ಜನ ಪ್ರತಿನಿಧಿಯ 'ಪ್ರದಕ್ಷಿಣೆ'ಯ ಈ ವಾರದ ನನ್ನ ಅಂಕಣ ಬರಹ...
ಕೆಲವೊಮ್ಮೆ ಕೆಲವು ವ್ಯವಸ್ಥೆಗಳು ಒಂದು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದುವುಗಳು, ಕಾಲ ಮತ್ತು ಬದಲಾಣೆಯ ಹೊಡೆತಕ್ಕೆ ಸಿಕ್ಕು ವಿರೂಪ ಗೊಳ್ಳುತ್ತಿರುತ್ತವೆ. ಬದಲಾವಣೆಯ ಒಂದು ಮಜಲಿನ ನಂತರ ಅದರ ಬಗ್ಗೆ ಯೋಚಿಸಿದರೆ, ನಾವೇನೋ ಕಳೆದುಕೊಂಡ ಭಾವಕ್ಕೊಳಗಾಗುತ್ತೇವೆ. ಇಂತಹ ಕಳೆದು ಕೊಂಡ ವ್ಯವಸ್ಥೆಯಲ್ಲಿ ಇಂದು ನಮ್ಮ ಅಂಚೆಯಣ್ಣನ ಆತ್ಮೀಯತೆಯೂ ಒಂದು.
ಬಾಲ್ಯದ ಒಂದು ಘಟನೆ ನೆನಪಾಗುತ್ತದೆ. ನನಗೆ ವಿಪರೀತ ಪತ್ರ ಬರೆಯುವ ಹುಚ್ಚು. ಒಂದು ರೀತಿಯಲ್ಲಿ ನನ್ನ ಬರಹಕ್ಕೆ ಮತ್ತು ಅನೇಕ ಹಿರಿಯ ಬರಹಗಾರರ ಬರಹದ ಮೊದಲ ಮೆಟ್ಟಿಲು ಇದೇ ಇರಬಹುದೇನೋ. ಊರಿನಲ್ಲಿ ಆಗುವ ಜಾತ್ರೆ ಇರಲಿ, ದೈವದ ಹಬ್ಬ ಇರಲಿ, ಹೊಸತಿರಲಿ, ತಿಥಿ ಇರಲಿ ಅಥವಾ ಸುಖ ದ:ಖದ ಯಾವುದೇ ವಾತಾವರಣವಿರಲಿ, ಆತ್ಮೀಯರಿಗೆಲ್ಲಾ ಪತ್ರ ಬರೆಯುವುದು ಅಂದು ಸಾಮಾನ್ಯವಾಗಿತ್ತು. ಆ ಹಂತದಲ್ಲಿ ನಮ್ಮ ಜ್ಞಾನದ ಮಿತಿ ಎಷ್ಟಿರುತ್ತಿತ್ತೆಂದರೆ, ಪತ್ರ ಬರೆದು ಡಬ್ಬಕ್ಕೆ ಹಾಕಿದರೆ ಆಯ್ತು, ಅದು ತಲುಪ ಬೇಕಾದ ಜಾಗ ತಲುಪುತ್ತದೆ ಎಂಬುದು ನಮ್ಮ ತಿಳುವಳಿಕೆ. ಒಮ್ಮೆ ಹಾಗೆಯೇ ನನ್ನೂರ ಜಾತ್ರೆಗೆ ಬರುವಂತೆ ಒಂದೆರಡು ಸಂಬಂಧಿಗಳಿಗೆ ಪತ್ರ ಬರೆದು, ಚೆನ್ನಾಗಿ ಮಡಚಿ, ಪೋಸ್ಟ್ ಡಬ್ಬಕ್ಕೆ ಹಾಕಿ ಬಿಟ್ಟಿದ್ದೆ-ಸ್ಟಾಂಪ್ ಹಾಕದೆಯೇ!!. ಆದರೆ ಅನೇಕ ದಿನದ ನಂತರ ತಿಳಿದದ್ದೇನೆಂದರೆ, ಆ ಪತ್ರಗಳು ಮುಟ್ಟಬೇಕಾದ ವಿಳಾಸ ಮುಟ್ಟಲೇ ಇಲ್ಲ. ಅಜ್ಞಾನದ ಪರಿಧಿ ಎಂದರೆ, ನನ್ನ ವಿಳಾಸವನ್ನೂ ಬರೆಯದ ಕಾರಣ, ಅಂಚೆಯವರು ಪ್ರಾಮಾಣಿಕವಾಗಿ ಅದನ್ನು ಹರಿದೆಸೆದಿರಬೇಕು!. ಇದರ ಮುಂದುವರಿದ ಭಾಗವಾಗಿ, ಮತ್ತೊಮ್ಮೆ ಒಂದು ಪತ್ರವನ್ನು ಬರೆದು, ಅದಕ್ಕೆ ಸ್ಟಾಂಪ್ ಹಾಕಬೇಕು ಎಂಬ ತಿಳುವಳಿಕೆ ಬಂದಿದ್ದ ನಾನು, ಅಂಚೆಯವನು ಬರುವುದನ್ನೇ ಕಾಯುತ್ತಿದ್ದೆ. ಅವನು ಬರುತ್ತಲೇ, ಅಂದಿನ ಮಟ್ಟಿಗೆ ದೊಡ್ಡ ಮೊತ್ತವಾಗಿದ್ದ ಐದು ಪೈಸೆ ನಾಣ್ಯವನ್ನು ಕೊಟ್ಟು ಸ್ಟಾಂಪ್ ಕೊಡಲು ಹೇಳಿದೆ. ಯಾಕೆ ಎಂದು ಕೇಳಿದ್ದಕ್ಕೆ, ಬರೆದು ಮಡಚಿ ಕಿಸೆಯೊಳಗಿಟ್ಟಿದ್ದ ಪತ್ರ ತೋರಿಸಿದ್ದೆ ಇದಕ್ಕೆ ಅಂದು ೨೫ಪೈಸೆ ಸ್ಟಾಂಪ್ ಆಗಬೇಕೆಂದ ಅವನ ಮಾತು ಕೇಳಿ ನಿರಾಸೆಯಿಂದ ಮರಳುವಾಗ, ಅವನೇ ಕರೆದು ಆ ಮೊತ್ತಕ್ಕೆ ಸ್ಟಾಂಪ್ ಹಚ್ಚುತ್ತೇನೆ ಎಂದು ಹೇಳಿ, ಕೊಂಡು ಹೋದ. ನನ್ನ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಯಾಕೆಂದರೆ ಆ ಪತ್ರ ಮುಟ್ಟಬೇಕಾದ ಸ್ಥಳ ತಲುಪಿತ್ತು. ಇದು 'ಅಂದು' ಅಂಚೆಯವನ ಆತ್ಮೀಯತೆ!
ಇದನ್ನಿಂದು ಜ್ಞಾಪಿಸಿಕೊಳ್ಳಲು ಕಾರಣ ಒಂದಿದೆ. ನಾನು ವ್ಯವಾಹಾರದ ಹಿನ್ನೆಲೆಯಲ್ಲಿ, ಇತ್ತೀಚೆಗೆ ದೊಡ್ಡ ಸಂಖ್ಯೆಯ ಕೆಲವು ಅಂಚೆಗಳನ್ನು ಕಳುಹಿಸುತ್ತಿರುತ್ತೇನೆ. ಚನ್ನರಾಯ ಪಟ್ಟಣದ ಒಬ್ಬ ಆತ್ಮೀಯರಲ್ಲಿ ಆ ಅಂಚೆ ಬಂದಿತೇ ಎಂದು ಕೇಳಿದಾಗ ಅವರು ನಕ್ಕು ಬಿಟ್ಟರು. 'ಸ್ವಾಮೀ, ಇಂದಿನ ಅಂಚೆಯವರ ಪರಿಸ್ಥಿತಿ ನಿಮಗೆ ಗೊತ್ತಿಲ್ಲ. ಸರಕಾರದ ಪ್ರತಿಯೊಂದನ್ನೂ ತಮ್ಮದೇ ವಾಹನದಲ್ಲಿ (ಸೈಕಲ್, ಬೈಕ್) ಮೂಲಕ ಹೋಗಿ ಬಟವಾಡೆ ಮಾಡುವುದರಲ್ಲಿ ಅವರು ಹೈರಾಣಾಗಿರುತ್ತಾರೆ. ಹಾಗಾಗಿ ಇಂದಿನ ಅಂಚೆಯವರಲ್ಲಿ 'ಹೆಚ್ಚಿನವರು' ರಿಜಿಸ್ಟರ್ಡ್ ಅಂಚೆ ಮಾತ್ರ ವಿಲೆವಾರಿ ಮಾಡುತ್ತಾರೆ. ಇಂತಹ ಸಾಮಾನ್ಯ ಪೋಸ್ಟ್‌ಗಳನ್ನು ಹಂಚುವ ಸಾಹಸಕ್ಕೇ ಕೈಹಾಕುವುದಿಲ್ಲ' ಎಂದಾಗ ನನಗೆ ನಂಬಲೂ ಆಗದ ಆಶ್ಚರ್ಯ!.ಕೊನೆಗೆ ಹೀಗೇ ಮಾತಾಡುವಾಗ ಅವರೆಂದರು, 'ಇಂದು ಅಂಚೆಯನಿಗೆ ಸರಕಾರದ ಅಂಚೆಯ ಬಟವಾಡೆ ಅಷ್ಟು ದೊಡ್ಡ ಸಂಖ್ಯೆಯಲ್ಲಿರುತ್ತದೆ. ಮಾಸಾಶನ, ಆಧಾರ್.....ಹೀಗೆ ಕಾಲ ಕಾಲಕ್ಕೆ ಸರಕಾರ ತರುವ ಸವಲತ್ತು ವಿತರಣೆಯೇ ದೊಡ್ಡ ಸಾಹಸ. ಹಾಗಿರುವಾಗ ಸಾಮಾನ್ಯ ಅಂಚೆಗಳನ್ನು ಅವರು ವಿಲೆವಾರಿ ಮಾಡುವುದೂ ಅಸಾಧ್ಯ ಬಿಡಿ!'
ಕಾನೂನು, ಸಂವಿಧಾನಾತ್ಮಕವಾಗಿ ನೋಡಿದರೆ, ಇಲ್ಲಿ ಒಂದು ಅಪರಾಧ ಬಹಿರಂಗವಾಗಿ ಆಗುತ್ತಿರುತ್ತದೆ. ಆದರೆ ಮಾನವೀಯ ದೃಷ್ಟಿಯಲ್ಲಿ ನೋಡಿದರೆ ಆ ಸ್ನೇಹಿತ ಹೇಳಿದ್ದೂ ನನಗೆ ಹೌದೆನಿಸುತ್ತದೆ. ಉದಾಹರಣೆಗೆ ನನ್ನ ಹಳ್ಳಿಯ ಅಂಚೆಯವನನ್ನೇ ತೆಗೆದುಕೊಂರೆ, ನನ್ನ ಬಾಲ್ಯದಿಂದಲೂ ಗಮನಿಸುತ್ತಿದ್ದೇನೆ. ಇಂದಿಗೂ ತನ್ನ ಸೈಕಲ್ ಮೂಲಕ, ಅಂಚೆ ಬಟವಾಡೆ ಮಾಡುವ ಈ ಹಿರಿಯ, ಸೈಕಲ್‌ನ್ನು ಒಂದೆಡೆ ನಿಲ್ಲಿಸಿ, ಮನೆ ಮನೆಗೆ ಹೋಗಿ ಅಂಚೆ ವಿತರಿಸುತ್ತಾರೆ. ನನಗೆ ಇಂದಿನ ತನಕ ಅವರು ಯಾವುದೇ ಅಂಚೆ ವಿತರಣೆಯಲ್ಲಿ ವ್ಯತ್ಯಾಸ ಮಾಡಿದ್ದು ತಿಳಿದಿಲ್ಲ. ಆದರೆ ನಗರ ಪ್ರದೇಶಗಳಲ್ಲಿ ಇದು ತೀರಾ ಕಷ್ಟದ ಕೆಲಸ ಮತ್ತು ಈ ರೀತಿಯ ಸಾಮಾನ್ಯ ಅಂಚೆಗಳು ಕಸದ ಬುಟ್ಟಿ-ತೊಟ್ಟಿ ಸೇರುವ ಸಂಭವ ಹೆಚ್ಚು ಎಂಬುದು ಅನುಮಾನವೇ ಇಲ್ಲ. ನನ್ನ ಹಳ್ಳಿಯ ಅಂಚೆಯವನನ್ನು ನಾನು ಈಗ ನೆನಪಿಸಿಕೊಳ್ಳಲೂ ಮುಖ್ಯ ಕಾರಣವೆಂದರೆ, ಮೇಲೆ ಹೇಳಿದ ಸ್ಟಾಂಪ್ ಹಾಕಿ ನನ್ನ ಪತ್ರ ಮುಟ್ಟಬೇಕಾದ ಜಾಗಕ್ಕೆ ತಲುಪಿಸಿದವರು ಅವರೇ!!!.
ಈ ವಿಷಯ ಇಲ್ಲೇಕೆ ಎಂದರೆ ಹಿಂದೆ ಅಂಚೆಯವನು ಮತ್ತು ಊರಿನ ಪ್ರತೀ ಮನೆಯವರ ನಡುವೆಯೂ ಒಂದು ಆತ್ಮೀಯತೆ ನಮಗರಿವಿಲ್ಲದೆಯೇ ಗಟ್ಟಿಯಾಗಿರುತ್ತಿತ್ತು. ಹಳ್ಳಿ/ಊರಿನ ಪ್ರತೀ ಮನೆಯ ವ್ಯಕ್ತಿಗೂ ಈ ಅಂಚೆಯಾತ ವೈಯಕ್ತಿಕವಾಗಿ ಉತ್ತಮ ಸ್ನೇಹಿತ. ಹಳ್ಳಿಗಳಲ್ಲಿ ಎಷ್ಟೋ ಮನೆಗಳಲ್ಲಿ ಈ ಅಂಚೆಯವರು ಪತ್ರ ತಲುಪಿಸುವುದು ಮಾತ್ರವೇ ಅಲ್ಲದೇ, ಅನೇಕ ಸಂದರ್ಭಗಳಲ್ಲಿ ಪತ್ರವನ್ನು ಓದಿ ಹೇಳುತ್ತಿದ್ದುದೂ ಇತ್ತು. ಈ ಮೂಲಕ ಅದೆಷ್ಟೋ ರಹಸ್ಯ ವಿಷಯಗಳು ಅಂಚೆಯವನಿಗೆ ತಿಳಿಯುತ್ತಿತ್ತು!. ಆದರೆ ಗಮನಿಸಬೇಕಾದ ವಿಷಯವೆಂದರೆ, ಹೆಚ್ಚಿನ ಅಂಚೆಯವರು ಈ ವಿಷಯವನ್ನು ಅಲ್ಲಿಗೇ ಬಿಡುತ್ತಿದ್ದರು ಮತ್ತು ಯಾವುದೇ ಕಾರಣದಿಂದಲೂ ಅದು ಸೋರಿ ಹೋಗುತ್ತಿರಲಿಲ್ಲ. ಇಂತಾದ್ದೇ ಪ್ರಾಮಾಣಿಕತೆಗಳು ಅಂಚೆಯವನು ಮತ್ತು ಊರಿನವರ ನಡುವೆ ಆತ್ಮೀಯತೆಯನ್ನು ಗಟ್ಟಿಗೊಳಿಸಿಕೊಂಡಿರುತ್ತಿದ್ದುವು.
ನಾನು ವಿದ್ಯಾಭ್ಯಾಸ ಮುಗಿಸಿ, ಎರಡು ವರ್ಷಗಳ ಕಾಲದ ಹುಬ್ಬಳ್ಳಿಯ ಹೋಟೆಲೊಂದರಲ್ಲಿ ನಂತರ ಮಣಿಪಾಲದ 'ಉದಯವಾಣಿ'ಯಲ್ಲಿ, ಅದಾದ ನಂತರ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಒಂದಷ್ಟು ಕಾಲ ಕೆಲಸ ಮಾಡುತ್ತಿದ್ದೆ. ಆಗೆಲ್ಲಾ ನನಗೆ ಸ್ನೇಹಿತರು ಹಾಗೂ ಮನೆಯವರಿಂದ, ಬಂಧುಗಳಿಂದ ದಿನಕ್ಕೆ ಒಂದಾದರೂ ಪತ್ರ ಬರುತ್ತಿತ್ತು. ಹಾಗೆ ನಾನು ನೆಲೆಸಿದೆಲ್ಲೆಡೆಯಲ್ಲಿ, ಹಳ್ಳಿ-ನಗರ ಎಂಬ ಭೇಧವಿಲ್ಲದೆಯೇ ಅಂಚೆಯವನು ಆತ್ಮೀಯ ಸ್ನೇಹಿತನಾಗಿರುತ್ತಿದ್ದ. ಮಣಿಪಾಲದಲ್ಲಿಯಂತೂ, ಅಂಚೆಯವನು ಮನೆಯೊಳಗೆ ಬಂದು, ಕುಳಿತು ಕುಶಲ ವಿಚಾರಿಸಿ, ಪೋಸ್ಟ್ ಕೊಟ್ಟು ಹೋಗುತ್ತಿದ್ದುದು ನನ್ನ ನೆನಪಿನಲ್ಲಿ ಇನ್ನೂ ಹಸಿರಾಗಿದೆ.
ಇಂದು ಈ ಕಾಲ ಎಲ್ಲಿ ಹೋಯಿತು??. ನಮ್ಮ ನಮ್ಮ ನಡುವಿನ ಸಂವಹನದ ಕೊಂಡಿಯಾಗಿದ್ದ ಈ ಅಂಚೆ, ಇಂದು ವ್ಯಾವಹಾರಿಕ 'ಕೆಲಸ'ವೆಂಬಷ್ಟು ಬದಲಾಗಿದೆ. ಎಲ್ಲೋ ಅಪರೂಪಕ್ಕೆ ಹಳೆಯ ಸಂಪ್ರದಾಯದ ಅಂಚೆಯವರನ್ನು ಕಾಣಬಹುದು ಬಿಟ್ಟರೆ, ಅಂಚೆಯವನ ಮುಖದಲ್ಲಿ ಇಂದು ಆತ್ಮೀಯ ನಗುವಿಲ್ಲ ಹಾಗೆಯೇ ಅವನ ನಗುವಲ್ಲಿ ಆತ್ಮೀಯತೆ ಕಾಣಲು ಯಾರಿಗೂ ಪುರುಸೊತ್ತಿಲ್ಲ! ಅಂಚೆಯಲ್ಲಿ ಆತ್ಮೀಯತೆ ಸೊರಗಿದೆ. ಅಲ್ಲಿ ಬರುವುದೇನಿದ್ದರೂ, ಬ್ಯಾಂಕ್ ಸ್ಟೇಟ್‌ಮೆಂಟ್, ಸಾಲದ ಮರುಪಾವತಿಯ ನೋಟೀಸ್, ಆಧಾರ್-ಅಥವಾ ಅಂತಹ ಬೇರೆ ಕಾರ್ಡ್‌ಗಳು......ಹೀಗೆ ಅಂಚೆಯಲ್ಲಿನ 'ಸರಕಿ'ನ ಸ್ವರೂಪವೇ ಬದಲಾಗಿದೆ. ಇಲ್ಲಿ ಒಂದು ರೀತಿಯ ದೂರದೂರಿನ ಬಂಧು, ಸಂಬಂಧ ಅಥವಾ ಸ್ನೇಹದ 'ಸೇತು' ಮುರಿದು ಬಿದ್ದಿದೆ. ಬದಲಾಗಿ ಒಂದು ರೀತಿಯ ನೀರಸ, ವ್ಯವಾಹಾರಕ್ಕೆ ಇದು ಸೀಮಿತವಾಗಿದೆ ಅಥವಾ ತನ್ನನ್ನು ಅದು ಕಟ್ಟಿಕೊಂಡಿದೆ. ಹೀಗೇ ಇದೇ ವಿಷಯದ ಬಗ್ಗೆ ಮಾತಾಡುತ್ತಿದ್ದಾಗ, ಎಂಟನೆಯ ತರಗತಿಯ ನನ್ನ ಮಗಳೂ ಹೇಳುತ್ತಾಳೆ, ಇಂದು ಆ ತರದ ಕಾಯುವಿಕೆ ಏನಿದ್ದರೂ ಅದು ಎಸ್‌ಎಂಎಸ್‌ಗೆ ಸೀಮಿತವಾಗಿದೆ!!. ಎಷ್ಟು ಸತ್ಯ ನೋಡಿ.
ನಾನೀ ಲೇಖನದಲ್ಲಿ ಅಂಚೆಯವರ ಕಷ್ಟ ಕಾರ್ಪಣ್ಯದ ಬಗ್ಗೆ ಬರೆಯ ಹೊರಟರೆ ಅದೇ ಒಂದು ಕಥೆಯಾದೀತು. ಬದಲಾದ ಭಾವನಾತ್ಮಕ ಸಂಬಂಧಗಳ ಕಿರು ವಿಶ್ಲೇಷಣೆಯೇ ನನ್ನ ಉದ್ದೇಶ. ಕೊರಿಯರ್, ಮೊಬೈಲ್ ಸೇವೆಗಳು ಇಂದು ಅಂಚೆಯವನ ಮತ್ತು ನಮ್ಮ ನಡುವಿನ ಆತ್ಮೀಯ ಸಂಬಂಧಕ್ಕೆ ಕೊಳ್ಳಿ ಇಟ್ಟಿವೆ. ದೃಶ್ಯ ಮಾಧ್ಯಮಗಳು, ಕಂಪ್ಯೂಟರ್ ಹಾಗೂ ಮೊಬೈಲ್‌ಗಳು ಓದುಗ-ಬರಹಗಾರನ ನಡುವಿನ ಸಂಬಂಧವನ್ನು ಕಿರಿದುಗೊಳಿಸಿದ ಹಾಗೆಯೇ, ಇಂದು ಜಗತ್ತನ್ನೇ ಕಿರಿದುಗೊಳಿಸಿದ ಆಧುನಿಕ ತಂತ್ರಜ್ಞಾನ, ಮನುಷ್ಯ ಮನುಷ್ಯ ನಡುವಿನ ಆತ್ಮೀಯತೆಯನ್ನೂ 'ಅಪಾಯಕಾರಿ' ಮಟ್ಟದಲ್ಲಿ ಕಿರಿದುಗೊಳಿಸಿವೆ. ಇದಕ್ಕೆ ಅಂಚೆಯವನೂ ಹೊರತಾಗಿಲ್ಲ-ಇದು ನಮ್ಮ ಇಂದಿನ ಖೇದ.
ಈ ಎಲ್ಲಾ ಹಿನ್ನೆಲೆಯ ಕಾರಣದಿಂದ ಸಾಮಾಜಿಕವಾಗಿಯೂ ಅಂಚೆಯಣ್ಣ ಕ್ರಮೇಣ ಸಮಾಜದ ಮುಖ್ಯವಾಹಿನಿಯಿಂದ ಬದಿಗೆ ಸರಿಯುತ್ತಿದ್ದಾನೆ. ನಮಗೆಲ್ಲಾ ಗೊತ್ತಿರುವ ಹಾಗೆ, ಒಂದು ಕಾಲದಲ್ಲಿ ಜನರ ಬಹು ಮುಖ್ಯ ತ್ವರಿತ ಸಂಪರ್ಕ ಸೇತುವಾಗಿದ್ದ ಟೆಲಿಗ್ರಾಂ ಇಂದು ಅವಸಾನ ಕಂಡಿದೆ!!. ಅಂಚೆಯೂ ಆ ಹಾದಿಯಲ್ಲಿ ಸಾಗುತ್ತಿತ್ತೇನೋ, ಆದರೆ ಅದ್ರಷ್ಟವಶಾತ್ ಸರಕಾರಗಳು ಅದನ್ನೇ ನೆಚ್ಚಿಕೊಂಡ ಕಾರಣ ಅದಿನ್ನೂ ಉಳಿದಿದೆ ಎಂಬುದೇ ಸಮಾಧಾನ. ಆ ಸಮಾಧಾನಕ್ಕೆ ಏನೂ ಧಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಆದರೆ ಜನರ ಬರೆಯುವ ಅಭಿರುಚಿ, ಓದುವ ಅಭಿರುಚಿ, ಪತ್ರ ಸಂಪರ್ಕ ನಿಯಮಿತವಾದ ಕಾರಣದಿಂದ, ಅಂಚೆಯವನ ಜೊತೆಗಿನ ಬಾಂಧವ್ಯದಲ್ಲಿ ಒಂದು ಅನಿವಾರ್ಯ ಬಿರುಕು ಕಂಡಿದೆ. ಇದು ನಿಜಕ್ಕೂ ನೋವಿನ ಸಂಗತಿ.