Tuesday 18 December 2012

ಪ್ರದಕ್ಷಿಣೆ ನಿಲ್ಲಿಸಿದ ಈ ಹೊತ್ತಿನಲ್ಲಿ....


 ಪ್ರದಕ್ಷಿಣೆ ಯನ್ನು ನಿಲ್ಲಿಸಿದಾಕ್ಷಣ ಅನೇಕರು "ಏಕೆ" ಎಂದು ಪ್ರಶ್ನಿಸಿದ್ದರು. ಎಲ್ಲರಿಗೂ ಉತ್ತರಿಸಲು ನಿರ್ಧಿಷ್ಟ ಕಾರಣವಿರಲಿಲ್ಲ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ....ಪ್ರದಕ್ಷಿಣೆಯನ್ನು ನಿಲ್ಲಿಸಿದ ಈ ಹೊತ್ತಿನಲ್ಲಿ ಒಮ್ಮೆ ನಿಮ್ಮೆದುರು ನನ್ನ ಮನಸ್ಸನ್ನು ತೆರೆದಿಟ್ಟು "ರಗಳೆ" ಮಾಡುವ ಬಯಕೆ..ಸಹಿಸಿಕೊಳ್ಳಿ.

 
ಪ್ರದಕ್ಷಿಣೆಯನ್ನು( www.pradakshine.com) ನಿಲ್ಲಿಸಿದ ಬಗ್ಗೆ ಅನೇಕರು ಕೇಳಿದ್ದರು. ಇಷ್ಟು ಜನ ಓದುಗರಿದ್ದಾರೆ ಅದಕ್ಕೆ ಎಂಬುದೇ ನಾನು ಅದನ್ನು ನಿಲ್ಲಿಸಿದ ತಿಳಿದ ಸತ್ಯ ಎಂಬುದನು ಒಪ್ಪಿಕೊಳ್ಳಲೇ ಬೇಕು. ಕಾರಣಗಳು ಏನೇ ಇರಲಿ, ಪ್ರದಕ್ಷಿಣೆಯನ್ನು ನಿಲ್ಲಿಸಿದ್ದೇನೆ. ಆ ನಿಲ್ಲುವಿಕೆ ತಾತ್ಕಾಲಿಕ ವಾಗಲೇ ಎಂಬುದು ತಮ್ಮೆಲ್ಲರಂತೆ ನನ್ನದೂ ಆಶಯಾ! ಅದಕ್ಕಾಗಿ ಪ್ರಯತ್ನವೂ ಸಾಗಿದೆ.
ಕೆಲವು ಕಾರಣಗಳಿಂದ ಅದನ್ನು ನಿಲ್ಲಿಸಿದ್ದೇನೆ ಎಂಬ ಹೇಳಿಕೆಯನ್ನು ನೋಡಿ, ದೆಹಲಿಯ ಚಿತ್ತರಂಜನ ದಾಸ್, ತಾನು ಬೇಕಾದರೆ ಅದನ್ನು ಮುಂದುವರಿಸುತ್ತೇನೆ, ಏನು ಮಾಡಬೇಕು ಹೇಳಿ ಎಂದಿದ್ದಾರೆ. ೩ಕೆ ಯ ರೂಪಕ್ಕ ಛೆ, ನಿಲ್ಲಿಸಬೇಡಿ ಎಂದು ನನ್ನ ಕಷ್ಟ ಕೇಳಿದ್ದಾರೆ. ತಮ್ಮ ಕಷ್ಟದ ನಡುವೆಯೂ ಬೇರೆಯವರ ಕಷ್ಟಗಳಿಗೆ ನೆರವಾಗುವ ಆ ಮಮತಾಮಯಿಗೂ ನಾನು ಚಿರ ಋಣಿ. ಇಷ್ಟಕ್ಕೂ ಅದನ್ನು ನಿಲ್ಲಿಸಿದ ಕೊರತೆ ನನ್ನನ್ನು ಬಹುವಾಗಿ ಕಾಡುತ್ತಿದೆ. ನಿಜ ಹೇಳಿಬಿಡಬೇಕು ಎಂದರೆ ಈ ಅಂತರಜಾಲ ಪತ್ರಿಕೆಯನ್ನು ನಾನು ಮುಂದಿನ ಎರಡು ವರ್ಷಗಳ ಕಾಲಕ್ಕೆ ನವೀಕರಿಸಿಟ್ಟುಕೊಂಡಿದ್ದೇನೆ.

ಇಲ್ಲಿ ಮೊತ್ತದ ಅಥವಾ ಖರ್ಚಿಗಿಂತಲೂ  ನನ್ನ ಉದ್ದೇಶ ಅಷ್ಟಾಗಿ ಈಡೇರದ ಬಗ್ಗೆ ಬೇಸರವಿದೆ. ನನ್ನದೇ ಆಪ್ತ ಬಳಗಕ್ಕೂ ಒಂದು ವೇದಿಕೆಯಾಗಿ ನಾನು ಈ ಪತ್ರಿಕೆ ಆರಂಭಿಸಿದ್ದೆ. ಎಲ್ಲೆಲ್ಲೋ ಹರಿದು ಹಂಚಿ ಹೋಗುವ ಅಥವಾ ಎಲ್ಲೂ  ಪ್ರಕಟಣೆ ಕಾಣದ (ಆ ಆರ್ಹತೆ ಇದ್ದರೂ) ಬರಹಗಳಿಗೊಂದು ವೇದಿಕೆಯಾಗುವ ಮಹತ್ವದ ಅಭಿಲಾಷೆ ನನ್ನದಾಗಿತ್ತು. ಹಾಗಾಗಿ ಬಹು ಉತ್ಸಾಹದಿಂದಲೇ ಇದನ್ನು ಆರಂಭಿಸಿದ್ದೆ. ನನ್ನೆಲ್ಲಾ ಸ್ನೇಹಿತರಿಗೂ ಬರೆಯುವಂತೆ ಅನೇಕ ಬಾರಿ ಪ್ರೆರೇಪಿಸಿದ್ದೆ. ಅದ್ಯಾಕೋ, ನನ್ನ ನಿರೀಕ್ಷೆಯ ಉತ್ಸಾಹದ ಕೊರತೆ ನನ್ನನ್ನು ತುಸು ಯೋಚಿಸುವಂತೆ ಮಾಡಿದು!. ಒಬ್ಬಿಬ್ಬರು ಬಿಟ್ಟರೆ ಮತ್ಯಾರೂ ಇದನ್ನು ಗಂಭೇರವಾಗಿ ತೆಗೆದುಕೊಳ್ಳಲೇ ಇಲ್ಲ. ಓದುಗ ದೊರೆಗಳ ಅಭಾವ ಯಾವತ್ತೂ ಆಗಲಿಲ್ಲ.  ಆದರೆ ನನ್ನ ಕಚೇರಿಯ ಕೆಲಸಗಳು, ಇದಕ್ಕೆ ಹೆಚ್ಚು ಸಮಯ ಕೊಡುವಲ್ಲಿ ನನ್ನನ್ನು ತಡೆದ್ದಂತೂ  ಸತ್ಯ.

ಈ ಕಂಪ್ಯುಟರ್ ಮಟ್ಟಿಗೆ ನಾನು ತುಸು ಅನಕ್ಷರಸ್ತ. ಇದಕ್ಕಾಗಿ ಮತ್ತು ಲೇಖನವನ್ನು ಪೋಸ್ಟ್ ಮಾಡಲು ನಾನು ಬೇರೆಯವರನ್ನು ಅವಲಂಭಿಸಿರಬೇಕಾದ ಅನಿವಾರ್ಯತೆಯೂ ಇತ್ತು. ಲೇಖನಗಳ ಸಂಗ್ರಹ, ಅದರ ಓದು, ಎಡಿಟಿಂಗ್, ಹೀಗೆ ನನ್ನ ಹೆಚ್ಚಿನ ಸಮಯವನ್ನು ಅದು ತೆಗೆದುಕೊಳ್ಳುತ್ತಿತ್ತು. ನನ್ನ ವ್ರತ್ತಿಯ ಕರೆ ಹೆಚ್ಚಿನ ಸಂದರ್ಭದಲ್ಲಿ ಇದಕ್ಕೆ ಅನುವಾಗುತ್ತಿರಲಿಲ್ಲ. ನನ್ನ ಆಶಯದಂತೆ "ಗುಣಮಟ್ಟವನ್ನು " ಕಾಯ್ದುಕೊಂಡು ಮುಂದುವರಿಯಲು ಕಷ್ಟವಾದಾಗ ಏನೇನೋ ನೆಪ ಹೇಳಿ ಕುಂಟುತ್ತಾ "ಪ್ರದಕ್ಷಿಣೆ' ಹಾಕುವುದು ನನಗೆ ಅಷ್ಟು ಇಷ್ಟವಾಗಲಿಲ್ಲ!!. ಕೊನೆಗೂ ಅದನ್ನು ನಿಲ್ಲಿಸುವ ಮನಸ್ಸನ್ನು ಬಹಳ ಕಷ್ಟ ಪಟ್ಟು ಮಾಡಿದೆ.

ಇಲ್ಲಿ ಹೇಳಲೇ ಬೇಕಾದ ವಿಷಯವೊಂದಿದೆ. ನನಗೆ ಈ ಪ್ರದಕ್ಷಿಣೆ ಅನೇಕ ಸ್ನೇಹಿತರನ್ನು ಒದಗಿಸಿದೆ. ೩ಕೆ ಬಳಗದ ಮೂಲಕ ನಾಡಿನ ಅನೇಕ ಕನ್ನಡದ ಮನಸುಗಳು ನನ್ನನ್ನು ಪುನೀತನನ್ನಾಗಿಸಿವೆ. ರೂಪಾ ಸತೀಶ್ ಎಂಬ ೩ಕೆ ಬಳಗದ ಅಧಿನಾಯಕಿಗೆ ಮತ್ತು ಈ ಬಳಗಕ್ಕೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ನನ್ನದೂ ಒಂದು ಒತ್ತಾಯ ಕಾರಣವಾಗಿ ಇಲ್ಲಿನ ಕೆಲ ಕವಿಗಳು ಕಥನದತ್ತ ವಾಲಿದ್ದು ನನಗೆ ಸಂತಸ ತಂದಿದ್ದರೂ, ಅವರ ಬರಹಗಳಿಗೆ ವೇದಿಕೆಯಾಗದ ನೋವು ನನ್ನ ಬಳಿ ಇದೆ. ಆದರೆ ಈ ಬಳಗದ ಮೂಲಕ ಸಿಕ್ಕ ಅಪೂರ್ವ ಸ್ನೇಹವಿದೆಯಲ್ಲ....ಅದು ಸಾವಿರ ಜನುಮಕ್ಕೆ ಸಮ ಎಂದೇ ನಾನಂದುಕೊಂಡಿದೇನೆ. ಅದೆಷ್ಟೋ  ಉತ್ತಮ ಕವಿಗಳು ಇಲ್ಲಿದ್ದಾರೆ ಬಹುಶ: ಮುಂದೊಂದು ದಿನ ಕನ್ನಡ ನಾಡಿನ ಅಪರೂಪದ ಮತ್ತು ಪ್ರತಿಭೆಯ ಕಣಜಗಳೆಂದು ಗುರುತಿಸಿಕೊಳ್ಳುವ ಕವಿ ಸಮೂಹವೇ ಇಲ್ಲಿದೆ. ರೂಪಕ್ಕನಂತವರು ಮನಸು ಮಾಡಿದರೆ ಏನನ್ನೂ ಬರೆಯಬಲ್ಲರು. ಸತೀಶ್ ನಾಯಕ್ ತನ್ನ ಬ್ಲಾಗ್ ನ ಮೂಲಕ ಈಗಾಗಲೇ ತಮ್ಮ ಬರಹದ ತಾಕತ್ತನ್ನು ತೋರಿದ್ದಾರೆ ಸತೀಶ್ ಬಿ ಕನ್ನಡಿಗನ ಹೂವಿನಂತಹ ಮನಸ್ಸು ಇಷ್ಟವಾಗಿ ಹೋಗಿದೆ. ಅಶೋಕ್ ಶೆಟ್ಟಿ ಊರಿನವರು ಎಂಬ ಹೆಮ್ಮೆಯ ಜೋತೆಗೆ 'ಮಾನವೀಯ' ಕವಿ ಎಂಬ ಹಮ್ಮೂ ನನ್ನದು. ಅಜಾದ್ ಸರ್  ಬರಹದ ತಾಕತ್ತು ಯಾವ ಕವಿಗೂ ಕಮ್ಮಿ ಇಲ್ಲ.ಭರತ್ ಆರ್ ಭಟ್ ನೊಳಗೆ ಓರ್ವ ಉತ್ತಮ ನಗೆಬರಹಗಾರನಿದ್ದಾನೆ, ಅವರು ಮನಸು ಮಾಡಬೇಕಷ್ಟೆ...ನೂತನ್ ಎಚ್ ಬಿ ಯಾ ಕವನಗಳು ಆಪ್ಯಾಯಮಾನವಾಗಿ ಹಿಡಿದಿಡುತ್ತವೆ..... ಅನುಪಮಾ ಹೆಗಡೆಯವರಿಂದ 'ಪ್ರದಕ್ಷಿಣೆ'ಗೆ ಗದ್ಯ ಬರೆಸುವ ಮನಸ್ಸಿತ್ತು....ಆಗಲೇ ಇಲ್ಲ!.ಅನುಪಮಾ ಗೌಡರ ಬರಹಗಳು ಭರವಸೆ ಮೂಡಿಸಿವೆ. ಗೋಪೀ ನಾಥ್ ಅವರ ಸ್ನೇಹಮಯ ನಗು ಮತ್ತು ಮಗುವಿನಂಥ ಮಾತು ಅಪ್ಯಾಯಮಾನವಾಗಿರುತ್ತದೆ.ಶಿವು ಅವರಂತಹ ಅಪ್ರತಿಮ ಛಾಯಾಚಿತ್ರದ ಪ್ರತಿಭೆಯಾ ಸ್ನೇಹವೇ ಒಂದು ಭಾಗ್ಯ!.ದಿನಕರ್ ಮೊಗೇರ್ ಅವರ ಕಥನ ಲೋಕ ಬಹು ಸ್ವಾರಸ್ಯಕರ ಮತ್ತು ಅವರೊಳಗಿನ ಕಥೆಗಾರನಿಗೆ ಸಲಾಂ. ಅರುಣ್ ಶ್ರಂಗೇರಿಯ ಆತ್ಮೀಯತೆಯೇ ಮುದ ನೀಡುವ ವಿಷಯ. ಎಲ್ಲಕ್ಕೂ ಕಲಶವಿಟ್ಟಂತೆ ನೆರೆಮನೆಯ ಮಹೇಶ್ ಮೂರ್ತಿ ಯ  ಸಖ್ಯವೇ ನನ್ನ ಅದ್ರಷ್ಟ. ಕಂಡಾಕ್ಷಣ ಗುರುವನ್ನು ಕಂಡಂತೆ ಶಿರ ಭಾಗಿ ನಮಿಸಬೇಕೆನ್ನುವ ಮ್ರಧು ಮನದ ಮಂಜುನಾಥ್  ಕೊಳ್ಳೇಗಾಲ್ ನನ್ನ ಮನ ಹಿಡಿದಿಟ್ಟಿದ್ದಾರೆ.....ಜಗನ್ ಮತ್ತು ನವೀನ ರ ಸ್ನೇಹಮಯ ಮನಸು.. ಹೀಗೆ ಬರೆಯುತ್ತಾ ಹೋದರೆ ಮುಗಿಯದಷ್ಟೂ  ಆತ್ಮೀಯತೆಯ ಸರಕನ್ನು ನನಗೆ ನೀಡಿದ್ದು ೩ ಕೆ ಬಳಗ. ಇಲ್ಲಿ ಹೇಳಲೇ ಬೇಕಾದ ಮತ್ತೊಂದು ವಿಚಾರವೆಂದರೆ "ಮಂಚಿ" ಎಂಬ ಪದ ನನಗೆ ಆತ್ಮೀಯವಾದದ್ದು.!! ಅನಿತಾ ನರೇಶ್ ಮಂಚಿ ಹಾಗೂ ಅವರ ಪತಿ ರಾಮ್ ನರೇಶ್ ಮಂಚಿಯಂತಹ ಅಪ್ರತಿಮೆ ದಂಪತಿಗಳನ್ನು ನನಗೆ ಸ್ನೇಹಿತರನ್ನಾಗಿಸಿದ್ದು ಈ  ೩ಕೆ ಬಳಗವೇ! ಇವರನ್ನು ಅಪ್ರತಿಮ ಎನ್ನಲೂ ಕಾರಣವಿದೆ. ರಾಮ್ ನರೇಶ್ ಕ್ಯಾಮೆರಾದ ಮೂಲಕ ಜಗ ತೋರುವವರು. ಅವರ ಫೋಟೋಗ್ರಫಿಯ ತಾಕತ್ತು ನನ್ನನ್ನು ಬೆರಗುಗೊಳಿಸಿದೆ!. ಇನ್ನು ಅನಿತಾ!. ಕಂಡಾಗಲೆಲ್ಲಾ ನಾನವರಲ್ಲಿ ಕಾಣುವುದು ಮುಗ್ಧ ತಂಗಿಯ ನಿಷ್ಕಲ್ಮಶ ನಗು. 'ಬಣ್ಣದ ಕಡ್ಡಿ' ಎಂಬ ಲಘು ಬರಹದ ಸಂಕಲನದ ಮೂಲಕ ತನ್ನ ಬರಹದ ಹರಹನ್ನು ಸಶಕ್ತವಾಗಿ ಸಾರಸ್ವತ ಲೋಕಕ್ಕೆ ಕೊಟ್ಟ ಈಕೆ, ಭರವಸೆ ಹುಟ್ಟಿಸಿರುವ ಬರಹಗಾರ್ತಿ. ಇನ್ನು ಮತ್ತೋರ್ವ ಆಕರ್ಷಕ ವ್ಯಕ್ತಿತ್ವ ಅಶೋಕ ಭಾಗ ಮಂಡಲ.ನಿಜ ಹೇಳಿ ಬಿಡುತ್ತೇನೆ....ನನ್ನ ಬ್ಲಾಗ್ ನಲ್ಲಿ ನೀವೇನಾದರೂ  ಆಕರ್ಷಣೆ ಕಂಡುಕೊಂಡಿದ್ದಾರೆ ಅದು ಅಶೋಕ್ ಕ್ರಪೆ!! ಅವರಲ್ಲಿ ಒಮ್ಮೆ ನಾನು ಕೇವಲ ಒಂದು ಫೇಸ ಬುಕ್ ಚಾಟನಲ್ಲಿ ಬ್ಲಾಗ್ ನ್ನು ಸ್ವಲ್ಪ ಚೆಂದಗಾಣಿಸಿಕೊಡಬಹುದೇ ಎಂದೆ! ಮರುದಿನ ನನ್ನ ಬ್ಲಾಗ್ ನನ್ನದಾ  ಎಂಬಷ್ಟೂ  ಚೆಂದ ಮಾಡಿ, ನನಗೆ ತಿಳಿದಷ್ಟು ಮಾಡಿದ್ದೇನೆ ಎಂದು ವಿನಯ ಮೆರೆದ ದೊಡ್ಡ ಮನಸ್ಸು ಅವರದ್ದು. ಇವರ ಬರಹ ಹೇಗಿರುತ್ತದೆ ಎಂಬುದು ನಿಮಗೆ ಬೇಕಿದ್ದರೆ, "ಬಣ್ಣದ ಕಡ್ಡಿ"ಯಾ ಬೆನ್ನುಡಿ ಓದಬೇಕು.....ಅದ್ಭುತ ಬರಹಗಾರ!. ಈ ಎಲ್ಲರನ್ನು ನನಗೆ ಮತ್ತು ನನ್ನ ಆತ್ಮೀಯ ವಲಯಕ್ಕೆ ಕಾರಣವಾಗಿಸಿದ್ದು ಪ್ರದಕ್ಷಿಣೆ!!.

ಇನ್ನು ಪ್ರದಕ್ಷಿಣೆಯನ್ನು ನಿಲ್ಲಿಸಿದಾಕ್ಷಣ ನೊಂದುಕೊಂಡ ಪ್ರಮುಖರಲ್ಲಿ ನಮ್ಮ ಸರ(ಸ)ಮಯದ, ಕುಳಿತಲ್ಲಿ ನಿಂತಲ್ಲಿ ಕವನ ಕಟ್ಟುವ ಕವಿಮನಸು, ಸುಬ್ರಾಯ ಭಟ್ಟರು. ಅವರು ಬಹಳ ನೊಂದುಕೊಂಡವರು. ಆದರೆ ನನ್ನ ಕಷ್ಟದ ಸಂಪೂರ್ಣ ಅರಿವನ್ನು ಹತ್ತಿರದಿಂದಲೇ ಗಮನಿಸಿದವರೂ ಅವರೇ. ಮೌನಕ್ಕೆ ಶರಣಾಗಿ, ನಿಮ್ಮ ಅಭಿಪ್ರಾಯಕ್ಕೆ, ಹೆಜ್ಜೆಗೆ ನನ್ನ ಜೊತೆ ಇದೆ ಎಂದರು. "ಪ್ರದಕ್ಷಿಣೆ"ಯ  ತಾತ್ಕಾಲಿಕ ನಿಲುಗಡೆ ಎಂಬ ಸಾಲು ನೋಡಿ ತತ್ ಕ್ಷಣ ಫೋನ್ ಮಾಡಿ, ಏನಾಯ್ತು ಎಂದು ವಿಚಾರಿಸಿ, ಇರಲಿ ಬಿಡಿ, ಇನ್ನು ನಿಮ್ಮ ಬರಹಗಳತ್ತ ಗಮನ ಕೊಡಿ ಎಂದವರು ಆತ್ಮೀಯ ರಘು ಇಡ್ಕಿದು ಅವರು. ನಿಲ್ಲಿಸಬಾರದಿತ್ತು, ಇರಲಿ ಬಿಡಿ ಎಂದವರು, ಎಂದಿಗೂ ನನ್ನೊಂದಿಗಿರುವ ಕರುಣಾಕರ ಬಳ್ಕೂರು!. ಮುಖ್ಯವಾಗಿ ಇಲ್ಲಿ ಹೇಳಲೇ ಬೇಕಾದ ಹೆಸರು ದೆಹಲಿಯ ಎ ವಿ ಚಿತ್ತರಂಜನ ದಾಸರದ್ದು. ಪ್ರದಕ್ಷಿಣೆಯ ಆರಂಭದಿಂದಲೂ, ಲೇಖನಗಳನ್ನು ಕಳುಹಿಸಿ, ದೆಹಲಿಯ ಅನೇಕ ಕನ್ನಡಿಗರನ್ನು ಇದನ್ನೋದಲು ಪ್ರೇರೇಪಿಸಿದವರು ಇವರು. ಮೊನ್ನೆ 'ಪ್ರದಕ್ಷಿಣೆ'ಯನ್ನು ನಾನು ಮುಂದುವರಿಸೇ? ಅದಕ್ಕೇನು ಮಾಡಬೇಕು ಎಂದು ಮೇಲ್ ಹಾಕಿದ್ದರು. ನನ್ನ ಮನ ಮೂಕವಾಗಿದೆ..ಉತ್ತರಿಸದೇ ಕುಳಿತಿದ್ದೇನೆ.....ಕಾದಿದ್ದೇನೆ...
ಅವರ ಕನ್ನಡಾಭಿಮಾನಕ್ಕೆ ನಾನು ಶರಣು.

ಹಿರಿಯರಾದ ನಾ. ದಾಮೋದ ಶೆಟ್ಟಿಯವರು, ತಮ್ಮ ಬರಹಗಳ ಮೂಲಕವೂ ನನ್ನನ್ನು ಪ್ರೋತ್ಸಾಹಿಸಿದವರು. ಅವರಿಗೆ ನಾನು ಎಂದೆಂದಿಗೂ ಚಿರ ಋಣಿ. ಅವರ ಒಡನಾಟವೇ ನಮಗೊಂದು ಹೊಸ ಜೀವನ!. ತಮ್ಮ ಮನೆಯ ದ್ರಶ್ಯ ಚಾವಡಿಯಲ್ಲಿ ಕುಌರಿಸಿಕೊಂಡು, ಮೆಚ್ಚುಗೆಯ ಮಾತಾಡಿದವರು ವಾಮನ ನಂದಾವರ ದಂಪತಿಗಳು. ಎಂದಿಗೂ ಅವರ ಮಾರ್ಗ ದರ್ಶನ ನಮಗಿದೆ. ಅವರ ಮಾರ್ಗ ದರ್ಶನದಡಿ, ಅರೆಹೊಳೆ ಸಾಹಿತ್ಯ ಪ್ರದಕ್ಷಿಣೆ ನಡೆಯಲೂ ಪ್ರದಕ್ಷಿಣೆಯೇ ಕಾರಣ. ಮತ್ತು ಅದು ಮುಂದುವರಿಯುತ್ತ ದೆ. ಅವರೆಲ್ಲರನ್ನು ಈ ಸಮಯದಲ್ಲಿ ಧನ್ಯತಾ ಭಾವದಿಂದ ಅಭಿನಂದಿಸಲೇಬೇಕು.

ಇನ್ನೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದವರು ಅನೇಕರು. ಎಲ್ಲರನ್ನು ಸ್ಮರಿಸಿಕೊಳ್ಳಲು ಇಲ್ಲಿ ಆಗದ ಮಾತು!!. ಎಲ್ಲರಿಗೂ ನಾನು ಹ್ರದಯ ತುಂಬಿ ಧನ್ಯವಾದ ಹೇಳಲು ಇದನ್ನು ವೇದಿಕೆಯಾಗಿ ಉಪಯೋಗಿಸಿಕೊಂಡಿದ್ದೇನೆ. ನಮ್ಮ ಚುಟುಕು ಸಾಹಿತ್ಯ ಪರಿಷತ್ ನ ಎಲ್ಲರೂ, ಜೊತೆ ನೀಡಿದ್ದಾರೆ ಕಲಾವಿದ ದಿನೇಶ್ ಹೊಳ್ಳ ರು ಸಿಕ್ಕಾಗಳೆಲ್ಲಾ ಶುಭ ಹಾರೈಸಿ, ನನ್ನೆಲ್ಲಾ ಕೆಲಸಗಳಿಗೂ  ಜೊತೆ ನೀಡುವವರು. ಪ್ರದಕ್ಷಿಣೆಗೆ ಉತ್ತಮ ಲಾಂಚನವನ್ನು ತಯಾರಿಸಿಕೊಟ್ಟವರೂ ಅವರೇ.ಧನ್ಯೋಸ್ಮಿ ಹೊಳ್ಳರೇ!

ಪ್ರದಕ್ಷಿಣೆಯಲ್ಲಿ ಅನೇಕ ಓದುಗರ ಮನ ಗೆದ್ದದ್ದು ಅನಿತಾ ಲೋಬೋ ಅವರ ಭುವನ ಕಾದಂಬರಿ. ಅದನ್ನು ಪ್ರಕಟಿಸಲು ಒಪ್ಪಿಗೆ ನೀಡಿದ ಅನಿತಾ ಲೋಬೋ ಅವರಿ ಗೂ, ಅವರ ಪತಿಗೂ ನಾನು ಅಭಾರಿಯಾಗಿದ್ದೇನೆ. ಅತ್ಯುತ್ತಮ ಕಾದಂಬರಿಯಾಗಿ ಅದು ಸಾರಸ್ವತ ಲೋಕದಲ್ಲಿ ಶ್ರೀಮಂತ ವಾಗಲಿ ಎಂಬುದು ನನ್ನ ಬಯಕೆ.

ಇನ್ನುಪ್ರದಕ್ಷಿಣೆಯನ್ನು ಯಾಕೆ ನಿಲ್ಲಿಸಿದ್ದು, ಏನಾದರೂ ಮಾಡೋಣ ಎಂದು ಮೊನ್ನೆ ಒಪ್ಪಣ್ಣ.ಕಾಂ ನವರೂ ಆತ್ಮೀಯರೂ ಆದ ಗೋಪಾಲ ಕ್ರಷ್ಣ ಬೊಳುಂಬು ಅವರು ಹೇಳಿದರು. ಕೊನೆಗೆ ಅವರೇ ನನಗೆ ನಿಮ್ಮ ಕಷ್ಟ ಅರ್ಥವಾಗುತ್ತದೆ ಎಂದು ನಕ್ಕರು....ಆ ನಗುವಿನಲ್ಲಿ ವಿಷಾದ ವಿತ್ತು!!.

ಸ್ನೇಹಿತರೇ, ಹೀಗೆ ಪ್ರದಕ್ಷಿಣೆ ನನಗೆ ಅನೇಕ ಆತ್ಮೀಯರನ್ನು ಒದಗಿಸಿದೆ. ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ಅಲ್ಲಿ ಆದ ಲೋಪವನ್ನು ಸರಿ ಮಾಡಿಕೊಳ್ಳಲು ನಾನು ಈ ಬ್ಲಾಗ್ ನ್ನು ಆರಂಭಿಸಿದ್ದೇನೆ. ಇಲ್ಲಿ ನನ್ನದೇ ಬರಹಗಳಿಗೆ ವೇದಿಕೆಯಾಗಿ ಇದು ನನ್ನ ಎಲ್ಲಾ ರಗಳೆಗಳನ್ನು ನಿಮ್ಮ ಮುಂದೆ ಬಿಚ್ಚಿಡಲಿದೆ. ಯಾವುದರ ವಶವಾದ ವಶಿದಾಸರು ನೀವು ಎಂದು ಸ್ನೇಹಿತ ನೂತನ್ ಕೇಳಿದ್ದರು. ನಿಜಕ್ಕೆಂದರೆ ನಾವು ಕೆಲವೊಮ್ಮೆ ಕೆಲವದಕ್ಕಾಗಿ ಕೆಲವನ್ನು ಬಿಡಬೇಕಾಗುತ್ತದೆ ಎನ್ನುವಂತೆ, ನನ್ನ ಬರವಣಿಗೆಯನ್ನು ಮುಂದುವರಿಸಲು, ನನ್ನದೇ ಕೆಲವು ಅನನುಕೂಲತೆಗಳು ಅಡ್ಡಿಯಾಗಿದ್ದನ್ನು ನಾನು ಮನಗಂಡಿದ್ದೇನೆ. ಹಾಗಾಗಿ ಈ ಬ್ಲಾಗ್ ನ ಮೊರೆ ಹೋಗಿದ್ದೇನೆ

ಇಂದಿನ ಮಟ್ಟಿಗೆ ಒಂದಷ್ಟು ಹಗುರವಾದ ಭಾವನೆ ನನ್ನದು. ಇದಕ್ಕೆ ಕಾರಣ ಪ್ರದಕ್ಷಿಣೆಯ  ಬಗ್ಗೆ ನಿಮ್ಮೊಂದಿಗೆ ಮನ ಬಿಚ್ಚಿ ಮಾತಾಡಿದ್ದು. ಇನ್ನೂ ಹೇಳಲು  ಬಹಳವಿದೆ....ಮುಂದೆ ಅನಂತ ಅವಕಾಶವಿದೆ....ಸಿಗುತ್ತೇನೆ.....

ಪ್ರದಕ್ಷಿಣೆಯ ನಿಲುಗಡೆಯ ಹಿನ್ನೆಲೆಯಲ್ಲಿ ಎಲ್ಲರಲ್ಲಿಯೂ ಕ್ಷಮೆ ಕೇಳುತ್ತಾ....ಅರೆಹೊಳೆ ಪ್ರತಿಷ್ಠಾನ ಮೂಲಕ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳಹೊರಡುತ್ತೇನೆ.....ಬರಹದ ಹರಿವು ನಿರಂತರವಾಗಿರುತ್ತದೆ. ನಿಮ್ಮ ಪ್ರೀತಿ, ವಿಶ್ವಾಸ ಸದಾ ಇರಲಿ.....

ಪ್ರೀತಿಯೊಂದಿಗೆ....

ವಶಿದಾಸ

4 comments:

  1. ಅರೇಹೊಳೆ ಸರ್ ನಿಮ್ಮ ಪ್ರದಕ್ಷಿಣೆ "ನಿಲ್ಲುವುದಿಲ್ಲ" ಕೆಲವೇ ದಿನಗಳಲ್ಲಿ ಎಲ್ಲರ ಮುಂದೆ ಬಂದು "ನಿಲ್ಲುತ್ತದೆ" ಹೊಸತನ ಹೊಸ "ರೂಪ" ಹೊತ್ತು ಬಂದೇ ಬರುತ್ತದೆ ಆ ಭರವಸೆ ನನ್ನಲ್ಲಿದೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ದೇವರ ಆಶೀರ್ವಾದ ಮತ್ತು ಹಿರಿಯರ ಹಾರೈಕೆನಿಮ್ಮ ಮೇಲಿದೆ ಖಂಡಿತ ಪ್ರದಕ್ಷಿಣೆಯ ಯಾನ ಆರಂಭ ಆಗುತ್ತದೆ

    ReplyDelete
  2. ಒಳ್ಳೆಯ ಬ್ಲಾಗ್ ಒಂದನ್ನು ಓದಿದ ಅನುಭವವಾಯಿತು.

    ಇಂದಿನ ಪೊಳ್ಳು ಬರಹಗಾರರು ನಿಮ್ಮಿಂದ ಕಲಿಯುವುದು ಬಹಳಷ್ಟಿದೆ.
    www.badari-poems.blogspot.com

    ReplyDelete
  3. ಪ್ರಥಮ ದಿನ ಶಾಲೆಗೆ ಹೋಗುವಾಗ ಮಗು ತಾನು ಎರಡು ಮೂರು ವರ್ಷ ಆಟ ಆಡಿದ ಮನೆಯನ್ನು ಕೆಲವು ಘಂಟೆಗಳು ತೊರೆಯಬೇಕು ಎನ್ನುವ ಭಾವ ಆ ಮಗುವಿಗಷ್ಟೇ ಗೊತ್ತು...ಆದರೆ ಮನೆಯಲ್ಲಿಯೇ ಮಗು ಇರಬಾರದು ಮಗುವಿನ ಒಳಜಗತ್ತು ಹೊರಜಗತ್ತಿಗೆ ಪರಿಚಯವಾಗಬೇಕಾದರೆ ಮಗು ಹೊರಗೆ ಬರಲೇಬೇಕಾಗುತ್ತದೆ. ಈ ಸುಮಧುರ ಭಾವ ನಿಮ್ಮ ಲೇಖನದಲ್ಲಿ ಕಂಡೆ ಸರ್..ಒಂದನ್ನು ಹಿಡಿಯಬೇಕಾದರೆ ಒಂದನ್ನು ಬಿಡಲೇಬೇಕು (ತಾತ್ಕಾಲಿಕವಾಗಿಯಾದರೂ) ಎನ್ನುವ ಸಿದ್ಧಾಂತ ನಿಮ್ಮ ಲೇಖನದಲ್ಲಿ ಮೊರೆಯುತ್ತದೆ..ನಿಮ್ಮ ಮುಂದಿನ ಹೆಜ್ಜೆಗೆ ಸ್ವಾಗತ ಮತ್ತು ನಮ್ಮ ಸದಾಶಯಗಳು ಜೊತೆಯಲ್ಲೇ ಇರುತ್ತವೆ...ಸುಂದರ ಮನಸ್ಸಿನ ಭಾವದ ಅನಾವರಣ...

    ReplyDelete
  4. ಧನ್ಯವಾದಗಳು ಪ್ರತಿಕ್ರಿಯಿಸಿದ ಎಲ್ಲರಿಗೂ....ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ.....ಧನ್ಯೋಸ್ಮಿ...

    ReplyDelete