Thursday, 13 March 2014

ಶೋಷಣೆಯ ಎರಡು ವ್ಯಾಖ್ಯೆಗಳು...

ಜನಪ್ರತಿನಿಧಿ ಯ ಅಂಕಣ ಪ್ರದಕ್ಷಿಣೆ ಯಲ್ಲಿ ನನ್ನ ಈ  ವಾರದ ಬರಹ 

ಇತ್ತೀಚೆಗೆ ಕಾಲೇಜೊಂದರ ಭಾಷಣ ಸ್ಪರ್ಧೆಯೊಂದರಲ್ಲಿ ತೀರ್ಪುಗಾರನಾಗಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅದನ್ನು ಒಂದು ಸುವರ್ಣಾವಕಾಶ ಎಂದೇ ಭಾವಿಸಿದ್ದೇನೆ. ಬೆಳಿಗ್ಗೆ ಸಮಯಕ್ಕೆ ಸ್ವಲ್ಪ ಮುಂಚೆಯೇ ಕಾಲೇಜಿಗೆ ಹೋಗಿ, ಸಹ ತೀರ್ಪುಗಾರರಾಗಿದ್ದ ಖ್ಯಾತ ಲೇಖಕಿ ಸತ್ಯಮೂರ್ತಿ ಸುರತ್ಕಲ್ ಅವರ ಜೊತೆ ಮಾತಾಡುತ್ತಾ ನಿಂತಿದ್ದಾಗ, ಅಲ್ಲಿನ ಮಕ್ಕಳ ಕಲರವ ಕಂಡು ಮುದಗೊಂಡ ಅವರು ಒಂದು ಮಾತು ಹೇಳಿದರು. ಈ ಶಾಲೆ-ಕಾಲೇಜಿನ ಅಧ್ಯಾಪಕ-ಉಪನ್ಯಾಸಕರ ಮನಸ್ಸಿಗೆ  ವಯಸ್ಸೇ ಆಗುವುದಿಲ್ಲ, ಯಾಕೆಂದರೆ ಅವರ ಸುತ್ತಲೂ ದಿನ ನಿತ್ಯವೂ ಎಳೆಯ ಮನಸ್ಸುಗಳೇ ತುಂಬಿಕೊಂಡು ಅವರನ್ನು ಸದಾ ಉಲ್ಲಸಿತರನ್ನಾಗಿಸಿರುತ್ತದೆ. ಆ ಮಟ್ಟಿಗೆ ಅವರು ಪುಣ್ಯವಂತರು ಎಂದು ಹೇಳುತ್ತಿದ್ದರು. ಅಲ್ಲಿ ಕೆಲವೇ ಕೆಲವು ಹೊತ್ತು ಕಳೆದ ನನಗೂ ಅವರ ಮಾತು ಸತ್ಯವೆನಿಸಿತು.

ಇಲ್ಲಿ ನಾನು ಹೇಳ ಹೊರಟಿರುವ ವಿಷಯ ಬೇರೆ. ಅಂದು ಕಾಲೇಜಿನಲ್ಲಿ ಕನ್ನಡ ಭಾಷಣಕ್ಕೆ ಕೊಟ್ಟಿದ್ದ ವಿಷಯ, ಭಾರತದಲ್ಲಿ ಮಹಿಳೆಯ ಸಮಸ್ಯೆ ಮತ್ತು ರಕ್ಷಣೆ. ೧೭ ವಿದ್ಯಾರ್ಥಿಗಳು ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಳೆಯ ಮಕ್ಕಳ ಮನಸ್ಸು ಎಂದೆಂದಿಗೂ ಪ್ರಸ್ತುತ ಸಮಸ್ಯೆಯ ಸುತ್ತ ಸುತ್ತುತ್ತಿರುವಾಗ ಅವರು ಅದನ್ನು ವಿಶ್ಲೇಷಣೆಗೆ ಒಡ್ಡಿಕೊಳ್ಳುವ ಪರಿ ಕಂಡು ನಿಜಕ್ಕೂ ಮನ ಒಮ್ಮೆ ಭಾವುಕವಾದರೆ, ಮತ್ತೊಮ್ಮೆ ಈ ಮನ:ಸ್ಥಿತಿಯನ್ನು ನಮ್ಮ ಮಕ್ಕಳಿಗೆ ಒದಗಿಸಿದರೆ ಮುಂದಿನ ಜನಾಂಗ, ಭಾರತ ಹೇಗಾದೀತು ಎಂಬ ನಿರಾಶಾ ಭಾವನೆ ನನ್ನದಾಗಿತ್ತು.

ಅಲ್ಲಿ ಮಾತಾಡಿದ ೧೭ಮಕ್ಕಳುಗಳಲ್ಲಿ, ಕೇವಲ ಇಬ್ಬರು ಮಾತ್ರ ಹುಡುಗರಾಗಿದ್ದರು. ಇದು ಮೊದಲ ನೋಟಕ್ಕೇ ಮಹಿಳೆಯ ಸುರಕ್ಷೆ ಮತ್ತು ಸಮಸ್ಯೆಯ ಬಗ್ಗೆ ಮಾತಾಡಬೇಕಿರುವುದು  ಕೇವಲ ಮಹಿಳೆ/ಹುಡುಗಿಯೇ ಆಗಿರಲಿ ಎಂಬ ಸಾಮಾನ್ಯ ಭಾವನೆಯೋ ಎಂಬ ಅನುಮಾನ ಕಾಡಿದಾಗ, ಅದಕ್ಕೆ ಪರಿಹಾರವನ್ನೂ ಸಂಘಟಕರು ಹೇಳಿದಂತೆ ,ಇಂದು ಭಾಷಣ ಅಥವಾ ಇಂತಹಾ ಯಾವುದೇ ಸ್ಪರ್ಧೆಗೆ ಹುಡುಗಿಯರು ಮಾತ್ರ ಅಧಿಕ ಸಂಖ್ಯೆಯಲ್ಲಿರುತ್ತಾರೆ ಎಂದರು. ಅದು ಒತ್ತಟ್ಟಿಗಿಡೋಣ. ಮಾತಾಡಲು ವೇದಿಕೆ ಹತ್ತಿದ  ಮಕ್ಕಳ(ಯುವ ಮನಸ್ಸುಗಳು) ಮುಖ್ಯ ಗಮನ ತಮ್ಮ ಶೈಲಿಯತ್ತ ಮತ್ತು ಕಡ ತಂದ ಸಂಸ್ಕೃತ ಶ್ಲೋಕಗಳನ್ನುದ್ಧರಿಸುವತ್ತ ನೆಟ್ಟಿತ್ತು. ಯತ್ರ ನಾರೀ.....ಎಂಬ ಶ್ಲೋಕವನ್ನು ಮತ್ತು ಗಾಂಧೀಜಿಯವರು ಮಧ್ಯ ರಾತ್ರಿ ಹುಡುಗಿಯೊಬ್ಬಳು ನಿರ್ಭಯವಾಗಿ ಮನೆ ಹೊರಗೆ ಹೋದಾಗಲೇ ಭಾರತ ಸ್ವತಂತ್ರ ಎಂಬ ಉಕ್ತಿಯನ್ನು ೧೭ರಲ್ಲಿ ೧೪ ಮಕ್ಕಳು ಪುನರಪಿ ಹೇಳಿದರು!! ಇದನ್ನು ನಾನೂ ತೀರ್ಪುಗಾರನಾಗಿ ನನ್ನ ಮಾತುಗಳಲ್ಲಿ ಹೇಳಿದೆ ಮತ್ತು ಉಳಿದ ಇಬ್ಬರು ತಿರ್ಪುಗಾರರೂ ಇದನ್ನು ಅನುಮೋದಿಸಿದರು. ಉಳಿದಂತೆ ಎಲ್ಲಾ ಮಕ್ಕಳು ಮಾತಾಡಿಕೊಂಡು ಬಂದಿದ್ದಂತೆ ಉಜಿರೆಯ ಸೌಜನ್ಯಾ ಪ್ರಕರಣ, ದೆಹಲಿ-ಮಣಿಪಾಲಗಳ ಗ್ಯಾಂಗ್ ರೇಪ್ ವಿಷಯಗಳನ್ನು ಮತ್ತೆ ಮತ್ತೆ ಹೇಳಿದರು. ಅದನ್ನು ಹೇಳುವಾಗ ಒಂದು ರೀತಿಯ ಕ್ರಾಂತಿಕಾರಿ ಮನೋಭಾವ ಅವರಲ್ಲಿ ಎದ್ದು ಕಾಣುತ್ತಿತ್ತು. 

ಅಲ್ಲಿ ನಾವು ಗಮನಿಸಿದ್ದೆಂದರೆ ಎಲ್ಲಾ ಮಕ್ಕಳು ಪ್ರಸ್ತುತ ಘಟನೆಗಳ ಬಗ್ಗೆ ತೆರೆದ ಕಣ್ಣಾಗಿದ್ದಾರೆ ಮತ್ತು ಅದನ್ನು ವಿರೋಧಿಸುವ ಮನೋಭಾವ ಎಲ್ಲರಲ್ಲೂ ಇದೆ. ಆದರೆ ಅಲ್ಲಿ ರೋಷದಿಂದ ವ್ಯವಸ್ಥೆ ಪೂರ್ತಿ ಕೆಟ್ಟುಹೋಗಿದೆ ಎಂಬ ಹತಾಶೆ, ಇನ್ನು ಇಲ್ಲಿ ಏನೂ ಸರಿಯಾಗದೇನೋ  ಎಂಬ ನಿರಾಶೆ, ವಿರೋಧಿಸುವುದರಿಂದ ನಮಗೇನಾದೀತೋ ಎಂಬ ಅಳುಕು ಎದ್ದು ಕಾಣುತ್ತಿತ್ತು. ಇನ್ನು ಅಲ್ಲಿ ಮಾತಾಡಿದ ಹೆಚ್ಚಿನ ಹುಡುಗಿಯರು ಪುರುಷರಿರುವುದೇ ಮಹಿಳೆಯ ಶೋಷಣೆ ಮಾಡುವುದು ಮತ್ತು ಪುರುಷ ವರ್ಗಕ್ಕೆ ನಮ್ಮ ಧಿಕ್ಕಾರ ಎಂಬರ್ಥದ ಮಾತುಗಳನ್ನು ಒತ್ತಿ ಒತ್ತಿ ಹೇಳಿದರು. ಮತ್ತೂ ಒಂದು ತಮಾಷೆಯ ಅಥವಾ ಯೋಚಿಸಬೇಕಾದ ವಿಷಯವೆಂದರೆ, ಎಲ್ಲಾ ಹುಡುಗಿಯರೂ ಪ್ರಪಂಚದಲ್ಲಿನ ಪುರುಷರು ಶೋಷಣೆ ಮಾಡುತ್ತಲೇ ಇದ್ದಾರೆ ಎಂದು ಹೇಳಿದರು ಮತ್ತು ಹೆಣ್ಣು ಹೆಣ್ಣೆಂದು ಹೀಗಳೆಯುವಿರೇಕೆ ಎಂದು ಕೂಗಿದರೇ ಹೊರತು, ತಮ್ಮದೇ ಮನೆಯಲ್ಲಿರುವ ಅಣ್ಣ, ತಮ್ಮ, ಅಪ್ಪ...ಹೀಗೆ ಪುರುಷರಿಂದ ಸಿಗುವ ರಕ್ಷಣೆಯ ಬಗ್ಗೆ (ಸಿಗುತ್ತಿರುವ ಅಥವಾ ಸಿಗದಿರುವ!) ಚಕಾರವನ್ನೂ ಎತ್ತಲಿಲ್ಲ!!.  ಅಂದರೆ ಇಂದಿನ ಒಟ್ಟೂ ಸಮಾಜ ಮಹಿಳಾ ವಿರೋಧಿಯೇ ಎಂಬಂತೆ ಕಂಡು ಬಂತು!. ಮಹಿಳೆ ಏನನ್ನೂ ಸಾಧಿಸ ಬಲ್ಲಳು ಮತ್ತು ಅದಕ್ಕೆ ಪುರುಷ ವಿರೋಧಿ ಎಂಬಂತೆ ಮಾತುಗಳು ಕೇಳಿಬಂದುವು.

ಇದು ಒಂದು ಭಾಗವಾದರೆ ಮತ್ತೊಂದು ಭಾಗ ಸ್ವಾರಸ್ಯಕರವಾಗಿದೆ. ಅದೇ ಕಾಲೇಜಿನಲ್ಲಿ ಅದೇ ಮಧ್ಯಾಹ್ನ, ಕರ್ನಾಟಕದ ಇಂದಿನ ಲೋಕಾಯುಕ್ತ ವೈ ಭಾಸ್ಕರ ರಾವ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವಿತ್ತು. ಸಂಘಟಕರು ಬಹುಶ: ನಿರೀಕ್ಷಿಸಿದ್ದು  ಲೋಕಾಯುಕ್ತರೆನ್ನುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ, ಪ್ರಜಾಪ್ರಭುತ್ವದ ವಿಚಾರಗಳು ಹೆಚ್ಚು ಚರ್ಚಿತವಾಗಬಹುದು ಎಂದಿದ್ದಿರಬಹುದು. ಆದರೆ ೯೦ಶೇಕಡಾ ವಿದ್ಯಾರ್ಥಿಗಳೇ ತುಂಬಿದ್ದ ಆ ಸಭಾಂಗಣದಲ್ಲಿ ಲೋಕಾಯುಕ್ತರಿಗೆ ಅನೇಕ ಪ್ರಶ್ನೆಗಳು ಬಂದುವು. ಅದರಲ್ಲೂ ಮುಖ್ಯವಾಗಿ ಕೆಲವು ಹುಡುಗರೇ ಇಲ್ಲಿ ಪ್ರಶ್ನೇ ಕೇಳುವುದರಲ್ಲಿ ಮುಂದಿದ್ದರು. ಇಬ್ಬರು ಕೇಳಿದ ಪ್ರಶ್ನೆಗಳ ಸ್ವರೂಪ ಒಂದೇ ಆಗಿತ್ತು ಓರ್ವ ವಿದ್ಯಾರ್ಥಿ, ಇಂದಿನ ಹೆಚ್ಚಿನ ಕೇಸುಗಳಲ್ಲಿ ಮಹಿಳೆ ತನಗಿರುವ ಕಾನೂನಿನ ಸಹಾನುಭೂತಿಯನ್ನು ದುರುಪಯೋಗಪಡಿಸಿಕೊಂಡು ಪುರುಷನನ್ನು ಪೀಡಿಸುವ ಸಂಸ್ಕೃತಿ ಹೆಚ್ಚುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಿದಾಗ ಲೋಕಾಯುಕ್ತರು ಇದು ಅತ್ಯಂತ ವಿರಳ ಪ್ರಸಂಗಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದರು. ತಕ್ಷಣವೇ, ಮತ್ತೋರ್ವ ಸಾರ್ವಜನಿಕರು ಎದ್ದು ನಿಂತು, ಲೋಕಾಯುಕ್ತರ ಮಾತನ್ನು ಖಂಡಿಸಿ, ಇದು ಹೆಚ್ಚಿನ ಸಂದರ್ಭಗಳಲ್ಲಿ ಆಗುತ್ತದೆ. ಓರ್ವ ಮಹಿಳೆ ವರದಕ್ಷಿಣೆಯ ವಿರುದ್ದ, ಗಂಡನ ಮನೆಯವರ ಮೇಲೆ ಕೇಸು ಹಾಕಿದಾಗ, ಯುಕ್ತಾಯುಕ್ತತೆ, ಸತ್ಯ ಯಾವುದನ್ನೂ ವಿಶ್ಲೇಷಿಸದೇ ಗಂಡನ ಮನೆಯ ಎಲ್ಲರನ್ನೂ ಜೈಲಿಗಟ್ಟಿ ವಿಚಾರಿಸುವ ಪರಿಸ್ಥಿತಿ ಇದೆ. ಇದಕ್ಕೂ ಮಿಗಿಲಾಗಿ, ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗುವಷ್ಟರಲ್ಲಿಯೇ ಗಂಡ ಮತ್ತು ಮನೆಯವರಿಗೆ ಸಾಕಷ್ಟು ಮಾನಸಿಕ ಹಿಂಸೆ ಆಗಿರುತ್ತದೆ ಎಂದು ಏರು ದನಿಯಲ್ಲಿ ಹೇಳಿದಾಗ ಇಡೀ ಸಭಾಂಗಣ ಸ್ತಬ್ಧವಾಗಿತ್ತು!!. ಕೊನೆಗೆ ಲೋಕಾಯುಕ್ತರೂ ಈ ವಿಚಾರವನ್ನು ಅಲ್ಲಗಳೆಯಲಾಗದು ಎಂದಾಗ ಸಭಾಂಗಣದ  ಎಲ್ಲರೂ ಚಪ್ಪಾಳೆ ಹೊಡೆದರು. ಇಂದಿನ ಕಾನೂನಿನಲ್ಲಿ ಮಹಿಳೆಗೆ ನೆರವಾಗುವ ರೀತಿಯ ವಿಶೇಷ ಅನುಕಂಪ ವನ್ನು ೯೫% ಕೇಸುಗಳಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಸಭಾಂಗಣದಲ್ಲಿ ಅನೇಕರು ಹೇಳಿದಾಗ, ಒಂದು ರೀತಿಯ ಆಶ್ಚರ್ಯದ ಚಹರೆ ಅಲ್ಲಿ ನೆಲೆಸಿತ್ತು. 

ಎಲ್ಲವೂ ಮುಗಿಸಿ ಹೊರಬಂದಾಗ ಮನಸ್ಸು ಒಂದು ರೀತಿಯ ಗೊಂದಲದಿಂದ ಕೂಡಿತ್ತು. ಎರಡೂ ವಿಚಾರಗಳನ್ನು ಒಮ್ಮೆ  ಅವಲೋಕಿಸಿದರೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಒಂದನೆಯದಾಗಿ ಎಲ್ಲಾ ಮಹಿಳೆಯರೂ ತಮ್ಮನ್ನು ಶೋಷಣೆ ಮಾಡುತ್ತಾರೆ ಎಂದು ಭಾಷಣದಲ್ಲಿ ಖಂಡಿಸಿ, ಇದರ ವಿರುದ್ಧದ ಕೂಗನ್ನು ಗಟ್ಟಿಯಾಗಿ ಹೇಳಿದ್ದರೆ, ಮಧ್ಯಾಹ್ನದ ವೇಳೆಗೆ ಅವರೂ ಇದ್ದ ಸಭಾಂಗಣದಲ್ಲಿನ ಚಿತ್ರಣವೇ ಬೇರೆಯಾಗಿತ್ತು. ಇಲ್ಲಿ ಸಮಸ್ಯೆ ಇದ್ದುದು ಎಲ್ಲಿ ಎಂಬುದಕ್ಕೆ ಸ್ಪಷ್ಟ ಉತ್ತರವೇ ಸಿಗಲಿಲ್ಲ.
ಸರಿ, ಇಂದು ಮಹಿಳೆಯ ಮೇಲೆ ದೌರ್ಜನ್ಯ, ಶೋಷಣೆ ಹಿಂದಿನಂತೆಯೇ ನಡೆದಿದೆ. ಇದು ಎಲ್ಲೆಡೆಯಲ್ಲಿಯೂ ಕಂಡು ಬರುತ್ತದೆ. ಕೊನೆಗೆ ಎರಡೂ ಕಾರ್ಯಕ್ರಮಗಳ ಬಳಿಕ, ಸ್ನೇಹಿತರಲ್ಲಿ ಲೋಕಾಭಿರಾಮವಾಗಿ ಮಾತಾಡುವಾಗ  ಬಂದ ಅಭಿಪ್ರಾಯವೇ ಬೇರೆ. ಅದೆಂದರೆ ಬೆಳಿಗ್ಗೆ ಮಕ್ಕಳು ಹೇಳಿದ್ದೂ, ಮಧ್ಯಾಹ್ನದ ವೇಳೆಗೆ ಚರ್ಚೆಯ ವೇಳೆ ಹೊರ ಬಂದ ವಿಚಾರ ಎರಡೂ ಸರಿಯೇ!!. ಮಕ್ಕಳು ಹೇಳಿದಂತೆ ಮಹಿಳೆಯ ಮೇಲಿನ ದೌರ್ಜನ್ಯ ಮಿತಿ ಮೀರಿದ್ದು ಸರಿ. ಅದನ್ನು ಖಂಡಿಸಿ ಅವರಿಂದು ಮಾತಾಡುತ್ತಿರುವುದೂ ಸರಿ. ಮಹಿಳೆಯರ ಮೇಲಿನ ಕಾನೂನಿನ ಅನುಕಂಪದಿಂದ ಪುರುಷ ಪೀಡೆಯಾಗುತ್ತಿರುವುದೂ ಸರಿಯೇ. ಇಲ್ಲಿ ಸಮಸ್ಯೆ ಏನೆಂದರೆ, ಎರಡೂ ಕಡೆಗಳಲ್ಲಿ ಒಂದು ವಿರೋಧಾಭಾಸ ಇದೆ. ಅದೆಂದರೆ ಮೊದಲ ವಿಷಯದಲ್ಲಿ ಇಂದು 'ನಿಜವಾಗಿಯೂ' ಶೊಷಣೆ, ಪೀಡೆಗೊಳಗಾಗುವ ಮಹಿಳೆ ದೂರನ್ನೇ ಕೊಡುವುದಿಲ್ಲ!. ಅದಕ್ಕೆ ಮತ್ತೆ ಅನೇಕ ಕಾರಣಗಳು ಹುಟ್ಟಿಕೊಳ್ಳುತ್ತವೆ. ಹಾಗೆ ದೂರನ್ನು ಕೊಡಲೇ ಬೇಕಾದರೆ ಆಕೆಗೆ ಮತ್ತೆ ಅನೇಕ ಪ್ರಭಾವಗಳು ಬೇಕಾಗುತ್ತದೆ. ರಾಜಕೀಯ, ಆರ್ಥಿಕ ಬೆಂಬಲ, ಕುಟುಂಬದ ಬೆಂಬಲ...ಹೀಗೆ ಅನೇಕ ವಿಷಯಗಳನ್ನು ಅವಲೋಕಿಸಿ, ಸೂಕ್ಷ್ಮವಾಗಿ ವಿಮರ್ಶಿಸಿಕೊಂಡು ಆಕೆ ದೂರನ್ನು ಕೊಡಬೇಕಾಗುತ್ತದೆ. ಅದು ಆಗುವುದಿಲ್ಲ ಎಂದಾಗ ಆಕೆ ಆ ಶೋಷಣೆಯನ್ನು ಮೌನವಾಗಿ ನುಂಗಿಕೊಳ್ಳುತ್ತಾಳೆ. ಅದೇ ಎರಡನೆಯ ವಿಷಯದಲ್ಲಿ (ಹೆಚ್ಚಿನ ಸಂದರ್ಭಗಳಲ್ಲಿ) ಬೇರೆಯಾಗಿರುತ್ತದೆ. ಈ ಮೇಲೆ ಹೇಳಿದ ಎಲ್ಲಾ ಅನುಕೂಲ ಇರುವ ಮಹಿಳೆಯನ್ನು ಮೇಲಿನ ಪ್ರಭಾವಗಳು 'ಬಳಸಿಕೊಳ್ಳುತ್ತವೆ'. ಇದರ ಪರಿಣಾಮವಾಗಿ ಆಕೆ ದೂರು ಕೊಡುತ್ತಾಳೆ...ಪರಿಸ್ಥಿತಿಯ ವಿಕೋಪಕ್ಕೆ ಸಿಲುಕಿ ಪುರುಷನೂ ಪೀಡನೆಗೊಳಗಾಗುತ್ತಾನೆ!!. ಇದು ಇಂದು ಎಷ್ಟೋ ಕಡೆಗಳಲ್ಲಿ ನಡೆಯುತ್ತಿರುವ, ಆದರೆ ಬಹಿರಂಗವಾಗಿ ಯಾರೂ ಒಪ್ಪಿಕೊಳ್ಳಿದಿರುವ ಸತ್ಯ. ಮತ್ತು ನಮ್ಮ ಸಮಾಜದ ಮಟ್ಟಿಗೆ ದುರಂತವೂ!!
ಈ ಎಲ್ಲಾ ಅವಲೋಕನದ ನಂತರ, ಓರ್ವ ಮಹಿಳೆಯಲ್ಲಿಯೇ ಈ ಬಗ್ಗೆ ಕೇಳಿದಾಗ ನನ್ನ ಮಾತಿಗೆ ಆಕೆಯ ಸಹಮತವೂ ಇತ್ತು!. ಆಕೆಯ ಅಭಿಪ್ರಾಯದಂತೆ ಇಂದು ಹೆಚ್ಚಿನ ಕುಟುಂಬಗಳಲ್ಲಿ ಆಗುತ್ತಿರುವ ಸಮಸ್ಯೆ ಎಂದರೆ ಮನೆಯಲ್ಲಿ ಗಂಡು ಮಗು ಹುಟ್ಟಿದಾಗ ಅದನ್ನು ಬೆಳೆಸುತ್ತಾರೆ.....ಒಂದು ಮಗುವಿನಂತೆ!. ಅದು ತನ್ನ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯುತ್ತದೆ. ಆದರೆ ಅದೇ ಆ ಮಗು ಹೆಣ್ಣಾಗಿದ್ದರೆ, ಅದನ್ನು 'ಹೆಣ್ಣು ಮಗು'ವಿನಂತೆ ಸಾಕಲಾಗುತ್ತದೆ!! ಹೆಜ್ಜೆ ಹೆಜ್ಜೆಗೂ ಅದನ್ನು ಹೆಣ್ಣು..ಹೆಣ್ಣೆಂಬ ಎಚ್ಚರಿಕೆಯ ನಡುವೆ ಬೆಳೆಸಲಾಗುತ್ತದೆ. ಪರಿಣಾಮವೆಂದರೆ ಆ ಮಗುವಿಗೆ ಸ್ವಲ್ಪ ಬುದ್ದಿ ಬಂತೆಂದರೆ ತಾನು ಪುರುಷನಿಗಿಂತ ಕೆಳಗಿನವಳು, ತನಗೆ ಅವನಿಗಿಂತ ಇತಿ ಮಿತಿಗಳು ಹೆಚ್ಚು ಎಂಬ ಭಾವನೆ ಬೆಳೆಯುತ್ತಾ ಹೋಗುತ್ತದೆ. ಪ್ರಾಥಮಿಕ ವಿದ್ಯಾಭ್ಯಾಸದ ಹಂತದಿಂದಲೂ ಅದನ್ನೇ ಆಕೆಯ ಮನಸ್ಸಿನಲ್ಲಿ ಗಟ್ಟಿ ಮಾಡಲಾಗುತ್ತದೆ. ಕೊನೆಗೆ ಆಕೆಗೆ ತಾನೂ ಎಲ್ಲರಂತೆ ಸ್ವತಂತ್ರಳು ಎಂಬ ಭಾವ ಬರುವಷ್ಟರಲ್ಲಿ, ತನ್ನದೇ ಬುದ್ದಿ ಮತ್ತೆಯಲ್ಲಿ ಅದನ್ನು ವಿಶ್ಲೇಷಿಸುವ ಹಂತದಲ್ಲಿ ಆಕೆಗೆ ಇಡೀ ಪುರುಷ ವ್ಯವಸ್ಥೆ, ತನ್ನನ್ನು ಈ ಕೂಪಕ್ಕೆ ತಳ್ಳಿದೆ ಎಂಬ ಹತಾಶಾ ಹಾಗೂ ವಿರೋಧಿ ಭಾವನೆ ಬಲಿತಿರುತ್ತದೆ. ಆಗ ಈ ಸಂಘರ್ಷಗಳು ಆರಂಭವಾಗುತ್ತವೆ!!. 

ಈ ಮಾತನ್ನೂ ಒಪ್ಪಲೇ ಬೇಕು. ಮತ್ತು ಒಂದು ಹಂತದ ತನಕ ಅದು ಸತ್ಯವೂ ಅನಿಸುತ್ತದೆ. ಹೀಗೆ ಮಹಿಳಾ ಶೋಷಣೆ, ಪುರುಷ ಪೀಡೆ...ಅದರದ್ದೇ ಆದ ವ್ಯಾಪ್ತಿಯಲ್ಲಿ ನಡೆಯುತ್ತಲೇ ಇರುತ್ತದೆ. ಈ ಕೂಗು ನಿರಂತರವಾಗಿರುತ್ತದೆ. ಇಲ್ಲಿ ಯೋಚಿಸಬೇಕಾದ ಮತ್ತೊಂದು ವಿಚಾರವೆಂದರೆ, ಗಂಡು ಮಗು ಕೇವಲ ಮನೆಯ ಸದಸ್ಯನಾಗಿ ಬೆಳೆಯುತ್ತಾ, ಮಹಿಳೆ ಎಂದರೆ ಹೀಗೇ ಎಂಬ ಪೂರ್ವಾಗ್ರಹದಿಂದ ಬೆಳೆದಾಗ, ಮುಂದಿನ ಸಾಮಾಜಿಕ ಅನಾಹುತಗಳಿಗೆ ಕಾರಣನಾಗುತ್ತಾನೆ!!. ಇದೂ ಮನೋ ವಿಜ್ಞಾನಕ್ಕೆ ಬರುವ ವಿಷಯವಾದರೂ ಸಾಮಾನ್ಯ ಜ್ಞಾನದಿಂದಲೂ ಅಥೈಸಿಕೊಳ್ಳಬಹುದಾದ ಸತ್ಯ. ಹೇಗೆ ಹೆಣ್ಣು ತನ್ನ 'ತಿಳುವಳಿಕೆ'ಯಿಂದ ತಾನೂ ಪುರುಷನಷ್ಟೇ ಸಮಾನಳು ಎಂದು ಕೊಳ್ಳುತ್ತಾಳೋ, ಹಾಗೆಯೇ ಪುರುಷನೂ ಅಂದುಕೊಂಡರೆ ಅದು ಸಹಜ. ಹಾಗಾದಾಗ ಆತ ಸುಸಂಸ್ಕೃತನೆನಿಸೊಕೊಳ್ಳುತ್ತಾನೆ.

ಆದರೆ ಎರಡೂ ಕಡೆ ವಿರುದ್ದದ ಪರಿಸ್ಥಿತಿಯನ್ನೂ ಅಲ್ಲಗಳೆಯಲಾಗದು. ಹಾಗಾದಾಗ ಈ ರೀತಿಯ ವೈಪರೀತ್ಯಗಳುಉ ನಡೆಯುತ್ತದೆ. ಒಟ್ಟಾರೆಯಾಗಿ ವಿಷಯವನ್ನು ಚಿಂತನೆಯ ಒರೆಗೆ ಹಚ್ಚಿ ಯೋಚಿಸಿದರೆ, ಮಹಿಳೆ-ಪುರುಷ ಇಬ್ಬರೂ ಒಂದಿಲ್ಲೊಂದು ರೀತಿಯ ಶೋಷಣೆಯನ್ನು ಅನುಭವಿಸುತ್ತಿರುತ್ತಾರೆ. ಅಂಕಿ ಸಂಖ್ಯೆಯಲ್ಲಿ ವ್ಯತ್ಯಾಸವಿರಬಹುದಷ್ಟೇ!!
ಕೊನೆಗೂ ನನಗೆ ಬಹಳ ದೊಡ್ಡ ಪ್ರಶ್ನೆಯಾಗಿ ಕಾಡಿದ್ದು ಮೇಲಿನ ಭಾಷಣ ಸ್ಪರ್ಧೆಯ ವಿಚಾರದಲ್ಲಿ ಯಾವ ಭಾಷಣ ಸ್ಪರ್ಧಿಯೂ ಮಹಿಳೆಯ ಸಮಸ್ಯೆಯ  ಪರಿಧಿಯಿಂದ ಹೊರಬಂದು ಆಕೆಯ ರಕ್ಷಣೆಯ ಬಗ್ಗೆ ಮಾತಾಡಲಿಲ್ಲ. ಮಧ್ಯಾಹ್ನವೂ ಲೋಕಾಯುಕ್ತರಿಗೆ ಕೇಳಿದ ಕಾನೂನಿನ ಅನುಕಂಪದಿಂದಾಗುವ ಪುರುಷ ಪೀಡನೆಯ ವಿಷಯದಲ್ಲಿ ಯಾವ ಮಹಿಳೆಯೂ ಮಾತಾಡಲಿಲ್ಲ. ಒಂದು ರೀತಿಯ ದ್ವಂದ್ವ, ಇಂದು ಸಾಮಾಜಿಕವಾಗಿಯೂ ಬೆಳೆದಿದೆ ಅನ್ನಬಹುದು. 


2 comments:

 1. Sir,
  Nimma chintane, vyaktapadisida kaaLaji eradoo ishtavaadavu, sari ide. Naaven kattikondiruva samaajavidu, yaava dikkinatta saaguttide anta heloke kashta, prathi dina ondondu reeti ansutte!
  Lekhana chennaagi mooDibandide.........

  ReplyDelete
 2. ಹಿಟ್ಟನ್ನು ಸೌಟಿನಿಂದ ತೆಗೆದು ಕಾವಲಿ ಮೇಲೆ ಹರಡಿ ತೀಡಿದಾಗ ಸಿಗುವ ಒಂದು ತಿಂಡಿಯೇ ದೋಸೆ.. ಅದನ್ನು ಬಿಸಿ ಉಸಿರಿನಲ್ಲಿ ಬೇಯಿಸಿದಾಗ ಆಗುವುದು ಇಡ್ಲಿ. ಹೀಗೆ ಸಮಾರಂಭದ ಬೆಳಿಗಿನ ಮತ್ತು ಮಧ್ಯಾನ್ಹದ ವಿಷಯಗಳನ್ನು ನಿಮ್ಮ ಲೇಖನದಲ್ಲಿ ಓದಿದಾಗ ಮನಸ್ಸಿಗೆ ಬಂದ ಮಾತುಗಳಿವು

  ಹೌದು ಇಲ್ಲಿ ಹಿಟ್ಟಿನಂತೆ ಸಮಸ್ಯೆಗಳು ನಮ್ಮ ಕೈಯಲ್ಲಿಯೇ ಇವೆ.. ಅದನ್ನು ಹೇಗೆ ಬೇಯಿಸಬೇಕು ಎನ್ನುವ ಅರಿವು ಇರಬೇಕು.. ಸುಮಧುರ ಮಾತುಗಳಲ್ಲಿ ಇಡಿ ಸಮಾಜದ ಸ್ಥೂಲ ಪರಿಚಯ ಮಾಡಿಕೊಡುತ್ತಲೇ ಸಮಾಜದ ಅರಿವು.. ಮತ್ತು ಎಲ್ಲೇ ಹೇಗೆ ಮೂಡಿಸಬೇಕು ಎಂದು ಹೇಳುವ ಸಂದೇಶ ಗುಪ್ತಗಾಮಿನಿಯ ಹಾಗೆ ಹರಿದಿದೆ

  ಸುಂದರ ಲೇಖನ ಸರ್ಜಿ

  ReplyDelete