Wednesday, 14 May 2014

ಪರೀಕ್ಷಾ ಫಲಿತಾಂಶದ ಸುತ್ತ...

ಒಂದು ದುರ್ಬಲ ಗಳಿಗೆಯಲ್ಲಿ ಮಗುವಿಗೆ ಬದುಕು ಎಂದರೆ ಶಿಕ್ಷಣ ಮತ್ತು ಅದರಲ್ಲಿ ಯಶಸ್ಸು ಮತ್ತು ಅದರಾಚೆಗೆ ಏನೂ ಇಲ್ಲ ಎಂಬ ಭಾವನೆ ಗಟ್ಟಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾದರೂ ಅದು ಮೊದಲು ಯೋಚಿಸುವುದು ಸಾವಿಗೆ ಶರಣಾಗುವ ಬಗ್ಗೆ. ಜನಪ್ರತಿನಿಧಿಯಲ್ಲಿ ನನ್ನ ಈ ವಾರದ ಲೇಖನ 

ಇದೀಗ ಎಲ್ಲೆಡೆಯಲ್ಲಿಯೂ ಪಲಿತಾಂಶದ ಕಾಲ. ನಾನು ಹೇಳುತ್ತಿರುವುದು ಶೈಕ್ಷಣಿಕ ಫಲಿತಾಂಶಗಳ ಬಗ್ಗೆ. ಮೊನ್ನೆ ಎಸ್ ಎಸ್ ಎಲ್ ಸಿ ಫಲಿತಾಂಶದ ದಿನ ನನ್ನ ತೀರಾ ಹತ್ತಿರದ ಸಂಬಂಧಿ ಹುಡುಗಿಯೋರ್ವಳ ಫಲಿತಾಂಶವನ್ನು ನಾನೇ ನೋಡುತ್ತಿದ್ದೆ. ಅವಳಿಗೆ ಒಟ್ಟೂ 66 ಶೇಕಡಾ ಅಂಕಗಳು ಬಂದಿದ್ದುವು. ಅದನ್ನು ನಾನು ಸಂತಸದಿಂದಲೇ ಆಕೆಗೆ ಹೇಳಿದರೆ, ಅವಳು ತಾನು ಅನುತ್ತೀರ್ಣಳೇ ಆಗಿರುವ ಹಾಗೆ ಗೋಳೋ ಎಂದು ಅಳಲಾರಂಭಿಸಿದಳು. ಇದೇನೂ ಅಚ್ಚರಿಯ ವಿಷಯವಾಗಿರಲಿಲ್ಲ. ಇದಕ್ಕೆ ಕಾರಣ, 'ಕನಿಷ್ಟ' 90 ಕ್ಕಿಂತ ಹೆಚ್ಚು ಅಂಕ ಪಡೆಯಲಾಗದ ಬಗ್ಗೆ ಅವಳಿಗೆ ದು:ಖವಾಗುತ್ತಿತ್ತು. ಅದಕ್ಕೆ ಸರಿಯಾಗಿ ಅಲ್ಲಿ ಸೇರಿದ್ದ ಕೆಲವರೂ, 66.....ಛೇ, ಕಡಿಮೆ ಆಯ್ತಲ್ಲ ಎಂಬ ಒಗ್ಗರಣೆ...

ನೀವೂ ಪತ್ರಿಕೆಗಳಲ್ಲಿ ಓದಿರಬಹುದು. ಓರ್ವ ಹುಡುಗಿ, ತನ್ನ ಸಂಬಂಧಿಯೋರ್ವ ವಿನೋದಕ್ಕಾಗಿ, 'ನೀನು ಫೇಲ್'ಎಂದದ್ದನ್ನು ಕೇಳಿ, ಹಿಂದೆ ಮುಂದೆ ಯೋಚಿಸದೇ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಾಸ್ತವವಾಗಿ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಕೇವಲ ಒಂದು ಕ್ಷಣದ ದೌರ್ಬಲ್ಯಕ್ಕೆ ಬುದ್ದಿ ಕೊಟ್ಟ ಪರಿಣಾಮ ಇದು.

ಇದೆಲ್ಲಾ ಯಾಕೆ?? ಒತ್ತಡ! ವಿದ್ಯಾರ್ಥಿಯ ಮೇಲೆ ಬೀಳುವ ಬಹುಮುಖಿ ಒತ್ತಡ. ಶಿಕ್ಷಣವನ್ನು ಕೇವಲ ಜೀವನದ ಒಂದು ಅವಿಭಾಜ್ಯ ಅಂಗವೇ ಹೊರತು, ಅದರಲ್ಲಿನ ಅಪಯಶದಿಂದ ಜೀವನವೇ ಮುಗಿದು ಹೋಗಲಿಲ್ಲ ಎಂಬುದನ್ನು ಮಕ್ಕಳ ಮನಸ್ಸಿಗೆ ದ್ರಢಪಡಿಸಲು ನಾವು ಇಂದು ಸೋಲುತ್ತಿದ್ದೇವೆ. ಬೇರಯವರೊಡನೆ ಹೋಲಿಕೆ, ಇಂತಿಷ್ಟೇ ಅಂಕ ತೆಗೆಯಬೇಕು ಎಂಬ ಒತ್ತಾಸೆ, ಇದಿಲ್ಲವಾದರೆ ಮತ್ತೆ ಬದುಕೇ ಶೂನ್ಯ ಎಂಬ ಹುಂಬತನ ಇದಕ್ಕೆಲ್ಲಾ ಕಾರಣ. ಒಂದು ರೀತಿಯಲ್ಲಿ ಇದನ್ನು ಕ್ರಿಕೆಟ್ ಆಟಕ್ಕೆ ಹೋಲಿಸಬಹುದು. ಮೊನ್ನೆ ಟಿ೨೦ ಪಂದ್ಯದ ಫೈನಲ್‌ನಲ್ಲಿ ಯುವರಾಜ್ ಸಿಂಗ್‌ರ ಒಂದು ಕೆಟ್ಟ ಆಟ, ಇಡೀ ಕ್ರಿಕೆಟ್ ಜಗತ್ತಿನ ಟೀಕೆಗೆ ಕಾರಣವಾಯಿತು. ಯುವರಾಜ್ ಈ ಹಿಂದೆ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದನ್ನೂ, ಮುಂದೆಯೂ ಆ ಸಾಧನೆಯ ಸಾಧ್ಯತೆಯನ್ನು ಎಲ್ಲರೂ ಮರೆತರು. ಪರಿಣಾಮವಾಗಿ ಈ ಕ್ರಿಕೆಟಿಗನ ಮನೆಯ ಮೇಲೆ ದಾಳಿ ಆಯಿತು. ಎಲ್ಲಿ ನೋಡಿದರೂ ಯುವರಾಜನನ್ನು ಓರ್ವ ಖಳನಾಯಕನಂತೆ ಚಿತ್ರಿಸಲಾಯಿತು. ಹಿಂದಿನ ಮತ್ತು ಮುಂದಿನ ಅವರ ಎಲ್ಲಾ ಸಾಧನೆಗಳ ಬಗ್ಗೆ ಹೆಮ್ಮೆ ಬಿಡಿ, ಸಾಧಾರಣ ನೆನಪೂ ಇಲ್ಲವಾಯಿತು. ಯುವರಾಜ್ ಎಂಬ ಕ್ರಿಕೆಟಿಗನ ಕ್ರೆಕೆಟ್ ಜೀವನ ಕೇವಲ ಶೂನ್ಯ ಸಂಪಾದನೆ ಎಂಬಂತೆ ಚಿತ್ರಿಸಲಾಯಿತು.

ಈ ಶಿಕ್ಷಣದ ವಿಷಯದಲ್ಲಿಯೂ ಹಾಗೆಯೇ ಆಗುತ್ತಿದೆ. ಮಗು ಶಾಲೆಗೆ ಹೋದಾಗಿನಿಂದ ಅದರ ಮೇಲೆ ಎಲ್ಲಕ್ಕೂ ನಿಯಂತ್ರಣ ಆರಂಭವಾಗುತ್ತದೆ. ಎಲ್ಲಕ್ಕೂ ಬೇರೆ ಮಕ್ಕಳ ಜೊತೆ ಹೋಲಿಕೆ. ಪ್ರತೀ ಬಾರಿ ಈಗಿನ ಂ + ನಿರೀಕ್ಷೆ. ಪರೀಕ್ಷೆ ಬಂತೆಂದರೆ ಅದಕ್ಕೆ ಎಲ್ಲಿಲ್ಲದ ಒತ್ತಡ...ಪರಿಣಾಮ ಪರೀಕ್ಷೆಯ ಭಯ, ಶಿಕ್ಷಕರ ಭಯ, ಪೋಷಕರ ಭಯ, ಸ್ನೇಹಿತರ ಭಯ, ಸಂಬಂಧಿಗಳ ಭಯ, ಅಕ್ಕ ಪಕ್ಕದವರ ಭಯ ಮತ್ತು ಒಟ್ಟಾರೆಯಾಗಿ ಮಗುವಿನ ಬದುಕು ಕೇವಲ ಭಯಾನಕವಾಗಿರುತ್ತದೆ. ಇಂದು ಶಿಕ್ಷಣ ಒಂದು ಮುಗಿದರೆ ಸಾಕಪ್ಪಾ ಎಂದುಕೊಂಡು ಮಗು ನರ್ಸರಿಯಿಂದಲೇ ಭಯ-ಭಯ-ಭಯದಲ್ಲಿ ಬದುಕಲಾರಂಭಿಸುತ್ತದೆ.

ಒಂದು ದುರ್ಬಲ ಗಳಿಗೆಯಲ್ಲಿ ಮಗುವಿಗೆ ಬದುಕು ಎಂದರೆ ಶಿಕ್ಷಣ ಮತ್ತು ಅದರಲ್ಲಿ ಯಶಸ್ಸು ಮತ್ತು ಅದರಾಚೆಗೆ ಏನೂ ಇಲ್ಲ ಎಂಬ ಭಾವನೆ ಗಟ್ಟಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾದರೂ ಅದು ಮೊದಲು ಯೋಚಿಸುವುದು ಸಾವಿಗೆ ಶರಣಾಗುವ ಬಗ್ಗೆ. 

ಇಲ್ಲಿ ಮುಖ್ಯವಾಗಿ ಕಾರಣರಾಗುವುದು ಖಂಡಿತಕೂ ಪೋಷಕರು ಎಂಬುದು ನನ್ನ ಭಾವನೆ. ಅವರಲ್ಲವಾದರೆ ಪರಿಸರವೂ!. ನಾನು ಮೇಲೆ ಹೇಳಿದ ೬೬ಶೇಕಡಾ ಪಡೆದು ಉತ್ತೀರ್ಣಳಾದ ಹುಡುಗಿಯನ್ನೇ ಉದಾಹರಣೆಯಾಗಿ ಕೊಡಬಹುದು. ಒಂದು ಸಮಾರಂಭದ ನಡುವೆ ಆಕೆಯ ಫಲಿತಾಂಶ ಬಹಿರಂಗವಾದಾಗ, ಎಲ್ಲರೂ ಕೇಳಿದವರು ಅನೇಕ ಪ್ರತಿಕ್ರಿಯೆಗಳನ್ನು ನೀಡಿದರು. ಆ ಹುಡುಗಿಯ ತಾಯಿ ಮತ್ತು ತಂದೆ, ತಮಗಂತೂ ಖೂಷಿಯಾಗಿದೆ, ನೀನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಸಾಕು ಬಿಡು ಎಂದು ಅಳುತ್ತಿರುವ ಮಗಳನ್ನು ಅಪ್ಪಿ ಸಮಾಧಾನಿಸುತ್ತಿದ್ದರು. ಆಗ ನೆರೆದ ಕೆಲವರು, ತಾಯಿಯನ್ನುದ್ದೇಶಿಸಿ, ನೀನೇ ಆಕೆಯನ್ನು ಹಾಳು ಮಾಡಿದ್ದು. ಕೇವಲ ೬೬ಶೇಕಡಾ ಪಡೆದಿದ್ದಾಳೆ, ನಿನ್ನ ಈ ಪ್ರೀತಿ ಬೇರೆ ಎಂದು ಆಕೆಗೇ ಪ್ರತ್ಯಕ್ಷ-ಪರೋಕ್ಷವಾಗಿ ಗದರಿಸುತ್ತಿದ್ದರು!!. ಇಂದು ಮತ್ತೂ ಒಂದು ಗಮನಿಸಬೇಕಾದ ಯೋಚನೆ ಎಂದರೆ, ನಮ್ಮ ಮಕ್ಕಳ ಬಗ್ಗೆ ಬೇರೆಯವರ ಕಾಳಜಿ ಮಿತಿ ಮೀರಿರುತ್ತದೆ!!. ಇದು ದುರಂತದ ಮತ್ತೊಂದು ಹಾದಿ. 

ಕೇವಲ ಶೇಕಡಾವಾರು ಅಂಕ, ಶಿಕ್ಷಣ ಎಂದರೆ ಪಿಯುಸಿಯಲ್ಲಿ ಸೈನ್ಸ್, ಅದು ಮುಗಿಯುತ್ತಲೇ ಸಿಇಟಿ, ಮುಂದುವರಿದು ಇಂಜಿನಿಯರ್ ಅಥವಾ ಮೆಡಿಕಲ್ ಎಂಬ ಹುಚ್ಚು ಪೋಷಕರನ್ನು ಆವರಿಸಿಕೊಂಡಿದೆ. ಅದನ್ನು ಬಿಟ್ಟು ಬೇರೇನೂ ಇಲ್ಲ ಎಂಬ ಒಂದು ರೀತಿಯ ಕುರುಡುತನ ಅವರಲ್ಲಿ ಮನೆ ಮಾಡಿದೆ. ಇದನ್ನೇ ಬಾಲ್ಯದಿಂದಲೂ ಮಗುವಿನ ಮೇಲೆ ಹೇರಿ, ಅದನ್ನು ಇನ್ನಿಲ್ಲದಂತೆ ಹೈರಾಣಾಗಿಸುವ ಯತ್ನ ಈ ಎಲ್ಲದಕ್ಕೂ ಮೂಲ ಕಾರಣ. ಒಂದು ರೀತಿಯಲ್ಲಿ ಈ ರೀತಿಯಲ್ಲಿ ಮಾನಸಿಕ ಆಘಾತಕ್ಕೆ ಒಳಗಾಗುವ ಮಕ್ಕಳ ಆತ್ಮಹತ್ಯೆ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮದೇ ವ್ಯವಸ್ಥೆಯ ವ್ಯವಸ್ಥಿತ ಕೊಲೆ ಎಂಬುದು ನನ್ನ ಭಾವನೆ.

ಇದಲ್ಲದೇ ಉಜ್ವಲವಾದ ಭವಿಷ್ಯ ಬೇರೆಯದೇ ಇದೆ. ನಾವು ಇನ್ನೊಂದು ದ್ರಷ್ಠಿಕೋನದಿಂದಲೂ ನೋಡಬೇಕು. ಎಲ್ಲರೂ ಈ ಪ್ರಪಂಚದಲ್ಲಿ ಒಂದೇ ರಂಗದಲ್ಲಿ ನಿಷ್ಣಾತರಾಗಿರುವುದಿಲ್ಲ. ಪ್ರತಿಯೊಬ್ಬನಿಗೂ ಅವನದ್ದೇ ಆದ ಪ್ರತಿಭೇ ಇರುತ್ತದೆ. ಇಂದು ವೃತ್ತಿಪರ ಕೋರ್ಸ್‌ಗಳೇ ಅಲ್ಲದೇ, ಸಾಂಸ್ಕೃತಿಕವಾಗಿ ಅಥವಾ ಸಮಾಜದ ಇತರ ರಂಗಗಳಲ್ಲಿಯೂ ಬದುಕು ಕೊಡುವ ಅನೇಕ ದಾರಿಗಳಿವೆ. ಒಬ್ಬ ಇಂಜಿನಿಯರ್ ಆಗಿಯೋ, ವೈದ್ಯನಾಗಿಯೋ ದುಡಿದಷ್ಟೇ, ಬೇರೆ ರಂಗಗಳಲ್ಲಿಯೂ ದುಡಿಮೆಗೆ ಅವಕಾಶಗಳಿರುತ್ತವೆ. ಇದನ್ನು ಆರಂಭದಿಂದಲೇ ನಾವು ಮಕ್ಕಳಲ್ಲಿ ಮನನ ಮಾಡುತ್ತಾ ಹೋದರೆ ಅವರೂ ಮಾನಸಿಕವಾಗಿ ಗಟ್ಟಿಯಾಗುತ್ತಾರೆ. ಇಂದಿನ ತುರ್ತು ಅಗತ್ಯಗಳಲ್ಲಿ ಇದು ಮುಖ್ಯ.
ನಮ್ಮ ಶಿಕ್ಷಣ ಕಾಲದಲ್ಲಿ, ಕೇವಲ ಪಾಸಾಗಿದ್ದಕ್ಕೆ ಊರಿಡೀ ಸಿಹಿ ಹಂಚಿದ ಪ್ರಸಂಗ ನೆನಪಾಗುತ್ತದೆ. ಅಂದು ಶಿಕ್ಷಣವೇ ಕಷ್ಟದ ಪರಿಸ್ಥಿತಿ. ಅಂತಾದ್ದರಲ್ಲಿ ಪಾಸಾಗುವುದೂ ಒಂದು ಸಾಧನೆ. ಸೆಕೆಂಡ್ ಕ್ಲಾಸ್ ಬಂದರೆ ಪೋಷಕರಿಗೆ ಮಹದಾನಂದ. ಫಸ್ಟ್ ಕ್ಲಾಸ್ ಬಂದರೆ ಊರಿಡೀ ಹಬ್ಬ.

ಇನ್ನು ಇಲ್ಲಿ ಮಕ್ಕಳ ತಪ್ಪೂ ಇಲ್ಲವೆನ್ನಲಾಗದು. ಇಂದಿನ ಮುಂದುವರಿದ ತಾಂತ್ರಿಕತೆ ಮಕ್ಕಳಲ್ಲೂ ಆ ಪರಿಯ ಬದಲಾವಣೆ ತಂದಿದೆ. ಒಂದು ವಿದ್ಯಾರ್ಥಿ ಹೇಳುತ್ತಿದ್ದ, ಛೆ. ನನಗೆ ಕೇವಲ ೮೦ಶೇಕಡಾ ಅಂಕಗಳು ಮಾತ್ರ ಬಂದಿವೆ. ೯೦ಕ್ಕಿಂತ ಹೆಚ್ಚು ಬಂದಿದ್ದರೆ ಫೇಸ್ ಬುಕ್ ನಲ್ಲಿ ಹಾಕಿ ಎಷ್ಟು ಲೈಕ್ ಬರುತ್ತಿತ್ತು ನೋಡುತ್ತಿದ್ದೆ ಎಂದು!!. ಫೇಸ್ ಬುಕ್ ತೆರೆದು ನೋಡಿದರೆ, ಕೆಲವು ಮಕ್ಕಳು ತಮ್ಮ ಅಂಕ ಪಟ್ಟಿಯನ್ನೇ ಲಗತ್ತಿಸಿ ಹೆಮ್ಮೆ ಪಡುತ್ತಿದ್ದರು. ಓರ್ವ ಹುಡುಗಿಯ ಒಂದು ಪೋಸ್ಟಿಂಗ್ ಹೀಗಿದೆ:- 'ನನ್ನ ತಂದೆ ಹೇಳುತ್ತಿದ್ದರು, ಮಗಳೇ, ನೀನು ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ತೆಗೆದ ಬಗ್ಗೆ ನನಗೆ ಬೇಸರವಿಲ್ಲ. ನಿನ್ನ ಪರೀಕ್ಷೆಯ ಮೊದಲ ದಿನ ನಾನು ಖಾಯಿಲೆ ಬಿದ್ದಾಗ, ನೀನು ತಾಯಿಯಂತೆ ನನ್ನನ್ನು ನೋಡಿಕೊಂಡೆ. ಹಾಗಾಗಿ ಆ ಒಂದು ವಿಷಯದಲ್ಲಿ ನಿನಗೆ ಕಡಿಮೆ ಅಂಕ ಬರಲು ನಾನೂ ಒಂದು ಕಾರಣ. ಅದಕ್ಕೆ ಚಿಂತಿಸಬೇಡ ಎಂದು ತಂದೆ ಹೇಳುತ್ತಿದ್ದರು, ಅಪ್ಪಾ, ಐ ಲವ್ ಯೂ.....ಅಂದ ಹಾಗೆ ನನಗೆ ಕನ್ನಡದಲ್ಲಿ ೧೨೫ರಲದಲಿ ೧೨೪ಅಂಕಗಳು ಬಂದಿದ್ದುವು!....ಇದು ನಮ್ಮ ನಿರೀಕ್ಷೆಯ ಮಟ್ಟವನ್ನು ಸೂಚಿಸುತ್ತದೆ. ಬಹುಶ: ಆ ಮಗುವೇನಾದರೂ ೧೦೦ ಅಂಕಗಳನ್ನು ತೆಗೆದಿದ್ದರೆ ಪರಿಣಾಮ ಎಷ್ಟು ಭೀಕರವೆಂಬುದನ್ನು ನೀವೇ ಯೋಚಿಸಿ. 

ಮತ್ತೊಬ್ಬ ತಂದೆ ಮಗಳ ಪೂರ್ತಿ ಅಂಕ ಪಟ್ಟಿಯನ್ನೇ ಲಗತ್ತಿಸಿ, ಫೇಸ್ ಬುಕ್ ನಲ್ಲಿ ಹಾಕಿದ್ದರು. ನಾನು ಒಂದು ಕೆಲಸದ  ಪ್ರಯುಕ್ತ ಇಡೀ ವರ್ಷ ಬ್ಯುಸಿಯಾಗಿದ್ದೆ. ಆದರೂ ನನ್ನ ಮಗಳು ಪಿಯುಸಿಯಲ್ಲಿ 94ಶೇಕಡಾ ಅಂಕಗಳನ್ನು ಪಡೆದು ನನ್ನನ್ನು ಹೆಮ್ಮೆ ಪಡುವ ಹಾಗೆ ಮಾಡಿದ್ದಳು...ಇಂತಹ ನೂರಾರು ಪೋಸ್ಟಿಂಗ್‌ಗಳನ್ನು ನೀವು ನೋಡಬಹುದು. ಇಂದು ಫೇಸ್ ಬುಕ್ ಇಲ್ಲದ ಫೇಸ್ ಗಳೇ ಇಲ್ಲ. ಇಂತಾದ್ದರಲ್ಲಿ, ತನ್ನ ಅಂಕ ಕಡಿಮೆಯಾದರೆ ಫೇಸ್ ಬುಕ್‌ನಲ್ಲಿ ಹಾಕಲು ಆಗದಲ್ಲ ಎಂಬ ನೋವೂ ಮಕ್ಕಳನ್ನು ಇಂದು ದುರ್ಬಲರಾಗಿಸುತ್ತಿವೆ ಎಂದರೆ ನಿಮಗೆ ಅಚ್ಚರಿ ಆದೀತು. ಇದು ವಿಚಿತ್ರವಾದರೂ ಸತ್ಯ.

ಹೀಗೆ ಮಕ್ಕಳಲ್ಲಿ ಎಲ್ಲಾ ವಿಧದಲ್ಲಿಯೂ ನಾವು ನಾವು ಕೇವಲ ಒತ್ತಡ ಸೃಷ್ಟಿ ಮಾಡುತ್ತಿರುವುದರ ಪರಿಣಾಮ ಇಂದು ಭೀಕರ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೋಷಕರಾದ ನಮ್ಮ ಜವಾಬ್ದಾರಿಯ ಬಗ್ಗೆ ಮೊದಲು ನಾವು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಇದನ್ನು ಅರಿತುಕೊಂಡು ಮಕ್ಕಳ ಮೇಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಮ್ಮ ಕಾಣಿಕೆ ದೊಡ್ಡದಿದೆ ಎಂಬುದು, ಪ್ರಜ್ಞಾವಂತರಾದ ನಮಗೆ ತಿಳಿದಿರಬೇಕು. 


No comments:

Post a Comment