ್ಲಿ ಕೆಲಸ ಮಾಡಿದ್ದೆ. ಆಗ ಪತ್ರಿಕೆಗಳ ಪುಟಗಳನ್ನು 'ಪೇಸ್ಟ್' ಮಾಡುವ ವಿಧಾನದಿಂದ ತಯಾರಿಸುತ್ತಿದ್ದೆವು. ಅಂದರೆ ಒಂದು ಸುದ್ದಿಯನ್ನು ಟೈಪ್ ಮಾಡಿ, ಅದನ್ನು ಪುಟಕ್ಕೆ ಹೊಂದಿಸುವಂತೆ ಜೋಡಿಸಿ, ಮತ್ತೆ ಪ್ಲೇಟ್ ತಯಾರಿಸಿ ಮುದ್ರಣಕ್ಕೆ ಕಳುಹಿಸಲಾಗುತ್ತಿತ್ತು. ಆಗ ಜಾಹೀರಾತಿನ ಅವಶ್ಯಕತೆಯ ಮೇಲೆ ಪುಟಗಳ ನಿರ್ಧಾರವಾಗುತ್ತಿತ್ತು. ಹೆಚ್ಚಿನ ದಿನಗಳಲ್ಲಿ, ಕೊನೆ ಕ್ಷಣದಲ್ಲಿ ಯಾವುದಾದೂ ಒಂದೆರಡು ಸುದ್ದಿಗಳನ್ನು ತೆಗೆದು, ಜಾಹೀರಾತಿಗೆ ಸ್ಥಳ ಹೊಂದಿಸುತ್ತಿದ್ದೆವು. ಹೀಗೆ ಪ್ರಕಟವಾಗಲೇ ಬೇಕಾದ ಎಷ್ಟೋ ಸುದ್ದಿಗಳಿಗೆ ಕೊಕ್ ಕೊಡುತ್ತಿದ್ದೆವು. ಅಂದರೆ ಇಲ್ಲಿ ಮುಖ್ಯವಾಗಿರುವುದು ಜಾಹೀರಾತೇ ಹೊರತು, ಸುದ್ದಿಯೋ, ಪತ್ರಿಕಾ ಧರ್ಮವೋ ಅಲ್ಲ.
ಇತ್ತೀಚೆಗೆ ಹೆಚ್ಚು ಕಡಿಮೆ ಎಲ್ಲಾ ಪತ್ರಿಕೆಗಳ ವಿಶೇಷ ಪುಟಗಳಲ್ಲಿ ವಿಶಿಷ್ಟ ಜಾಹೀರಾತು ಪ್ರಕಟವಾಗುತ್ತಿರುತ್ತಿವೆ. ಅವುಗಳು ನಮ್ಮ-ನಿಮ್ಮೆಲ್ಲರ ಲೈಂಗಿಕ ಬಲವರ್ಧನೆಗೆ ವಿಶೇಷ ಕಾಳಜಿ ತೋರುವ ಜಾಹೀರಾತುಗಳು!!. ಅವುಗಳ ಮೇಲೆ ಒಮ್ಮೆ ಕುತೂಹಲದಿಂದ ಕಣ್ಣಾಡಿಸಿ ನೋಡಿ. ಕೇವಲ ಬೋಗಸ್ ಮತ್ತು ದಾರಿ ತಪ್ಪಿಸುವ ಜಾಹೀರಾತುಗಳು ಇವುಗಳು ಎಂದು ಮೇಲ್ನೋಟಕ್ಕೇ ಗೊತ್ತಾಗುತ್ತವೆ. ಆದರೂ ಎಷ್ಟೋ ಮಂದಿ, ಈ ಜಾಹೀರಾತುಗಳಿಗೆ ಮರುಳಾಗಿ ಸಾಕಷ್ಟು ಹಣ ಕಳೆದುಕೊಂಡಿರುತ್ತಾರೆ!. ಕೊನೆಗೆ ಎಲ್ಲೋ ಒಂದು ಚಿಕ್ಕ ಮೂಲೆಯಲ್ಲಿ, ಆ ಪತ್ರಿಕೆ ಅದರಲ್ಲಿ ಪ್ರಕಟಿಸುವ ಜಾಹೀರಾತುಗಳಿಗೆ ಜಾಹೀರಾತುದಾರರೇ ಹೊಣೆಯೇ ಹೊರತು ಪತ್ರಿಕೆಯಲ್ಲ ಎಂಬ ಟಿಪ್ಟಣಿಯೊಂದಿಗೆ ತಾವು ಸುರಕ್ಷಿತವಾಗಿರುತ್ತದೆ.
ಎಲ್ಲರಿಗೂ ತಿಳಿದಿರು ವಿಚಾರವೊಂದೆಂದರೆ, ಪತ್ರಿಕೆಗಳಲ್ಲಿ ಬಂದರೆ ಅದು ಕೇವಲ ನಿಜ ಎಂದು ನಂಬುವ ಕಾಲವಿತ್ತು. ಆದರೆ ಈಗ ಈ ಪರಿಯ ಜಾಹೀರಾತು ಮತ್ತು ವಾಣಿಜ್ಯೀಕರಣದಿಂದ ಪತ್ರಿಕೆಗಳು ಕೇವಲ ಸುಳ್ಳಿನ ಕಂತೆ ಎಂಬಷ್ಟೂ ವಿಶ್ವಾಸ ಕಳೆದುಕೊಂಡಿವೆ.
ಹಾಗೆಂದು ಜಾಹೀರಾತು ಇರಲೇ ಬಾರದೇ ಎಂಬ ಪ್ರಶ್ನೆ ಸಹಜ. ಖಂಡಿತಕ್ಕೂ ಅದಿರಬೇಕು. ಆದರೆ ಅದರಲ್ಲಿ ಯುಕ್ತಾ ಯುಕ್ತತೆಯ ಬಗ್ಗೆ ಪತ್ರಿಕೆಗಳು ಕನಿಷ್ಟ ಮಾನದಂಡವನ್ನು ತಾವೇ ರೂಪಸಿಕೊಳ್ಳಬೇಕು. ತಮ್ಮ ಪತ್ರಿಕೆಗಳು ಸಭ್ಯ-ಸಹ್ರದಯಿಗಳ ಮನೆ ಮನೆಗೂ ಹೋಗುತ್ತವೆ ಎಂಬ 'ಕನಿಷ್ಟ'ಜ್ಞಾನ ಅವುಗಳಿಗೆ ಇರಬೇಕು. ಈ ಮಾತೇಕೆ ಎಂಬುದನ್ನು ಪತ್ರಿಕೆಗಳನ್ನು ನಿಯತವಾಗಿ ಓದುತ್ತಿರುವವರಿಗೆ ಗೊತ್ತಾಗುತ್ತದೆ. ಗೊತ್ತಾಗದೇ ಇದ್ದರೆ, ಒಂದು ಶುಕ್ರವಾರ ಅಥವಾ ಭಾನುವಾರದ ಪುರವಣಿಯ ಜಾಹೀರಾತುಗಳನ್ನು ಕೂಲಂಕುಶವಾಗಿ ಗಮನಿಸಿದರೆ ತಿಳಿದೀತು.
ಇದನ್ನೇ ಪತ್ರಿಕಾ ಧರ್ಮದ ಪರಿಮಿತಿಯ ಬಗ್ಗೆ ಯೋಚಿಸುವ ಅನಿವಾರ್ಯತೆ ಇಂದು ಹೆಚ್ಚಿದೆ ಎನ್ನಲೂ ಕಾರಣ. ನೀವು ಎಷ್ಟೋ ಘಟನೆಗಳನ್ನು ಕೇಳಿರಬಹುದು. ಅನೇಕರು ಯಾವ್ಯಾವುದೋ ಆಮಿಷದ ಲಾಟರಿ, ಲಕಿ ಡಿಪ್‌ಗಳ ಕರೆಗಳಿಂದ ,ಮೋಸ ಹೋದ ಉದಾಹರಣೆಗಳನ್ನು ಓದಿರಬಹುದು. ಆದರೆ ಕೆಲವೊಮ್ಮೆ ಕೆಲವು ಪತ್ರಿಕೆಗಳು ಪ್ರಕಟಿಸುವ ಆಧಾರವಿಲ್ಲದ ಜಾಹೀರಾತುಗಳಿಗೆ ಮೋಸ ಹೋದವರೂ ಕಡಿಮೆ ಇಲ್ಲ. ಇಲ್ಲಿ ಯಾರ ಮೇಲೆ ಆರೋಪ ಹೊರಿಸಲೂ ಆಗದ ಸ್ಥಿತಿ ಈ ರೀತಿ ಮೋಸ ಹೋದವರದ್ದು.
ಮುಗಿಸುವ ಮುನ್ನ ಮತ್ತೊಮ್ಮೆ ಮತ್ತೆ ಪುನರುಚ್ಚರಿಸುತ್ತೇನೆ. ಜಾಹೀರಾತುಗಳು ಪತ್ರಿಕೆಗಳಿಗೆ ಖಂಡಿತ ಅನಿವಾರ್ಯ. ಪತ್ರಿಕೆಯೊಂದರ ಉಳಿವಿಗೆ ಇದು ಬೇಕೇ ಬೇಕು. ಆದರೆ ಪತ್ರಿಕೆಗಳು ಜಾಹೀರಾತುಗಳಿಗಾಗಿಯೇ ಉಳಿದರೆ...ಪತ್ರಿಕಾ ಧರ್ಮ ಎಲ್ಲಿ ಉಳಿಯುತ್ತದೆ..??
No comments:
Post a Comment