Wednesday 21 May 2014

ಕಾಂಗ್ರೆಸ್ ಸೋಲಿಗೆ 'ಯಾರೋ'ಕಾರಣರಲ್ಲ..!!

ಚುನಾವಣೆ ಮತ್ತು ಫಲಿತಾಂಶದ ವಿಚಾರದಲ್ಲಿ ಮತ್ತೊಂದು ಘಟನೆಯನ್ನೂ ಗಮನಿಸಿ. ರಾಹುಲ್ ಮತ್ತು ಸೋನಿಯಾ ಇಬ್ಬರೂ ತಮ್ಮ ಪದವಿಗೆ ರಾಜೀನಾಮೆಗೆ ನೀಡಲ ಮುಂದಾದರು-ಸೋಲಿನ ಹೊಣೆ ಹೊತ್ತು!!. ಆದರೆ ಅಲ್ಲಿ ರಾಹುಲ್‌ಗಿಂತ ಎರಡು ಪಟ್ಟು ವಯಸ್ಸಾದವರನ್ನೂ ಹಿಡಿದು, ಪ್ರತಿಯೊಬ್ಬರೂ ಈ ಹೊಣೆಯನ್ನು ರಾಹುಲ್ ಹೊರಬೇಕಾಗಿಲ್ಲ ಎಂದರು. ಜನಪ್ರತಿನಿಧಿಯ ಪ್ರದಕ್ಷಿಣೆಯಲ್ಲಿ ನನ್ನ ಈ ವಾರದ ಬರಹ.... 

ಜನತೆಯ ಕಣ್ಣುಗಳಲ್ಲಿ ಕೇವಲ ನಿರೀಕ್ಷೆಗಳು ತುಂಬಿವೆ!.

ನರೇಂದ್ರ ಮೋದಿ ಎಂಬ ಒಬ್ಬ ವ್ಯಕ್ತಿ ರಾಜಕಾರಣದ ದಿಕ್ಕನ್ನು ಈ ರೀತಿ ಬದಲಿಸಬಹುದು ಎಂಬ ಕಲ್ಪನೆಯೇ ಇರದೇ, ಇಂದು ಕಾಂಗ್ರೆಸ್ ಧೂಳೀಪಟಕ್ಕೆ ಕಾರಣವಾದದ್ದು, ಓರ್ವ ನಾಯಕ ಸಮರ್ಥನಾಗಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ.ಹಾಗೆಂದು ಎಲ್ಲವನ್ನೂ ಹೀಗೇ ಎಂದು ತೀರ್ಮಾನಿಸಲು ಇದು ಸಮಯವಲ್ಲ. ಜನರ ಅಪಾರ ನಿರೀಕ್ಷೆಗಳಿಗೆ ಮೋದಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಲೇ ಬೇಕು.

ಈ ಸಲ ಮೋದಿಯವರ ಆಯ್ಕೆಯ ಹಿನ್ನೆಲೆಯಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಬಹುದು. ಆದರೆ ಅಷ್ಟೇ ಹೊಸ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಮೋದಿ ಅಲೆ ಒಪ್ಪಲೇ ಬೇಕಾದ ಸತ್ಯ. ಹಾಗೆಂದು ಸೋತು ಸುಣ್ಣವಾದ ನಾಯಕರ ಬಹು ದೊಡ್ಡ ಪಡೆಯೇ ಇದೆ.ಜಿಲ್ಲಿ ಮುಖ್ಯವಾಗಿ ಕಾಣುವ ಸೋಲು ಕಾಂಗ್ರೆಸ್‌ನದ್ದು. ಕೇಂದ್ರದಲ್ಲಿ ಯುಪಿಎ ಎಂಬ ಕಾಂಗ್ರೆಸ್ ನೇತ್ರತ್ವದ ಸರಕಾರವಿದ್ದೂ, ಅದರ ಮಂತ್ರಿಮಂಡಳದ ಸುಮಾರು ಅರ್ಧದಷ್ಟೂ ನಾಯಕರು ಗೆದ್ದಿಲ್ಲವೆಂದರೆ ಆಲೋಚಿಸಬೇಕು. ಉತ್ತರ ಪ್ರದೇಶದಂತಹ ಒಂದೇ ರಾಜ್ಯದಲ್ಲಿ ಗೆದ್ದಷ್ಟೂ ನಾಯಕರನ್ನು ಗೆಲ್ಲಿಸುವಲ್ಲಿ ಇಡೀ ದೇಶದ ಕಾಂಗ್ರೆಸ್ ಸೋತಿದೆ. ಬಹುಶ: ಇಷ್ಟು ಹೀನಾಯ ಸೋಲನ್ನು ಕಾಂಗ್ರೆಸ್ ನಿರೀಕ್ಷಿಸರಲೇ ಇಲ್ಲ. ಅಲ್ಲಿ ಕೊರತೆಯಾಗಿದ್ದು ಏನು ಎಂದುಕೊಂಡರೆ, ಅನೇಕ ಪ್ರಶ್ನೆಗಳು ಮತ್ತೆ ಹುಟ್ಟಿಕೊಳ್ಳುತ್ತವೆ.

ಒಂದು ಸಣ್ಣ ಉದಾಹರಣೆ. ಮಂಗಳೂರಿನಲ್ಲಿ ಮೋದಿ ಮತ್ತು ರಾಹುಲ್ ಇಬ್ಬರೂ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ರಾಹುಲ್ ಚುನಾವಣಾ ಭಾಷಣದ ಮರುದಿನ ಪತ್ರಿಕೆಗಳಲ್ಲಿ ಎರಡೂ ಸಭೆಗಳ ಛಾಯಾಚಿತ್ರಗಳನ್ನು ಪ್ರಕಟಿಸಿ, ಕೆಲವು ಮಾಧ್ಯಮಗಳು ಎರಡರಲ್ಲೂ ಸೇರಿದ್ದ ಜನರನ್ನು ಅಂದಾಜಿಸಿದ್ದುವು. ರಾಹುಲ್ ಸಭೆಗೆ ಜನರೇ ಇರಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಮರುದಿನ ಕಾಂಗ್ರೆಸ್ ನಾಯಕರು, ಇದೆಲ್ಲವೂ ಮಾಧ್ಯಮ ಸೃಷ್ಟಿ, ಜನ ಸಾಗರವೇ ರಾಹುಲ್ ರ್‍ಯಾಲಿಯಲ್ಲಿತ್ತು ಎಂಬ ಸಮಜಾಯಿಷಿ ನೀಡಿದ್ದರು. ಇಲ್ಲಿ ವಾಸ್ತವದಲ್ಲಿ ರಾಹುಲ್ ರ್‍ಯಾಲಿ ಸಂಪೂರ್ಣ ವಿಫಲವಾಗಿತ್ತು. ಆದರೆ ಕಾಂಗ್ರೆಸ್ಸಿಗರು ಯಾವ ಮನ:ಸ್ಥಿತಿಯಲ್ಲಿದ್ದರು ಎಂದರೆ   ಕಣ್ಣೆದುರಿಗಿರುವ ಸತ್ಯವನ್ನೂ ಒಪ್ಪಿಕೊಳ್ಳಲು ಅವರಿಗೆ ಆಗುತ್ತಿರಲ್ಲ.
ಚುನಾವಣೆ ಮತ್ತು ಫಲಿತಾಂಶದ ವಿಚಾರದಲ್ಲಿ ಮತ್ತೊಂದು ಘಟನೆಯನ್ನೂ ಗಮನಿಸಿ. ರಾಹುಲ್ ಮತ್ತು ಸೋನಿಯಾ ಇಬ್ಬರೂ ತಮ್ಮ ಪದವಿಗೆ ರಾಜೀನಾಮೆಗೆ ನೀಡಲ ಮುಂದಾದರು-ಸೋಲಿನ ಹೊಣೆ ಹೊತ್ತು!!. ಆದರೆ ಅಲ್ಲಿ ರಾಹುಲ್‌ಗಿಂತ ಎರಡು ಪಟ್ಟು ವಯಸ್ಸಾದವರನ್ನೂ ಹಿಡಿದು, ಪ್ರತಿಯೊಬ್ಬರೂ ಈ ಹೊಣೆಯನ್ನು ರಾಹುಲ್ ಹೊರಬೇಕಾಗಿಲ್ಲ ಎಂದರು. ಬದಲಿಗೆ ಈ ಸೋಲಿಗೆ ಅವರು ಹೊಣೆ ಮಾಡಿದ್ದು ಪರೋಕ್ಷವಾಗಿ ಮನಮೋಹನ್ ಸಿಂಗ್ ಅವರನ್ನು!!. ಕಾಂಗ್ರೆಸ್‌ಮಟ್ಟಿನ ದುರಂತ ನೋಡಿ. ಈ ನೆಹರೂ ಕುಟುಂಬಕ್ಕೆ ನಿಷ್ಠರಾದಷ್ಟು ಅವರು ಎಂದಿಗೂ ದೇಶದ ಜನತೆಗೋ, ಪ್ರಜಾಪ್ರಭುತ್ವ ವ್ಯವಸ್ಥೆಗೋ ನಿಷ್ಠರಾಗಲೇ ಇಲ್ಲ. ಮನ ಮೋಹನ್ ಹೇಗೆ ಆಡಳಿತ ನಡೆಸಿದ್ದರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಅವರು ಕೇವಲ ಸೋನಿಯಾ ಕ್ರಪಾಪೋಷಿತ ಪ್ರಧಾನಿಯಾಗಿದ್ದರು ಎಂಬುದು, ಎಲ್ಲಿಯ ತನಕ ಅವರ ಕೈಗಳನ್ನು ಕಟ್ಟಿಹಾಕಲಾಗಿತ್ತು ಎಂದರೆ ಅವರ ನಿರ್ಧಾರಗಳನ್ನು ರಾಹುಲ್ ಗಾಂಧಿ ಸಹಾ ಪ್ರಶ್ನಿಸುತ್ತಿದ್ದರು ಮತ್ತು ಇಡೀ ಸರಕಾರವೇ ಅವರ ಹಿಂದಿದ್ದರೂ, ರಾಹುಲ್ ಹೇಳಿ ಮನಮೋಹನರು ನಿರ್ಧಾರಗಳನ್ನು ಬದಲಿಸುತ್ತಿದ್ದರು ಎಂಬುದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ!. ಹೀಗಿದ್ದೂ ಮನಮೋಹನರನ್ನು ಇಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಕಾಂಗ್ರಸಿಗರು ಮುಗಿಬೀಳುತ್ತಿದ್ದಾರೆ. ಕಾಂಗ್ರೆಸಿಗರು ತಿಳಿದಿರಲೇ ಬೇಕಾದ ಸತ್ಯ ಮತ್ತೊಂದಿದೆ. ಅದು ಮನ ಮೋಹನರಲ್ಲದೇ ಬೇರಾವೇ 'ಸ್ವಂತಿಕೆ' ಇದ್ದ ವ್ಯಕ್ತಿ ಪ್ರಧಾನಿ ಪಟ್ಟದಲ್ಲಿದ್ದಿದ್ದರೆ, ಎರಡು ಅವಧಿಗೆ ಪ್ರಧಾನಿಯಾಗುವುದು ಕಷ್ಟವಿತ್ತು! ಒಂದೊಮ್ಮೆ ಇದ್ದಿದ್ದರೂ, ಸೋನಿಯಾ-ರಾಹುಲ್ ಕೇವಲ ಪಕ್ಷಚಟುವಟಿಕೆಗೆ ಮಾತ್ರ ಸೀಮಿತವಾಗಿರುತ್ತಿದ್ದರು.!!. ಇಂತಹ ಪ್ರಾಥಮಿಕ ಹಂತದ ತಪ್ಪುಗಳೇ ಇಂದು ಕಾಂಗ್ರೆಸ್‌ಗೆ ಈ ಹೀನಾಯ ಸ್ಥಿತಿ ಒದಗಿಸಿದೆ.
ಕಾಂಗ್ರೆಸ್‌ನ ಇನ್ನೊಂದು ಸಂಸ್ಕೃತಿಯ ಬಗ್ಗೆ ಇಲ್ಲಿ ಹೇಳಲೇ ಬೇಕು. ಮೊನ್ನೆ ಫಲಿತಾಂಶ ಪ್ರಕಟವಾಗುತ್ತಲೇ ಮತ್ತೆ ಓರ್ವ  ಕಾಂಗ್ರೆಸ್ ನಾಯಕ, ಶಾಸಕ ಅದೇ ಹಳೆಯ ಮಾತನ್ನು ಎಸೆದುಬಿಟ್ಟರು. ಈ ಸಲದ ಚುನಾವಣೆಯನ್ನು ನಾವು ಸತ್ಯದಿಂದ ಎದುರಿಸಿದರೆ, ಭಾಜಪ ಹಣ-ಹೆಂಡ ಹಂಚಿ ಚುನಾವಣೆ ಗೆದ್ದಿದೆ!!. ಈ ಶಾಸಕ ಮಹಾಶಯ ಇನ್ನೂ ಜನರನ್ನೇ ಜರೆಯುವುದನ್ನು ಬಿಟ್ಟಿಲ್ಲ!. ಅಂದರೆ ಮತದಾನ ಮಾಡಿದ, ಅಥವಾ ಕಾಂಗ್ರೆಸ್ ವಿರೋಧಿಗಳಿಗೆ ಮತದಾನ ಮಾಡಿದ ಮತದಾರರೆಲ್ಲರೂ ಹಣ ಪಡೆದು, ಹೆಂಡ ಕುಡಿದು ಮತದಾನ ಮಾಡಿದ್ದರು ಎಂಬುದು ಇವರ ಮಾತಿನ ಅರ್ಥ. ದೇಶದಲ್ಲಿ ಇಂದು ಯುಪಿಎ ಗೆದ್ದ ೫೯ಕ್ಷೇತ್ರದ ಮತದಾರರನ್ನು ಬಿಟ್ಟು, ಉಳಿದ ಕ್ಷೇತ್ರದಲ್ಲೆಲ್ಲಾ ಈ ಅವ್ಯವಾಹಾರ ನಡೆದಿದೆ ಎಂಬುದು ಅವರ ಮಾತಿನ ಮರ್ಮವಾದರೆ, ಮತ್ತು ಇಂದಿಗೂ ಪ್ರಜಾಪ್ರಭುತ್ವ ಭಾgತದಲ್ಲಿ ಹೆಂಡ-ಹಣದಿಂದಲೇ ನಾಯಕರು ಗೆಲ್ಲುತ್ತಿದ್ದಾರೆ ಎಂಬುದಾದರೆ, ಕಳೆದ ಚುನಾವಣೆಯಲ್ಲಿ ಇವರು ಗೆದ್ದದ್ದು...??? 

ದುರಂತವೆಂದರೆ ಇಂತಹ ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ!. ಆದರೆ ಜನ ಮಾತ್ರ ಇದರ ಗಂಭೀರತೆಯನ್ನು ಅಂತಹ ನಾಯಕರಿಗೆ ತೋರಿಸಲು, ಮತ್ತೊಂದು ಚುನಾವಣೆಯ ತನಕವೂ ಕಾದು ಕೂತಿರುತ್ತಾರೆ. ಈ ಸಲವೂ ಆಗಿದ್ದು ಅದೇ. ಮತ್ತು ಇದು ಪಕ್ಷಾತೀತವಾಗಿ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಮುಖ್ಯವಾಗಿ ರಾಜಕಾರಣಿಗಳು ಅರಿತುಕೊಳ್ಳಲೇ ಬೇಕಾದ ಮತ್ತೊಂದು ಸತ್ಯವೆಂದರೆ ಇಂದು ಸಾರ್ವಜನಿಕರ ನೆನಪಿನ ಶಕ್ತಿ 'ದೀರ್ಘ'ಕಾಲದ್ದು!
ಸೋನಿಯಾ-ರಾಹುಲ್ ಪರ್ವದ ಬಗ್ಗೆ ಯೋಚಿಲೇ ಬೇಕು. ಅವರ ರಾಜೀನಾಮೆ ಪ್ರಹಸನ ಮತ್ತು ಅವರೇ ಮುಂದೆಯೂ ಪಕ್ಷದ ಚುಕ್ಕಾಣಿ ಹಿಡಿಯುವಲ್ಲಿ ಯಾರಿಗೂ ಯಾವುದೇ ಅನುಮಾನಗಳಿರಲಿಲ್ಲ. ಅದೇ ಆಗಿದೆ. ಅಂದರೆ ಇಂದು ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಎಂದರೆ, ಯಾರೇ ಪ್ರಧಾನಿಯಾಗಲಿ, ಯಾರೇ ಚುನಾವಣೆಗೆ ಗೆಲ್ಲಲಿ, ತಮ್ಮ ಸ್ವಂತಿಕೆಯನ್ನು ಈ ನೆಹರೂ ಕುಟುಂಬಕ್ಕೆ ಒಪ್ಪಿಸಿಯೇ ಇರಬೇಕಾಗುತ್ತದೆ ಎಂಬುದು. ಇದಕ್ಕೆ ತಾಜಾ ಉದಾಹರಣೆಯೂ ಮತ್ತೊಂದಿದೆ. ಲೋಕಸಭಾ ಚುನಾವಣೆಯ ಸೋಲಿನ ನಂತರ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲು ಮಾಡಿದ್ದು ತಮ್ಮ ಪಟ್ಟ ಗಟ್ಟಿಮಾಡಿಕೊಳ್ಳುವ ಪ್ರಯತ್ನ. ಎಲ್ಲರಿಗೂ ತಿಳಿದಿರುವ ಸತ್ಯ ಎಂದರೆ, ಕಾಂಗ್ರೆಸ್ ಏನಾದರೂ ದೇಶದಲ್ಲಿ ಈ ರೀತಿಯ ಹೀನಾಯ ಸೋಲನ್ನು ಅಪ್ಪಿಕೊಳ್ಳದೇ, ಸಾಧಾರಣ ಸಾಧನೆಯನ್ನಾದರೂ ಮಾಡಿ, ಕರ್ನಾಟಕದಲ್ಲಿ ಈ ಸಾಧನೆ ಆಗಿದ್ದಿದ್ದರೆ, ಸಿದ್ಧರಾಮಯ್ಯ ಈಗಾಗಲೇ ಪದತ್ಯಾಗ ಮಾಡಿಯಾಗಿರಬೇಕಿತ್ತು. ಅವರ ಅದ್ರಷ್ಟ, ಒಂಭತ್ತಾದರೂ ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದತು. ದೆಹಲಿಗೆ ಓಡಿದ ಸಿದ್ದರಾಮಯ್ಯ ಮಾಡಿದ ಮೊದಲ ಕೆಲಸ, ತನ್ನ ಪಟ್ಟದ ಗಟ್ಟಿತನದ ಖಾತ್ರಿ. ಅದು ಸಿಕ್ಕ ನಂತರವೇ ಅವರು ಮರಳಿ ಬೆಂಗಳೂರಿಗೆ ಬಂದು ನಿರಾಳವಾದರು. ಹೈಕಮಾಂಡ್ ಇರಬೇಕು ನಿಜ. ಆದರೆ ಎಲ್ಲಿಯ ತನದ ಅದು ಸೋನಿಯಾ ಮಯವಾಗಿದೆ ಎಂದರೆ, ಕರ್ನಾಟಕ ಜನತೆ, ತನ್ನದೇ ಸರಕಾರದ ಶಾಸಕ-ಸಚಿವರು, ಬಹುಮತ...ಇತ್ಯಾದಿಗಳೆಲ್ಲವೂ ಸೋನಿಯಾ ತೀರ್ಮಾನದ ನಂತರ ಬರುತ್ತವೆ ಎಂಬುದನ್ನು ಕಾಂಗ್ರೆಸ್ ಇತ್ತೀಚೆಗೆ ಹೆಜ್ಜೆ ಹೆಜ್ಜೆಗೂ ಜನತೆಗೆ 'ಮನವರಿಕೆ'ಮಾಡಿಕೊಟ್ಟಿದೆ!.

ಇಲ್ಲಿ ಒಟ್ಟಾರೆಯಾಗಿ ಪರಿಸ್ಥಿತಿಯನ್ನು ಗಮನಿಸಿದರೆ, ಮೋದಿ ಅಲೆ ಎಷ್ಟು ಕೆಲಸ ಮಾಡಿದೆಯೋ, ಅಷ್ಟೇ ಪೂರಕ ವಾತಾವರಣವನ್ನು ಕಾಂಗ್ರೆಸ್ ಸೋಲಿಗೆ ಒದಗಿಸಿದ್ದು, ಕಾಂಗ್ರೆಸ್ ವಿರೋಧಿ ಅಲೆ!!. ಕಾಂಗ್ರೆಸ್ ಪ್ರತೀ ಹೆಜ್ಜೆಯಲ್ಲೂ ಹೈಕಮಾಂಡ್ ಜಪ ಮಾಡುತ್ತಲೇ ಕೆಲಸ ಮಾಡಿತೇ ಹೊರತು, ಒಮ್ಮೆಯೂ ಅದು ಜನರ ನಡುವೆ ಬೆರೆಯಲೇ ಇಲ್ಲ. ಏರುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಸೋಲು, ತನ್ನದೇ ಅಂಗಪಕ್ಷಗಳ ನಾಯಕರ ಭ್ರಷ್ಟಾವಾರವನ್ನೂ ಸಹಿಸಿಕೊಂಡಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ತನ್ನದೇ ತೀರ್ಮಾನಗಳಿಗೆ ಬದ್ಧವಾಗಿ, ಜನರ ನಾಡಿಮಿಡಿತಕ್ಕೆ ಕನಿಷ್ಠ ಆದ್ಯತೆಯನ್ನೂ  ನೀಡದ್ದು...ಹೀಗೆ ಪಟ್ಟಿ ಉದ್ದವಾಗಿದೆ.
ಕಾಂಗ್ರೆಸ್ ಪಾಲಿಗೆ ಮತ್ತೊಂದು ಆಘಾತ ನೀಡಿದ್ದು, ಪಕ್ಷದೊಳಗಿನ ನಾಯಕರ ಭಿನ್ನಮತ. ಉಡುಪಿ ಮತ್ತು ಮಂಡ್ಯ ಕ್ಷೇತ್ರಗಳು ತಕ್ಷಣಕ್ಕೆ ಹೊಳೆಯುವ ಉದಾಹರಣೆಗಳು ಎನ್ನಲಾಗುತ್ತದೆ!. ಎರಡೂ ಕಡೆ ಪಕ್ಷದೊಳಗೇ ಒಂದು ಗೊಂದಲವಿತ್ತು. ಇದು ಒಳಗೊಳಗೇ ಗುಸು ಗುಸು ಆಗಿ, ಕೊನೆಯ ಕ್ಷಣದ ವರೆಗೂ ಗೊಂದಲವಿತ್ತು ಎಂಬ ಹೇಳಿಕೆಯೂ ಕೇಳಿಬರುತ್ತದೆ!. ಇದೆಲ್ಲವೂ ಮೋದಿ ಅಲೆಗೆ ಪೂರಕಾಗಿ ಮತ್ತೆ ಮತ್ತೆ ಶಕ್ತಿ ನೀಡಿದುವು.

ಈ ಎಲ್ಲಾ ಅಂಶಗಳೊಂದಿಗೆ ಕಾಂಗ್ರೆಸ್ ನಾಯಕರು ತಮ್ಮೊಳಗೆ ತಾವೇ ನಮ್ಮನ್ನು ಹಿಡಿದಿಡುವವರು ಯಾರೂ ಇಲ್ಲವೆಂಬಂತೆ ಉದ್ದಟತನವನ್ನು ತೋರಿದ್ದರು. ಉದಾಹರಣೆಗೆ ಮಂಗಳೂರಿನಲ್ಲಿ ಜನಾರ್ದನ ಪೂಜಾರಿಯವರು ಹೋದೆಡೆಯಲ್ಲೆಲ್ಲಾ ನನ್ನ ವಿರೋಧಿ ಮೋದಿ, ನಳಿನ್ ಕುಮಾರ್ ಕಟೀಲ್ ಅಲ್ಲ ಎಂದೇ ಹೇಳುತ್ತಿದ್ದರು. ಆ ಕ್ಷಣಕ್ಕೆ ಅವರ ಮನದಲ್ಲಿದ್ದುದು ಏನೇ ಯೋಜನೆಯಾಗಿದ್ದರೂ, ಬುದ್ದಿವಂತ ಮತದಾರ ಇವರ ಮಾತುಗಳನ್ನು ಕೇಳಿ ಒಳಗೊಳಗೇ ನಕ್ಕಿದ್ದ!. ಮತ್ತು ಮೋದಿ ವಿರೋಧಿ ಅಲೆಯ ಸೃಷ್ಟಿಗೂ ಕಾಂಗ್ರೆಸ್ ಹಿಡಿದ ಮಾರ್ಗ, ಸರ್ವ ಸಮ್ಮತವಾಗಿರಲಿಲ್ಲ. ಅದಕ್ಕೆ ಪೂರಕವೆಂಬಂತೆ ಇವರ ರಣತಂತ್ರ ಸಾಗಿದ್ದು. ರಾಜ್ಯದಲ್ಲಿಯೂ ಕಾಂಗ್ರೆಸ್ ನಾಯಕರು ತಮ್ಮ ಸಾಧನೆಯನ್ನು ಹೇಳಿಕೊಳ್ಳಲು ಎಂದೂ ಧೈರ್ಯ ತೋರಲಿಲ್ಲ. ಕೇವಲ ಮೋದಿ ವಿರೋಧಿ ಹೇಳಿಕೆಗಳಲ್ಲಿಯೇ ಕಾಲ ಕಳೆದರು. ಇದೇ ರೋಗ ಕಾಂಗ್ರೆಸ್ಸಿಗರಿಗೆ ದೇಶ ವ್ಯಾಪಿಯಾಗಿ ಆವರಿಸಕೊಂಡದ್ದು ಎದ್ದು ಕಾಣುತ್ತಿತ್ತು. ಉದಾಹರಣೆಗೆ ಮೋದಿಯವರನ್ನು ಹಳಿಯುವಲ್ಲಿ ನರಹಂತಕ ಎಂಬಂತ ಕೆಳದರ್ಜೆಯ ಪದಪ್ರಯೋಗವನ್ನು ಒಂದು ರಾಜ್ಯದ ಮುಖ್ಯಮಂತ್ರಿಯೇ ಮಾಡಿದ್ದನ್ನು ನಾವೂ ಕೇಳಿದ್ದೇವೆ.

ಹೀಗೆ ಎಲ್ಲಾ ಅಂಶಗಳೂ ಮೋದಿ ಪಡೆಗೆ ನೆರವಾಗುತ್ತಲೇ ಹೋದುವು. ಕಾಂಗ್ರೆಸ್ ಸಾಧನೆಯನ್ನೂ ಸೇರಿ ಎಲ್ಲಾ ರಂಗಗಳಲ್ಲಿಯೂ ಸೋಲೊಪ್ಪಿಕೊಳ್ಳುತ್ತಲೇ, ಅಧೀರತೆಯಿಂದಲೇ ಈ ಚುನಾವಣೆಯನ್ನು ಎದುರಿಸಿದ್ದು ಮೇಲ್ನೋಟಕ್ಕೇ ಕಂಡು ಬರುತ್ತಿತ್ತು. ಪರಿಣಾಮವಾಗಿ ಬುದ್ದಿವಂತ ಮತದಾರ ತನ್ನ ಚಾಣಾಕ್ಷತೆಯನ್ನು ತೋರಿಸಿದ್ದಾನೆ. ಮೋದಿ ಪ್ರಧಾನಿಯಾಗುತ್ತಿದ್ದಾರೆ.

ಇಲ್ಲಿ ಕರ್ನಾಟಕದ ಮಟ್ಟಿಗೆ ಹೇಳಲೇ ಬೇಕಾದ ಮತ್ತೂ ಒಂದು ಅಂಶವಿದೆ. ಕೇವಲ ಒಂದೇ ವರ್ಷದ ಕೆಳಗೆ ಇದ್ದ ಕಾಂಗ್ರಸ್ ಅಲೆಯಲ್ಲಿ ಹೆಚ್ಚೆಂದರೆ ಎಷ್ಟು ಬದಲಾವಣೆ ಬರಬಹುದು ಎಂಬ ಅತೀ ಆತ್ಮವಿಶ್ವಾಸ ಕಾಂಗ್ರೆಸಿಗರನ್ನು ಆಳುತ್ತಿತ್ತು. ಇಂದು ಮತದಾರ ಎಷ್ಟು ಪ್ರಬುದ್ಧನಾಗಿದ್ದಾನೆ ಎಂದರೆ ಕೇವಲ ಒಂದೇ ತಿಂಗಳಲ್ಲಿ ಆತ ತನ್ನ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬಲ್ಲ!!. ಇದೇ ಆತ್ಮವಿಶ್ವಾಸದಿಂದ ಆತ ಪ್ರತೀ ಬಾರಿಯೂ ಯೋಚಿಸಿ ಮತ ನೀಡುತ್ತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬರುತ್ತಿದೆ. ಇದಕ್ಕೂ ಉದಾಹರಣೆ ಎಂದರೆ, ಭಾಜಪಕ್ಕೆ ಹರಿವಾಣದಲ್ಲಿಟ್ಟು ಕೊಟ್ಟ ಅಧಿಕಾರಕ್ಕೆ, ಅವರು ಕರ್ನಾಟಕದ ಜನತೆಗೆ ನೀಡಿದ ದ್ರೋಹಕ್ಕೆ ಪಾಠ ನೀಡಲು ಅವನು ವರ್ಷದ ಕೆಳಗೆ ಕಾಂಗ್ರೆಸ್ ಆಯ್ಕೆ ಮಾಡಿದ್ದ!. ಇದರ ಒಳ ಮರ್ಮ ಅರಿಯದೇ ಕಾಂಗ್ರೆಸ್ ಇನ್ನೂ ಅದೇ ವಿಜಯ ಗುಂಗಿನಲ್ಲಿ ತೇಲಿದ್ದೇ, ಈ ಫಲಿತಾಂಶಕ್ಕೆ ಮತ್ತೂ ಒಂದು ಕಾರಣ.

ಒಟ್ಟಾರೆಯಾಗಿ ಕಾಂಗ್ರೆಸ್ ಹೀನಾಯವಾದ ಸೋಲು ಕಂಡಿದೆ. ತನ್ನ ಎಂದಿನ ಪರಂಪರೆಯನ್ನು ಕಾಯ್ದುಕೊಂಡಿರುವ ಅದು ಮತ್ತೆ ರಾಹುಲ್-ಸೋನಿಯಾ ರಕ್ಷಣೆಯೊಂದನ್ನೇ ಅಜೆಂಡಾವಾಗಿರಿಸಿಕೊಂಡು, ಅದೇ ತಪ್ಪನ್ನು ಪುನರಪಿ ಮಾಡುತ್ತಿದೆ. ಯಾಕೆ, ಶತಮಾನದ ಇತಿಹಾಸದ ಕಾಂಗ್ರೆಸ್‌ಗೆ ಈ ಇಬ್ಬರು ವಿಫಲ ನಾಯಕರನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲವೇ???

ಎಲ್ಲಕ್ಕೂ ಪೂರಕವೆಂಬಂತೆ ಮೊಬೈಲ್‌ನಲ್ಲಿ ಬಂದ ಎಸ್‌ಎಂಎಸ್ ಒಂದು ಹೀಗಿದೆ:- ಮನ ಮೋಹನ್ ಸಿಂಗ್ ಅವರ ಪತ್ನಿ, ಚುನಾವಣಾ ಪಲಿತಾಂಶ ಪ್ರಕಟವಾಗುತ್ತಲೇ ಸೋನಿಯಾ ಮನೆಗೆ ಹೋದರಂತೆ! ಯಾಕೆಗೊತ್ತೇ? ಅವರ ಬಳಿ ಇದ್ದ ತಮ್ಮ ರಿಮೋಟ್ ವಾಪಾಸು ಪಡೆಯಲು!!!.


1 comment:

  1. ಆರೆಹೊಳೆಯವರೆ... ಬಹಳ ಉತ್ತಮ ವಿಶ್ಲೇಷಣೆ.
    ಕಾಂಗ್ರೆಸ್ ನ ಬಾಲಂಗೋಸಿಗಳಿಗೆ ಯಾವುದನ್ನು ಬಿಟ್ಟರೂ..!!!
    ಸೋನಿಯಾ..........ರಾಹುಲ್ ರನ್ನುಬಿಡಲಾಗದ ಕಗ್ಗಂಟು..!!!
    ಏನಿದರ..... ಒಳಮರ್ಮ??.... .ಏನಿದರೆ.....ಒಳಗುಟ್ಟು..!!!

    ReplyDelete