Tuesday, 4 March 2014

'ಆಕೆ'ಯ ಕಷ್ಟಕ್ಕೆ ಅನೇಕ ಮುಖಗಳು!!

ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ನಾನು ಈ ವಾರ  ಬರೆದ ಜನಪ್ರತಿನಿಧಿ ಅಂಕಣ, 'ಪ್ರದಕ್ಷಿಣೆ'  ಬರಹ..... 


ಹೆಣ್ಣು ಹೆಣ್ಣೆಂದು ಹೀಗಳೆಯುವಿರೇಕೆ ನೀವು ಹೆಣ್ಣಲ್ಲವೇ ನಮ್ಮ ಹೆತ್ತ ತಾಯಿ!....ಈ ಕವಿವಾಣಿಯೊಂದೇ ಸಾಕು, ಹೆಣ್ಣು ಎಂದರೇನೆಂದು ವರ್ಣಿಸಲು.

ಮಾರ್ಚ್ ೮ನ್ನು ನಾವು ಅಂತಾರಾಷ್ರೀಯ ಮಹಿಳಾ ದಿನವನ್ನಾಗಿ ಆಚರಿಸಿಕೊಳ್ಳುತ್ತಿದ್ದೇವೆ. ಎಲ್ಲಾ ವಿಶೇಷ ದಿನಗಳಲ್ಲಿ ಮಾಡುವಂತೆ ಈ ದಿನ  ನಾವು ಮಹಿಳೆಯ ಗುಣ ಗಾನ ಮಾಡಿ, ಮರುದಿನದಿಂದ ನಮ್ಮ ಸಹಜ ಜೀವನದತ್ತ ತೆರಳಿ ಬಿಡುತ್ತೇವೆ. ಪ್ರೀತಿಗೆ, ಧರ್ಯಕ್ಕೆ, ಸ್ಥೈರ್ಯಕ್ಕೆ, ವಿಶಾಲ ಮನೋಭಾವಕ್ಕೆ, ತ್ಯಾಗಕ್ಕೆ, ಸ್ನೇಹಕ್ಕೆ, ಬಾಂಧವ್ಯಕ್ಕೆ, ಆತ್ಮೀಯತೆಗೆ, ಸಹೋದರತೆಗೆ, ವಾತ್ಸಲ್ಯಕ್ಕೆ...ಹೀಗೆ ಸುಸಂಸ್ಕೃತ ಜೀವನದ ಪ್ರತೀ ಮಗ್ಗುಲಿಗೂ ನಾವು ಉದಾಹರಣೆಯಾಗಿ ಕೊಡುವುದು ಮಹಿಳೆಯನ್ನು. ಓರ್ವ ಮಹಿಳೆಯಲ್ಲಿ ದೈವ ಸ್ವರೂಪವನ್ನೇ ಕಾಣುವುದು ನಮ್ಮ ಭಾರತೀಯ ಸಂಸ್ಕಾರ. ಇದೆಲ್ಲವೂ ಸರಿ.
ಬಹುಶ: ಗಾಂಧೀಜಿ ಹೇಳಿದ್ದರು ಎನ್ನುವ ಮಾತೊಂದು ಮಹಿಳಾ ದಿನಾಚರಣೆಯಲ್ಲಿ ಮಾತ್ರ 'ಬಳಕೆ'ಯಾಗುತ್ತದೆ. ಓರ್ವ ಮಹಿಳೆ ಮಧ್ಯರಾತ್ರಿ ಸುರಕ್ಷಿತವಾಗಿ ಮನೆ ಸೇರುತ್ತಾಳೆ ಎಂದರೆ ಆಗ ಅದು ನಿಜವಾದ ಸ್ವಾತಂತ್ರ್ಯ ಎಂದವರು ಹೇಳಿದ್ದರಂತೆ. ಆ  ಹಿನ್ನೆಲೆಯಲ್ಲಿ ಹೇಳ ಹೊರಟರೆ,ಎದುರು ಕಾಣುವ ನಮ್ಮ ಪ್ರಪಂಚದಲ್ಲಿ ಇಂದು ಹೇಳಿಕೆಯನ್ನು ಬದಲಾಯಿಸಲೇ ಬೇಕು. ಇಂದು ಮಹಿಳೆ ಒಂದೊಮ್ಮೆ ಮಧ್ಯರಾತ್ರಿಯಾದರೂ ಸುರಕ್ಷಿತವಾಗಿ ಮನೆ ತಲುಪಬಹುದು, ಮನೆಯೊಳಗೇ ಆಕೆ ಸುರಕ್ಷಿತಳಾಗಿದ್ದರೆ ಸಾಕು!!.

ಆಶ್ಚರ್ಯವಾಗಬಹುದು ನಿಮಗೆ. ಇಲ್ಲಿ ಮನೆ ಎನ್ನುವುದನ್ನು ನಾನು ಕೇವಲ ಒಂದು ಸಂಕೇತವಾಗಿ ಬಳಸಿಕೊಂಡಿದ್ದೇನೆ. ಮಹಿಳೆ ಎನ್ನುವುದನ್ನು ಕೇವಲ ಇಡೀ ಸ್ತ್ರೀ ಸಮೂಹವಾಗಿ ಕಂಡಿದ್ದೇನೆ. ಮನೆ ಎಂಬಲ್ಲಿ ನೀವು ಕಛೇರಿ, ಮನೆ, ವಿದ್ಯಾಕ್ಷೇತ್ರ, ಕಾರ್ಖಾನೆ, ರಸ್ತೆ.....ಹೀಗೆ ಸಮಾಜದ ಒಟ್ಟೂ ವ್ಯವಸ್ಥೆಯ ಎಲ್ಲಾ ಆಯಗಳನ್ನೂ ಸೇರಿಸಿಕೊಳ್ಳಬಹುದು. ಮಹಿಳೆ  ಎಂದರೆ ಅದು ಇಂದು ಹುಟ್ಟಿದ ಹೆಣ್ಣು ಮಗುವಿನಿಂದ ಹಿಡಿದು, ಅತ್ಯಂತ ಹಿರಿಯ ಮಹಿಳೆಯ ತನಕವೂ ಆಗಿರಬಹುದು. ಆಕೆ, ಬೇರಾರೋ ಕಣ್ಣಿಗೆ ಕಾಣದ ಸ್ತ್ರೀಯಿಂದ ಹಿಡಿದು, ನಮ್ಮದೇ ಮನೆಯ ಅಕ್ಕ ತಂಗಿಯರ ತನಕವೂ ಆಗಿರಬಹುದು, ಆಕೆಯನ್ನು ನಾವು ಕಣ್ಣಿಗೆ ಕಾಣದಂತೆ, ಅನೇಕ ರೀತಿಯ ಶೋಷಣೆಗೊಳಪಡಿಸುತ್ತಿರುತ್ತೇವೆ-ನಮ್ಮರಿವಿಗೂ ಬರದಂತೆ!!


ಅತ್ಯಂತ ಆತ್ಮೀಯ ಮಹಿಳೆಯಲ್ಲಿ ಒಮ್ಮೆ ಕೇಳಿ ನೋಡಿ-ನಿನಗೆ ಅತೀ ಇಷ್ಟ ಎನಿಸುವ ಭಾವನೆಯನ್ನು ಈ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳು ಎಂದು. ಆಕೆಯ ಉತ್ತರ ದಲ್ಲಿ ಬಹುಪಾಲು ಈ ಎರಡು ಅಂಶಗಳದ್ದಾಗಿರುತ್ತದೆ. ಒಂದು ಇಡೀ ಸಮಾಜದಲ್ಲಿ ನಿರ್ಭೀತವಾಗಿ ಓಡಾಡಿಕೊಂಡು, ಒಂದೂ ಕೆಟ್ಟ ದೃಷ್ಟಿ ಬೀಳದಂತೆ ಓಡಾಡುವ ವಾತಾವರಣ ಇದ್ದರೆ ಅದೇ ತನಗೆ ಬದುಕು. ಎರಡನೆಯದು- ಓರ್ವ ಮಹಿಳೆ ಸಂಪೂರ್ಣ ಸಂತಸ ಪಡುವುದು ಆಕೆ ಅತ್ಯಂತ ಕಷ್ಟದಲ್ಲಿದ್ದಾಗ, ತನ್ನ ಪ್ರೀತಿ ಪಾತ್ರರು ನಿಜಾರ್ಥದಲ್ಲಿ ನಿಸ್ವಾರ್ಥದಿಂದ ಬೆಂಬಲಿಸಿದಾಗ, ಬೆಂಗಾವಲಾಗಿ ನಿಂತಾಗ!

ಇಂದು ನಾವು ಅನೇಕ ಕಡೆಗಳಲ್ಲಿ ಕಾಣುತ್ತೇವೆ. ಎಷ್ಟೋ ಕಡೆ ವಾಸ್ತವವಾಗಿ ಮಹಿಳಾ ಹೋರಾಟದ ಮಾತಾಡುತ್ತಾ, ತಮ್ಮದೆ ನಾಲ್ಕು ಗೋಡೆಯ ನಡುವೆ ಮಹಿಳೆಯನ್ನು ಹೀನಾಯವಾಗಿ ಕಾಣುವ ಪ್ರವ್ರತ್ತಿ ಇದೆ. ಅದು ಎಷ್ಟು ಭೀಕರವೆಂದರೆ ಕೇವಲ ಊಹಿಸಲೂ ಆಗದಷ್ಟು!!. ಬಹುಶ: ನಂಬಲೂ ಆಗದ ಕಥೆಗಳು ನಿತ್ಯ ನಮ್ಮ ಸಮಾಜದಲ್ಲಿ ಆಗುತ್ತಿರುತ್ತವೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದೊಂದು ಮಾತಿದೆ. ಇದನ್ನು ತಮಾಷೆಯಾಗಿ ಎಷ್ಟೋ ಕಡೆ ಹೇಳುತ್ತೇವಾದರೂ, ಇದೇ ಸತ್ಯವಾದ ಅದೆಷ್ಟೋ ಉದಾಹರಣೆಗಳು ನಾವು ಒಮ್ಮೆ ತೆರೆದ ಕಣ್ಣಿನಿಂದ ಪ್ರಪಂಚವನ್ನು ನೋಡಿದರೆ ಕಾಣ ಸಿಗುತ್ತದೆ. ಓರ್ವ ಮಹಿಳಾ ಪರ ಹೋರಾಟಗಾರ್ತಿ ಎಂದು ಹೇಳಿಕೊಳ್ಳುತ್ತಾ, ವೇದಿಕೆಯಲ್ಲಿ ಭಾಷಣ ಬಿಗಿಯುತ್ತಾ, ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಾ...ಪ್ರಸಿದ್ದರಾದ ಮಹಿಳೆಯ ಬಗ್ಗೆ ಆಕೆಯ ವಿದ್ಯಾರ್ಥಿನಿಯೋರ್ವರಲ್ಲಿ ಕೇಳಿದೆ. ಅದಕ್ಕವರು ನೀಡಿದ ಉತ್ತರ ನನ್ನನ್ನು ಬೆಚ್ಚಿ ಬೀಳಿಸಿತು-ಅವರೆಂದರು, ಈ ಶೋಷಣೆ ಎನ್ನುವುದು ಲೈಂಗಿಕವಾಗಿ ಮಾತ್ರ ಎಂದು ನೀವಂದುಕೊಂಡಿದ್ದರೆ ಅದು ತಪ್ಪು, ನಿಜವಾದ ಶೋಷಣೆ ಎಂದರೆ ಏನೆಂದು ಈ ಮೇಡಂ ಹತ್ತಿರ ನೀವು ಕೆಲವು ಸಮಯ ವಿದ್ಯಾರ್ಥಿಯಾಗಿದ್ದುಕೊಂಡರೆ ತಿಳಿಯುತ್ತದೆ!!. ಅದೆಷ್ಟೋ ಸಂದರ್ಭಗಳಲ್ಲಿ ಈ ಮಹಿಳೆಯಿಂದ ನನ್ನನ್ನು ಓರ್ವ ಸರ್ ರಕ್ಷಿಸಿದ್ದರು!! ಎಂಬುದು ಆಕೆಯ ಉತ್ತರವಾಗಿತ್ತು, ಇದರ ವಿರುದ್ದ ನಿಮಗೇಕೆ ದೂರು ಕೊಡಲಾಗುವುದಿಲ್ಲ ಎಂದರೆ ಆಕೆ ಹೇಳುತ್ತಾರೆ, ಹಾಗೇನಾದರೂ ದೂರು ಕೊಡುವುದಕ್ಕಿಂತ ಮೊದಲು ಎರಡು ವಿಷಯ ಯೋಚಿಸಬೇಕಾಗುತ್ತದೆ. ಮೊದಲನೆಯದು ನಾನಲ್ಲಿ ಮುಂದುವರಿಯಬೇಕೇ ಬೇಡವೇ ಎಂಬುದಾದರೆ, ಎರಡನೆಯದು ಈ ದೂರಿನ ನಂತರದ 'ಪ್ರಚಾರ'ವನ್ನು ಎದುರಿಸಿ ಇಡೀ ಬದುಕಿನಲ್ಲಿ ಹೋರಾಡಬಲ್ಲೆನೇ ಎಂಬುದು ಎಂದು ಆಕೆ ಹೇಳುವಾಗ ಆಕೆಯ ಕಣ್ಣಿನಲ್ಲಿ ನೀರು!!

ಇತ್ತೀಚೆಗೆ ನಾವು ದಿನ ಪತ್ರಿಕೆಗಳಲ್ಲಿ ದಿನವೂ ಓದುತ್ತಿರುತ್ತೇವೆ. ಅದೆಷ್ಟೋ ಕಡೆ ತಂದೆಯಿಂದಾಗಿ, ಸಹೋರನಿಂದಾಗಿ, ಚಿಕ್ಕಪ್ಪನಿಂದಾಗಿ.....ಹೀಗೆ ತೀರಾ ಭಾವನಾತ್ಮಕವಾಗಿ ರಕ್ಷಣೆ ಕೊಡಬೇಕಾದವರಿಂದಾಗಿಯೇ ಹೆಣ್ಣು ಗರ್ಭಿಣಿಯಾದ ಬಗ್ಗೆ, ಅತ್ಯಾಚಾರಕ್ಕೊಳಗಾದ ಬಗ್ಗೆ ಓದುತ್ತಿರುತ್ತೇವೆ. ಆಕೆಯ ಮನ:ಸ್ಥಿತಿಯನ್ನು ಒಮ್ಮೆ ಯೋಚಿಸೋಣ. ಇಡೀ ಸಮಾಜ ಆಕೆಯನ್ನು ಮತ್ತು ಆಕೆಯನ್ನು ಮಾತ್ರ ತಪ್ಪಿತಸ್ಥಳನ್ನಾಗಿ ಕಾಣುತ್ತದೆ. ಅದೆಂದಿಗೂ ಅದಕ್ಕೆ ಕಾರಣ ಆಕೆ ಮಾತ್ರ ಎಂಬ 'ನಿರ್ಧಾರ'ದಿಂದ ಹೊರ ಬರುವುದೇ ಇಲ್ಲ. ಇದಕ್ಕೆ ನಿಜವಾಗಿಯೂ ಆಕೆಯನ್ನು ಪರಿಸ್ಥಿತಿಯ ಕೈಗೊಂಬೆಯಾಗಿ ಮಾಡಿ ಬಳಸಿಕೊಂಡ ವ್ಯವಸ್ಥೆಯ ಬಗ್ಗೆ ಅದು 'ಚ'ಕಾರವನ್ನೂ ಎತ್ತದೇ, ಆಕೆಯನ್ನು ಮಾತ್ರ ಕಂಡ ಕಂಡಲ್ಲಿ ಬೆರಳಿಟ್ಟು ತೋರಿಸುತ್ತದೆ. ಇದು ಆಮಾನವೀಯತೆಯ ಅತಿರೇಖ. 

ಇನ್ನು ಕೆಲಸ ಮಾಡುವಲ್ಲಿ ಮಹಿಳೆ ಪಡುವ ಬವಣೆ ಯಾರಿಗೂ ಬೇಡ. ಅದೆಷ್ಟೋ ಕಛೇರಿಗಳಲ್ಲಿ ಇಂದಿಗೂ 'ಬಾಸ್' ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾದ ದುರವಸ್ಥೆ ಮಹಿಳೆಯದ್ದು. ಮುಖ್ಯವಾಗಿ ಪ್ರಮೋಶನ್, ವರ್ಗಾವಣೆ ಇಂತಾದ್ದು ಅನಿವಾರ್ಯವಾಗಿರುವ ಕಛೇರಿಗಳಲ್ಲಿ ಅದೆಷ್ಟೋ ಮಹಿಳೆ, ಹೇಳಲೂ ಆಗದೇ, ಅನುಭವಿಸಲೂ ಆಗದೇ ಕೊರಗುತ್ತಿರುತ್ತಾಳೆ, ಕಾನೂನು, ಸಮಾಜ, ವ್ಯವಸ್ಥೆ ಎಂದೇನಾದರೂ ವಿಷಯ ಹೊರ ಹಾಕಿದರೆ ಅದೆಲ್ಲವನ್ನೂ ಕೇವಲ ತಮ್ಮ ತಮ್ಮ ಮೂಗಿನ ನೇರದಲ್ಲಿ 'ಬಳಸಿ'ಕೊಳ್ಳುವವರೇ ಹೆಚ್ಚೇ ಹೊರತು, ಅದರಿಂದಾಗಿ ನಿಜವಾದ ನ್ಯಾಯ ಮರೀಚಿಕೆ ಎಂಬುದು ಅನೇಕ ಮಹಿಳೆಯರ ಅಭಿಮತ. ಆಶ್ಚರ್ಯವೆಂದರೆ, ಮಹಿಳಾ ಶೋಷಣೆಯ ವಿರುದ್ಧ ಹೊರಾಡುವ ಘಟಕವೊಂದರ ಸಕ್ರಿಯ ಸದಸ್ಯೆಯೋರ್ವರೇ ಈ ರೀತಿಯ ಶೋಷಣೆಗೊಳಗಾಗಿದ್ದು, ಅದರ ವಿರುದ್ಧ ಹೋರಾಡಲಾರದೇ ಪರಿತಪಿಸಿದ್ದನ್ನು ನಾನು ಓದಿದ್ದೇನೆ!!. ಇನ್ನು ಮಹಿಳೆಯನ್ನು ಯಾರು ರಕ್ಷಿಸಬೇಕು, ಹೇಗೆ ರಕ್ಷಿಸಬೇಕು!!

ಬಹುಶ: ಮಹಿಳಾ ಜೀವನದ ಒಂದೇ ಮಗ್ಗುಲಿನ ಬಗ್ಗೆ ಹೇಳುತ್ತೇನೆ ಎಂದು ಭಾವಿಸಬೇಡಿ. ಆದರೆ ಒಂದಂತೂ ಸತ್ಯವೆಂದು ನಾನು ಮನಗಂಡಿದ್ದೇನೆ, ಅದೆಂದರೆ ಸಮಾಜದ ಯಾವುದೇ ಉನ್ನತ ಸ್ತರದಲ್ಲಿರಲಿ, ಮಹಿಳೆ ಈ ಶೋಷಣೆಯ ಒಂದಾದರೂ ಅನುಭವವನ್ನು ಅಪ್ಪಿಕೊಂಡೇ ಬದುಕ ಬೇಕಾದ ಅನಿವಾರ್ಯತೆ ಇದೆ. ಈ ಲೇಖನದ ತಯಾರಿಯ ದೃಷ್ಟಿಯಲ್ಲಿ ಕೆಲವರನ್ನು ಸಹಜವಾಗಿಯೇ ಕೇಳಿದರೆ, ಶೋಷಣೆಯ ವಿಷಯ ಬಂದಾಗ ಒಬ್ಬೊಬ್ಬರದ್ದೂ ಒಂದೊಂದು ಅನುಭವ ಮತ್ತು ಯಾರೂ ಇದರಿಂದ ಹೊರತಾಗಿಲ್ಲ ಎಂದು ತಿಳಿದಾಗ ಮಾತ್ರ ಆಶ್ಚರ್ಯವಾಯಿತು!!. ಇದು ನಮ್ಮ ದುರಂತ.
ಇತ್ತೀಚೆಗೆ ಮಂಗಳೂರಿನ ಒಂಟಿ ಮನೆಯಲ್ಲಿದ್ದ ೬೦ರ ಮಹಿಳೆಯನ್ನು ಯಾರೋ ಕೊಂದು ಆಭರಣ ದೋಚಿದ್ದರು. ಮೊದಲಿನ ದಿನದ ಸುದ್ದಿ ಪ್ರಕಾರ ಆಕೆಯ ಆಭರಣ ದೋಚಿದ್ದು ಮಾತ್ರವಲ್ಲದೇ ಆಕೆಯ ಮೇಲೆ ಅತ್ಯಾಚಾರವನ್ನೂ ಮಾಡಿದ್ದರು!!. ನಾಲ್ಕೈದು ದಿನದ ಹಿಂದೆ ಮಂಗಳೂರು ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ೩೫-೪೦ವಯೋಮಾನದ ಮಹಿಳೆಯೋರ್ವಳ ಶವ ಸಿಕ್ಕಿತ್ತು. ಆಕೆ ಎಲ್ಲಿಯವಳು ಯಾರು ಎಂಬುದೇ ತಿಳಿದಿಲ್ಲ, ಆಕೆಯ ಮೇಲೂ ಅತ್ಯಾಚಾರವಾಗಿತ್ತು. ದಕ್ಷಿಣ ಕನ್ನಡವೊಂದರಲ್ಲೇ ಸಾವಿರಾರು ಮಹಿಳೆಯರು ನಾಪತ್ತೆಯಾಗಿ ಎಲ್ಲಿದ್ದಾರೆಂದೇ ತಿಳಿಯುತ್ತಿಲ್ಲ. ಉಜಿರೆಯ ಲಾಡ್ಜ್ ಒಂದರಲ್ಲಿ ಓರ್ವ ಮಹಿಳೆಯನ್ನು ಪ್ರೇಮದ ಹೆಸರಲ್ಲಿ ಮೋಸ ಮಾಡಿ, ಕೊನೆಗೆ ಕೊಲೆ ಮಾಡಿದ ವರದಿಯನ್ನು ನಾವು ಓದಿದ್ದೇವೆ.....ಗಮನಿಸುತ್ತಾ ಹೋದರೆ ದಿನ ನಿತ್ಯ ಇಂತಹ ಅನಾಚಾರಗಳು, ಅತ್ಯಾಚಾರಗಳು ಲೆಕ್ಕವಿಲ್ಲದಷ್ಟೂ ಸಿಗುತ್ತವೆ. ಮಹಿಳೆ ಎಲ್ಲಿ ಸುರಕ್ಷಿತಳು??

ಒಂದೆರಡು ಸ್ವಾನುಭವದೊಂದಿಗೆ ಮುಗಿಸುತ್ತೇನೆ. ಅದೊಂದು ವೇದಿಕೆ. ಅಲ್ಲಿ ಓರ್ವ   ಯುವತಿ ಹಾಡು ಹೇಳುತ್ತಿದ್ದಳು. ಆಕೆಯ ಜೊತೆಗೆ ಓರ್ವ ಹುಡುಗನೂ ಹಾಡು ಹೇಳುತ್ತಿದ್ದ. ಅದು 'ಬಾರೇ ಇಲ್ಲಿ ಪಂಕಜ' ಎಂಬ ಸಾಲಿದ್ದ ಹಾಡಾಗಿತ್ತು. ಆಕೆ ಆ ಹಾಡನ್ನು ಹಾಡಿ ವೇದಿಕೆ ಇಳಿದು ಹೋಗುತ್ತಾಳೆ.  ಕೆಲವು ಕಾರ್ಯಕ್ರಮಗಳ ಬಳಿಕ, ಆಕೆ ಮತ್ತೆ ಹಾಡಿಗಾಗಿ ವೇದಿಕೆಗೆ ಬರುತ್ತಾಳೆ, ಆಗ ಜನ ಸಂದಣಿಯಿಂದ ಅನೇಕ ಧ್ವನಿಗಳು ಒಟ್ಟಾಗಿ 'ಬಾರೇ ಇಲ್ಲಿ ಪಂಕಜ' ಎಂದು ಜೋರಾಗಿ ಕೇಳಿಬರುತ್ತವೆ!!. ಆಕೆಗಾದರೋ ಭೂಮಿ ಕುಸಿದ ಅನುಭವ. ಆದರೂ ಸಮಾಧಾನ ಚಿತ್ತದಿಂದ ಆಕೆ ಹಾಡನ್ನು ಮುಂದುವರಿಸುತ್ತಾಳೆ. ಆಕೆ ಹಾಡುತ್ತಿರವಾಗೆಲ್ಲಾ ಈ ಕೂಗು ಜನಸಂದಣಿಯ ಅನೇಕರಿಂದ ಕೇಳಿ ಬರುತ್ತಲೇ  ಇರುತ್ತದೆ. ಆಕೆಗೆ ಹಾಡು, ಲಯ ಎಲ್ಲವೂ ತಪ್ಪುತ್ತದೆ. ಅಂತೂ ಆಕೆ ವೇದಿಕಯಿಂದ ಹಿಂದೆ ಸರಿದರೆ ಸಾಕೆಂದು ಮುಗಿಸಿ ಹೋಗುತ್ತಾಳೆ. ಕೊನೆಗೆ ಮೊದಲು ಹಾಡಿದ ಹುಡುಗನ ಸರದಿ. ಆತ ವೇದಿಕೆಗೆ ಬರುತ್ತಲೇ ಮತ್ತೆ ಸಭೆಯ ಮಧ್ಯದಿಂದ ಕೂಗು ಕೇಳಿ ಬರುತ್ತದೆ, 'ಪಂಕಜನ್ನ ಕರ್ಕೊಂಡ್ಪಾರೋ'!!

ಇದು ಒಂದು ಸಾಧಾರಣ ವಿಷಯವಾಗಿ ಕಾಣ ಬಹುದು. ಮತ್ತು ಇಂದು ಇಂತಹ ಘಟನೆಗಳು ಸಾಧಾರಣ, ಸಮಾನ್ಯ ಎಂದು ನಾವು ಪರಿಗಣಿಸಿಬಿಡುತ್ತೇವೆ. ಆದರೆ ಅಲ್ಲಿ ಹಾಡುವ ಹುಡುಗಿ ನಮ್ಮ ಅಕ್ಕ-ತಂಗಿಯೋ ಆಗಿದ್ದರೆ ಒಮ್ಮೆ ಮನೆಯಲ್ಲಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳೋಣ!!. ಎದೆಗೆ ಭರ್ಚಿ ಚುಚ್ಚಿದ ಅನುಭವವಾಗುತ್ತದೆ!!. ಇಂತಹ ವಿಷಯಗಳಲ್ಲಿ ಪುರುಷ ಯಾವತ್ತೂ ಸುರಕ್ಷಿತ ಎಂಬುದು ನನ್ನ ಭಾವನೆ.

ಒಂದು ಕಡೆ ಇಂತಾದ್ದೇ ಒಂದು ಕಾರ್ಯಕ್ರಮ ನಡೆಯುತ್ತಿತ್ತು. ಓರ್ವ ಕಲಾವಿದೆ ಸಹೋದರಿ, ಕಾರ್ಯಕ್ರಮಕ್ಕೆಂದು ಬಂದಿದ್ದವಳು, ತನ್ನ ಕಾರ್ಯಕ್ರಮಕ್ಕೆ ಸ್ವಲ್ಪ ಸಮಯ ಇದೆ ಎಂದು ನನ್ನ  ನಿಲ್ಲಿಸಿದ್ದ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಳು. ನಾನು ಹೊರಗೆ ನಿಂತಿದ್ದೆ, ಕೆಲವೇ ನಿಮಿಷಗಳ ನಂತರ ನಾನು ಗಮನಿಸಿದ್ದೆಂದರೆ, ನನ್ನ ಕಾರಿನ ಮುಂದೆ ಅನೇಕ ಪಡ್ಡೆ ಹುಡುಗರು ಜಮಾಯಿಸಿ, ಆಕೆಯನ್ನು ನೋಡುತ್ತಾ ಅದೇನೇನೋ ತಮಾಷೆಯಲ್ಲಿ ನಿರತರಾಗಿದ್ದರು. ಆಕೆಯನ್ನು ಕಾರಿನಿಂದಿಳಿಯುವಂತೆ ಹೇಳಿದೆ, ಕೊನೆಗೆ ಆ ಹುಡುಗರ ಪಕ್ಕಕ್ಕೆ ನಾನು ಹೋಗಿ ನಿಂತು ಇಲ್ಲೇನು ಮಾಡುತ್ತೀರೆಂದು ಕೇಳಿದರೆ ಅವಾಚ್ಯ ಶಬ್ದದಿಂದ ಇದು ನಿನ್ನ ಜಾಗವಲ್ಲ, ನಾವೆಲ್ಲಿ ಬೇಕಾದರೂ ನಿಲ್ಲುತ್ತೇವೆ ಎಂಬ ಉತ್ತರ ಬಂತು. ಸಂಬಂಧಿಸಿದವರಲ್ಲಿ ಈ ಬಗ್ಗೆ ಹೇಳಿದರೆ ಆ ಹುಡುಗಿಯನ್ನು ಒಳಗೆ ಕುಳಿತುಕೊಳ್ಳಲು ಹೇಳಿ ಎಂಬ 'ಸಲಹೆ'ನನಗೆ. ಹೀಗಾದರೆ ಯಾರು ಯಾರನ್ನು ತಿದ್ದಬೇಕು, ಸಮಾಜದಲ್ಲಿನ ಓರೆ ಕೋರೆಗೆ ಯಾರು ಕನ್ನಡಿ ಹಿಡಿಯಬೇಕು, ಬೆಕ್ಕಿನ ಕುತ್ತಿಗೆಗೆ ಯಾರು ಘಂಟೆ ಕಟ್ಟಬೇಕು......ಈ ಮಹಿಳಾ ದಿನಾಚರಣೆಯಲ್ಲಿ ಇದೇ ಪ್ರಶ್ನೆ.





No comments:

Post a Comment