Thursday 6 February 2014

ಅಮ್ಮನಂತಿದ್ದರು ಅತ್ತೆ...

ನನ್ನ ಪ್ರೀತಿಯ ಅತ್ತೆ ಇನ್ನಿಲ್ಲವಾದ ಈ ಹೊತ್ತಿನಲ್ಲಿ ನಾನು ಜನಪ್ರತಿನಿಧಿಗೆ ಈ ವಾರ ಬರೆದ ಪ್ರದಕ್ಷಿಣೆ...

ಎರಡೂ ಕಣ್ಣಿಲ್ಲದ ಬದುಕಿನ ಒಂದು ಸ್ಥಿತಿಯನ್ನು ನೆನೆಸಿಕೊಳ್ಳಿ. ಇದೊಂದು ಆಘಾತಕಾರಿ ಬದುಕಾರೆ, ಜೀವನದ ಸುಮಾರು ೪೦ ವಸಂತಗಳನ್ನು ಎರಡೂ ಕಣ್ಣುಗಳಿಂದ ಆಸ್ವಾದಿಸಿ, ಹಠಾತ್ತಾಗಿ ಆ ಎರಡೂ ಕಣ್ಣುಗಳನ್ನು ನೂರು ಶೇಕಡಾ ಕಳೆದುಕೊಂಡು ಮತ್ತೆ ಇಡೀ ಜೀವನವನ್ನು ನಡೆಸುವ ಸ್ಥಿತಿ??. ಅದರ ನೋವನ್ನು ಬಹುಶ: ಅನುಭವಿಸಿದವರಿಗೇ  ಗೊತ್ತು. ಒಂದು ಕ್ಷಣ ನಮ್ಮೆರಡೂ ಕಣ್ಣುಗಳನ್ನು ಮುಚ್ಚಿಕೊಂಡು, ಎರಡು ಹೆಜ್ಜೆ ಮುಂದಿಟ್ಟರೆ, ಆ ನೋವಿನ ಆಳದ ಒಂದು ಸಣ್ಣ ಪರಿಚಯ ಆಗಬಹುದೇನೋ.

ನನ್ನ ಬಾಲ್ಯದ ನೆನಪುಗಳು ಆಗಾಗ ಕಾಡುತ್ತಿರುತ್ತವೆ. ಅಪರೂಪಕ್ಕೆ ಅಜ್ಜನ ಮನೆಗೆ ಹೋಗುತ್ತಿದ ದಿನಗಳು ಅವು. ನಮ್ಮ ಅಮ್ಮನ ಮನೆ ಎಂದರೆ ಸಣ್ಣ ಹಳ್ಳಿಯೊಂದರಲ್ಲಿ ಐದು ಮನೆಗಳಿದ್ದ ಒಂದು 'ಹೊಂಡ'ದಂತಹ ಪ್ರದೇಶ. ಕೊಕ್ಕರ್ಣೆಯಿಂದ ಸ್ವಲ್ಪ ಮುಂದೆ ಹೋದರೆ, ಸಂತೆಕಟ್ಟೆಯ ದಾರಿಯಲ್ಲಿ ಸಿಗುವ ಬಲ್ಲೆಬೈಲು ಎಂಬ ಸ್ಥಳದಲ್ಲಿಳಿದು ನಡೆದು ಹೋದರೆ ಸುಮಾರು ಒಂದೂ ವರೆ ಕಿಲೋಮೀಟರು ದೂರ. ಈಗ ಅಲ್ಲಿಗೆ ರಸ್ತೆಯ ಸಂಪರ್ಕವಾಗಿದೆ. ಅಂತಹ 'ಬಾಳೆಗುಂಡಿ'ಗೆ ಅಪರೂಪಕ್ಕೊಮ್ಮೆ ರಜೆಯಲ್ಲಿ ನಾನು ಅಕ್ಕನ ಜೊತೆಗೆ ಹೋಗಿ, ಒಂದೆರಡು ವಾರ ಉಳಿದು ಬರುತ್ತಿದ್ದೆ.

ಯಾರ್‍ಯಾರ ಸಂಬಂಧ ಹೇಗೆ ಎಂಬುದು ನನಗೆ ಅಷ್ಟು ಮುಖ್ಯವಾಗಿರಲಿಲ್ಲವಾಗಿತ್ತು. ಇಂದಿಗೂ ಅಲ್ಲಿ ಎಲ್ಲರೂ ನಮಗೆ ಅತ್ತೆ ಮಾವ!. ತಮಾಷೆಯ ವಿಷಯವೆಂದರೆ ಅವರ ಮಕ್ಕಳೆಲ್ಲರೂ ನಮಗೆ ಅಣ್ಣ-ತಮ್ಮ-ಅಕ್ಕ-ತಂಗಿ. ವಯಸ್ಸಿನ ಅಂತರವನ್ನು ಗಮನಿಸಿಕೊಂಡು ಎಲ್ಲರನ್ನೂ ನಾವು ಕರೆಯುವುದು, ಅವರ ಹೆಸರಿನ ಮುಂದೆ 'ಅಣ್ಣ-ಅಕ್ಕ' ಸೇರಿಸಿ. ಇದು ನಮ್ಮ ನಮ್ಮ ನಡುವಿನ ಆತ್ಮೀಯತೆಗೆ ಭದ್ರ ಬುನಾದಿ ಒದಗಿಸಿತ್ತು. ವಿಶೇಷವೆಂದರೆ ಅಲ್ಲಿರುವ ಐದೂ ಮನೆಗಳಲ್ಲಿ ನಾಲ್ಕು ಮನೆಯರೊಡನೆ ನಾನು ಹಲವು ವರ್ಷಗಳ ಕಾಲ ಪತ್ರ ವ್ಯವಾಹಾರವನ್ನಿಟ್ಟುಕೊಂಡಿದ್ದೆ. ಅಂತಹ ಆತ್ಮೀಯತೆ ಆ 'ಬಾಳೆಗುಂಡಿ'ಯಲ್ಲಿ 'ಅಂದಿ'ತ್ತು.
ಆಗಲೂ ನನ್ನನ್ನು ಬಹುವಾಗಿ ಆಕರ್ಷಿಸುತ್ತಿದ್ದವರು ಅವರು. ಹಣೆಯ ಮೇಲೆ ವಿಶಾಲವಾದ ಬೊಟ್ಟು. ಸ್ವಲ್ಪ ಎತ್ತರದ ದನಿಯೆಂದೇ ಗುರುತಿಸಿಕೊಳ್ಳಬಹುದಾದ ಖಡಕ್ ಮಾತುಗಳು, ಅಂದಿನ ಮಟ್ಟಿಗೆ ಸ್ವಲ್ಪ   ದೊಡ್ಡದಾದ ಮೈಕಟ್ಟು...ಇವುಗಳನ್ನು ಬಾಹ್ಯವಾಗಿ ಗುರುತಿಸಬಹುದಾದರೆ, ಎಲ್ಲರನ್ನೂ ಆತ್ಮೀಯತೆಯಿಂದ ಕಾಣುವ ಕಣ್ಣುಗಳು, ಕಿರಿಯರೆಲ್ಲರನ್ನೂ 'ಮಗಾ'ಎಂದೇ ಕರೆಯುವ ಮನದಾಳದ ಮಾತ್ರ ವಾತ್ಸಲ್ಯ, ಯಾವುದೇ ಮಕ್ಕಳು ಏನೇ ತಪ್ಪು ಮಾಡಿದರೂ, 'ಮಕ್ಕಳು, ಅವಕ್ಕೆಂತ ಗೊತ್ತಾಗುತ್ತೆ'ಎಂಬ ಸರಳ-ನೇರ-ಪ್ರೀತಿಯ ಮಾತುಗಳ ಕ್ಷಮೆ, ಯಾರ ಸಂಕಟವೇ ಇರಲಿ, ತಾನು ಮುಂದಾಗಿ ಓಡಿ ಹೋಗಿ, ಬೇರೆಯವರ ದು:ಖದಲ್ಲಿ ಒಂದಾಗುವ ದೊಡ್ಡ ಮನಸ್ಸು...

ಅಂದು ಆಕೆಂi ಎರಡೂ ಕಣ್ಣುಗಳು ಚೆನ್ನಾಗಿ ಕಾಣುತ್ತಿದ್ದುವು, ನನಗೆ ಸರಿಯಾಗಿ ನೆನಪಿದೆ. ನನ್ನ ಉಪನಯನದ ಸಮಯವಾಗಿತ್ತದು. ಅವರು ನಮ್ಮನೆಗೆ ಬಂದುದು, ನನ್ನ ಅರಿವಿನ ಪ್ರಕಾರ ಮೊದಲ ಸಲ. ಅವರೆಂದರೆ ನನಗೆ ಅಂದಿಗೂ, ಇಂದಿಗೂ ಅತೀ ಗೌರವದ ಸ್ಥಾನ. ಎದುರು ನಿಂತು ಮಾತಾಡಲೂ ಒಮ್ಮೊಮ್ಮೆ ಈ ಗೌರವ 'ಅಡ್ಡಿ'ಯಾಗುತ್ತಿದ್ದುದು  ನನಗಿನ್ನೂ ನೆನಪಿದೆ. ಆದರೆ ಬರ ಸೆಳೆದು, ಅಪ್ಪಿ ಮುದ್ದಾಡುತ್ತಾ, ಬಾಯಿ ತುಂಬಾ 'ಮಗಾ, ಮಗಾ'ಎಂದೇ ಕರೆಯುತ್ತಾ ಮುದ್ದಾಡುತ್ತಿದ್ದ ಆ ಮಾತೃ ಹ್ರದಯಿಯ ಮನಸ್ಸು ನಿಷ್ಕಲ್ಮಶವಾಗಿತ್ತು. ಮುಂದೆ ಬದುಕಿನ ವೈಪರೀತ್ಯದಿಂದ ಅನೇಕ ಸಂಕಷ್ಟಗಳು ಬಂದಾಗೆಲ್ಲಾ, ಅವರನ್ನು ಯಾವುದೋ ಕಾರಣದಿಂದ ನೋಡುತ್ತಿದ್ದಾಗೆಲ್ಲಾ ನಮ್ಮ ಪ್ರಯತ್ನ ನಮ್ಮದು, ಮತ್ತೆಲ್ಲಾ ಮಂದಾರ್ತಿ ಅಮ್ಮನದು ಎಂದೇ ಹೇಳುತ್ತಿದ್ದ ಆಕೆ, ಮಂದಾತಿಯ ಪರಮ ಭಕ್ತೆ.

ಇನ್ನು ಪೂರ್ವಾಪರದ ಬಗ್ಗೆ ಹೇಳುವುದಿದ್ದರೆ ಆಕೆ ಹುಟ್ಟಿ ಬೆಳೆದ ವಾತಾವರಣ ಅಂದಿನಮಟ್ಟಿಗೆ ನಗರವೆಂದೇ ಪರಿಗಣಿಸಬಹುದಾಗಿದ್ದ ಕಾಪುವಿನಲ್ಲಿ. ಬಾಳೆಗುಂಡಿಯಂತಹ. ತೀರಾ ಇತ್ತೀಚಿನವರೆಗೆ ವಿದ್ಯುತ್ ಸಂಪರ್ಕವೂ ಇರದಿದ್ದ ಆ ಹಳ್ಳಿಯಲ್ಲಿ ಆಕೆ ಜೀವನ ಆರಂಭಿಸಿದಾಗ, ೧೬ವಯಸ್ಸಿರಬೇಕು ಎಂದು ಕೇಳಿ ತಿಳಿದ ನೆನಪು. ಆರು ಮಕ್ಕಳ ತಾಯಿಯಾಗಿ, ಮನೆಯ ಕಡು ಬಡತನದಲ್ಲಿಯೂ ಮರ್ಯಾದೆ ಮತ್ತು ತಾಳ್ಮೆಗಳೆರಡನ್ನೇ ಆಸ್ತಿಯಾಗಿ ಬದುಕಿದವರು ಈಕೆ. ಮನೆಯಲ್ಲಿ ಊಟಕ್ಕೂ ತತ್ವಾರವಿದ್ದ ದಿನಗಳಲ್ಲಿಯೂ, ಆರೂ ಮಕ್ಕಳನ್ನು ತಬ್ಬಿ ಹಿಡಿದುಕೊಂಡು ಕಣ್ಣೀರು ಸುರಿಸಿ ಬದುಕಿದ್ದು, ಆ ಹಸಿವಿನಲ್ಲಿಯೂ ಬಂದವರೆದುರು ಇದನ್ನು ಒಮ್ಮೆಯೂ ತೋರಗೊಡದಿದ್ದುದು ಈಕೆಯ 'ಸುಸಂಸ್ಕೃತ' ಮನಸ್ಸಿಗೆ ಸಾಕ್ಷಿ.
ಈ ಸಂಸಾರದಲ್ಲಿ ಅನಿವಾರ್ಯವಾಗಿ ಮನೆಯ ಯಯಜಮಾನ್ಯವನ್ನು ವಹಿಸಿಕೊಂಡಂತಿದ್ದ ಈಕೆಯ ಬದುಕಿನಲ್ಲಿ ಬೀಸಿದ ಬಿರುಗಾಳಿಗಳಲ್ಲಿ ಚಂಡ ಮಾರುತವಾಗಿದ್ದು ತನ್ನೆರಡೂ ಕಣ್ಣುಗಳನ್ನು ಆಕೆ ಕಳೆದುಕೊಂಡಾಗ. ಇದ್ದಕ್ಕಿದ್ದಂತೆ ಕಣ್ಣುಗಳು ಮಂಜಾದಾಗ, ವೈದ್ಯರನ್ನು ಕಂಡು, ಔಷಧಿ ಮಾಡಿದರೂ, ವೈದ್ಯರ ತಪ್ಪಿನಿಂದಾಗಿ ಈಕೆಗೆ ಸಿಗಬೇಕಾದ ಚಿಕಿತ್ಸೆ ಲಭಿಸದೆ, ಎರಡೂ ಕಣ್ಣೂಗಳನ್ನು ಶೇಕಡಾ ನೂರು ಕಳೆದುಕೊಳ್ಳಬೇಕಾದ ಪರಿಸ್ಥಿತಿ. ಇದನ್ನು ಊಹಿಸಿದರೇ ಮೈನಡುಕ. ಸುಮಾರು ನಾಲ್ಕು ದಶಕಗಳ ಬದುಕನ್ನು ತೆರೆದ ಕಣ್ಣುಗಳಿಂದ ನೋಡಿ, ಒಮ್ಮಿಂದೊಮ್ಮೆಗೇ ಬದುಕಿನಲ್ಲಿ ಕುರುಡು ತನ ಆವರಿಸಿಕೊಂಡರೆ...? ಆ ನೋವು ಊಹನಾತೀತ. ಆದರೆ ಆ ಬದುಕನ್ನೂ ದೇವರ ಪ್ರಸಾದವೆಂಬಂತೆ ಸ್ವೀಕರಿಸಿದವರು ಈಕೆ. ನಿದಾನವಾಗಿ ಆ ಕಣ್ಣು ಕಾಣದ ಬದುಕಿಗೇ ಹೊಂದಿಕೊಳ್ಳುತ್ತಾ ಹೋಗಿ, ಕೊನೆಗೆ ಅವರು ಎಷ್ಟು ನಿಖರವಾಗಿ ತಮ್ಮ ಕೆಲಸದೊಂದಿಗೆ ಮನೆಯ ಕೆಲಸ ಮಾಡಿಕೊಳ್ಳುತ್ತಿದ್ದರು ಎಂದರೆ,ಆಕೆ ಎದುರು ನಾವೇ ಕುರುಡರು ಎಂಬಂತೆ ಭಾಸವಾಗುತ್ತಿತ್ತು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಹುಟ್ಟು ಕುರುಡರು ತಮ್ಮ ಬದುಕಿನಲ್ಲಿ ಹೊಂದಿಕೊಂಡು ಬದುಕುವುದು ಸಾಮಾನ್ಯವಾದರೆ, ಹತ್ತಿರ ಹತ್ತಿರ ನಾಲ್ಕು ದಶಕಗಳ ಕಾಲ ಆರೋಗ್ಯ ಪೂರ್ಣ ಕಣ್ಣುಗಳಿಂದ ಜಗತ್ತು ನೋಡಿ, ಮತ್ತೆ ಕುರುಡುತನವನ್ನು ಅಪ್ಪಿಕೊಂಡು ಬದುಕುವ ಆ 'ಒಳಗಿನ'ನೋವು ಎಷ್ಟಿರಬಹುದೋ-ಒಮ್ಮೆ ಯೋಚಿಸಿ.

ಎಲ್ಲಾ ಮಕ್ಕಳ ಮದುವೆಯಾಗಿದೆ.  ನಾನೂ ಸೇರಿ, ಇಬ್ಬರು ಅಳಿಯಂದಿರನ್ನು ಬಾಲ್ಯದಿಂದ ನೋಡಿದ ನೆನಪು ಬಿಟ್ಟರೆ, ಆಕೆಗೆ ಮದುವೆಯ ನಂತರ ನಾವು ಹೇಗಿದ್ದೇವೆ ಎಂಬದೇ ಗೊತ್ತಿಲ್ಲ. ಉಳಿದ ಮೂವರು ಅಳಿಯರ ಮುಖವನ್ನೇ ನೋಡಿಲ್ಲ. (ನನ್ನ ನೆನಪಿನ ಪ್ರಕಾರ ದೊಡ್ಡ ಅಳಿಯನನ್ನು ಮಾತ್ರ ಆಕೆ ಕಂಡಿರಬಹುದು.) ನಂತರ ಮಕ್ಕಳ ಮಕ್ಕಳು, ಅವರ ಆಟ ಪಾಟಗಳು ಎಲ್ಲವೂ ಅವರಿಗೆ 'ಸ್ಪರ್ಶ'ಜ್ಞಾನದಿಂದ ಮಾತ್ರ ಪರಿಚಯ. ಒಂದು ಹೊಸ ಬಟ್ಟೆ ತೆಗೆದುಕೊಂಡರೆ, ಮನೆಯಲ್ಲಿ ಹೊಸ ವ್ಯಕ್ತಿಯ ಪ್ರವೇಶವಾದರೆ, ಕೇವಲ ಸ್ಪರ್ಶಜ್ಞಾನವಷ್ಟೇ ಅವರ ಬದುಕು. ಆದರೆ ಆಶ್ಚರ್ಯವಾಗಬಹುದು, ಎಲ್ಲಾ ಮೊಮ್ಮಕ್ಕಳ ಬಾಣಂತನವನ್ನು ಅವರೇ ಮಾಡಿದ್ದಾರೆ.  ಕಣ್ಣೇ ಕಾಣದೆಯೂ ಅವರು, ಮಕ್ಕಳನ್ನು ಮೀಯಿಸುವುದರರಿಂದ ಹಿಡಿದು, ಅವರ ಲಾಲನೆ ಪಾಲನೆಯನ್ನು ಮಾಡಿದ್ದಾರೆ. ಇವರಿಗೆ ಕಣ್ಣು ಕಾಣದು ಎಂಬ ಕೊರತೆಯನ್ನು ಬಹುಶ: ಬೆಳೆದು ದೊಡ್ಡದಾಗಿ ಬುದ್ದಿ ಬರುವ ತನಕ ಯಾವ ಮಗುವೂ ಅರ್ಥಮಾಡಿಕೊಳ್ಳಲಾರದಷ್ಟೂ ಇವರು ಅವುಗಳನ್ನು ನೋಡಿಕೊಂಡಿದ್ದಾರೆ. ತಮ್ಮ ಆರೂ ಮಕ್ಕಳಲ್ಲಿ ಕೇವಲ 'ಸಂಸ್ಕಾರ'ವನ್ನೇ ತುಂಬಿ, ಆದರ್ಶ ತಾಯಿಯಾಗಿ ಬದುಕಿದ್ದವರು.
ಕಾಲದ ತೀರ್ಮಾನ. ಸಂಬಂಧವೇನೋ ತಿಳಿಯದಿದ್ದರೂ ಅತ್ತೆ ಎಂದು ಕರೆಯುತ್ತಿದ್ದ ನಾನು, ಇವರ ಮಗಳನ್ನೇ ಮದುವೆಯಾಗಿ, ಮತ್ತೆ ಇವರಿಗೆ ಮತ್ತಷ್ಟು ಹತ್ತಿರವಾದೆ.  ಆ ಕುಟುಂಬದ ಒಂದು ಭಾಗವಾದೆ. ಹಾಗೆ ನೋಡಿದರೆ ಮದುವೆಗೂ ಮುನ್ನವೇ ನಾನು ಆ ಕುಟುಂಬದ ಭಾಗವೇ ಆಗಿದ್ದರೂ, ಮದುವೆಯ ನಂತರ ಅದರಲ್ಲಿ ನಾನು ಅಧಿಕ್ರತ ಸದಸ್ಯನ ಸ್ಥಾನ ಪಡೆದೆ. ಆಗೆಲ್ಲಾ ಇವರ 'ಸಮಚಿತ್ತ'. 'ತಾಳ್ಮೆ' ಬದುಕಿನೆಡೆಗಿನ ಆಶಾವಾದ ಕಂಡು ಬೆರಗುಗೊಂಡಿದ್ದೆ. ಇವರ ಬಗ್ಗೆಯೇ ಯಾವಾಗಾದರೊಮ್ಮೆ ಬರೆಯಬೇಕು ಎಂದುಕೊಳ್ಳುತ್ತಿದ್ದೆ.....ಆದರೆ...!

ಅತ್ತೆ ಯಾವಾಗಲೂ ಅಮ್ಮನಾದರೆ ಆ ಸಂಸಾರ ಸುಖಿಯೆಂಬುದು ನನ್ನ ಅನಿಸಿಕೆ. ನನ್ನ ಮಟ್ಟಿಗೆ ಮತ್ತು ಈ ಕುಟುಂಬದ ಮಟ್ಟಿಗೆ ನಾವು ಈ ಅದ್ರಷ್ಟ ಪಡೆದಿದ್ದೆವು. ಅಳಿಯಂದಿರನ್ನು ಬಿಡಿ, ಒಮ್ಮೊಮ್ಮೆ ಬಂದು ಹೋಗುವವರು. ಆದರೆ ಮನೆಯಲ್ಲಿಯೇ ಇರುತ್ತಿದ್ದ ಸೊಸೆಎಯನ್ನೂ ಇವರು ಮಗಳಂತೆ ಕಂಡು ಪ್ರೀತಿಸಿವರು. ಸೊಸೆಯ ಪ್ರೀತಿಯ ಗದರಿಕೆಗೆ ನಗುವನ್ನೇ ಉತ್ತರವಾಗಿಸಿದವರು. ಅವರ-ಸೊಸೆಯ ಆತ್ಮೀಯತೆ ಯಾವ ಮಟ್ಟದಲ್ಲಿತ್ತೆಂದರೆ, ಯಾವುದೇ ವಿಷಯವನ್ನು ಮಗನಲ್ಲಿ ಹೇಳಲು ಹಿಂದೆ ಮುಂದೆ ನೋಡುತ್ತಿದ್ದ ಇವರು, ಸೊಸೆಯಲ್ಲಿ ಮನ ಬಿಚ್ಚುತ್ತಿದ್ದರು. ಇದೇ ಅಲ್ಲವೇ ಅತ್ತೆ ಅಮ್ಮನಾಗುವುದು ಎಂದರೆ..??

ಬದುಕೇ ಹಾಗೆ !. ಮದುವೆಯ ಆರಂಭದಲ್ಲಿ ಬಡತನ, ಮತ್ತೆ  ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿ,  ಅಕಾಲದಲ್ಲಿ ಎಲ್ಲರೂ ಪ್ರೀತಿಸುತ್ತಿದ್ದ (ನನಗೂ ನಿಜಾರ್ಥದ ಅಣ್ಣನಂತಿದ್ದ) ಹಿರಿಯ ಅಳಿಯನ ನಿಧನ, ಅನಿವಾರ್ಯವಾಗಿ ಸಂಸಾರದ ಸಂಪೂರ್ಣ ಜವಾಬ್ದಾರಿಗೆ ಹೆಗಲು ನೀಡುವಿಕೆ,  ಅಕ್ಕ-ಪಕ್ಕದ ಎಲ್ಲರನ್ನು ಆತ್ಮೀಯತೆಯಿಂದ ಕಾಣುತ್ತಿದ್ದ ಮಾಗಿದ ಮನಸ್ಸು, ಕಣ್ಣೇ ಕಾಣದಾದಾಗಲೂ ಸಮ ಚಿತ್ತದಿಂದ ಅದನ್ನು ಸ್ವೀಕರಿಸಿ, ಕಣ್ಣು ಕಾಣುವವರಿಗಿಂತಲೂ ಚೆನ್ನಾಗಿ ಬಾಳಿದ ರೀತಿ...ಸಂಯಮಕ್ಕೆ ಮತ್ತೊಂದು ಹೆಸರಾಗಿ, ವಾತ್ಸಲ್ಯದ ಮೂರ್ತಿಯಾಗಿ, ಕರುಣೆಯ ಕಡಲಾಗಿ, ನಿಜಾರ್ಥದ ಸುಮತಿಯಾಗಿ.....ಹೀಗೆ ನಮಗೆಲ್ಲಾ  ಅಮ್ಮನಾಗಿದ್ದವರು ನನ್ನ ಅತ್ತೆ.
***
ನಿನ್ನೆ ಬೆಳಿಗ್ಗೆ ಹೆಂಡತಿಯ ಅಣ್ಣ ಪದ್ಮನಾಭನ ಫೋನ್. ಅವನುಸುರಿದ್ದು ಒಂದೇ ಮಾತು. ಅಮ್ಮ ರಾತ್ರಿ ಮಲಗಿದವರು, ಬೆಳಗ್ಗೆದ್ದು ನೋಡುವಾಗ ಹೋಗಿ ಬಿಟ್ಟಿದ್ದಾರೆ. ನಾನು ಅಕ್ಷರಶ: ನಡುಗಿ ಹೋದೆ. ಮತ್ತೆ ಎಲ್ಲವೂ ನಡೆದು ಹೋಯಿತು. ಸಂಜೆ ಮೂರರ ವೇಳೆಗೆ ಅತ್ತೆಯ ದೇಹ ಅಗ್ನಿಯ ಕೆನ್ನಾಲಿಗೆಲ್ಲಿ ಕರಗುತ್ತಿದ್ದಾಗ ಮನಸ್ಸಿಗೆ ತೋಚಿದ್ದು ಒಂದೇ ಮಾತು-ಅತ್ತೇ, ನೀವು ನಮಗೆಲ್ಲಾ ಅಮ್ಮನಾಗಿದ್ದಿರಿ. 'ದಡ್ಡನೇ  ಬಿದ್ದು ದಿಡ್ಡನೇ ಸಾಯಬೇಕು, ಯಾರಿಗೂ ಹೊರೆಯಾಗಬಾರದು' -ಇದು ನೀವು ಹೇಳುತ್ತಿದ್ದ ಮಾತು-ಸಾವಲ್ಲೂ ನೀವೇ ಗೆದ್ದಿರಿ! ನಿಮಗೆ ಪ್ರೀತಿಯ ನಮನಗಳು.

ಈ ಬದುಕನ್ನು ಸಂಪೂರ್ಣವಾಗಿ ತೆರೆದಿಟ್ಟರೆ, ನಿರಾಶಾವಾದಿಗೆ ಬದುಕಿನಲ್ಲಿ ಹೊಸ ಆಶಾಕಿರಣವಾಗಬಹುದೆಂದು ಕೊಂಡಿದ್ದೇನೆ. ಮುಂದೆಂದಾದರೂ ಆ ಅವಕಾಶ ಬಂದೀತು. ಅತ್ತೆ, ಸುಮತಿ ಇನ್ನಿಲ್ಲ ವೆಂಬ ನೋವು ಎಂದಿಗೂ ನೋವಾಗಿಯೇ ಉಳಿಯುತ್ತದೆ. ನನ್ನ ಬದುಕಿನಲ್ಲಿ ವಿಶೇಷ ಅರ್ಥ ತುಂಬುವಂತೆ ಮಾಡಿದ, ಸ್ಥಾನದಲ್ಲಿ ಅಣ್ಣನಾದರೂ ಈ ಅತ್ತೆಯ ಮಗಳನ್ನು ನಾನು ಅಕ್ಕನೆಂದು ಕರೆದುಕೊಳ್ಳುತ್ತಾ 'ಬಾವ'ಎಂದೇ ಕರೆಯುತ್ತಿದ್ದ ಸತ್ಯನಾರಾಯಣ ರಾವ್, ನನ್ನ ಬದುಕಿನ ಒಂದು ದೀಪವೇ ಆಗಿದ್ದ ವಿಶ್ವೇಶ್ವರ ಹೆಬ್ಬಾರ್ ನಂತರ ಎಂದೆಂದಿಗೂ ನನ್ನ ಬದುಕಿನಂತಿದ್ದ ಅತ್ತೆ ಸುಮತಿ.....ಯಾಕೆ ಹೀಗೆ ಹೇಳದೇ ಹೋಗುತ್ತಾರೋ.!

No comments:

Post a Comment