Friday 21 December 2012

ನಿಮ್ಮೊಡನೊಂದಿಷ್ಟು .......

 ಹಿಂದೊಮ್ಮೆ 'ಪ್ರದಕ್ಷಿಣೆ'ಯಲ್ಲಿ ಪ್ರಕಟವಾಗಿದ್ದ ಈ ಬರಹವನ್ನು ನಿಮ್ಮ ಮುಂದೆ ಮತ್ತೊಮ್ಮೆ ತೆರೆದಿಡಬೇಕೆನಿಸಿತು. ಈ ಬ್ಲಾಗ್ ಪ್ರಪಂಚದಲ್ಲಿ ಖಾಯಂ ಆಗಿ ಈ ಮನದ ಮಾತು ದಾಖಲಾಗಿರಲಿ ಹಾಗೂ ಇನ್ನೂ ಓದದವರು ಇದನ್ನು ಓದಲಿ ಎಂಬುದು ನನ್ನ ಉದ್ದೇಶ.....
 
ಮಂಗಳೂರಿನ ರಂಗ ಸಂಗಾತಿ ತಂಡದವರು  ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನನ್ನು  ಅತಿಥಿಯಾಗಿ ಆಹ್ವಾನಿಸಿದ್ದರು. ಅದು ಶೀನಾ ನಾಡೋಳಿಯವರ ತುಳು ಕಥಾ ಸಂಕಲನವಾಗಿತ್ತು. ಹಿರಿಯ ವಿದ್ವಾಂಸರಾದ ಡಾ.ವಾಮನ ನಂದಾವರ ಅವರು ಅಧ್ಯಕ್ಷರಾಗಿದ್ದ ಆ ಸಭೆಯಲ್ಲಿ, ತುಳು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ನವೀನ್ ಪಡೀಲ್ ಅತಿಥಿಯಾಗಿದ್ದರು. ನಾನೊಬ್ಬನೇ ಅಲ್ಲಿ ಕನ್ನಡಿಗನಾದ ಹಿನ್ನೆಲೆಯಲ್ಲಿ ಸಂಘಟಕರನ್ನು ಹಾಗೂ ವಾಮನ ನಂದಾವರರನ್ನು ನಾನಲ್ಲಿಗೆ ಎಷ್ಟು ಸೂಕ್ತ ಎಂಬ ಪ್ರಶ್ನೆ ಇಟ್ಟಾಗ, ಈ ತುಳು ಸಮಾರಂಭದಲ್ಲಿ ಅದೂ ಒಂದು ವಿಶೇಷ. ಇಲ್ಲಿ ಕನ್ನಡ ಮತ್ತು ತುಳುವಿನ ಸೌಹಾರ್ದತೆಗಿದು ಸಂಕೇತ ಎಂಬ ಉತ್ತರ ಕೊಟ್ಟಾಗ ನಿಜಕ್ಕೂ ಮೂಕನಾದೆ.
ಈ ವಿಶೇಷ ಸಂದರ್ಭದಲ್ಲಿ ನನಗೆ ನನ್ನ ನೆನಪು ಸುಮಾರು ಆರುವರ್ಷಗಳ ಹಿಂದೆ ಓಡಿತು. ಅದು ನಾನು ಮಂಗಳೂರನ್ನು ನನ್ನ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡ  ಕಾಲಘಟ್ಟ. ಕನ್ನಡ ಸಾಹಿತ್ಯ ಸಂಬಂಧಿ ಚಟುವಟಿಕೆಗಳು ಮತ್ತು ನನ್ನ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಮಂಗಳೂರನ್ನು ಆಯ್ದುಕೊಂಡು ಹೊರಟಾಗ, ಕೆಲವು ಸ್ನೇಹಿತರು ಹೇಳಿದರು. ಮಂಗಳೂರಿನಲ್ಲಿ ನೀನು ಏನಾದರೂ ಮಾಡಬೇಕಿದ್ದರೆ, ಒಂದೋ ನಿನಗೆ ತುಳು ಗೊತ್ತಿರಬೇಕು, ಇಲ್ಲವೇ ನಿನ್ನದೇ ಆದ ಆರ್ಥಿಕ ಸಂಪನ್ಮೂಲ ಇರಬೇಕು ಎಂದು. ಆಗ ನನಗೆ ಎರಡೂ ಇರಲಿಲ್ಲವಾಗಿತ್ತು. ಆದರೆ ನನಗೆ ಮಂಗಳೂರಿಗರ ಸಹೃದಯತೆಯ ಪರಿಚಯವಿತ್ತು!. ಅದನ್ನು ನಾನು ಆಗಾಗ ಕೇಳುತ್ತಿದ್ದೆ. ಅದನ್ನೇ ಮಿತ್ರನಿಗೆ ಹೇಳಿ, ಒಂದು ಸವಾಲು ಎಂಬಂತೆ ಮಂಗಳೂರಿನ ಬಸ್ಸು ಹತ್ತಿದೆ.  ವಿಶೇಷವೆಂದರೆ ಇಂದೂ ನನಗೆ ತುಳು ಮಾತಾಡಲು ಬರುವುದಿಲ್ಲ, ಆದರೆ ಅರ್ಥೈಸಿಕೊಳ್ಳಬಲ್ಲೆ.  ನಾನು ಕೇರಳದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಇದ್ದುದರಿಂದ ಮಲಯಾಳಂ ಕಲಿತೆ. ಅದೇ ಇಲ್ಲಿನ ಮಟ್ಟಿಗೆ ನನಗೆ ತುಳು ಕಲಿಯಲು ತುಸು ಅಡ್ಡಿಯಾಯಿತು!!. ಹೇಗೆಂದರೆ ತುಳು ಮಾತಾಡುವ ಪ್ರಯತ್ನಕ್ಕಿಳಿದರೆ ಮಲಯಾಳಂ ಶಬ್ದ ಬಂದು ಗೊಂದಲಕ್ಕೊಳಗಾಗುತ್ತಿದ್ದೆ. ಅದಕ್ಕೂ ಮಿಗಿಲಾಗಿ ನನಗೆ ಒಂದೇ ಒಂದು ಉದಾಹರಿಸಲ್ಪಡುವ ನಿಮಿತ್ತವಾಗಿಯೂ ತುಳು  ಬರದು ಎಂಬ ಅಡ್ಡಿಯಾದ ಪ್ರಸಂಗ  ಎಲ್ಲೂ ಉಂಟಾಗಲಿಲ್ಲ. ಮಂಗಳೂರಿಗರ ಹೃದಯ ವೈಶಾಲ್ಯದ ಪರಿಯೇ ಅಂತಾದ್ದು. ಅದಕ್ಕೆ ಇದು ಮತ್ತೊಂದು ಉದಾಹರಣೆ. ತುಳು ಮಾತಾಡಲು ಬರದೆಯೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುವ ನಾನು, ಈ ತುಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನನ್ನನ್ನು ಕರೆದು ಅತಿಥಿಯ ಸ್ಥಾನ ಕೊಟ್ಟುದಕ್ಕೆ, ಇದು ತುಳು ಮತ್ತು ಕನ್ನಡ ಹಾಗೂ ಮಂಗಳೂರಿಗ ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಯಾವುದೇ ಭೇದ ಭಾವವಿಲ್ಲದೇ ಸೇರಿಸಿಕೊಳ್ಳುವ ಹೃದಯವೈಶಾಲ್ಯತೆಯ ಉದಾಹರಣೆ ಎಂದುಕೊಂಡೆ.
ಇತ್ತೀಚೆಗೆ ಹತ್ತು ಹಲವಾರು ಸಂಘಟನೆಗಳಲ್ಲಿ ನನ್ನನ್ನು ತೊಡಗಿಸಿಕೊಂಡ ಪರಿಣಾಮವಾಗಿ ಇಲ್ಲಿಯ ಕೆಲವು ಕಷ್ಟಗಳ ಬಗ್ಗೆಯೂ ಹೇಳಲೇ ಬೇಕು.  ಇವತ್ತು ಯಾವುದೇ ಒಂದು ಸಂಘಟಕನಿಗೆ ಎರಡು ರೀತಿಯ ಆರ್ಹತೆ.....ಅದನ್ನು ಲಕ್ಷಣವೆಂದರೂ ಆದೀತು...ಬೇಕೇ ಬೇಕು. ಅದರಲ್ಲೂ ಸಾಹಿತ್ಯ-ಕಲೆಯಂತಹ ಸಂಘಟಕರಿಗೆ ಇದು ಸ್ವಲ್ಪ ಕಷ್ಟ ಮತ್ತು ನಷ್ಟದ ಕಾಲವೂ ಹೌದು,  ಸಂಘಟನೆ ಅತೀ ಸುಲಭಸಾಧ್ಯವೂ ಹೌದು!  ಅದು ಸಂಘಟಕನ ಲಕ್ಷಣದ ಮೇಲೆ ಅವಲಂಬಿತವಾಗಿದೆ. ಎರಡು ಮುಖ್ಯ ಲಕ್ಷಣಗಳಬಗ್ಗೆ ನಾನಿಲ್ಲಿ ಹೇಳಲೇ ಬೇಕು. ಒಂದು ಸಂಘಟಕನಿಗೆ ಸ್ವ-ಸಂಪನ್ಮೂಲ ಯಥೇಚ್ಛವಾಗಿ ಇರಬೇಕು. ಅಥವಾ ಅದಿಲ್ಲವಾದರೆ ಹಿಂದು ಮುಂದಿಲ್ಲದೇ ಸಂಪನ್ಮೂಲವನ್ನು ಕೇಳಿ ತೆಗೆದುಕೊಳ್ಳುವ ತಾಕತ್ತಿರಬೇಕು-ಮುಲಾಜಿಲ್ಲದೆ.   ಇದೆರಡೂ ಇಲ್ಲವಾದರೆ, ಕೇವಲ ನಮ್ಮ ಆದರ್ಶಗಳು ಮತ್ತು ಕಳಕಳಿಗಳು ನಮ್ಮನ್ನು ಕಾಯುತ್ತವೆ ಎಂದುಕೊಂಡರೆ ಈವತ್ತಿನ ಮಟ್ಟಿಗೆ ಸಂಘಟನೆ ಕಷ್ಟಸಾಧ್ಯವೇ. ಆದರೂ, ಅಲ್ಲಲ್ಲಿ ಆದರ್ಶ, ಆಸಕ್ತಿ ಮತ್ತು ಛಲದಿಂದ ಕೆಲವು ಸಂಘಟನೆಗಳು ಹುಟ್ಟಿಕೊಂಡಿವೆ,  ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದ ಮತ್ತು  ಸಾಹಿತ್ಯ-ಕಲೆಯ ಸೇವೆಗೆ ಮೀಸಲಿಟ್ಟು, ಉತ್ತಮ ಮತ್ತು ನೈಜ ಕಾಳಜಿಯ ಕೆಲಸ ಮಾಡುವವರ  ಸಾಲಿನಲ್ಲಿ ಬೆರಳೆಣಿಕೆಯ ಕೆಲವು ಸಂಘಟನೆಗಳ ಪ್ರಯತ್ನವನ್ನು ಮನಸಾರೆ ಮೆಚ್ಚಲೇ ಬೇಕು.
ಸಾರ್ವಜನಿಕ ವಲಯದಲ್ಲಿ ಈ ಸಂಘಟನೆಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುವುದೇ ಇಲ್ಲ. ಅರೆಹೊಳೆ ಎಂಬ ನನ್ನ ಪುಟ್ಟ ಊರಿನಲ್ಲಿ ಅರೆಹೊಳೆ ದಿಬ್ಬಣ ಎಂಬ ಕಾರ್ಯಕ್ರಮ ಮಾಡಿದ್ದು, ಅದು ಜನಪ್ರಿಯವಾಗಿದ್ದು ಒಂದು ಸಮಾಧಾನ ತಂದಿತು. ಅದು ನನ್ನ ಮಟ್ಟಿಗೆ ಒಂದು ಹೆಮ್ಮೆಯ ಗಳಿಗೆಯೂ ಆಗಿತ್ತು. ಅದಾದ ನಂತರ ಮಂಗಳೂರಿನಲ್ಲಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ಪ್ರತಿಷ್ಠಾನ ಹೆಚ್ಚು ಮುತುವರ್ಜಿಯಿಂದ ತೊಡಗಿಕೊಂಡಿದೆ. ಆದರೆ ಹೆಚ್ಚಿನವರಿಗೆ ಗೊತ್ತಿಲ್ಲದ ಒಂದು ಅಂಶವೆಂದರೆ ಇಂತಹ ಸಂಘಟನೆಗಳಿಗೆ ಸರಕಾರದಿಂದ ಯಾವುದೇ  ಧನ ಸಹಾಯ ಇಲ್ಲವೆಂಬುದು. ಅವರಿಗೇನು ಬಿಡಿ, ಸರಕಾರದಿಂದ ಹಣ ಬರುತ್ತದೆ ಎಂಬ ಮಾತನ್ನು ನಾನೂ ಹಲವು ಬಾರಿ ಕೇಳಿದ್ದೇನೆ. ಇದು ಗೊತ್ತಿಲ್ಲದೆ ಕೆಲವರು ಆಡುವ ಮಾತುಗಳು. ವಾಸ್ತವದಲ್ಲಿ ಮೇಲೆ ಹೇಳಿದ ಎರಡು ಲಕ್ಷಣಗಳಿಲ್ಲದಿದ್ದರೆ, ಅಥವಾ ಕೈಯಿಂದ ಸಂಪನ್ಮೂಲವನ್ನು ಹಾಕದಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಕಷ್ಟ ಸಾಧ್ಯವೇ ಸರಿ.

altಈ ಹಂತದಲ್ಲಿ ಒಂದು ಮಾತು ನೆನಪಿಗೆ ಬರುತ್ತದೆ. ತಮಗೂ ಗೊತ್ತಿರುವ ದೃಷ್ಟಾಂತವೊಂದನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಒಮ್ಮೆ ಶ್ರೀ ಕೃಷ್ಣದೇವರಾಯ, ಗೋಡೆಯ ಮೇಲೆ ಒಂದು ಗೆರೆ ಹಾಕಿ, ಒಂದು ಸವಾಲು ಹಾಕುತ್ತಾನೆ. ಆ ಗೆರೆಯನ್ನು ಅಳಿಸದೆ ಅಂದರೆ ಒರೆಸದೇ ಸಣ್ಣದು ಮಾಡಬೇಕು. ಅಂದರೆ ಅದರ ಉದ್ದವನ್ನು ಕಡಿಮೆ ಮಾಡಬೇಕು ಎಂಬುದಾಗಿ. ಎಲ್ಲರೂ ಪ್ರಯತ್ನಿಸಿ ಸೋತಾಗ ತೆನಾಲಿ ರಾಮಕ್ರೃಷ್ಣ ಬರುತ್ತಾನೆ. ಅವನು ಆ ಗೆರೆಯನ್ನು ಮುಟ್ಟುವುದೇ ಇಲ್ಲ. ಅದರ ಕೆಳಗೆ ಮತ್ತೊಂದು ಅದಕ್ಕಿಂತಲೂ ಉದ್ದವಾದ ಗೆರೆ ಎಳೆದು ಬಿಡುತ್ತಾನೆ. ಸಹಜವಾಗಿ ಮೊದಲ ಗೆರೆಯ ಉದ್ದ ಕಡಿಮೆಯಾಗುತ್ತದೆ. ಅಂದರೆ ಇದನ್ನು ನಾವು ಬದುಕಬೇಕಾದ ರೀತಿಗೆ ಒಂದು ಪಾಠವಾಗಿ ನಾವಿಲ್ಲಿ ಉದಾಹರಿಸಬಹುದು. ಮೊದಲ ಗೆರೆಯನ್ನು ಅಳಿಸದೇ, ಅಂದರೆ ಯಾವುದೇ ಬೇರೆ ವ್ಯಕ್ತಿಯನ್ನು ಮುಟ್ಟದೇ, ಅಥವಾ ಬೇರೆ ವ್ಯಕ್ತಿಯನ್ನು ಮೆಟ್ಟಿ ನಿಲ್ಲದೇ, ಅಥವಾ ಬೇರೊಬ್ಬನ ತೇಜೋವಧೆ ಮಾಡದೇ, ನಾವು ನಮ್ಮ ಕೆಲಸವನ್ನು ಸದುದ್ದೇಶದಿಂದ ಮಾಡಿದರೆ, ಅದುವೇ ನೈಜ ಸಾಮಾಜಿಕ ಕಾಳಜಿ ಎಂಬ ಸಂದೇಶವನ್ನು ಇದು ನೀಡುತ್ತದೆ. ನಾವು ಮತ್ತು ನಮ್ಮ ಸಂಘಟನೆಗಳು ಹಾಗೆ ಬೆಳೆಯಬೇಕು ಎಂಬುದು ಇಲ್ಲಿನ ಆಶಯ. ಯಾರನ್ನೋ ಮೆಟ್ಟಿ ನಿಲ್ಲುವ ಮನೋಸ್ಥಿತಿ ನಮಗೆ ಬೇಡ. ಎಲ್ಲರನ್ನೂ ಬದುಕಗೊಡು ಎಂಬ ಸಂದೇಶದಿಂದ ನಾವು ಬದುಕನ್ನು ಕಟ್ಟಿ ಕೊಳ್ಳಬೇಕು, ಸಾಧ್ಯವಾದರೆ ಬೇರೆಯವರಿಗೆ ಬದುಕನ್ನು ಕಟ್ಟಿ ಕೊಡಬೇಕು ಎಂಬ ಆಶಯದೊಡನೆ ಬದುಕುವುದು ಇದೆಯಲ್ಲ, ಅದರಲ್ಲಿರುವ ಸಾರ್ಥಕ್ಯ ಬೇರಾವುದರಲ್ಲೂ ಇಲ್ಲವೆಂಬದು ನಾವು ಗಮನಿಸಬೇಕಾದ ಅಂಶ.

ತಮ್ಮ ಮುಂದೆ ಇನ್ನೂ ಒಂದು ದೃಷ್ಟಾಂತವನ್ನು ತೆರೆದಿಡಬಯಸುತ್ತೇನೆ. ಇತ್ತೀಚಿನ ಒಂದು ಸಭೆಯಲ್ಲಿ ಡಾ.ವರದರಾಜ ಚಂದ್ರಗಿರಿಯವರು ಹೇಳಿದ ದೃಷ್ಟಾಂತ ಇದು.  ಒಂದು ವಿಶಾಲವಾದ ಮರದಲ್ಲಿ ಒಣಗಿದ ಟೊಂಗೆಯೊಂದರ ಮೇಲೆ ಹಕ್ಕಿಯೊಂದು ಕುಳಿತಿದೆ. ಅದೇ ಮರದ ಮತ್ತೊಂದು ಮೂಲೆಯಲ್ಲಿ ಟೊಂಗೆಯೊಂದರ ಮೇಲೆ ಜೇನು ಗೂಡು ಕಟ್ಟಿಕೊಂಡಿದೆ. ಒರ್ವ ನಮ್ಮ ನಿಮ್ಮಂತಹ ಮನುಷ್ಯ ಜೇನು ತೆಗೆಯಲೆಂದು ಆ ಜೇನುಹುಳಗಳನ್ನೆಲ್ಲಾ ಓಡಿಸಿ, ಜೇನು ತೆಗೆದುಕೊಂಡು ಹೋಗುತ್ತಾನೆ. ಆಗ ಎಲ್ಲಾ ಜೇನುಹುಳಗಳೂ ಪ್ರಾಣ ಭೀತಿಯಿಂದ ಓಡಿ ಹೋದಾಗ, ಒಂದು ಜೇನು ಹುಳು ಈ ಒಣಗಿದ ರೆಂಬೆಯಲ್ಲಿ ಕುಳಿತ ಪಕ್ಷಿಯ ಸನಿಹ ಬರುತ್ತದೆ. ಆಗ ಆ ಪಕ್ಷಿ ಕೇಳುತ್ತದೆ. ಜೇನು  ಹುಳವೇ, ನಿನ್ನನ್ನು ಕಂಡು ಮರುಕವಾಗುತ್ತದೆ. ನೀನೀಗ ನಿರ್ಗತಿಕ ಎಂಬುದಕ್ಕಿಂತಲೂ ನೀನು ಸಂಗ್ರಹಿಸಿದ್ದ ಜೇನು ಆ ಮಾನವನ ಪಾಲಾಯ್ತಲ್ಲ ಎಂದು. ಅದಕ್ಕೆ ಜೇನು ಹುಳು ನಗುತ್ತಾ ಉತ್ತರಿಸುತ್ತದೆ. ಅಯ್ಯೋ ಪೆದ್ದೇ, ನಾನು ಈ ಕ್ಷಣದಲ್ಲಿ ಆ ಜೇನು ತುಪ್ಪವನ್ನು ಕಳೆದುಕೊಂಡಿರಬಹದು. ಆದರೆ ನೆನಪಿಡು, ಆ ಜೇನು ಸಂಗ್ರಹಿಸುವ ಮತ್ತು ಸವಿಯಾದ ಜೇನನ್ನು ತಯಾರಿಸುವ ನನ್ನ ಕಲೆಯನ್ನು ಯಾರೂ ಕದಿಯಲಾರರು!. ಇದು ನೋಡಿ ಬದುಕಿನ ರಸವತ್ತಾದ ಅನುಭವ.  ಇದರ ತಾತ್ಪರ್ಯ- ಜೀವನ ಕಲೆ, ಆತ್ಮ ವಿಶ್ವಾಸ. ನಾನು ನನ್ನೊಳಗಿರುವ ಸಾಮರ್ಥ್ಯದ ಮೇಲೆ ವಿಶ್ವಾಸ ಇಟ್ಟರೆ, ಆ ಸಾಮರ್ಥ್ಯ ನನ್ನನ್ನು ಕಾಯಬಹುದು ಎಂಬ ವಿಶ್ವಾಸದಿಂದಿದ್ದರೆ, ಖಂಡಿತಕ್ಕೂ ನಮ್ಮನ್ನು ಯಾರೂ ಮಣಿಸಲಾರರು ಎಂಬುದನ್ನು ಇದು ತಿಳಿಸುತ್ತದೆ. ಮುಖ್ಯವಾಗಿ ಬದುಕಿನಲ್ಲಿ ಬರುವ -   ಬದುಕು ಎಂಬುದನ್ನು ಇಲ್ಲಿ ಸಂಘಟನೆಗಳಿಗೆ ಸಮೀಕರಿಸಿ ಹೇಳುವುದಿದ್ದರೆ-ಯಾವುದೇ ಉತ್ತಮ ಕೆಲಸಗಳಿಗೆ ಬರುವ ಅಡ್ಡಿಯ ಕಾಲದಲ್ಲಿ ನಮಗೆ ವಿಶ್ವಾಸ ತುಂಬಬಲ್ಲ ದೃಷ್ಟಾಂತ ಇದು. ಕಥೆ ಇಲ್ಲಿಗೇ ಮುಗಿಯುವುದಿಲ್ಲ. alt 
ಒಣ ಟೊಂಗೆಯ ಮೇಲೆ ಕುಳಿತ ಹಕ್ಕಿಯನ್ನು ಕಂಡು ಜೇನು ಹುಳಕ್ಕೂ ಒಂದು ಪ್ರಶ್ನೆ. ಅಯ್ಯಾ ಪಕ್ಷಿ ಮಹರಾಯ, ಈಗಲೋ ಮತ್ತೊಂದು ಗಳಿಗೆಯಲ್ಲೋ ಬೀಳಬಹುದಾದ ಆ ಒಣಟೊಂಗೆಯ ಮೇಲೆ ಕುಳಿತಿದ್ದೀಯಲ್ಲ, ನಿನಗೆ ಮರುಳೇ. ಅದೇನಾದರೂ ಮುರಿದು ಬಿದ್ದರೆ ನಿನ್ನ ಸ್ಥಿತಿ ಏನು ಎಂದು ಅದು ಪಕ್ಷಿಯನ್ನು ಕೇಳಿದರೆ ಆ ಹಕ್ಕಿ ಹೇಳುತ್ತದೆ, ಅಯ್ಯಾ ಈಗ ನೀನು ಪೆದ್ದನಾದೆ. ನನಗೆ ಗೊತ್ತು. ಈ ಟೊಂಗೆ ಯಾವುದೇ ಕ್ಷಣದಲ್ಲಿಯೂ ಬೀಳಬಹುದು. ಆದರೆ ನಾನು ನಂಬಿ ಕುಳಿತಿದ್ದು ಈ ಟೊಂಗೆಯನ್ನುಲ್ಲ, ನನ್ನ ರೆಕ್ಕೆಗಳಿಗಿರುವ ಸಾಮರ್ಥ್ಯವನ್ನು!. ನೋಡಿ. ಇಲ್ಲಿಯ ಕಥೆಯ ತಿರುಳು!!. ಇದು ನಮ್ಮ ಮೇಲೆ ನಮಗಿರಬೇಕಾಗುವ ಆತ್ಮವಿಶ್ವಾಸ!!. ನಮ್ಮ ಮೇಲೆ ನಮಗೆ ವಿಶ್ವಾಸ ಇರಬೇಕು, ಈಗ ಈ ಎರಡೂ ದೃಷ್ಟಾಂತಗಳನ್ನು ಸಮೀಕರಿಸಿದರೆ, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ನಾವು ಬದುಕಬೇಕೇ ಹೊರತು, ಯಾರನ್ನೋ ಮೆಟ್ಟಿನಿಲ್ಲುವ ಅಥವಾ ತುಳಿದು ಬೆಳೆಯುವ ಸಂಸ್ಕಾರ ನಮಗೆ ಬೇಡ. ಎಲ್ಲರನ್ನೂ ಪ್ರೀತಿಸಿ, ಎಲ್ಲರೂ ಒಂದಾಗಿ ಬದುಕುವ ರೀತಿ ನೀತಿಗಳನ್ನು ಸಾಹಿತ್ಯ-ಕಲೆಗಳೆರಡೂ  ನೀಡುತ್ತಿರುವಾಗ ಅದುವೇ ಸಾಹಿತ್ಯ  ಮತ್ತು ಕಲೆ ಮಾನವನ ದಿನ ನಿತ್ಯದ ಬದುಕಿಗೆ ಕೊಡವ ಅತ್ಯಪೂರ್ವ ಜೀವನಪಾಠ. ಇಂತವನ್ನು ಪೋಷಿಸಿಕೊಂಡು ಹೋಗುವುದು, ಬೆಳೆಸುವುದು ಇಂತಹವುಗಳಿಗಾಗಿ ಸಾಹಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣ ವಾಗುತ್ತವೆ. ಅವುಗಳು ಬದುಕನ್ನು ಸುಸಂಸ್ಕೃತಿಯಿಂದ ಅನುಭವಿಸಲು ಕಲಿಸುತ್ತವೆ.
ಈ ಎಲ್ಲಾ ಹಿನ್ನೆಲೆಯಲ್ಲಿ, ಇಂದು ಸಂಘಟಿತ ಜೀವನ ಬಹುಮುಖ್ಯ ಪಾತ್ರವಹಿಸುತ್ತವೆ ಎಂಬ ನಂಬುಗೆಯೊಂದಿಗೆ, ಕೆಲವು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಲು ಕೆಲವೊಮ್ಮೆಕೆಲವನ್ನು ನಿಷ್ಠುರವಾಗಿ ನಿರ್ಲಕ್ಷಿಸಬೇಕಾಗುತ್ತದೆ ಎಂಬ ಹಿನ್ನೆಲೆಯೊಂದಿಗೆ ಹೀಗೇ ಅನಿಸಿದ ಕೆಲವನ್ನು ನಾನಿಲ್ಲಿ ತೆರೆದಿಟ್ಟಿದ್ದೇನೆ. ನೀವೇನಂದುಕೊಂಡಿರೋ!!?

2 comments:

  1. ಸದಾಶಿವ್ ಕನ್ನಡ ಬ್ಲಾಗ್ ಮಂಗಳೂರಿನ ವಾಸಿಗಳ ಪರಿಚಯಿಸಿದರೆ, ಆ ಪರಿಚಯದ ಕೊಂಡಿಯಾದ ದಿನಕರ್ ಮೊಗೇರರ ಮೂಲಕ ನಿಮ್ಮ ಪರಿಚಯ ನನ್ನ ಭಾಗ್ಯ
    ಲೇಕನ ಇಷ್ಟ ಆಯ್ತು


    ReplyDelete
  2. ದೃಷ್ಟಾಂತ ಕಥೆಗಳಿಂದ ಮನಸಿನ ಕಲೆಯನ್ನು ತೊಳೆಯುವ ಹಾಗು ವ್ಯಕ್ತಿತ್ವದ ಕಳೆಯನ್ನು ಹೆಚ್ಚಿಸುವ ಈ ಲೇಖನ ಇಷ್ಟವಾಯಿತು ಸರ್..ಸೊಗಸಾಗಿದೆ..

    ReplyDelete