Wednesday, 26 February 2014

ನೇತ್ರಾವತಿ ಬರಿದಾಗುತ್ತಿದ್ದಾಳೆ!!!

ಜನಪ್ರತಿನಿಧಿಯ 'ಪ್ರದಕ್ಷಿಣೆ' ಯಲ್ಲಿ ನನ್ನ ಇಂದಿನ ಬರಹ.... 


ಮಂಡ್ಯ, ಮೈಸೂರು, ಬೆಂಗಳೂರು ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಕಾವೇರಿ ನದಿ ನೀರು ಹಂಚಿಕೆಯ ವಿವಾದದ ಬಿಸಿ ಎಲ್ಲರಿಗೂ ಗೊತ್ತು. ಪ್ರತೀ ವರ್ಷ ಇಲ್ಲಿನ ಜನರು, ಕಾವೇರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುತ್ತಾರೆ. ಅಲ್ಲಿಂದ ಒಂದು ಹನಿ ನೀರು ಹೊರಟಿತು ಎಂದಾದರೆ ಆ ಪ್ರದೇಶಗಳಲ್ಲಿ ಬೆಂಕಿ ಬೀಳುತ್ತದೆ. ಇಲ್ಲಿ ಆಗುವುದು ಕೇವಲ ನದಿ ನೀರಿನ 'ಹಂಚಿಕೆ'ಯೇ ಹೊರತು, ನದಿ 'ತಿರು'ವಲ್ಲ!.

ನಾವು ಕರಾವಳಿಯು ಜನತೆ ಶಾಂತಿಪ್ರಿಯರು. ನಮ್ಮಲ್ಲಿದ್ದುದನ್ನು ಹಂಚಿ ತಿನ್ನುವ ಉದಾರ ಮನೋಭಾವದವರು. ಇದು ನಮ್ಮನ್ನು ಇಂದು ದುರಂತದ ಬಾಗಿಲಲ್ಲಿ ನಿಲ್ಲಿಸಿದೆ. ನಮ್ಮ ಜೀವನದಿ ನೇತ್ರಾವತಿ, ನಮ್ಮ ಜಿಲ್ಲೆಯಿಂದ ರಾಜಕಾರಣಿಗಳ ದುರಾಸೆ, ಸ್ವಾರ್ಥ, ದ್ವೇಷ ರಾಜಕಾರಣದಿಂದ ಬೇರೆ ಜಿಲ್ಲೆಗಳಿಗೆ ಹೊರಟಿದ್ದಾಳೆ-ಶಾಶ್ವತವಾಗಿ.

ಇಂದು ದಕ್ಷಿಣ ಕನ್ನಡದ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿರುವುದು ನೇತ್ರಾವತಿ ನದಿ ತಿರುವು ಯೋಜನೆ. ಇದಕ್ಕೆ ಹೆಸರು ಬದಲಾಯೀಸಿ ಎತ್ತಿನಹೊಳೆ ಯೋಜನೆ ಎಂದು ಕರೆದು, ರಾಜ್ಯ ಸರಕಾರ ಜನತೆಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಸಕಲೇಶಪುರದ ಎತ್ತಿನಹೊಳೆಯಲ್ಲಿ ನೇತ್ರಾವತಿಯನ್ನು  ತಿರುಗಿಸಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಸುಮಾರು ೨೪ಟಿಎಂಸಿ ನೀರನ್ನು ಒದಗಿಸುವುದು ಈ ಯೋಜನೆಯ ಉದ್ದೇಶ. ಇಂದು ದಕ್ಷಿಣ ಕನ್ನಡಿಗನ ಪಾಲಿಗೆ ಜೀವ ಸೆಲೆಯಾಗಿರುವ ಈ ನೇತ್ರಾವತಿಯನ್ನು ಈ ಮೂಲಕ, ತಿರುಗಿಸಿ, ಇಲ್ಲಿನ ಜನತೆಯ ಪಾಲಿಗೆ ಬರಿದುಗೊಳಿಸಿ, ಅದನ್ನು ಬೇರೆ ಜಿಲ್ಲೆಗಳಿಗೆ ಒದಗಿಸುವ ವ್ಯವಸ್ಥಿತ ಹುನ್ನಾರು ಇದು ಎಂದೇ ಪರಿಗಣಿಸಬೇಕಾಗುತ್ತದೆ. 

ಅಕ್ಟೋಬರ್ ೨೦೧೩ರಲ್ಲಿ ಬೆಂಗಳೂರು ಮೂಲದ ಅರ್ಘ್ಯಂ ಎಂಬ ಸೇವಾ ಸಂಸ್ಥೆ, ದಕ್ಷಿಣ ಕನ್ನಡ-ಉಡುಪಿ ಭಾಗಕ್ಕೆ ನೀರಿನ ನಿರ್ವಹಣೆಯಲ್ಲಿ ಪರಿಣತ ಸಂಸ್ಥೆಯೊಂದನ್ನು ಕಳುಹಿಸಿ, ಈ ಯೋಜನೆಯ ಸಾಧಕ-ಭಾಧಕದ ಬಗ್ಗೆ ಅಧ್ಯಯನ ಕೈಗೊಂಡಿತ್ತು. ಅಂದು ೮೦೦೦ಕೋಟಿಯ ಈ ಯೋಜನೆಯನ್ನು  ಅಧ್ಯಯನ ತಂಡ ತಲೆ ಬುಡವಿಲ್ಲದ ಯೋಜನೆ ಎಂದು ಕರೆದಿತ್ತು. ಅದಕ್ಕೆ ಆ ತಂಡ ರಾಜಸ್ಥಾನದ ಒಂದು ನದಿ ತಿರುವಿನ ಕಥೆಯನ್ನು ಉದಾಹರಣೆಯಾಗಿ ಹೇಳಿತ್ತು. ರಾಜಸ್ಥಾನದ ಆಳಾವಾರ ಜಿಲ್ಲೆಯಲ್ಲಿ ನಂದುವಾಲಿ ಎಂಬ ನದಿಯನ್ನು ೨೨ಕಿಮೀ ಉದ್ದದ ನದಿ ತಿರುವಿನಿಂದಾಗಿ ಮೂರು ದಶಕಗಳಲ್ಲಿ ಆ ನದಿ ಸಂಪೂರ್ಣವಾಗಿ ಬತ್ತಿ ಹೋಗಿತ್ತು!. ಈ ತಿರುವಿನ ಪರಿಣಾಮವಾಗಿ, ಜಿಲ್ಲೆಯ ಸುಮಾರು ೨೮೫ ಬಾವಿಗಳು ಸಂಪೂರ್ಣವಾಗಿ ಬತ್ತಿಹೋಗಿದ್ದುವು. ಜಿಲ್ಲೆಯ ಹಳ್ಳಿ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ೩೫೦ಮಿಮಿ ನಿಂದ ೪೫೦ಮಿಮಿ ತನಕ ಕಡಿಮೆಯಾಯಿತು!. ಇದು ಈ ನಂದುವಲಿ ನದಿ ತಿರುವಿನ ಯೋಜನೆಯ ದುಷ್ಪರಿಣಾಮ. ಪರಿಣಾಮವಾಗಿ ಆಳ್ವಾರ್ ಜಿಲ್ಲೆಯು ಜನರಿಗೂ ಈ ನದಿಯ ನೀರಿಲ್ಲ, ಅದನ್ನು ತಿರುವಿನಿಂದಾಗಿ ಕರೆದುಕೊಂಡು ಹೋದ ಜಿಲ್ಲೆಯ ಜನರಿಗೂ ನೀರಿಲ್ಲ!! ಇದನ್ನು ಉದಾಹರಣೆಯಾಗಿ ನೀಡುತ್ತಾ, ಆ ಅಧ್ಯಯನ ತಂಡ, ನದಿ ತಿರುವು ಯೋಜನೆ ನಿಜಕ್ಕೂ ಅವೈಜ್ಞಾನಿಕ ಎಂದು ಕರೆದಿದೆ. 

ಈ ದುರಂತಕ್ಕೆ ಪರಿಹಾರವನ್ನೂ ಈ ತಂಡ ನೀಡಿತ್ತು. ಇಂದು ನಮ್ಮ ರಾಜ್ಯದಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗಿ ಸಮುದ್ರ ಸೇರಿಯೋ, ಭೂಮಿಯಲ್ಲಿ ಇಂಗಿಯೋ  ಹಾಳಾಗುತ್ತಿದ್ದರೆ ಅದನ್ನು ಮಳೆ ನೀರಿನ ಕೊಯ್ಲು ಮುಖಾಂತರ ಉಪಯೋಗಿಸಬಹುದು ಎಂಬುದು ಆ ತಜ್ಷ ತಂಡದ ಅಭಿಮತ. ಥಾರ್ ಜಿಲ್ಲೆಯಲ್ಲಿ ಕೇವಲ ವರ್ಷಕ್ಕೆ ೧೦೦ಮಿಮಿ ಮಳೆ ಬೀಳುವ ಪ್ರದೇಶದಲ್ಲಿ ಈ ರೀತಿಯ ಮಳೆ ನೀರು ಕೊಯ್ಲಿನಿಂದಾಗಿ ನೀರಿನ ಸಮಸ್ಯೆ ಪರಹಾರವಾಗಿರುವ ಉದಾಹರಣೆಗಳನ್ನೂ ಇವರು ನೀಡುತ್ತಾರೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಸುಮಾರು ೪೦೦೦ಮಿಮಿ ಮಳೆ ಬೀಳುತ್ತಿದ್ದು, ಈ ರೀತಿಯ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ನೀರಿನ ಸಮಸ್ಯೆಯೇ ಉದ್ಭವಿಸದು ಎಂಬುದು ಅವರ ವಾದ. ಈ ಆಧುನಿಕ ಯೋಜನೆಗಳನ್ನು ರಾಜ್ಯಾದ್ಯಂತ ಜಾರಿಗೆ ತರುವ ಬದಲು, ಸರಕಾರ ಕೈಗೊಂಡಿರುವ ಈ ಯೋಜನೆ, ಕೇವಲ ಸ್ವಾರ್ಥ ರಾಜಕಾರಣದ ಪರಮಾವಧಿ ಎಂಬುದು ಮೇಲ್ನೋಟಕ್ಕೇ ಕಾಣುತ್ತದೆ.

ಇಂದು ಜಿಲ್ಲೆಯಾದ್ಯಂತ ನೇತ್ರಾವತಿ ವಿಷಯದಲ್ಲಿ ಹೋರಾಟ ನಡೆಯುತ್ತಿದೆ. ಈ ಹೋರಾಟವನ್ನು ಕ್ಯಾರೇ ಎನ್ನದ ರಾಜ್ಯ ಸರಕಾರ, ಮಾರ್ಚ್ ಮೂರರಂದು ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ಹಮ್ಮಿಕೊಂಡಿದೆ. ವಿಪರ್ಯಾಸವೆಂದರೆ ದಕ್ಷಿಣ ಕನ್ನಡದಿಂದ, ಸಕಲೇಶಪುರದ ಮೂಲಕ ಈ ಭಾಗದ ಜನತೆಗೆ ವ್ಯವಸ್ಥಿತವಾಗಿ ವಿಷ ಉಣ್ಣಿಸುವ ಈ ಯೋಜನೆಯ ಫಲ ಪಡೆಯುವ ಚಿಕ್ಕಬಳ್ಳಾಪುರದಲ್ಲಿ ಇದಕ್ಕೆ ಶಿಲಾನ್ಯಾಸ. ಏಕೆಂದರೆ ಇಲ್ಲಿನ ವಿರೋಧಕ್ಕಿಂತ ಮಿಗಿಲಾಗಿ, ನಮ್ಮ ಜಿಲ್ಲೆಯ ರಾಜಕಾರಣಿಗಳಿಗೆ ಅಲ್ಲಿನ ಜನರ ವಿಶ್ವಾಸ ಗಳಿಸಿ, ಮುಂದಿನ ಚುನಾವಣೆಯಲ್ಲಿ ಗೆಲ್ಲುವ ತವಕ. ಶೀಘ್ರವೇ ಘೋಷಣೆಯಾಗುವ ಚುನಾವಣೆ ಮತ್ತು ಅದನ್ನು ಹಿಂಬಾಲಿಸುವ ನೀತಿ ಸಂಹಿತೆಯನ್ನು ಗಮನಿಸಿ, ರಾಜಕಾರಣಿಗಳು ತರಾತುರಿಯಲ್ಲಿ ಈ ಕೆಲಸಕ್ಕೆ ಹೊರಟಿದ್ದಾರೆ. ಇಲ್ಲಿ ಮಹಾ ದುರಂತ ಎಂದರೆ, ಇದನ್ನು ನೇತ್ರತ್ವ ವಹಿಸಿ, ವಿಶೇಷ ಕಾಳಜಿ ವಹಿಸಿ ಮಾಡುತ್ತಿರುವವರು,, ದಕ್ಷಿಣ ಕನ್ನಡದ ಜನತೆಯ ಮೂಲಕ ಆಯ್ಕೆಯಾಗಿ, ಮುಂದೆ ರಾಜ್ಯದ ಮುಖ್ಯಮಂತ್ರಿಯೂ ಆಗಿ, ಬುದ್ದಿಜೀವಿ ರಾಜಕಾರಣಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡು, ಇಂದು ಕೇಂದ್ರದಲ್ಲಿ ಸಚಿವರಾಗಿರುವ ವೀರಪ್ಪ ಮೊಲಿಯವರು. ಕರ್ನಾಟಕದ ರಾಜ್ಯ ಸರಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳವಲ್ಲಿ ವಿಶೇಷ ಆಸ್ಥೆ ವಹಿಸಿದ್ದು ಈ  ಮೊಲಿಯವರು. ಇಂದಿಗೂ ಈ ಯೋಜನೆಯನ್ನು ಬಲವಾಗಿ ಸಮರ್ಥಿಸಿ, ತಮ್ಮ 'ರಾಜಕೀಯ' ಜೀವನಕ್ಕೆ ನೆರವಾಗುವಂತೆ ಚಿಕ್ಕಬಳ್ಳಾಪುರದ ಜನತೆಯ ಖುಷಿಗಾಗಿ ಹೋರಾಡುತ್ತಿರುವ ಈ ಮೊಲಿಯವರು, ತಾವು ಇನ್ನೊಂದು ಬದಿಯಲ್ಲಿ ದಕ್ಷಿಣ ಕನ್ನಡದ ಜನತೆಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಯೋಚಿಸುತ್ತಲೇ ಇಲ್ಲ.

ಇನ್ನು ಉಳಿದ ರಾಜಕಾರಣಿಗಳು. ರಾಜ್ಯ ಸರಕಾರದಲ್ಲಿ ಈ ಭಾಗದ ಸಚಿವರಿದ್ದಾರೆ, ಶಾಸಕರಿದ್ದಾರೆ. ವಿಶೇಷವೆಂದರೆ ಅವರೆಲ್ಲರೂ ಆಳುವ ಪಕ್ಷದ ಶಾಸಕರೇ ಆಗಿದ್ದಾರೆ.  ಈ ಭಾಗದ ಜನತೆಯ ಹಿತ ಕಾಯಬೇಕಾದ ಈ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಯೋಜನೆಯ ದುರಂತವನ್ನು ವಿವರವಾಗಿ ತಿಳಿದುಕೊಂಡೂ, ಎಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಈ ವಿರೋಧ ಸಂಚಕಾರ ತಂದಿತೋ ಎಂಬ ಭಯದಿಂದ ನರಸತ್ತಂತಿದ್ದಾರೆ!. ಇದು ನಮ್ಮ ದುರಂತದ ಮತ್ತೊಂದು ಮುಖ. ಇನ್ನು ಪಕ್ಷಾತೀತವಾಗಿ ಯೋಚಿಸಿದರೆ, ಈ ದುರಂತಕ್ಕೆ ಭಾಜಪದ ನಾಯಕಮಣಿಗಳೂ ಕಾಣಿಕೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರು ಯಾವ ಹೋರಾಟವನ್ನೂ ತೋರಲಿಲ್ಲ ಮತ್ತು ಅವರ ಅವಧಿಯಲ್ಲೇ ಈ ಯೋಜನೆಯ ನೀಲಿ ನಕ್ಷೆ ಸಿದ್ದವಾಗಿತ್ತು ಎಂಬುದು ಮಾತು. ನಳಿನ್ ಕುಮಾರ್ ಕಟೀಲ್ ಎಲ್ಲೂ ಈ ಯೋಜನೆಯ ವಿರುದ್ದ ಗಟ್ಟಿ ದನಿಯಲ್ಲಿ ಮಾತಾಡಿದ್ದೇ ಇಲ್ಲ. ಇಂದಿನ ಸ್ತಿತ್ಯಂತರದಲ್ಲಿ ರಾಜಕಾರಣದ ಬೆಂಬಲವಿಲ್ಲದಿದ್ದರೆ, ಇಂತಹ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇರುವಾಗ, ನಮ್ಮ ದುರಂತವೆಂದರೆ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಸ್ವಾರ್ಥ ಸಾಧನೆಯಲ್ಲಿ ನಿರತರಾಗಿದ್ದಾರೆ.

ವೀರಪ್ಪ ಮೊಲಿಯವರಂತೂ ಈ ಯೋಜನೆಯನ್ನು ಶತಾಯ ಗತಾಯ ಮಾಡಿಯೇ ಸಿದ್ದ ಎಂದು  ಹೇಳಿಕೆ ನೀಡುತ್ತಾ, ಓಡಾಡುತ್ತಿದ್ದಾರೆ. ಇಂತಹ ರಾಜಕಾರಣಿಗಳು, ಜಿಲ್ಲೆಯ ಜನತೆಯ ಪಾಲಿಗೆ ವರದಾನವಾಗುವ ಬದಲು, ದುರಂತವಾಗಿ ಪರಿಣಮಿಸಿದ್ದಾರೆ. ಹೋದೆಡೆಯಲ್ಲಿ, ಬಂದೆಡೆಯಲ್ಲಿ ಇವರ ಮಾತು ಒಂದೇ, ನೇತ್ರಾವತಿ ತಿರುವನ್ನು ಕೈ ಬಿಡುವುದಿಲ್ಲ ಎಂಬುದು. ಇದಕ್ಕೆ ಅವರು  ಹಿಂದಿನ ಚುನಾವಣೆಯಲ್ಲಿ ಇಲ್ಲಿ ಸೋತು, ನಂತರ ಚಿಕ್ಕಬಳ್ಳಾಪುರದಲ್ಲಿ ಗೆದ್ದುದಕ್ಕೆ, ಇಲ್ಲಿನ ಜನರ ಮೇಲೆ ಅಘೋಷಿತ ಪ್ರತೀಕಾರಕ್ಕೆ ಮುಂದಾಗಿದ್ದಾರೆ ಎಂಬುದು ಒಂದು ಕಾರಣವಾದರೆ, ಮಗ ಹರ್ಷ ಮೊಲಿಗೆ ಮಂಗಳೂರಿನಲ್ಲಿ ಟಿಕೆಟ್ ಕೊಡಿಸಲು ಕಾಂಗ್ರೆಸ್ ಹೈಕಮಾಂಡ್‌ಗೆ ಖುಷಿ ಕೊಡುವ ಯತ್ನ ಎಂದೂ ಹೇಳಲಾಗುತ್ತದೆ. ಗಮನಿಸಿ, ಇವರಿಗೆ ಸ್ವಾರ್ಥ ರಾಜಕಾರಣದ ಮುಂದೆ ಜಿಲ್ಲೆ, ರಾಜ್ಯ, ದೇಶ ಏನೂ ಆಲ್ಲ. ಇದಕ್ಕೆ ವೀರಪ್ಪ ಮೊಲಿಯವರು ಇಂದು ತಾಜಾ ಉದಾಹರಣೆಯಾಗಿದ್ದಾರೆ.

ಏನೇ ಇರಲಿ. ಇದು ಒಂದು ಮುಖವಾದರೆ, ಮತ್ತೊಂದು ಮುಖವೂ ಕಳವಳ ಹುಟ್ಟಿಸುತ್ತದೆ. ಈ ಯೋಜನೆಯ ವಿರುದ್ಧದ ಆರಂಭದ ಧ್ವನಿಯಲ್ಲಿ ಶಕ್ತಿಯೇ ಇರಲಿಲ್ಲ. ಜನತೆ ಎಚ್ಚೆತ್ತುಕೊಂಡು ವಿರೋಧ ಆರಂಭಿಸುವಲ್ಲಿ ಕೆಲಸ ಬಹಳ ಮುಂದುವರಿದಿತ್ತು. ದಿನೇಶ್ ಹೊಳ್ಳ, ವಿಜಯಕುಮಾರ ಶೆಟ್ಟಿ, ಮಾಧವ ಉಳ್ಳಾಲ್, ಎಂ ಜಿ ಹೆಗಡೆಯಂತವರು ಆರಂಭದಲ್ಲಿಯೇ ಹೋರಾಟಕ್ಕಿಳಿದರೂ, ಜಿಲ್ಲೆಯ ಜನತೆಯನ್ನು ಸರಕಾರ ಮತ್ತು ಈ ಸ್ವಾರ್ಥ ರಾಜಕಾರಣಿಗಳು ಸಂಪೂರ್ಣ ದಾರಿ ತಪ್ಪಿಸಿದ್ದ ಪರಿಣಾಮ, ಆರಂಭದಲ್ಲಿ ಹೋರಾಟ ಕಾವು ಪಡೆಯಲೇ ಇಲ್ಲ. ಆರಂಭದಿಂದಲೂ ಹೋರಾಟಕ್ಕಿಳಿದಿದ್ದ ನಾಯಕರ ಸತತ ಪರಿಶ್ರಮವಾಗಿ ಇಂದು ಜನತೆ ಇದರ ಘೋರ ದುರಂತದ ಚಿತ್ರಣವನ್ನು ಅರ್ಥ ಮಾಡಿಕೊಂಡಿದ್ದಾರೆ, ಹೋರಾಟಕ್ಕಿಳಿದಿದ್ದಾರೆ. ಇನ್ನೂ ದುರಂತವೆಂದರೆ, ಸಮಾಜದ ಕಣ್ಣಿನಂತಿರುವ ಅನೇಕ ಬುದ್ದಿ ಜೀವಿಗಳು, ಧಾರ್ಮಿಕ ನಾಯಕರು, ಸಹಕಾರಿ ಧುರೀಣರು, ಸಂಘಟನೆಗಳ ಮುಖ್ಯಸ್ಥರು ಕಣಮುಚ್ಚಿ ಕುಳಿತಿದ್ದಾರೆ. ಹೊಳ್ಳರಂತ ನಾಯಕರು, ಕೇವಲ ನಿಸ್ವಾರ್ಥತೆಯಿಂದ ಹೋರಾಡುತ್ತಾ ಅಕ್ಷರಶ: ಅನ್ನ ನೀರು ಬಿಟ್ಟು ಬೀದಿಗಿಳಿದಿದ್ದಾರೆ. ಆದರೆ ಪ್ರಭಾವಿ ನಾಯಕರು ಕುರುಡಾಗಿದ್ದಾರೆ. ನಮಗೇಕೆ ಎಂಬ ಈ ಪರಿಯ ತಾತ್ಸಾರ ಹೀಗೇ ಮುಂದುವರಿದಲ್ಲಿ ಖಂಡಿತಕ್ಕೂ ದಕ್ಷಿಣ ಕನ್ನಡ ಜಿಲ್ಲೆಯ ಮುಂದಿನ ನಾಗರಿಕರು, ಉತ್ತರ ಕರ್ನಾಟಕದ ಜಿಲ್ಲೆಯ ಜನರಂತೆ ಮೈಲಿಗಟ್ಟಲೆ ದೂರದಿಂದ ನೀರನ್ನು ಹೊತ್ತು ತರುವ ದಿನಕ್ಕೆ ದೂರವಿಲ್ಲ!!.

ಈ ನಡುವೆ ಚುನಾವಣೆ ಬಂದಿದೆ. ಲಜ್ಜೆ ಗೆಟ್ಟ ರಾಜಕಾರಣಿಗಳು ಮತ್ತೆ ಮನೆ ಮನೆಗ ಅದೇ ಮುಖ ಹೊತ್ತು ಬರುತ್ತಾರೆ. ಮೊಲಿಯವರು ತಮ್ಮ ಮಗನನ್ನೇ ಕಣಕ್ಕಿಳಿಸುವ ಪ್ರಯತ್ನದಲ್ಲಿದ್ದಾರೆ. ಈ ಯೋಜನೆಯನ್ನು ವಿರೋಧಿಸುವ ಜನಾರ್ದನ ಪೂಜಾರಿಯವರನ್ನು ಹೊರಗಿಡುವ ಯತ್ನದ ಭಾಗವಾಗಿ ಹರ್ಷ ಮೊಲಿಯೂ ಯೋಜನೆಯ ಪರವಾಗಿ ಭಾಷಣ ಬಿಗಿಯುತ್ತಿದ್ದಾರೆ. ಭಾಜಪದಿಂದ ನಳಿನ್ ಕುಮಾರ್ ಕಟೀಲ್ ಮತ್ತೆ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಆದರೆ ಇಲ್ಲಿನ ಜನತೆ, ಹೋರಾಟಗಾರು, ಯಾವ ನಾಯಕರೂ ಬಹಿರಂಗವಾಗಿ ನೇತ್ರಾವತಿ ಉಳಿಸುವ ಪರ ಮಾತಾಡದಿದ್ದರೆ ಚುನಾವಣೆ ಬಹಿಷ್ಕಾರದ ಬಗ್ಗೆ ಯೋಚಿಸುತ್ತಿದ್ದಾರೆ. ಹೋರಾಟಗಾರರು ಈ ಹಿನ್ನೆಲೆಯಲ್ಲಿ ಜನಾಭಿಯಾನಕ್ಕೂ ಅಣಿಯಾಗಿದ್ದಾರೆ. ನೇತ್ರಾವತಿಯನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಹೋರಾಟದ ಎಲ್ಲಾ ಯತ್ನಕ್ಕೂ ಬೆಂಬಲ ಬೇಕಾಗಿದೆ. ಮುಖ್ಯವಾಗಿ ಜನತೆ ಬೆಂಬಲಿಸಬೇಕಾಗಿದೆ, ಈ ಬಾಗದ ನಾಯಕರು ಸ್ವಾರ್ಥ ಬದಿಗಿಟ್ಟು ಹೋರಾಡವೇಕಾಗಿದೆ.

ಒಂದೇ ಒಂದು ಟಿಪ್ಪಣಿಯೊಂದಿಗೆ ಮುಗಿಸುತ್ತೇನೆ. ಮುಖ್ಯವಾಗಿ ನಮ್ಮ ಭಾಗದಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳಿದ್ದಾರೆ. ಧಾರ್ಮಿಕವಾಗಿ, ವ್ಯವಾಹಾರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ.....ಹೀಗೆ ಎಲ್ಲಾ ರಂಗಗಳಲ್ಲಿಯೂ ಬಹು ಪ್ರಭಾವಿಗಳಿದ್ದಾರೆ. ಮನಸ್ಸು ಮಾಡಿದರೆ ಈ ಸ್ವಾರ್ಥ ರಾಜಕಾರಣಿಗಳನ್ನು ನಿಲ್ಲಿಸಿ, ಈ ಯೋಜನೆಯನ್ನು ನಿಲ್ಲಿಸುವ ಮುಚ್ಚಳಿಕೆ ಬರೆಸಿಕೊಳ್ಳುವ ಶಕ್ತರೂ, ಪ್ರಭಾವಿಗಳೂ ಇಲ್ಲಿದ್ದಾರೆ. ಇಲ್ಲಿ ನೀರು ಕುಡಿದು, ಇಲ್ಲಿನ ಗಾಳಿಯನ್ನು ಉಸಿರಾಡಿ, ಇಲ್ಲಿಂದಲೇ ತಮ್ಮ ನೆಲೆ ಕಂಡುಕೊಂಡು ಇಂದು ಸಾಮಾಜಿಕ ಸ್ಥಾನ ಮಾನಗಳನ್ನು ಅನುಭವಿಸುತ್ತಿದ್ದಾರೆ. ಇವರೆಲ್ಲರಿಗೂ ಈ ಹೋರಾಟದಲ್ಲಿ ನೈತಿಕ ಬಲ ನೀಡಲು ಇರುವ ಅಡ್ಡಿ ಏನು ಎಂಬುದೇ ಪ್ರಶ್ನೆ. ಬಹುಶ: ನೇತ್ರಾವತಿ ಬರಡಾಗುವ ತನಕವೂ ಉತ್ತರಕ್ಕಾಗಿ ಕಾಯಬೇಕೇನೋ!!!.







Tuesday, 25 February 2014

ಗ್ರಹತಾಪಮಾನದ ಪರಿಣಾಮಗಳು...!

ಎಂದೋ ಬರೆದಿಟ್ಟಿದ್ದ ಗ್ರಹತಾಪಮಾನ ಎಂಬ ನಗೆ ಬರಹವನ್ನು ಇಲ್ಲಿ ನೀಡುತ್ತಿದ್ದೇನೆ...ನಿಮಗೂ ಈ ಅನುಭವ ಏನಾದರೂ..??

ಈ ಭೂತಾಪಮಾನದ ಬಗ್ಗೆ ಎಲ್ಲೆಡೆಯಲ್ಲೂ ಈಗ ಚರ್ಚೆ ನಡೆಯುತ್ತಿದೆ. ಪ್ರಪ೦ಚವೇ ಇದರ ಬಗ್ಗೆ ಚರ್ಚಿಸುತ್ತಿದ್ದರೂ ನನಗೆ ಮಾತ್ರ ಇದು ಅಷ್ಟೇನೂ ಗ೦ಭೀರ ವಿಷಯ ಅನಿಸುತ್ತಲೇ ಇಲ್ಲ!. ಅದೇಕೆ೦ದು ಹುಬ್ಬೇರಿಸಿದಿರಾ? ಏನಿಲ್ಲ, ಈ ಭೂತಾಪಮಾನ ನಮ್ಮಮನೆಯಲ್ಲಿ ದಿನನಿತ್ಯದ ವಿಷಯ. ಬೆಳಗ್ಗೆ ಘ೦ಟೆ ಆರು ಹೊಡೆಯಿತೆ೦ದರೆ, ನಮ್ಮನೆಯೊಳಗೆ ತಾಪಮಾನ ಏರಲಾರ೦ಭಿಸುತ್ತದೆ!. ಇದೇನು,ಬೆಳಗ್ಗ್ಗಿನ ಹೊತ್ತು ಎ೦ದು ಮತ್ತೆ ಹುಬ್ಬೇರಿಸಬೇಡಿ. ನಿಮ್ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಅಥವಾ ಕೆಲಸಕ್ಕೆ ಹೋಗುವ ಹೆ೦ಡತಿ ಇದ್ದರೆ(ಎರಡೂ ಇದ್ದರ೦ತೂ ಮುಗಿದೇ ಹೋಯ್ತು) ನಿಮಗೀ ತಾಪಮಾನದ ಅರ್ಥವಾಗಿರುತ್ತದೆ.

ಮನೆಯಲ್ಲಿ ಮಹಿಳೆಯರ ಕಷ್ಟದ ಬಗ್ಗೆ ಎರಡು ಮಾತಿಲ್ಲ. ಬೆಳಗ್ಗೆದ್ದು ಮನೆಯ ಎಲ್ಲರಿಗೂ ಬೆಡ್ ಟೀ ಯಿ೦ದ ಆರ೦ಭವಾಗುವ ಆಕೆಯ ದಿನಚರಿ, ಬೇಡವೆ೦ದರೂ ತಾಪಮಾನ ಏರಿಸುವುದರಲ್ಲಿ ತಪ್ಪಿಲ್ಲ ಬಿಡಿ. ಈ ತಾಪಮಾನಕ್ಕೆ ಗೃಹ ತಾಪಮಾನ ಎ೦ದೂ ಹೆಸರಿಸಬಹುದೇನೋ. ಅದಿರಲಿ ಬಿಡಿ, ಬೆಳಗ್ಗೆ ನಾನು ನನ್ನ ಮನೆಯಲ್ಲಿ ಈ ತಾಪಮಾನದ ಪರಿಣಾಮವಾಗಿ, ಹೆಚ್ಚಿನ ಸ೦ಧರ್ಭಗಳಲ್ಲಿ ಮೌನಕ್ಕೆ ಶರಣಾಗಿರುತ್ತೇನೆ. ಮನೆಯೊಳಗಣ ಪಾತ್ರೆ ಪಗಡಗಳು ತಾಪಮಾನದ ಪರಿಣಾಮವಾಗಿ ತಮ್ಮ ಶಕ್ತಿಪ್ರದರ್ಶನ ಮಾಡುತ್ತಿರುತ್ತವೆ. ಎಫ್‌ಎ೦ನಲ್ಲಿ ಬರುತ್ತಿರುವ ಸುಪ್ರಭಾತಕ್ಕೆ ಇವು ಪಕ್ಕವಾದ್ಯ ನುಡಿಸುವ೦ತೆ, ಆದರೆ ತಾಳ ಮೇಳವಿಲ್ಲದೆ 'ನುಡಿದಾಡುತ್ತಿರುತ್ತವೆ'!. 


ಬೆಳಗ್ಗಿನ ತ೦ಪು ಹವೆಯನ್ನೂ ಬಿಸಿ ಮಾಡಬಲ್ಲ ಶಕ್ತಿ ಈ ಗ್ರಹತಾಪಮಾನಕ್ಕಿರುತ್ತದೆ. ವಾಕಿ೦ಗ್ ಮುಗಿಸಿ ಮನೆಯೊಳಹೊಕ್ಕುವ ವೇಳಗೆ, ಇನ್ನೂ ಗ೦ಟೆ ಆರೂವರೆ ಆದರೂ ಏಳದ ಮಗಳ ಮೇಲೆ ಮೊದಲು ತನ್ನ ಬಿಸಿ ಮುಟ್ಟಿಸುವ ಈ ತಾಪಮಾನ, ಮನೆಯೊಳಗೆ ಕಾಲಿಡುತ್ತಲೇ ಸ್ವಭಾವತ: ಸೋಮಾರಿಯಾದ ನನ್ನ ಮೇಲೆ ತನ್ನ ಹಬೆಯಾಡಿಸಲಾರ೦ಭಿಸುತ್ತದೆ!. ಬೇಗ ಸ್ನಾನ ಮಾಡಿ, ದೇವರಿಗೆ ಪೂಜೆ ಮಾಡಿ, ಬೇಗ ತಿ೦ಡಿಗೆ ಬನ್ನಿ ಮಾರಾಯ್ರೇ, ಎಷ್ಟೂ೦ತ ಕರೀ ಬೇಕು...... ಎ೦ಬಿತ್ಯಾದಿ ಬಿಸಿ ಬಿಸಿ ಬಿಗುನುಡಿಗಳು, ಹೊರಗಿನ ವಾಕಿ೦ಗ್ ತಾಪಮಾನವನ್ನಾದರೂ ತಡೆಯಬಹುದು... ಈ ತಾಪಮಾನ ಯಾಕೋ ಅತಿಯಾಗುತ್ತಲ್ಲ ಅನಿಸುತ್ತದೆ! ಮೊದಲೇ ಹೇಳಿದೆನಲ್ಲ... ಮೌನ೦ ಶರಣ೦ ಗಚ್ಚಾಮಿ ಪಾಲಿಸಿಗೆ ನಾನು ಶರಣಾದರೆ ಬಚಾವ್! ಇಲ್ಲವಾದರೆ ಗ್ರಹತಾಪಮಾನದ ಪರಿಣಾಮ ಆಚೀಚೆ ಮನೆಗೆ ಮನೋರ೦ಜನೆ ಒದಗಿಸುವುದರಲ್ಲಿ ಸ೦ದೇಹವೇ ಇಲ್ಲ ಬಿಡಿ.
ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿರೂಪಾಯಿ ಎ೦ದೋ, ಮನೆಯೊಳಗಿರುವ ಹೆ೦ಡತಿ ಎದುರು ನಾನೂ ಒಬ್ಬ ಸಿಪಾಯಿ ಎ೦ದೋ ನಾನ೦ತೂ ಕವಿವಾಣಿ ಉದ್ಘರಿಸುವ ರಿಸ್ಕನ್ನು ಸುಪ್ರಭಾತದ ಗ್ರಹತಾಪಮಾನದ ವೇಳೆಗೆ ತೆಗೆದುಕೊಳ್ಳುವುದೇ ಇಲ್ಲ.  ಈ ಎರಡು ಏನಾದರೂ ಒಳ್ಳೆಯ ಮೂಡ್‌ನೊ೦ದಿಗೆ ಬರುವುದೇನಿದ್ದರೂ, ಹೊರಗಿನ ತಾಪಮಾನ ತನ್ನ ಕಾವೇರಿಸಕೊ೦ಡು, ಮನೆಯೊಳಗಿನ ಕಾವು ಕಡಿಮೆಯಾದ೦ತೆ ಮಾತ್ರ.! ಬೆಳಗ್ಗೆ ಒಮ್ಮೆ ಮಗಳು ಮನೆ ಬಿಟ್ಟು, ಗ್ರಹಲಕ್ಷ್ಮಿ ತನ್ನ ಕೆಲಸಕ್ಕೆ ಹೋಗಿ ಆದ ನ೦ತರ, ಟೆಲಿಫೋನ್‌ನಲ್ಲಿ ಅಥವಾ ಮುಖತಾ: ಸಿಕ್ಕಲ್ಲಿ, ನಿಜಕ್ಕೂ ಮನೆಯಾಕೆ ಎಷ್ಟು ಒಳ್ಳೆಯವಳು ಅನಿಸದಿರದು. ಬೆಳಗ್ಗೆ ನಡೆದದ್ದೆಲ್ಲ ಕೇವಲ ಗ್ರಹ ತಾಪಮಾನದ ಪರಿಣಾಮ ಎನಿಸತೊಡಗುವುದು ಆಗಲೇ!

ಹೆ೦ಡತಿಯ ಬಗ್ಗೆ  ಕವಿ ಏನಾದರೂ ಪ್ರೀತಿಯ ಕವನಗಳನ್ನು ಬರೆದಿದ್ದರೆ ಬೆಳಗ್ಗಿನ ಗ್ರಹತಾಪಮಾನದ ಅವಧಿಯಲ್ಲಲ್ಲವೇ ಅಲ್ಲ ಎ೦ಬುದು ನನ್ನ ಖಚಿತ ನಿರ್ಧಾರ. ಕವಿ ಏನಾದರು ಕೆಲಸಕ್ಕೆ ಹೋಗುವ ಹೆ೦ಡತಿ ಅಥವಾ ಶಾಲೆಗೆ ಹೋಗುವ ಮಕ್ಕಳನಡುವೆ ಈ ಸಾಹಸ ಮಾಡಿರುವ ಸಾಧ್ಯತೆ ಇಲ್ಲವೇ ಇಲ್ಲ. ಏಕೆ೦ದರೆ ಆ ಸಮಯದಲ್ಲಿನ ತಾಪಮಾನ ಖ೦ಡಿತಕ್ಕೂ ಕವಿಮನಸ್ಸು ಅರಳುವಲ್ಲಿ ಸಹಾಯವನ್ನೇ ಮಾಡದು!  ಹಾಗೆ೦ದು ಈ ತಾಪಮಾನದಿ೦ದ ಸ೦ಸಾರವೇನೂ ದಿಕ್ಕೆಟ್ಟು ಹೋಗುವುದಿಲ್ಲ ಬಿಡಿ. ಹಾಗೇನಾದರೂ ಅ೦ದುಕೊ೦ಡು, ಇ೦ತಹ ಸ೦ಸಾರದ ಜಾಡು ಹಿಡಿದು ಸ೦ಜೆಯ ವೇಳೆಗೆ ನೀವು ಅತ್ತ ಗಮನಿಸಿದಿರೋ, ಅಲ್ಲಿ ನಿಮಗೆ ಅಚ್ಚರಿ ಕಟ್ಟಿಟ್ಟ ಬುತ್ತಿ. ಅಲ್ಲಿ ಆಗ ನಮ್ಮ ಸ೦ಸಾರ ಆನ೦ದ ಸಾಗರ ಎ೦ಬ ಯುಗಳ ಗೀತೆ ಗುನುಗಾಟ ನಡೆದಿರುತ್ತದೆ!!. ಅ೦ದರೆ ಮನೆಯೊಳಗಣ ಗ್ರಹತಾಪಮಾನದ ಆಯುಷ್ಯ ಕೇವಲ ಒ೦ದೆರಡು ಘ೦ಟೆಗಳದ್ದು ಮಾತ್ರ!. ಎಲ್ಲಾ ಅವರವರ ಕೆಲಸಕ್ಕೆ ಹೋದ ನ೦ತರ ಎಲ್ಲವೂ ಕೂಲ್ ಕೂಲ್... ತ೦ಡಾ ತ೦ಡಾ...! ಅದಕ್ಕೇ ಅಲ್ಲವೇ ತಿಳಿದವರು ಹೇಳುವುದು, ಸ೦ಸಾರದಲ್ಲಿ ಸರಸ ಎ೦ದು!!. 

ಒಳಗಡೆ ಪಾತ್ರೆ ಎನೋ ಧಡಕ್ಕೆ೦ದು ಬಿದ್ದ ಶಬ್ದ ಕೇಳುತ್ತಿದೆ. ಇಷ್ಟು ಬರೆದದ್ದು ಯಾವ ಸಮಯದಲ್ಲಿ ಎ೦ದು ಕೇಳಲೇ ಬೇಡಿ. ಉತ್ತರ ಸಿಕ್ಕಿತು ಎ೦ದುಕೊ೦ಡಿದ್ದೇನೆ. ದಯವಿಟ್ಟು ನಿಮ್ಮನೆಯ ಗೃಹತಾಪಮಾನವನ್ನು ಕಡಿಮೆ ಮಾಡಿಕೊಳ್ಳಲು ಬೆಳಗ್ಗೆ ಸ್ವಲ್ಪ ಅಡುಗೆ ಮನೆ ಕಡೆ ಮುಖ ಮಾಡಿ. ನಿಮ್ಮ ಸ೦ಸಾರ ಆನ೦ದಸಾಗರವಾಗಲಿ!!


Monday, 24 February 2014

ಸಮಾಧಾನ


ಯಾವುದೋ ಒಂದು ಹಂತದಲ್ಲಿ ಟಿಸಿಲೊಡೆದ ಈ ಸಾಲುಗಳು..... ಹೇಗನಿಸಿತು..???


ಬತ್ತಿ ಹೋಗಿದೆಯೇ ಕಣ್ಣೀರು?
ಬಾ ನನ್ನ ಬಳಿಗೆ, ಕೊಡುವೆ ಒಂದಿಷ್ಟು ಕಡ
ಉದುರಿಸಿ ಬಿಡು ಒಮ್ಮೆ ಆನಂದದಿಂದ!

ಜಗದ ಚಿಂತೆ ಬಿಡು, ವ್ಯಂಗ್ಯವೇ ಅದರ ಬಗೆ                                    
ಇರದಿದ್ದರೆ ಹೇಗೆ ಒಬ್ಬನಾದರೂ ಹಗೆ?
ನಿನ್ನ ನೀನರಿಯುವ ಬಗೆ ಎಂತು ಮತ್ತೆ?




ಸಂಭ್ರಮಕೆ ಮುಖ ತೂರುವ ಮಂದಿ ನೂರೆಂಟು
ಸಂಗ್ರಾಮಕೆ ಹಾತೊರೆಯುವ ಜಗಳಗಂಟರೇ ಎಲ್ಲ
ಆದರೂ ಹರಿಸಿ ಬಿಡು ಆನಂದ ಬಾಷ್ಪ|

ಎಂದಾದರೊಂದು ದಿನ ಏಕಾಂಗಿ ಅನಿಸಿದರೆ
ನೋಡಿ ಬಿಡು ಕಡಲಲೆಯ ಶ್ರೀಮಂತಿಕೆಯ
ಅದು ನಿನ್ನ ಹಾಗೆಯೇ ಏಕಾಂಗಿ ತಾನೇ!!!

ಬಯಸಿದ್ದೆಲ್ಲಾ ಬರದ ಈ ಬದುಕ ಬಗೆಗೇಕೆ
ತಾತ್ಸಾರ ನಿನ್ನ ಮನದೊಳಗೆ ಗೆಳತೀ
ಅತ್ತು ಹಗುರಾಗಿ ಬಿಡು ನೀನೇ ನಿನ್ನೊಡತಿ!!








Saturday, 22 February 2014

ಆಮ್ ಆದ್ಮಿ ಮತ್ತು ರಾಜಕಾರಣ......

ಜನಪ್ರತಿನಿಧಿಯ ಪ್ರದಕ್ಷಿಣೆಯ  ಈ ವಾರದ ಬರಹ.... 


ದೆಹಲಿಯಲ್ಲಿ ಆಮ್ ಆದ್ಮಿ ಸರಕಾರ ರಚಿಸಿದಾಗ ಇದೇ ಅಂಕಣದಲ್ಲಿ ಬರೆಯುತ್ತಾ, ಅರವಿಂದ ಕೇಜ್ರಿವಾಲ್ ಪಕ್ಕಾ ರಾಜಕಾರಣಿಯಾಗದಿದ್ದರೆ ಸಾಕು ಎಂದು ಹೇಳಿದ್ದೆ. ಆದರೆ ರಾಜಕಾರಣಿಯಾಗದಿದ್ದರೆ ಇಂದಿನ ರಾಜಕೀಯದಲ್ಲಿ ಆಡಳಿತ ನಡೆಸಲಂತೂ ಆಗದು ಎಂಬುದು ಸಾಬೀತಾಗಿದೆ. ಕೇಜ್ರಿವಾಲ್ ರಾಜೀನಾಮೆ ನೀಡಿದ್ದಾರೆ.

ಬಹುಶ: ಜನ ಸಾಮಾನ್ಯನೊಂದಿಗೆ ತಮ್ಮದು ಅಲ್ಪಾಯುಷಿ ಸರಕಾರ ಎಂಬುದು ಕೇಜ್ರಿವಾಲ್‌ರಿಗೂ ತಿಳಿದಿತ್ತು. ಆಮ್ ಆದ್ಮಿ ಏನೋ ಅವರ ಮಾತುಕೇಳಿ, ಭರವಸೆಗಳಿಗೆ ತನ್ನ ಒಪ್ಪಿಗೆ ಮುದ್ರೆ ನೀಡಿ, ಕೇಜ್ರಿವಾಲ್‌ಗೆ ಅಧಿಕಾರ ನೀಡಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಮತ್ತು ಹಿಂದಿನ ಅಧಿಕಾರಶಾಹಿಗಳು  ಮಾಡಿದ ಪ್ರಮಾದದಿಂದ, ಕೇಜ್ರಿವಾಲ್ ಭರವಸೆಗಳನ್ನು ಈಡೇರಿಸುವುದು ಅಸಾಧ್ಯ ಎಂಬುದು ಎಲ್ಲರಿಗೂ ತಿಳಿದಿತ್ತು. ಮುಂದಿರುವ ಬೇಸಿಗೆಯಲ್ಲಿ ನೀರಿನ ಬವಣೆ, ವಿದ್ಯುತ್ ಅಭಾವದ ಭಿಕರತೆಯನ್ನು ಸಂಪೂರ್ಣ ಅರಿತುಕೊಂಡಿದ್ದ ಕೇಜ್ರಿವಾಲ್‌ಗೆ ತನ್ನ ಮಾತೇ ತನಗೆ ತಿರುಗುಬಾಣವಾಗುವ ಬಗ್ಗೆ ತಿಳಿದಿತ್ತು ಎನ್ನಲಾಗುತ್ತಿದೆ. ಪರಿಣಾಮವಾಗಿ ರಾಜೀನಾಮೆ ನೀಡಲು, ಲೋಕಪಾಲ್ ವಿವಾದವನ್ನು ಎತ್ತಿಕೊಂಡು, ಆಡಳಿತದಿಂದ ಎದ್ದು ಹೊರ ಬಂದಿದ್ದಾರೆ.
ಬಹುಶ: ಆಮ್ ಆದ್ಮಿಯ ಹುಟ್ಟಿನಿಂದಲೇ ಈ ರೀತಿಯ ಜಿಜ್ಞಾಸೆ  ನಡೆಯುತ್ತಿತ್ತು. ಅದೆಷ್ಟೋ ರಾಜಕೀಯ ವಿಶ್ಲೇಷಕರಿಂದ ಹಿಡಿದು, ರಾಜಕಾರಣಿಗಳಿಂದ ತೊಡಗಿ, ಜನ ಸಾಮಾನ್ಯನ ತನಕವೂ, ರಾಜಕಾರಣ ನಡೆಲಸು ರಾಜಕಾರಣಿಗಳು ಮಾತ್ರವೇ ಲಾಯಕ್ಕು ಎಂಬ ಮಾತುಗಳು ಆಮ್ ಆದ್ಮಿಯ ವಿಷಯದಲ್ಲಿ ಕೇಳಿ ಬಂದಿದ್ದುವು. ಇದನ್ನು ಬಹುಶ: ಪರೋಕ್ಷವಾಗಿ ಅಣ್ಣಾ ಹಜಾರೆಯವರೂ ಒಪ್ಪಿಕೊಂಡಿದ್ದರೆಂದು ಕಾಣುತ್ತದೆ. ಇದೇ ವಿಚಾರವಾದ ಭಿನ್ನಮತದಿಂದ ಅಣ್ಣಾ ಅಂಗಣದಿಂದ ಕೇಜ್ರಿವಾಲ್ ಎದ್ದು ಹೋಗಿದ್ದು ಎಲ್ಲರಿಗೂ ತಿಳಿದಿದೆ. ಇದು ಒಂದು ರೀತಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ-ಬೋಸ್ ಸಂಬಂಧದಂತೆ ಭಾಸವಾಗುತ್ತದೆ. ಅಲ್ಲಿಗೂ ಇಲ್ಲಿಗೂ ಇರುವ ವ್ಯತ್ಯಾಸವೆಂದರೆ, ಅಂದು ಅದು ಹೋರಾಟದ ಒಂದೇ ಮಜಲಾಗಿದ್ದರೆ, ಇಂದು ಅದು ಹೋರಾಟ ಮತ್ತು ಅಧಿಕಾರದ ಎರಡು ಮಜಲುಗಳು ಅಷ್ಟೆ.

ಏನೇ ಇರಲಿ, ಇಂದು ಅಧಿಕಾರ ತ್ಯಜಿಸಿದ ಆಮ್ ಆದ್ಮಿ ಲೋಕ ಸಭಾ ಚುನಾವಣೆಯ ಮಾತಾಡುತ್ತಿದೆ. ಅಲ್ಲಿಗೂ ಅದು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿದೆ. ಆದರೆ ನಿಜಾರ್ಥದ ಆಮ್ ಆದ್ಮಿ ಇಂದು ಈ ನಾಯಕರ ಮೇಲೆ ಎಷ್ಟು ವಿಶ್ವಾಸ ಇರಿಸ ಬಲ್ಲ ಎಂಬುದು ಇಂದಿನ ಪ್ರಶ್ನೆ. 

ಇನ್ನು  ಲೋಕ ಸಭಾ ಚುನಾವಣೆಯ ಮಾತು. ಮೋದಿ-ರಾಹುಲ್ ನಡುವಿನ ಹಣಾ ಹಣಿ ಎಂದುಕೊಂಡು ಆರಂಭವಾದ ಮಾತು. ಒಮ್ಮೆ ಆಮ್ ಆದ್ಮಿಯತ್ತ ಹೊರಳಿ, ಮತ್ತೆ ಇದು ಮೋದಿ-ಹಣಾಹಣಿಯತ್ತ ಹೊರಳಿದೆಯೇ? ಇಂದಿನ ಆಮ್ ಆದ್ಮಿಯ ನಡೆಯ  ನಂತರ, ಆಮ್ ಆದ್ಮಿಯ ಜಾಗವೇನಿದ್ದರೂ ಹೋರಾಟದ ವೇದಿಕೆಯೇ ಹೊರತು ಅಧಿಕಾರ ಸೂತ್ರ ಅಲ್ಲ ಎಂಬುದನ್ನು ಜನತೆ ಗಮನಿಸಿದ್ದಾರೆ. ಈ ಲೇಖನದ ತಯಾರಿಯ ಹಿನ್ನೆಲೆಯಲ್ಲಿ, ಆಮ್ ಆದ್ಮಿಯ ಬಗ್ಗೆ ವಿಪರೀತ ವಿಶ್ವಾಸ ಇರಿಸಿಕೊಂಡಿದ್ದ ಹಲವರನ್ನು ದೂರವಾಣಿಯ ಮೂಲಕ ವಿಚಾರಿಸಿದೆ...ಇಂದು ಆಮ್ ಆದ್ಮಿಯ ಬಗ್ಗೆ, ಲೋಕ ಸಭಾ ಚುನಾವಣೆಯ ಬಗ್ಗೆ ಏನು ಹೇಳುತ್ತೀರಿ ಎಂಬುದಾಗಿ. ಸ್ಪಷ್ಟ ಉತ್ತರ ನೀಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಮೇಲಾಗಿ ಲೋಕ ಸಭೆಯ ವಿಚಾರದಲ್ಲಿ ಯಾವ ಆಮ್ ಆದ್ಮಿಯ ಸದಸ್ಯನಿಗೂ ಗಟ್ಟಿ ಸ್ವರ ಇರಲಿಲ್ಲ.

ಇನ್ನು ದೆಹಲಿಯಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದಾಗ ವಿಶ್ಲೇಷಿಸಲ್ಪಟ್ಟ ಬಹು ಮುಖ್ಯ ವಿಚಾರಗಳಲ್ಲಿ ಆಮ್ ಆದ್ಮಿ ಈ ರೀತಿ ಜನ ಮಾನಸವನ್ನು ತನ್ನತ್ತ ಹೇಗೆ ಸೆಳೆಯಿತು ಎಂಬುದು. ಮುಖ್ಯವಾಗಿ ಅಲ್ಲಿ ಆಗಿದ್ದು ಎಂದರೆ ಶೀಲಾ ದೀಕ್ಷಿತ್ ಆಳ್ವಿಕೆ ಜನತೆಗೆ ಸಾಕಾಗಿತ್ತು. ಪರ್ಯಾಯವಾಗಿ ಜನತೆ ಭಾಜಪದತ್ತ ಮುಖ ಮಾಡಿ ಕುಳಿತಿದ್ದರು. ಬ್ರಷ್ಟಾಚಾರ ವಿರೋಧಿ ಆಂದೋಳನದ ಮೂಲಕ, ಅಂದು ಜನ ಮನ ಗೆದ್ದಿದ್ದ ಅಣ್ಣಾ ನೇತ್ರತ್ವದಲ್ಲಿ ಪಳಗಿದ ನಾಯಕ ಕೇಜ್ರಿವಾಲ್ ಎಂದು ಜನ ಭಾವಿಸಿಕೊಂಡು, ಈ ಯುವಕ ಏನಾದರೂ ಸಾಧಿಸಬಹುದು ಎಂದು ತುಸು ಭಾಜಪದಿಂದ ವಿಮುಖರಾದರು. ಮತ್ತು ಕೇಜ್ರಿವಾಲ್ ಭರವಸೆಗಳೂ ಹಾಗೇ ಇದ್ದುವು. ಅವುಗಳು ಆಮ್ ಆದ್ಮಿಗೆ ತೀರಾ ಆಪ್ಯಾಯ ವೆನ್ನಿಸುವಂತಿದ್ದುವು ಮತ್ತು ಇಂದಿನ ಜೀವನ ಶೈಲಿಯಲ್ಲಿ, ಎಲ್ಲರನ್ನೂ ಹೈರಾಣಾಗಿಸಿದ ಅಂಶಗಳಲ್ಲಿಯೇ ಸುಧಾರಣೆ ತರುವ ಮಾತುಗಳನ್ನು ಜನ ನಂಬಿದರು. ಇಲ್ಲಿ ಆ ನಂಬುಗೆ ಹೇಗೆ ಬಂದಿತು ಎಂದರೆ, ಅಣ್ಣಾ ಹಜಾರೆಯಂತಹ ಹೋರಾಟಗಾರನನ್ನು ಜನ ಆಧುನಿಕ ಗಾಂಧಯಂತೆ ಕಂಡು ಆದರಿಸಿದ್ದರು. ಅವರ ಗರಡಿಯ ಕೇಜ್ರಿವಾಲ್, ಅವರದ್ದೇ ಉದ್ದೇಶದ ಮತ್ತೊಂದು ಮಗ್ಗುಲು ಎಂಬುದನ್ನು ಜನ ಭಾವಿಸಿದರು. ಅಂತೆಯೇ ಜನರ ಒಲವು ಸಹಜವಾಗಿಯೇ,  ಆಮ್ ಆದ್ಮಿಯತ್ತ ತಿರುಗಿತು. ಫಲಿತಾಂಶ ಎದುರಿಗಿದೆ. ಇದೆಲ್ಲಕ್ಕೂ ಪೂರಕ ಎಂಬಂತೆ, ಆಮ್ ಆದ್ಮಿಯ  ಹೋರಾಟದ ಪ್ರಮುಖ ಕಾರ್ಯ ಕ್ಷೇತ್ರವಾಗಿದ್ದು ದೆಹಲಿ. ಆ ಹಿನ್ನೆಲೆಯಲ್ಲ  ದೆಹಲಿಯಲ್ಲೇ ನಡೆದ ಚುನಾವಣೆಯಲ್ಲಿ ಪರಿಸ್ಥಿತಿ ಆಮ್ ಆದ್ಮಿಗೆ ಅನುಕೂಲವಾಗಿ ಬಂದಿದ್ದೇ ಹೊರತು, ಅದನ್ನೇ ದೇಶದ ಬದಲಾವಣೆಯ ದಿಕ್ಸೂಚಿ ಎಂದು ಪರಿಗಣಿಸಲಾಗದು.

ಇನ್ನು ಮಹಾ ಮೇಧಾವಿಗಳು ಪಕ್ಷಕ್ಕೆ ಬಂದರು ಎಂಬುದನ್ನು ಪಕ್ಷ ಬಿಂಬಿಸುತ್ತಲೇ ಇರುತ್ತದೆ. ಆದರೆ ಇದೂ ಎಷ್ಟರ ಮಟ್ಟಿಗೆ ರಾಜಕಾರಣದಲ್ಲಿ ಸಹಾಯವಾಗುತ್ತದೆ ಎಂಬುದಕ್ಕೆ ಇತಿಹಾಸದ ಘಟನೆಗಳು ಉತ್ತರಿಸುತ್ತವೆ. ಕ್ಯಾಪ್ಟನ್ ಗೋಪೀನಾಥ್ ಏನು ಎಂಬುದು ಎಲ್ಲರಿಗೂ ಗೊತ್ತು, ಅವರ ಜನ ಪ್ರಿಯತೆ ಬಗ್ಗೆ ಎಲ್ಲೂ ಎರಡು ಮಾತಿರಲಿಲ್ಲ. ಹೋಗಲಿ, ಡಾ.ಶಿವರಾಮ ಕಾರಂತರ ಜನ ಪ್ರಿಯತೆ ಕಡಿಮೆ ಇತ್ತೇ? ಆಗಷ್ಟೇ ಕಣ್ತೆರೆದಿದ್ದ ವಿಜಯ ಸಂಕೇಶ್ವರರ ಪಕ್ಷದಿಂದ ದ್ವಾರಕೀಶ್ ಸೇರಿದಂತೆ ಅನೇಕ ಬುದ್ದಿ ಜೀವಿಗಳು ಸ್ಪರ್ಧಿಸಿದ್ದರು. ಈ ಎಲ್ಲರೂ ಒಂದು ತತ್ವದಡಿ ಸ್ಪರ್ಧಿಸಿದ್ದರೂ ಅವರೆಲ್ಲರೂ ಸೋತಿದ್ದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದು. ಇಲ್ಲೆಲ್ಲೆಡೆಯಲ್ಲಿಯೂ ರಾಜಕಾರಣಿ ಗೆದ್ದಿದ್ದಾನೆ. ಕೇವಲ ತತ್ವ ಸಿದ್ದಾಂತಗಳೋ, ಆದರ್ಶಗಳೋ ಗೆದ್ದಿಲ್ಲ. ಹೀಗೆ ರಾಜಕಾರಣದಲ್ಲಿ ತನ್ನದೇ ಆದ ಚಾಕ ಚಕ್ಯ ನಡೆ ಇರಬೇಕು.ಆಗಷ್ಟೇ ಆ ಗೆಲುವು, ಆಡಳಿತಾತ್ಮಕವಾಗಿ ಉಪಯೋಗಕ್ಕೆ ಬರುತ್ತದೆ. ಇಲ್ಲವಾದರೆ, ಇಂದು ಆಮ್ ಆದ್ಮಿಯ ಗೆಲುವಿನ ಹಾಗೆ, ಗೆಲುವೂ ಅಲ್ಪಾಯುಷಿಯಾಗುತ್ತದೆ!!.

ಇಂದಿನ ಈ ಎಲ್ಲಾ ಬೆಳವಣಿಗೆಗಳನ್ನು ಬಾಜಪದ ಮಟ್ಟಿಗೆ ದಾರಿ ಸರಳವಾಯಿತು ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗಾದರೆ ಕಾಂಗ್ರೆಸ್ ಮಟ್ಟಿಗೆ? ಉತ್ತರ  ಅಸ್ಪಷ್ಟ. ಯಾಕೆಂದರೆ, ಆಮ್ ಆದ್ಮಿಗೆ ದೆಹಲಿಯಲ್ಲಿ ಸಿಕ್ಕ ಬೆಂಬಲದ ಆಧಾರದಲ್ಲಿ ವಿಶ್ಲೇಷಿಸಿದರೆ, ಅದು ಅಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಎಂಬುದು ಸ್ಪಷ್ಟ. ಅದರರ್ಥ ಜನತೆ ಕಾಂಗ್ರೆಸ್ ಬದಲು, ಭಾಜಪ ಅಥವಾ ಆಮ್ ಆದ್ಮಿಯನ್ನು ಬೆಂಬಲಿಸಿದರು ಎಂಬುದು ಮೇಲ್ನೋಟಕ್ಕೆ ತಿಳಿದು ಬರುವ ಅಂಶ. ಅದನ್ನೇ ಇಡೀ ದೇಶದ ಚುನಾವಣೆಯ ಒಂದು ಮುಖ ಎಂದು ಕೊಳ್ಳಲಾಗದು ಎಂದಾದರೂ, ದೆಹಲಿಯಲ್ಲಿ ಕಾಂಗ್ರೆಸ್ ನೇತ್ರತ್ವದ ಯುಪಿಎ ಮಾಡಿದ ಹಗರಣಗಳು, ರಾಹುಲ್ ಗಾಂಧಿಯ ತೀರಾ ಬಾಲಿಷ ಹೇಳಿಕೆಗಳು, ಅದೇ ಹಳೆಯ ಹೈಕಮಾಂಡ್ ರಾಜಕೀಯಕ್ಕೆ ಒಗ್ಗಿ ಹೋಗಿರುವ ಹಿರಿಯ ನಾಯಕರು.....ನಿಜ, ಜನತೆ ಬೇಸತ್ತಿದ್ದಾರೆ. ಹಾಗೆಂದು ಅವರು ಬದಲಾವಣೆ ಬಯಸಿದ್ದಾರೆ-ಎರಡು ಮಾತಿಲ್ಲ. 

ನಂತರದ ಆಯ್ಕೆ ಯಾವುದು? ಒಂದೋ ಭಾಜಪ, ಅಥವಾ ಬದಲಾವಣೆಯ 'ಭ್ರಮೆ' ಹೆಚ್ಚಿಸಿದ ಆಮ್ ಆದ್ಮಿ. ಅದಿಲ್ಲವಾದರೆ ತೃತೀಯ ರಂಗ??. ತೃತೀಯ ರಂಗದ್ದೇ ಮತ್ತೊಂದು ದುರಂತ ನಾಯಕತ್ವ. ಇದರ ಪ್ರತೀ ಹುಟ್ಟು ಚುನಾವಣೆಯ ಸಮೀಪ ಮತ್ತು ಸಾವು ಚುನಾವಣೆಯ ನಂತರ. ಹಾಗಾಗಿ ಇದರ ಮೇಲೆ ಯಾರಿಗೂ ಆ ಪರಿಯ ವಿಶ್ವಾಸ ಖಂಡಿತಕ್ಕೂ ಇಲ್ಲ. ಆದರೆ ಸ್ಥಳೀಯ ನಾಯಕರ ಯತ್ನದಿಂದ ತೃತೀಯ ರಂಗ, ಒಳ್ಳೆಯದು ಮಾಡಲಾಗದಿದ್ದರೂ, ಕೆಟ್ಟದು ಮಾಡುವಷ್ಟು ಶಕ್ತವಾಗುವ ಸಾಧ್ಯತೆಯನ್ನು ತೆಗೆದು ಹಾಕುವಂತಿಲ್ಲ. ಇದು ಜನ ಸಾಮಾನ್ಯನಿಗೂ ಗೊತ್ತಿರುವ ಕಾರಣದಿಂದಲೇ, ತೃತೀಯ ರಂಗದ ಮೇಲೆ ಅಷ್ಟೇನೂ ಭರವೆಗಳು ಉಳಿದಿಲ್ಲ.

ಈ ಎಲ್ಲಾ ಸಾಧ್ಯತೆಗಳನ್ನು ಕೂಲಂಕುಷವಾಗಿ ವಿಶ್ಲೇಷಿಸಿದರೆ, ಮೋದಿಯ ನಡೆಗೆ ಇದ್ದ ಅಡೆ ತಡೆಗಳು ನಿವಾರಣೆಯಾದುವು ಎನ್ನ ಬಹುದು. ಆದರೆ ಜನ ಮಾತ್ರ ಯಾವತ್ತೂ ನಿರೀಕ್ಷೆಗಳನ್ನು ಬುಡಮೇಲು ಮಾಡಿದ ಅನೇಕ ಉದಾಹರಣೆಗಳು, ಈ ಚುನಾವಣೆಗಳ ವಿಷಯದಲ್ಲಿ ಆಗಿ ಹೋಗಿವೆ. ಇಲ್ಲೂ ಅದನ್ನೇ ನಾವು ಅನಿರೀಕ್ಷಿತ ಎನ್ನುವಂತಿಲ್ಲ!. ಒಟ್ಟಾರೆಯಾಗಿ ಲೋಕ ಸಭಾ ಚುನಾವಣೆಯ ಕಾವು ಏರುತ್ತಿರುವ ಈ ಹೊತ್ತಿನಲ್ಲಿ, ಕಾವನ್ನು ಇಳಿಸಿಕೊಂಡು ಆಮ್ ಆದ್ಮಿ ಒದ್ದಾಡುತ್ತಿದೆ ಎಂದೇ ವಿಶ್ಲೇಷಿಸಬಹುದು. ಇದನ್ನು ಸ್ಥಳೀಯ ಆಮ್ ಆದ್ಮಿಗಳೂ ಒಪ್ಪುತ್ತಿದ್ದಾರೆ.

ಈ ಎಲ್ಲದರ ಜಪತೆಗೆ ಸ್ಥಳೀಯವಾಗಿ ಒಮ್ಮೆ ಗಮನಿಸಿದರೆ....ಮೊನ್ನೆ ಜನವರಿ ೨೬ರಂದು ಬೆಳಿಗ್ಗೆ ನಾವು ಲಯನ್ಸ್ ಕ್ಲಬ್‌ನ ಸದಸ್ಯರು, ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಗಣ ರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣಕ್ಕೆ ಅಣಿಯಾಗುತ್ತಿದ್ದೆವು. ಆಗ ಅಲ್ಲಿಯೇ ಸಮೀಪದ ಸರ್ಕಿಟ್ ಹೌಸ್ ನಲ್ಲಿ ತಂಗಿದ್ದ ಯಡ್ಯೂರಪ್ಪನವರು ವಾಕಿಂಗ್  ಹೊರಟಿದ್ದರು. ಅದನ್ನು ಗಮನಿಸಿದ ನಮ್ಮಲ್ಲಿ ಕೆಲವರು, ಅವರನ್ನು ರಾಷ್ಟ್ರ ದ್ವಜಾರೋಹಣಕ್ಕೆ ವಿನಂತಿಸಿಕೊಂಡಾಗ ಮರು ಮಾತಿಲ್ಲದೇ ಬಂದು ಧ್ವಜಾರೋಹಣ ಮಾಡಿದರು. ನಂತರ ಮಾತಾಡುತ್ತಾ, ಜನತೆಯನ್ನುದ್ದೇಶಿಸಿ, ಇಂದು ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ಅನುಭವಿಸಿದ್ದ ಅನಿಶ್ಚಿತತೆಗೆ ಮತ್ತೆ ಮರಳಿದೆ. ಜಾಗೃತ ಮತದಾರ, ಆಲೋಚಿಸಿ, ಯೋಗ್ಯ ಅಭ್ಯರ್ಥಿಗೆ ಮತ ನೀಡಿ, ದೇಶವನ್ನುಳಿಸಬೇಕೆಂದು ಹೇಳಿದರು. ಸಹಜವಾಗಿಯೇ ಚಪ್ಪಾಳೆ ಬಿತ್ತು

ಅಲ್ಲಿಂದ ಹೊರ ಬಂದವರನ್ನು ಓರ್ವ ಪತ್ರಕರ್ತ ಕೇಳಿದರು, ತಾವು ಈ ಸಲ ಲೋಕ ಸಭೆಗೆ ಸ್ಪಧಿಸುತ್ತೀರಾ ಎಂದು. ಅಂದು ಇದೇ ಭಾಷಣದ ಭರಾಟೆಯಲ್ಲಿ ಯಡ್ಯೂರಪ್ಪ, ಖಂಡಿತಕ್ಕೂ ಇಲ್ಲ, ನಾನಾಗಲೀ ನನಗನ ಮಗನಾಗಲೀ ಸ್ಪರ್ಧಿಸುವುದೇ ಇಲ್ಲ. ಅಂತಹ ಯಾವುದೇ ಇರಾದೆ, ಮಾತುಕತೆ, ಶರತ್ತು ನನ್ನ ಭಾಜಪದ ಮರು ಪ್ರವೇಶದಲ್ಲಿರಲಿಲ್ಲ ಎಂದರು, ಸುತ್ತಲೂ ವಾಕಿಂಗ್‌ಗೆಂದು ಬಂದ ಜನತೆ ಮತ್ತೆ ಕರತಾಡನ ಮಾಡಿದರು.

ಇಂದು ಬೆಳವಣಿಗೆ ತಮಗೆ ಗೊತ್ತಾಗಿದೆ. ಯಡ್ಯೂರಪ್ಪ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನು ರಾಜಕಾರಣ ಎನ್ನುತ್ತಾರೆ. ಅವರ ಮೇಲಿನ ಎರಡೂ ಮಾತುಗಳನ್ನು ನಾವೂ ಕೇಳಿದ್ದೇವೆ.....ನಾವು ಒಪ್ಪಿಕೊಂಡಿದ್ದೇವೆ(!?). ಎಲ್ಲರಿಗೂ ಒಳಿತಾಗಲಿ.

Thursday, 13 February 2014

ಪತ್ರಿಕೆ ಮತ್ತು ಪತ್ರಿಕಾ ಧರ್ಮ..

ಜನ ಪ್ರತಿನಿಧಿಯ 'ಪ್ರದಕ್ಷಿಣೆ'ಯ ಈ ವಾರದ ನನ್ನ ಅಂಕಣ ಬರಹ...

ಮೊನ್ನೆ ತುಳು ರಂಗಭೂಮಿ ಕಲಾವಿದ ಭಾಸ್ಕರ ನೆಲ್ಲಿತೀರ್ಥ ಎಂಬ ಸ್ನೇಹಿತ ಅನಾರೋಗ್ಯದಿಂದ ನಿಧನರಾದರು. ಈ ವಾರ್ತೆ ಅವರ ಅಭಿಮಾನಿಗಳ ಪಾಲಿಗೆ, ಸ್ನೇಹಿತ ವರ್ಗಕ್ಕೆ ನಿಜಕ್ಕೂ ದು:ಖದ ವಿಷಯ ಮತ್ತು ತುಳು ರಂಗಭೂಮಿಯ ಮಟ್ಟಿಗೆ ಬಹು ದೊಡ್ಡ ನಷ್ಟ. ಇದನ್ನು ಎಲ್ಲರೂ ಒಪ್ಪಬೇಕಾದ ಮಾತು.

ದುರಂತವೆಂದರೆ ಇಂತಹ ಮೇರು ಕಲಾವಿದನ ನಿಧನ ಪತ್ರಿಕೆಗಳವರಿಗೆ ಸುದ್ದಿ ಎನಿಸಲೇ ಇಲ್ಲ. ಯಾವ ಪತ್ರಿಕೆಯೂ ಈ ಕಲಾವಿದನ ಸೇವೆಯನ್ನು, ಸಾಧನೆಯನ್ನು ಕನಿಷ್ಟ ನೆನಪೂ ಮಾಡಿಕೊಳ್ಳದೇ, ನಿಧನ ವಾರ್ತೆಯ ಕಾಲಂನಲ್ಲಿ ಬೇಕೋ ಬೇಡವೋ ಎಂಬಂತೆ ಪ್ರಕಟಿಸಿ ಸುಮ್ಮನಾಗಿಬಿಟ್ಟುವು. ಮರುದಿನ ಈ ಕಲಾವಿದನಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅವರ ಸ್ನೇಹಿತು ಇಟ್ಟುಕೊಂಡಿದ್ದರು. ಅದರ ಬಗ್ಗೆಯೂ ಯಾವ ಪತ್ರಿಕೆಯೂ ಕಿರು ವರದಿಯನ್ನೂ  ಮಾಡಲಿಲ್ಲ!. ಇದಕ್ಕೆಲ್ಲಾ ಇದ್ದ ಕಾರಣ ಒಂದೇ. ಅದೆಂದರೆ ಈ ವ್ಯಕ್ತಿಗೆ ಪುಟಗಟ್ಟಲೇ ಶ್ರದ್ಧಾಂಜಲಿ ಸಲ್ಲಿಸಿ, 'ಜಾಹೀರಾತು' ಪ್ರಕಟಿಸುವವರಿಲ್ಲ ಎಂಬ ಸತ್ಯ ಮುದ್ರಣ ಮಾಧ್ಯಮಗಳಿಗೆ ತಿಳಿದದ್ದು.
 ಸ್ವಲ್ಪ ನಿರ್ದಾಕ್ಷಿಣ್ಯವಾಗಿ ಮಾತಾಡಲೇ ಬೇಕಾಗಿದೆ. ಇಂದು ಪತ್ರಿಕೆಗಳು ಸಾಹಿತ್ಯ, ಕಲೆ, ಸಂಸ್ಕೃತಿಯಂತಹ ರಂಗಗಳಲ್ಲಿ ದುಡಿದು ನಿಧನರಾದರೆ, ಅಥವಾ ಅತೀ ಕಷ್ಟದಲ್ಲಿದ್ದರೆ ಅದನ್ನು ಸುದ್ದಿ ಮಾಡುವುದೇ ಇಲ್ಲ. ದುರಂತ ವೆಂದರೆ ಇದು ಅವರಿಗೆ ಸುದ್ದಿಯೇ ಅಲ್ಲ. ಅದೇ, ಎಷ್ಟೋ ಪತ್ರಿಕೆಗಳ ಪುಟಗಳನ್ನು ಗಮನಿಸಿದರೆ, ಅದರಲ್ಲಿ ದರ ಕಡಿತದ ಮಾರಾಟ, ವಿಶೇಷ ಆಫರ್..ಇಂತವುಗಳ ಸುದ್ದಿಯೇ ಇರುತ್ತದೆ. ಅದನ್ನು ಅವುಗಳು ವಿಶೇಷವಾಗಿ ಮುಖ್ಯ ಸುದ್ದಿಯಂತೆ ಪ್ರಕಟಿಸುತ್ತವೆ. 

ಮೊನ್ನೆ ಮಾರುತಿ ಸುಝುಕಿಯವರ ಹೊಸದೊಂದು ಕಾರು ಮಾರುಕಟ್ಟೆಗೆ ಬಿಡುಗಡೆಯಾಯಿತು. ಅದರ ಬಿಡುಗಡೆಯನ್ನು ಉಡುಪಿ, ಮಂಗಳೂರಿನ ಡೀಲರುಗಳು ತಮ್ಮ ತಮ್ಮ ಶೋರೂಂಗಳಲ್ಲಿ ಮಾಡಿದರು. ಸಹಜವಾಗಿಯೇ ಅವರು ಜಾಹೀರಾತನ್ನೂ ಪತ್ರಿಕೆಗಳಲ್ಲಿ ನೀಡಿದರು. ಎಷ್ಟು ಬೋರ್ ಹೊಡೆಸುವ ಸುದ್ದಿ ಎಂದರೆ, ಇದೊಂದೇ ಸುದ್ದಿ, ಪ್ರಮುಖ ದಿನ ಪತ್ರಿಕೆಯೊಂದರಲ್ಲಿ ಒಂದೇ ದಿನ ಮೂರು ಕಡೆ ಬಂದಿತ್ತು. ಅದರಲ್ಲೂ ಪ್ರಥಮ ಗ್ರಾಹಕರಿಗೆ ಕಾರಿನ ಕೀಲಿ ಕೈ ಕೊಡುವ ಫೋಟೋದಿಂದ  ಹಿಡಿದು, ಆ ಕಾರಿನ ವೈಶಿಷ್ಟ್ಯತೆಯನ್ನು ಪುನರಪಿ ಪ್ರಕಟಿಸಿ, ಜಾಹೀರಾತುದಾರರಿಗೆ ಪತ್ರಿಕೆ ಧಾರಾಳವಾಗಿ ಕ್ರತಜ್ಞವಾಗಿತ್ತು. ಇಲ್ಲಿ ನಾನು ಪತ್ರಿಕೆಯ ಧೋರಣೆಯನ್ನಾಗಲೀ, ಈ ಪರಿ ಸುದ್ದಿ ಪ್ರಸಾರದ ಬಗ್ಗೆಯಾಗಲೀ ದೂರುತ್ತಿಲ್ಲ. ಬಹುಶ: ಇಂದಿನ ವ್ಯಾಪಾರೀಕರಣಗೊಂಡ ಕಾಲದಲ್ಲಿ, ಮಾಧ್ಯಮ ಅದರಿಂದ ಹೊರತಾಗಿರಬೇಕೆಂದು ಬಯಸುವುದು ತಪ್ಪು. ಇಲ್ಲಿ ಹೇಳ ಹೊರಟಿರುವ ವಿಷಯ ಬೇರೆಯೇ ಇದೆ.

ನಾವು ಕನ್ನಡ ನಾಡು ನುಡಿಯ ಬಗ್ಗೆ ಆಗಾಗ ಕೆಲಸ ಮಾಡುತ್ತಿರುತ್ತೇವೆ. ಆ ಬಗ್ಗೆ ಪತ್ರಿಕೆಗಳಿಗೆ ವಿವರಗಳನ್ನೂ ಒದಗಿಸುತ್ತೇವೆ. ಆದರೆ ಯಾವ ಪತ್ರಿಕೆಗಳೂ ಅದರ ಬಗ್ಗೆ ಆಸಕ್ತಿ ತೋರುವುದಿಲ್ಲ. ಮುಂದೆ ನಾವೇ ಆ ಬಗ್ಗೆ ಸುದ್ದಿಯನ್ನು ಕೊಟ್ಟರೂ, ಅದನ್ನು ಪ್ರಕಟಿಸುವ ಮನಸ್ಸು ಪತ್ರಿಕೆಗಳಿಗೆ ಇರುವುದೇ ಇಲ್ಲ!. ಈ ಬಗ್ಗೆ ಒಮ್ಮೆ ನಾನು ಪರಿಚಿತ ಸಂಪಾದಕರೊಬ್ಬರಲ್ಲಿ ಕೇಳಿದೆ. ಅದಕ್ಕವರು, ನೀವು ಒಂದು ಜಾಹೀರಾತು ನೀಡಿದರೆ ನಮ್ಮ ವರದಿಗಾರ ಬಂದು ವರದಿ ಪ್ರಕಟಿಸುತ್ತೇವೆ. ಇಲ್ಲವಾದರೆ 'ಸಾರಿ'ಎಂದರು.

ಇದು ವಾಸ್ತವ. ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ,ಕಲೆಗಾಗಿ ಕೆಲಸ ಮಾಡುವ ಯಾವುದೂ ಇಲ್ಲಿ ಮಾಧ್ಯಮಕ್ಕೆ ನಗಣ್ಯವಾಗಿರುತ್ತದೆ. ಇದಕ್ಕಾಗಿ  ಜೀವಮಾನವಿಡೀ ಶ್ರಮಿಸಿ, ಕೊನೆಗೆ ಅನ್ನ-ನೀರಿಲ್ಲದೇ ಸತ್ತರೂ ಆ ಬಗ್ಗೆ ಯಾರಿಗೂ ಕಾಳಜಿ ಇರುವುದಿಲ್ಲ. ಅದೇ ಒಬ್ಬ ಉದ್ಯಮಿ ಸತ್ತರೆ, ಆ ವ್ಯಕ್ತಿ ಮಾಡಿದ್ದೆಲ್ಲವೂ ಕೇವಲ ತನ್ನ ವ್ಯವಾಹಾರಕ್ಕಾಗಿಯೇ ಆದರೂ, ಅದರಿಂದ ಬರುವ ಶ್ರದ್ಧಾಂಜಲಿ  ಜಾಹೀರಾತಿನ ಆಸೆಗಾಗಿ ಪತ್ರಿಕೆಗಳು ದೊಡ್ಡ ಪ್ರಚಾರ ನೀಡುತ್ತವೆ. ಇದಕ್ಕೆ ಏನೆನ್ನಬೇಕೋ!!
ಈಗ ಆರಂಭದಲ್ಲಿ ಹೇಳಿದ ಭಾಸ್ಕರ ನೆಲ್ಲಿತೀರ್ಥರ ವಿಷಯಕ್ಕೆ ಬರೋಣ. ಆ ವ್ಯಕ್ತಿ ನಿಜಕ್ಕೂ ಅನಾರೋಗ್ಯದಿಂದ ಹಾಸಿಗೆ ಹಿಡಿದ ಸಂದರ್ಭದಲ್ಲಿ, ಯಾವ ಮಾಧ್ಯಮವೂ ಬಳಿ ಸುಳಿಯಲಿಲ್ಲ. ಈ ಬಗ್ಗೆ ಕೆಲವು ಸ್ನೇಹಿತರು ಪ್ರಯತ್ನ ಮಾಡಿದರೂ, ಯಾರೂ ಕಿವಿಗೊಡಲಿಲ್ಲ. ದುರಂತವೆಂದರೆ, ಸತ್ತ ಸುದ್ದಿ ತಿಳಿದು, ಅವರ ಸಾಧನೆಯ ಕಿರು ಪಟ್ಟಿಯನ್ನು ಪತ್ರಿಕೆಗೆ ಕಳುಹಿಸಿದರೆ, ಎರಡು ಸಾಲಿನ ವರದಿಯೊಂದಿಗೆ ಪತ್ರಿಕೆಗಳು ಶರಾ ಬರೆದು ಬಿಟ್ಟುವು. ಹೀಗೆ, ಜನಾನುರಾಗಿಯಾಗಿದ್ದ ಓರ್ವ ಕಲಾವಿದನ ಸಾವು, ಏನೂ ಅಲ್ಲವೆಂಬಂತೆ ಮಾಧ್ಯಮಗಳಿಂದ ಅವಗಣನೆಗೆ ಗುರಿಯಾಯಿತು.

ಕರಾವಳಿಯ ಒಂದು ಪತ್ರಿಕೆಯ ಪುಟಗಳನ್ನು ಒಂದು ದಿನ ಸುಮ್ಮನೇ ಕಣ್ಣಾಡಿಸಿ ನೋಡಿ. ನಾನು ಒಂದಷ್ಟು ಕಾಲ ಆ ಪತ್ರಿಕೆಯ ಕಾರ್ಯಾಲಯದಲ್ಲಿ ಕೆಲಸ ಮಾಡಿದ್ದೆ. ಆಗ ಪತ್ರಿಕೆಗಳ ಪುಟಗಳನ್ನು 'ಪೇಸ್ಟ್' ಮಾಡುವ ವಿಧಾನದಿಂದ ತಯಾರಿಸುತ್ತಿದ್ದೆವು. ಅಂದರೆ ಒಂದು ಸುದ್ದಿಯನ್ನು ಟೈಪ್ ಮಾಡಿ, ಅದನ್ನು ಪುಟಕ್ಕೆ ಹೊಂದಿಸುವಂತೆ ಜೋಡಿಸಿ, ಮತ್ತೆ ಪ್ಲೇಟ್ ತಯಾರಿಸಿ ಮುದ್ರಣಕ್ಕೆ ಕಳುಹಿಸಲಾಗುತ್ತಿತ್ತು. ಆಗ ಜಾಹೀರಾತಿನ ಅವಶ್ಯಕತೆಯ ಮೇಲೆ ಪುಟಗಳ ನಿರ್ಧಾರವಾಗುತ್ತಿತ್ತು. ಹೆಚ್ಚಿನ ದಿನಗಳಲ್ಲಿ, ಕೊನೆ ಕ್ಷಣದಲ್ಲಿ ಯಾವುದಾದೂ ಒಂದೆರಡು ಸುದ್ದಿಗಳನ್ನು ತೆಗೆದು, ಜಾಹೀರಾತಿಗೆ ಸ್ಥಳ ಹೊಂದಿಸುತ್ತಿದ್ದೆವು. ಹೀಗೆ ಪ್ರಕಟವಾಗಲೇ ಬೇಕಾದ ಎಷ್ಟೋ ಸುದ್ದಿಗಳಿಗೆ ಕೊಕ್ ಕೊಡುತ್ತಿದ್ದೆವು. ಅಂದರೆ ಇಲ್ಲಿ ಮುಖ್ಯವಾಗಿರುವುದು ಜಾಹೀರಾತೇ ಹೊರತು, ಸುದ್ದಿಯೋ, ಪತ್ರಿಕಾ ಧರ್ಮವೋ ಅಲ್ಲ.

ಇತ್ತೀಚೆಗೆ ಹೆಚ್ಚು ಕಡಿಮೆ ಎಲ್ಲಾ ಪತ್ರಿಕೆಗಳ ವಿಶೇಷ ಪುಟಗಳಲ್ಲಿ ವಿಶಿಷ್ಟ ಜಾಹೀರಾತು ಪ್ರಕಟವಾಗುತ್ತಿರುತ್ತಿವೆ. ಅವುಗಳು ನಮ್ಮ-ನಿಮ್ಮೆಲ್ಲರ ಲೈಂಗಿಕ ಬಲವರ್ಧನೆಗೆ ವಿಶೇಷ ಕಾಳಜಿ ತೋರುವ ಜಾಹೀರಾತುಗಳು!!. ಅವುಗಳ ಮೇಲೆ ಒಮ್ಮೆ ಕುತೂಹಲದಿಂದ ಕಣ್ಣಾಡಿಸಿ ನೋಡಿ. ಕೇವಲ ಬೋಗಸ್ ಮತ್ತು ದಾರಿ ತಪ್ಪಿಸುವ ಜಾಹೀರಾತುಗಳು ಇವುಗಳು ಎಂದು ಮೇಲ್ನೋಟಕ್ಕೇ ಗೊತ್ತಾಗುತ್ತವೆ. ಆದರೂ ಎಷ್ಟೋ ಮಂದಿ, ಈ ಜಾಹೀರಾತುಗಳಿಗೆ ಮರುಳಾಗಿ  ಸಾಕಷ್ಟು ಹಣ ಕಳೆದುಕೊಂಡಿರುತ್ತಾರೆ!. ಕೊನೆಗೆ ಎಲ್ಲೋ ಒಂದು ಚಿಕ್ಕ ಮೂಲೆಯಲ್ಲಿ, ಆ ಪತ್ರಿಕೆ ಅದರಲ್ಲಿ ಪ್ರಕಟಿಸುವ ಜಾಹೀರಾತುಗಳಿಗೆ ಜಾಹೀರಾತುದಾರರೇ ಹೊಣೆಯೇ ಹೊರತು ಪತ್ರಿಕೆಯಲ್ಲ ಎಂಬ ಟಿಪ್ಟಣಿಯೊಂದಿಗೆ ತಾವು ಸುರಕ್ಷಿತವಾಗಿರುತ್ತದೆ.
ಎಲ್ಲರಿಗೂ ತಿಳಿದಿರು ವಿಚಾರವೊಂದೆಂದರೆ, ಪತ್ರಿಕೆಗಳಲ್ಲಿ ಬಂದರೆ ಅದು ಕೇವಲ ನಿಜ ಎಂದು ನಂಬುವ ಕಾಲವಿತ್ತು. ಆದರೆ ಈಗ ಈ ಪರಿಯ ಜಾಹೀರಾತು ಮತ್ತು ವಾಣಿಜ್ಯೀಕರಣದಿಂದ ಪತ್ರಿಕೆಗಳು ಕೇವಲ ಸುಳ್ಳಿನ ಕಂತೆ ಎಂಬಷ್ಟೂ ವಿಶ್ವಾಸ ಕಳೆದುಕೊಂಡಿವೆ.

ಹಾಗೆಂದು ಜಾಹೀರಾತು ಇರಲೇ ಬಾರದೇ ಎಂಬ ಪ್ರಶ್ನೆ ಸಹಜ. ಖಂಡಿತಕ್ಕೂ ಅದಿರಬೇಕು. ಆದರೆ ಅದರಲ್ಲಿ ಯುಕ್ತಾ ಯುಕ್ತತೆಯ ಬಗ್ಗೆ ಪತ್ರಿಕೆಗಳು ಕನಿಷ್ಟ ಮಾನದಂಡವನ್ನು ತಾವೇ ರೂಪಸಿಕೊಳ್ಳಬೇಕು. ತಮ್ಮ ಪತ್ರಿಕೆಗಳು ಸಭ್ಯ-ಸಹ್ರದಯಿಗಳ ಮನೆ ಮನೆಗೂ ಹೋಗುತ್ತವೆ ಎಂಬ 'ಕನಿಷ್ಟ'ಜ್ಞಾನ ಅವುಗಳಿಗೆ ಇರಬೇಕು. ಈ ಮಾತೇಕೆ ಎಂಬುದನ್ನು ಪತ್ರಿಕೆಗಳನ್ನು ನಿಯತವಾಗಿ ಓದುತ್ತಿರುವವರಿಗೆ  ಗೊತ್ತಾಗುತ್ತದೆ. ಗೊತ್ತಾಗದೇ ಇದ್ದರೆ, ಒಂದು ಶುಕ್ರವಾರ ಅಥವಾ ಭಾನುವಾರದ ಪುರವಣಿಯ ಜಾಹೀರಾತುಗಳನ್ನು ಕೂಲಂಕುಶವಾಗಿ ಗಮನಿಸಿದರೆ ತಿಳಿದೀತು.

ಇದನ್ನೇ ಪತ್ರಿಕಾ ಧರ್ಮದ ಪರಿಮಿತಿಯ ಬಗ್ಗೆ ಯೋಚಿಸುವ ಅನಿವಾರ್ಯತೆ ಇಂದು ಹೆಚ್ಚಿದೆ ಎನ್ನಲೂ ಕಾರಣ. ನೀವು ಎಷ್ಟೋ ಘಟನೆಗಳನ್ನು ಕೇಳಿರಬಹುದು. ಅನೇಕರು ಯಾವ್ಯಾವುದೋ ಆಮಿಷದ ಲಾಟರಿ, ಲಕಿ ಡಿಪ್‌ಗಳ ಕರೆಗಳಿಂದ ,ಮೋಸ ಹೋದ ಉದಾಹರಣೆಗಳನ್ನು ಓದಿರಬಹುದು. ಆದರೆ ಕೆಲವೊಮ್ಮೆ ಕೆಲವು ಪತ್ರಿಕೆಗಳು ಪ್ರಕಟಿಸುವ ಆಧಾರವಿಲ್ಲದ ಜಾಹೀರಾತುಗಳಿಗೆ ಮೋಸ ಹೋದವರೂ ಕಡಿಮೆ ಇಲ್ಲ. ಇಲ್ಲಿ ಯಾರ ಮೇಲೆ ಆರೋಪ ಹೊರಿಸಲೂ ಆಗದ ಸ್ಥಿತಿ ಈ ರೀತಿ ಮೋಸ ಹೋದವರದ್ದು. 
ಮುಗಿಸುವ ಮುನ್ನ ಮತ್ತೊಮ್ಮೆ ಮತ್ತೆ ಪುನರುಚ್ಚರಿಸುತ್ತೇನೆ. ಜಾಹೀರಾತುಗಳು ಪತ್ರಿಕೆಗಳಿಗೆ ಖಂಡಿತ ಅನಿವಾರ್ಯ. ಪತ್ರಿಕೆಯೊಂದರ ಉಳಿವಿಗೆ ಇದು ಬೇಕೇ ಬೇಕು. ಆದರೆ ಪತ್ರಿಕೆಗಳು ಜಾಹೀರಾತುಗಳಿಗಾಗಿಯೇ ಉಳಿದರೆ...ಪತ್ರಿಕಾ ಧರ್ಮ ಎಲ್ಲಿ ಉಳಿಯುತ್ತದೆ..??

Monday, 10 February 2014

ನಿವೇದನೆ....

ಕವನ..... ಎಂದೋ ಬರೆದಿಟ್ಟಿದ್ದ ಕವನವೊಂದನ್ನು ಬ್ಲಾಗಿನೊಳಗೆ ಸೆಸೆರಿಸಿದ್ದೆನೆ..... ಇಷ್ಟವಾದರೆ ನಾನು ಧನ್ಯ.,.. 


ಒಂದು ಹಿಡಿ ಪ್ರೀತಿಯನು ಚೆಲ್ಲಿಬಿಡು ಎದೆಯೊಳಗೆ
ಬೆಳೆದು ಹೆಮ್ಮರವಾಗಿ ಫಲ ನೀಡಲಿ|
ಶತ ಶತಕ ಕಳೆದರೂ ಇದಕಿಲ್ಲ ವೃದ್ದಾಪ್ಯ
ನಿತ್ಯ ತೆರೆ ಮೊರೆಯುವ ಹೊನ್ನ ಕಡಲು..|

ಒಂದು ಹನಿ ಕಣ್ಣೀರು ಜಾರಿದರೂ ನಿನ್ನೊಳಗೆ
ಅದುವೆ ನೆತ್ತರ ಧಾರೆ ನನ್ನೆದೆಯಲಿ|
ನಿನ್ನೆದೆಯ ಚೈತ್ರದಲಿ ಕೋಗಿಲೆಯ ದನಿ ಇರಲು
ಅದುವೇ ನಿತ್ಯೋತ್ಸವದ ಜಾತ್ರೆ ನನಗೆ|                              
ಒಂದು ದಿನವೂ ಏನೂ  ಕೇಳಲೊಲ್ಲದ ಮನವು
ಬಯಸುವುದು ನಿನ್ನೆದೆಯ ತಾಣವನ್ನು|
ಅಪ್ಪಿಬಿಡು ಎದೆಗೊಮ್ಮೆ ನನ್ನ ಮೊಗವನು ನೀನು
ಈ ಜಗವ ಮರೆತೇನು ಆ ಬಿಗಿತದಲ್ಲಿ|

                                                      ಒಂದಿನಿತು ಅಳುಕದೆಯೇ ಅಂಜದೆಯೇ ನಿನ್ನೊಡನೆ
ಹೆಜ್ಜೆಯನು ಸವೆಸುವೆನು ಬದುಕ ಕಡಲಲ್ಲಿ|
ಏರಿ ಬರುವಲೆಗೆ ಹುಚ್ಚು ಧೈರ್ಯವೇ ಹೇಗೆ
ನೀನಿರಲು ನನ್ನ ಬಳಿ   ಕರವ ಹಿಡಿದು|

ಒಂದಿನಿತು ಕಣ್ಣೋಟ ನನ್ನೆಡೆಗೆ ಎಸೆದು ಬಿಡು
ಬಂಧಿಯಾಗುವೆನಲ್ಲೇ  ಎಂದೆಂದಿಗೂ|
ಹೌದಿನಿಯಾ ಹರಿದು ಬಿಡು ನಿನ್ನ ಪ್ರೀತಿಯ ತೊರೆಯ
ತೊರೆದು ಬರುವೆನು ನಾನು   ಜಗದ ಬಂಧ|

ಒಂದು ಹಿಡಿ ಪ್ರೀತಿಯನು ಚೆಲ್ಲಿಬಿಡು ಎದೆಯೊಳಗೆ
ಎದೆಗೂಡಿನಲಿ ನಿನ್ನ ಬಚ್ಚಿಡುವೆನು|
ಎಂದಾದರೂ ಮುಂದೆ ಮರಳಿ ಬರದಾಗ ನೀ
ಬರದ ಲೋಕದ ಪಯಣ ಬಲು ಸುಲಭವೆನಗೆ|








Thursday, 6 February 2014

ಅಮ್ಮನಂತಿದ್ದರು ಅತ್ತೆ...

ನನ್ನ ಪ್ರೀತಿಯ ಅತ್ತೆ ಇನ್ನಿಲ್ಲವಾದ ಈ ಹೊತ್ತಿನಲ್ಲಿ ನಾನು ಜನಪ್ರತಿನಿಧಿಗೆ ಈ ವಾರ ಬರೆದ ಪ್ರದಕ್ಷಿಣೆ...

ಎರಡೂ ಕಣ್ಣಿಲ್ಲದ ಬದುಕಿನ ಒಂದು ಸ್ಥಿತಿಯನ್ನು ನೆನೆಸಿಕೊಳ್ಳಿ. ಇದೊಂದು ಆಘಾತಕಾರಿ ಬದುಕಾರೆ, ಜೀವನದ ಸುಮಾರು ೪೦ ವಸಂತಗಳನ್ನು ಎರಡೂ ಕಣ್ಣುಗಳಿಂದ ಆಸ್ವಾದಿಸಿ, ಹಠಾತ್ತಾಗಿ ಆ ಎರಡೂ ಕಣ್ಣುಗಳನ್ನು ನೂರು ಶೇಕಡಾ ಕಳೆದುಕೊಂಡು ಮತ್ತೆ ಇಡೀ ಜೀವನವನ್ನು ನಡೆಸುವ ಸ್ಥಿತಿ??. ಅದರ ನೋವನ್ನು ಬಹುಶ: ಅನುಭವಿಸಿದವರಿಗೇ  ಗೊತ್ತು. ಒಂದು ಕ್ಷಣ ನಮ್ಮೆರಡೂ ಕಣ್ಣುಗಳನ್ನು ಮುಚ್ಚಿಕೊಂಡು, ಎರಡು ಹೆಜ್ಜೆ ಮುಂದಿಟ್ಟರೆ, ಆ ನೋವಿನ ಆಳದ ಒಂದು ಸಣ್ಣ ಪರಿಚಯ ಆಗಬಹುದೇನೋ.

ನನ್ನ ಬಾಲ್ಯದ ನೆನಪುಗಳು ಆಗಾಗ ಕಾಡುತ್ತಿರುತ್ತವೆ. ಅಪರೂಪಕ್ಕೆ ಅಜ್ಜನ ಮನೆಗೆ ಹೋಗುತ್ತಿದ ದಿನಗಳು ಅವು. ನಮ್ಮ ಅಮ್ಮನ ಮನೆ ಎಂದರೆ ಸಣ್ಣ ಹಳ್ಳಿಯೊಂದರಲ್ಲಿ ಐದು ಮನೆಗಳಿದ್ದ ಒಂದು 'ಹೊಂಡ'ದಂತಹ ಪ್ರದೇಶ. ಕೊಕ್ಕರ್ಣೆಯಿಂದ ಸ್ವಲ್ಪ ಮುಂದೆ ಹೋದರೆ, ಸಂತೆಕಟ್ಟೆಯ ದಾರಿಯಲ್ಲಿ ಸಿಗುವ ಬಲ್ಲೆಬೈಲು ಎಂಬ ಸ್ಥಳದಲ್ಲಿಳಿದು ನಡೆದು ಹೋದರೆ ಸುಮಾರು ಒಂದೂ ವರೆ ಕಿಲೋಮೀಟರು ದೂರ. ಈಗ ಅಲ್ಲಿಗೆ ರಸ್ತೆಯ ಸಂಪರ್ಕವಾಗಿದೆ. ಅಂತಹ 'ಬಾಳೆಗುಂಡಿ'ಗೆ ಅಪರೂಪಕ್ಕೊಮ್ಮೆ ರಜೆಯಲ್ಲಿ ನಾನು ಅಕ್ಕನ ಜೊತೆಗೆ ಹೋಗಿ, ಒಂದೆರಡು ವಾರ ಉಳಿದು ಬರುತ್ತಿದ್ದೆ.

ಯಾರ್‍ಯಾರ ಸಂಬಂಧ ಹೇಗೆ ಎಂಬುದು ನನಗೆ ಅಷ್ಟು ಮುಖ್ಯವಾಗಿರಲಿಲ್ಲವಾಗಿತ್ತು. ಇಂದಿಗೂ ಅಲ್ಲಿ ಎಲ್ಲರೂ ನಮಗೆ ಅತ್ತೆ ಮಾವ!. ತಮಾಷೆಯ ವಿಷಯವೆಂದರೆ ಅವರ ಮಕ್ಕಳೆಲ್ಲರೂ ನಮಗೆ ಅಣ್ಣ-ತಮ್ಮ-ಅಕ್ಕ-ತಂಗಿ. ವಯಸ್ಸಿನ ಅಂತರವನ್ನು ಗಮನಿಸಿಕೊಂಡು ಎಲ್ಲರನ್ನೂ ನಾವು ಕರೆಯುವುದು, ಅವರ ಹೆಸರಿನ ಮುಂದೆ 'ಅಣ್ಣ-ಅಕ್ಕ' ಸೇರಿಸಿ. ಇದು ನಮ್ಮ ನಮ್ಮ ನಡುವಿನ ಆತ್ಮೀಯತೆಗೆ ಭದ್ರ ಬುನಾದಿ ಒದಗಿಸಿತ್ತು. ವಿಶೇಷವೆಂದರೆ ಅಲ್ಲಿರುವ ಐದೂ ಮನೆಗಳಲ್ಲಿ ನಾಲ್ಕು ಮನೆಯರೊಡನೆ ನಾನು ಹಲವು ವರ್ಷಗಳ ಕಾಲ ಪತ್ರ ವ್ಯವಾಹಾರವನ್ನಿಟ್ಟುಕೊಂಡಿದ್ದೆ. ಅಂತಹ ಆತ್ಮೀಯತೆ ಆ 'ಬಾಳೆಗುಂಡಿ'ಯಲ್ಲಿ 'ಅಂದಿ'ತ್ತು.
ಆಗಲೂ ನನ್ನನ್ನು ಬಹುವಾಗಿ ಆಕರ್ಷಿಸುತ್ತಿದ್ದವರು ಅವರು. ಹಣೆಯ ಮೇಲೆ ವಿಶಾಲವಾದ ಬೊಟ್ಟು. ಸ್ವಲ್ಪ ಎತ್ತರದ ದನಿಯೆಂದೇ ಗುರುತಿಸಿಕೊಳ್ಳಬಹುದಾದ ಖಡಕ್ ಮಾತುಗಳು, ಅಂದಿನ ಮಟ್ಟಿಗೆ ಸ್ವಲ್ಪ   ದೊಡ್ಡದಾದ ಮೈಕಟ್ಟು...ಇವುಗಳನ್ನು ಬಾಹ್ಯವಾಗಿ ಗುರುತಿಸಬಹುದಾದರೆ, ಎಲ್ಲರನ್ನೂ ಆತ್ಮೀಯತೆಯಿಂದ ಕಾಣುವ ಕಣ್ಣುಗಳು, ಕಿರಿಯರೆಲ್ಲರನ್ನೂ 'ಮಗಾ'ಎಂದೇ ಕರೆಯುವ ಮನದಾಳದ ಮಾತ್ರ ವಾತ್ಸಲ್ಯ, ಯಾವುದೇ ಮಕ್ಕಳು ಏನೇ ತಪ್ಪು ಮಾಡಿದರೂ, 'ಮಕ್ಕಳು, ಅವಕ್ಕೆಂತ ಗೊತ್ತಾಗುತ್ತೆ'ಎಂಬ ಸರಳ-ನೇರ-ಪ್ರೀತಿಯ ಮಾತುಗಳ ಕ್ಷಮೆ, ಯಾರ ಸಂಕಟವೇ ಇರಲಿ, ತಾನು ಮುಂದಾಗಿ ಓಡಿ ಹೋಗಿ, ಬೇರೆಯವರ ದು:ಖದಲ್ಲಿ ಒಂದಾಗುವ ದೊಡ್ಡ ಮನಸ್ಸು...

ಅಂದು ಆಕೆಂi ಎರಡೂ ಕಣ್ಣುಗಳು ಚೆನ್ನಾಗಿ ಕಾಣುತ್ತಿದ್ದುವು, ನನಗೆ ಸರಿಯಾಗಿ ನೆನಪಿದೆ. ನನ್ನ ಉಪನಯನದ ಸಮಯವಾಗಿತ್ತದು. ಅವರು ನಮ್ಮನೆಗೆ ಬಂದುದು, ನನ್ನ ಅರಿವಿನ ಪ್ರಕಾರ ಮೊದಲ ಸಲ. ಅವರೆಂದರೆ ನನಗೆ ಅಂದಿಗೂ, ಇಂದಿಗೂ ಅತೀ ಗೌರವದ ಸ್ಥಾನ. ಎದುರು ನಿಂತು ಮಾತಾಡಲೂ ಒಮ್ಮೊಮ್ಮೆ ಈ ಗೌರವ 'ಅಡ್ಡಿ'ಯಾಗುತ್ತಿದ್ದುದು  ನನಗಿನ್ನೂ ನೆನಪಿದೆ. ಆದರೆ ಬರ ಸೆಳೆದು, ಅಪ್ಪಿ ಮುದ್ದಾಡುತ್ತಾ, ಬಾಯಿ ತುಂಬಾ 'ಮಗಾ, ಮಗಾ'ಎಂದೇ ಕರೆಯುತ್ತಾ ಮುದ್ದಾಡುತ್ತಿದ್ದ ಆ ಮಾತೃ ಹ್ರದಯಿಯ ಮನಸ್ಸು ನಿಷ್ಕಲ್ಮಶವಾಗಿತ್ತು. ಮುಂದೆ ಬದುಕಿನ ವೈಪರೀತ್ಯದಿಂದ ಅನೇಕ ಸಂಕಷ್ಟಗಳು ಬಂದಾಗೆಲ್ಲಾ, ಅವರನ್ನು ಯಾವುದೋ ಕಾರಣದಿಂದ ನೋಡುತ್ತಿದ್ದಾಗೆಲ್ಲಾ ನಮ್ಮ ಪ್ರಯತ್ನ ನಮ್ಮದು, ಮತ್ತೆಲ್ಲಾ ಮಂದಾರ್ತಿ ಅಮ್ಮನದು ಎಂದೇ ಹೇಳುತ್ತಿದ್ದ ಆಕೆ, ಮಂದಾತಿಯ ಪರಮ ಭಕ್ತೆ.

ಇನ್ನು ಪೂರ್ವಾಪರದ ಬಗ್ಗೆ ಹೇಳುವುದಿದ್ದರೆ ಆಕೆ ಹುಟ್ಟಿ ಬೆಳೆದ ವಾತಾವರಣ ಅಂದಿನಮಟ್ಟಿಗೆ ನಗರವೆಂದೇ ಪರಿಗಣಿಸಬಹುದಾಗಿದ್ದ ಕಾಪುವಿನಲ್ಲಿ. ಬಾಳೆಗುಂಡಿಯಂತಹ. ತೀರಾ ಇತ್ತೀಚಿನವರೆಗೆ ವಿದ್ಯುತ್ ಸಂಪರ್ಕವೂ ಇರದಿದ್ದ ಆ ಹಳ್ಳಿಯಲ್ಲಿ ಆಕೆ ಜೀವನ ಆರಂಭಿಸಿದಾಗ, ೧೬ವಯಸ್ಸಿರಬೇಕು ಎಂದು ಕೇಳಿ ತಿಳಿದ ನೆನಪು. ಆರು ಮಕ್ಕಳ ತಾಯಿಯಾಗಿ, ಮನೆಯ ಕಡು ಬಡತನದಲ್ಲಿಯೂ ಮರ್ಯಾದೆ ಮತ್ತು ತಾಳ್ಮೆಗಳೆರಡನ್ನೇ ಆಸ್ತಿಯಾಗಿ ಬದುಕಿದವರು ಈಕೆ. ಮನೆಯಲ್ಲಿ ಊಟಕ್ಕೂ ತತ್ವಾರವಿದ್ದ ದಿನಗಳಲ್ಲಿಯೂ, ಆರೂ ಮಕ್ಕಳನ್ನು ತಬ್ಬಿ ಹಿಡಿದುಕೊಂಡು ಕಣ್ಣೀರು ಸುರಿಸಿ ಬದುಕಿದ್ದು, ಆ ಹಸಿವಿನಲ್ಲಿಯೂ ಬಂದವರೆದುರು ಇದನ್ನು ಒಮ್ಮೆಯೂ ತೋರಗೊಡದಿದ್ದುದು ಈಕೆಯ 'ಸುಸಂಸ್ಕೃತ' ಮನಸ್ಸಿಗೆ ಸಾಕ್ಷಿ.
ಈ ಸಂಸಾರದಲ್ಲಿ ಅನಿವಾರ್ಯವಾಗಿ ಮನೆಯ ಯಯಜಮಾನ್ಯವನ್ನು ವಹಿಸಿಕೊಂಡಂತಿದ್ದ ಈಕೆಯ ಬದುಕಿನಲ್ಲಿ ಬೀಸಿದ ಬಿರುಗಾಳಿಗಳಲ್ಲಿ ಚಂಡ ಮಾರುತವಾಗಿದ್ದು ತನ್ನೆರಡೂ ಕಣ್ಣುಗಳನ್ನು ಆಕೆ ಕಳೆದುಕೊಂಡಾಗ. ಇದ್ದಕ್ಕಿದ್ದಂತೆ ಕಣ್ಣುಗಳು ಮಂಜಾದಾಗ, ವೈದ್ಯರನ್ನು ಕಂಡು, ಔಷಧಿ ಮಾಡಿದರೂ, ವೈದ್ಯರ ತಪ್ಪಿನಿಂದಾಗಿ ಈಕೆಗೆ ಸಿಗಬೇಕಾದ ಚಿಕಿತ್ಸೆ ಲಭಿಸದೆ, ಎರಡೂ ಕಣ್ಣೂಗಳನ್ನು ಶೇಕಡಾ ನೂರು ಕಳೆದುಕೊಳ್ಳಬೇಕಾದ ಪರಿಸ್ಥಿತಿ. ಇದನ್ನು ಊಹಿಸಿದರೇ ಮೈನಡುಕ. ಸುಮಾರು ನಾಲ್ಕು ದಶಕಗಳ ಬದುಕನ್ನು ತೆರೆದ ಕಣ್ಣುಗಳಿಂದ ನೋಡಿ, ಒಮ್ಮಿಂದೊಮ್ಮೆಗೇ ಬದುಕಿನಲ್ಲಿ ಕುರುಡು ತನ ಆವರಿಸಿಕೊಂಡರೆ...? ಆ ನೋವು ಊಹನಾತೀತ. ಆದರೆ ಆ ಬದುಕನ್ನೂ ದೇವರ ಪ್ರಸಾದವೆಂಬಂತೆ ಸ್ವೀಕರಿಸಿದವರು ಈಕೆ. ನಿದಾನವಾಗಿ ಆ ಕಣ್ಣು ಕಾಣದ ಬದುಕಿಗೇ ಹೊಂದಿಕೊಳ್ಳುತ್ತಾ ಹೋಗಿ, ಕೊನೆಗೆ ಅವರು ಎಷ್ಟು ನಿಖರವಾಗಿ ತಮ್ಮ ಕೆಲಸದೊಂದಿಗೆ ಮನೆಯ ಕೆಲಸ ಮಾಡಿಕೊಳ್ಳುತ್ತಿದ್ದರು ಎಂದರೆ,ಆಕೆ ಎದುರು ನಾವೇ ಕುರುಡರು ಎಂಬಂತೆ ಭಾಸವಾಗುತ್ತಿತ್ತು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಹುಟ್ಟು ಕುರುಡರು ತಮ್ಮ ಬದುಕಿನಲ್ಲಿ ಹೊಂದಿಕೊಂಡು ಬದುಕುವುದು ಸಾಮಾನ್ಯವಾದರೆ, ಹತ್ತಿರ ಹತ್ತಿರ ನಾಲ್ಕು ದಶಕಗಳ ಕಾಲ ಆರೋಗ್ಯ ಪೂರ್ಣ ಕಣ್ಣುಗಳಿಂದ ಜಗತ್ತು ನೋಡಿ, ಮತ್ತೆ ಕುರುಡುತನವನ್ನು ಅಪ್ಪಿಕೊಂಡು ಬದುಕುವ ಆ 'ಒಳಗಿನ'ನೋವು ಎಷ್ಟಿರಬಹುದೋ-ಒಮ್ಮೆ ಯೋಚಿಸಿ.

ಎಲ್ಲಾ ಮಕ್ಕಳ ಮದುವೆಯಾಗಿದೆ.  ನಾನೂ ಸೇರಿ, ಇಬ್ಬರು ಅಳಿಯಂದಿರನ್ನು ಬಾಲ್ಯದಿಂದ ನೋಡಿದ ನೆನಪು ಬಿಟ್ಟರೆ, ಆಕೆಗೆ ಮದುವೆಯ ನಂತರ ನಾವು ಹೇಗಿದ್ದೇವೆ ಎಂಬದೇ ಗೊತ್ತಿಲ್ಲ. ಉಳಿದ ಮೂವರು ಅಳಿಯರ ಮುಖವನ್ನೇ ನೋಡಿಲ್ಲ. (ನನ್ನ ನೆನಪಿನ ಪ್ರಕಾರ ದೊಡ್ಡ ಅಳಿಯನನ್ನು ಮಾತ್ರ ಆಕೆ ಕಂಡಿರಬಹುದು.) ನಂತರ ಮಕ್ಕಳ ಮಕ್ಕಳು, ಅವರ ಆಟ ಪಾಟಗಳು ಎಲ್ಲವೂ ಅವರಿಗೆ 'ಸ್ಪರ್ಶ'ಜ್ಞಾನದಿಂದ ಮಾತ್ರ ಪರಿಚಯ. ಒಂದು ಹೊಸ ಬಟ್ಟೆ ತೆಗೆದುಕೊಂಡರೆ, ಮನೆಯಲ್ಲಿ ಹೊಸ ವ್ಯಕ್ತಿಯ ಪ್ರವೇಶವಾದರೆ, ಕೇವಲ ಸ್ಪರ್ಶಜ್ಞಾನವಷ್ಟೇ ಅವರ ಬದುಕು. ಆದರೆ ಆಶ್ಚರ್ಯವಾಗಬಹುದು, ಎಲ್ಲಾ ಮೊಮ್ಮಕ್ಕಳ ಬಾಣಂತನವನ್ನು ಅವರೇ ಮಾಡಿದ್ದಾರೆ.  ಕಣ್ಣೇ ಕಾಣದೆಯೂ ಅವರು, ಮಕ್ಕಳನ್ನು ಮೀಯಿಸುವುದರರಿಂದ ಹಿಡಿದು, ಅವರ ಲಾಲನೆ ಪಾಲನೆಯನ್ನು ಮಾಡಿದ್ದಾರೆ. ಇವರಿಗೆ ಕಣ್ಣು ಕಾಣದು ಎಂಬ ಕೊರತೆಯನ್ನು ಬಹುಶ: ಬೆಳೆದು ದೊಡ್ಡದಾಗಿ ಬುದ್ದಿ ಬರುವ ತನಕ ಯಾವ ಮಗುವೂ ಅರ್ಥಮಾಡಿಕೊಳ್ಳಲಾರದಷ್ಟೂ ಇವರು ಅವುಗಳನ್ನು ನೋಡಿಕೊಂಡಿದ್ದಾರೆ. ತಮ್ಮ ಆರೂ ಮಕ್ಕಳಲ್ಲಿ ಕೇವಲ 'ಸಂಸ್ಕಾರ'ವನ್ನೇ ತುಂಬಿ, ಆದರ್ಶ ತಾಯಿಯಾಗಿ ಬದುಕಿದ್ದವರು.
ಕಾಲದ ತೀರ್ಮಾನ. ಸಂಬಂಧವೇನೋ ತಿಳಿಯದಿದ್ದರೂ ಅತ್ತೆ ಎಂದು ಕರೆಯುತ್ತಿದ್ದ ನಾನು, ಇವರ ಮಗಳನ್ನೇ ಮದುವೆಯಾಗಿ, ಮತ್ತೆ ಇವರಿಗೆ ಮತ್ತಷ್ಟು ಹತ್ತಿರವಾದೆ.  ಆ ಕುಟುಂಬದ ಒಂದು ಭಾಗವಾದೆ. ಹಾಗೆ ನೋಡಿದರೆ ಮದುವೆಗೂ ಮುನ್ನವೇ ನಾನು ಆ ಕುಟುಂಬದ ಭಾಗವೇ ಆಗಿದ್ದರೂ, ಮದುವೆಯ ನಂತರ ಅದರಲ್ಲಿ ನಾನು ಅಧಿಕ್ರತ ಸದಸ್ಯನ ಸ್ಥಾನ ಪಡೆದೆ. ಆಗೆಲ್ಲಾ ಇವರ 'ಸಮಚಿತ್ತ'. 'ತಾಳ್ಮೆ' ಬದುಕಿನೆಡೆಗಿನ ಆಶಾವಾದ ಕಂಡು ಬೆರಗುಗೊಂಡಿದ್ದೆ. ಇವರ ಬಗ್ಗೆಯೇ ಯಾವಾಗಾದರೊಮ್ಮೆ ಬರೆಯಬೇಕು ಎಂದುಕೊಳ್ಳುತ್ತಿದ್ದೆ.....ಆದರೆ...!

ಅತ್ತೆ ಯಾವಾಗಲೂ ಅಮ್ಮನಾದರೆ ಆ ಸಂಸಾರ ಸುಖಿಯೆಂಬುದು ನನ್ನ ಅನಿಸಿಕೆ. ನನ್ನ ಮಟ್ಟಿಗೆ ಮತ್ತು ಈ ಕುಟುಂಬದ ಮಟ್ಟಿಗೆ ನಾವು ಈ ಅದ್ರಷ್ಟ ಪಡೆದಿದ್ದೆವು. ಅಳಿಯಂದಿರನ್ನು ಬಿಡಿ, ಒಮ್ಮೊಮ್ಮೆ ಬಂದು ಹೋಗುವವರು. ಆದರೆ ಮನೆಯಲ್ಲಿಯೇ ಇರುತ್ತಿದ್ದ ಸೊಸೆಎಯನ್ನೂ ಇವರು ಮಗಳಂತೆ ಕಂಡು ಪ್ರೀತಿಸಿವರು. ಸೊಸೆಯ ಪ್ರೀತಿಯ ಗದರಿಕೆಗೆ ನಗುವನ್ನೇ ಉತ್ತರವಾಗಿಸಿದವರು. ಅವರ-ಸೊಸೆಯ ಆತ್ಮೀಯತೆ ಯಾವ ಮಟ್ಟದಲ್ಲಿತ್ತೆಂದರೆ, ಯಾವುದೇ ವಿಷಯವನ್ನು ಮಗನಲ್ಲಿ ಹೇಳಲು ಹಿಂದೆ ಮುಂದೆ ನೋಡುತ್ತಿದ್ದ ಇವರು, ಸೊಸೆಯಲ್ಲಿ ಮನ ಬಿಚ್ಚುತ್ತಿದ್ದರು. ಇದೇ ಅಲ್ಲವೇ ಅತ್ತೆ ಅಮ್ಮನಾಗುವುದು ಎಂದರೆ..??

ಬದುಕೇ ಹಾಗೆ !. ಮದುವೆಯ ಆರಂಭದಲ್ಲಿ ಬಡತನ, ಮತ್ತೆ  ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿ,  ಅಕಾಲದಲ್ಲಿ ಎಲ್ಲರೂ ಪ್ರೀತಿಸುತ್ತಿದ್ದ (ನನಗೂ ನಿಜಾರ್ಥದ ಅಣ್ಣನಂತಿದ್ದ) ಹಿರಿಯ ಅಳಿಯನ ನಿಧನ, ಅನಿವಾರ್ಯವಾಗಿ ಸಂಸಾರದ ಸಂಪೂರ್ಣ ಜವಾಬ್ದಾರಿಗೆ ಹೆಗಲು ನೀಡುವಿಕೆ,  ಅಕ್ಕ-ಪಕ್ಕದ ಎಲ್ಲರನ್ನು ಆತ್ಮೀಯತೆಯಿಂದ ಕಾಣುತ್ತಿದ್ದ ಮಾಗಿದ ಮನಸ್ಸು, ಕಣ್ಣೇ ಕಾಣದಾದಾಗಲೂ ಸಮ ಚಿತ್ತದಿಂದ ಅದನ್ನು ಸ್ವೀಕರಿಸಿ, ಕಣ್ಣು ಕಾಣುವವರಿಗಿಂತಲೂ ಚೆನ್ನಾಗಿ ಬಾಳಿದ ರೀತಿ...ಸಂಯಮಕ್ಕೆ ಮತ್ತೊಂದು ಹೆಸರಾಗಿ, ವಾತ್ಸಲ್ಯದ ಮೂರ್ತಿಯಾಗಿ, ಕರುಣೆಯ ಕಡಲಾಗಿ, ನಿಜಾರ್ಥದ ಸುಮತಿಯಾಗಿ.....ಹೀಗೆ ನಮಗೆಲ್ಲಾ  ಅಮ್ಮನಾಗಿದ್ದವರು ನನ್ನ ಅತ್ತೆ.
***
ನಿನ್ನೆ ಬೆಳಿಗ್ಗೆ ಹೆಂಡತಿಯ ಅಣ್ಣ ಪದ್ಮನಾಭನ ಫೋನ್. ಅವನುಸುರಿದ್ದು ಒಂದೇ ಮಾತು. ಅಮ್ಮ ರಾತ್ರಿ ಮಲಗಿದವರು, ಬೆಳಗ್ಗೆದ್ದು ನೋಡುವಾಗ ಹೋಗಿ ಬಿಟ್ಟಿದ್ದಾರೆ. ನಾನು ಅಕ್ಷರಶ: ನಡುಗಿ ಹೋದೆ. ಮತ್ತೆ ಎಲ್ಲವೂ ನಡೆದು ಹೋಯಿತು. ಸಂಜೆ ಮೂರರ ವೇಳೆಗೆ ಅತ್ತೆಯ ದೇಹ ಅಗ್ನಿಯ ಕೆನ್ನಾಲಿಗೆಲ್ಲಿ ಕರಗುತ್ತಿದ್ದಾಗ ಮನಸ್ಸಿಗೆ ತೋಚಿದ್ದು ಒಂದೇ ಮಾತು-ಅತ್ತೇ, ನೀವು ನಮಗೆಲ್ಲಾ ಅಮ್ಮನಾಗಿದ್ದಿರಿ. 'ದಡ್ಡನೇ  ಬಿದ್ದು ದಿಡ್ಡನೇ ಸಾಯಬೇಕು, ಯಾರಿಗೂ ಹೊರೆಯಾಗಬಾರದು' -ಇದು ನೀವು ಹೇಳುತ್ತಿದ್ದ ಮಾತು-ಸಾವಲ್ಲೂ ನೀವೇ ಗೆದ್ದಿರಿ! ನಿಮಗೆ ಪ್ರೀತಿಯ ನಮನಗಳು.

ಈ ಬದುಕನ್ನು ಸಂಪೂರ್ಣವಾಗಿ ತೆರೆದಿಟ್ಟರೆ, ನಿರಾಶಾವಾದಿಗೆ ಬದುಕಿನಲ್ಲಿ ಹೊಸ ಆಶಾಕಿರಣವಾಗಬಹುದೆಂದು ಕೊಂಡಿದ್ದೇನೆ. ಮುಂದೆಂದಾದರೂ ಆ ಅವಕಾಶ ಬಂದೀತು. ಅತ್ತೆ, ಸುಮತಿ ಇನ್ನಿಲ್ಲ ವೆಂಬ ನೋವು ಎಂದಿಗೂ ನೋವಾಗಿಯೇ ಉಳಿಯುತ್ತದೆ. ನನ್ನ ಬದುಕಿನಲ್ಲಿ ವಿಶೇಷ ಅರ್ಥ ತುಂಬುವಂತೆ ಮಾಡಿದ, ಸ್ಥಾನದಲ್ಲಿ ಅಣ್ಣನಾದರೂ ಈ ಅತ್ತೆಯ ಮಗಳನ್ನು ನಾನು ಅಕ್ಕನೆಂದು ಕರೆದುಕೊಳ್ಳುತ್ತಾ 'ಬಾವ'ಎಂದೇ ಕರೆಯುತ್ತಿದ್ದ ಸತ್ಯನಾರಾಯಣ ರಾವ್, ನನ್ನ ಬದುಕಿನ ಒಂದು ದೀಪವೇ ಆಗಿದ್ದ ವಿಶ್ವೇಶ್ವರ ಹೆಬ್ಬಾರ್ ನಂತರ ಎಂದೆಂದಿಗೂ ನನ್ನ ಬದುಕಿನಂತಿದ್ದ ಅತ್ತೆ ಸುಮತಿ.....ಯಾಕೆ ಹೀಗೆ ಹೇಳದೇ ಹೋಗುತ್ತಾರೋ.!