Thursday, 8 May 2014

ಶಬರಾಯರೆಂಬ ಸ್ನೇಹದ ಕಣಜ......

ಪ್ರಶಸ್ತಿ ಪ್ರದಾನದ ನಂತರ ಸಂಜೆ ನಾಲ್ಕರ ತನಕವೂ ನಮ್ಮೊಡನಿದ್ದ ಶಬರಾಯ ದಂಪತಿಗಳು ಅಲ್ಲಿ ಒಂದು ಆತ್ಮೀಯ ವಾತಾವರಣವನ್ನೇ ಸೃಷ್ಟಿಸಿದರು. ನನ್ನ ಪಾಲಿಗಂತೂ ಇದು ಒಂದು ಹೊಸ ಅನುಭವ. ಖಂಡಿತಕ್ಕೂ ಹೊಸ ಅನುಭವ....ಜನ ಪ್ರತಿನಿಧಿಯ ಪ್ರದಕ್ಷಿಣೆಯ ನನ್ನ ಈ ವಾರದ ಬರಹ..... 


ಸುಮ ಕೃಷ್ಣ ಪ್ರಶಸ್ತಿ ಪ್ರದಾನದ ಹೊತ್ತು.... 
 ಒಂದು ಮಾತಿದೆ. ಯಾವುದೇ ಒಂದು ಪ್ರಶಸ್ತಿ, ಮಾನ-ಸಂಮಾನಕ್ಕೆ ಯೋಗ್ಯ ಬೆಲೆ ಅಥವಾ ಗೌರವ ಸಿಗುವುದು, ಅದನ್ನು ಪಡೆದ ವ್ಯಕ್ತಿಯ ಆತ್ಮೀಯತೆ, ಆಪ್ತತೆ ಮತ್ತು ಸಾರ್ಥಕ್ಯ ಭಾವ ಆ ಪ್ರಶಸ್ತಿಯೆಡೆಗೆ ಇದ್ದಾಗ ಮಾತ್ರ.

ಅಪರೂಪದ ಜೋಡಿ.... 
ಇಂದು ಅಂತಾದ್ದೊಂದು ಸಮಾಧಾನದಿಂದ ಈ ಬರಹ ಬರೆಯಲು ಕುಳಿತಿದ್ದೇನೆ. ಸಾರ್ವಜನಿಕ ರಂಗದಲ್ಲಿ, ಮುಖ್ಯವಾಗಿ ಸಾಹಿತ್ಯರಂಗದಲ್ಲಿ ನಮ್ಮ ಇತಿ ಮಿತಿಯಲ್ಲಿ ಅಷ್ಟಿಷ್ಟು ಕೆಲಸ ಮಾಡಲಾರಂಭಿಸದಾಗಿನಿಂದ, ಸಾಧಕರನ್ನು ಗುರುತಿಸಿ ಗೌರವಿಸುವ ಅಭ್ಯಾಸ ಮಾಡಿಕೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಅನೇಕ ಅನುಭವಗಳೂ ಆಗಿವೆ. ಅನೇಕ ಸಂದರ್ಭಗಳಲ್ಲಿ ಇಂತಹ ಸಂಮಾನಕ್ಕೆ ವ್ಯಕ್ತಿಗಳನ್ನು 'ಸಾಧಕ'ರು ಎಂದು ಗುರುತಿಸಿ, ಆಯ್ಕೆ ಮಾಡಿಕೊಂಡ ನಂತರ, ನಮ್ಮ ಆಯ್ಕೆ ತಪ್ಪಲಿಲ್ಲವಷ್ಟೇ ಎಂದು ಕೊಂಡದ್ದೂ ಇದೆ. ಆಯ್ಕೆಯ ತನಕದ ಮನೋಭಾವ, ಅನೇಕರಿಗೆ ಆಯ್ಕೆಯ ನಂತರ ಇರುವುದೇ ಇಲ್ಲ ಎಂಬುದನ್ನೂ ಗಮನಿಸಿದ್ದೇನೆ. ಇದು ಎಲ್ಲರಿಗೂ ಅನ್ವಯವಾಗದಾದರೂ, ಕೆಲವು ಸಂದರ್ಭಗಳು ಈ ರೀತಿಯ ಅನಿಸಿಕೆಗೆ ಕಾರಣವಾಗಿದ್ದೂ ಇದೆ.

ಆದರೆ ಇತ್ತೀಚೆಗೆ ನಾವು ಕೊಡ ಮಾಡಿದ ಸುಮಕೃಷ್ಣ ಪ್ರಶಸ್ತಿಯ ಪ್ರದಾನದ ಬಗ್ಗೆ ಒಂದೆರಡು ಮಾತಾಡಲೇ ಬೇಕು. ಅದಕ್ಕೆ ನಾವು ಬಹಳ ಯೊಚಮತ್ತು ಅನೇಕ ಸುತ್ತಿನ ವಿಚಾರ ವಿನಿಮಯದ ನಂತರ ಆಯ್ಕೆ ಮಾಡಿದ ಹೆಸರು ನಾರಾಯಣ ಶಬರಾಯರು. ವಯಕ್ತಿಕವಾಗಿ ನನಗೂ, ಶಬರಾಯರಿಗೂ ಪರಿಚಯವೇ ಇರಲಿಲ್ಲ. ಸ್ನೇಹಿತ ಕರುಣಾಕರ ಬಳ್ಕೂರು ಅವರಿಂದ ಶಬರಾಯರ ಮೊಬೈಲ್ ನಂಬರ್ ತೆಗೆದುಕೊಂಡು ಅವರಿಗೆ ಫೋನಾಯಿಸಿದಾಗಲೇ, ಮೊದಲ ಮಾತಿನಿಂದಲೇ ಅವರ ನಡುವೆ ಯಾವುದೋ ಆತ್ಮೀಯತೆ ಬೆಳೆದಾಗಲೇ, ಈ ಪ್ರಶಸ್ತಿಗೆ ಗೌರವ ಸಂದ ಅನುಭವ

ಅದಿರಲಿ, ಪ್ರಶಸ್ತಿಯ ಬಗ್ಗೆ ಹೇಳಿದಾಗ, ಇನ್ನಿಲ್ಲವಾದ ಮಾವ-ಅತ್ತೆಯ ಬಗ್ಗೆ ಹೇಳಿದಾಗ, ಅವರ ನೆನಪಿನಾಳದ ಮಾತುಗಳನ್ನು ಕೇಳುವುದೇ ಒಂದು ವಿಶಿಷ್ಠ ಅನುಭವ. ಕೊನೆಗೂ ಪ್ರಶಸ್ತಿಯ ವಿಷಯ ಅವರಲ್ಲಿ ಹೇಳಿದಾಗ ಅವರು ಹೇಳಿದ ಮೊದಲ ಮಾತು, ಪ್ರಶಸ್ತಿ ಸ್ವೀಕಾರಕ್ಕೆ ತೊಂದರೆ ಇಲ್ಲ, ಆದರೆ ಪ್ರಶಸ್ತಿಯ ಮೊತ್ತ ಬೇಡ ಬಿಡಿ ಎಂಬ ನೈಜ ಕಾಳಜಿ.

ಸುಮ-ಕೃಷ್ಣರಿಗೆ ನಮನ 
ಇದೆಲ್ಲವೂ ಒಂದು ಹಂತದ ಅನುಭವ. ಅವರಿಗೆ ಅವರ ಒಂದು ಬಯೋಡಾಟಾವನ್ನು ಕಳುಹಿಸಿ ಎಂಬ ವಿನಂತಿ ಮುಂದಿಟ್ಟೆ. ಆಯ್ತು ಬಿಡಿ ಎಂದವರು ನಾಪತ್ತೆ. ಫೇಸ್ ಬುಕ್‌ನಲ್ಲಿ ಅವರ ಮಗಳು ಗಾರ್ಗಿಯೊಂದಿಗಿನ ಚಾಟ್‌ನಲ್ಲಿ ಒಮ್ಮೆ ಇದೇ ವಿನಂತಿ ಮುಂದಿಟ್ಟೆ, ಆಕೆಯೂ ಅಪ್ಪನಿಗೆ ಹೇಳುತ್ತೇನೆ ಎಂದವಳು ಮತ್ತೆ ನಾಪತ್ತೆ. ಕೊನೆಗೆ ಅಭಿನಂದನಾ ಭಾಷಣವನ್ನು ಮಾಡಲು, ಉದಯಕುಮಾರ್ ಶೆಟ್ಟಿಯವರನ್ನು ಕೇಳಿಕೊಂಡಾಗ, ಅವರೂ ಶಬರಾಯರಿಗೆ ಅಭಿನಂದನಾ ಮಾತಾಡುವುದೇ ಒಂದು ವಿಶೆಷ ಅವಕಾಶ ಎಂಬಂತೆ ಒಪ್ಪಿಕೊಂಡ ಹಿನ್ನೆಯಲ್ಲಿ, ಅವರಲ್ಲಿಯೇ ಶಬರಾಯರ ಬಯೋಡಾಟಾ ಕೇಳಿದೆ. ಅವರು ಅದನ್ನು ಒದಗಿಸಿದರು. ಕೊನೆಗೆ ಆಮಂತ್ರಣವನ್ನು ನೀಡಲು ಶಬರಾಯರ ಮನೆಗೆ ಹೋದಾಗ, ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ನಿಜಕ್ಕೆಂದರೆ ಬಯೋಡಾಟವನ್ನು ಅವರು ನನಗೆ ಒದಗಿಸದ ಬಗ್ಗೆ ನನಗೆ ತುಸು ಅಸಮಾಧಾನವೇ ಇತ್ತು!!. ಬಯೋಡಾಟಾದ ವಿಷಯ ಹೇಳುತ್ತಲೇ ಶಬರಾಯರು ಹೇಳಿದ ಮಾತಿನಿಂದ ನಾನು ನಿಜಕ್ಕೂ ಸಮಾಧಾನಗೊಂಡದ್ದು ಮಾತ್ರವಲ್ಲ, ನಮ್ಮ ಪ್ರಶಸ್ತಿಯ ಆಯ್ಕೆಗೆ ಇದು ಸರಿಯಾದ ವ್ಯಕ್ತಿ ಎಂದುಕೊಂಡೆ!!. 'ಸ್ವಾಮೀ, ಅಷ್ಟುದ್ದ ಬರೆದು, ಹೇಳಿಸಿಕೊಂಡು ಸಂಮಾನ ಸ್ವೀಕರಿಸುವ ಬದಲು, ನಿಮಗೆ ಆತ್ಮೀಯವೆನ್ನಿಸುವ ನಿಮ್ಮದೇ ಮಾತಿನಲ್ಲಿ ಪ್ರಶಸ್ತಿ ನೀಡಿ. ಅದನ್ನು ನಿಮ್ಮತ್ತೆ ಹಾಗೂ  ಮಾವ ಮತ್ತು ಯಕ್ಷಗಾನ ರಂಗದ ಮೇಲಿನ ಗೌರವದಿಂದ ನಮ್ರನಾಗಿ ಸ್ವೀಕರಿಸುತ್ತೇನೆ ಎಂಬುದು ಅವರ ಮನದಾಳದ ಮಾತಿನ ಸಾರವಾಗಿತ್ತು. ನಾನು ಸೋತು ಹೋದೆ.

ಇಂತಾದ್ದೇ ಅನೇಕ ಪ್ರಶಸ್ತಿಗಳನ್ನು ನಾವು ಘೋಷಣೆ ಮಾಡಿದ ಬಳಿಕ, ಸಾಮಾನ್ಯವಾಗಿ ಎದುರಿಸುತ್ತಿದ್ದ ಸಮಸ್ಯೆ ಎಂದರೆ ಪ್ರಶಸ್ತಿ ವಿಜೇತರಿಂದ ಅದನ್ನು ಪತ್ರಿಕೆಯಲ್ಲಿ ಬರುವಂತೆ ಮಾಡುವ ಒತ್ತಡ. ಅನೇಕ ಸಂದರ್ಭಗಳಲ್ಲಿ, ಪ್ರಶಸ್ತಿ ವಿಜೇತರು, ಅದನ್ನು ಪತ್ರಿಕೆಯಲ್ಲಿ  ಬರದಿದ್ದರೆ ಅದಕ್ಕೆ ನಾವೇ ಹೊಣೆ ಮತ್ತು ಆ ಪ್ರಶಸ್ತಿ ಸ್ವೀಕಾರಾರ್ಹವೇ ಅಲ್ಲ ಎಂಬಂತೆ ವರ್ತಿಸುವುದನ್ನು ನೋಡಿದ್ದೇನೆ. ಅದಕ್ಕಾಗಿ ಪತ್ರಿಕಾ ಕಾಯಾಲಯಕ್ಕೆ ನಾನು ಎಡತಾಕ ಬೇಕಾದ ಪ್ರಮೇಯವೂ ಇತ್ತು. ಆದರೆ ಇಲ್ಲಿ ನನಗೆ ಹೊಸ ಅನುಭವ. ಶಬರಾಯರ ಪ್ರಶಸ್ತಿಯ ವಿಷಯವನ್ನು ಪ್ರದಾನ ಸಮಾರಂಭಕ್ಕೆ  ಎರಡು ದಿನ ಮೊದಲು, ಎಲ್ಲಾ ಪತ್ರಿಕೆಗಳಿಗೆ ಮೈಲ್ ಮಾಡಿದ್ದೆ. ಆದರೆ ಶಬರಾಯರು ಒಂದು ದಿನವೂ ಆ ಬಗ್ಗೆ ನನ್ನಲ್ಲಿ ಒತ್ತಾಯವನ್ನೋ, 'ತನಿಖೆ'ಯನ್ನೋ ಮಾಡಿದವರಲ್ಲ!!. ಕನಿಷ್ಟ ಕೇಳಿದವರೂ ಅಲ್ಲ. ವಿಶೇಷವೆಂದರೆ ಎಲ್ಲಾ ಪತ್ರಿಕೆಗಳೂ ಈ ವರದಿಯನ್ನು ವಿಶೇಷವಾಗಿ ಪ್ರಕಟಿಸಿದುವು. ಅದು ನನ್ನ ಪಾಲಿಗೆ ನಿಜಕ್ಕೂ ಅಚ್ಚರಿಯೇ!!. ಯಾಕೆಂದರೆ ಪ್ರಚಾರಕ್ಕಾಗಿ ಹಾತೊರೆಯುವವರ ಮಧ್ಯೆ, ಯಾವುದೇ ಒತ್ತಾಯ. ವಿನಂತಿಗೆ ಹೊರತಾಗಿ, ಕೇವಲ ಈ ಮೈಲ್ ನೋಡಿ, ಈ ವರದಿಯನ್ನು ಪತ್ರಿಕೆಗಳು ಪ್ರಕಟಿಸಿದ್ದವೆಂದರೆ, ಅದೂ ಶಬರಾಯರು ಕಾಯ್ದುಕೊಂಡು ಬಂದ ನಿಷ್ಠೆಯ ಫಲವೆಂದೇ ನಾನು ಅಂದುಕೊಂಡಿದ್ದೇನೆ.

ಇನ್ನು ಅವರ ಮನೆಯಲ್ಲಿನ ಆತ್ಮೀಯತೆ. ಕುಳಿತಾಗ ಯಕ್ಷಗಾನ ರಂಗದ ಒಳ-ಹೊರಗನ್ನು  ಸಮಗ್ರವಾಗಿ ತೆರೆದಿಟ್ಟ ಶಬರಾಯರು, ಎಲ್ಲಿಯೂ ತಾನೊಬ್ಬನೇ ಶ್ರೇಷ್ಠ ಎಂಬ ಭಾವ ತೋರಲಿಲ್ಲ. ಸಾಧಿಸಿದ್ದು ಅತ್ಯಲ್ಪ, ಸಾಧಿಸಲು ಬಹಳಷ್ಟಿದೆ ಎಂದೇ ಮಾತು ಆರಂಭಿಸಿದ ಅವರು, ತಾನೊಬ್ಬ ಸಾಮಾನ್ಯ ಕಲಾವಿದ ಎಂಬ ವಿನೀತ ಭಾವವನ್ನು ಎಲ್ಲಿಯೂ ಮರೆಯಲಿಲ್ಲ.

ಓರ್ವ ವಿಜ್ಞಾನ ಪದವೀಧರನಾಗಿ, ಕಾಳಿಂಗ ನಾವುಡರ ಗಾನ ಪಾಂಡಿತ್ಯಕ್ಕೆ ಮನಸೋತು, ಉಪ್ಪೂರರ ಶಿಷ್ಯತ್ವ ಸ್ವೀಕರಿಸಿ, ಯಕ್ಷಗಾನ ರಂಗದಲ್ಲಿ  ತನ್ನದೇ ಒಂದು ವಿಶಿಷ್ಠ ಶಕೆಗೆ ಕಾರಣರಾದ ಶಬರಾಯರು ಹೊಸ ತನದ ಅನ್ವೇಷಕ ಮತ್ತು ವಿನೂತನ ಪ್ರಯೋಗಗಳ ಪ್ರತಿಭಾವಂತ. ಖ್ಯಾತ ಯಕ್ಷಗಾನ ವಿಮರ್ಶಕ ಉದಯ ಕುಮಾರ ಶೆಟ್ಟಿಯವರ ಮಾತಿನಂತೆ ಇವರು ಯಕ್ಷಗಾನ-ಶಾಸ್ತ್ರೀಯ ಸಂಗೀತಗಳ ಸಮನ್ವಯ   ಭಾಗವತ ಎಂದೇ ಗುರುತಿಸಬಹುದು. ಬಡಗು-ತೆಂಕುಗಳೆರಡರಲ್ಲೂ ಸೈ ಅನಿಸಿಕೊಂಡು, ಎರಡೂ ಕಡೆಗಳಲ್ಲಿ ಅಪಾರ ಜನಪ್ರೀತಿಯನ್ನು ಗಳಿಸಿರುವ ಓರ್ವ ವಿಶಿಷ್ಠ ಭಾಗವತನಿದ್ದರೆ ಅದು ಶಬರಾಯರು. ಎಲ್ಲಕ್ಕಿಂತಲೂ ಮುಖ್ಯವಾಗಿ ದೂರದರ್ಶನದ ಮೂಲಕ ಯಕ್ಷಗಾನವನ್ನು ದಶ ದಿಕ್ಕುಗಳಿಗೂ ಪರಿಚಯಿಸುವಲ್ಲಿ ವಿಶೇಷ ಶ್ರಮ ವಹಿಸಿ, ಯಶಸ್ವೀ ಕಲಾರಾಧಕರಾಗಿ ಗುರುತಿಸಿಕೊಂಡ ಶಬರಾಯರು ಎಲ್ಲೂ ಅಹಂ ತೋರದ ಓರ್ವ ನಿಗರ್ವಿ ಮತ್ತು ನೈಜ ಕಲಾವಿದ. ಕಲಾವಿದ ಎಂಬುದಕ್ಕಿಂತಲೂ, ಕಲಾರಾಧಕ ಎಂದೇ ತನ್ನನ್ನು ಪರಿಚಯಿಸಿಕೊಳ್ಳುವಲ್ಲಿ ಅವರಿಗೆ ಹೆಮ್ಮೆಯಂತೆ!!

ನಮ್ಮ ಸಂಸಾರದ ಜೊತೆಗೊಂದು ಆತ್ಮೀಯ ಕ್ಷಣ 
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದಯ ಕುಮಾರ ಶೆಟ್ಟಿಯವರು ಹೇಳಿದಂತೆ, ಶಬರಾಯರು ಓರ್ವ ಕಲಾವಿದರಾಗಿಯಷ್ಟೇ ಅಲ್ಲದೇ ಆತ್ಮೀಯ ಸ್ನೇಹಿತನೂ ಆಗಿ, ಜನರೊಂದಿಗೆ ಬೆರೆಯುತ್ತಾರೆ. ನಮ್ಮೊಳಗೆ ಅವರು ಎಷ್ಟು ಆತ್ಮೀಯತೆಯಿಂದ ಬೆರೆತರು ಎಂದರೆ, ಕಳೆದ ನಾಲ್ಕು ದಶಕಗಳಿಂದಲೂ ಅವರನ್ನು ತಿಳಿಯದಿದ್ದ ನಾನು ಮತ್ತು ನನ್ನ ಕುಟುಂಬ ಇಂದು ಅವರ ಜೀವನ ಪರ್ಯಂತ ಬಂಧುಗಳೋ ಎಂಬಂತೆ ಸನಿಹಕ್ಕೆ ಬಂದಿದ್ದೇವೆ. ಅದಕ್ಕೆ ಕಾರಣ ಅವರ ಸರಳತೆ. ಇನ್ನು ಈ ರೀತಿಯ ಸರಳತೆ ಯಾವತ್ತೂ ಒಂದು ಇಡೀ ಕುಟುಂಬದಲ್ಲಿದ್ದರೆ ಅದು ಸುಖೀ ಸಂಸಾರ. ಇದಕ್ಕೆ ನಿದರ್ಶನವೂ ಶಬರಾಯ ಕುಟುಂಬ. ಮೊದಲ ದಿನ ಅವರ ಮನೆಗೆ ಹೋಗಿ, ಕಾಲಿಂಗ್ ಬೆಲ್ ಒತ್ತಿದಾಕ್ಷಣ ಹೊರ ಬಂದವರು ಶಬರಾಯರ ಶ್ರೀಮತಿ ರಾಜಶ್ರೀ ಅವರು. ಕಂಡಾಕ್ಷಣವೇ ಅದೆಷ್ಟೋ ವರ್ಷಗಳ ಆತ್ಮೀಯತೆ ನಗುವಿನೊಂದಿಗೆ ಸ್ವಾಗತಿಸಿದಾಗ ಅಚ್ಚರಿ, ನಾನಾರು ತಿಳಿಯಿತೇ ಎಂದಾಗ, ಓಹೋ ಗೊತ್ತು ಎಂಬ ಉತ್ತರ...ಇದು ಫೇಸ್ ಬುಕ್ ಪ್ರಭಾವ. ಕೇವಲ ಫೇಸ್ ಬುಕ್ ಪರಿಚಯದಿಂದಲೇ ನನ್ನ ಮುಖ ಪರಿಚಯ ಮಾಡಿಕೊಂಡವರು. ಮತ್ತೆ ಅಲ್ಲಿ ನಮ್ಮನ್ನೆಲ್ಲಾ ಆಳಿದ್ದು ಆತ್ಮೀಯತೆ ಮಾತ್ರ! ರಾಜಶ್ರೀ ಮೇಡಂ ರಾಜಶ್ರೀ ಅಕ್ಕ ಆಗಿದ್ದು ಹೀಗೆ. ಅವರ ಕೈ ರುಚಿಯ ಬಿಸಿ ಬಿಸಿ ಚಹಾ ಸೇವಿಸಿ, ಅವರೂ ನಮ್ಮ ಜೊತೆ ಕುಳಿತು, ಯಕ್ಷಗಾನ ರಂಗದ ಬಗ್ಗೆ, ಮನೆಯ ಕುಟುಂಬದ ಬಗ್ಗೆ ಹರಟಿದ್ದು ಬರೋಬ್ಬರಿ ಒಂದು ಘಂಟೆ. ಅಷ್ಟರಲ್ಲಿ ಅವರ ಮಗಳು ಗಾರ್ಗಿಯನ್ನು ಕರೆದ ಶಬರಾಯರು ನಮ್ಮನ್ನು ತೋರಿಸಿ ಇವರಾರು ಗೊತ್ತೇ ಎಂದಾಗ,ಆಗಲೂ ಅಚ್ಚರಿ. ಓಹೋ, ಅರೆಹೊಳೆ ಅಂಕಲ್ ಅಲ್ವಾ ಎಂಬ ಗಾರ್ಗಿಯ ನಗು...ಇದು ಒಂದು ಸಂಸಾರದ ಸುಸಂಸ್ಕಾರವನ್ನು ತೋರಿಸುತ್ತದೆ. ನಿಜಕ್ಕೂ ನಮ್ಮ ಪ್ರಶಸ್ತಿಗೆ ಹೆಮ್ಮೆ ಬಂದುದೇ ಆಗ.

ಇನ್ನೊಂದು ವಿಷಯವನ್ನಿಲ್ಲಿ ಹೇಳಲೇ ಬೇಕು. ನಾನಿಲ್ಲಿಯ ತನಕ ಯಾವುದೇ ಪ್ರಶಸ್ತಿ ಪ್ರದಾನ ಮಾಡಿದ್ದರೂ, ಮಾಡಿಸಿದ್ದರೂ, ಕೇವಲ ಪ್ರಶಸ್ತಿಗೆ ಆಯ್ಕೆಯಾದವರನ್ನು ಗೌರವಿಸಿದ್ದೇನೆ. ಇಲ್ಲಿ ಆ ಪರಂಪರೆಗೆ ನಾನು ತಿಲಾಂಜಲಿ ಇತ್ತೆ. ಪ್ರಶಸ್ತಿ ಪ್ರದಾನಕ್ಕೆ ವೇದಿಕೆಗೆ ರಾಜಶ್ರೀ ಅಕ್ಕ ಹಾಗೂ ಗಾರ್ಗಿಗೂ ಕರೆವ ಯೋಚನೆ ಮಾಡಿದೆ. ಗಾರ್ಗಿ ಬರದೇ ತಪ್ಪಿಸಕೊಂಡಳು!. ರಾಜಶ್ರೀಯವರಿಗೆ ತಪ್ಪಿಸಿಕೊಳ್ಳುವ ಸಂಭವ ಸಿಗಲಿಲ್ಲ. ಇಬ್ಬರನ್ನೂ ಕುರಿಸಿ, 'ಸುಮಕೃಷ್ಣ'ಪ್ರಶಸ್ತಿ ಪ್ರದಾನಿಸಿದಾಗ, ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಅತ್ತೆ ಮಾವ, ಸುಮತಿ-ಕೃಷ್ಣಮೂರ್ತಿಯವರ ಎಲ್ಲಾ ಮಕ್ಕಳಿಗೆ ಹಾಗೂ ಬಹುಶ: ಅತ್ತೆ ಮಾವನವರಿಗೂ ಸಂತೃಪ್ತಿಯ ಭಾವ

ಅತ್ತೆ-ಮಾವರ ಮಕ್ಕಳೊಂದಿಗೆ 
ಪ್ರಶಸ್ತಿ ಪ್ರದಾನದ ನಂತರ ಸಂಜೆ ನಾಲ್ಕರ ತನಕವೂ ನಮ್ಮೊಡನಿದ್ದ ಶಬರಾಯ ದಂಪತಿಗಳು ಅಲ್ಲಿ ಒಂದು ಆತ್ಮೀಯ ವಾತಾವರಣವನ್ನೇ ಸೃಷ್ಟಿಸಿದರು. ನನ್ನ ಪಾಲಿಗಂತೂ ಇದು ಒಂದು ಹೊಸ ಅನುಭವ. ಖಂಡಿತಕ್ಕೂ ಹೊಸ ಅನಭವ. ಬೆಂಗಳೂರಿನ ಓರ್ವ ವ್ಯಕ್ತಿಗೆ ನಾನೂ ಒಂದು ಸಂಸ್ಥೆಯ ಮುಖಾಂತರ ಪ್ರಶಸ್ತಿಯನ್ನು ಕೊಡಿಸಿದ್ದೆ. ಅವರು ಇಲ್ಲಿಗೆ ಬಂದಾಗ ಅವರ ವಸತಿಯಿಂದ ಹಿಡಿದು ಪ್ರತಿಯೊಂದನ್ನೂ  ನಾನೇ ನೋಡಿಕೊಂಡಿದ್ದೆ. ಕೊನೆಗೆ ಪ್ರಶಸ್ತಿ ಪ್ರದಾನದ ನಂತರ ಅವರನ್ನು ಬೆಂಗಳೂರಿನ ಬಸ್ಸು ಹತ್ತಿಸಿ ಬಂದಿದ್ದೆ. ಅದರ ನಂತರ ಇಂದಿನ ತನಕವೂ ನನ್ನ ಒಂದು ಫೋನ್ ಕರೆಗೂ ಆ ವ್ಯಕ್ತಿ ಉತ್ತರಿಸಲಿಲ್ಲ!!. ಬದಲಿಗೆ ಪ್ರಶಸ್ತಿ ಸ್ವೀಕರಿಸಿದಾಗ, ಅದು ತನ್ನ ಆರ್ಹತೆಗೆ ಸಂದ ಗೌರವವೇ ಹೊರತು, ಅದರಲ್ಲಿ ಅಂತಹ ವಿಶೇಷವೇನೇನೂ ಇಲ್ಲ ಎಂಬ ಅನಿಸಿಕೆಯನ್ನು ಅವರು ಹೊರ ಹಾಕಿದಾಗ, ಎಲ್ಲರೂ ಮುಖ ಮುಖ ನೋಡಿಕೊಂಡದ್ದನ್ನು ನಾನಿನ್ನೂ ಮರೆತಿಲ್ಲ. ಅಂತಹ ಕಹಿ ಅನುಭವಗಳ ಮಧ್ಯೆ, ಇಂತಹ ಅನುಭವಗಳು ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಶಬರಾಯ ಕುಟುಂಬವೇ ಇಂತಾದ್ದೊಂದು ಸಾರ್ಥಕ ಭಾವನೆಯನ್ನು ನನಗೆ ಮತ್ತು ಕುಟುಂಬಕ್ಕೆ ತಂದು ಕೊಟ್ಟಿದೆ. ಯಕ್ಷಗಾನ ರಂಗಕ್ಕೂ ಈ ಅನುಭವವಾಗಿದ್ದರೆ ಅಚ್ಚರಿ ಇಲ್ಲ.

ಮುಖ್ಯವಾಗಿ ನನ್ನತ್ತೆ-ಮಾವನ ಹೆಸರಿನ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿಗೆ ಇದರಿಂದ ಮೌಲ್ಯ ಹೆಚ್ಚಿದೆ ಎಂಬುದು ನನ್ನ ತೃಪ್ತಿ.


No comments:

Post a Comment