Tuesday 18 March 2014

ಗಂಡಸರೇಕೆ ಅಳ ಬಾರದು...???

ಭಾವುಕತೆ ಎಂಬುದು ಪ್ರತೀ ಜೀವಿಗೂ ಇರುವ ಒಂದು ಗುಣ. ನರನಿರಲಿ-ನಾರಾಯಣನಿರಲಿ-ಪ್ರಾಣಿ ಇರಲಿ-ಪಕ್ಷಿ ಇರಲಿ-ಇದು ಒಂದೊಂದು ರೀತಿ ವ್ಯಕ್ತವಾಗುತ್ತಿರುತ್ತದೆ. ಇಂತಹ ಭಾವುಕತೆ ಅತೀ ಸಂತಸ, ಅತೀ ದು:ಖವಾಗಿ ಮಾರ್ಪಟ್ಟಾಗ, ಅದು ಅಳುವಾಗಿ ಬದಲಾಗುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಇದರ ಒಟ್ಟಾರೆ ಆಶಯ, ಮಾನಸಿಕವಾದ ಒಂದು ಅನುಭವ, ತಾನೇ ತಾನಾಗಿ ಹೊರ ಬರುವ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಜನಪ್ರತಿನಿಧಿ ಯಲ್ಲಿ ನನ್ನ ಇಂದಿನ 'ಪ್ರದಕ್ಷಿಣೆ'ಯ ಬರಹ... 

ನುಷ್ಯ ಹುಟ್ಟಿದಾಕ್ಷಣ ಮೊದಲು ಅಳುತ್ತಾನೆ-ಅಯ್ಯೋ, ಈ ನೀರಸ ಪ್ರಪಂಚದಲ್ಲಿ ಇನ್ನು ನನ್ನ ಅಭಿಯಾನ ಆರಂಭವಾಯಿತು ಎಂಬ ಕೊರಗೋ-ಗೊತ್ತಿಲ್ಲ. ಹುಟ್ಟಿದ ಮಗು ಅಳದಿದ್ದರೆ,  ಅದರ ಆರೋಗ್ಯದಲ್ಲಿ ಏನೋ ಏರು ಪೇರಿದೆ ಎಂದೇ ಅರ್ಥ. ಅದಿಲ್ಲವಾದರೆ ಆ ಗಳಿಗೆ ಕೆಟ್ಟದ್ದು ಎಂದು ನಂಬುವುದೂ ಇದೆ...ಅದು ನಂಬಿಕೆಯೋ ಮೂಡ ನಂಬಿಕೆಯೋ ಗೊತ್ತಿಲ್ಲ.
ಇನ್ನು ನಮ್ಮ ಲೇಖನದ ಶೀರ್ಷಿಕೆಯ ವಿಚಾರಕ್ಕೆ ಬರೋಣ. ಗಂಡಸರು ಅಳ ಬಾರದು!!. ಇದು ಒಂದು ರೀತಿಯ ಅಘೋಷಿತ ಶಾಸನದಂತೆ ಆಗಾಗ ಹೇಳಲಾಗುತ್ತದೆ. ಮೊದಲಾಗಿ ಅಳು ಎಂಬುದೇ ಒಂದು ವೈಜ್ಞಾನಿಕ ಕ್ರಿಯೆ. ಅಳುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಅನೇಕ ಒಳ್ಳೆಯ ಪರಿಣಾಮಗಳೂ ಬೀರುತ್ತವೆ ಎಂದು ಮನ ಶಾಸ್ತ್ರ ಹೇಳುತ್ತದೆ. ಇಂತಾದ್ದರಲ್ಲಿ ಗಂಡಸು ಅಳಬಾರದು ಎಂದರೆ...??

ಈ ಮಾತನ್ನು ಯಾರು ಹುಟ್ಟು ಹಾಕಿದರೋ ಗೊತ್ತಿಲ್ಲ. ಅಳುವ ಗಂಡಸನ್ನು ಮತ್ತು ನಗುವ ಹೆಂಗಸನ್ನು ನಂಬ ಬಾರದು ಎಂಬುದು.!. ನನಗಿನ್ನೂ ಚೆನ್ನಾಗಿ ನೆನಪಿದೆ. ರಜೆಯಲ್ಲಿ ನಾವು ಅಜ್ಜನ ಮನೆಗೋ, ಯಾವುದೋ ಸಂಬಂಧಿಯ ಮನೆಗೋ ಹೋಗುತ್ತಿದ್ದೆವು. ಅಲ್ಲಿಂದ ರಜೆ ಮುಗಿಸಿ ಮರಳುವಾಗ ಸಹಜವೆಂಬಂತೆ ಅಳುತ್ತಿದ್ದೆವು. ತಮಾಷೆಯ ವಿಷಯವೆಂದರೆ, ಮನೆಯಿಂದ ಹೊರಡುವಾಗ ಮತ್ತು ಮನೆಗೆ ಮರಳುವಾಗ-ಸಾಮಾನ್ಯವೆಂಬಂತೆ ಅಳುತ್ತಿದ್ದೆವು. ಆಗ ನನ್ನಲ್ಲಿ ಒಬ್ಬರು, ಅಯ್ಯೋ, ನೀನು ಗಂಡಸಾಗಿ ಅಳುವುದಾ ಮಾರಾಯ ಎಂದು ಕೇಳಿದ್ದು ನೆನಪಾಗುತ್ತದೆ!. ಹಾಗೆಂದು ಅಳುವನ್ನು ನಿಲ್ಲಿಸಬೇಕು ಎಂದು ಕೊಂಡರೆ ಅದೂ ಅಷ್ಟು ಸುಲಭ ಸಾಧುವಲ್ಲ ಎಂಬುದು ಹಲವು ಪ್ರಯತ್ನಗಳ ನಂತರ ನನಗೆ ಅನಿಸಿದ್ದುಂಟು...!

ಅದಿರಲಿ, ಭಾವುಕತೆ ಎಂಬುದು ಪ್ರತೀ ಜೀವಿಗೂ ಇರುವ ಒಂದು ಗುಣ. ನರನಿರಲಿ-ನಾರಾಯಣನಿರಲಿ-ಪ್ರಾಣಿ ಇರಲಿ-ಪಕ್ಷಿ ಇರಲಿ-ಇದು ಒಂದೊಂದು ರೀತಿ ವ್ಯಕ್ತವಾಗುತ್ತಿರುತ್ತದೆ. ಇಂತಹ ಭಾವುಕತೆ ಅತೀ ಸಂತಸ, ಅತೀ ದು:ಖವಾಗಿ ಮಾರ್ಪಟ್ಟಾಗ, ಅದು ಅಳುವಾಗಿ ಬದಲಾಗುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಇದರ ಒಟ್ಟಾರೆ ಆಶಯ, ಮಾನಸಿಕವಾದ ಒಂದು ಅನುಭವ, ತಾನೇ ತಾನಾಗಿ ಹೊರ ಬರುವ ಕ್ರಿಯೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಹೆಣ್ಣನ್ನು ಭಾವನಾತ್ಮಕವಾಗಿ ಹೆಚ್ಚು ಅವಲಂಬಿತಳು ಎನ್ನುತ್ತಾರೆ. ಹೆಣ್ಣಿಗೆ ಹೋಲಿಸಿದರೆ, ಗಂಡು ತನ್ನನ್ನು ತಾನು ಭಾವನೆಯ ಕಟ್ಟುಪಾಡಿನಿಂದ ತಡೆದುಕೊಳ್ಳಬಲ್ಲ ಎಂಬುದೂ ನಂಬಿಕೆ. ಮತ್ತೆ ಯಾವುದೇ ಸನ್ನಿವೇಶದಲ್ಲಿಯೂ ಗಂಡು-ಹೆಣ್ಣು ಇಬ್ಬರೂ  ಅತ್ತರೆ, ಬಹುಶ: ಅಲ್ಲಿ ಸಮಾಧಾನಿಸಲು ಯಾರೂ ಇಲ್ಲವೆಂಬ ಭಾವವೋ ಏನೋ, ಹಿರಿಯರು ಗಂಡು ಅಳಬಾರದು-ಹೆಣ್ಣು ನಗಬಾರದು ಎಂಬ ಗಾದೆ ಮಾಡಿಟ್ಟಿರಬಹುದು.

ಶತ ಶತಮಾನಗಳಿಂದ ಹೆಣ್ಣನ್ನು ಒಂದು ಕಟ್ಟು ಪಾಡಿಲ್ಲಿ ಬೆಳೆಸಿದ ಬಗ್ಗೆ ಕೇಳುತ್ತೇವೆ. ಹೆಣ್ಣು ನಕ್ಕರೆ ಅದೇ ಅಪರಾಧವೆಂಬಂತೆ ಬಿಂಬಿಸುವ ದುರಂತ, ಇಂದಿಗೂ ಕೆಲವು ಮೂಲಭೂತವಾದಿರಾಷ್ಟ್ರಗಳಲ್ಲಿ ಜ್ಯಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಗಂಡು ಅಳಲೇ ಬಾರದೇ ಎಂಬುದಕ್ಕೆ ಉತ್ತರ ಕಂಡುಕೊಂಡರೆ ಬಹುಶ: ಹೆಣ್ಣೂ ನಗಬಹುದು ಎಂಬ ನಂಬಿಕೆ ಬಲಗೊಳ್ಳಬಹುದು.

ಬದುಕಿನ ಅನೇಕ ಸಂಕಷ್ಟಗಳು ಮನುಷ್ಯನನ್ನು ಹಣ್ಣು ಹಣ್ಣು ಮಾಡುತ್ತವ. ಬಹಳ ಹಿಂದಿನ, ಘಟನೆಯೊಂದು ನೆನಪಾಗುತ್ತದೆ. ಕೆಲಸ ಮಾಡುತ್ತಿದ್ದ ಕಂಪೆನಿಯೊಂದರಲ್ಲಿ ಕೆಲವು ಹಿತ ಶತ್ರುಗಳ ರಾಜಕೀಯದಿಂದ ನನ್ನನ್ನು ಓರ್ವ ಭ್ರಷ್ಟನಂತೆ ಗುರುತಿಸಲಾಯಿತು. ಒಂದು ಗಳಿಗೆಯಲ್ಲಿ ಕೆಲಸ ಕಳೆದುಕೊಳ್ಳಬೇಕಾದ ಅನಿವಾರ್ಯತೆ. ಇದ್ದುದು ದೂರದ ಕೊಚ್ಚಿನ್ ನಲ್ಲಿ. ಕೂಡಿಟ್ಟದ್ದು ಏನೂ ಇಲ್ಲ. ಕೆಲಸದಿಂದ ಬಿಡಿಸಿದರೆ ಬಸ್ ಚಾರ್ಚ್‌ಗೂ ಹಣ ಇಲ್ಲದ ಪರಿಸ್ಥಿತಿ. ಎಲ್ಲಾ ವ್ಯವಸ್ಥೆಗಳೂ ನನ್ನ ವಿರುದ್ಧವೇ. ಇನ್ನುಳಿದದ್ದು ಆತ್ಮ ಹತ್ಯೆ ಮಾತ್ರ ಎಂಬ ಭಾವನೆ. ಸರಿ, ಕೆಲಸಕ್ಕೆ ಸಂಬಂಧಿಸಿದ ಎಲ್ಲವನ್ನು ಹಸ್ತಾಂತರಿಸಿಯಾಯಿತು. ಒಂದು ರೀತಿಯ ನಿರ್ಲಿಪ್ತತೆ ಮನದಲ್ಲಿತ್ತು. ಇನ್ನೂ ಒಂದು ವರ್ಷದ ಮಗು ಮತ್ತು ಮಡದಿ ಮನೆಯಲ್ಲಿ ಕಾಯುತ್ತಿದ್ದರು. ಏನಾಗಿದೆ ಎಂಬುದರ ಪರಿವೆಯೇ ಅವರಿಗಿರಲಿಲ್ಲ. ನನ್ನ ಮನಸ್ಸು ಸಂಪೂರ್ಣ ಖಿನ್ನತೆಗೊಳಗಾಗಿತ್ತು. ಇನ್ನೂ ಮನೆಗೆ ಹೋಗುವುದಕ್ಕಿಂತಲೂ, ಆತ್ಮಹತ್ಯೆಯೇ ಸೂಕ್ತ ಎಂದು ಕೊಂಡವನು, ಒಂದು ಕ್ಷಣ ಮನೆಯಲ್ಲಿ ಇಬ್ಬರನ್ನೂ ನೋಡಿ ಬರಲೇ ಎಂದುಕೊಂಡು ಅತ್ತ ಹೋದೆ. ಮನೆಯೊಳಗೆ ಕಾಲಿಡುತ್ತಲೇ, ಎಲ್ಲಿತ್ತೋ ಗೊತ್ತಿಲ್ಲ, ಅಳು ಭೋರ್ಗರೆದು ಬಂತು!!. ಗಟ್ಟಿಯಾಗಿ ನಾಲ್ಕೂ ಗೋಡೆಗಳು ಕೇಳುವಂತೆ ಅತ್ತೂ ಅತ್ತೂ ಹಗುರಾದಾಗ ಮನಸ್ಸಿಗೇನೋ ಬಿಡುಗಡೆಯ ಭಾವ!!. ನನ್ನ ಆತ್ಮ ಹತ್ಯೆಯ ಆಲೋಚನೆ ಆ ಕ್ಷಣಕ್ಕೆ ಮಾಯವಾಯಿತು. ಕಳೆದ ವಾರ ಮರಳಿ ಕೊಚ್ಚಿನ್‌ಗೆ ಹೋದಾಗ ಇದೆಲ್ಲವೂ ನೆನಪಾಯಿತು. ಇಂದು ನನಗನಿಸುತ್ತಿರುವುದೇನೆಂದರೆ, ಅಳು ಒಮ್ಮೊಮ್ಮೆ ಮನಸ್ಸನ್ನು ಹಗುರ ಮಾಡಿ, ಆಗಬಹುದಾದ ದುರಂತವನ್ನೂ ತಪ್ಪಿಸುತ್ತದೆ ಎಂದು!.

ಗಂಡಸು ಅಳಬಾರದು ಎಂಬುದಕ್ಕೆ ನನ್ನ ವಿರೋಧವಿರುವುದಕ್ಕೆ ಸ್ವಾನುಭವ ಅನೇಕ ಬಾರಿ ಕಾರಣವಾಗಿದ್ದಿದೆ. ಭಾವ ಪರವಶತೆ ಯಾರೊಬ್ಬರ ಸ್ವತ್ತೂ ಅಲ್ಲ. ಅದು ಮನುಜ ಜೀವಿತದ ಸಹಜ ಸ್ವಭಾವ. ಆದರೆ ಅಳು ಮೊಸಳೆ ಕಣ್ಣೀರಾಗಬಾರದು ಅಷ್ಟೇ. ಬಹುಶ: ಸಮಯ ಸಾಧಕತನದ ಕೆಲವು ಅಳುಗಳನ್ನು ನೋಡಿ, ಹಿರಿಯರು ಈ ಮಾತನ್ನು ಹುಟ್ಟು ಹಾಕಿರಬಹುದು. ಆದರೆ ಅಳುವನ್ನು ಯಾರೊಬ್ಬನ ಸ್ವತ್ತನ್ನಾಗಿ ಪರಿಗಣಿಸಬಾರದು.

ನಾನಂತೂ ಅಳುವನ್ನು ಬಹಳ ಇಷ್ಟ ಪಡುತ್ತೇನೆ!. ಇದನ್ನು ನಾವು ಧನಾತ್ಮಕವಾಗಿ ಚಿಂತಿಸಬೇಕು..ಅಷ್ಟೇ. ಅದೆಷ್ಟೋ ಸಂದರ್ಭಗಳಲ್ಲಿ ಮಾನಸಿಕವಾಗಿ ಇನ್ನಿಲ್ಲದಂತೆ ಕುಗ್ಗಿಹೋದಾಗ ಅಳು ಸಂಜೀವಿನಿ ಎಂದೇ ನನ್ನ ಭಾವನೆ. ಬಹುಶ: ಯಾರಿಗೂ ತಿಳಿದಿರದ ಗುಟ್ಟು ಎಂದರೆ, ಅದೆಷ್ಟೋ ಸಂದರ್ಭಗಳಲ್ಲಿ ನಾನು ಈಗಲೂ ಒಂಟಿಯಾಗಿ ಅತ್ತು ಹಗುರಾಗುವ ಅಭ್ಯಾಸ ಇಟ್ಟುಕೊಂಡಿದ್ದ ಕಾರಣದಿಂದಲೇ ಬದುಕನ್ನು ಸಮಚಿತ್ತದಿಂದ ಎದುರಿಸಲಾಗುತ್ತಿದೆ ಅನಿಸುತ್ತಿದೆ. ಯಾವುದೋ ಒಂದು ಸದರ್ಭದಲ್ಲಿ ಇದನ್ನು ಒಬ್ಬರಲ್ಲಿ ಹೇಳಿದಾಗ, ಅತ್ಯಂತ ಆಪ್ತರಾಗಿದ್ದ ಅವರು ಹೇಳಿದರು-ನನಗೆ ಅದೆಲ್ಲಾ ಗೊತ್ತಿಲ್ಲ, ನೀನು ಅಳಬಾರದು ಅಷ್ಟೇ! ಏಕೆ ಎಂದರೆ ಅವರ ಬಳಿ ಇದ್ದುದೂ ಅದೇ ಸೂತ್ರ, ನೀನು ಗಂಡಸು, ಅಳಬಾರದು !!

ಇನ್ನು ಇತ್ತೀಚಿನ ರಾಜಕಾರಣಕ್ಕೆ ಬಂದರೆ, ಅಲ್ಲಿ ಅಳು ಸರ್ವ ವ್ಯಾಪಿ. ಬಹುಶ: ದೇವೇ ಗೌಡರು, ಯಡ್ಯೂರಪ್ಪನವರು ರಾಜ್ಯ ಮಟ್ಟದಲ್ಲಿ ಅತ್ತಷ್ಟು ಬೇರಾರೂ ಅತ್ತಿರಲಿಕ್ಕಿಲ್ಲ. ಹಾಗೆಯೇ ರಾಷ್ಟ್ರ ಮಟ್ಟದಲ್ಲಿ ಅಡ್ವಾಣಿಯವರನ್ನು ಈ ವಿಷಯದಲ್ಲಿ ಯಾರೂ ಗೆದ್ದಿಲ್ಲ. ಅಮೇರಿಕದ ಅಧ್ಯಕ್ಷ ಒಬಾಮಾ ಸಹಾ ಆಗಾಗ ಈ ರೀತಯ ಭಾವ ಪರವಶತೆಗೊಳಗಾಗಿ ಗದ್ಗದರಾದ ಬಗ್ಗೆ ಓದಿದ್ದೇವೆ. ಕೆಲವನ್ನು ಇಲ್ಲಿ 'ಮೊಸಳೆ ಕಣ್ಣೀರು' ಅನ್ನ ಬಹುದಾದರೂ, ಅತ್ತವರೆಲ್ಲರೂ ಗಂಡಸರು ಎಂಬ ಹಿನ್ನೆಲೆಯಲ್ಲಿ ಅಳು ಸರ್ವ ವ್ಯಾಪಿ ಎನ್ನಲಡ್ಡಿ ಇಲ್ಲ. ಇದನ್ನೇ ಇನ್ನು ಮತ್ತೊಂದು ದ್ರಷ್ಟಿಯಲ್ಲಿ ಯೋಚಿಸಿದರೆ...ಬಹಿರಂಗವಾಗಿ ಸೋನಿಯಾ ಗಾಂಧಿ ಅತ್ತದ್ದು ಕಡಿಮೆ.  ದೂರದ ಮಾತು ಬಿಡಿ, ಯಾವಾಗಲೂ ನಗುತ್ತಲೇ ಇರುವ ನಮ್ಮ ಶೋಭಕ್ಕ...ಅತ್ತದ್ದು ಕಡಿಮೆ.! ಅಳುವ ಗಂಡಸರ ಮತ್ತು ಹೆಂಗಸರ ವಿಷಯದಲ್ಲಿ ನಾವು ಅದೇ ಸೂತ್ರ ಅಳವಡಿಸಿಕೊಂಡರೆ, ಇವರೆಲ್ಲಾ ಏನು ಎಂಬ ಪ್ರಶ್ನೆ ಕಾಡುತ್ತದೆ. 

ಜೆಫ್ರಿ ಪ್ಲಾಟ್ಸ್ ಎಂಬೊಬ್ಬ ವ್ಯಕ್ತಿತ್ವ ವಿಕಸನದ ಗುರುವಿನ ಪ್ರಕಾರ ಗಂಡಸು ಹೆಚ್ಚು ಅಳಬೇಕು. ಅದಕ್ಕೆ ಆತ ಐದು ಕಾರಣಗಳನ್ನೂ ಕೊಡುತ್ತಾನೆ. ಮೊದಲೆಯದಾಗಿ ಭಾವನಗೆಳು ನಮ್ಮ ಇಡೀ ದೇಹದಲ್ಲಿ ಪ್ರವಹಿಸುತ್ತಿರುವ, ಯಾವತ್ತೂ ಹೊರ ಬರುವ ಮೂಲಕ ಮಾನಸಿಕ ಗಟ್ಟಿತನವನ್ನು ಹೆಚ್ಚಸುವ ಸಹಜ ಸ್ವಭಾವ. ಅದರ ಹರಿವು ನಿರಾತಂಕವಾಗಿರಬೇಕಾದರೆ, ಅಳುವಿನ ಮೂಲಕ ಅದು ಹೊರ ಬರಬೇಕು. ಒಂದು ರೀತಿಯ್ಲಲಿ ನಮ್ಮ ಜೀವನದ ಪೈಪ್ ಲೈನ್ ನಿರಾತಂಕವಾಗಿರಬೇಕಾದರೆ ಅಳಬೇಕು. ಎರಡನೆಯ ಕಾರಣ ನಿಮ್ಮ ಅಳು ಹೊರ ಪ್ರಪಂಚದ ಜನರಿಗೆ, ನಿಮ್ಮೊಳಗಿನ ಭಾವನೆಯ ಪರಿಚಯವನ್ನು ಮಾಡಿಕೊಡುತ್ತದೆ. ಆ ಮೂಲಕ, ಜನರಿಗೆ ನಾವು ಹತ್ತಿರವಾಗಲು, ಅವರು ನಮ್ಮನ್ನು ಅರ್ಥ ಮಾಡಿಕೊಳ್ಳು ಈ ಅಳು ಸೇತುವಾಗುತ್ತದೆ. ಮೂರನೆಯದಾಗಿ ಅಳುವಿನ ಮೂಲಕ ನಿಮ್ಮ ಭಾವುಕತೆಯನ್ನು ಮತ್ತೆ ಮತ್ತೆ ನಿಯಂತ್ರಿಸಿಕೊಳ್ಳ ಬಹುದು. ಅದಿಲ್ಲವಾದರೆ ಮನದೊಳಗೇ ಹೆಪ್ಪುಗಟ್ಟಿಕೊಂಡಿರುವ ನೋವು, ಭಾವಗಳು ಮುಂದೆ ಮನಸ್ಸನ್ನು ಕೇವಲ ಸಂಕುಚಿತಗೊಳಿಸಿ, ಆತ್ಮಹತ್ಯೆಯೋ, ಮಾನಸಿಕ ವೈಕಲ್ಯಕ್ಕೋ ಕಾರಣವಾಗಬಹುದು. ನಾಲ್ಕನೆಯ ಕಾರಣ ಅಳುವಿನ ಮೂಲಕ ನಿಮ್ಮ ಭಾವನಾತ್ಮಕವಾಗಿ ಸ್ಪಂದಿಸುವ ನರ ನಾಡಿಗಳ ಶಕ್ತಿ ವೃದ್ಧಿಸುತ್ತದೆ!. ಈ ಮೂಲಕ ನಿಮ್ಮ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿಯಾಗುತ್ತದೆ;ಕಾರಣವಾಗುತ್ತದೆ. ಮತ್ತು ಐದನೆಯ ಕಾರಣವೆಂದರೆ ನಮ್ಮ ಭಾವನೆಗಳು ಮತ್ತು ಮನಸ್ಸಿನಲ್ಲಿರುವ ವಿಚಾರ ಈ ಹಂತದಲ್ಲಿ ಹೆಚ್ಚು ಹೊರ ಬರುತ್ತದೆ ಮತ್ತು ಆ ಮೂಲಕ ಸಮಾಜಕ್ಕೆ ನಾವು ಏನು ಎಂಬುದರ ಪರಿಚಯವಾಗುತ್ತದೆ. ಹೀಗೆ ಅಳುವನ್ನು ನಾವು ಯಾರಿಗೂ, ಹೀಗೆಯೇ ಎಂದು ಸೀಮಿತಗೊಳಿಸಬಾರದು. ಎಂಬುದ ಆ ಮನ;ಶಾಸ್ತ್ರಜ್ಞನ ಅಭಿಮತ. 

ಗಂಡಸರು ಅಳಲೇ ಬಾರದು ಎಂಬುದನ್ನು ಆತ್ಮೀಯರೂ, ಹಿತೈಷಿಗಳೂ ಆಗಾಗ ಹೇಳುವುದನ್ನು ಕೇಳಿ, ಇದೇಕೆ ಎಂದು ವಿಶ್ಲೇಷಣೆಗೆ ಕುಳಿತಾಗ ಈ ಎಲ್ಲಾ ವಿಚಾರಗಳು ಹೊಳೆದುವು. ಹುಡುಕುತ್ತಾ ಹೋದಾಗ, ಅನೇಕ ವಿಚಾರಗಳು ತೆರೆದುಕೊಳ್ಳುತ್ತಾ ಹೋದುವು. ನಾವೆಲ್ಲರೂ ನಗು ನಗುತ್ತಿರೋಣ ಎಂಬ ಮಾತನ್ನು ಹೇಳಬೇಕಾದ ಈ ಹೊತ್ತಿನಲ್ಲಿ ಗಂಡಸೇಕೆ ಅಳ ಬಾರದು ಎಂದು ಪ್ರಶ್ನಿಸಿ ನಿಮ್ಮನ್ನೆಲ್ಲಾ ಅಳಿಸುತ್ತಿದ್ದೇನೆ ಎಂದು ಕೊಳ್ಳಬೇಡಿ. ನೋವು-ನಲಿವಿನ ಅಭಿವ್ಯಕ್ತಿಯಲ್ಲಿ ಮನುಷ್ಯ ಮನುಷ್ಯನಂತಾಗುತ್ತಾನೆ ಎಂಬುದು ನನ್ನ ಅನಿಸಿಕೆ. ಈ ಲೇಖನವನ್ನು ಓದುತ್ತಿರುವ ಗಂಡಸು ನೀವಾಗಿದ್ದಲ್ಲಿ, ಇನ್ನು ಸಂಕೋಚ ಬೇಡ, ನಿಮ್ಮ ಭಾವನೆಯನ್ನು ಅದುಮಿಟ್ಟುಕೊಳ್ಳುವ ಪ್ರಯತ್ನದಿಂದ ದಿನವೂ ಹಣ್ಣಾಗದೇ, ಅತ್ತು ಅದನ್ನು ಹೊರಗೆಡವಿಬಿಡಿ!!. ಇದನ್ನು ಓದುತ್ತಿರುವ ಮಹಿಳೆಯರೇ...ಅಳುವ ಗಂಡಸನ್ನು ನೀವು ಖಂಡಿತಕ್ಕೂ ನಂಬಬಹುದು ಮತ್ತು ನೀವು ಅವರ ಬಗ್ಗೆ ಹೆಮ್ಮೆಯನ್ನೂ ಪಟ್ಟುಕೊಳ್ಳಬಹುದು-ಯಾಕೆಂದರೆ ಅವರ ಭಾವುಕತೆ ಎಂದೆಮದಿಗೂ ತೀವ್ರವಾಗಿರುತ್ತದೆ ಮತ್ತು ಸಮಾಜ ಸ್ನೇಹಿಯಾಗಿರುತ್ತೆ. ಅವರೂ ಅಳಲಿ ಬಿಡಿ!!.

ನಗು ನಗುತ್ತಾ ಬದುಕೋಣ, ನೋವನ್ನು ಅತ್ತು ಹೊರ ಹಾಕಿಕೊಳ್ಳುವ ಮೂಲಕ...


No comments:

Post a Comment