Thursday, 1 May 2014

ಫೇಸ್ ಬುಕ್, ಐಪಿಎಲ್.....ಅಯ್ಯೋ!!.

ನನಗೂ ಚೆನ್ನಾಗಿ ನೆನಪಿದೆ. ಬಾಲ್ಯದಲ್ಲಿ ಓದುವ ಗೀಳೂ ಇದೇ ರೀತಿ ಇತ್ತು. ನಾನೂ ಇದಕ್ಕೆ ಹೊರತಾಗಿಲ್ಲ. ಪಠ್ಯ ಪುಸ್ತಕದ ನಡುವೆ ಅನಕ್ರ, ತರಾಸು, ಕಾರಂತ ಮುಂತಾದವರ ಬರಹಗಳನ್ನು ಅಡಗಿಸಿಟ್ಟುಕೊಂಡು ಓದುತ್ತಿದ್ದೆ...ಕಳೆದ ವಾರದ ಜನಪ್ರತಿನಿಧಿಯ ಪ್ರದಕ್ಷಿಣೆಯಲ್ಲಿ ನನ್ನ ಬರಹ. 


ಇತ್ತೀಚೆಗೆ ಓದಿದ ಒಂದು ಕಿರು ಕಥೆ ಇಲ್ಲೆ ನೆನಪಾಗುತ್ತದೆ. ಅದರ ರೂಪಾಂತರ ಇಲ್ಲಿ ನೀಡುತ್ತಿದ್ದೇನೆ.

 ಒಂದು ಮನೆ. ಅಲ್ಲಿ ನೀರವ ಮೌನ ಆವರಿಸಿರುತ್ತದೆ. ಮನೆಯಲ್ಲಿನ ಸದಸ್ಯರೆಲ್ಲರೂ ಏನೋ ಅನಾಹುತ ಆದ ಹಾಗೆ ಒದ್ದಾಡುತ್ತಿದ್ದಾರೆ. ಎಲ್ಲರ ದೃಷ್ಟಿಯೂ ಒಂದೇ ಕಡೆ. ಕೊನೆಗೂ ಅಲ್ಲಿ ಲೈಟ್ ಹತ್ತಿಕೊಳ್ಳುತ್ತದೆ. ಓಹ್! ಬಂತು ಎಂದು ಒಬ್ಬ ಸದಸ್ಯ ಕೂಗುವುದಕ್ಕೂ, ಮನೆಯ ಎಲ್ಲಾ ಸದಸ್ಯರೂ ಓಡಿ ಬಂದು ಅದರ ಮುಂದೆ ಕುಳಿತುಕೊಳ್ಳುತ್ತಾರೆ. ಹೌದು, ಇಂಟರ್ ನೆಟ್ ಕನೆಕ್ಟ್ ಆಗಿತ್ತು!!.

ಇಂದು ಇಂಟರ್ ನೆಟ್ ಕನೆಕ್ಷನ್ ಸ್ವಲ್ಪ ಹೊತ್ತು ಹೋದರೆ ನಮ್ಮೊಳಗೆ ಏನೋ ಹೇಳ ತೀರದ ಕಸಿವಿಸಿ. ಅದೇ ರೀತಿ ಟಿ ವಿ ಚ್ಯಾನೆಲ್ ಸಹಾ ಅಷ್ಟೇ. ಕರೆಂಟ್ ಇಲ್ಲದೇ ಅಥವಾ ಯಾವುದಾದರೂ ತಾಂತ್ರಿಕ ಕಾರಣದಿಂದ ಟಿವಿ ಸಂಪರ್ಕ ಕಡಿತಗೊಂಡರೂ ಇದೇ ಅವಸ್ಥೆ.

ಒಮ್ಮೆ ಮನೆಗೆ ಬಂಧು ಒಬ್ಬರು ಬಂದಿದ್ದರು. ಟಿವಿಯಲ್ಲಿ ಯಾವುದೋ ಸುದ್ದಿ ನೋಡುತ್ತಿದ್ದೆ. ಅವರ ಮುಖದಲ್ಲಿ ಅದೇನೋ ಅಸಹನೆ. ನಾನು ಗಮನಿಸುತ್ತಲೇ ಇದ್ದೆ. ಕೊನೆಗೂ ತಡೆಯಲಾರದೇ ಅವರು ಕೇಳಿಯೇ ಬಿಟ್ಟರು. ಲಾವಣ್ಯಗೇನಾಯ್ತು ನೋಡಬೇಕು, ಸ್ವಲ್ಪ ಈಟಿವಿ ಹಾಕ್ತೀರಾ ಎಂದು. ನನಗೋ ಅಚ್ಚರಿ. ಯಾವ ಲಾವಣ್ಯ ಮತ್ತು ಏನಾಗಿತ್ತು ಎಂದರೆ ಅವರು ಈಟಿವಿಯ 'ಬದುಕು'ಧಾರಾವಾಹಿಯ ಬಗ್ಗೆ ಹೇಳಲು ಕುಳಿತರು. ನಾವೆಲ್ಲರೂ ಈ ಧಾರಾವಾಹಿಯ ಬಗ್ಗೆ ಟೀಕೆ ಮಾಡುತ್ತಲೇ ಇರುತ್ತೇವೆ. ಅನೇಕ ವರ್ಷಗಳಿಂದ ಬರುತ್ತಿರುವ ಧಾರಾವಾಹಿ ಮುಗಿಯುವುದೇ ಇಲ್ಲವೇನೋ ಎಂದು ಮುಖ ಸಿಂಡರಿಸುತ್ತೇವೆ. ಆದರೆ ಅದಕ್ಕಾಗಿಯೇ ಕಾಯುತ್ತಿರುವ ಮತ್ತು ಆ ಪಾತ್ರಗಳ ಬಗ್ಗೆ ಅನುಕಂಪ ತೋರುವ ಅದೆಷ್ಟೋ ಜನ ನಮ್ಮ ನಡುವೆ ಇರುತ್ತಾರೆ. ಹೀಗೆಯೇ ಲೋಕಾಭಿರಾಮವಾಗಿ ಮಾತಾಡುವಾಗ ಅವರೆಂದರು. ಅವರು ದಿನಾಲೂ ಮೂಡುಬಿದಿರೆಯಿಂದ ಕೆಲಸಕ್ಕಾಗಿ ಮಂಗಳೂರಿಗೆ ಬರುತ್ತಾರೆ. ಮರಳಿ ಸಂಜೆ ಮನೆಗೆ ಹೋಗುವಾಗ ಅವರ ಖಾಯಂ ಬಸ್ ಒಂದಿದೆ. ಅದು ಸಿಕ್ಕದೇ ಇದ್ದರೇ ಆ ದಿನ ಅವರ ಮೂಡ್ ಹಾಳಾಗಿರುತ್ತದೆ. ಬಸ್ ಇಳಿಯುತ್ತಲೇ, ಮನೆಗೆ ಓಡಿಯೇ ಹೋಗಿ, ಬಾಗಿಲು ತೆರೆದು ಒಳಗ ಹೊಕ್ಕು, ಮೊದಲು ಟಿವಿಯ ಸ್ವಿಚ್ ಆನ್ ಮಾಡಿ, ಮನೆಯೊಂದು ಮೂರು ಬಾಗಿಲು (ಆಗ) ಹಾಕಿದ ನಂತರವೇ ಅವರು ನಿರಾಳ!!. ಇದನ್ನು ಕೇಳಿದಾಗ ನಿಜಕ್ಕೂ ಅಚ್ಚರಿ ಅನಿಸಿತು. ನಾನೂ ಕೇಳಿದೆ. ಈ ಟಿವಿ ಮಾಧ್ಯಮ ಇಷ್ಟು ಹತ್ತಿರವಾಗುವ ಮೊದಲೂ ನೀವು ಇದ್ದಿರಿ. ಆಗೇನು ಮಾಡುತ್ತಿದ್ದಿರಿ ಎಂದು. ಅದಕ್ಕವರು ಆಗ ಪುಸ್ತಕ ಓದುತ್ತಿದ್ದೆ ಎಂದರು. ಈಗ...?? ಪುಸ್ತಕ ಓದದೇ ಯಾವ ಕಾಲವಾಯಿತೋ!!

ನನಗೂ ಚೆನ್ನಾಗಿ ನೆನಪಿದೆ. ಬಾಲ್ಯದಲ್ಲಿ ಓದುವ ಗೀಳೂ ಇದೇ ರೀತಿ ಇತ್ತು. ನಾನೂ ಇದಕ್ಕೆ ಹೊರತಾಗಿಲ್ಲ. ಪಠ್ಯ ಪುಸ್ತಕದ ನಡುವೆ ಅನಕ್ರ, ತರಾಸು, ಕಾರಂತ ಮುಂತಾದವರ ಬರಹಗಳನ್ನು ಅಡಗಿಸಿಟ್ಟುಕೊಂಡು ಓದುತ್ತಿದ್ದೆ. ನಮ್ಮ ಪಕ್ಕದ ಮನೆಯಲ್ಲಿದ್ದ ಅನಂತ ಪದ್ಮನಾಭ ನಾಯರಿ ದಂಪತಿಗಳು ನನಗೆ ಇದನ್ನು ಒದಗಿಸುತ್ತಿದ್ದರು. ಊರಿನಲ್ಲಿ ತರಂಗ, ಸುಧಾ, ಪ್ರಜಾಮತಗಳು ನಿಯಮಿತವಾಗಿ ಬರುತ್ತಿದ್ದುದು ಅವರ ಮನೆಯಲ್ಲಿ ಮಾತ್ರ. ತಪ್ಪದೇ ಆವುಗಳನ್ನು ಕಡ ತಂದು ಓದದಿದ್ದರೆ ಊಟ ಮಾಡಿದ್ದು ಜೀರ್ಣವಾಗದ ಪರಿಸ್ಥಿತಿ. ಆದರೆ ಈಗ..? ನಾನೇ ಮನೆಗೆ ತರಂಗ, ಸುಧಾಗಳನ್ನು ತರಿಸುತ್ತಿದ್ದರೂ, ಓದುವುದು ನಿಯಮಿತವಾಗಿದೆ ಎಂಬುದು ಪ್ರಾಮಾಣಿಕ ಅನಿಸಿಕೆ. ಯಾಕೆಂದುಕೊಂಡರೆ ಸಮಯ ಸಿಗದು ಎಂಬುದು ಪಿಳ್ಳೆ ನೆವ ಅಷ್ಟೇ. ಸಿಗುವ ಸಮಯವನ್ನು ಟಿವಿ, ಕಂಪ್ಯೂಟರ್‌ಗೆ ಕೊಟ್ಟು ಬಿಟ್ಟರೆ ಮತ್ತೆ ಸಮಯ ಸಿಗಬೇಕು ಎಲ್ಲಿಂದ?

ನಾನು ಹೇಳ ಹೊರಟದ್ದು ಇಂದಿನ ಇಂತಹ ಗಜಿಬಿಜಿ ಬದುಕಿನ ಬಗ್ಗೆ. ಈಗ ನಮ್ಮ ಮಕ್ಕಳಿಗಂತೂ ಓದು ಬಲು ದೂರವಾಗಿಬಿಟ್ಟಿದೆ. ಕನ್ನಡ ಬರಹಗಾರರ ಬಗ್ಗೆ ಒಂದಾದರೂ ಪ್ರಶ್ನೆಗೆ ಅವರು ಉತ್ತರಿಸಿದರೆ, ಅದೇ ಬಹು ದೊಡ್ಡ ಸಮಾಧಾನ ಎಂಬಂತಾಗಿದೆ. ಟಿವಿ ಒಂದು ರೀತಿಯಲ್ಲಿ ನಿಯಮಿತವಾಗಿ ನಮ್ಮೊಳಗಿನ ಬದಲಾವಣೆಗೆ ಕಾರಣವಾಗಿದ್ದರೆ, ಇಂದು ಕಂಪ್ಯೂಟರ್ ಮತ್ತು ಆ ಮೂಲಕವಾಗಿ ಇಂಟರ್ ನೆಟ್, ಮತ್ತೂ ಮುಂದೆ ಯೋಚಿಸಿದರೆ ಫೇಸ್ ಬುಕ್ ಗಳು ಇನ್ನಿಲ್ಲದಂತೆ ನಮ್ಮ ಬದುಕಿನ ಅಮೂಲ್ಯ ಸಮಯವನ್ನು ತಿನ್ನುತ್ತಿವೆ. ನೀವು ಫೇಸ್ ಬುಕ್‌ನಲ್ಲಿರುವ ಹೆಚ್ಚಿನ ಸ್ನೇಹಿತರನ್ನು ಕಛೇರಿಯಲ್ಲಿ ಗಮನಿಸಿದರೆ, ಅವರ ಕಂಪ್ಯೂಟರ್ ನಲ್ಲಿ ಫೇಸ್ ಬುಕ್ ಯಾವಾಗಲೂ ತೆರೆದುಕೊಂಡಿರುತ್ತದೆ. ಒಮ್ಮೊಮ್ಮೆ ನೀವು ಫೆಸ್ ಬುಕ್ ತೆರೆದಿರಿ ಎಂದರೆ, ನಿಮಗಿಷ್ಟ ಇದ್ದೋ, ಇಲ್ಲದೆಯೋ ಚಾಟ್ ಆರಂಭವಾದರೆ ಅದು ಘಂಟೆಗಟ್ಟಲೇ ಮುಂದುವರಿಯುವ ಅಪಾಯವಿರುತ್ತದೆ. ಇಷ್ಟಕ್ಕೇ ಸೀಮಿತವಾಗದೇ, ಇದು ಅನೇಕ ಸಲ, ಸಂಬಂಧದ ದಿಕ್ಕನ್ನೇ ಬದಲಾಯಿಸಿ ಬಿಡುವ ದುರಂತವಿರುತ್ತದೆ. ಇತ್ತೀಚೆಗೆ ಓದಿದ ಘಟನೆ ಈ ಕ್ಷಣದಲ್ಲಿ ನೆನಾಪಾಗುತ್ತದೆ. ಓರ್ವ ಯುವಕ ಫೇಸ್ ಬುಕ್‌ನಲ್ಲಿ ಯುವತಿಯೋರ್ವಳೊಂದಿಗೆ ಸ್ನೇಹ ಗಳಿಸುತ್ತಾನೆ. ಅವರ ಚಾಟ್ ಇಬ್ಬರನ್ನೂ ಪ್ರೇಮಿಸುವ ತನಕ ಒಯ್ಯುತ್ತದೆ. ಫೆಸ್ ಬುಕ್‌ನ ಯುವತಿಯ ಫೋಟೋ ನೋಡಿದ ಯುವಕ ಆಕೆಯನ್ನೇ ಕಲ್ಪಿಸಿಕೊಂಡಡು, ಕೊನೆಗೂ ಒಂದು ದಿನ ಇಬ್ಬರೂ ಬೇಟಿಯ ತೀರ್ಮಾನ ಮಾಡುತ್ತಾರೆ. ಅಂತೆಯೇ ಒಬ್ಬರನ್ನೊಬ್ಬರು ಸಂಧಿಸಿದಾಗ ಯುವಕನಿಗೆ ಅಚ್ಚರಿ. ಆಕೆ ಫೇಸ್‌ಬುಕ್ ನಲ್ಲಿ ಹಾಕಿದ ಫೋಟೋ ಬೇರೆಯದೇ ಆಗಿದ್ದು, ನೋಡಲು ಅಷ್ಟೇನೂ ಸುಂದರಿ ಅಲ್ಲ ಎಂದು ತಿಳಿದ ಆತ ಆಕೆಯನ್ನು ಇರಿದು ಕೊಲ್ಲುತ್ತಾನೆ ಮತ್ತು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ...! ಬೇಕಾ ಈ ದುರಂತ??

ಫೇಸ್ ಬುಕ್ ಕಮೆಂಟ್ ಗಳದ್ದೇ ಮತ್ತೊಂದು ಕಥೆ. ಸದ್ಯಕ್ಕೆ ಇಲ್ಲಿ ಯಾವುದೇ ನೀತಿ ಸಂಹಿತೆ ಇಲ್ಲ. ಯಾರು ಯಾರನ್ನು ಹೇಗೆ ಬೇಕಾದರೂ ಬಯ್ಯಬಹುದು ಎಂಬುದು ಅಘೋಷಿತ ನಿಯಮ.  ಈಗ ಚುನಾವಣೆಯ ಪರ್ವ. ಅನೇಕ 'ಬುದ್ದಿಜೀವಿ'ಗಳು ಈ ಮಾಧ್ಯಮದ ಮೂಲಕ, ಅನೇಕ ನಾಯಕರಿಗೆ ಬಾಯಿಗೆ ಬಂದಂತೆ ಬಯ್ದು ಚಪಲ ತೀರಿಸಕೊಳ್ಳುತ್ತಿದ್ದಾರೆ. ತನ್ನ ಕಾಲ ಕೆಳಗಿನ ಹೇಸಿಗೆ ಇವರಿಗೆ ಕಾಣಿಸದೇ, ಬೇರೆಯರ ಹುಳುಕನ್ನು ಅದಕ್ಕೆ ಕೈಕಾಲು ಸೇರಿಸಿ ವರ್ಣಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ.

ಒಂದು ಮನೆಯೊಳಗೆ ಕಾಲಿಟ್ಟರೆ, ಅಲ್ಲಿ ಈಗಷ್ಟೇ ಅ ಆ ಕಲಿಯುವ ಮಗುವಿನಿಂದ ಹಿಡಿದು ಅತೀ ಹಿರಿಯನ ತನಕೂ, ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ಮುಂದೆ ಕೀಲಿಸಿಕೊಂಡಿರುತ್ತಾರೆ. ಎಲ್ಲರದ್ದೂ ಫೇಸ್ ಬುಕ್ ಪ್ರಪಂಚ. ಅದೊಂದು ಇಂದಿನ ವರ್ಣ ಮಯ ಬದುಕೇ ಆಗಿಬಿಟ್ಟಿದೆ. 

ಹಾಗೆಂದು ಇದು ಹೀಗೆಯೇ ಕೆಟ್ಟದ್ದು ಎಂಬುದು ಖಂಡಿತ ನನ್ನ ವಾದವಲ್ಲ. ಇದೇ ಫೇಸ್ ಬುಕ್ ಮೂಲಕ ಅದೆಷ್ಟೋ ಒಳ್ಳೆಯ ಕೆಲಸಗಳಾಗಿದ್ದು ನಾನೂ ಗಮನಿಸಿದ್ದೇನೆ. ಅನೇಕ ಸಮಾನ ಮನಸ್ಕರು ಒಂದಾಗಿ, ಸಾಮಾಜಿಕ ಕಾಳಜಿ ಮೆರೆದ ಉದಾರಹರಣೆಗಳಿವೆ. ಅನೇಕ ಸೋಶಲ್ ನೆಟ್ ವರ್ಕ್ ತಂಡಗಳು ಸಮಾಜದ ಒಳಿತಿಗಾಗಿ, (ಉದಾ:- ಏಡ್ಸ್ ಜಾಗೃತಿ, ಅನಾಥ ಮಕ್ಕಳ ಕಲ್ಯಾಣ, ಸಾಹಿತ್ಯಿಕವಾಗಿ ಗುಂಪು ರಚನೆ) ಶ್ರಮಿಸಲೂ ಇದೇ ಫೇಸ್ ಬುಕ್ ಕಾರಣವಾಗಿದೆ. ಆದರೆ ಇಲ್ಲಿ ಒಳಿತು ಕೆಡುಕುಗಳ ವಿಮರ್ಶೆಗೊಳಗಾಗದೇ,ಅದನ್ನೇ ಒಂದು ಗೀಳಾಗಿ ಹಚ್ಚಿಕೊಂಡು ಹಾಳಾಗುವ ವರ್ಗ ದೊಡ್ಡದಿದೆ. ಅದು ಖೇದಕರ ಅಷ್ಟೇ.

ಇನ್ನು ಇತ್ತೀಚೆಗೆ ಮನೆಯೊಳ ಹೊಕ್ಕರೆ ರಾತ್ರಿ ೧೧ರ ತನಕ ಊಟ-ನೀರಿಲ್ಲದಂತೆ ಮಾಡುತ್ತಿರುವುದು ಐಪಿಎಲ್. ಇತ್ತೀಚೆಗೆ ಮಂಗಳೂರು ನಗರದ ಪುರಭವನದಲ್ಲಿ ಒಂದು ರಂಗ ಪ್ರವೇಶ ಇತ್ತು. ಅದಕ್ಕೆ ಬರುವಂತೆ ನಾನು ಓರ್ವ ಸ್ನೇಹಿತರಲ್ಲಿ ವಿನಂತಿ ಮಾಡಿದೆ. ಎಷ್ಟು ಘಂಟೆಗೆ ಅಂದರು. ಸಂಜೆ ೫.೩೦ಕ್ಕೆ ಅಂದೆ. ತಕ್ಷಣ ಅವರೆಂದರು, ಇಲ್ಲ ಬರಲಾಗದು, ಐಪಿಎಲ್ ಮ್ಯಾಚ್ ನೋಡಬೇಕು ಎಂದರು. ಇದು ಐಪಿಎಲ್ ಮಾಡಿದ ಪ್ರಭಾವ. ನಮ್ಮೊಳಗಿನ ಹುಚ್ಚನ್ನು ಇದು ಎಷ್ಟರ ಮಟ್ಟಿಗೆ ಮೂರ್ಖರನ್ನಾಗಿಸಿದೆ ಎಂದರೆ, ಮನೆಯೊಳಗೆ ಸಹಜವಾಗಿ ಆಗಬೇಕಾಗುವ ಊಟ-ತಿಂಡಿಗಳ ಸಮಯವನ್ನೂ ಇದು ತಿಂದು ಹಾಕುತ್ತಿದೆ. ಅಥವಾ ಮನೆಯೊಳಗೆ ಯಾವುದಾದರೂ ಬಂಧು ಬರಬೇಕೆಂದಿದ್ದರೆ ಮ್ಯಾಚ್ ಆರಂಭಕ್ಕಿಂತಲೂ ಮುಂಚೆ ಬಂದು ಹೋದರೆ ಸಾಕೆಂಬ ಮನ ಸ್ಥಿತಿಗೂ ನಮ್ಮನ್ನು ತಳ್ಳಿಬಿಟ್ಟಿದೆ. 

ಇಂದು ನೀವು ಯಾರಲ್ಲೇ ಕೇಳಿ. ಅಯ್ಯೋ ಪುರುಸೊತ್ತೇ ಇಲ್ಲ ಎಂಬ ಉದ್ಘಾರ ಸಾಮಾನ್ಯವಾಗಿರುತ್ತದೆ. ದುರಂತವೆಂದರೆ ಇವರ ಹೆಚ್ಚಿನ ಸಮಯವನ್ನು ತಿನ್ನುವುದು ಫೆಸ್ ಬುಕ್, ವಾಟ್ಸ್ ಆಪ್, ಟಿವಿಯಂತಹ 'ಜೀವನ'ಗಳು!! ಈ ಮೂಲಕ ನಾವಿಂದು ಸ್ನೇಹಿತರನ್ನು, ಬಂಧುಗಳನ್ನು, ನೆರೆಹೊರೆಯವರನ್ನು......ಮನೆಯವರನ್ನೂ ಕಳೆದುಕೊಳ್ಳುತ್ತೇವೆ.

ನಾವು ಯೋಚಿಸಿ ಎಲ್ಲಕ್ಕೂ ಒಂದು ಮಿತಿ ಹಾಕಿಕೊಳ್ಳಬೇಡವೇ..??

No comments:

Post a Comment