Friday, 20 April 2018

ರುತ್ ಪ್ರೀತಿಕಾ ತೆರೆದಿಟ್ಟ ’ಕ್ರಿಸ್ತಪಥ’

 ಏಪ್ರಿಲ್ ೧ರಂದು ಮಂಗಳೂರು ಪುರಭವನದಲ್ಲಿ ಪ್ರದರ್ಶಿತವಾದ ಕ್ರಿಸ್ತಪಥದ ಬಗ್ಗೆ ನಾನು ಬರೆದ ವಿಶ್ಲೇಷಣೆ ಇಂದಿನ (೨೦.೦೪. ೨೦೧೮) ಪ್ರಜಾವಾಣಿಯಲ್ಲಿ.... ಲೇಖನದ ಪೂರ್ಣ ಪಾಠ ಇಲ್ಲಿದೆ 

ಕೃಷ್ಣನಲ್ಲಿ ನಾವು ಎಲ್ಲಾ ದೇವರನ್ನು ಕಾಣ ಬಲ್ಲೆವಾದರೆ ಕ್ರಿಸ್ತನಲ್ಲೂ ನಾವೇಕೆ ಕೃಷ್ಣನನ್ನು ನೋಡಬಾರದು ಎಂಬುದು ಯೋಚನಾರ್ಹ ಜಿಜ್ಞಾಸೆ. ರಾಮ , ರಹೀಮ ಕ್ರಿಸ್ತರನ್ನು ಪರಸ್ಪರರಲ್ಲಿ ಕಾಣಬಹುದಾದರೆ  ಸಮಾಜದ ಬಹುದೊಡ್ಡ ಪಿಡುಗೊಂದು ತಂತಾನೇ ಸಾಮರಸ್ಯವಾಗಿ ಬದಲಾಗಬಹುದೇನೋ!!. ಆದರೆ ಇದು ಅಷ್ಟು ಸುಲಭದ ಮಾತಲ್ಲ. ಹೀಗೇನಾದರೂ ಆಗಬಹುದಾದರೆ ಅದನ್ನು ಮಾಡುವ ತಾಕತ್ತು ಕಲೆಗೆ ಇದೆ ಎಂಬುದನ್ನಿ ನಿರೂಪಿಸಿದ ವಿಭಿನ್ನ ಆಲೋಚನೆಯ ಆಯೋಜನೆಗೆ ಮಂಗಳೂರು ಪುರಭವನದಲ್ಲಿ ವಿದುಷಿ ರುತ್ ಪ್ರೀತಿಕಾ ಪ್ರಸ್ತುತ ಪಡಿಸಿದ ಕ್ರಿಸ್ತ ಪಥ ಕಾರಣವಾಯಿತು. 

ನೃತ್ಯ ಗುರು ವಿದ್ಯಾಶ್ರೀ ರಾಧಾಕೃಷ್ಣ ಸದಾ ಹೊಸತನದ ಹುಡುಕಾಟದಲ್ಲಿರುವವರು. ಸವಾಲು, ವಿರೋಧ, ಬೆಂಬಲ ಇಂತಹ ಹುಡುಕಾಟದಲ್ಲಿ ಸಹಜವೆಂದು ನಂಬಿ, ಅದಕ್ಕೆ ಪೂರ್ವತಯಾರಿಯೊಂದಿಗೇ ತಮಗನಿಸಿದ ಧನಾತ್ಮಕ ಯೋಜನೆಯನ್ನು ಕಾರ್ಯರೂಪಕ್ಕೆ ತರುವವರು. ಇಂತಾದ್ದೇ ಸಾಹಸವನ್ನು ಅವರು ಕೈಗೊಂಡಿದ್ದು, ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತ ನಾಟ್ಯಕ್ಕೆ ಏಸು ಕ್ರಿಸ್ತನ ಚರಿತ್ರೆಯನ್ನು ಅಳವಡಿಸಿಕೊಂಡು ಕ್ರಿಸ್ತ ಪಥದ ಮೂಲಕ ರಂಗಕ್ಕೇರಿಸಿದ್ದು-ಗೆದ್ದದ್ದು!

ಇವರ ಗರಡಿಯಲ್ಲಿ ಪಳಗಿದ ಶಿಷ್ಯೆ ರುತ್ ಪ್ರೀತಿಕಾ ಈ ಯೋಜನೆಯ ಕ್ರಿಸ್ತ ಪಥದಲ್ಲಿ ಹೆಜ್ಜೆ ಹಾಕಿದ್ದಾರೆ. ಈಕೆಯ ತಂದೆ ತಾಯಿ ವೈದ್ಯರು. ತಮ್ಮ  ಬಿಡುವಿರದ ವೃತ್ತಿಯಲ್ಲೂ ಕಲೆಗೆ ಪ್ರೋತ್ಸಾಹ ನೀಡುತ್ತಲೇ ಬಂದವರು. ಇದಕ್ಕೂ ಮಿಗಿಲಾಗಿ ಮಗಳ ಮೂಲಕ ಕ್ರಿಸ್ತ ಪಥವನ್ನು ಏಸು ಕ್ರಿಸ್ತನ ಪುನರುತ್ಥಾನದ ದಿನವೇ ವೇದಿಕೆಗೆ ಏರಿಸುವ ಪರಿಕಲ್ಪನೆ ಮಾಡಿದವರು. ವೃತ್ತಿ. ಮತ, ಪಂಥಗಳ್ಯಾವುದೂ ಕಲೆಯ ಅಭಿವ್ಯಕ್ತಿಗೆ ಅಡ್ಡಿಯಾಗದು ಎಂಬುದನ್ನು ತೋರಿದವರು-ಮೆಚ್ಚುಗೆಗೆ ಪಾತ್ರರಾದವರು. 

ಕ್ರಿಸ್ತ ಪಥದ ನಿರ್ಮಾಣಕ್ಕೆ ವಿದ್ಯಾಶ್ರೀ ರಾಧಾ ಕೃಷ್ಣ ತಮ್ಮನ್ನು ತೊಡಗಿಸಿಕೊಂಡ ರೀತಿ, ತಪಸ್ಸಿನಂತೆ! ಅನೇಕ   ಗ್ರಂಥಗಳನ್ನು ಹೊಕ್ಕು ತಲ್ಲೀನರಾದ ತಾದಾತ್ಮ್ಯತೆ,   ಸಾಹಿತ್ಯ ರಚನೆಯೂ ಸವಾಲೆಂಬುದನ್ನು ಮನಗಂಡು ಸ್ವತಃ ತಾವೇ ಸಾಹಿತ್ಯ ರಚಿಸಿದ್ದು, ಅದಕ್ಕನುಗುಣವಾಗಿ ತನ್ನ ಶಿಷ್ಯೆಯನ್ನು ಪ್ರತೀ ಹೆಜ್ಜೆಯಲ್ಲೂ ನಾವೀನ್ಯತೆಯ ಎರಕ ಹೊಯ್ದು ಅಣಿಗೊಳಿಸಿದ್ದು, ಕ್ರಿಸ್ತ ಪಥದ ಯಶಸ್ಸಿನ ಬಹುಪಾಲು ಶ್ರೇಯಕ್ಕೆ ಕಾರಣವೆನ್ನುವುದು ನಿರೂಪಿತವಾದ ಸತ್ಯ.

ಭರತನಾಟ್ಯ ಪೃಸ್ತುತಿಯ ಆರಂಭದ ಭಾಗ ಪುಷ್ಪಾಂಜಲಿ. ಕ್ರಿಸ್ತಪಥದಲ್ಲಿ ಇದನ್ನು ಹೇಗೆ ಅಳವಡಿಸಿಕೊಳ್ಳಲಾಗುವುದೋ ಎಂಬ ಸಹಜ ಕುತೂಹಲ ಪ್ರೇಕ್ಷಕನದ್ದು. ಸತ್ಯವೇದದ ’ಆದಿಕಂಡ’   ಪುಸ್ತಕದ ಪ್ರಥಮ ಅಧ್ಯಾಯದ ಪ್ರಕಾರ ಈ ವಿಶ್ವದ ಸೃಷ್ಟಿ ಆರುದಿನಗಳಲ್ಲಿ ಆಗುತ್ತದೆ. ಇಂತಹ ವಿಶಿಷ್ಟ ಸೃಷ್ಟಿಯ ಕಾರಣೀಕರ್ತ ಭಗವಂತನಿಗೆ ಪ್ರತೀ ದಿನಕ್ಕೂ ಸಲ್ಲಿಸುವ ಪುಷ್ಪಾಂಜಲಿಯ ಕಲ್ಪನೆಯೇ ತಲೆದೂಗುವಂತೆ ಮಾಡಿತ್ತು. ಬೆಳಕು ಕತ್ತಲೆ,  ಆಕಾಶ,  ಭೂಜಲಸಸ್ಯರಾಶಿ,  ಸೂರ್ಯನಕ್ಷತ್ರಾದಿಗಳು, ಪಕ್ಷಿ, ಜಲ-ಭೂಚರ ಪ್ರಾಣಿ ಸಂಕುಲ ಹಾಗೂ ಕೊನೆಗೆ ಮಣ್ಣಿನಿಂದ ಮಾನವನ ಉದ್ಭವ-ಓಹ್! ದೈವ ಸೃಷ್ಟಿ ಅದ್ಭುತವೆನ್ನುತ್ತೇವೆ-ಈ ಅದ್ಭುತವನ್ನು ನೃತ್ಯ ಬಂಧದಲ್ಲಿ ಕಟ್ಟಿ ಹಾಕಿ, ಹೆಜ್ಜೆ-ತಾಳ-ಲಯಗತಿಗಳ ಮೂಲಕ ಪುಷ್ಪಾಂಜಲಿ ಸೃಷ್ಟಿಯ ಆರೂ ದಿನಗಳಿಗೆ ಪುಷ್ಪಾಂಜಲಿ  ಸಲ್ಲಿಸುತ್ತಾ   ಸಾಗಿದಾಗ ಕ್ರಿಸ್ತ ಪಥದಲ್ಲಿ ಪ್ರೇಕ್ಷಕರೂ ಹೆಜ್ಜೆ ಆರಂಭಿಸಿಯಾಗಿತ್ತು!. ಈ ಲೋಕದ ವೈಚಿತ್ರ್ಯವೆಂಬಂತೆ ಸುಂದರ ಸೃಷ್ಟಿಯಲ್ಲಿ ಮಾನವ  ಕಾಲ ಸರಿದಂತೆ ಸೈತಾನನಾಗುತ್ತಾ ಸಾಗುವುದು, ಅವನನ್ನು ತಿದ್ದಲು ಪ್ರವಾದಿಯ ರೂಪದಲ್ಲಿ ದೇವರು ಮತ್ತೆ ಸೃಷ್ಟಿಕಾರ್ಯ ಮಾಡುವುದು....ನಡೆದೇ ಇದೆ. ಇದನ್ನು ರಾಗಮಾಲಿಕೆ ಆದಿತಾಳದಲ್ಲಿ    ನೃತ್ಯಗಾತಿ ಪ್ರಸ್ತುತಪಡಿಸಿದರು.

ಗುರು ಶಿಷ್ಯರ ನಡುವಿನ ಸಂಯೋಜನಾ ಸಾಮರ್ಥ್ಯಕ್ಕೆ ಸಾಕ್ಷಿಯೆನ್ನುವಂತೆ ಪ್ರಸ್ತುತವಾಗುವುದು ವರ್ಣ. ಇದು ನೃತ್ಯ ಪ್ರಸ್ತುತಿಯಲ್ಲಿ ಬಹುಮುಖ್ಯ ಮತ್ತು ಅಷ್ಟೇ ದೀರ್ಘ, ಕ್ಲಿಷ್ಟಕರ ಭಾಗ.   ವರ್ಣವನ್ನು ಇಲ್ಲಿ ವಿಶೇಷ ಆಸ್ತೆಯಿಂದ, ಸಿಂಹೇಂದ್ರ ಮಧ್ಯಮ ಆದಿತಾಳದಲ್ಲಿ ಸಮಗ್ರ ಸಾಹಿತ್ಯದೊಂದಿಗೆ  ಸಂಯೋಜಿಸಲಾಗಿತ್ತು.    ತಾಪತ್ರಯಗಳಿಂದ ಬಳಲುವ ನಮ್ಮಂತವರನ್ನು  ಕರುಣೆಯಿಂದ ಕಾಯಲಾರೆಯಾ ಎಂದು ಕೇಳಿಕೊಳ್ಳುವ ದೃಶ್ಯದೊಂದಿಗೆ, ಕುರಿಗಳ ಮಧ್ಯೆ ಕ್ರಿಸ್ತಜನನ ವಾಗುವ ಸನ್ನಿವೇಶವನ್ನು ತನ್ನ ನೃತ್ಯದ ಮೂಲಕ ಪ್ರಸ್ತುತ ಪಡಿಸಿದಾಗ ರುತ್ ಅಭಿನಯ ಸಾಮರ್ಥ್ಯಕ್ಕೆ ತಲೆದೂಗದವರೇ ಇಲ್ಲ. ಚರಣದಲ್ಲಿ ಬಾಲ ಯೇಸು ಧರ್ಮಬೋಧಕರ ಜೊತೆ ಉಪದೇಶ ಕೇಳುವಾಗ ಅಚ್ಚರಿಯಿಂದ ಗಮನಿಸುವ ಮರಿಯಾಳನ್ನು ಸಮೀಕರಿಸುವ ನರ್ತಕಿ ಆ ವಿಚಾರಧಾರೆಯನ್ನು ನನಗೂ ಹರಿಸು ಎನ್ನುತ್ತಾಳೆ. ಎತ್ತುಗಡೆ ಸಾಹಿತ್ಯದಲ್ಲಿ ನಿರಾಭರಣ ಸುಂದರ ದೇವರನ್ನು ಸ್ತುತಿಸುವ ಮೂಲಕ, ವರ್ಣ ನಿಜಾರ್ಥದಲ್ಲಿ ಗುರು-ಶಿಷ್ಯರ ನಡುವಿನ ಸಂವಹನ ಸಾಮರ್ಥ್ಯ ಒರೆಗೆ ಹಚ್ಚಿ, ಇಬ್ಬರನ್ನೂ ಗೆಲ್ಲಿಸಿದ ಕೃತಿಯಾಗಿ ಮೂಡಿಬಂದುದು ಗಮನಾರ್ಹ.
ಏಳು ಶತಮಾನಗಳ ಇತಿಹಾಸವಿರುವ, ವಿಶೇಷ ಸಂಚಾರಿ ಭಾವವುಳ್ಳ ಶುದ್ಧ ನಾಟ್ಯ ಭಾಗವಾಗಿರುವುದು  ಪದಂ ಪ್ರಸ್ತುತಿ. ಸತ್ಯವೇದದಲ್ಲಿ ಯೋಹಾನ ರಚಿಸಿದ ಸುವಾರ್ತೆಯ ನಾಲ್ಕನೇ ಅಧ್ಯಾಯದ ಮೇಲೆ ರಚಿತವಾದ ಪದಂ ರುತ್ ಹೆಜ್ಜೆಗಳಲ್ಲಿ ಮತ್ತು ಭಾವಾಭಿವ್ಯಕ್ತಿಯಲ್ಲಿ ಮೂಡಿ ಬಂತು. ಸರಿ ಸರಿ ಆತ ಗುರುವೇ ಸರಿ ಎನ್ನುವ ಉದ್ಘಾರಾಧಾರಿತ ಸಾಹಿತ್ಯ ಅದ್ಭುತವೆನ್ನುವಂತೆ ಮೂಡಿ ಬಂತು. ಅಸ್ಪ್ರಶ್ಯ, ಕುಲಹೀನ ಮಹಿಳೆ ಎಂದು ಹೀಗಳೆತಕ್ಕೊಳಗಾದ  ಮಹಿಳೆಯೋರ್ವಳನ್ನು ಅಮ್ಮಾ ಎಂದು ಸಂಭೋಧಿಸುವ ಮೂಲಕ ಕ್ರಸ್ತ ಸಮಾನತೆ ಸಾರುವ ಮತ್ತು ಇಂತಹ ವಾತ್ಸಲ್ಯದ ಕರೆಗೆ ಕರಗಿದ ಆ ಮಹಿಳೆ ಉದ್ಘರಿಸುವ  ನೀನು ಗುರುವೇ  ಸರಿ ಸರಿ ಎನ್ನುವ ಭಾವವನ್ನು ಅಭಿವ್ಯಕ್ತಗೊಳಿಸಿದ ರೀತಿ ಅನನ್ಯ-ಅತಿಸುಂದರವಾಗಿತ್ತು. ಲಘು ಶಾಸ್ರೀಯ ಶೈಲಿಯಲ್ಲಿ ಮೂಡಿಬಂದ ಕೀರ್ತನೆಯಲ್ಲಿ ಕ್ರಿಸ್ತ ಪುನರುತ್ಥಾನದ ನಂತರ  ಸಾಂಕೇತಿಕವಾಗಿ ಆತನಿಂದ ಶಿಲುಬೆಯನ್ನು ಪಡೆದು ಹೊತ್ತು ಸಾಗುವ ಅಭಿನಯ ಕಣ್ಣೆದುರು ಕಟ್ಟಿದಂತಿತ್ತು.

ಭರತನಾಟ್ಯ ಪ್ರದರ್ಶನದ ಕೊನೆಯ ಭಾಗ ತಿಲ್ಲಾನ.  ಕ್ರಿಸ್ತನ ಸಮಾಧಿಯ ಕಲ್ಲುರುಳಲ್ಲಪಟ್ಟದ್ದನ್ನು ಕಂಡ ಮರಿಯ, ಸಲೋಮೆಯರು ಯೇಸು ಜೀವಿತವಾಗಿ ಎದ್ದುಹೋದ ಸನ್ನಿವೇಶವನ್ನು ದೇವದೂತನಿಂದ ಕೇಳಿ  ಅಚ್ಚರಿ, ಭಾವಾವೇಶಕ್ಕೊಳಗಾಗುವ ಸನ್ನಿವೇಶ, ಮೃತ್ಯಂಜಯ ಕ್ರಿಸ್ತ ನಮ್ಮನ್ನೆಲ್ಲಾ ಯುಗ ಸಮಾಪ್ತಿಯವರೆಗೂ  ಮುನ್ನಡೆಸುವ ಪಥವಾಗಿರುತ್ತಾನೆ ಎಂಬ ಸಂದೇಶದ ಸಾರ ಪ್ರಸ್ತುತಗೊಂಡಿತು. 

ಒಟ್ಟೂ ಕ್ರಿಸ್ತ ಪಥದಲ್ಲಿ ಅನೇಕವನ್ನು ಏಕವಾಗಿ ಹೊರತಂದದ್ದು ವಿಶೇಷ. ಶಾಸ್ತ್ರೀಯ ಕಲೆಯ ಯಾವ ಭಾಗಕ್ಕೂ ಚ್ಯುತಿ ತರದಂತೆ, ಯಾವುದೇ ಮತ-ಧರ್ಮಕ್ಕೆ ಕಲೆ ಸೀಮಿತವಲ್ಲವೆಂಬುದನ್ನು ನಿರೂಪಿಸುವಂತೆ,  ಭರತನಾಟ್ಯ ಪ್ರಸ್ತುತಿಯ ಮೂಲಕ ದೇವನೊಬ್ಬನೇ, ನಾಮ ಹಲವು ಎಂಬ ತತ್ವಾಧಾರವನ್ನು ಪ್ರೇಕ್ಷಕನ ಯಾವ ಭಾವನೆಗೂ ನೋವುಂಟಾಗದಂತೆ ಪ್ರಸ್ತುತ ಪಡಿಸಿದ್ದು ವಿಶೇಷ. ಸ್ವತ ನೃತ್ಯ-ಸಂಗೀತ ಕಲಾವಿದೆಯಾಗಿ ಗುರುತಿಸಿಕೊಂಡಿರುವ ವಿದ್ಯಾಶ್ರೀ ಇಲ್ಲಿ ಸಾಹಿತ್ಯ ರಚನೆಯ ಮೂಲಕ ತಮ್ಮ ಗಟ್ಟಿ ತನ ತೋರಿದ್ದಾರೆ. ಹೆಚ್ಚಿನ ಎಲ್ಲಾ ಹಾಡುಗಳೂ ಅವರವೇ ರಚನೆಯಾಗಿದ್ದು, ರುತ್ ತಂದೆ ಡಾ.ಸುರಂಜನ್ ಮಾಬೆನ್ ಮತ್ತು ಶ್ರೀ ಸಾಮ್ಯುವೆಲ್ ಸಾಧು ಒಂದೊಂದು ರಚನೆ ಮಾಡಿದ್ದಾರೆ. ಜಿ ಗುರುಮೂರ್ತಿಯವರ ಸಂಗೀತ ಸಂಯೋಜನೆ, ನೃತ್ಯ ಸಂಯೋಜನೆ ಗುರುವಿನದ್ದಾಗಿತ್ತು. 
ರುತ್ ಪ್ರೀತಿಕಾ ಈ ಹಿಂದೆ ಭರತ ನಾಟ್ಯದ ಮೂಲ ಪ್ರಕಾರವಾದ ಹಿಂದೂ ದೇವತೆಗಳನ್ನು ಸಂಕೇತಿಸುವ ನೃತ್ಯಗಳಿಗೂ  ಸೈ ಎನ್ನುವಂತೆ ಹೆಜ್ಜೆ ಹಾಕಿದ್ದು, ಕ್ರಿಸ್ತ ಪಥದ ಮೂಲಕ ಹೊಸ ಸಾಧ್ಯತೆಯೊಂದನ್ನು  ಪರಿಚಯಿಸುವ ಯಶಸ್ವೀ ಪ್ರಯತ್ನ ಮಾಡಿದ್ದಾರೆ. ಈ ಮೂಲಕ, ಭರತನಾಟ್ಯ ಎಂಬ ಶಾಸ್ತ್ರೀಯ ನೃತ್ಯ ಚರ್ಚ್‌ಗಳ ಅಂಗಣದಲ್ಲೂ ಪ್ರದರ್ಶಿತವಾದರೆ  ನಿಜಕ್ಕೂ ಇದೊಂದು ಸ್ವಾಗತಾರ್ಹ ಕ್ರಾಂತೀಕಾರಿ ಹೆಜ್ಜೆ ಎಂಬುದು ನಿಸ್ಸಂದೇಹ ಮತ್ತು ಅದು ಆಗುವ ಎಲ್ಲಾ ವಿಶ್ವಾಸ ಈ ಪ್ರದರ್ಶನದ ನಂತರ ಗಟ್ಟಿಯಾಗಿದೆ. ಒಟ್ಟಾರೆಯಾಗಿ ಒಂದು ರೀತಿಯ ಹಿತವಾದ ಸಂಚಲನಕ್ಕೆ ಈ ಪ್ರಸ್ತುತಿ ಕಾರಣವಾಗಿದೆ. ಪ್ರತೀ ನೃತ್ಯದ ವಿವರಣೆಯನ್ನು ಇನ್ನೋರ್ವ ಕಲಾವಿದೆ ದೀಕ್ಷಾ ಸದಾನಂದ ಮತ್ತು ರುತ್ ಕನ್ನಡ, ಇಂಗ್ಲಿಷ್ ನಲ್ಲಿ  ವಿವರಿಸಿ ಹೇಳಿ ಪ್ರಸ್ತುತಗೊಳಿಸಿದ್ದು, ಪ್ರೇಕ್ಷಕನ ಮನ ಪಟಲದಲ್ಲಿ ಇಡೀ ಸಾಹಿತ್ಯ  ಅರ್ಥಪೂರ್ಣವಾಗಿ ಮೂಡುವಂತೆ ಮಾಡಿದ್ದೂ, ಕ್ರಿಸ್ತಪಥದ ಮತ್ತೊಂದು ಹೆಗ್ಗಳಿಕೆ.

Saturday, 31 March 2018

ಸುಮಸಾದ ರಂಗ ಹಬ್ಬ ಆರರಲ್ಲಿ ’ಮೇರು’ವಾದ ನಾಟಕಗಳು

ಫೆಬ್ರವರಿ 11,2018 ರಿಂದ ಫೆಬ್ರವರಿ 17,2018 ರವರೆಗೆ ಉಡುಪಿಯಲ್ಲಿ ನಡೆದ ಸುಮನಸಾ ರಂಗಹಬ್ಬ-೬ರ ನಾಟಕಗಳ ಕಿರು ಅವಲೋಕನ- 30.03.2018 ರ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹದ ಪೂರ್ಣ ರೂಪ 

ಪ್ರಜಾವಾಣಿ ೩೦.೦೩.೨೦೧೮
ಸಾಂಸ್ಕೃತಿಕವಾಗಿ ಶ್ರೀಮಂತ ನಗರ ಎಂದೇ ಪರಿಗಣಿಸಲ್ಪಡುವ ಪೊಡವಿಗೊಡೆಯನ ನಾಡು ಉಡುಪಿಯ ರಂಗಭೂಮಿಗೆ ಹದಿನಾರರ ಹರೆಯದ ಸುಮನಸಾ ಕೊಡವೂರು-ಉಡುಪಿಯ ಕೊಡುಗೆ ಮಹತ್ವದ್ದು. ಸಾಂಸ್ಕೃತಿಕ, ಸೇವಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆಗೆ, ತನ್ನ ಹತ್ತನೆಯ ವರ್ಷದಲ್ಲಿ   ರಂಗ ಹಬ್ಬಕ್ಕಿದು ಆರರ ಹರ್ಷ. ಏಳು ದಿನಗಳ ಈ ರಂಗ ಹಬ್ಬದಲ್ಲಿ ಸುಮನಸಾದ ಒಂದು ನಾಟಕ, ಯಕ್ಷಗಾನ ಹಾಗೂ ಏಕವ್ಯಕ್ತಿ ಅಭಿನಯಗಳನ್ನೂ ಒಳಗೊಂಡು ಒಂದಕ್ಕಿಂತ ಒಂದು ಭಿನ್ನವಾದ  ಎಂಟು ಪ್ರಸ್ತುತಿಯನ್ನು ನೀಡಿದ್ದು, ಕಲಾಸಕ್ತರ ಗಮನ ಸೆಳೆದುವು.  


ಥ್ರೀ ರೋಸಸ್ (ತಕ್ಷ ಥಯೇಟ್ರಿಕ್ಸ್, ಬೆಂಗಳೂರು ಪೃಸ್ತುತಿ)

ಉದ್ಘಾಟನಾ ದಿನ ಪ್ರದರ್ಶಿತವಾದ ನಾಟಕ ಥ್ರೀ ರೋಸಸ್. ತೀರಾ ಸಾಮಾನ್ಯವಾದ ಕಥೆಯೊಂದಕ್ಕೆ ರಂಗದ ಮೇಲೆ ಅಸಾಧಾರಣತೆಯ ರೂಪು ಕೊಟ್ಟು ರಂಗಾಸಕ್ತರನ್ನು ಸೆಳೆದ ಈ ನಾಟಕ, ಮೂವರು ಹೆಣ್ಣುಗಳ ನಡುವಿನ ತಾಕಲಾಟದಿಂದ ತಿಣುಕಾಡುವ ಪ್ರೇಮಿಯೊಬ್ಬನ ಪರಿಸ್ಥಿತಿಯನ್ನು ಪ್ರತಿಬಿಂಬಿಸಿತ್ತು.

ಸ್ನೇಹಿತನೋರ್ವನನ್ನು ಅವನ ಕೋರಿಕೆಯ ಮೇಲೆ ಪ್ರೇಯಸಿಯಿಂದ ಬಿಡುಗಡೆ ಮಾಡಿಸಲು ಹೋಗುವ ಕಥಾ ನಾಯಕ, ತಾನೇ ಆಕೆಯೊಂದಿಗೆ ಏಕಮುಖ ಪ್ರೀತಿಗೆ ಸಿಲುಕುವುದು, ಅವನಿಷ್ಟದ ವಿರುದ್ಧವಾಗಿ ಅವನ ಕಛೇರಿಯ ಮತ್ತೋರ್ವ ಯುವತಿ ತನ್ನ ಪ್ರೀತಿಯಲ್ಲಿ ನಾಯಕನನ್ನು ಬೀಳಿಸಿಕೊಳ್ಳಲು ಯತ್ನಿಸುವುದು, ಹೊಸದಾಗಿ ಕಛೇರಿಗೆ ಬಂದ ಮತ್ತೋರ್ವ ಮುಗ್ಧೆಯನ್ನು ಕಥಾನಾಯಕ ಪ್ರೀತಿಸುವುದು.....ಈ ಎಲ್ಲಾ ಗೊಂದಲಗಳ ನಡುವೆ ಕಥಾ ನಾಯಕ ತನ್ನ ಮನದಿಂಗಿತವನ್ನು ತಿಳಿಸುವಲ್ಲಿ ಮೂವರೊಂದಿಗೂ ವಿಳಂಬ ಮಾಡುವ ಪರಿಣಾಮ, ಕೊನೆಗೆ ಯಾರೂ ಇವನ ಪ್ರೀತಿಯನ್ನು ಅರಿತುಕೊಳ್ಳದೇ ಹೋಗುವುದು ಇದು ಕಥೆಯ ತಿರುಳಾದರೆ, ಹಾಸ್ಯಮಯ ಸನ್ನಿವೇಶಗಳು, ನಟರ ಪ್ರಬುದ್ಧ ಅಭಿನಯ ಉತ್ತಮ ಪೃಸ್ತುತಿಯ ಸಾಲಿನಲ್ಲಿ ನಾಟಕವನ್ನು ನಿಲ್ಲಿಸಿದರೂ, ಧ್ವನಿಮುದ್ರಿತ ಸಂಗೀತದ ಅನಿಯಂತ್ರಿತ ನಿರ್ವಹಣೆ ಪ್ರೇಕ್ಷಕರಿಗೆ ಕಿರಿ ಕಿರಿ ಉಂಟು ಮಾಡಿ ನಾಟಕದ ನೈಜ ಪ್ರದರ್ಶನ ಕಳೆಗುಂದಿತು

ಶಿಕಾರಿ (ರಂಗಾಯಣ, ಮೈಸೂರು ಪೃಸ್ತುತಿ)
ಯಶವಂತ ಚಿತ್ತಾಲರ ಜನಪ್ರಿಯ ಕಾದಂಬರಿಗಳಲ್ಲೊಂದಾದ ’ಶಿಕಾರಿ’ಯನ್ನು, ರಂಗಕ್ಕಳವಡಿಸುವ ಸಾಹಸದಲ್ಲಿ ನಿರ್ದೇಶಕ ಪ್ರಕಾಶ್ ಬೆಳವಾಡಿಯವರು ಗೆದ್ದಿದ್ದಾರೆ.  ಉಡುಪಿಯ ರಂಗಭೂಮಿಯಲ್ಲಿ ಈ ಪ್ರದರ್ಶನವೇ ಒಂದು ದಾಖಲೆಯಾಗಿ ಜನ ಮಾನಸದಲ್ಲಿ ಉಳಿಯುವ ಮಟ್ಟದ ಪ್ರದರ್ಶನವಾಗಿ ಶಿಕಾರಿ ಮೂಡಿಬಂತು. 

ಶಿಕಾರಿ 
ಕಾರ್ಪೊರೇಟ್ ಜಗತ್ತಿನ ಅನೇಕ ಒಳ ತಿರುಳುಗಳನ್ನು ಮತ್ತು ಅದರಲ್ಲಿರುವ ಸಮರ್ಥ ಉದ್ಯೋಗಿಯೊಬ್ಬ ತನ್ನ ಸಾಮರ್ಥ್ಯದಿಂದ ಹಂತ ಹಂತವಾಗಿ ವೃತ್ತಿಯಲ್ಲಿ ಔನ್ನತ್ಯ ಸಾಧಿಸುತ್ತಾ, ವ್ಯಾವಹಾರಿಕವಾದ ಅವನ  ಕನಿಷ್ಠ ಜ್ಞಾನ ಎಂತ ಬೆಲೆ ತೆರುವಂತೆ ಮಾಡಬಲ್ಲುದು ಎಂಬುದನ್ನು ಕತೆ ಎಳೆ ಎಳೆಯಾಗಿ ತೆರೆದಿಡುತ್ತಾ ಸಾಗುತ್ತದೆ. 

ಮೂರುಘಂಟೆಗಳ ಅವಧಿಯ ನಾಟಕದ ಮೂಲಕ ಇಡೀ ಕಾರ್ಪೊರೇಟ್ ವಲಯವನ್ನೇ ಸುತ್ತಿಸಿದ್ದು ಅಚ್ಚರಿ.   ಓರ್ವ ಸಾಮಾನ್ಯ ನೌಕರ, ತನ್ನ ಸ್ವ ಸ್ವಾಮರ್ಥ್ಯದಿಂದ ಕಂಪೆನಿಯೊಂದರಲ್ಲೆ ಉನ್ನತ ಪದವಿ ಪಡೆಯುತ್ತಲೇ ಸಾಗುತ್ತಾನೆ.  ಅವನ  ಬಾಲ್ಯ ಕರಾಳ ನೆನಪುಗಳ ಆಗರ. ಆ ನೆನಪನ್ನು ಆತ ಮರೆಯಲೆತ್ನಿಸಿದರೂ, ಅವನ ಉನ್ನತಿ ಸಹಿಸದ ಒಂದು ವರ್ಗ, ಅವನದ್ದೇ ಕಂಪೆನಿಯೊಳಗೆ ಹುಟ್ಟಿಕೊಳ್ಳುತ್ತದೆ. ವ್ಯವಸ್ಥಿತವಾಗಿ ಅವರು ಹೆಣೆದ ಪರಿಸ್ಥಿತಿಯ ಕೈಗೊಂಬೆಯಾಗುವಂತೆ ವ್ಯೂಹದೊಳಗೆ ಆತ ಬಂಧಿಯಾಗುತ್ತಲೇ ಸಾಗುತ್ತಾನೆ. 

ಕಾರ್ಪೊರೇಟ್ ಜಗತ್ತು  ಹಲವಾರು ವಿಸ್ಮಯಗಳ ಸಾಗರದಂತೆ. ಇಲ್ಲಿ ಜಾಣ್ಮೆ ಮತ್ತು ವ್ಯವಾಹಾರಿಕ ಜಾಣ್ಮೆಗಳೆರಡೂ ಸಮಾನವಾಗಿದ್ದರಷ್ಟೇ ಬದುಕಲು ಸಾಧ್ಯ. ’ಶಿಕಾರಿ’ ಯ ವಿಶೇಷತೆ ಎಂದರೆ, ಅದರಲ್ಲಿನ ಪ್ರಬುದ್ಧ ನಟರು ಕಾಲಕ್ಕೆ ತಕ್ಕಂತೆ, ಕಾಲ-ಲಿಂಗ-ಸ್ಥಿತ್ಯಂತರ ಬೇಧವಿಲ್ಲದೇ ಪಾತ್ರಗಳಲ್ಲಿ ಲೀನರಾಗುವ ಪರಿ.’ಈ ದಿನವನ್ನು ಎಲ್ಲಾ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಭಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದು ಏನು ಪ್ರಯೋಜನ?’ ಎನ್ನುವ ನಿರಂತರವಾಗಿ ಮನುಷ್ಯನನ್ನು ಕಾಡುವ ಪ್ರಶ್ನೆಯೇ ಮತ್ತೆ ಮತ್ತೆ ಎದುರಾಗುವಂತೆ ಹೆಣೆದ ಕಾದಂಬರಿ ’ಶಿಕಾರಿ’-ರಂಗದ ಮೇಲೂ ಇದೇ ಪ್ರಶ್ನೆ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಕತ್ತಲೆ ಬೆಳಕು(ರಂಗಾಯಣ, ಮೈಸೂರು ಪೃಸ್ತುತಿ)

ಶ್ರೀ ರಂಗರ ವಿಶಿಷ್ಠ ಕೃತಿಗಳಲ್ಲಿ ಕತ್ತಲೆ-ಬೆಳಕು ಒಂದು. ಇದನ್ನು ಮೂರನೆಯ ದಿನ ರಂಗಾಯಣದ ಕಲಾವಿದರು ಪ್ರಸ್ತುತ ಪಡಿಸುವ ಮೂಲಕ, ’ಶಿಕಾರಿ’ಗಿಂತ ಸಂಪೂರ್ಣ ಭಿನ್ನವಾಗಿದ್ದ (ಕತ್ತಲೆ-ಬೆಳಕಿನ ಹಾಗೇ!) ನಾಟಕದ ಆಸ್ವಾದನೆಗೆ ನೆರೆದ ಪ್ರೇಕ್ಷಕರನ್ನು ಕೊಂಡೊಯ್ದರು.

ನಾಟಕ-ಜೀವನ-ವಸ್ತು-ಶೈಲಿ ಇವುಗಳ ನಡುವೆ ನಮ್ಮ ಪ್ರೇಕ್ಷಕ- ನಿರ್ದೇಶಕಇವರ ಪರಸ್ಪರ ಸಂವಹನ ಈ ನಾಟಕದ ವಿಶೇಷತೆ. ಕೆಲವೊಂದು ಸಾರ್ವಕಾಲಿಕ ಪ್ರಶ್ನೆಗಳಿಗೆ ಉತ್ತರ ಸಿಗದೆ ಕತ್ತಲಲ್ಲಿ ತೊಳಲಾಡುವ, ಮೆದುಳನ್ನು ಚಿಂತನೆಗೆ ಹಚ್ಚಿ ಅವುಗಳಿಗೆ ಸಮಾಧಾನ ಹುಡುಕುತ್ತಾ ಬೆಳಕನ್ನು ಅರಸುವ ಪ್ರಯತ್ನದ ನಡುವೆ ನವಿರಾದ ಹಾಸ್ಯ ಹಾಗೂ ಮೊನಚಾದ ಮಾತುಗಳು ನಾಟಕದ ಮೆರುಗನ್ನು ಹೆಚ್ಚಿಸುತ್ತವೆ. ರಂಗದ ಮೇಲೆ ಬಂದ ಪಾತ್ರಗಳೆಲ್ಲವೂ ಲವಲವಿಕೆಯಿಂದತಮ್ಮಕಾರ್ಯ ನಿರ್ವಹಿಸಿ ಪ್ರಖ್ಯಾತರಂಗನಿರ್ದೇಶಕ- ನಾಟಕಕಾರ-ಸಂಗೀತಜ್ಞ ಬಿ.ವಿಕಾರಂತರ ನೆನಪನ್ನು ಮಾಡುತ್ತವೆ. ಅಂದಿನ ಕಾಲಕ್ಕೆ ಅನ್ವಯವಾಗುವ ಶ್ರೀರಂಗರ ಟೀಕೆ-ಟಿಪ್ಪಣಿಗಳು ಇಂದಿಗೂ ಪ್ರಸ್ತುತವಾಗಿಕತ್ತಲೆ-ಬೆಳಕು ಪ್ರೇಕ್ಷಕರ ಮನದಂಗಳದಲ್ಲಿ ಚಿರಕಾಲ ಇರುವಂತೆ ಮಾಡುತ್ತವೆ. ಬೆಳಕು ಹಾಗೂ ಸಂಗೀತ ನಾಟಕದಧನಾತ್ಮಕ ಅಂಶಗಳು.

ನೆರಳು (ಸುಮನಸಾ ಕೊಡವೂರು ಪೃಸ್ತುತಿ)

ನೆರಳು 
ಮಂಗಳೂರಿನ ಯುವ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ರಾಷ್ಟ್ರೀಯ ರಂಗ ಶಾಲೆಯ ಪದವೀಧರ, ಸುಮನಸಾ ಕೊಡವೂರಿನ ಕಲಾವಿದೆ ಅಕ್ಷತ್ ಪೃಸ್ತುತ ಪಡಿಸಿದ ಏಕವ್ಯಕ್ತಿ ನಾಟಕ ನೆರಳು. ಇಂದಿನ ನಮ್ಮ ಸಮಾಜದಲ್ಲಿ ನಮ್ಮ ನಮ್ಮ ನಡುವೆ ಇರುವ ಜನ ಸಾಮಾನ್ಯರಿಂದ ಹಿಡಿದು, ಅತ್ಯುನ್ನತ ಪಟ್ಟದ ರಾಜಕಾರಣಿ, ಪೋಲೀಸ್ ವ್ಯವಸ್ಥೆ, ಮಾಧ್ಯಮಗಳ ತನಕವೂ ಹರಡಿಕೊಂಡಿರುವ ’ತಮ್ಮ ತಮ್ಮ ಮೂಗಿನ ನೇರದ’ ಜೀವನ ಶೈಲಿಯನ್ನು ಈ ನಾಟಕದ ಮೂಲಕ ವಿಡಂಬಿಸಿದ ರೀತಿ, ಸಾಮಾನ್ಯರಿಂದ ಅಸಾಮಾನ್ಯರ ತನಕವೂ ತಲುಪಬೇಕಾದ ಸ್ತರದಲ್ಲಿ ತಲುಪಿದೆ!. ಕಾಣೆಯಾದ ತಂಗಿಯನ್ನು ಅರಸುವ ಅಣ್ಣನಾಗಿ, ಸಮಾಜದ ಎಲ್ಲಾ ವರ್ಗಗಳನ್ನು, ಎಲ್ಲಾ ವ್ಯವಸ್ಥೆಗಳನ್ನೂ ಎಡತಾಕುವ ಅಣ್ಣ, ಅಲ್ಲೆಲ್ಲವೂ ತನ್ನ ನೋವಿಗೆ ಸ್ಪಂದಿಸುವ ಕನಸುಗಳ ಹೊರತಾಗಿ, ಸ್ವಾರ್ಥವನ್ನೇ ಕಾಣುತ್ತಾ, ಕೊನೆಗೂ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ಪ್ರೇಕ್ಷಕರೊಳಗೆ ಬಿಡುತ್ತಾನೆ. ಒಂದು ವಿಶಿಷ್ಠ ಪೃಸ್ತುತಿ ಎನ್ನಲಡ್ಡಿ ಇಲ್ಲದಿದ್ದರೂ. ನಾಟಕದ ಕೊನೆಯಲ್ಲಿ ಅನಿರೀಕ್ಷಿತ ತಿರುವಿನ ನಿರೀಕ್ಷೆಯಲ್ಲಿದ್ದವರಿಗೆ, ಇಂದಿನ ಸಾಮಾನ್ಯ ಕೊನೆಯೇ ಕಂಡಾಗ, ಒಂದು ಅಚ್ಚರಿ, ಒಂದು ವಾಸ್ತವ...ಹೀಗೆ ಭಿನ್ನ ಭಾವಕ್ಕೆ ಕಾರಣವಾದ ಪೃಸ್ತುತಿ. ಒಬ್ಬ ಸಮರ್ಥ ನಿರ್ದೇಶಕ ಮತ್ತು ಪ್ರಬುತ್ವಮುಖೀ ನಟನನ್ನು ’ನೆರಳು’ ಪರಿಚಯಿಸಿದ್ದು ಗೆಲುವೇ ಹೌದು!.

ಬಲಿದಾನ (ಚಂದ್ರಶೇಖರ ಪ್ರತಿಷ್ಠಾನ, ಬೆಂಗಳೂರು ಪೃಸ್ತುತಿ)

ಭಾರತ ಮಾತೆಯ ಸ್ವಾತಂತ್ರ್ಯ ಹೋರಾಟದ ಕಥಾ ಹಂದರದ ನಾಟಕ ’ಬಲಿದಾನ’. ಕುವೆಂಪು ಅವರ ರಚನೆ ಎಂದಾಗ ಇದ್ದ ಸಹಜ ನಿರೀಕ್ಷೆಯ ಮಟ್ಟವನ್ನು ತಲುಪಿಸುವಲ್ಲಿ ಕಲಾವಿದರು ನಿರೀಕ್ಷಿತ ಯಶ ಕಾಣದಿದ್ದರೂ,  ಭಾರತಮಾತೆಯದಾಸ್ಯಸಂಕೋಲೆಯ ಬಿಡುಗಡೆಗಾಗಿ ಬಲಿದಾನಗೈದ ಸ್ವಾತಂತ್ರ್ಯ ಹೋರಾಟದ ನೈಜಚಿತ್ರಣ ವನ್ನು ಪ್ರೇಕ್ಷಕರಿಗೆ ತಲುಪಿಸಿದ ಸಮಾಧಾನ ಪ್ರಧಾನವಾಗಿತ್ತು.  ಸುಧಾರಿಸ ಬಹುದಾದ ಅನೇಕ ಅಂಶಗಳು ಡಾಳಾಗಿ ಕಾಣುತ್ತಿದ್ದ ಈ ನಾಟಕ, ಅತ್ಯಂತ ಚುಟುಕು ನಾಟಕವಾಗಿಯೂ ರಂಗ ಹಬ್ಬದಲ್ಲಿ ದಾಖಲಾಯ್ತು.

ಚಿತ್ರಪಟ ರಾಮಾಯಣ(ಸುಮನಸಾ ಕೊಡವೂರು ಪೃಸ್ತುತಿ)

ಚಿತ್ರಪಟ ರಾಮಾಯಣ 
ಐದನೆಯ ದಿನ ನಡೆದದ್ದು ಮಾತ್ರ ಸುಮನಸಾ ಕಲಾವಿದರ ಬಹುಮುಖೀ ಪ್ರತಿಭಾ ದರ್ಶನ!!. ಪ್ರತೀ ವರ್ಷದ ರಂಗ ಹಬ್ಬದಲ್ಲಿ ಒಂದು ಯಕ್ಷಗಾನ ಪ್ರದರ್ಶನವನ್ನೂ ನೀಡುವ ನಾಟಕ ಕಲಾವಿದರು, ಇಲ್ಲಿ ವಿಶೇಷವಾಗಿ ಯಕ್ಷಗಾನಕ್ಕೆ  ನಾಟಕದ ಸ್ಪರ್ಶ ಒದಗಿಸಿ ರಂಜಿಸಿದರು! ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ   ಚಿತ್ರಪಟ ರಾಮಾಯಣವನ್ನು ವಿಶೇಷವಾಗಿ ಹೆಣೆದು ಪ್ರದರ್ಶಿಸಿದರು. ಪುಟ್ಟ ಬಾಲಕನಿಂದ ಹಿಡಿದು ಸುಮನಸಾದ ಹಿರಿಯ  ಸ್ತ್ರೀ ಪುರುಷ   ಕಲಾವಿದರು ಅಭಿನಯಿಸುವ ಮೂಲಕ, ಚಿತ್ರ ಪಟ ರಾಮಾಯಣ ವಿಶಿಷ್ಠ ರಂಗು ಪಡೆದು ರಂಗದ ಮೇಲಿಳಿದಾಗ,  ಸುಮನಸಾದ ಕಲಾ ಬದ್ಧತೆಗೆ ಮೂಗಿನ ಮೇಲೆ ಬೆರಳಿಡದೇ ದಾರಿ ಇರಲಿಲ್ಲ. ರಂಗ ಹಬ್ಬಕ್ಕೆ ರಂಗು ತುಂಬಿದ ಒಂದು ವಿಶಿಷ್ಠ ಪೃಸ್ತುತಿಯಾಗಿ ದಾಖಲಾದದ್ದು ಚಿತ್ರಪಟ ರಾಮಾಯಣದ ಹೆಗ್ಗಳಿಕೆ. 

ಶೂರ್ಪನಖಿಯ ಮಾಯಾ ವಿದ್ಯೆಗೆ ಮೋಸ ಹೋಗಿ ರಾವಣನಚಿತ್ರಪಟ ರಚಿಸಿ ಅದಕ್ಕೆಜೀವತುಂಬಿ ಶ್ರೀ ರಾಮನ ಸಂದಿಗ್ಧತೆಗೆ ಕಾರಣವಾಗಿ  ಕಾಡನ್ನು ಸೇರುವ ಸೀತೆಯ ವ್ಯಥೆಯ ಕಥೆಯಿದು. ಸಮರ್ಥ ಹಿಮ್ಮೇಳ,  ಬೆಳಕು, ಅಭಿನಯ ಎಲ್ಲವೂ  ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.  

ಗೋಕುಲ ನಿರ್ಗಮನ (ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದೆಯರು-ಮಂಗಳೂರು)
ಗೋಕುಲ ನಿರ್ಗಮನ 

ಕನ್ನಡದ ಕವಿ ಶ್ರೇಷ್ಠ ಪುತಿನ ಅವರ ಕೃತಿ ಗೋಕುಲ ನಿರ್ಗಮನವನ್ನು ಮಂಗಳೂರಿನ ಕಲಾ ತಂಡ ನಂದಗೋಕುಲದ ’ಮಹಿಳಾ’ ಕಲಾವಿದೆಯರೇ ಪೃಸ್ತುತ ಪಡಿಸಿದ್ದು ವಿಶೇಷ. ವಿದ್ದು ಉಚಿಲ್ ಅವರ ನಿರ್ದೇಶನದ ಈ ನೃತ್ಯ ನಾಟಕದಲ್ಲಿ, ಪುತಿನ ಅವರದ್ದೇ ಭಾಷಾ ಶೈಲಿ ಬಳಸಿಕೊಂಡಿದ್ದು,   ಹಾಡುಗಳನ್ನು ವಿಶಿಷ್ಠವಾಗಿ ಸಂಯೋಜಿಸಲಾಗಿತ್ತು. ಪ್ರದರ್ಶನದ ಅವಧಿಯಲ್ಲಿ ಪ್ರೇಕ್ಷಕರನ್ನು ಎಲ್ಲಿಯೂ ರಸಭಂಗವಾಗದ ರೀತಿಯಲ್ಲಿ  ಸೆಳೆಯುವಲ್ಲಿ ನಾಲ್ಕನೇ ತರಗತಿಯಿಂದ ಗೃಹಿಣಿಯರ ವರೆಗಿನ ಕಲಾವಿದೆಯರು ಯಶಸ್ವಿಯಾದರು. ಕೃಷ್ಣ ಒಂದು ಹುಣ್ಣಿಮೆಯ ರಾತ್ರಿಯಲ್ಲಿ ಗೋಕುಲ, ರಾಧೆ ಹಾಗೂ ಕೊಳಲನ್ನು ತೊರೆದು ಮಧುರೆಗೆ ಹೊರಡುವ ಸನ್ನಿವೇಶದ ಈ ಕೃತಿಯನ್ನು ರಂಗದ ಮೇಲೆ ತರುವುದೇ ಒಂದು ಸವಾಲಾಗಿದ್ದರೂ, ಆ ಸವಾಲಿನಲ್ಲಿ ನಿರ್ದೇಶಕರು, ನಟಿಯರು ಗೆದ್ದಿದ್ದಾರೆಂಬುದೂ ಒಂದು ಗಮನಾರ್ಹ ದಾಖಲೆ.

ರಥಯಾತ್ರೆ(ಸುಮನಸಾ ಕೊಡವೂರು)

ರವೀಂದ್ರನಾಥ ಟಾಗೋರರ ಪುಟ್ಟ ಕತೆ ರಥಯಾತ್ರೆ. ಗುರುರಾಜ ಮಾರ್ಪಳ್ಳಿಯವರು ಇದಕ್ಕೆ ರಂಗ ರೂಪ ನೀಡುವಾಗ, ಕಾಲಾತೀತವಾಗಿ ಎಂದೆಂದಿಗೂ  ಸಲ್ಲುವ ವಚನಗಳನ್ನು ಸಂಯೋಜಿಸುವ ಮೂಲಕ ರಂಗ ಹಬ್ಬದ ಸಮಾರೋಪದಂದು ಸುಮನಸಾ ಕಲಾವಿದರ ಮೂಲಕ ’ರಥಯಾತ್ರೆ’ ಮಾಡಿಸುವಲ್ಲಿ ಸಫಲರಾದರು. ಎಂದಿಗೂ ಅಳಿಯದ ಮೇಲು, ಕೀಳು, ಸಮಾಜದ ವರ್ಗ ತಾರತಮ್ಯವನ್ನು ವಿಡಂಬನಾತ್ಮಕವಾಗಿ ಹೆಣೆದ ಕಥೆ ’ರಥಯಾತ್ರೆ’. ಸುಮನಸಾ ಕಲಾವಿದರೆಲ್ಲರ ಪ್ರಬುದ್ಧ ಅಭಿನಯದೊಂದಿಗೆ ಮೂಡಿ ಬಂದ ನಾಟಕದಲ್ಲಿ ಬೆಳಕಿನ ಚಲನೆ, ಸಂಗೀತ ಸಂಯೋಜನೆ ಧನಾತ್ಮಕ ಅಂಶಗಳಾದರೆ, ಎಲ್ಲೂ ಸೋಲದ ಕಲಾವಿದರು ನಾಟಕಕ್ಕೆ ನವಚೈತನ್ಯ ತುಂಬಿದ್ದರು. ಸಮಾರೋಪಕ್ಕೆ ಒಂದು ಚೆಂದದ  ಚುಕ್ಕೆ ಇಡುವಲ್ಲಿ ರಥಯಾತ್ರೆ ಯಶಸ್ವಿಯಾಗಿ ಸುಮನಸಾ ರಂಗ ಹಬ್ಬ -೬ ಮುಗಿದಾಗ ಮುಂದಿನ ಅವಧಿರಂಗ ಹಬ್ಬ ಬಹುನಿರೀಕ್ಷೆಯ ಬೆಟ್ಟವನ್ನು ರಂಗಾಸಕ್ತಲ್ಲಿ ಸೃಷ್ಟಿಸಿದೆ. ಈ ಮೂಲಕ ಸುಮನಸಾದ ಜವಾಬ್ದಾರಿಯನ್ನೂ ಹೆಚ್ಚಿಸಿದೆ.

Friday, 23 March 2018

ಗಾರ್ಗಿ ಎನ್ ಶಬರಾಯ ಎಂಬ ಬಹುಮುಖ ಪ್ರತಿಭೆ...

ಗಾರ್ಗಿ ಶಬರಾಯ ಇಂದು ಸಂಗೀತ ಲೋಕದಲ್ಲಿ ಚಿರ ಪರಿಚಿತ ಹೆಸರು. ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ 'ನನ್ನ ಹಾಡು ದಾಸರ ಹಾಡು ' ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ  ಈ ಪ್ರತಿಭೆಯನ್ನು ಎರಡು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ನಾನು ಪರಿಚಯಿಸಿದ್ದ ಲೇಖನವನ್ನು ಇಂದು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಇಂದು ಈ ಪ್ರತಿಭೆಗೆ ಉಡುಪಿಎಯಲ್ಲಿ ರಾಗಾಧಾನ ಉಡುಪಿ ಸನ್ಮಾನಿಸುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನಾ ಪೂರ್ವಕವಾಗಿ ಈ ಲೇಖನ ಮರು ಪ್ರಕಟಣೆ 



ತಂದೆ-ಯಕ್ಷಲೋಕ ಕಂಡ ತೆಂಕು-ಬಡಗು ಶೈಲಿಯ ಖ್ಯಾತ ಭಾಗವತ. ಮಗಳು ಕರ್ನಾಟಕ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅದ್ಭುತವಾಗಿ ಬೆಳೆಯುತ್ತಿರುವ ಅಸಾಮಾನ್ಯ ಪ್ರತಿಭೆ. ಈಕೆ ಖ್ಯಾತ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಮತ್ತು ರಾಜಶ್ರೀ ದಂಪತಿಗಳ ಪುತ್ರಿ, ಕರ್ನಾಟಕ ಸಂಗೀತದಲ್ಲಿ ಅನೇಕ ಸಾಧನೆ ಹಾಗೂ  ಪ್ರಶಸ್ತಿಗಳಿಗೆ ಭಾಜನರಾದ ಗಾರ್ಗಿ ಶಬರಾಯ.

ಬಾಲ್ಯದಿಂದಲೇ ಈಕೆಗೆ ಸಂಗೀತದ ಸೆಳೆತ. ಅಪ್ಪನ ಎದೆಯ ಮೇಲೆ ಮಲಗಿ, ದೂರದ ಪ್ರಯಾಣ ಅಥವಾ ಮನೆಯ ಹಜಾರ...ಎಲ್ಲಿದ್ದರೂ   ನಾರಾಯಣ ಶಬರಾಯರ ಸಂಗೀತವೇ  ಜೋಗುಳ. ಇದೇ ಬಹುಶ: ಗಾರ್ಗಿಯ ಮನ ಮನದಲ್ಲಿ ಸಂಗೀತದ  ಆಸಕ್ತಿ ಹೆಮ್ಮರವಾಗಿ ಬೆಳೆಯಲು ಪ್ರೇರಣೆ.

ಐದನೆಯ ವಯಸ್ಸಿನಲ್ಲಿ ಸಂಗೀತ ಅಭ್ಯಾಸ  ಆರಂಭಿಸಿದವಳು ಗಾರ್ಗಿ.   ಉಡುಪಿಯ  ವಿದುಷಿ ಶ್ರೀಮತಿ ವಸಂತಲಕ್ಷ್ಮಿ  ಎ ಹೆಬ್ಬಾರ್ ಅವರಲ್ಲಿ ಸರಿಗಮಪದ ತೊದಲ್ನುಡಿಗಳನ್ನಾರಂಭಿಸಿ,  ಪ್ರೊ.ಅರವಿಂದ ಹೆಬ್ಬಾರ್ ಹಾಗೂ ವಿದುಷಿ ರಂಜನಿ ಹೆಬ್ಬಾರ್ ಅವರಲ್ಲಿ ಅಭ್ಯಾಸವನ್ನು ಮುಂದುವರಿಸುತ್ತಾ, ಪರಿಪಕ್ವತೆಯ ಹಾದಿಯಲ್ಲಿ ಬೆಳೆಯುತ್ತಾ ಸಾಗಿದವಳು.  ಇವಳ ಸಂಗೀತಾಸಕ್ತಿ ಮತ್ತು ಇವರೊಳಗಿನ ಪ್ರತಿಭೆ ಬೆಳೆಯಲು ಈ ಗುರುಗಳ ಮಾರ್ಗದರ್ಶನ ಪ್ರಮುಖವ ಕಾರಣವಾದರೆ, ಸಂಗೀತಾಭ್ಯಾಸಕ್ಕೆ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಕಲಾ ಅಧ್ಯಯನ ಮತ್ತು ತರಬೇತಿ  ಕೇಂದ್ರ ಮತ್ತು ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಂದ ವಿದ್ಯಾರ್ಥಿವೇತನದ ಪ್ರೋತ್ಸಾಹ. ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಉನ್ನತ ದರ್ಜೆಯೊಂದಿಗೆ ಮುಗಿಸಿದ್ದಾಳೆ. ಕಳೆದ ಮೂರು ವರ್ಷಗಳಿಂದ ತನ್ನ ಗುರುಗಳ ಮನೆಯಲ್ಲೇ ಉಳಿದುಕೊಂಡು, ಗುರುಕುಲದ ಮಾದರಿಯಲ್ಲಿ ಜೀವನ ಪಾಠವನ್ನು ಕಲಿತ ನಮೃತೆ ಈಕೆಯದ್ದಾದರೆ, ಸಂಗೀತ, ವಿಜ್ಞಾನ, ಆಧ್ಯಾತ್ಮ, ಧರ್ಮ, ಯೋಗ, ಜೀವನ ಕ್ರಮ ಮತ್ತು ಶಿಸ್ತು ಎಲ್ಲವನ್ನೂ ಗುರು ಅರವಿಂದ ಹೆಬ್ಬಾರರಲ್ಲಿ ಕಲಿತೆನೆನ್ನುವ ವಿಧೇಯತೆ.  ತನ್ನೆಲ್ಲಾ ಸಾಧನೆಯ ಹಿಂದಿನ ಶಕ್ತಿ ತಾಯಿ ಮತ್ತು ತಂದೆ ಎನ್ನುವುದನ್ನು ಮರೆಯುವುದಿಲ್ಲ. ಅಕಾಲಿಕವಾಗಿ ನಿಧನರಾದ ಗುರು ರಂಜನಿ ಹೆಬ್ಬಾರ್ ಭೌತಿಕವಾಗಿ ಇನ್ನಿಲ್ಲ ಎಂಬ ಕೊರಗಿದ್ದರೂ, ಇಲ್ಲೇ ಎಲ್ಲೋ ಜೊತೆಗಿದ್ದು ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಭಾವುಕಳಾಗುವ ಗಾರ್ಗಿ ಓರ್ವ ನಿಜಾರ್ಥದ ಶಿಷ್ಯೆಯಾಗಿಯೇ  ಕಾಣುತ್ತಾಳೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳನ್ನೂ ಈ ಸಂಗೀತ ಪ್ರತಿಭೆಯನ್ನರಸಿ ಬಂದಿವೆ.  ಗದಗದ ’ಗಂಗೂಬಾಯಿ ಹಾನಗಲ್ ಕನ್ನಡ ಮಕ್ಕಳ ಮನೆ’ಯಿಂದ ಕೊಡ ಮಾಡುವ ’ಕಲಾ ಕಣ್ಮಣಿ-೨೦೦೭’ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಭಾರತೀಯ ವಿದ್ಯಾಭವನದಿಂದ ನೀಡಿರುವ ೨೦೧೧ರ ಸಾಲಿನ ಯುವ ಕಲಾವಿದ ಪ್ರಶಸ್ತಿ ಮುಖ್ಯವಾಶದುವುಗಳು 

ಶ್ರೀ ಶಂಕರ ಟಿವಿಯವರು ಆಯೋಜಿಸಿದ್ದ ಶಾಸ್ತ್ರೀಯ ಸಂಗೀತದಲ್ಲಿ  ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿ ಹೊಮ್ಮಿದ ಈ ಸಹಜ ಪ್ರತಿಭೆಯನ್ನು ಸಂಗೀತ ಜಗತ್ತು ಒಮ್ಮೆ ಕಣ್ಣರಳಿಸಿ ನೋಡಿದ್ದು ಮತ್ತು ರಾಜ್ಯದ ಕರ್ನಾಟಕ ಸಂಗೀತ ಕ್ಷೇತ್ರದ ಉದಯೋನ್ಮುಖ ಪ್ರತಿಭೆಯ ಸಾಲಿನಲ್ಲಿ ಗಾರ್ಗಿಯ ಹೆಸರು ಮಿಂಚಿದ್ದು ವಿಶೇಷ ಸಾಧನೆ. ಮಂಗಳೂರಿನ ಸಂಗೀತ ಪರಿಷತ್, ಶಿವಮೊಗ್ಗದ  ಹೊಸ ಹಳ್ಳಿಯ ಸಂಕೇತಿ ಸಭಾಗಳಲ್ಲಿ  ಹಾಗೂ ಇನ್ನಿತರೆಡೆಗಳಲ್ಲಿ ನಡೆದ ರಾಷ್ಟ್ರ-ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತದ   ಅನೇಕ ಪ್ರಶಸ್ತಿ ಬಹುಮಾನಗಳನ್ನು ಗಿಟ್ಟಿಸಿಕೊಂಡ ಪ್ರತಿಭಾವಂತೆ ಗಾರ್ಗಿ. ರಾಜ್ಯಾದ್ಯಂತ ಈಗಾಗಲೇ ಅನೇಕ ಸಂಗೀತ ಕಛೇರಿಗಳಲ್ಲಿಯೂ ಕಾರ್ಯಕ್ರಮ ನೀಡುವ  ಮೂಲಕ, ಸಂಗೀತ ಪ್ರಿಯರಲ್ಲಿ ಈ ಬೆಳೆಯುವ ಪ್ರತಿಭೆ ಭರವಸೆಗಳನ್ನು ಹುಟ್ಟಿಸಿದ್ದೇ ಅಲ್ಲದೇ, ನಾಡಿನ ಖ್ಯಾತ   ಕಲಾವಿದೆಯರ ಸಾಲಿನಲ್ಲಿ ತನ್ನ ಇರವನ್ನು ಖಚಿತಪಡಿಸಿಕೊಂಡಿದ್ದಾರೆ. 

ಸಂಗೀತ ನಿರಂತರ ಅಭ್ಯಾಸ ಹಾಗೂ ಕಲಿಕೆಯನ್ನು ಬಯಸುತ್ತದೆ ಮತ್ತು ಅದು ಮಾತ್ರವೇ  ತನ್ನೊಳಗಿನ ಕಲಾವಿದೆಯನ್ನು ಪಕ್ವತೆಯೊಂದಿಗೆ ಬೆಳೆಸುತ್ತದೆ ಎಂದು ಭಾವಿಸಿರುವಾಕೆ ಗಾರ್ಗಿ. ಈ ಹಿನ್ನೆಲೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಅನೇಕ ರಾಷ್ಟ್ರೀಯ ಹಾಗೂ ಸ್ಥಳೀಯ ಮಟ್ಟದ ಕಾರ್ಯಾಗಾರಗಳಲ್ಲಿ ನಿರಂತರ ಭಾಗವಹಿಸುತ್ತಿರುವಾಕೆ.  

ಗಾರ್ಗಿಯ ಮತ್ತೊಂದು ವಿಶೇಷತೆ ಎಂದರೆ ಈಕೆ ಓರ್ವ ಅಪ್ರತಿಮ ಚಿತ್ರಕಲಾವಿದೆಯಾಗಿಯೂ ಬೆಳೆಯುತ್ತಿದ್ದಾಳೆ. ಸ್ವ ಪರಿಶ್ರಮದೊಂದಿಗೆ ’ಏಕಲವ್ಯ’ನಂತೆ ತಾನೇ ತನ್ನನ್ನು ಈ ಕಲೆಯಲ್ಲಿ ಪರಿಣತಿಗೊಳಿಸಿಕೊಳ್ಳುತ್ತಿರುವ ಈಕೆ, ಯಾವುದೇ ಚಿತ್ರಕಲಾ ತರಗತಿಗಳಿಗೆ ಹೋಗದೇ, ಅತ್ಯುತ್ತಮ ಚಿತ್ರಗಳನ್ನು ಬಿಡಿಸುವ ಪ್ರತಿಭಾನ್ವಿತೆ.  ಆಕೆಯ ಚಿತ್ರಗಳಲ್ಲಿ ವಿಶೇಷವಾಗಿ ಡೂಡಲ್ ಕಲೆ, ಕಲಾಂಕಾರಿ, ಮಧುಬನಿ ಮತ್ತು ಮೆಹಂದಿ ಕಲೆಗಳ ಮಿಶ್ರಣವಿದೆ. ಈ ಕಲೆ ಯಾವ ಪ್ರಕಾರದ್ದು ಎಂದರೆ, ನಿರ್ದಿಷ್ಟವಾಗಿ ಇದೇ ಪ್ರಕಾರವೆನ್ನಲು ತುಸು ಅಸಾಧ್ಯವೆನಿಸಿದ ಕಾರಣ, ಎಲ್ಲಾ ಕಲೆಗಳ ಸಂಕಲನದೊಂದಿಗೆ ಇವರ ಕೈಯಲ್ಲಿ ಅರಳುವ ಕಲೆಗೆ ಸದ್ಯಕ್ಕೆ ’ಗಾರ್ಗಿಕಲೆ’ ಎನ್ನುವುದೇ ಸೂಕ್ತವೇನೋ ಎಂಬಂತಿವೆ ಅವಳ ರಚನೆಗಳು!. ವಿಶೇಷವೆಂದರೆ ಕುಳಿತಲ್ಲಿ, ನಿಂತಲ್ಲಿ ಮತ್ತು ಯಾವುದೇ ತಿದ್ದುವಿಕೆಯ ಅವಶ್ಯಕತೆ ಇಲ್ಲದ ಕಲಾ ರಚನೆ ಇವಳೀಗೆ ಸಿದ್ದಿಸಿದೆ. 
ಕಲಾ ಸಾಧನೆಗೆ ಹೊರತಾಗಿ, ಗಾರ್ಗಿಯ ಶೈಕ್ಷಣಿಕ ಯಾತ್ರೆಯೂ ಹಲವು ದಾಖಲೆಗಳಿಗೆ ಕಾರಣವಾಗಿದೆ. ಪ್ರಸ್ತುತ ಮೈಸೂರಿನ  ಮಾನಸಗಂಗೋತ್ರಿಯಲ್ಲಿ ಸಸ್ಯಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್ಸಿಯನ್ನು ಮುಗಿಸಿ ದ್ವಿತೀಯ ವರ್ಷದ ವ್ಯಾಸಂಗ ಮುಂದುವರಿಸಿರುವ ಗಾರ್ಗಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಅಗ್ರಳಾಗಿ   ಡಾ.ಟಿಎಂಎ ಪೈ ಚಿನ್ನದ ಪದಕ ಗಳಿಸಿದ್ದಾಳೆ. ನಾಡಿನಾದ್ಯಂತ ಅನೇಕ ಸಂಘ ಸಂಸ್ಥೆಗಳು ಈಕೆಯನ್ನು ಈಗಾಗಲೇ ಸನ್ಮಾನಿಸಿವೆ. ತಂದೆ ನಾರಾಯಣ ಶಬರಾಯರ ’ಯಕ್ಷಗಾಯನ’ದ ಪ್ರಭಾವ, ತಾಯಿ ರಾಜಶ್ರೀಯವರ  ಸದಾ ಕಾಲದ ಬೆಂಬಲ ಮತ್ತು ಉತ್ತೇಜನ,  ಗುರುಗಳ ಸಮರ್ಥ ಮಾರ್ಗದರ್ಶನ ತನ್ನನ್ನು ಈ ಎತ್ತರಕ್ಕೇರಿಸಿದೆ ಎನ್ನುವ ಗಾರ್ಗಿಯ ಕಣ್ಣುಗಳಲ್ಲಿ ಸಾಧಿಸಿದ್ದು ಅತ್ಯಲ್ಪ ಮತ್ತು ಸಾಧಿಸಬೇಕಾದ್ದು ಬೆಟ್ಟದಷ್ಟಿದೆ ಎಂಬ ವಿನಯವಿದೆ. ಎಂಎಸ್ಸಿ ವ್ಯಾಸಂಗದ ಬಳಿಕ ಮತ್ತೆ ತನ್ನ ಸಂಗೀತ-ಚಿತ್ರಕಲೆಯಲ್ಲಿ ಅಭ್ಯಾಸ-ಸಾಧನೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸದಾ ಚಟುವಟಿಕೆಯಿಂದಿರುವ ಗಾರ್ಗಿ, ಎರಡೂ ಕ್ಷೇತ್ರಗಳ ಮಟ್ಟಿಗೆ ಒಂದು ವಿಶಿಷ್ಠ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ. 



Saturday, 17 March 2018

ಬಹುಮುಖಿ ನೃತ್ಯ ಗುರು-ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ

ಮೂರು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನ ಬರಹ- ವಿದುಷಿ ವಿದ್ಯಾಶ್ರೀ ರಾಧಾಕೃಷ್ಣರ ಬಗೆಗಿನ ಪರಿಚಯ ಲೇಖನ.... ಇಂದು ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ, ನನ್ನ ಬ್ಲಾಗ್ ಮೂಲಕ ಮತ್ತೊಮ್ಮೆ.... ತಮ್ಮ ಮುಂದೆ 

ನೃತ್ಯ ಅಥವಾ ಸಂಗೀತ  ಕಲಾವಿದರಿಗೆ ಯಾವುದಾದರೂ ಒಂದು ಕಲೆಯಲ್ಲಿ ಮಾತ್ರ ಪರಿಣತಿ  ಇರುತ್ತದೆ ಎಂಬ ಮಾತಿಗೆ ಅಪವಾದವಾಗಿ ನಮ್ಮ ಜಿಲ್ಲೆಯಲ್ಲಿ  ಹಲವಾರು ಕಲಾವಿದರು ಮಹತ್ಸಾಧನೆ ಮಾಡಿದ್ದಾರೆ.  ಅದರಲ್ಲೂ ಕಲಿಕೆ ನಿರಂತರ ಎಂಬಂತೆ ಪ್ರತೀ ಕ್ಷಣವೂ ಹೊಸತನದ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಪ್ರಯೋಗ ಶೀಲರಾಗಿರುವ  ಕಲಾವಿದರು ವಿರಳ ಎಂದೇ ಹೇಳಬಹುದು. ಇಂತಹ ವಿರಳರಲ್ಲಿ ಸರಳರಾಗಿ, ನಾಟ್ಯ-ಸಂಗೀತ-ಭಾಷಣ-ಸಾಹಿತ್ಯ...ಹೀಗೆ  ಅನೇಕ ಕ್ಷೇತ್ರಗಳಲ್ಲಿ ಪರಿಪೂರ್ಣತೆ ಸಾಧಿಸಿ, ರಾಜ್ಯದ ಅಗ್ರಗಣ್ಯ ಕಲಾವಿದೆಯರಲ್ಲಿ ಗುರುತಿಸಿಕೊಳ್ಳುತ್ತಿರುವವರು ಗಾನ ನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರು ಶ್ರೀಮತಿ ಜಯಲಕ್ಷ್ಮೀ ಹಾಗೂ   ಶ್ರೀ ಪದ್ಮನಾಭ ಭಟ್ ಪುತ್ರಿಯಾಗಿ    ಪುತ್ತೂರಿನಲ್ಲಿ ಜನಿಸಿ,  ಸುಳ್ಯದಲ್ಲಿ ವಿದ್ಯಾಭ್ಯಾಸ  ಮುಗಿಸಿ, ಪ್ರಸ್ತುತ ಮಂಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ನಾಡಿನಾದ್ಯಂತ ತಮ್ಮ ಕಲಾ ಸೇವೆ ಮುಂದುವರಿಸಿದ್ದಾರೆ.

ನೃತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ  ಎರಡು ದಶಕಗಳನ್ನು ಪೂರೈಸಿರುವ, ’ಗಾನ ನೃತ್ಯ ಅಕಾಡೆಮಿ’ಯ  ನಿರ್ದೇಶಕಿಯಾಗಿ, ಸುಳ್ಯ ಹಾಗೂ ಮಂಗಳೂರಿನ  ಒಟ್ಟೂ ನಾಲ್ಕು ಶಾಖೆಗಳ  ಮೂಲಕ  ಹಲವಾರು ವಿದ್ಯಾರ್ಥಿಗಳನ್ನು  ಈ ಕ್ಷೇತ್ರಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದು. ತಾಯಿಯೇ ಮೊದಲ ಗುರು ಎಂಬಂತೆ ತಾಯಿ ಜಯಲಕ್ಷ್ಮಿಯವರಲ್ಲಿ ತನ್ನ ಐದನೆಯ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಆರಂಭಿಸಿದ ಇವರು ಹದಿನಾರನೆಯ ವಯಸ್ಸಿನಲ್ಲಿಯೇ ನೃತ್ಯ ತರಬೇತಿ ಕೇಂದ್ರ  ಸ್ಥಾಪಿಸಿದವರು. ಶ್ರೀಮತಿ ನಳಿನಿ ಬೈಪಡಿತ್ತಾಯ, ಡಾ.ಸೀತಾ ಕೋಟೆ ಹಾಗೂ ಶ್ರೀ ಮುರಳೀಧರ ರಾವ್ ಅವರಲ್ಲಿ ನೃತ್ಯಾಭ್ಯಾಸ ಮಾಡಿ, ಕಲಾ ಕ್ಷೇತ್ರ ಶೈಲಿಯ ಉನ್ನತ ವ್ಯಾಸಂಗವನ್ನು ಚೆನ್ನೈಯ ಪದ್ಮಶ್ರೀ ಕಲೈಮಾಮಣಿ ಅಡಯಾರ್ ಕೆ  ಲಕ್ಷ್ಮಣ್ ಅವರಲ್ಲಿ ನಡೆಸಿದವರು. ನೃತ್ಯದೊಂದಿಗೆ ಸಂಗೀತವನ್ನೂ ದಿವಂಗತ ಶ್ರೀ ಗೋಪಾಲ ಕೃಷ್ಣ ಮಜಿಗುಂಡಿಯವರಲ್ಲಿ ಆರಂಭಿಸಿ, ಶ್ರೀಮತಿ ಸತ್ಯಭಾಮಾ ಬಾಳಿಲ, ಶ್ರೀ ಶ್ಯಾಂ ಭಟ್ ಉಪ್ಪಂಗಳ, ದಿ. ಶ್ರೀನಾಥ್ ಮರಾಠೆಯವರಲ್ಲಿ ಅಭ್ಯಾಸ  ಮಾಡಿದ್ದಾರೆ. ನಿರಂತರ ಕಲಿಕೆಯ ತುಡಿತ ಹೊಂದಿರುವ ಇವರ ಪ್ರತಿಭೆಯನ್ನು ಕಲಾ ಜಗತ್ತು ಪ್ರೌಢಿಮೆಯ ಶ್ರೇಯಸ್ಸಿನೊಂದಿಗೆ ಗುರುತಿಸುತ್ತಿದ್ದರೂ, ತಾನಿನ್ನೂ ವಿದ್ಯಾರ್ಥಿನಿಯೇ ಎಂಬ ವಿನಮೃತೆಯೊಡನೆ, ಗುರು ಶ್ರೀಮತಿ ಬ್ರಘಾ ಬೆಸೆಲ್ ಇವರಲ್ಲಿ ಅಭಿನಯ ತರಬೇತಿಯನ್ನೂ ಪಡೆದು ಪ್ರಸ್ತುತ   ದೆಹಲಿಯ ಶ್ರೀಮತಿ ರಮಾವೈದ್ಯನಾಥನ್ ಅವರಲ್ಲಿ ನೃತ್ಯ  ಹಾಗೂ ಉಡುಪಿಯ ಗುರುಶ್ರೀ ಮಧೂರು ಬಾಲಸುಬ್ರಹ್ಮಣ್ಯ ಅವರಲ್ಲಿ ಸಂಗೀತವನ್ನು ಮುಂದುವರಿಸಿದ್ದಾರೆ. 

ಸಾಹಿತ್ಯದಲ್ಲಿ ಎಂಎ ಪದವೀಧರೆಯಾಗಿರುವ ಇವರು  ಪ್ರಸ್ತುತ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಮ್ಯೂಸಿಕ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇವರ  ಮೇರು ಶೈಕ್ಷಣಿಕ ಆರ್ಹತೆಗಳಿಗನುಗುಣವಾಗಿ ಇವರನ್ನರಸಿ ಬಂದ ಅನೇಕ ಉದ್ಯೋಗಗಳನ್ನು ನಿರಾಕರಿಸಿ, ಕಲೆಯ ಮೇಲಿನ ತಮ್ಮ ಅಪರಿಮಿತ ಪ್ರೀತಿಯಿಂದಾಗಿ, ಕಲಾ ಜಗತ್ತಿಗೇ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಮೂಲಕ, ನಮ್ಮ ನಾಡಿನ ಸಾಂಸ್ಕೃತಿಕ ರಂಗ ಶ್ರೀಮಂತಿಕೆಗೆ ಕಾರಣರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. 

ವಿದ್ಯಾಶ್ರೀ  ಅವರು ಮಿತಭಾಷಿ. ಆದರೆ ಸದಾ ಕಾಲ ಏನಾದರೂ ಒಂದು ಹೊಸತನದ ಹುಡುಕಾಟದ ತುಡಿತದಲ್ಲಿ  ಸದಾ ಸಕ್ರಿಯರಾಗಿರುವವರು. ಪ್ರತೀ ವರ್ಷ ಸುಳ್ಯ ಹಾಗೂ ಮಂಗಳೂರಿನಲ್ಲಿ ತನ್ನ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ  ಕಲೆಯ ಅನಾವರಣವನ್ನು  ’ಆರೋಹಣ’ ಎಂಬ ಹೆಸರಿನಲ್ಲಿ ಆಯೋಜಿಸುವ ಇವರು,   ಪ್ರತೀ ಬಾರಿಯೂ ಕಲಾಸಕ್ತರನ್ನು ನಿರೀಕ್ಷೆಯಲ್ಲಿರುವಂತೆ ಆಕರ್ಷಿಸುತ್ತಾರೆ!. ಭರತನಾಟ್ಯ ಅಥವಾ ತಾವು ಅಳವಡಿಸಿಕೊಳ್ಳುವ ಯಾವುದೇ ನೃತ್ಯ ಪ್ರಕಾರದಲ್ಲಿ, ಯಾವುದೇ ಹೆಜ್ಜೆ,   ನಡೆ, ಭಂಗಿ, ಎಲ್ಲಿಯೂ ಪುನರಾವರ್ತನೆ ಆಗದಂತೆ, ವಿಶಿಷ್ಠ ಹಾಗೂ ಆಕರ್ಷಕವಾಗಿರುವಂತೆ ನೃತ್ಯ ಸಂಯೋಜನೆ ಮಾಡುವ ಕಲೆ ಇವರಿಗೆ ಸಿದ್ದಿಸಿದೆ.

ಭರತನಾಟ್ಯ ಕಲೆ ಮಂಗಳೂರಿಗೆ ಹೊಸತೇನೂ ಅಲ್ಲ. ಆದರೆ ಭುವನೇಶ್ವರದ ಗೀತಾಂಜಲಿ ಆಚಾರ್ಯ ಮತ್ತು ಮಧುಲಿತಾ ಮೊಹಾಪಾತ್ರ ಅವರಲ್ಲಿ,  ಒಡಿಸ್ಸಿ ಕಲೆಯನ್ನು ಸ್ವತ: ಅಭ್ಯಸಿಸಿ, ಮಂಗಳೂರಿನಲ್ಲಿ ಒಡಿಸ್ಸಿ  ನೃತ್ಯ ತಂಡ ನಿರ್ಮಿಸಿದ ಮೊದಲ ಕಲಾವಿದೆ.  ಕಥಕ್ ನೃತ್ಯವನ್ನೂ ಬಹುವಾಗಿ ಮೆಚ್ಚಿಕೊಳ್ಳುವ ಇವರು, ಮಂಗಳೂರಿನ ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕಥಕ್ ನೃತ್ಯ ಪಟು ಗುರು ಸ್ವೀಕೃತ್ ಇವರಿಂದ ನಿರಂತರವಾಗಿ ಕಥಕ್ ಕಾರ್ಯಾಗಾರ ನಡೆಸುತ್ತಾ, ತಮ್ಮದೇ ಸಂಸ್ಥೆಯಲ್ಲಿ ಅನೇಕ ಕಥಕ್ ನೃತ್ಯಗಳನ್ನೂ ಪ್ರದರ್ಶಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. 

ನಿರಂತರ ಕಲಿಕೆಯ ಆಸಕ್ತಿ ಇವರನ್ನು ಪರಿಪೂರ್ಣ ಕಲಾವಿದೆಯನ್ನಾಗಿ ರೂಪಿಸುತ್ತಾ ಬಂದಿದೆ. ದೇಶದ ಯಾವುದೇ ಭಾಗಗಳಲ್ಲಿ, ಇಂದಿಗೂ  ಯಾವುದೇ ರೀತಿಯ ನೃತ್ಯ-ಸಂಗೀತ ಕಾರ್ಯಾಗಾರಗಳಾದಲ್ಲಿ ನಿಯಮಿತವಾಗಿ ಭಾಗವಹಿಸುತ್ತಾ, ತಮ್ಮೊಳಗಿನ ಕಲಾ ಹಸಿವಿನ ನೀಗುವಿಕೆಯಲ್ಲಿ ನಿರಂತರ ನಿರತರಾಗಿರುತ್ತಾರೆ.ಪದ್ಮಭೂಷಣ ಡಾ.ಪದ್ಮಾಸುಬ್ರಮಣ್ಯಮ್ ಅವರ ನಾಟ್ಯಶಾಸ್ತ್ರ ಕರಣ ಕಾರ್ಯಾಗಾರದಲ್ಲಿ ಸತತ ಎರಡು ಬಾರಿ ಹಾಗೂ ಚೆನ್ನೈನ ಕಲಾಕ್ಷೇತ್ರ ನಡೆಸಿದ ಹತ್ತುದಿನ ವಿಂಟರ್ ವರ್ಕ್‌ಶಾಪ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿದ ಅಧ್ಯಯನ ಶೀಲತೆ ಇವರದ್ದು. 

ಇದರೊಂದಿಗೆ ಹಲವು ಪ್ರಥಮಗಳ ದಾಖಲೆಯುನ್ನು ಬರೆದ ಕೀರ್ತಿಯೂ ವಿದ್ಯಾಶ್ರೀ ಅವರಿಗೆ ಸಲ್ಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಭರತನಾಟ್ಯದ ಮೂಲ ಅಡವುಗಳನ್ನು ಹೊಂದಿರುವ ಡಿವಿಡಿ ’ನೃತ್ಯಾಕ್ಷರಂ’ ನ್ನು ತಾವೇ ನಿರ್ದೇಶಿಸಿ, ತಯಾರಿಸುವುದರ ಮೂಲಕ ಭರತನಾಟ್ಯ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಇನ್ನೂ ಅಂತರಜಾಲ ತನ್ನ ವಿಸ್ತರಣೆಯ ಆರಂಭದಲ್ಲಿರುವಾಗಲೇ,   ತಮ್ಮ ನೃತ್ಯ ಸಂಸ್ಥೆಯ ವೆಬ್ ಸೈಟ್ ನ್ನು ಆರಂಭಿಸಿದ್ದು, ಅದು ಈ ಕ್ಷೇತ್ರದ  ಸಂಸ್ಥೆಯೊಂದು ಜಿಲ್ಲೆಯಲ್ಲಿ ಆರಂಭಿಸಿದ ಮೊದಲ ಹೆಜ್ಜೆಯಾಗಿ ಗುರುತಿಸಲ್ಪಟ್ಟಿದೆ. 
ತನ್ನ ಶಿಷ್ಯ ವೃಂದದ ಯಾವುದೇ ವಿದ್ಯಾರ್ಥಿ ಪರಿಪೂರ್ಣ ಕಲಾವಿದೆಯಾಗದ ಹೊರತು, ಆಡಂಬರಕ್ಕಾಗಿ ರಂಗಪ್ರವೇಶದ ತರಾತುರಿಯನ್ನು ಬಯಸದ ಕಲಾವಿದೆಯರಲ್ಲಿ ಇವರು ಪೋಷಕರ ಮನ ಗೆಲ್ಲುತ್ತಾರೆ. ತಾಳ್ಮೆ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಹಾಗೂ ಪಾಲನೆ, ಅಕ್ಕರೆಯಿಂದ ಶಿಷ್ಯರೊಂದಿಗೆ ಬೆರೆವ ಇವರ ಸ್ನೇಹ ಶೀಲ ಸ್ವಭಾವ ಇವರ ವಿದ್ಯಾಸಂಸ್ಥೆಯ ಶ್ರೇಯಸ್ಸಿಗೆ ಕಾರಣವಾಗಿದ್ದರೆ, ಈಗಾಗಲೇ ಇವರ ಸಂಸ್ಥೆ ಇಪ್ಪತ್ತು ಸಂವತ್ಸರಗಳನ್ನು ಮುಗಿಸಿ, ಸಾವಿರಾರು ಕಲಾವಿದರನ್ನು ಕಲಾ ಜಗತ್ತಿಗೆ ನೀಡಿದೆ.  ಜಿಲ್ಲೆಯ ಅತೀ ಕಿರಿಯ ನೃತ್ಯ ನಿರ್ದೇಶಕಿ ಎಂಬ  ಹಿರಿಮೆಯಲ್ಲಿಯೇ ಇದುವರೆಗೆ  ಒಂಭತ್ತು ವಿದ್ಯಾರ್ಥಿನಿಯರ ಯಶಸ್ವೀ ರಂಗ ಪ್ರವೇಶ ಮಾಡಿಸಿದ್ದಾರೆ. ಏಳು ವಿದ್ಯಾರ್ಥಿನಿಯರು ದೂರದರ್ಶನದ ಗ್ರೇಡೆಡ್ ಕಲಾವಿದೆಯರಾಗಿ, ಹತ್ತು ವಿದ್ಯಾರ್ಥಿನಿಯರು   ವಿದ್ವತ್ ಮುಗಿಸಿ ವಿದುಷಿಯರಾಗಿದ್ದೇ ಅಲ್ಲದೇ, ನಾಲ್ಕು ಜನ ಪೂರ್ಣಾವಧಿಯ  ನೃತ್ಯ ಶಿಕ್ಷಕಿಯರಾಗಿ ಕಲಾ ಕ್ಷೇತ್ರದ  ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಪೂರ್ಣ ಕಲಾವಿದೆಯರ ಹೊಸ ತಂಡ, ’ಯಜ್ಞ’ವನ್ನು ನೃತ್ಯ ಲೋಕಕ್ಕೆ ಪರಿಚಯಿಸುವ ಪ್ರಯೋಗ ಶೀಲತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಂಗ ನಿರ್ವಹಣೆ ಮತ್ತು ಪ್ರದರ್ಶನಗಳಲ್ಲೂ ಇವರು ಹೊಸತನದ ಹರಿಕಾರ. ಈವರೆಗೆ ೭೦೦ಕ್ಕೂ ಮಿಕ್ಕಿ ಏಕ ವ್ಯಕ್ತಿ ಹಾಗೂ ಸಮೂಹ ನೃತ್ಯಗಳ ಪ್ರಸ್ತುತಿಯನ್ನು ಮಾಡಿದ್ದಾರೆ.      ’ಸತ್ಯಮೇವ ಜಯತೇ’, ’ಕನ್ನಡ ಸಾಹಿತ್ಯ-ನೃತ್ಯ ವೈಭವ’,   ’ಕೃಷ್ಣ ಲೀಲೆ’, ’ಋತು ಶ್ರಂಗಾರ’, ’ವಿರಾಟಪರ್ವ’ ’ಜ್ವಾಲಾಮುಖಿ ಅಂಬೆ’, ’ದಶಾವತಾರಂ’, ’ನವರಸ ರಾಮಾಯಣ’, ’ಸಮನ್ವಯ’.... ಹೀಗೆ ಅನೇಕ ವಿನೂತನ ಹಾಗೂ ಅಪರೂಪದ  ಪ್ರಸ್ತುತಿಗಳು ಇವರ ನಿರ್ದೇಶನದಲ್ಲಿ ಪ್ರಸ್ತುತಿಗೊಂಡು ಅಪಾರ  ಪ್ರೇಕ್ಷಕರ ಮನಸೂರೆಗೊಂಡಿದ್ದು, ಈಗಾಗಲೇ ನೂರಾರು ಪ್ರದರ್ಶನಗಳನ್ನು ಕಂಡಿವೆ.   ಮಂಗಳೂರಿಗೆ ಮೊದಲ ಬಾರಿಗೆ ಮತ್ತು ಏಕೈಕ ತಂಡವಾಗಿ ಒಡಿಸ್ಸಿ ಹಾಗೂ ಕಥಕ್ ನೃತ್ಯಪ್ರದರ್ಶನಗಳನ್ನು ನೀಡುತ್ತಿರುವ ಏಕೈಕ ಕಲಾವಿದೆ ಯೂ ಆಗಿ ಲಘು  ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನೂ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.  

Friday, 16 March 2018

ನಮ್ಮದೇ ನೆರಳಾದ 'ನೆರಳು’


'ವಿಜಯ ಕರ್ನಾಟಕ'ದ ರಂಗ್ ಪುಟದಲ್ಲಿ ಮಾರ್ಚ್ ೧೩, ೨೦೧೮ರಂದು ಪ್ರಕಟಗೊಂಡ ಬರಹ 

ಸುತ್ತಲೂ ತುಂಬಿಕೊಂಡಿರುವ ಸಮಾಜಘಾತುಕ ಶಕ್ತಿಗಳು ಎಷ್ಟೊಂದು ವ್ಯವಸ್ಥಿತವಾಗಿ ಅಸಹಾಯಕತೆಯನ್ನು ತಮ್ಮ ತಮ್ಮ ಮೂಗಿನ ನೇರಕ್ಕೆ ಉಪಯೋಗಿಸಿಕೊಂಡು ಬೇಳೆ ಬೇಯಿಸಿಕೊಳ್ಳಲೆತ್ನಿಸುತ್ತವೆ ಎಂಬುದನ್ನು ವಿವರಿಸಿದ ಏಕವ್ಯಕ್ತಿ ನಾಟಕ ’ನೆರಳು’    ಸುಮನಸಾ ಕೊಡವೂರು-ಉಡುಪಿ ಸಂಸ್ಥೆ ಆಯೋಜಿಸಿದ್ದ ರಂಗಹಬ್ಬದಲ್ಲಿ ಪ್ರಸ್ತುತಗೊಂಡು ನೆರೆದಿದ್ದವರ ಮನದಲ್ಲೊಂದು ಆರ್ದ್ರ ಭಾವಕ್ಕೆ ಕಾರಣವಾಯಿತು.


ರಾಷ್ಟ್ರೀಯ ನಾಟಕಶಾಲೆ(ಬೆಂಗಳೂರು)    ಪದವೀಧರ ಅಕ್ಷತ್ ಈ ಏಕವ್ಯಕ್ತಿ ನಾಟಕದಲ್ಲಿ ಹಾದು ಹೋಗುವ ಪಾತ್ರಗಳಿಗೆ ಜೀವ ತುಂಬಿದ್ದರು. ತಂಗಿಯನ್ನು ಜೀವವೇ ಎಂಬಂತೆ ಪ್ರೀತಿಸುವ  ಅಣ್ಣ ವಿಶ್ವಾಸ್  ತನ್ನ ತಂಗಿ  ಜೀವಿತಾಳ  ಭವ್ಯ ಭವಿಷ್ಯದ ಬದುಕು ಕಟ್ಟುವ ದಾವಂತದಲ್ಲಿದ್ದಾಗ, ಅಕಸ್ಮಾತ್ ಆಗಿ   ತಂಗಿ ಕಾಣೆಯಾಗುತ್ತಾಳೆ. ಪ್ರೀತಿಯ ತಂಗಿಯನ್ನು ಕಳೆದುಕೊಂಡು ಅಕ್ಷರಶ: ಅನಾಥನಂತಾದ ಅಣ್ಣ, ಆಕೆಯನ್ನು ಹುಡುಕುತ್ತಾ ಸಾಗುತ್ತಾನೆ. ಈ ಹುಡುಕಾಟದಲ್ಲಿ ಎದುರಾಗುವ ಘಟನೆಗಳೇ ಈ  ಕಥೆಯ ಮುಖ್ಯ ವಸ್ತು.


ಇಂದಿನ ಸಮಾಜದಲ್ಲಿ ಎಲ್ಲಾ ವ್ಯವಸ್ಥೆಗಳು ಅಸಹಾಯಕರ  ಪರವಾಗಿ ನಿಂತು ಸಹಾಯ ಹಸ್ತ ನೀಡಲೆಂದೇ ಇದ್ದರೂ, ಸಮಾಜದಲ್ಲಿ ಶೋಷಿತ ವರ್ಗ ಸದಾ ನಿರ್ಲಕ್ಷ್ಯ ಮತ್ತು ಅಪಮಾನಕ್ಕೊಳಗಾಗುತ್ತಲೇ ಇರುತ್ತದೆ. ತಂಗಿಯನ್ನು ಹುಡುಕ ಹೊರಡುವ ಅಣ್ಣನಿಗೆ ಎಲ್ಲಾ ಮುಖ ದರ್ಶನವಾಗುತ್ತದೆ. ಕಂಡ ಕಂಡ ಜನರನ್ನು ತಂಗಿಯ ಕಂಡಿರಾ ಎಂದು ಪ್ರಶ್ನಿಸುತ್ತಾನೆ. ಯಾರೋ ಕೊಟ್ಟ ಸಲಹೆಯ ಮೇರೆಗೆ ಪೋಲೀಸ್ ಸ್ಟೇಶನ್ ಮೆಟ್ಟಿಲು ಹತ್ತುತ್ತಾನೆ.   ದೂರು ಕೊಡ ಹೋದ ಇವನನ್ನೇ  ಕಳ್ಳನಂತೆ ನೋಡುವ ಅವರೂ,  ತಂಗಿಯ ಶೀಲದ ಬಗ್ಗೆಯೇ ಶಂಕಿಸಿ ಚುಚ್ಚಿ ಮಾತಾಡುವುದು ಇವನಿಗೆ ಕಾದ ಸೀಸ ಕಿವಿಗೆರದ ಭಾವ!.  ಮತ್ತಾರೋ ಹೇಳಿದರೆಂದು ರಾಜಕಾರಣಿಯೊಬ್ಬನ ಮನೆ ಬಾಗಿಲು ತಟ್ಟುತ್ತಾನೆ. ಇವನ ಜಾತಿಯಲ್ಲಿ ಮತಗಳು ಹೆಚ್ಚಿಲ್ಲ ಎಂಬುದನ್ನು ತಿಳಿಯುತ್ತಲೇ ರಾಜಕಾರಣಿಯೂ ಮುಖ ತಿರುಗಿಸುತ್ತಾನೆ. ಮತ್ತೊಂದು ಪಕ್ಷ ಸಿಕ್ಕಿದ್ದೇ ಸೀರುಂಡೆ ಎಂಬಂತೆ ಇವನನ್ನು ಬೆಂಬಲಿಸುವ ನಾಟಕವಾಡುತ್ತದೆ.  ಬಣ್ಣ ಬಣ್ಣ್ನದ ಬಾವುಟದ ಯಾವ್ಯಾವುದೋ ಸಂಘಟನೆ ಗಳ, ತಮ್ಮೆಲ್ಲಾ ಸಿದ್ದಾಂತಗಳನ್ನು ಗಾಳಿಗೆ ತೂರಿ,  ಸಿಗಬಹುದಾದ ಲಾಭಕ್ಕೆ ಇದನ್ನೇ ವಿಷಯವನ್ನಾಗಿಸಿ ಮುಷ್ಕರ, ಗಲಾಟೆಗಿಳಿಯುತ್ತಾರೆ. ದೃಶ್ಯ-ಮುದ್ರಣ ಮಾಧ್ಯಮಗಳೂ ಈ ವಿಷಯವನ್ನು ’ಬ್ರೇಕಿಂಗ್ ನ್ಯೂಸ್’ ಭರಾಟೆಯಲ್ಲಿ ನಡೆದಿರುವ ’ಸಾಧ್ಯತೆಗಳನ್ನು’  ತಾವೇ ನಿರ್ಧರಿಸುತ್ತಾ ಘಂಟೆಗಟ್ಟಲೇ, ದಿನಗಟ್ಟಲೇ ಸುದ್ದಿ ಮಾಡುತ್ತವೆ. ಕಾಣೆಯಾದವಳ ಇದ್ದ, ಇಲ್ಲದ ಇತಿಹಾಸ ಜಾಲಾಡುತ್ತಾರೆ, ತಮ್ಮ ತಮ್ಮದೇ ವಿರ್ಶಲೇಷಣೆಯಡಿಯಲ್ಲಿ   ’ಆಕೆಗೂ, ಅಣ್ಣನಿಗೂ’ತಿಳಿಯದ ಅನೇಕ ಸಂಗತಿಗಳನ್ನು ಸೃಷ್ಟಿಸುತ್ತಾರೆ!!.  ಅಯ್ಯಾ, ನನ್ನ ತಂಗಿಯನ್ನು ಹುಡುಕಿಕೊಡಿರೆಂಬ ಅಣ್ಣನ ಮಾತು ಯಾರಿಗೂ ಕೇಳುವುದೇ ಇಲ್ಲ. 


ಇಂತಹ ಪರಿಸ್ಥಿತಿಯನ್ನು ವ್ಯವಸ್ಥೆಗಳು ಹೇಗೆಲ್ಲಾ ಬಳಸಿಕೊಳ್ಳುತ್ತವೆ ಎಂಬುದನ್ನು ನಟ ಅಕ್ಷತ್ ಸಮರ್ಥವಾಗಿ ನಿಭಾಯಿಸಿದ್ದಾರೆ.   ಹಾಡಿಯಲ್ಲಿ ಕಂಡ ಶವ ತಂಗಿಯದೇ ಎಂಬ ಭಾವದಿಂದ ಹತಾಶೆ, ದು:ಖ, ಅಸಹಾಯಕತೆಯಿಂದ ಪಡುವ ವೇದನೆ, ದುಗುಡ ನಟನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ಅವನೊಳಗಿನ ಯಶಸ್ವೀ ನಟನನ್ನು ಹೊರ ತಂದಿದೆ. ರಾಜಕಾರಣಿಯಾಗಿ, ಪೋಲೀಸ್ ಆಗಿ, ಜನಸಾಮಾನ್ಯನಾಗಿ,ನಾಗರೀಕರಾಗಿ...ಹೀಗೆ ಇವನ ಹುಡುಕಾಟದಲ್ಲಿ ಬರುವ ಪ್ರತೀ ಪಾತ್ರಗಳಿಗೂ ಜೀವ ತುಂಬಿ,    ತನ್ನ ಅಭಿನಯದ ಮೂಲಕ ಅಕ್ಷತ್ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಇದು ಅಕ್ಷತ್ ರ ಮೊದಲ ಪ್ರಸ್ತುತಿಯಾದರೂ, ರಾಷ್ಟ್ರೀಯ ನಾಟಕ ಶಾಲೆಯ ತರಬೇತಿ ಮತ್ತು ಸಮರ್ಥ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಅವರ ನಿರ್ದೇಶನದ ಪರಿಣಾಮ,   ಓರ್ವ ಗಟ್ಟಿ ನಟನನ್ನು ಹೊರತರುವಲ್ಲಿ ಯಶಸ್ವಿಯಾಗಿದೆ. 



ಕೊನೆಗೂ ತಂಗಿ   ಹೆಣವಾಗಿ ಸಿಗುತ್ತಾಳೆ. ಇಡೀ ಸಮಾಜ ತನ್ನ ತಂಗಿಯ ಹುಡುಕುವಿಕೆಗಿಂತ ಅದನ್ನೊಂದು ಸ್ವಲಾಭದ ವಿಷಯವಾಗಿ ಹೇಗೆ ಬಳಸಿಕೊಳ್ಳುವಲ್ಲಿ ಉತ್ಸುಕವಾಗಿತ್ತು ಎಂಬುದನ್ನು ತೋರಿಸುವ ಮೂಲಕ, ವರ್ತಮಾನದ ಸಮಾಜದ ತಲ್ಲಣಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟ ’ನೆರಳು’ವಿನಲ್ಲಿ ಕಂಡ ಒಂದೇ ಋಣಾತ್ಮಕ ಅಂಶವೆಂದರೆ, ಮೊದಲು ಹಾಡಿಯಲ್ಲಿ ಕಂಡ ಶವ ತಂಗಿಯದಲ್ಲವೆಂದ ನಂತರವೂ ಕೊನೆಯಲ್ಲಿ ಆಕೆಯ ಅಂತ್ಯವೇ ಎದುರಾಗುವುದು ನಿರಾಶೆಯ ಮೇಲೆ ಮತ್ತೆ ’ಕಾರ್ಮೋಡ ಕವಿದಂತೆ’ ಭಾಸವಾಯ್ತು.  ಕೊನೆಗೂ ನಮ್ಮೊಂದಿಗೆ ಇರುವುದು ನಮ್ಮದೇ ’ನೆರಳು’ ಮಾತ್ರ ಎಂಬಂತೆ,   ಇಂದಿನ ಸಮಾಜದಲ್ಲಿ ಇಂತಹ ಪ್ರಕರಣಗಳಲ್ಲಿ ಸಾಮಾನ್ಯ ಪ್ರಜೆ ಕೇವಲ ಸಮಯಸಾಧಕರ ಪಾಲಿಗೆ ’ವರ’ವಾಗುತ್ತಾ, ತಾನು ಮಾತ್ರ ಬಲಿಪಶುವಾಗುತ್ತಾನೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. 


ನಟನಾಗಿ ಅಕ್ಷತ್  ಹೊಸ ಭರವಸೆ ಮೂಡಿಸದ್ದಾರೆ. ಎಂದಿನಂತೆ ಯುವ ನಿರ್ದೇಶಕ ವಿದ್ದು ಉಚಿಲ್ ಮತ್ತೊಂದು   ’ನೆರಳು’ವಿನ ನಿರ್ದೇಶನದೊಂದಿಗೆ ವಿನೂತನ ಪರಿಕಲ್ಪನೆಯನ್ನೂ ಮಾಡಿ    ಹೊಸ ಸಾಧ್ಯತೆಯ ನಿರಂತರ ಪ್ರಯೋಗದ ಮೂಲಕ    ಮೆಚ್ಚುಗೆಯ  ಕೆಲಸ ಮಾಡಿದ್ದರೆ, ವಿನೂತನ ಸಾಧ್ಯತೆಯೊಂದನ್ನು ಇಲ್ಲಿಗೂ ವಿಸ್ತರಿಸಿದ ಹೆಗ್ಗಳಿಕೆ ಅವರದ್ದು. ಸುಮನಸಾ ಕೊಡವೂರು ಪೃಸ್ತುತಿಯ ಈ ಏಕವ್ಯಕ್ತಿ ನಾಟಕಕ್ಕೆ, ಪ್ರವೀಣ್ ಕೊಡವೂರು ಬೆಳಕು ಹಾಗೂ ದಿವಾಕರ್ ಕಟೀಲ್ ಸಾಂಗತ್ಯ ದೊಂದಿಗೆ ಎಲ್ಲರೂ ಯಶಸ್ಸಿನ ಪಾಲುದಾರರು.




ರಂಗಭೂಮಿಯಲ್ಲಿ ರಂಗಾಯಣದ ‘ಶಿಕಾರಿ’


Prajavani..16.03.18 ರ ಕರಾವಳಿ ವಿಭಾಗದ  ರಂಗಲಹರಿಯಲ್ಲ್ಲಿ ಪ್ರಕಟವಾದ ನನ್ನ ಬರಹ..... 
‘ಏನಿಲ್ಲವೆಂದರೂ ಬದುಕಬಹುದೇನೋ... ಆದರೆ ಪ್ರೀತಿ, ಗೆಳೆತನ, ಮಾನವೀಯ ಅಂತಃಕರಣ, ಸಹಾನುಭೂತಿ ಇಲ್ಲದ ಬದುಕು ಸಾಧ್ಯವೇ? ಇವಿಲ್ಲವಾದರೆ ಬದುಕಬೇಕಾದರೂ ಯಾಕೆ?’ 

–ಇದು ಯಶವಂತ ಚಿತ್ತಾಲರು ತಮ್ಮ ಕಾದಂಬರಿ ‘ಶಿಕಾರಿ’ಯ ಮೂಲಕ ಪದೇಪದೇ ಎತ್ತುವ ಪ್ರಶ್ನೆ.

ತನ್ನ ಸ್ವಸಾಮರ್ಥ್ಯದಿಂದ ವೃತ್ತಿ ಜೀವನದ ಔನ್ನತ್ಯದ ನಾಗಾಲೋಟದಲ್ಲಿರುವ ವ್ಯಕ್ತಿಯೊಬ್ಬ ತನ್ನ ಸುತ್ತಲಿನ ವಾತಾವರಣದ ಮೇಲೊಂದು ಕಣ್ಣಿಟ್ಟಿರದೇ ಅಜಾಗೃತನಾದಾಗ ಸಂಭವಿಸಬಹುದಾದ ಅವನತಿಯ ಸುತ್ತ ಹೆಣೆದ ವಿಶಿಷ್ಟ ಕಾದಂಬರಿ ‘ಶಿಕಾರಿ’. ಇದನ್ನು ರಂಗದ ಮೇಲೆ ತರುವ ಕಠಿಣ ಸವಾಲನ್ನು ಸ್ವೀಕರಿಸಿ, ಯಶಸ್ವಿಯಾದವರು ಹಿರಿಯ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿಯವರಾದರೆ, ನಿರ್ದೇಶಕರ ಪರಿಶ್ರಮಕ್ಕೆ ತಕ್ಕ ಫಲಿತಾಂಶ ನೀಡುವ ಮೂಲಕ ಮೂರು ಗಂಟೆಗಳ ಸುದೀರ್ಘ ನಾಟಕಕ್ಕೆ ಜೀವ ತುಂಬಿದವರು ಮೈಸೂರು ರಂಗಾಯಣದ ಹಿರಿಯ ಕಲಾವಿದರು.


ಕರಾವಳಿ ಭಾಗಕ್ಕೆ ರಂಗಾಯಣದ ನಾಟಕಗಳು ಬರುವುದೇ ಅಪರೂಪ. ಆರು ವರ್ಷಗಳಿಂದ ಉಡುಪಿಯಲ್ಲಿ ರಂಗಹಬ್ಬವನ್ನು ಆಚರಿಸುತ್ತಿರುವ ಉಡುಪಿಯ ಸುಮನಸಾ ಕೊಡವೂರು ಸಂಸ್ಥೆ ಈ ಬಾರಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಮೈಸೂರು ರಂಗಾಯಣ ಕಲಾವಿದರು ಅಭಿನಯಿಸಿದ ‘ಶಿಕಾರಿ’ ಪ್ರದರ್ಶನಕಂಡು, ರಂಗಾಸಕ್ತರಿಗೆ ರಸದೌತಣ ನೀಡಿತು.

ಕಾರ್ಪೋರೆಟ್‌ ಜಗತ್ತಿನ ಅನೇಕ ಒಳ ತಿರುಳುಗಳನ್ನು ಅರಿತ ಉದ್ಯೋಗಿಯೊಬ್ಬ ತನ್ನ ಸಾಮರ್ಥ್ಯದಿಂದ ಹಂತ ಹಂತವಾಗಿ ವೃತ್ತಿಯಲ್ಲಿ ಔನ್ನತ್ಯ ಸಾಧಿಸುತ್ತಾ, ತನ್ನ ಸಾಮರ್ಥ್ಯವೇ ತನ್ನ ಶಕ್ತಿ ಎಂದುಕೊಂಡಿರುತ್ತಾನೆ. ಆದರೆ, ವ್ಯಾವಹಾರಿಕವಾದ ಅವನ ಕನಿಷ್ಠ ಜ್ಞಾನ ಎಂತ ಬೆಲೆ ತೆರುವಂತೆ ಮಾಡಬಲ್ಲುದು ಎಂಬುದನ್ನು ಕತೆ ಎಳೆಎಳೆಯಾಗಿ ತೆರೆದಿಡುತ್ತಾ ಸಾಗುತ್ತದೆ.
ಮೂರು ಗಂಟೆಗಳ ‘ಶಿಕಾರಿ’ ನಾಟಕ ಪ್ರೇಕ್ಷಕರಿಗೆ ಇಡೀ ಕಾರ್ಪೋರೆಟ್‌ ಜಗತ್ತನ್ನೇ ಪರಿಚಯಿಸಿದ್ದು ಅಚ್ಚರಿ. ನಾಗಪ್ಪ ಎಂಬ ಒಬ್ಬ ಸಾಮಾನ್ಯ ನೌಕರ, ಸ್ವ–ಸ್ವಾಮರ್ಥ್ಯದಿಂದ ಕಂಪನಿಯೊಂದರಲ್ಲೆ ಉನ್ನತ ಪದವಿ ಪಡೆಯುತ್ತಲೇ ಸಾಗುತ್ತಾನೆ. ನಾಗಪ್ಪನ ಬಾಲ್ಯ ಕರಾಳ ನೆನಪುಗಳ ಆಗರ. ಆ ನೆನಪನ್ನು ಆತ ಮರೆಯಲೆತ್ನಿಸಿದರೂ, ಅವನ ಉನ್ನತಿ ಸಹಿಸದ ಒಂದು ವರ್ಗ, ಅವನದ್ದೇ ಕಂಪನಿಯೊಳಗೆ ಹುಟ್ಟಿಕೊಳ್ಳುತ್ತದೆ. ವ್ಯವಸ್ಥಿತವಾಗಿ ಅವರು ಹೆಣೆದ ಪರಿಸ್ಥಿತಿಯ ಕೈಗೊಂಬೆಯಾಗುವಂತೆ ವ್ಯೂಹದೊಳಗೆ ನಾಗಪ್ಪ ಬಂಧಿಯಾಗುತ್ತಲೇ ಸಾಗುತ್ತಾನೆ.

ನಾಗಪ್ಪ ಬೆಳೆಯುತ್ತಾನೆ ನಿಜ. ಆದರೆ, ಆ ಅವಸರದಲ್ಲಿ ಆತ ವ್ಯಾವಹಾರಿಕವಾಗಿ ಸಂಪೂರ್ಣ ಸೋತಿರುತ್ತಾನೆ. ತನ್ನದೇ ಸಾಮರ್ಥ್ಯದ ಅನೇಕ ರಹಸ್ಯಗಳನ್ನೂ ತನ್ನ ಆಪ್ತರೆಂದು ನಂಬಿದವರಲ್ಲೆಲ್ಲಾ ಬಿಟ್ಟು ಕೊಡುತ್ತಾನೆ. ಅವನೊಳಗೆ ಅವನ ಅರಿವಿಗೆ ಬಾರದೆಯೂ ಮಾನವ ಸಹಜ ದೌರ್ಬಲ್ಯಗಳು, ಅದಕ್ಕಿಂಬು ನೀಡುವಂತೆ ಒದಗುವ ಕೆಲ ದುರ್ಬಲ ಕ್ಷಣಗಳು ಉರುಳಾಗುತ್ತವೆ. ಇನ್ನೇನು, ಔನ್ನತ್ಯದ ಶಿಖರದಲ್ಲಿ ನಾಗಪ್ಪನ ಪ್ರತಿಷ್ಠೆ ಆಗಬೇಕು ಎಂಬಷ್ಟರಲ್ಲಿ ಅವನೊಳಗಿದ್ದ ಎಲ್ಲಾ ಸಾಮರ್ಥ್ಯಗಳೂ ವಿರೋಧಿಗಳು ಉರುಳಿಸಿದ ದಾಳಕ್ಕೆ ಧೂಳೀಪಟವಾಗುತ್ತಾ, ಅವನ ಜನ್ಮ ಜಾಲಾಡುವಷ್ಟೂ ಕಠೋರವಾಗುತ್ತವೆ.

ನಾಗಪ್ಪನ ಜನನದ ಮೂಲ, ಸಮಾಜ ಒಪ್ಪಿರದ ಅವನ ಬಾಲ್ಯ, ನಿರ್ದಿಷ್ಟ ಜಾತಿಯ ಆವರಣ ಇಲ್ಲದ ಅವನ ಬದುಕು, ದುರ್ಬಲ ಕ್ಷಣದಲ್ಲಿನ ಅವನದೇ ಆದ ದಾಖಲಾಗಬಾರದೆಯೂ ದಾಖಲಾಗದ ಹೇಳಿಕೆಗಳು, ವಯೋಸಹಜ ಆಕರ್ಷಣೆಯಿಂದಾದ ಪ್ರೇಮ, ಪರಿಸ್ಥಿತಿ ವಿರೋಧವಾದಾಗ ಅದೂ ಮುಳ್ಳಾಗುವ ರೀತಿ... ಎಲ್ಲವೂ ಅವನನ್ನು ಬಂಧಿಸುತ್ತಲೇ ಸಾಗುತ್ತವೆ. ಎಲ್ಲವನ್ನೂ ಸತ್ಯವೇ ಎಂದು ಭಾವಿಸುವ ನಾಗಪ್ಪ, ಎಲ್ಲರಲ್ಲೂ ವಿಶ್ವಾಸವಿಡುತ್ತಾನೆ. ಆದರೆ, ಒಂದೊಂದಾಗಿ ವಿಶ್ವಾಸದ ಪರದೆ ಕಳಚಿದಾಗ ವಿಹ್ವಲನಾಗುತ್ತಾನೆ.

ನಮ್ಮ ಎಲ್ಲಾ ವ್ಯವಹಾರಗಳ ಅಡಿಗೆ, ಸಾಮಾಜಿಕ ನಡವಳಿಕೆಯ ಕೆಳಗೆ ಕೆಲಸ ಮಾಡುವ ಶಕ್ತಿ ಎಂಬುದಿದ್ದರೆ ಅದು ಕೇವಲ ‘ಸ್ವಾರ್ಥ’ ಎಂಬ ಸತ್ಯ ದರ್ಶನ ನಾಗಪ್ಪನಿಗೆ ಆಗುವಾಗ ಪರಿಸ್ಥಿತಿ ಕೈ ಮೀರಿರುತ್ತದೆ. ಕೊನೆಗೂ ಸತ್ಯ ಗೆಲ್ಲುತ್ತದಾ? ಎಂಬ ಆಶಾದಾಯಕ ವಾತಾವರಣ ನಿರ್ಮಾಣವಾಗುವಾಗ ನಾಗಪ್ಪನಿಗೆ ಆ ಗೆಲುವೂ ಬೇಡವಾಗಿರುತ್ತದೆ!

ಆಧುನಿಕ ಜಗತ್ತು ಸೃಷ್ಟಿಸುವ ಸಂಕೀರ್ಣ ಜಗತ್ತು ತಲ್ಲಣ ಹುಟ್ಟಿಸುವ ಗೊಂಡಾರಣ್ಯವಾದರೆ ಏನಾದೀತು ಎಂಬುದನ್ನು ಚಿತ್ರಿಸುವ ಕಾದಂಬರಿ ರಂಗರೂಪಕ್ಕೆ ಬರುವಾಗ ಗಟ್ಟಿತನ ಕಳೆದುಕೊಳ್ಳುವ ಅಪಾಯವಿದೆ. ಆದರೆ, ಇಲ್ಲಿ ಪ್ರತಿಯೊಂದೂ ಸಮರ್ಥವಾಗಿ ಪ್ರತಿಪಾದಿತವಾಗಿದೆ. ನಾಗಪ್ಪನ ಪಾತ್ರದ ಮೂಲಕ ಮನುಷ್ಯತ್ವದ ಅಂತಿಮ ಲಕ್ಷಣವೊಂದೇ ಅನ್ಯಾಯಕ್ಕೆ ಬಗ್ಗದೇ ಇರುವುದು. ಅದರ ವಿರುದ್ಧ ಹೋರಾಡುವುದು. ಸತ್ತರೂ ಅಡ್ಡಿ ಇಲ್ಲ, ಸೋಲೊಪ್ಪಲಾರೆ ಎಂಬ ಸ್ವಾಭಿಮಾನವೇ ಸ್ಥಾಯಿಯಾಗುವುದು ಮುಖ್ಯವೆನಿಸುತ್ತದೆ.

ರಂಗಾಯಣದ ಪ್ರತಿ ನಟನರು ಪ್ರಬುದ್ಧತೆ ಮೂಲಕ ಗೆಲ್ಲುತ್ತಾರೆ. ಕಾರ್ಪೋರೆಟ್‌ ಜಗತ್ತು ಇಂದು (ಹಿಂದಿನಿಂದಲೂ) ಹಲವಾರು ವಿಸ್ಮಯಗಳ ಸಾಗರದಂತಾಗಿದೆ. ಇಲ್ಲಿ ಜಾಣ್ಮೆ ಮತ್ತು ವ್ಯಾವಹಾರಿಕ ಜಾಣ್ಮೆಗಳೆರಡೂ ಸಮಾನವಾಗಿದ್ದರಷ್ಟೇ ಬದುಕಲು ಸಾಧ್ಯ. ರಂಗಭೂಮಿಯ ವಿಶೇಷತೆ ಎಂದರೆ, ಅದರಲ್ಲಿನ ಪ್ರಬುದ್ಧ ನಟರು ಕಾಲಕ್ಕೆ ತಕ್ಕಂತೆ, ಕಾಲ-ಲಿಂಗ-ಸ್ಥಿತ್ಯಂತರ ಬೇಧವಿಲ್ಲದೇ ಪಾತ್ರಗಳಲ್ಲಿ ಲೀನರಾಗುವ ಪರಿ. ಇತಿಹಾಸ, ಪೌರಾಣಿಕ, ಸಾಮಾಜಿಕ ಅಥವಾ ಇತ್ತೀಚೆಗೆ ಹೆಚ್ಚು ಜನಾಕರ್ಷಿಸುವ ನಗೆನಾಟಕಗಳು ಹೀಗೆ ಎಲ್ಲಾ ರೀತಿಯ ಕತೆಗಳಲ್ಲೂ ಪಾತ್ರವಾಗುವ ನಟರು, ‘ಶಿಕಾರಿ’ಯಂತಹ ನಾಟಕದ ಬೇರೆಯದೇ ಆದ ಲೋಕದಲ್ಲೂ ಎಲ್ಲೂ ಸೋಲದಿದ್ದುದು ಅಚ್ಚರಿ.

‘ಈ ದಿನವನ್ನು ಎಲ್ಲಾ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಭಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದು ಏನು ಪ್ರಯೋಜನ?’ ಎನ್ನುವ ನಿರಂತರವಾಗಿ ಮನುಷ್ಯನನ್ನು ಕಾಡುವ ಪ್ರಶ್ನೆಯೇ ಮತ್ತೆ ಮತ್ತೆ ಎದುರಾಗುವಂತೆ ಹೆಣೆದ ಕಾದಂಬರಿ ‘ಶಿಕಾರಿ’ ರಂಗದ ಮೇಲೂ ಇದೇ ಪ್ರಶ್ನೆ ಹುಟ್ಟಿಸುವಲ್ಲಿ ಯಶಸ್ವಿಯಾಯಿತು.


ಇಡೀ ನಾಟಕವನ್ನು ವ್ಯಾಪಿಸಿಕೊಂಡಿರುವ ‘ಸಾಕ್ಷಿ’ಯಾದ ನಂದಿನಿ ಕೆ.ಆರ್. ಮತ್ತು ನಾಗಪ್ಪನಾಗಿ ಹುಲುಗಪ್ಪ ಕಟ್ಟೀಮನಿ, ವಿಶಿಷ್ಟ ಪಾತ್ರವಾಗಿ ನಗೆಯ ಬುಗ್ಗೆ ಚಿಮ್ಮಿಸುತ್ತಲೇ ಕಾಣದ ಮುಖದ ಹಿಂದಿನ ಸತ್ಯದ ಶ್ರೀನಿವಾಸ ರಾವ್ ಪಾತ್ರದಲ್ಲಿ ಕೃಷ್ಣಕುಮಾರ್ ನಾರ್ಣಕಜೆ, ಕಾರ್ಪೋರೆಟ್‌ ಕಂಪನಿಯ ಗತ್ತು ಗೈರತ್ತನ್ನೇ ಮೈವೆತ್ತಂತೆ ನಟಿಸಿದ ಜಗದೀಶ್ ಮನವಾರ್ತೆ, ಫಿರೋಜ್‌ ಬಂದೂಕ್ ವಾಲಾನಾಗಿ, ಇಡೀ ನಾಟಕದ ಸೂತ್ರಧಾರನಾಗಿ ನಾಟಕ ಗೆಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಿದ ಪ್ರಶಾಂತ್ ಹಿರೇಮಠ್... ಹೀಗೆ ನಾಟಕಕ್ಕೆ ಜೀವಾಳವಾದ ಎಲ್ಲಾ ನಟರೂ ಅಭಿನಂದನಾರ್ಹರು.


ಹಿರಿಯ ನಟ ರಾಮು, ಕೃಷ್ಣ ಪ್ರಸಾದ್ ಎಂ.ಸಿ., ವಿನಾಯಕ ಭಟ್ ಹಾಸಣಗಿ, ಮಹಾದೇವ್, ಗೀತಾ ಮೊಂಟಡ್ಕ, ಶಶಿಕಲಾ ಎನ್., ಪ್ರಮೀಳಾ ಬೆಂಗ್ರೆ, ನೂರ್ ಅಹಮದ್ ಶೇಖ್, ವನಿತಾ ಎಸ್.ಎಸ್., ಲಕ್ಷ್ಮೀ ವಿ., ಹೊಯ್ಸಳ, ಪ್ರದೀಪ್ ಬಿ.ಎಂ., ಬೋಪಣ್ಣ ಹೀಗೆ ಎಲ್ಲ ಕಲಾವಿದರೂ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದರು. ನಾಟಕಕ್ಕೆ ಎಚ್.ಕೆ.ದ್ವಾರಕಾನಾಥ್ ರಂಗವಿನ್ಯಾಸವಿದ್ದು, ಪವನ್ ಕೆ.ಜೆ. ಅವರ ಸಂಗೀತ ಮತ್ತು ಮಹೇಶ್ ಕಲ್ಲತ್ತಿ ಅವರ ಬೆಳಕು ‘ಶಿಕಾರಿ’ಯ ಯಶಸ್ಸಿನ ಹಿಂದಿನ ಶಕ್ತಿಗಳು. ಸಂಕೀರ್ತಿ ಐಪಂಜಗುಳಿ ಅವರ ವಸ್ತ್ರ ವಿನ್ಯಾಸ ಗಮನ ಸೆಳೆಯಿತು